- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
ಟೈಮ್ ಲ್ಯಾಪ್ಸ್ ( time lapse ) ವಿಡಿಯೋದಲ್ಲಿ ಮೋಡಗಳು ಒಂದರ ಹಿಂದೆ ಒಂದು ಓಡ್ತಾವಲ್ಲಾ, ಈ ನೆನಪುಗಳ ಕತೆಯೂ ಹಾಗೆ. ಒಮ್ಮೊಮ್ಮೆ ಸಂಜೆ ಐದೋ ಅಥವಾ ಆರೋ ಗಂಟೆಯ ಕಡಲ ತೀರದಲ್ಲಿ ಸಹಜವಾಗಿ ವಾಯುವಿಹಾರ ಮಾಡಲು ಬರುವವರು ನಡೆವಂಥ ಸಾವಧಾನದ ಅಲೆ. ಇನ್ನು ಕೆಲವೊಮ್ಮೆ ಹುಣ್ಣಿಮೆಯ ಚಂದಿರನ ಬಿಂಬ ಚೂರುಚೂರಾಗುವಂಥ ಅಬ್ಬರದ ಅಲೆ. ರಾತ್ರಿಯಾಯಿತೆಂದರೆ ಸಾಕು; ಎಲ್ಲ ಹಗಲುಗಳು ಹೆಗಲಿಗೆ ಬೀಳುತ್ತವೆ. ಬರೀ ಗಾಳಿ ಪಂಕದ ದನಿಯೊಂದೇ ಕೇಳುತ್ತದೆ ಅಂತ ಅದೆಷ್ಟೇ ಹೇಳಿಕೊಂಡರೂ ಅದನ್ನೂ ಮೀರಿದ ಒಂದು ನಿತ್ಯ ಗಲಾಟೆ ನಮ್ಮೆಲ್ಲರೊಳಗೂ ಇರುತ್ತದೆ. ಈ ಎಲ್ಲಾ ನೆನಪುಗಳಲ್ಲಿ ಕೆಲವು ತುಟಿಯ ಪಕ್ಕದಲ್ಲೊಂದು ಕಾಡಿಗೆ ಇಡುವಷ್ಟು ನಾಚಿಸಬಹುದು, ಕೆಲವು ನಮ್ಮ ಮೂರ್ಖತನಕ್ಕೆ ನಾವೇ ನಗುವಂತೆ ಕನ್ನಡಿ ಹಿಡಿದು ತೋರಿಸಬಹುದು, ಕೆಲವು ದಿಗಿಲು ಹುಟ್ಟಿಸಬಹುದು, ಸಣ್ಣಗೆ ಬೆವರು ಹುಟ್ಟಿಸಬಹುದು, ಕೆಲವು ಕಣ್ಣ ರೆಪ್ಪೆಗಳ ಬುಡದಲ್ಲಿ ಈಗಲೇ ಜಾರುತ್ತೇನೆ ಅಂತ ತಯಾರಾಗುವ ಹನಿ ಸಾಲಿಗೆ ನೆಪವಾಗಬಹುದು, ಕೆಲವು ಒಂದು ದೀರ್ಘ ನಿಟ್ಟುಸಿರಿನ ಸದ್ದಿಗೆ ಪ್ರೇರಕವಾಗಬಹುದು, ಕೆಲವು ಅತ್ಯಂತ ಆಪ್ತ ಅಪ್ಪುಗೆಯಂಥ ಬೆಚ್ಚನೆಯ ಕತೆಯಾಗಬಹುದು. ಎಲ್ಲರ ಎಲ್ಲಾ ನೆನಪುಗಳಿಗೂ ಅವುಗಳದ್ದೇ ಆದ ತೀವ್ರತೆಯಿದೆ. ಕಾಲ, ಸನ್ನಿವೇಶ, ಮನಸ್ಥಿತಿಗಳ ಒಟ್ಟೂ ಚಿತ್ರಣವಾಗಿಯೇ ಅವು ಎಂದಿಗೂ ನಮ್ಮಲ್ಲಿ ಉಳಿದುಕೊಳ್ಳುವುದು. ಅಂಥ ಒಂದು ನೆನಪುಗಳ ಕಾವ್ಯವೇ ಫ್ಯೂಜಿಟಿವ್ ಪೀಸಸ್ ( Fugitive Pieces ).
ನಾಝೀ ಸೈನ್ಯ ಜ್ಯೂ ಜನಾಂಗದ ಮೇಲೆ ನಡೆಸಿದ ಕ್ರೌರ್ಯದ ಕುರಿತು ನಾವೆಲ್ಲರೂ ಕೇಳಿದ್ದೇವೆ. ಹಾಗೆಯೇ ಅದರ ಕುರಿತಾಗಿ ಇವತ್ತಿಗೂ ಅದೆಷ್ಟೋ ಪುಸ್ತಕಗಳು, ಚಲನಚಿತ್ರಗಳು ಮತ್ತೆ ಮತ್ತೆ ತಯಾರಾಗುತ್ತಲೇ ಇವೆ. ಬರೀ ಅದೊಂದೇ ಅಲ್ಲ, ಒಬ್ಬ ಮನುಷ್ಯ ತನ್ನದೇ ಆದ ಹಲವು ಕಾರಣಗಳಿಗೆ ತನ್ನ ಓರಗೆಯ ಇನ್ನೊಬ್ಬ ಮನುಷ್ಯನೊಂದಿಗೆ ಅತ್ಯಂತ ಅಸಹ್ಯದ ರೀತಿಯಲ್ಲಿ ನಡೆದುಕೊಂಡ ಎಷ್ಟೋ ಕತೆಗಳಿವೆ. ಉದಾಹರಣೆಗೆ ವಿಯೆಟ್ನಾಂ ಅಲ್ಲಿ ನಡೆದಂಥ ಯುದ್ಧ. ಆದರೂ, ನಾಝೀ ಸೈನ್ಯದ ವರ್ತನೆಗೆ ಇತಿಹಾಸದ ಪುಟಗಳಿಗೆಲ್ಲ ಕಮಟು ವಾಸನೆ. ಇರುವ ಅದೇ ಶ್ವಾಸ ಎಲುಬು ಚರ್ಮ ಅಂಗಾಂಗಳಲ್ಲಿ ಬಣ್ಣ ಅದು ಇದು ಕಂಡುಕೊಂಡ ನಾವುಗಳು ಇತಿಹಾಸದುದ್ದಕ್ಕೂ ಮಾಡಿದ್ದು ಬಲಪ್ರಯೋಗವನ್ನು ಮಾತ್ರವೇನಾ ಅನ್ನುವಷ್ಟರ ಮಟ್ಟಿಗೆ ರಕ್ತದ ಅಂಟಂಟು.. ಆದರೆ ಈ ಹತ್ಯಾಕಾಂಡವನ್ನು ನೇರವಾಗಿ ತೋರಿಸದೇ ಕೇವಲ ಆ ಹತ್ಯಾಕಾಂಡದ ಸುತ್ತ ಒಂದು ಕತೆಯನ್ನು ಹೇಳಬಹುದಾದರೆ ಹೇಗೆ ಅನ್ನುವುದಕ್ಕೆ ಮಾದರಿ ಉತ್ತರವೆಂಬಂತೆ ಈ ಚಿತ್ರ ಇದೆ. ಇಡೀ ಚಿತ್ರ ನೆನಪುಗಳನ್ನು ಕಟ್ಟುವ ಕಾಮಗಾರಿಯಲ್ಲಿ ತೊಡಗಿಕೊಂಡಂತಿದ್ದು, ಬಾಲ್ಯದಲ್ಲಿ ಕಂಡ ಒಂದು ಘಟನೆಯ ಸುತ್ತಲೂ ಸುತ್ತುತ್ತದೆ. ಅದಕ್ಕಾಗಿ ಈ ಚಿತ್ರ ಬಳಸಿಕೊಂಡಿದ್ದು ಕಾವ್ಯಾತ್ಮಕತೆಯನ್ನು. ಭೀಕರ ರಕ್ತಪಾತ, ಚೀರಾಟ, ಮೂರ್ತ ಕ್ರೌರ್ಯ ಇವುಗಳಲ್ಲಿ ಯಾವುದೂ ಇಲ್ಲದೇ, ಬಹುತೇಕ ಪಾಲು ಮನಸ್ಸಿನೊಳಗಿನ ಅಸ್ತವ್ಯಸ್ತ ಚಿತ್ರಗಳನ್ನು ಒಂದಕ್ಕೊಂದು ಜೋಡಿಸುತ್ತಾ, ಕಳೆದುಹೋದವರ ನೆನಪುಗಳಲ್ಲಿ ತನ್ನನ್ನು ಹುಡುಕಿಕೊಳ್ಳುವ ಬರೆಹಗಾರನ ಎದೆಯೊಳಗಿನ ಗದ್ದಲವಷ್ಟೇ ಇಲ್ಲಿ ಉಳಿವ ಸದ್ದು.
ನಮ್ಮ ಈ ಕ್ಷಣದ ನೆನಪುಗಳಲ್ಲಿ ನಿನ್ನೆಯೋ, ಮೊನ್ನೆಯೋ, ಒಂದಷ್ಟು ಹಿಂದೆಯೋ ನಡೆದದ್ದರ ಕುರಿತು “ಒಂದು ವೇಳೆ ಹಾಗಾಗದೇ, ಹೀಗಾಗಿದ್ದರೆ?”, ” ಒಂದು ವೇಳೆ ನಾನು ಹಾಗೆ ಮಾಡದೇ, ಹೀಗೆ ಮಾಡಿದ್ದಿದ್ದರೆ?” ಅನ್ನುವ ಪ್ರಶ್ನೆ ಬಂದಾಗ ಒಂದು ಥರದ ತಳಮಳ ಹುಟ್ಟಿಕೊಳ್ಳುತ್ತದಲ್ಲಾ, ಅದು ಕೊನೆಗೆ ಬೆಳೆಯುತ್ತಾ ಬೆಳೆಯುತ್ತಾ ಒಂದು ವ್ಯಸನವೇ ಆಗಿ, ನಮ್ಮ ವರ್ತಮಾನವನ್ನೇ ಕಲಕಿಬಿಡಬಹುದು ಅಥವಾ ನಿಧಾನಕ್ಕೆ ನಮ್ಮನ್ನೇ ನಾವು ಕಳೆದುಕೊಳ್ಳುತ್ತಾ ಹೋಗಬಹುದು. “To live with ghosts requires solitude” – ‘ಭೂತ’ದೊಂದಿಗೆ ಬದುಕಲು ಏಕಾಂತ ಬೇಕು ಅನ್ನುವುದು ಅದೆಷ್ಟರ ಮಟ್ಟಿಗೆ ನಮ್ಮ ನೆನಪುಗಳು ಅತ್ಯಂತ ಖಾಸಗಿಯಾದಂಥವುಗಳು ಹಾಗೂ ಅಲ್ಲಿನ ನಮ್ಮ ಭಾಗದ ಅನುಭವಕ್ಕೆ ಮತ್ತಾರಿಗೂ ಪ್ರವೇಶವಿಲ್ಲ ಅನ್ನುವುದನ್ನು ಅದೆಷ್ಟು ಸ್ಪಷ್ಟವಾಗಿ ಹೇಳುತ್ತದಲ್ಲವಾ! ಈ ‘ರೆ’ಗಳ ಪ್ರಪಂಚದಲ್ಲಿ ನಾವು ನಮ್ಮದೇ ರಗಳೆಗಳನ್ನು ಹರಡಿಕೊಂಡು ಕೂತಿದ್ದೇವೆ; ನಿನ್ನೆಯದ್ದು, ನಾಳೆಯದ್ದು, ಮಾಸಿಹೋದ ಗುರುತಲ್ಲಿ ಇಷ್ಟೇ ಇಷ್ಟು ಕಾಣುವಂಥದ್ದು, ದೃಷ್ಟಿಗೂ ನಿಲುಕದ ಮುಂದಿನ ತಿರುವುಗಳದ್ದು ಇತ್ಯಾದಿ ಇತ್ಯಾದಿ. ಇತ್ತೀಚೆಗೆ ನಮ್ಮಲ್ಲಿ ವರ್ತಮಾನದಲ್ಲಿ ಬದುಕಬೇಕು ಎನ್ನುವ ಕೂಗು ಬಹಳ ಕೇಳಿಬರುತ್ತಿರುವಾಗ, ನೆನಪುಗಳಿಂದ ವಿಮುಕ್ತರಾಗಿ, ಕನಸುಗಳ ಗಾಳಿಯನ್ನು ಸೋಕಿಸಿಕೊಳ್ಳದೇ ಬದುಕುವುದಕ್ಕೆ ಸಾಧ್ಯವಾ? ಉತ್ತರ ಯಾವತ್ತಿಗೂ ಒಂದೇ ಅಲ್ಲ ಅನ್ನುವ ಅರಿವು ನಮಗಿದ್ದರೆ ಸಾಕು!
ಈ ಸಿನೆಮಾ ಇದೇ ಹೆಸರಿನ ಕಾದಂಬರಿಯ ದೃಶ್ಯರೂಪದ ಅಳವಡಿಕೆ. ಕಾದಂಬರಿಯನ್ನು ಬರೆದವರು ಕೆನಡಾದ ಕವಯಿತ್ರಿ ಆನ್ ಮೈಕಲ್ಸ್ ( Anne Michaels ). ಈ ಕಾದಂಬರಿಯನ್ನು ಸಿನೆಮಾವಾಗಿ ಮಾಡಿದ್ದು ಜೆರೆಮಿ ಪೊಡಿಸ್ವಾ ( Jeremy Podeswa). ಇಲ್ಲೊಂದು ವಿಶೇಷ ಸಂಗತಿಯಿದೆ; ಜೆರೆಮಿಯ ತಂದೆ ಸ್ವತಃ ಒಬ್ಬ ನಾಝೀ ಶಿಬಿರದಿಂದ ಬದುಕಿ ಬಂದ ವ್ಯಕ್ತಿ. ಒಂದು ಕತೆಗೆ ಸ್ವಂತಿಕೆ ದಕ್ಕುವುದು ಹೀಗೆ.
ಎಲ್ಲವೂ ಇದ್ದು, ಅದ್ಯಾವುದಕ್ಕೂ ತನ್ನನ್ನು ತಾನು ಅರ್ಪಿಸಿಕೊಳ್ಳಲಾಗದೇ ಇರುವುದರ ಹಿಂದೆ ಹಲವು ಕಾರಣಗಳಿರಬಹುದು. ಆದರೆ, ಯಾವಾಗ ಇನ್ನೊಬ್ಬರು ನಮ್ಮ ನೆನಪುಗಳನ್ನು ತಮ್ಮ ನೆನಪುಗಳಂತೆ ನೇವರಿಸುವರೋ ಆಗ ನಾವು ತೆರೆದುಕೊಳ್ಳದೇ, ಅವರೊಂದಿಗೆ ಬೆರೆಯದೇ ಇರುವುದಕ್ಕೆ ಹೇಗೆ ಸಾಧ್ಯ! ಸಂಗಾತವೆಂದರೆ ಇದೇ ಇರಬಹುದೇನೋ..
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ