ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಟರ್ಕಿಯ ಶಿಶಿರಸುಪ್ತಿ

ಶ್ರೀ ತಲಗೇರಿ
ಇತ್ತೀಚಿನ ಬರಹಗಳು: ಶ್ರೀ ತಲಗೇರಿ (ಎಲ್ಲವನ್ನು ಓದಿ)

ಒಬ್ಬ ವ್ಯಕ್ತಿಯನ್ನು ಒಳ್ಳೆಯವನೆಂದೂ ಇನ್ನೊಬ್ಬ ವ್ಯಕ್ತಿಯನ್ನು ಕೆಟ್ಟವನೆಂದೂ ವಿಂಗಡಿಸುವುದು ಅಷ್ಟು ಸುಲಭವಾ, ಹಾಗೆ ವಿಂಗಡಿಸಲಿಕ್ಕೆ ಇರುವ ಮಾನದಂಡಗಳೇನು, ಆ ಮಾನದಂಡಗಳನ್ನು ಕೊಟ್ಟವರಾದರೂ ಯಾರು? ಎಷ್ಟೋ ವರುಷಗಳ ಹಿಂದಿನಿಂದಲೇ ಈ ಸರಿ ತಪ್ಪುಗಳ ವಿಭಜನೆ ನಡೆದುಕೊಂಡು ಬಂದಿರುವಾಗ, ಕಾಲಕಾಲಕ್ಕೆ ಸರಿ ತಪ್ಪುಗಳ ವ್ಯಾಖ್ಯಾನ ಬದಲಾಗಲೇ ಇಲ್ಲವಾ, ಒಂದು ವೇಳೆ ‘ಇಲ್ಲ’ ಅಂತಾದಲ್ಲಿ, ಸರಿ‌ ತಪ್ಪುಗಳ ಮೇಲೆ, ಮನುಷ್ಯನ ವಿವೇಚನೆಯ ಮೇಲೆ ಕಾಲದ, ಅನುಭವದ ಯಾವ ಪ್ರಭಾವವೂ ಆಗೇ ಇಲ್ಲವಾ? ಒಬ್ಬ ವ್ಯಕ್ತಿ ಒಳ್ಳೆಯವನೋ ಕೆಟ್ಟವನೋ ಅಂತ ಒಮ್ಮೆ ನಿರ್ಧರಿಸಲ್ಪಟ್ಟ ನಂತರ ಪೂರಾ ಬದುಕು ಆತ ಹಾಗೇ ಇರುತ್ತಾನಾ, ಇರುವುದಕ್ಕೆ ಸಾಧ್ಯವಾ? ಮನುಷ್ಯ ತನ್ನ ಭಾವನಾತ್ಮಕ ಪರಿಮಾಣಗಳ ಸಂತುಲನೆಯ ವ್ಯತ್ಯಾಸದಿಂದ ಪಡೆಯಬಹುದಾದ ಗುಣ ಅವಗುಣಗಳು ಬಹಳಷ್ಟು. ಹೀಗಿರುವಾಗ ಒಬ್ಬ ವ್ಯಕ್ತಿ ನಿರಂತರವಾಗಿ ಒಂದೇ ಹಣೆಪಟ್ಟಿಯನ್ನು ಹೊತ್ತುಕೊಳ್ಳುವುದು ಎಷ್ಟು ಸೂಕ್ತ? ‘ಕೆಟ್ಟವರಿಗೆ ಶಿಕ್ಷೆ ದೊರೆತಾಗ, ಪಶ್ಚಾತ್ತಾಪವಾದಾಗ ಅವರು ಒಳ್ಳೆಯವರಾಗುತ್ತಾರೆ’ ಇತ್ಯಾದಿಗಳು ನಾವು ಕಂಡುಕೊಂಡ ಮಾರ್ಗಗಳೇನೋ ಹೌದು. ಆದರೂ ಒಳ್ಳೆಯವರಲ್ಲಿರುವ ಕೆಟ್ಟ ಗುಣಗಳು ಹಾಗೂ ಕೆಟ್ಟವರಲ್ಲಿರುವ ಒಳ್ಳೆಯ ಗುಣಗಳನ್ನು ಗಮನಿಸದೇ ಹೋದರೆ ಅದು ಸಮಂಜಸವಾ? ಬಹುಶಃ ನಾಗರಿಕತೆಯ ವಿಕಾಸವಾದಂತೆ ಮನುಷ್ಯನಲ್ಲಿ‌ನ ಪಾತ್ರಗಳಿಗೆ ಕಪ್ಪು ಬಿಳಿ ಬಣ್ಣವಷ್ಟೇ ಅಲ್ಲದೇ, ಎರಡೂ ಮಿಳಿತಗೊಂಡಿರುವ ಇನ್ನೊಂದು ಬಣ್ಣವೂ, ಅದರ ಜೊತೆಗೆ ಕಪ್ಪು ಮತ್ತು ಬಿಳಿಯದ್ದೇ ಬೇರೆ ಬೇರೆ ಸ್ವರೂಪಗಳೂ ಸೇರಿಕೊಳ್ಳುತ್ತಾ ಹೋಗುತ್ತಿವೆ ಹಾಗೂ ಮನುಷ್ಯ ಸಂಕೀರ್ಣನಾಗುತ್ತಿದ್ದಾನೆ. ಅವನ ಮನೋಲೋಕ ಸಂಕೀರ್ಣವಾಗುತ್ತಿದೆ. ಈ ಸಂಕೀರ್ಣತೆಯೇ ನಾಗರಿಕ ವಿಕಾಸದ ಮುಂದುವರೆದ ಘಟ್ಟವಿರಬಹುದು ಅನಿಸುತ್ತದೆ. ನಮ್ಮೊಳಗಿನ ಈ ದ್ವಂದ್ವ ಗುಣಗಳನ್ನು ಒರೆಗೆ ಹಚ್ಚುವ ಸಿನೆಮಾ, ಟರ್ಕಿಶ್ ಭಾಷೆಯ ‘ಕಿಶುಯುಕುಸು’ ( Kış Uykusu ) ಅಥವಾ ‘ವಿಂಟರ್ ಸ್ಲೀಪ್’ ( Winter Sleep )

ಬಡವ, ಶ್ರೀಮಂತ ಇತ್ಯಾದಿ ವಿಷಯಗಳನ್ನು ಮುಖ್ಯ ವಸ್ತುವಾಗಿಸಿಕೊಂಡು ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಸಿನೆಮಾಗಳು ಬಂದಿವೆ. ಬಹುತೇಕ ಎಲ್ಲರನ್ನೂ ಸುಲಭವಾಗಿ ಮುಟ್ಟಬಹುದಾದ ವಸ್ತು ಅದು. ಒಂದು ಬಡ ಕುಟುಂಬವನ್ನು ನಿಕೃಷ್ಟವಾಗಿ ಕಾಣುವ ಶ್ರೀಮಂತನೊಬ್ಬ ಇನ್ನೊಂದು ಮಾಧ್ಯಮದ ಮೂಲಕ ಇನ್ನ್ಯಾರೋ ಸಹಾಯ ಕೇಳಿದರು ಅಂತ ಅವರಿಗೆ ಸಹಾಯ ಮಾಡಲು ಮುಂದಾದರೆ, ಅವನನ್ನು ಯಾವ ಪಟ್ಟಿಗೆ ಸೇರಿಸುವುದು? ಹೀಗೆ ಸಹಾಯ ಮಾಡುವಾಗ ಆ ಸಹಾಯದ ಹಿಂದೆ‌ ಇರಬಹುದಾದ ಉದ್ದೇಶ ಕೂಡಾ ಮುಖ್ಯವಾಗುತ್ತದೆ. ಹೆಸರು ಮಾಡಬಹುದೆಂದು ಮಾಡುವ ಸಹಾಯಕ್ಕೂ, ಹೆಸರು ಗೊತ್ತೇ ಆಗದಂತೆ ಮಾಡುವ ಸಹಾಯಕ್ಕೂ ಇರುವ ಅಂತರವೇ ಈ ಸರಿ ತಪ್ಪುಗಳ ವಿಶ್ಲೇಷಣೆಯಲ್ಲಿ ಒಂದು ನಿರ್ಣಾಯಕ ಅಂಶವಾಗಬಹುದು. ಈ ಸಿನೆಮಾದಲ್ಲಿ ಒಂದು ಮಾತಿದೆ, “ಕೆಟ್ಟವರಿಗೆ ಕೆಟ್ಟದ್ದನ್ನು ಮಾಡಲು ಬಿಟ್ಟು, ಪ್ರತಿಕ್ರಿಯಿಸದೇ ಹೋದಲ್ಲಿ, ಅದೇ ಅವರಿಗೆ ಅವಮಾನದಂತಾಗಿ ಅವರು ಒಳ್ಳೆಯವರಾಗಬಹುದು”. ರಾಜಕಾರಣದ ಮಟ್ಟಿಗಂತೂ ಈ ಥರ ‘ಬಿಟ್ಟುಬಿಟ್ಟರೆ’ ಹಬ್ಬವೋ ಹಬ್ಬ!

ನಾಳೆಯ ಬಗ್ಗೆ ಯೋಚಿಸಬೇಡ,‌ ಇವತ್ತನ್ನು ಜೀವಿಸು ಅಂತ‌ ಎಲ್ಲರೂ ಹೇಳುತ್ತಾ‌ ಕೊನೆಕೊನೆಗೆ ಅದು ತನ್ನ ಮೂಲ ಅರ್ಥವನ್ನೇ ಕಳೆದುಕೊಂಡು, ಒಂದಷ್ಟು ಜನರನ್ನು ದಾರಿ ತಪ್ಪಿಸುತ್ತಿದೆ ಕೂಡಾ. ಈ ಹೊತ್ತನ್ನು ಅನುಭವಿಸಬೇಕು ನಿಜ, ಆದರೆ ಅದೇ‌ ಅತಿರೇಕಗಳಿಗೆ ಹೆಬ್ಬಾಗಿಲು ತೆರೆಯಬಾರದು ಅಲ್ವಾ? ಸುಖದ‌ ಜೀವನದ ಹುಡುಕಾಟಕ್ಕೆ ಅಗತ್ಯವಿರುವ, ಅಥವಾ ಈ ಹೊತ್ತು ನಾನು ಬದುಕಿರುವುದಕ್ಕೆ ಋಣಿಯಾಗಿದ್ದೇನೆ ಅನ್ನುವ ಕೃತಜ್ಞ ಭಾವಕ್ಕೆ ಪೂರಕವಾಗಿ ಈ ಕ್ಷಣವನ್ನು ಅನುಭವಿಸುವ ಪದ್ಧತಿ ಒಂದು ಚೆಂದದ ಸಂಗತಿಯಾಗಬಹುದು. ಹಲವು ಬಾರಿ ನಾವು “ಭವಿಷ್ಯತ್ತಿಗಾಗಿ ಯೋಜನೆಗಳನ್ನು ಮಾಡುವಲ್ಲಿ ವ್ಯಸ್ತರಾಗಿದ್ದಾಗ ಬದುಕು ಕಳೆದುಹೋಗಿರುತ್ತದೆ”. ವಿರಾಮ ಜೀವನಕ್ಕಾಗಿ ಇವತ್ತು ಮಿತಿಮೀರಿ ದುಡಿಯುತ್ತಾ, ಈ ಹೊತ್ತು ಹೇಗೆ ಕಳೆಯಿತು ಅನ್ನುವುದರ ಅರಿವೂ ಆಗದೇ,‌ ಕೇವಲ‌ ಸುಸ್ತು, ಒತ್ತಡ, ಅನಾರೋಗ್ಯದಲ್ಲೇ ಬದುಕು ಸವೆಸಿ ಕೊನೆಗೆ ಆ ವಿರಾಮದ ಜೀವನ ಬರುವುದರೊಳಗೇ ನಮ್ಮ ಪಯಣ ಮುಗಿದುಹೋದರೆ? ಅದಕ್ಕಿಂತ ದುರಂತ ಇನ್ನೊಂದಿಲ್ಲ ಅನಿಸುತ್ತದೆ. ನಾನು ನನ್ನ ಬದುಕನ್ನೇ ಜೀವಿಸದ ಮೇಲೆ, ಇಲ್ಲಿ ಹುಟ್ಟಿಬರುವ ಅವಶ್ಯಕತೆಯಾದರೂ ಏನಿತ್ತು? ಈ ಥರದ ಹಲವು ಪ್ರಶ್ನೆಗಳು ಇಂದಿನ ಮನುಷ್ಯ ಜನಾಂಗವನ್ನು ಕಾಡುತ್ತಿವೆ, ಅದರಲ್ಲೂ ಈ ಹೊತ್ತಿನಲ್ಲಿ‌ ಇನ್ನೂ ಅಧಿಕ ಅಲ್ವಾ?

ಈ ಸಿನೆಮಾದ ಮುಖ್ಯ ಪಾತ್ರಧಾರಿ ಹಿಂದೊಮ್ಮೆ ನಾಟಕಗಳಲ್ಲಿ ಪಾತ್ರ ಮಾಡುತ್ತಾ ಸಕ್ರಿಯನಾಗಿದ್ದ ವ್ಯಕ್ತಿ. ಈಗ ತನ್ನ ಪಾಡಿಗೆ ತಾನು ಬರೆದುಕೊಂಡು ಇರುವವನು; ಶ್ರೀಮಂತನೂ ಹೌದು. ಅವನಾಗಿಯೇ ಯಾರನ್ನೂ ಹಿಂಸಿಸುವುದಿಲ್ಲ ಅಥವಾ ಅವನಿಗೆ ಅವೆಲ್ಲವೂ ತಿಳಿಯುವುದೂ ಇಲ್ಲ! ಆದರೆ ಅವನೇ ಕಾರಣವಾಗಿ ಇಲ್ಲಿ ಹಲವರು ಹಿಂಸೆಗೆ ಒಳಗಾಗುತ್ತಾರೆ. ಧರ್ಮ, ಸಾಮಾಜಿಕ ನ್ಯಾಯ ಇತ್ಯಾದಿಗಳ ಕುರಿತು ಸ್ಥಳೀಯ ‌ಪತ್ರಿಕೆಗೆ ಅಂಕಣ ಬರೆಯುವುದು ಅವನ ಇತ್ತೀಚಿನ‌ ಕೆಲಸ. ಈ ಸಿನೆಮಾದಲ್ಲಿ ಬರೆಹಗಾರನ ಬದುಕು ಮತ್ತು ಬರೆಹಗಳ ಕುರಿತಾಗಿ ಒಂದಷ್ಟು ಗಮನೀಯ ಚರ್ಚೆಗಳಾಗುತ್ತವೆ. ನಮ್ಮಲ್ಲಿ ಈ ಕಾಲಘಟ್ಟದಲ್ಲಿ ಒಂದು ಚರ್ಚೆ ಸದಾ ಚಾಲ್ತಿಯಲ್ಲಿದೆ‌. ನಮ್ಮ ಸಾಹಿತ್ಯ ನಿಂತ‌ ನೀರಾಗಿದೆ, ಹೊಸ ಥರದ ಬರೆಹಗಳು ಬರುತ್ತಿಲ್ಲ, ಅದೇ ಬಾಲ್ಯ, ಅದೇ ಹಳ್ಳಿಯ ಪರಿಸರದ‌ ಗೊಣಗುವಿಕೆ, ಅದೇ ನಗರದ ಐಟಿ ಜೀವನ ಇತ್ಯಾದಿಗಳ ಕುರಿತಾಗೇ ಸಾಹಿತ್ಯ ಸೃಷ್ಟಿಯಾಗುತ್ತಿದೆಯೇ ( ಸೃಷ್ಟಿಯೋ, ಮರುಸೃಷ್ಟಿಯೋ!) ಹೊರತೂ, ಇದರಾಚೆಗೆ ಏನೂ ಕಾಣುತ್ತಿಲ್ಲ ಅನ್ನುವ ಕೊರಗು ಇದ್ದೇ ಇದೆ. ಇಂಥ ಸಂದರ್ಭಕ್ಕೆ ಈ ಪ್ರಶ್ನೆ ಇನ್ನಷ್ಟು ಆಯಾಮಗಳನ್ನು ಕೊಡುತ್ತದೆ; ಒಬ್ಬ ಬರೆಹಗಾರ ತನ್ನದಲ್ಲದ ಪರಿಸರವನ್ನು ಕುರಿತು ಯಾವುದೇ ಅನುಭವವಿಲ್ಲದೇ ಬರೆಯುವುದು ಎಷ್ಟು ಸರಿ? ಉತ್ತರ ಕೊಡುವುದು ಅಷ್ಟು ಸಸಾರವಂತೂ ಅಲ್ಲ ಅಲ್ವಾ? ಹ್ಞ, ಇನ್ನೊಂದು ವಿಷಯ “ನೀನೇನು ಬರೆಯುತ್ತೀಯಾ ಎನ್ನುವುದನ್ನು ನೀನು ಆಯ್ಕೆ‌ಮಾಡಿಕೊಳ್ಳಲಾಗದು, ಒಂದರ್ಥದಲ್ಲಿ ಬರಹವೇ ನಿನ್ನನ್ನು ಆಯ್ಕೆಮಾಡಿಕೊಳ್ಳುತ್ತದೆ”

ಅನಟೋಲಿಯಾ ಪ್ರದೇಶದಲ್ಲಿನ‌ ಪರಿಸರದಲ್ಲಿ ಈ ಕತೆ ಸಾಗುತ್ತದೆ. ಕಲ್ಲು ಪರ್ವತಗಳ ನಡುವೆ ನಮ್ಮದೇ ಜಗತ್ತಿನಲ್ಲಿ ಬೇರೆಯದೇ ಆಗಿ ಕಾಣುವಂಥ ಇನ್ನೊಂದಿಷ್ಟು ಮುಖಗಳ ಆಯಾಮದಂತೆ ಈ ಪರಿಸರ ಕಾಣಿಸುತ್ತದೆ. ಸುಮಾರು ಮೂರು ಕಾಲು ತಾಸಿನ‌ ಸಿನೆಮಾದಲ್ಲಿ ಹಸಿವು, ಬಡತನ, ಕ್ರೌರ್ಯ, ಕರುಣೆ, ನೆಮ್ಮದಿ, ತೊಳಲಾಟ, ಹೃದಯವಿದ್ರಾವಕತೆ, ದೈನ್ಯತೆ, ಅಹಂ, ಸಣ್ಣತನ, ಭಯ, ಅಸ್ಥಿರತೆ, ಸಹಜ ಸೌಂದರ್ಯ, ತುಡಿತ, ಸ್ವಾತಂತ್ರ್ಯದ ಗಂಧ ಹೀಗೆ ಇನ್ನೂ ಹಲವು ವಿಷಯಗಳು ಒಟ್ಟುಗೂಡಿವೆ. ೬೭ನೇ ಕ್ಯಾನ್ ಚಿತ್ರೋತ್ಸವದಲ್ಲಿ ( Cannes Film Festival ) ಅತ್ಯುನ್ನುತ ಪ್ರಶಸ್ತಿಯಾದ ‘ಪಾಮ್ ಡೋರ್’ ( Palme D’or) ಅನ್ನು ಈ ಸಿನೆಮಾ ತನ್ನದಾಗಿಸಿಕೊಂಡಿದೆ. ನಿಧಾನವಾಗಿ ಬೀಸುವಂಥ‌ ಗಾಳಿಯ ಸಪ್ಪಳವನ್ನು ಗುರುತಿಸಿ ಅದನ್ನು ಅನುಭವಿಸುವವರು ಮಾತ್ರ ಇಂಥ ಸಿನೆಮಾಗಳನ್ನು ನೋಡಬಲ್ಲರೇನೋ, ಅಂಥವರು ಮಾತ್ರ ಈ ಸಿನೆಮಾದೊಂದಿಗೆ ಬೆರೆಯಬಲ್ಲರೇನೋ ಅನ್ನುವ ಒಂದು ಪುಟ್ಟ ಟಿಪ್ಪಣಿ!