- ಬೇಂದ್ರೆಸಂಗೀತ: ಒಂದು ವಿಶ್ಲೇಷಣೆ - ಮಾರ್ಚ್ 18, 2024
- ದೂರ ತೀರದಿಂದ ಮುತ್ತುಗಳ ತಂದ ನಾವಿಕ - ಫೆಬ್ರುವರಿ 26, 2024
- ಐವತ್ತನೇ ಪುಸ್ತಕದ ಸಂಭ್ರಮದಲ್ಲಿ ಎನ್.ಎಸ್.ಎಸ್. - ಆಗಸ್ಟ್ 9, 2022
‘ಓಹ್ ಬನ್ನಿ. ಎಷ್ಟು ದಿನ ಆಯಿತು ನಿಮ್ಮನ್ನು ನೋಡಿ, ಹೇಗಿದ್ದಾರೆ ಮನೆಯವರು, ಮಗ ಏನು ಮಾಡುತ್ತಾನೆ’ ಎಂದು ಸ್ವಾಗತಿಸಿ ಮಾತಿಗೆ ಕುಳಿತುಕೊಳ್ಳುತ್ತಿದ್ದರು, ಊಟದ ಸಮಯವಾದರಂತೂ ಅವರ ಮನೆಯಿಂದ ಊಟ ಮಾಡದೆ ಬರಲು ಸಾಧ್ಯವೇ ಇರಲಿಲ್ಲ ‘ಇಷ್ಟೇನಾ, ಊಟ, ನಿಮ್ಮ ವಯಸ್ಸಿಗೆ ಹೇಗೆ ಊಟ ಮಾಡಬೇಕು’ ಎಂದು ತಾವೇ ಸೌಟು ಹಿಡಿದು ಬಡಿಸಲು ಸಿದ್ದರಾಗಿ ಬಿಡುತ್ತಿದ್ದರು. ಅದು ಅಕ್ಷರಶ: ರಾಜಾತಿಥ್ಯ. ಮೊದಲ ಸಲವಂತೂ ನಾವು ಕಟ್ಟಾಭಿಮಾನದಿಂದ ಆರಾಧಿಸಿದ ವರನಟ ಇಷ್ಟು ಸರಳವೇ ಇದು ಕನಸಲ್ಲ ತಾನೆ ಎಂದು ಮೈ ಜಿಗುಟಿಕೊಂಡಿದ್ದೆ.. ‘ಅತಿಥಿ ದೇವೋಭವ’ದ ನಿಜವಾದ ಅರ್ಥವನ್ನು ರಾಜ್ ಕುಮಾರ್ ಅವರಲ್ಲಿ ಕಾಣಬಹುದಾಗಿತ್ತು. ಅವರು ಊಟ ಮಾಡುವ ರೀತಿ ಕೂಡ ಸೊಗಸೇ. ಬಾಳೆ ಎಲೆಯಲ್ಲಿ ಒಂದು ಅಗುಳನ್ನು ಬಿಡದಂತೆ ಊಟ ಮಾಡುವ ರೀತಿ ಇನ್ನೊಬ್ಬರಿಗೆ ಮಾದರಿಯಾಗಿತ್ತು. ತಮ್ಮ ಮನೆಗೆ ಬಂದವರೂ ಕೂಡ ಹೀಗೆ ಹೊಟ್ಟೆ ತುಂಬಾ ಊಟ ಮಾಡಿ ಹೋಗಬೇಕು ಎಂದು ಬಯಸಿದ ಹಿರಿಯ ಜೀವ ಅದು.
ರಾಜ್ ಕುಮಾರ್ ತೆರೆಯ ಮೇಲೆ ಮಾತ್ರವಲ್ಲ ತೆರೆಯ ಹಿಂದೆ ಕೂಡ ಎಷ್ಟು ಸರಳವಾಗಿದ್ದರು ಎನ್ನುವುದು ಗೊತ್ತಾಗುವ ಮೊದಲು ನಡೆದಿದ್ದು ಹಲವು ಅನುಭವಗಳು ಎಲ್ಲಕ್ಕೂ ಅದರದ್ದೇ ಆದ ಕಥೆ.
‘ರಾಜ್ ಕುಮಾರ್’ಎಂಬ ಹೆಸರನ್ನು ನಾನು ಮೊದಲು ಕೇಳಿದ್ದು ನನ್ನ ಐದನೇ ವಯಸ್ಸಿನಲ್ಲಿ ನಾವು ಆಗ ಚಿಕ್ಕಮಂಗಳೂರು ಜಿಲ್ಲೆಯ ನಾರ್ವೆ ಎಂಬ ಊರಿನಲ್ಲಿದ್ದವು. ಚಿತ್ರದುರ್ಗ ಜಿಲ್ಲೆಯ ಮೂಲೆಯಲ್ಲಿದ್ದ ಗುಂಜಿಗನೂರು ಎಂಬ ಚಿಕ್ಕ ಹಳ್ಳಿಯಲ್ಲಿ ಬೇಸಿಗೆ ರಜೆ ಮುಗಿಸಿಕೊಂಡು ಬರುವಾಗ ಬಸ್ ಹಾರ್ಡಿಕೊಪ್ಪ ಎಂಬ ಊರಿನಲ್ಲಿ ದಿಢೀರ್ ನಿಲುಗಡೆಯನ್ನು ಪಡೆಯಿತು. ಇದ್ದಕಿದ್ದಂತೆ ಬಸ್‍ನಲ್ಲಿ ‘ರಾಜ್ ಕುಮಾರ್, ರಾಜ್ ಕುಮಾರ್’ ಎಂಬ ಉದ್ಗಾರಗಳು ಕೇಳಿ ಬಂದವು. ಅಲ್ಲಿ ‘ಎರಡು ಕನಸು’ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಬಸ್ಸಿನಲ್ಲಿ ಬೆರಳೆಣಿಕೆಯಷ್ಟು ಜನ ಬಿಟ್ಟು ಉಳಿದವರೆಲ್ಲಾ ಇಳಿದೇ ಬಿಟ್ಟರು. ಅಷ್ಟೇ ಅಲ್ಲ ಅವರೆಲ್ಲಾ ಹಿಂದಿರುಗಿ ಬರುವ ಲಕ್ಷಣವೇ ಕಾಣದಿದ್ದಾಗ ಬಸ್ ಖಾಲಿಯಾಗಿಯೇ ಹೊರಟಿತು. ಊರಿನ ತುಂಬಾ ಮುಂದಿನ ಕೆಲವು ತಿಂಗಳುಗಳ ಕಾಲ ರಾಜ್ ಕುಮಾರ್ ಅವರ ಕುರಿತು ಮಾತನಾಡದವರು ಯಾರೂ ಇರಲಿಲ್ಲವೆಂದೇ ಹೇಳಬೇಕು. ‘ಎರಡು ಕನಸು’ಚಿತ್ರೀಕರಣ ನಡೆದ ಸ್ಥಳ ಯಾತ್ರಾಸ್ಥಳವಾಗಿ ಬಿಟ್ಟಿತು. ನಮ್ಮ ಮನೆಗೆ ಯಾರೇ ಬರಲಿ ಮೊದಲು ಕೇಳುತ್ತಿದ್ದಿದ್ದೇ ‘ಇಲ್ಲಿ ಎರಡು ಕನಸು ಚಿತ್ರದ ಶೂಟಿಂಗ್ ನಡೆದಿತ್ತಲ್ಲಾ ಎಲ್ಲಿ’ ಎಂದು. ಮುಂದೆ ‘ಎರಡು ಕನಸು’ಚಿತ್ರ ಕೊಪ್ಪದ ಜೆ.ಎಂ.ಜೆ ಚಿತ್ರಮಂದಿರದಲ್ಲಿ ಬಿಡುಗಡೆಯಾದಾಗ ಊರಿಗೆ ಊರೇ ಅಲ್ಲಿಗೆ ಹೋಗಿತ್ತು. ಬೆಳ್ಳಿತೆರೆಯ ಮೇಲೆ ತಮ್ಮ ಊರನ್ನು ಕಂಡು ರೋಮಾಂಚನಗೊಂಡಿತ್ತು. ರಾಜ್ ಕುಮಾರ್ ಅವರನ್ನು ಆರಾಧಿಸಲು ಇದಕ್ಕಿಂತ ದೊಡ್ಡ ಕಾರಣ ಬೇಕಿತ್ತೇ?
ನಾವು ನಾರ್ವೆಯನ್ನು ಬಿಟ್ಟು ಹರಿಹರಪುರಕ್ಕ ಬಂದರೂ ನಮಗೆ ಚಿತ್ರಮಂದಿರವಿದ್ದ ಊರು ಕೊಪ್ಪವಾಗಿಯೇ ಮುಂದುವರೆಯಿತು. ಅಲ್ಲಿ ಮೂವತ್ತು ದಿನಗಳು ಯಾವುದಾದರೂ ಸಿನಿಮಾ ನಡೆದರೆ ಅದೇ ಶತದಿನೋತ್ಸವವಿದ್ದಂತೆ, ರಾಜ್ ಕುಮಾರ್ ಅವರ ಚಿತ್ರಗಳು ನಿಶ್ಚಿತವಾಗಿ ಈ ಅವಧಿಯನ್ನು ಪೂರ್ಣಗೊಳಿಸಿ ಇನ್ನೂ ಮುನ್ನುಗ್ಗುತ್ತಿದ್ದವು. ನಾನು ಬಾಲ್ಯದಲ್ಲಿ ನೋಡಿದ್ದ ಬಹುತೇಕ ಚಿತ್ರಗಳು ರಾಜ್ ಕುಮಾರ್ ಅಭಿನಯದ ಚಿತ್ರಗಳೇ, ಹೀಗಾಗಿ ನನ್ನ ಕನಸಿನ ಏಕೈಕ ಸಾಮ್ರಾಟರಾಗಿ ರಾಜ್ ಕುಮಾರ್ ಉಳಿದು ಬೆಳೆದರು. ನಾನು ಹೈಸ್ಕೂಲಲ್ಲಿದ್ದಾಗ ಶೃಂಗೇರಿಯಲ್ಲಿ ‘ವಸಂತ ಗೀತ’ ಚಿತ್ರದ ಚಿತ್ರೀಕರಣ ನಡೆಯಿತು. ಆ ಬೃಹತ್ ಜನಸ್ತೋಮದ ನಡುವೆ ವರನಟನನ್ನು ಕಷ್ಟಪಟ್ಟು ನುಗ್ಗಿ ಕಣ್ಣಾರೆ ಕಂಡು ರೋಮಾಂಚಿತನಾದದ್ದೂ ಆಯಿತು. ಎಷ್ಟೋ ವರ್ಷಗಳ ಕಾಲ ಅದು ನನ್ನ ಜೀವನದ ಅವಿಸ್ಮರಣೀಯ ಗಳಿಗೆ. ನಾನು ಆಗ ನೋಡಿದ್ದ ಚಿತ್ರಗಳಲ್ಲೆಲ್ಲಾ ರಾಜ್ ಕುಮಾರ್ ಪರಿಪೂರ್ಣ ಆದರ್ಶ ಪುರುಷರಾಗಿದ್ದರು. ಈ ಚಿತ್ರ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದು ಬಿಟ್ಟರು.
ರಾಜ್ ಕುಮಾರ್ ನನ್ನ ಮನಸ್ಸಿನಲ್ಲಿ ಸಾಂಸ್ಕೃತಿಕ ರೂಪಕವಾಗಿ ಬೆಳೆಯಲು ಆರಂಭಿಸಿದ್ದು ಹೀಗೆ.
ಚಿತ್ರ ಕೃಪೆ : ಶ್ರೀ ಎನ್ ಎಸ್ ಶ್ರೀಧರ ಮೂರ್ತಿ
ಬೆಂಗಳೂರಿಗೆ ನಾನು ಬಂದ ಮೇಲೆ ಕೆಲಸ ಮಾಡುತ್ತಿದ್ದ ಆಫೀಸ್ ರಾಜ್ ಕುಮಾರ್ ಅವರ ಮನೆಯಿಂದ ಮಾರುದೂರದಲ್ಲಿ ಇತ್ತು. ಪ್ರತಿದಿನ ಮಧ್ಯಾಹ್ನ ಊಟವಾದ ಮೇಲೆ ಒಂದು ಸಲ ರಾಜ್ ಕುಮಾರ್ ಅವರ ಮನೆಯವರೆಗೂ ಹೋಗಿ ದೇಗುಲದ ದರ್ಶನ ಪಡೆದಂತೆ ಧನ್ಯರಾಗಿ ಬರುವುದಕ್ಕಿಂತ ಹೆಚ್ಚಿನದೇನನ್ನು ನನಗೆ ಮಾಡಲು ಸಾಧ್ಯವಾಗಲಿಲ್ಲ. ಪ್ರವೇಶದ ಹಲವು ಪ್ರಯತ್ನಗಳನ್ನು ನಡೆಸಿದ್ದರೂ ಯಾವುದೂ ಫಲ ನೀಡಲಿಲ್ಲ. ಈ ನಡುವೆ ಚಿತ್ರಗೀತೆಯ ಹುಚ್ಚು ಹತ್ತಿಸಿಕೊಂಡು ಗೀತ ರಚನೆಕಾರರು ಸಂಗೀತ ನಿರ್ದೇಶಕರನ್ನು ಭೇಟಿ ಮಾಡುವ ಪ್ರಯತ್ನ ಮಾತ್ರ ಸಫಲವಾಯಿತು. ರಾಜ್ ಕುಮಾರ್ ಅವರ ಜೀವನಾಡಿ ಎಂದೇ ಖ್ಯಾತರಾಗಿದ್ದ ಚಿ.ಉದಯಶಂಕರ್ ಹಲವು ಕುತೂಹಲದ ಸಂಗತಿಗಳನ್ನು ಹೇಳಿದರು. ಆದರೆ ‘ಒಡ ಹುಟ್ಟಿದವರು’ ಸಿನಿಮಾ ನಿರ್ಮಾಣ ಹಂತದಲ್ಲಿ ಇದ್ದಾಗಲೇ ಉದಯಶಂಕರ್ ಹಠಾತ್ ಆಗಿ ನಮ್ಮನ್ನು ಅಗಲಿದರು. ರಾಜ್ ಕುಮಾರ್ ಅವರ ಭೇಟಿ ಉದಯಶಂಕರ್ ಮೂಲಕ ಸಾಧ್ಯವಾಗಲೇ ಇಲ್ಲ.
ಚಿತ್ರ ಕೃಪೆ : ಶ್ರೀ ಎನ್ ಎಸ್ ಶ್ರೀಧರ ಮೂರ್ತಿ
ಆರ್.ಎನ್.ಜಯಗೋಪಾಲ್ ಕೂಡ ರಾಜ್ ಕುಮಾರ್ ಅವರಿಗೆ ನಿಕಟವಾದವರೇ. ಸುಬ್ಬಯ್ಯ ನಾಯ್ಡು ಅವರ ಕಂಪನಿಯಲ್ಲಿ ರಾಜ್ ಕುಮಾರ್ ಅವರು ಅಭಿನಯಿಸುತ್ತಿದ್ದ ಕಾಲದಿಂದಲೂ ಜಯಗೋಪಾಲ್ ಬಲ್ಲರು. ‘ಭಕ್ತ ಅಂಬರೀಶ’ ನಾಟದಲ್ಲಿ ರಮಕಾಂತನ ಪಾತ್ರದಲ್ಲಿ ರಾಜ್ ಕುಮಾರ್ ನೀಡಿದ್ದ ಅಭಿನಯವನ್ನು ಅವರು ಬಹಳವಾಗಿ ಇಷ್ಟಪಟ್ಟಿದ್ದರು. ರಂಜನಿ ರಾಗದಲ್ಲಿ ಅವರು ಹಾಡುತ್ತಿದ್ದ ‘ಮೋಹ ವಿಲಾಸ ಜಗದೆ’ ಹಾಡನ್ನು ಜಯಗೋಪಾಲ್ ಸದಾ ಗುಣಗುತ್ತಿದ್ದರು. ಜಯಗೋಪಾಲ್ ಅವರ ತಂದೆ ಆರ್.ನಾಗೇಂದ್ರ ರಾಯರು ರಮಾಕಾಂತನ ಪಾತ್ರವನ್ನು ತಮಿಳು ಚಿತ್ರ ‘ಭಕ್ತಿ’ಯಲ್ಲಿ ಮಾಡಿದ್ದರು. ಈ ಕುರಿತ ಹೋಲಿಕೆಯನ್ನು ಜಯಗೋಪಾಲ ಆಗೀಗ ಮಾಡುತ್ತಿದ್ದರು. ರಾಜ್ ಕುಮಾರ್ ಅವರು ಅಭಿನಯಿಸಿದ ಅನೇಕ ಚಿತ್ರಗಳಿಗೆ ಜಯಗೋಪಾಲ್ ಸಾಹಿತ್ಯ ರಚನೆ ಮಾಡುತ್ತಿದ್ದರು. ‘ನಾಂದಿ’ ಚಿತ್ರದ ಸಂದರ್ಭದಲ್ಲಿ ನಿರ್ದೇಶಕ ಎನ್.ಲಕ್ಷ್ಮಿನಾರಾಯಣ್ ‘ಹಾಡುಗಳು ಬೇಡ’ ಎಂದು ಪಟ್ಟು ಹಿಡಿದಿದ್ದರೆ ಬೇಕು ಎಂದು ನಿರ್ಮಾಪಕ ವಾದಿರಾಜ್ ಅವರ ಜೊತೆ ಜಯಗೋಪಾಲ್ ಅವರು ಕೂಡ ಪಟ್ಟು ಹಿಡಿದಿದ್ದರು. ರಾಜ್ ಕುಮಾರ್ ಕೂಡ ಅವರಿಗೆ ಬೆಂಬಲವಾಗಿ ನಿಂತರು. ಇದರ ಫಲವಾಗಿಯೇ ಅಮರ ಗೀತೆಗಳು ಸೃಷ್ಟಿಯಾಗಿದ್ದವು. ಆರ್.ಎನ್.ಜಯಗೋಪಾಲ್ ಅವರ ನಿರ್ದೇಶನದ ಮೊದಲ ಚಿತ್ರ ‘ಧೂಮಕೇತು’ವಿನ ನಾಯಕರು ಡಾ.ರಾಜ್ ಕುಮಾರ್ ಅವರೇ. ಅದು ಜಯಗೋಪಾಲ್ ಅವರ ನಿರ್ದೇಶನದ ಮೊದಲ ಚಿತ್ರವಾದರೆ ರಾಜ್ ಕುಮಾರ್ ಅಭಿನಯದ ನೂರಾ ಒಂದನೇ ಚಿತ್ರ. ನೂರು ಚಿತ್ರ ಮುಗಿಸಿರುವ ಕಲಾವಿದ ಎಂದು ಹೇಳಿ ಜಯಗೋಪಾಲ್ ಅವರೇ ಹತ್ತು ಸಾವಿರ ರೂಪಾಯಿಗಳ ಸಂಭಾವನೆಯನ್ನು ರಾಜ್ ಕುಮಾರ್ ಅವರಿಗೆ ಕೊಡಿಸಿದರು. ಅದು ಅವರು ಪಡೆದ ಮೊದಲ ಐದು ಸಂಖ್ಯೆಯ ಸಂಭಾವನೆಯಾಗಿತ್ತು. ಆ ವೇಳೆಗಾಗಲೇ ರಾಜ್ ಕುಮಾರ್ ಅವರು ಮೇರುನಟರಾಗಿ ಬೆಳೆದಿದ್ದರೂ ‘ಇದ್ಯಾಕೆ-ಅದ್ಯಾಕೆ’ ಎಂಬ ಪ್ರಶ್ನೆಯನ್ನು ಕೇಳದಂತೆ ಅಭಿನಯಿಸಿದರು. ‘ತುಂಬಿದ ಕೊಡ ತುಳುಕುವುದಿಲ್ಲ’ಎನ್ನುವುದಕ್ಕೆ ಅವರು ಜ್ವಲಂತ ನಿದರ್ಶನ ಎನ್ನುತ್ತಿದ್ದರು ಜಯಗೋಪಾಲ್.
ಆದರೆ ‘ದಾರಿ ತಪ್ಪಿದ ಮಗ’ ಚಿತ್ರದ ನಂತರ ನಡೆದ ಕಹಿ ಘಟನೆಯೊಂದರಿಂದ ರಾಜ್ ಕುಮಾರ್ ಮತ್ತು ಜಯಗೋಪಾಲ್ ಅವರ ಸಂಬಂಧದ ದಾರಿ ತಪ್ಪಿ ಹೋಗಿತ್ತು. ಇದರಿಂದ ರಾಜ್ ಕುಮಾರ್ ಅವರ ಚಿತ್ರಗಳಿಗೆ ಮುಂದೆ ಜಯಗೋಪಾಲ್ ಸಾಹಿತ್ಯ ರಚನೆಯನ್ನು ಮಾಡಿರಲಿಲ್ಲ. ಆರ್.ಎನ್.ಜಯಗೋಪಾಲ್ ಅವರ ಎಪ್ಪತ್ತನೇ ವರ್ಷದ ಕಾರ್ಯಕ್ರಮವನ್ನು ನಾವು ಅಯೋಜಿಸಿದಾಗ ಅದಕ್ಕೆ ರಾಜ್ ಕುಮಾರ್ ಅವರನ್ನೂ ಕರೆಯುವುದು ಸೂಕ್ತ ಎನ್ನುವ ಸಲಹೆ ಬಂದಿತು. ಹಳೆಯ ಕಹಿ ಕರಗಿತ್ತು. ಜಯಗೋಪಾಲ್ ಅವರೇ ಭೇಟಿ ಮಾಡುವ ಉತ್ಸಾಹವನ್ನು ತೋರಿದರು.
ಹಳೆಯ ಗೆಳೆಯರಿಬ್ಬರ ಸಿನಿಮಾ ಯಾತ್ರೆಗೆ ಸಾಕ್ಷಿಯಾಗುವ ಅಪೂರ್ವ ಅವಕಾಶ ನನಗೆ ಲಭಿಸಿತು. ಈ ಭೇಟಿಯಲ್ಲಿಯೇ ಜಯಗೋಪಾಲ್ ರಾಜ್ ಕುಮಾರ್ ಅವರ ಜೊತೆ ಸಂಗೀತದ ವಿಷಯವನ್ನು ಚರ್ಚಿಸಿದರು. ಕಲಾವಿದ ಮತ್ತು ಚಿತ್ರ ಸಾಹಿತಿಯಾಗಿದ್ದ ಅವರಿಬ್ಬರೂ ಸಂಗೀತದಲ್ಲಿ ಎಷ್ಟೊಂದು ಆಳವಾದ ಜ್ಞಾನವನ್ನು ಹೊಂದಿದ್ದಾರೆ ಎನ್ನುವುದನ್ನು ಕುತೂಹಲದಿಂದ ನೋಡುತ್ತಿದ್ದೆ. ‘ಒಂದು ಹಾಡು ಹೇಳಿ’ ಎಂದು ಜಯಗೋಪಾಲ್ ಕೇಳಿದರು. ಯಾವುದು ಎಂದು ಅಳೆದು ಸುರಿದು ಕೊನೆಗೆ ‘ಶಿವಪ್ಪ ಕಾಯೋ ತಂದೆ’ ಹಾಡುವುದು ಎಂದು ನಿರ್ಧಾರವಾಯಿತು. ರಾಜ್ ಕುಮಾರ್ ‘ಶರಣು ಶಂಭೋ’ ಎಂದು ಹಾಡಲು ಆರಂಭಿಸಿದರು ಇನ್ನೇನು ಪಲ್ಲವಿಗೆ ಬರಬೇಕು ಆಗ ಜಯಗೋಪಾಲ್ ಅವರ ಕಡೆ ತಿರುಗಿ ಮುಗ್ಧತೆಯಿಂದ ‘ಜಯಗೋಪಾಲ್ ನಾನು ಇನ್ನು ಅದೇ ರೇಂಜ್‍ನಲ್ಲಿ ಹಾಡ್ತಾ ಇದ್ದೇನಲ್ವಾ?’ ಎಂದರು.
ಆ ಮೇರುನಟನ ಜಾಗದಲ್ಲಿ ಮಗುವೊಂದು ನನಗೆ ಆ ಕ್ಷಣ ಕಾಣಿಸಿತು.
ಚಿತ್ರ ಕೃಪೆ : ಶ್ರೀ ಎನ್ ಎಸ್ ಶ್ರೀಧರ ಮೂರ್ತಿ
ಪುಟ್ಟಣ್ಣ ಕಣಗಾಲ್ ಅವರ ಕುರಿತು ‘ಮಲ್ಲಿಗೆ ಮಾಸಪತ್ರಿಕೆ’ಯ ವಿಶೇಷಾಂಕವನ್ನು ರೂಪಿಸುವಾಗ ಮನಸ್ಸಿನಲ್ಲಿ ಇದ್ದಿದ್ದು ಸರಳ ಕಲ್ಪನೆಗಳೇ ಆದರೆ ಪುಟ್ಟಣ್ಣನವರ ಮೂಲಕ ಬೆಳ್ಳಿತೆರೆಯಲ್ಲಿ ಮಿನುಗಿದ ಅವರ ಕುರಿತು ಅಪಾರ ಗೌರವ ಇಟ್ಟುಕೊಂಡಿದ್ದ ಎಂ.ಎಸ್.ಉಮೇಶ್ ಇದು ತಮ್ಮದೇ ಕೆಲಸ ಅನ್ನುವಂತೆ ಓಡಾಡಿದ್ದರಿಂದ ಅನೇಕ ದಿಗ್ಗಜರ ಲೇಖನಗಳು ದೊರಕಿದವು. ರಾಜ್ ಕುಮಾರ್ ಅವರ ಲೇಖನವೂ ಇದ್ದರೆ ಚೆನ್ನಾಗಿರುತ್ತದೆ ಎಂದು ಎಂ.ಎಸ್.ಉಮೇಶ್ ಅವರೇ ಸೂಚಿಸಿದರು. ಆದರೆ ರಾಜ್ ಕುಮಾರ್ ಮತ್ತು ಪುಟ್ಟಣ್ಣನವರ ಸಂಬಂಧದ ಕುರಿತು ಹಲವು ಕಥೆಗಳನ್ನು ಓದಿದ್ದ ನಾನೇ ಹಿಂಜರಿದೆ. ಆದರೆ ಉಮೇಶ್ ಬಿಡಲಿಲ್ಲ. ಈ ಕಾರಣಕ್ಕಾಗಿಯೇ ರಾಜ್ ಕುಮಾರ್ ಅವರ ಭೇಟಿ ನಡೆಯಿತು. ಪುಟ್ಟಣ್ಣನವರ ಕುರಿತು ರಾಜ್ ಕುಮಾರ್ ಅನೇಕ ಸಂಗತಿಗಳನ್ನು ನೆನಪಿಸಿಕೊಂಡರು. ಎಲ್ಲಾ ಕ್ಷೇತ್ರಗಳ ಕುರಿತೂ ಪುಟ್ಟಣ್ಣನವರಿಗೆ ಪರಿಣತಿ ಇತ್ತು. ಅವರು ನಿಜವಾದ ಅರ್ಥದಲ್ಲಿ ದಿಗ್ದರ್ಶಕರಾಗಿದ್ದರು ಎಂದು ಗುರುತಿಸಿದ್ದರು. ‘ಸಾಕ್ಷಾತ್ಕಾರ’ಚಿತ್ರದ ವಿಷಯದಲ್ಲಿ ರಾಜ್ ಕುಮಾರ್ ಅವರಿಗೆ ಬಹಳ ಆತ್ಮೀಯವಾದ ನೆನಪುಗಳಿದ್ದವು. ‘ಪೃಥ್ವಿರಾಜ್ ಕಪೂರ್, ಆರ್.ನಾಗೇಂದ್ರ ರಾವ್, ಜಮುನಾ ಮೊದಲಾದ ಮಹಾನ್ ಕಲಾವಿದರ ಜೊತೆಗೆ ಅಭಿನಯಿಸುವ ಅವಕಾಶ ಸಿಕ್ಕಿತು’ ಎಂದು ಸಂತೋಷ ವ್ಯಕ್ತಪಡಿಸಿದರು. ತಾವೂ ಅದೇ ಸಾಲಿನ ಮೇರು ಕಲಾವಿದರು ಎನ್ನುವ ಸತ್ಯವನ್ನು ರಾಜ್ ಕುಮಾರ್ ಅಪ್ಪಿ ತಪ್ಪಿ ಕೂಡ ವ್ಯಕ್ತ ಪಡಿಸಲಿಲ್ಲ. ಅದು ಅವರ ವಿನಯವಂತಿಕೆಗೆ ಸಾಕ್ಷಿಯಾಗಿತ್ತು. ಇದನ್ನು ಸಂಗ್ರಹಿಸಿ ನಾನು ‘ಮಲ್ಲಿಗೆ ಮಾಸಪತ್ರಿಕೆ’ಯಲ್ಲಿ ಲೇಖನ ರೂಪದಲ್ಲಿ ಪ್ರಕಟಿಸಿದೆ. ಅದು ಅನೇಕ ಓದುಗರ ಮೆಚ್ಚಿಗೆಗೆ ಪಾತ್ರವಾಯಿತು.
ರಾಜ್ ಕುಮಾರ್ ಅವರನ್ನು ನಾನು ಒಟ್ಟಾಗಿ ಆರು ಸಲ ಭೇಟಿ ಮಾಡಿದ್ದೇನೆ. ನನಗೆ ಅವರ ಚಿತ್ರಗಳ ಕುರಿತೇ ಅವರು ಏನು ಹೇಳುತ್ತಾರೆ ಎನ್ನುವ ಕುತೂಹಲ ಇತ್ತು. ಜಗತ್ತಿನಲ್ಲೇ ಭಕ್ತಿಯಿಂದ ಬಾಂಡ್‍ವರೆಗೆ ಎಲ್ಲಾ ಪಾತ್ರಗಳನ್ನೂ ಸಮರ್ಥವಾಗಿ ಅಭಿನಯಿಸಿದ ಇನ್ನೊಬ್ಬ ಕಲಾವಿದ ಇಲ್ಲ. ಅವರು ಯಾವ ಪಾತ್ರವನ್ನೇ ನೀಡಲಿ ಅದರ ಅಂತ:ಸತ್ವವನ್ನು ಹಿಡಿದು ಅಭಿನಯಿಸುತ್ತಿದ್ದರು. ಅವರೊಡನೆ ಕೆಲವು ಚಿತ್ರಗಳ ಕುರಿತು ಮಾತನಾಡುವ ಅವಕಾಶ ಸಿಕ್ಕಿತು. ಆದರೆ ಅದು ಒಂದು ಯೋಜನೆಯ ರೂಪದಲ್ಲಿ ಬೆಳೆಯಲಿಲ್ಲ. ಪೂರ್ಣವೂ ಆಗಲಿಲ್ಲ. ಆದರೆ ಬೊಗಸೆಗೆ ಸಿಕ್ಕ ಹನಿಗಳೇ ಇಂದು ಕುಳಿತು ಯೋಚಿಸಿದರೆ ಮಧುರಾತಿ ಮಧುರ ಎನ್ನಿಸುತ್ತೆ.
ಒಮ್ಮೆ ಕೇಳಿದ್ದೆ ‘ಸರ್ ನೀವು ಅಭಿನಯಿಸಿದ ಕಷ್ಟದ ಪಾತ್ರ ಯಾವುದು?’ ಎಂದು. ರಾಜ್ ಕುಮಾರ್ ಅವರಂತಹ ಮೇರುನಟರಿಗೆ ಕಷ್ಟದ ಪಾತ್ರವೇ? ಎನ್ನುವ ಸರಳ ಸತ್ಯ ನನಗೆ ಆಗ ಹೊಳದೇ ಇರಲಿಲ್ಲ. ಆದರೆ ರಾಜ್ ಕುಮಾರ್ ತಟಕ್ಕನೆ ಉತ್ತರಿಸಿದ್ದರು ‘ಸರ್ವಜ್ಞಮೂರ್ತಿ’ ಇದಕ್ಕೆ ಅವರ ಕೊಟ್ಟ ಕಾರಣ ಹೀಗಿತ್ತು. ರಂಗಭೂಮಿಯಿಂದ ಬಂದ ರಾಜ್ ಕುಮಾರ್ ಅವರಿಗೆ ಅಭಿನಯದಲ್ಲಿ ಕಣ್ಣಿನ ಚಲನೆ ಬಹಳ ಮುಖ್ಯವಾದದ್ದು. ಅವರ ಭಾವಗಳನ್ನು ಅಭಿವ್ಯಕ್ತಿಸುತ್ತಿದ್ದೇ ಕಣ್ಣಿನ ಮೂಲಕ. ‘ಸರ್ವಜ್ಞಮೂರ್ತಿ’ ಚಿತ್ರದಲ್ಲಿ ಆರೂರು ಪಟ್ಟಾಭಿಯವರು ಸರ್ವಜ್ಞ ಅವಧೂತ ಅವರ ಪಾತ್ರದ ಅಭಿನಯದಲ್ಲಿ ಕಣ್ಣು ನಿಶ್ಚಲವಾಗಿರಬೇಕು ಎಂದಾಗ ‘ನಾನು ಈ ಪಾತ್ರವನ್ನು ಅಭಿನಯಿಸಲಾರೆ’ ಎಂದು ರಾಜ್ ಕುಮಾರ್ ಅವರಿಗೆ ಅನ್ನಿಸಿತ್ತಂತೆ. ಆದರೆ ಅಂತಹ ಮಹಾನುಭಾವನ ಪಾತ್ರವನ್ನು ನಾನು ಮಾಡದೆ ಹೋದರೆ ಜೀವನದಲ್ಲಿ ಏನೋ ಕಳೆದುಕೊಳ್ಳುತ್ತೇನೆ ಎಂದು ಕೂಡ ಅನ್ನಿಸಿತಂತೆ. ಈ ಪಾತ್ರವನ್ನು ಅಭಿನಯಿಸಿದ ನಂತರ ನಾನು ಸಾಕಷ್ಟು ಬೆಳೆದೆ ಎಂದು ಹೇಳಿಕೊಂಡಿದ್ದರು ರಾಜ್ ಕುಮಾರ್. ‘ಬದುಕನ್ನು ನಾವು ನಮ್ಮ ಕಣ್ಣಿಗೆ ಕಾಣುವ ಮಟ್ಟದಲ್ಲಿ ಮಾತ್ರ ಪರಿಭಾವಿಸಿಕೊಳ್ತಾ ಇರ್ತೇವೆ. ಆದರೆ ನಿಜವಾದ ಬದುಕು ಇರುವುದು ಅದರಾಚೆಯ ನೆಲೆಯಲ್ಲಿ. ನಾವು ಏನೋ ಸಾಧಿಸಿದ್ದೇವೆ ಎಂದುಕೊಳ್ತೀವಲ್ಲ ಅದೆಲ್ಲಾ ಭ್ರಮೆ ಎಂದು ಸರ್ವಜ್ಞ, ಭಕ್ತ ಕುಂಬಾರ, ಕನಕ ದಾಸ, ಪುರಂದರ ದಾಸ ಮೊದಲಾದವರ ಪಾತ್ರಗಳನ್ನು ನಿರ್ವಹಿಸುವಾಗ ಅರಿವಿಗೆ ಬಂದಿತು. ಅದೊಂದು ಅಲೌಕಿಕ ಅನುಭೂತಿ’ ಎನ್ನುವುದು ಅವರದೇ ಮಾತು.
ರಾಜ್ ಕುಮಾರ್ ಅವರು ಮತ್ತೆ ಮತ್ತೆ ನೆನಪು ಮಾಡಿಕೊಳ್ತಾ ಇದ್ದ ಚಿತ್ರ ಎಂದರೆ ‘ಮಂತ್ರಾಲಯ ಮಹಾತ್ಮೆ’. ಟಿ.ವಿ.ಸಿಂಗ್ ಠಾಕೂರ್ ರಾಜ್ ಕುಮಾರ್ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿದಾಗ ಕೆಲವು ಅಪಸ್ವರಗಳು ಕೇಳಿ ಬಂದವು. ರಾಯರ ಸನ್ನಿಧಿಯಲ್ಲಿಯೇ ಮೂರು ಸಲ ಚೀಟಿ ಎತ್ತಿದಾಗಲೂ ರಾಜ್ ಕುಮಾರ್ ಅವರ ಹೆಸರೇ ಬಂತಂತೆ. ಅಲ್ಲಿಗೆ ರಾಯರ ಮನದಲ್ಲೂ ಅದೇ ಹೆಸರಿದೆ ಎಂದು ಮನವರಿಕೆಯಾಗಿ ಸಿಂಗ್ ಠಾಕೂರ್ ತಮ್ಮ ನಿರ್ಧಾರದಲ್ಲಿ ಅಚಲರಾದರು. ‘ನಾನು ಆ ಪಾತ್ರ ಮಾಡಿದೆ ಎನ್ನುವುದೇ ಸುಳ್ಳು’ ಎಂದಿದ್ದರು ರಾಜ್ ಕುಮಾರ್ ಮಂತ್ರಾಲಯ ಕ್ಷೇತ್ರದಲ್ಲಿ ನಿಂತು ಒಳ್ಳೆ ಹೆಸರು ಬಂದರೂ ನಿಮಗೆ ಕೆಟ್ಟ ಹೆಸರು ಬಂದರೂ ನಿಮಗೆ ನನ್ನನ್ನು ಹರಿಸಿ ಎಂದು ಕೇಳಿಕೊಂಡಿದ್ದೆ. ಮಂತ್ರಾಲಯ ಪ್ರಭುಗಳೇ ನನ್ನಲ್ಲಿ ಪ್ರವೇಶ ಮಾಡಿ ಆ ಪಾತ್ರವನ್ನು ಮಾಡಿಸಿದರು. ಈ ಚಿತ್ರಕ್ಕೆ ಡಬ್ಬಿಂಗ್ ಕೂಡ ಚಿತ್ರವನ್ನು ನೋಡದೆ ಕೇವಲ ಸೌಂಡ್ ಕೇಳಿಕೊಂಡು ಅವರು ಮಾಡಿದ್ದರಂತೆ. ರಾಜ್ ಕುಮಾರ್ ಹೇಳಿದ್ದರು. ‘ಟಿವಿಯಲ್ಲಿ ಆಗಾಗ ಆ ಸಿನಿಮಾ ಬರ್ತಾ ಇರುತ್ತೆ, ಆದರೆ ನಾನು ಎಂದಿಗೂ ಅದನ್ನು ನೋಡಲ್ಲ. ಏಕೆಂದರೆ ಆ ಪಾತ್ರ ಮಾಡಿದೆ ಎನ್ನೋ ಭಾವನೆ ಮನದಲ್ಲಿ ಬರಬಾರದು ನೋಡಿ’.
ಚಿತ್ರ ಕೃಪೆ : ಶ್ರೀ ಎನ್ ಎಸ್ ಶ್ರೀಧರ ಮೂರ್ತಿ
ಅವರಿಗೆ ಬಹಳ ವರ್ಷದಿಂದ ಮಾಡ್ಲೇಬೇಕು ಎನ್ನಿಸಿದ ಚಿತ್ರ ‘ಭಕ್ತ ಕುಂಬಾರ’ ಇದರ ಕುರಿತು ಅವರು ಒಂದು ಕಥೆ ಹೇಳಿದ್ದರು. ‘ಗಂಧದ ಗುಡಿ’ ಚಿತ್ರೀಕರಣ ಮುಗಿಸಿಕೊಂಡು ಬರುವಾಗ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ‘ಭಕ್ತ ಕುಂಬಾರ’ನ ಕಥೆಯನ್ನು ಹೇಳಿದರು. ಅವರೂ ಬಹಳ ಇಷ್ಟ ಪಟ್ಟ ನಂತರ ವಿಶ್ವಾಸ ಮೂಡಿತು. ಆದರೆ ಯಾರನ್ನೇ ಕೇಳಲಿ ‘ ಆ ಸಿನಿಮಾ ಬೇಡ ಅಂತ್ಲೇ ಹೇಳ್ತಾ ಇದ್ದರು. ಕೊನೆಗೆ ಕೃಷ್ಣವೇಣಿ ಎನ್ನೋ ಕಲಾವಿದೆ ಈ ಚಿತ್ರವನ್ನು ನಿರ್ಮಿಸಲು ಸಿದ್ದರಾದರು. ಅವರೂ ಮೊದಲು ಸಾಮಾಜಿಕ ಚಿತ್ರವನ್ನು ಆರಂಭಿಸಿದ್ದರು. ಐದು ದಿನದ ಶೂಟಿಂಗ್ ಕೂಡ ಆಗಿತ್ತು. ಕೊನೆಗೆ ‘ಅಣ್ಣಾ ನಿಮಗೆ ಯಾವುದು ಇಷ್ಟಾನೋ ಅದೇ ಚಿತ್ರ ಮಾಡೋಣ’ ಅಂದರು. ಭಕ್ತಿ ಚಿತ್ರಗಳಿಗೆ ಹುಣಸೂರು ಪ್ರಸಿದ್ಧರು ಅವರ ಬಳಿಯೇ ನಿರ್ದೇಶನ ಮಾಡಿಸೋಣ ಎಂದು ರಾಜ್ ಕುಮಾರ್ ನಿರ್ಧರಿಸಿದರು. ಅವರು ‘ಸಬ್ಜಕ್ಟ್ ಬಹಳ ಚೆನ್ನಾಗಿದೆ ಆದರೆ ಈಗಲೇ ಬೇಡ ನಿಮಗೆ ಇನ್ನೂ ಸ್ವಲ್ಪ ವಯಸ್ಸಾಗಲಿ’ ಎಂದರು. ಆದರೆ ರಾಜ್ ಕುಮಾರ್ ಒಪ್ಪಲಿಲ್ಲ ‘ವಯಸ್ಸಾದಾಗ ಮನಸ್ಸಿರಬೇಕಲ್ಲ ಈಗ್ಲೇ ಆಗ್ಲಿ’ ಎಂದು ಪಟ್ಟು ಹಿಡಿದರು. ಹೀಗೆ ಭಕ್ತ ಕುಂಬಾರ ಚಿತ್ರ ರೂಪುಗೊಂಡಿತು. ಭಾರತೀಯ ಚಿತ್ರರಂಗದಲ್ಲಿ ಬೇರೆ ಬೇರೆ ಭಾಷೆಯಲ್ಲಿ ಕುಂಬಾರನ ಕಥೆ ಬಂದಿದ್ದರೂ ಹಾಡುಗಳು ಗಮನ ಸೆಳೆದಿರಲಿಲ್ಲ. ರಾಜ್ ಕುಮಾರ್ ಅವರಿಗೆ ಹಾಡುಗಳು ಮುಖ್ಯವಾಗಿರಬೇಕು ಅನ್ನೋದಿತ್ತು. ಜಿ.ಕೆ.ವೆಂಕಟೇಶ್ ಅದನ್ನು ಅದ್ಭುತವಾಗಿ ಮಾಡಿದರು ‘ಒಂದು ರೀತಿಯಲ್ಲಿ ಅವರು ಹಾಡಿನಿಂದಲೇ ಸಿನಿಮಾ ಕಟ್ಟಿದ್ದಾರೆ’ ಎಂದರು ರಾಜ್ ಕುಮಾರ್. ‘ಭಕ್ತ ಕುಂಬಾರ’ದ ಹಾಡುಗಳೆಲ್ಲಾ ಡಾ.ಪಿ.ಬಿ.ಶ್ರೀನಿವಾಸ್ ಅವರ ಸಿರಿಕಂಠದಲ್ಲಿ ಅಮೋಘವಾಗಿ ಮೂಡಿ ಬಂದಿವೆ. ಆಗಿನ್ನು ರಾಜ್ ಕುಮಾರ್ ಹಾಡ್ತಾ ಇರಲಿಲ್ಲ. ‘ಒಂದೊಮ್ಮೆ ಹಾಡಿದ್ದರೆ’ ಎಂಬ ನನ್ನ ಪ್ರಶ್ನೆಗೆ ರಾಜ್ ಕುಮಾರ್ ಅವರು ನೀಡಿದ್ದು ತೀರಾ ಅನಿರೀಕ್ಷಿತವಾದ ಉತ್ತರ. ‘ಇಲ್ಲ ಅವರ ಹಾಡಿದ ಮಟ್ಟಕ್ಕೆ ನಾನು ಖಂಡಿತ ಹಾಡ್ತಾ ಇರಲ್ಲಿಲ್ಲ. ಪ್ರತಿಯೊಂದು ಹಾಡನ್ನೂ ಅವರು ಅನುಭವಿಸಿ ಹಾಡಿದ್ದಾರೆ.’
ಚಿತ್ರ ಕೃಪೆ : ಶ್ರೀ ಎನ್ ಎಸ್ ಶ್ರೀಧರ ಮೂರ್ತಿ
ರಾಜ್ ಕುಮಾರ್ ಅವರಿಗೆ ತಾವು ಅಭಿನಯಿಸಿದ ಚಿತ್ರಗಳಲ್ಲಿ ಹೆಚ್ಚು ಇಷ್ಟವಾದ ಚಿತ್ರ ‘ಶಂಕರ್ ಗುರು’ ಅದನ್ನು ಮೊದಲು ನಿರ್ಮಿಸಲು ಬಯಸಿದ್ದವರು ‘ಸಂತ ತುಕಾರಾಂ’ ಚಿತ್ರದ ನಿರ್ಮಾಪಕರಾಗಿದ್ದ ರಾಧಾಕೃಷ್ಣನ್ ಅವರು. ಚಿತ್ರಕಥೆ ಎಲ್ಲವೂ ಸಿದ್ದವಾಗಿ ಇನ್ನೇನು ಚಿತ್ರೀಕರಣ ಆರಂಭವಾಗಬೇಕು ಎನ್ನುವ ಹಂತದಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ಇದನ್ನು ಒಂದಿಬ್ಬರು ಮುಂದುವರೆಸಲು ಪ್ರಯತ್ನಿಸಿದರೂ ಕೂಡ ಅದು ಮುಂದುವರೆಯಲಿಲ್ಲ. ಇಷ್ಟು ಹೊತ್ತಿಗಾಗಲೇ ಕಥೆ ಸಾಕಷ್ಟು ಪರಿಷ್ಕರಣಗೊಂಡಿತ್ತು. ರಾಜ್ ಕುಮಾರ್ ಅವರನ್ನು ಸೆಳೆದಿದ್ದು ತಂದೆಯ ಪಾತ್ರ. ಇಂತಹದೊಂದು ಕಥೆಯನ್ನು ಅವರ ಹತ್ತಿರದ ಸ್ನೇಹಿತ ರಾಮಸ್ವಾಮಿಯವರು ಹೇಳಿದ್ದರು. ರೈಲಿನಲ್ಲಿ ಹೆಂಡತಿಯನ್ನು ಮಿಸ್ ಮಾಡಿಕೊಂಡು ಕಾಶ್ಮೀರಕ್ಕೆ ಹೋಗಿ ನೆಲೆಸುವುದು ಅವರು ಕೇಳಿದ ವಾಸ್ತವದ ಕಥೆಯಲ್ಲಿ ಕೂಡ ಇತ್ತು. ‘ಚೆಲುವೆಯ ನೋಟ’ ಹಾಡು ಈ ಕಾರಣಕ್ಕಾಗಿ ಅವಳಿಗೆ ಬಹಳ ಪ್ರಿಯವಾದದ್ದು. ಅದನ್ನು ಈ ಕಾರಣದಿಂದಲೇ ಚಿತ್ರದಲ್ಲಿ ರಿಪೀಟ್ ಆಗುವಂತೆ ಮಾಡಿದ್ದರು. ಕಾಶ್ಮೀರದಲ್ಲಿ ಶೂಟಿಂಗ್ ಮಾಡಿದ ಅನುಭವ ಅವರನ್ನು ಸದಾ ಕಾಡುತ್ತಿತ್ತು. ಇಲ್ಲಿಂದಲೇ ಅಡುಗೆ ಭಟ್ಟರು, ಅಡುಗೆ ಸಾಮಗ್ರಿ, ರುಬ್ಬೋ ಕಲ್ಲೂ ಸಮೇತ ತೆಗೆದು ಕೊಂಡು ಹೋಗಿದ್ದರು. ಅಲ್ಲಿ ನಾಲ್ಕಾರು ಜನ ಡ್ರೈವರ್‍ಗಳು ತಂಡದ ಜೊತೆಗೆ ಸೇರಿಕೊಂಡರು. ಚಿತ್ರೀಕರಣದಲ್ಲಿ ಕೂಡ ಸೇರಿಕೊಂಡು ಬಿಟ್ಟರು. ಕಾಶ್ಮೀರದ ಜನ ಬಂದು ‘ಯೆ ಕೌನ್ಸಾ ಪಿಕ್ಚರ್’ ಅಂದರೆ ‘ಯೇ ಶಂಕರ್ ಗುರು ಹೇ’ ಎಂದು ಬಿಡೋರು. ‘ಮುಗಿಯದ ಮಾತು’ ಎಂದಿದ್ದ ಚಿತ್ರದ ಹೆಸರನ್ನು ಇದನ್ನು ಕೇಳಿ ಕೇಳಿ ‘ಶಂಕರ್ ಗುರು’ ಎಂದು ಬದಲಾಯಿಸಿದರು. ಹೀಗೆ ಕನ್ನಡ ಚಿತ್ರವೊಂದಕ್ಕೆ ಕಾಶ್ಮೀರದ ಡ್ಯೂಪ್‍ಗಳು ಹೆಸರನ್ನು ಕೊಟ್ಟರು.
ಚಿತ್ರ ಕೃಪೆ : ಶ್ರೀ ಎನ್ ಎಸ್ ಶ್ರೀಧರ ಮೂರ್ತಿ
ಏಪ್ರಿಲ್ ೧೨, ೨೦೦೬ ಸತತ ಹತ್ತು ದಿನಗಳ ಪ್ರಯಾಣದಿಂದ ಸುಸ್ತಾಗಿದ್ದೆ ಮಗನ ರಜೆ ಅವಲಂಭಿಸಿ ಪ್ರವಾಸವನ್ನು ರೂಪಿಸಿಕೊಂಡಿದ್ದೆವು. ಬೆಳಿಗ್ಗೆ ಕೂಡ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದೆವು. ಮಧ್ಯಾಹ್ನದವರೆಗೂ ಸತತವಾಗಿ ರಿಂಗಣಿಸುತಿದ್ದ ಮೊಬೈಲ್ ಸ್ವಿಚ್ ಆಫ್ ಮಾಡಿ ನಿದ್ದೆಗೆ ಜಾರಿದೆ. ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ಹೆಂಡತಿ ಆತಂಕದಿಂದಲೇ ಎಬ್ಬಿಸಿದಳು ‘ರೀ ರಾಜ್ ಕುಮಾರ್ ಹೋಗಿ ಬಿಟ್ಟರಂತೆ’ ದಡಬಡಾಯಿಸಿ ಮೊಬೈಲ ಸ್ವಿಚ್ ಆನ್ ಮಾಡಿದರೆ ಅದೇ ಸಂದೇಶ ಸಾರುವ ಹತ್ತಾರು ಮೆಸೇಜ್‍ಗಳು ಇದ್ದವು. ಒಂದು ಕ್ಷಣ ಅಯೋಮಯವೆನ್ನಿಸಿತು. ಬೆಂಗಳೂರಿಗೆ ಮರಳಿದ ಕೂಡಲೇ ಇದ್ದಿದ್ದೇ ರಾಜ್ ಕುಮಾರ್ ಅವರ ಮನೆಗೆ ಹೋಗುವ ಕಾರ್ಯಕ್ರಮ. ಆಕಾಶ ವಾಣಿಯ ವಿವಿಧ ಭಾರತಿ ಕೇಂದ್ರದ ‘ಸುವರ್ಣ ಚಿತ್ರಭಾರತಿ’ ಮಾಲಿಕೆಗೆ ಅವರ ವಿಶೇಷ ಸಂದರ್ಶನ ಅಯೋಜನೆಗೊಂಡಿತ್ತು. ಏಪ್ರಿಲ್ ೧೬ಕ್ಕೆ ಡೇಟ್ ಕೂಡ ಸಿಕ್ಕಿತ್ತು. ಇನ್ನೂ ಮನಸ್ಸಿನಲ್ಲಿ ಕೇಳ ಬೇಕಾದ ಪ್ರಶ್ನೆಗಳ ತಯಾರಿ ನಡೆಯುತ್ತಿತ್ತು.
ಆದರೆ, ಉಳಿಸಿ ಕಣ್ಣ ನೀರ ನಮ್ಮ ಪಾಲಿಗೆ ರಾಜ್ ಕುಮಾರ್ ಹೊರಟೇ ಬಿಟ್ಟಿದ್ದರು.
ಚಿತ್ರ ಕೃಪೆ : ಶ್ರೀ ಎನ್ ಎಸ್ ಶ್ರೀಧರ ಮೂರ್ತಿ
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..