ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತಾಯಿಯ ಸ್ವಗತ

ಚಂದ್ರಶೇಖರ್ ಪೋತಲಕರ ಬರೆದ 'ತಾಯಿಯ ಸ್ವಗತ' ಕವಿತೆ. ವಿಶ್ವ ತಾಯಂದಿರ ದಿನದ ಶುಭಾಶಯಗಳನ್ನು ಕೋರುತ್ತಾ...
ಚಂಪೋ

ಉರಿವ ದೀಪದಡಿ ನಿನ್ನ ಹುಡುಕುತ್ತೇನೆ 
ನೋವ ಮೈ ಹಿಂಡಿ ತೆಗೆಯುವಾಸೆ 
ಯಾಕೊ ನೀ ಬಾರದೆ ಅಸಾಧ್ಯವೇನೊ  
ಬಂದುಬಿಡು ನನಗಾಗಿ ಮಡಿಯುತ್ತೇನೆ

ಅಂದು ಕಿಬ್ಬೊಟ್ಟೆಯಲಿ ನೀ ಸರಿದಾಗ
ನಿನ್ನ ಕದಲಿಸದಂತೆ ಹಾಕಿದ ಮೆಲು ಹೆಜ್ಜೆ
ನಿನ್ನ ಮೊದಲಳುವಿನಲ್ಲೇನೋ ಖುಷಿ
ನೋವಲ್ಲೂ ಧರೆಗರ್ಪಿಸಿದ ದೈನ್ಯತೆಯಲ್ಲಿದ್ದೆ

ನನ್ನ ತೋಳಲಿ ನೀ ಮುದ್ದು ಆಟಿಕೆಯಾಗಿದ್ದೆ
ನೀ ಅತ್ತರೆ ಒಂದೇ ಉಸಿರಿಗೆ ಹಾಜರಾಗುತ್ತಿದ್ದೆ
ರಂಗಮಂದಿರವಾಗುತ್ತಿತ್ತು ಸಾರಿಸಿದ ನೆಲ
ನಾನೋ ಸರಿಸಾಟಿಯಿಲ್ಲದ ನಟಿ ಹೂ್ಞಂ

ದೃಷ್ಟಿಯಾದೀತೆಂದು ಸುಡುಹಂಚಿನ ಕರಿ,
ಸಂತೆಯಲ್ಲಿ ತಂದ ಪೌಡರ್ ನಿನ್ನ ಮೋರೆಗೆ
ನಿನ್ನ ಕಾಣಲು ಬರುತ್ತಿದ್ದ ಮಾನಿನಿಯರು
ಕಾಲ್ಧೂಳಿಯೆಂದು ಬೈಸಿಕೊಂಡವರೆಷ್ಟೋ ಹ ಹ

ಅಂದು ನೀ ಎದೆಗೊದ್ದಾಗ ಏನೋ ಸಂತಸ
ಬಂದು ಹೋಗುವರೆಲ್ಲ ನಿನ್ನ ಮುದ್ದಾಡಿದಾಗ
ಅದೇನೋ ಹೇಳಲಾಗದ ಸಾರ್ಥಕತೆ ಶಾಂತಿ
ನಿನ್ನ ಅಮಲಲಿ ದಿನರಾತ್ರಿಯಿಡೀ ತೇಲುತ್ತಿದ್ದೆ

ನಿನ್ನ ಬಿಟ್ಟು ಹೋಗುವಾಗಿನ ಚಡಪಡಿಕೆ
ಇಂದೇ ಕೊನೆಯೆಂಬಂತೆ ಮುದ್ದಾಡಿ
ಎದೆಗವಚಿ ಹಾಲುಣಿಸಿದ ಸಂಭ್ರಮ ಆಹಾ
ನಿನ್ನಳು ನಾ ನಕ್ಕಿದ್ದೆ ನನ್ನಳಿಸಿ ನೀ ನಗುತಿದ್ದೆ

ಸಮಯವೆಷ್ಟು ಕ್ರೂರಿ ಬರಬರನೆ ಬೆಳೆಸಿತಲ್ಲವೇ
ನಮ್ಮಿಬ್ಬರ ಸಾಮಿಪ್ಯ ದೇವ ಭಕ್ತರಷ್ಟೇ ಪವಿತ್ರ ಬಿಡು
ಇಲ್ಲದಿರೆ ನೀನ್ಯಾಕೆ ಆರಾಧಿಸುತ್ತಿದ್ದೆ ಅಮ್ಮಾ! ಎಂದು
ಭೌತಿಕ ದೂರ ಮನಕೆ ಸಮೀಪ, ಮೆದುಳಿಗೆ ವ್ಯಾಧಿ!

ಮನದ ಆಕ್ರೋಷ ಉಸಿರಿಗೆ ಮಾಲಿನ್ಯ ತಡೆಯಲೇಗೆ?
ಎಣಿಸಲಾಗದ ನೋವುಗಳ ಮಧ್ಯೆ ನಿನ್ನದೇ ನೆನಪು
ನಿನ್ನ ಕಣ್ಣಿನ ಹೊಳಪು ಇಂಗಿದಾಗ ನಾ ಸೋತುಬಿಟ್ಟೆ
ನಿನ್ನ ನೋವುಗಳ ಪಟ್ಟಿ ನನ್ನ ಲೆಕ್ಕಕ್ಕೆ ಬರಬಾರದೇ ಮಗ

ನಾ ತಾಯಿ ಕಣೋ, ಸ್ವಾರ್ಥಿ ಅಂತ ನನಗೂ ಗೊತ್ತು
ಹರಿದಂಚಬೇಡ ನಿನ್ನ, ಆದರೆ ನೀ ನನಗೂ ಬೇಕು ತಿಳಿ
ನೀ ಮೌನವಾಗಿದ್ದರೂ ಸರಿ ನನ್ನ ಜೊತೆಯಿರಲಾರೆಯ?
ಸಿಡುಕು, ದುಡುಕು ನಾ ತಾಳುವೆ ನೀ ಬರುವೆನೆಂದರೆ

ಬೇಗ ಬಾರೋ ಪುಕ್ಕ ಕಳೆದ ರೆಕ್ಕೆಗಳು ಹಾರುವ ಹಾಗಿದೆ
ನಿನಗೆ ಜನ್ಮವಿತ್ತಿದ್ದು ನನ್ನ ಕನಸು, ದೈವೇಚ್ಛೆ, ನಿನ್ನ ಕರ್ಮ
ನಿನ್ನ ಬಾಳು ನನ್ನ ಸ್ವಂತ ನಾನೇ ನೀನಾಗಿ ಬದುಕಿದಂತೆ
ನಾನೇ ತೀರಿಸಬೇಕೆಂದಿರುವೆ ಜವಗೆ ನಿನ್ನ ಸಾವ ಸಾಲ

ನೀನೇನೂ ಕೊರಗಬೇಕಿಲ್ಲ ಋಣ ಋಣ ಎನ್ನುತ್ತ
ನಿನ್ನ ಮಗಳಾಗಿಯಾದರೂ ನಿನ್ನ ಕಾಡದೆ ಬಿಡಲಾರೆ
ನನ್ನಿಂದ ನಿನಗೆ ಮುಕ್ತಿ ಅಸಾಧ್ಯ ಪ್ರೀತಿ ಅಪರಿಮಿತ
ಜನ್ಮಜನ್ಮಕೂ ನನ್ನ ನಿನ್ನ ನಂಟು ಅವಿಭಾಜ್ಯ ಅನಂತ