ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತಿರುಮಲೇಶ್ ಅವರ ಜೊತೆ

ಪ್ರಹ್ಲಾದ್ ಜೋಷಿ
ಇತ್ತೀಚಿನ ಬರಹಗಳು: ಪ್ರಹ್ಲಾದ್ ಜೋಷಿ (ಎಲ್ಲವನ್ನು ಓದಿ)

“ ತಿರುವನಂತರ , ತಿರುವು ನಂತರ , ನಂತರ ಐತಂದಿರಿ ಹೈದರಾಬಾದಿಗೆ
ಧಗೆ ಕಾರುವ ಕಲ್ಲು ಬಂಡೆಗಳಲಿ ಹುಲ್ಲು ಚಿಗುರುವದ ಕಂಡಿರಿ
ಒಲವು ತುಂಬಿದ ನೋಟ ಬೀರಿದಿರಿ , ಸೇರಿಸಿಕೊಂಡಿರಿ ಶಹರನು ನಿಮ್ಮೊಳಗೆ, ಒಂದಾದಿರಿ ಅದರ ಜೊತೆ
ಅದರ ಶಾನನ್ನು ಹಾಡಿ ಹೊಗಳಿದಿರಿ
ನೀವು ಉಲಿದ ಮೃದು ಮಾತುಗಳಿಗೆ ಕರಗಿವೆ ಶಹರಿನ ಬಂಡೆಕಲ್ಲುಗಳು
ಹುಸೇನ್ ಸಾಗರದಲಿ ನಿಂತ ನಿರ್ಲಿಪ್ತ ಬುಧ್ಧನೂ ಮಂದಸ್ಮಿತ ನಿಮ್ಮ ಕವನವನಾಲಿಸಿ
ಅಕ್ಕರಗಳ ಸಂಪತ್ತು ತಂದಿರಿ ಜೊತೆಯಲ್ಲಿ
ಚೈತನ್ಯವ ತುಂಬಿ ಹರಡಿದಿರಿ
ಶಹರಿನ ಚೆಹರೆ ಬದಲಾಗಿದೆ ಈಗ
ಬಿಂಬಕೆ ಹಿಡಿದಿರಿ ಕನ್ನಡದ ಕನ್ನಡಿಯ
ತೇಲಿ ಬಿಟ್ಟ ನಿಮ್ಮ ಕವನಗಳನ್ನೀಗ ಉಸಿರಾಡುತಿದೆ ಶಹರು ಧನ್ಯತೆಯ ಭಾವವನು ತೋರುತ
ಅಕ್ಕರದ ಮಾಂತ್ರಿಕರೆ ನಿಮಗಿದೋ ನಮನ
ನಿಮಗಿದೋ ನಮನ.”

ಸುಮಾರು ಐದು ದಶಕಗಳಿಂದ ಹೈದರಾಬಾದಿನಲ್ಲಿದ್ದುಕೊಂಡು, ಶಹರಿನ ಚಪ್ಪಾ ಚಪ್ಪಾ (ಮೂಲೆ ಮೂಲೆ- ಹೈದರಾಬಾದು ಭಾಷೆಯಲ್ಲಿ) ತಿರುಗಿ ಅದನ್ನು ಅರಗಿಸಿಕೊಂಡು ತಮ್ಮ ಅಂತರಂಗದೊಳಗೆ ಸೇರಿಸಿ ಶಹರಿನ ಜೊತೆ ಹಾಸುಹೊಕ್ಕಾಗಿ ಹೋದ ಕವಿ ತಿರುಮಲೇಶರು ಅವರ ಮನದಾಳದಲ್ಲಿ ಸಂಚಯವಾಗಿ ಸಿಧ್ಧವಾಗಿರುವ ಪ್ರತಿಮೆಗಳನ್ನು ಬಳಸಿ ಬರೆದ ಅದ್ಭುತ ಕವನಗಳು, ಹೈದರಾಬಾದಿನ ಶಹರಿನ ಬಗೆಗಿರುವ ಅವರ ಒಲವನ್ನು ಸೂಚಿಸುತ್ತದೆ.

ಹೈದೆರಾಬಾದಿನಲ್ಲಿ ಬಾಲ್ಯದಿಂದಲೂ ಇದ್ದು ಬೆಳೆದ ನನಗೆ, ಹೈದೆರಬಾದಿನ ಕುರಿತು ಅವರ ಕವನಗಳನ್ನು ಓದಿದಾಗ ವಿರಾಟ್ ಶಹರಿನ ವಿವಿಧ ರೂಪಗಳು ಅನಾವರಣಗೊಳ್ಳುತ್ತವೆ. ತಿರುಮಲೇಶರಿಗೆ ೮೦ ತುಂಬಿದ ಸಂದರ್ಭದಲ್ಲಿ, ಹೈದೆರಾಬಾದಿನ ಜೊತೆ ಅವರಿಗಿರುವ ಈ ಅವಿನಾಭಾವ ಸಂಬಂಧವನ್ನು ಕೆಲವು ಸಾಲುಗಳಲ್ಲಿ ಸೆರೆಹಿಡಿದು ಅವರಿಗೆ ಕೃತಜ್ಞತಾಪೂರ್ವಕವಾಗಿ ಅರ್ಪಿಸಬೇಕೆಂಬ ಕ್ಷೀಣ ಪ್ರಯತ್ನವನ್ನು ಮಾಡಿದ್ದೇನೆ. ಅವರೂ ಶಹರಿನ ಅವಿಭಾಜ್ಯ ಅಂಗವಾದಂತೆ ಹೈದರಾಬಾದ- ಸಿಕಂದರಾಬಾದ ಅವಳಿ ನಗರಗಳು ಸಹ ಅವರ ಬೃಹತ್ ಕಾವ್ಯದ- ಸಾಹಿತ್ಯದ ಅವಿಭಾಜ್ಯ ಅಂಗವಾಗಿವೆ.
೫೦ ಕಿಮಿ ಪೂರ್ವಕ್ಕೆ ಪಶ್ಚಿಮ ಘಟ್ಟದ ಪರ್ವತ ಶ್ರೇಣಿ ಗಳು, ಪಶ್ಚಿಮಕ್ಕೆ ೨೦ ಕಿಮಿ ದೂರದಲ್ಲಿ ಅರಬ್ಬಿ ಸಮುದ್ರ ಇವೆರಡರ ನಡುವೆ ಇರುವ ಸುಮಾರು ೭೦ಕಿಮಿ ವಿಸ್ತೀರ್ಣದ ಭೂಭಾಗವೇ ಕಾಸರಗೋಡು, ಅದರ ಹತ್ತಿರದ ಇರುವ ರಮ್ಯವಾದ ತಾಣವೇ “ ಕಾರಡ್ಕ” , ತಿರುಮಲೇಶರ ಊರು. ಆ ಊರಿನ ಕುರಿತು ಕಾಸರಗೋಡಿನವರಾದ ನನ್ನ ವಿಜ್ಞಾನಿ- ಸಾಹಿತಿ ಮಿತ್ರ ಮಹಾದೇವ್ ಅವರು ಸುಂದರವಾದ ಚಿತ್ರಣವನ್ನು, ತಿರುಮಲೇಶ್ ರ ಕವನಗಳ ಕುರಿತು ಬರೆದ ಅಂಕಣದಲ್ಲಿ ಕೊಟ್ಟಿದ್ದಾರೆ. ತಮ್ಮ ಊರೇ ಆಗಲಿ, ಆಮೇಲೆ ತಿರುಮಲೇಶ್ ರ ಕಾರ್ಯಕ್ಷೇತ್ರವಾದ ತಿರುವನಂತಪುರಮ್ ಆಗಲಿ ಹೈದರಾಬಾದಿಗಿಂತ ತೀರಾ ಭಿನ್ನವಾದ ಪರಿಸರ; ಪ್ರಾಕೃತಿಕವಾಗಿ, ಸಾಮಾಜಿಕವಾಗಿ, ಎಲ್ಲ ದೃಷ್ಟಿಯಿಂದಲೂ. ಈ ಅಜಗಜಾಂತರ ಅಂತರವನ್ನು ದಾಟಿ, ಹೈದರಾಬಾದನ್ನು ಮುಕ್ತವಾಗಿ ಪ್ರೀತಿಯಿಂದ ತಬ್ಬಿಕೊಂಡ ತಿರುಮಲೇಶರ ಪರಿ ಅನನ್ಯವಾದದ್ದು. ಹೈದೆರಾಬಾದಿಯಾದ ನಾನು ಅವರ ‘ಆರ್ಡೆಂಟ್ ಅಡ್ಮೈರರ್’ ಆಗಲು ಈ ಕಾರಣವೂ ಸೇರಿಕೊಳ್ಳುತ್ತದೆ.

ತಿರುಮಲೇಶ್ ರು ಹೈದರಾಬಾದಿಗೆ ಆಗಮಿಸಿದ ಹೊಸತರಲ್ಲೇ, ಕರ್ನಾಟಕ ಸಾಹಿತ್ಯ ಮಂದಿರದ ಚಟುವಟಿಕೆಗಳ ಮೂಲಕ ನನಗೆ ಅವರ ಪರಿಚಯವಾಯಿತು. ನಾನು ಸಾಹಿತ್ಯ ಮಂದಿರದ ಸಕ್ರಿಯ ಸದಸ್ಯನಾಗಿದ್ದು, ಮಂದಿರದ ಸಾಹಿತ್ತಿಕ ಕಾರ್ಯಕ್ರಮಗಳಲ್ಲಿ ಬಹಳ ಆಸಕ್ತಿ ವಹಿಸುತ್ತಿದ್ದೆ. ತಿರುಮಲೇಶ್ ರು, ಭಾಷಾ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದ ಆಗಿನ ಸಿಐಇಎಫೆಲ್ ಸಂಸ್ಥೆಯಲ್ಲಿ ಪ್ರೊಫೆಸರರಾಗಿ ಸೇವೆ ಸಲ್ಲಿಸುತ್ತಿದ್ದ ಎಚ್ ಎನ್ ಎಲ್. ಶಾಸ್ತ್ರಿ ಅವರು ( ಕನ್ನಡ ಮತ್ತು ತೆಲುಗು ಉಭಯ ಬಾಷೆಗಳಲ್ಲಿ ಪ್ರಕಾಂಡ ವಿದ್ವಾಂಸರು, ತೀನಂಶ್ರೀ ಶಿಷ್ಯರು) ನಾಡ ಹಬ್ಬದ ಸಮಯದಲ್ಲಿ ಕರ್ನಾಟಕ ಸಾಹಿತ್ಯ ಮಂದಿರಕ್ಕೆ ಆಗಮಿಸಿ, ಕನ್ನಡ ಸಾಹಿತ್ಯದ ಕುರಿತು ಅಮೋಘವಾದ ಉಪನ್ಯಾಸಗಳನ್ನು ನೀಡುತ್ತಿದ್ದರು. ಇದೇ ಸಂಸ್ಥೆಗೆ, ಹಿಂದೆ ಪ್ರೊ.ವಿ. ಕೃ. ಗೋಕಾಕರು ನಿರ್ದೇಶಕರಾಗಿದ್ದು, ಕರ್ನಾಟಕ ಸಾಹಿತ್ಯ ಮಂದಿರಕ್ಕೂ ಉಪಾಧ್ಯಕ್ಷರಾಗಿದ್ದ ಸಂಗತಿಯನ್ನು ನಿಮ್ಮ ಜೊತೆ ಸಾಂದರ್ಭಿಕವಾಗಿ ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. ಈ ರೀತಿಯಾಗಿ, ಸಿಐಇಎಫ್‌ಎಲ್ ಸಂಸ್ಥೆ ಅಲ್ಲಿಗೆ ಬಂದ ವಿದ್ವಾಂಸರಿಗೂ ಮತ್ತು ಮಂದಿರಕ್ಕೂ ಒಂದು ಸೇತುವೆಯಾಗಿತ್ತು. ಇದೇ ಪರಂಪರೆಗೆ ಅನುಗುಣವಾಗಿ ತಿರುಮಲೇಶ್ ರು ಮಂದಿರದ ಸಾಹಿತ್ತಿಕ ಕಾರ್ಯಕ್ರಮಗಳಿಗೆ ಬರುತ್ತಿದ್ದು, ಅದರಲ್ಲೂ ನಾಡಹಬ್ಬದ ವಿಶೇಷ ಆಕರ್ಷಣೆಯಾದ “ ಬಹು ಭಾಷಾ ಕವಿ ಸಮ್ಮೇಳನ ” ಕ್ಕೆ ಎಷ್ಟೋ ಸಲ ಅಧ್ಯಕ್ಷತೆಯನ್ನು ವಹಿಸಿ, ನಾವು ಓದುತ್ತಿದ್ದ ಕವನಗಳನ್ನು ಕೇಳಿ ಎಲ್ಲರನ್ನು ಪ್ರೋತ್ಸಾಹಿಸುತ್ತಿದ್ದ ಸಂಗತಿ, ಇನ್ನೂ ನೆನಪಿನಲ್ಲಿ ಹಸಿರಾಗಿದೆ. ಸಮಾರೋಪದ ಸಮಯದಲ್ಲಿ ಅವರು ತಮ್ಮ ಕವನಗಳನ್ನು ವಾಚನ ಮಾಡಿ, ಕಾವ್ಯದ ಬಗ್ಗೆ ನಮಗೆ ಇದ್ದ ಅರಿವನ್ನು ಹೆಚ್ಚಿಸುತ್ತಿದ್ದರು. ನಾಗೇಂದ್ರ ಸ್ವಾಮಿ ಎಂಬ ಬೆಂಗಳೂರಿನ ಮಿತ್ರರೊಬ್ಬರು ೬೦ ರ ದಶಕದಲ್ಲಿ ಹೈದರಾಬಾದಿನಲ್ಲಿ ಇರುತ್ತಿದ್ದು ಅವರು ತಿರುಮಲೇಶ್ ರ ಕವನಗಳ ಪ್ರಶಂಸಕರಾಗಿದ್ದು, ಅವರು ನನಗೆ ತಿರುಮಲೇಶ್ ರ ‘ ಮಹಾ ಪ್ರಸ್ಥಾನ’ ವನ್ನು ಓದಲು ಕೊಟ್ಟಿದ್ದರು. ಅದನ್ನು ಓದಿ ಪ್ರಭಾವಿತಗೊಂಡ ನನಗೆ, ಅದನ್ನು ರಚಿಸಿದ ಕವಿಗಳೇ ಮುಖಾ- ಮುಖಿಯಾಯಾದಾಗ ನನ್ನ ಆನಂದಕ್ಕೆ ಎಣೆಯೇ ಇರಲಿಲ್ಲ. ಆಮೇಲಿನ ದಿನಗಳಲ್ಲಿ ಪರಿಚಯ ಗಾಢವಾಗುತ್ತಾ ಹೋಗಿ ಅವರನ್ನು ಹತ್ತಿರದಿಂದ ನೋಡಿ, ನಿಕಟವಾಗುವ ಸಂದರ್ಭ ಒದಗಿ ಬಂದದ್ದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ.

ಹೈದರಾಬಾದಿನ ಉದ್ದಗಲ ಅವರು ಯಾತ್ರಿಕನಂತೆ ಸಂಚರಿಸಿದ್ದಾರೆ. ರವಿವಾರದ ದಿನಗಳಲ್ಲಿ ಹೈದರಾಬಾದಿನ ರಸ್ತೆಗಳ ಫುಟ್ಪಾತ್ ಗಳ ಮೇಲೆ ಪೇರಿಸಿಟ್ಟ ಪುಸ್ತಕಗಳನ್ನು ಮೈಮರೆತು ಅವಲೋಕಿಸುತ್ತ ನಿಂತಿರುವದನ್ನು ಎಷ್ಟೋ ಸಲ ಹತ್ತರದಿಂದ ನೋಡಿದ್ದೇನೆ. ಇಂತಹ “ ಪುಸ್ತಕೋತ್ಸವ” ಗಳು ನಡೆಯುವದು ರವಿವಾರದ ದಿನಗಳಂದು, ಹೈದರಾಬಾದಿನ ಹೆಚ್ಚು ವಾಹನಗಳ ಓಡಾಟವಿರುವ, ಜನ ನಿಬಿಡ ಆಬಿಡ್ಸ್ ಪ್ರದೇಶದಲ್ಲಿ ಅಂದು ವಾಹನಗಳ ಸಂಚಾರ ಕಡಿಮೆ ಇರುವ ಕಾರಣ. ಆಬಿಡ್ಸ್ ರಸ್ತೆಯನ್ನೇ ಪ್ರತಿಮೆಯಾಗಿಟ್ಟುಕೊಂಡು ಅದರ ವಾಹನಗಳ ಟ್ರಾಫಿಕ್ ರಭಸದಿಂದ ಪಾರಾಗಿ ರಸ್ತೆಯನ್ನು ದಾಟುವದು ಎಷ್ಟು ದುರ್ಗಮವೆಂಬುದನ್ನು, ತಮ್ಮ ಕವಿತೆಯಲ್ಲಿ ರೂಪಕವಾಗಿ ಬಳಸಿದ ರೀತಿ ಬಹಳ ಅದ್ಭುತವಾಗಿದೆ. ಉಸ್ಮಾನಿಯಾ ವಿಶ್ವ ವಿದ್ಯಾಲಯದವರು ಸ್ಥಳೀಯ ನಿಜಾಮ್ ಕಾಲೇಜಿನಲ್ಲಿ ಆಯೋಜಿಸಿದ ಗೋಷ್ಠಿ ಒಂದರಲ್ಲಿ, ಈ ಕವನವನ್ನು ಪ್ರೊ. ಬಿ. ಟಿ. ದೇಸಾಯಿ ಅವರು ತಿರುಮಲೇಶ್ ರ ಸಮ್ಮುಖದಲ್ಲಿ ಬಹಳ ಪರಿಣಾಮಕಾರಿಯಾಗಿ ವಿಶ್ಲೇಷಣೆ ಮಾಡಿದ ನೆನಪು ಇನೂ ತಾಜಾ ಇದೆ. ಪ್ರೊ. ಬಿ.ಟಿ. ದೇಸಾಯಿ ಅವರು ಸಿಐಇಎಫ್ ಎಲ್ ನಲ್ಲಿ ತಿರುಮಲೇಶ್ ರ ಕಲೀಗ್ ಆಗಿದ್ದು, ಕನ್ನಡ ಸಾಹಿತ್ಯದ ವಿಮರ್ಶಕರು, ಕತೆ ಮತ್ತು ನಾಟಕಕಾರರು ಆಗಿದ್ದರು. ಮುಂದೆ ಅವರು ಸಾಹಿತ್ಯ ಮಂದಿರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

೭೦ ರ ದಶಕದ ಉತ್ತರಾರ್ಧದಿಂದ ೮೦ ರ ದಶಕದಲ್ಲಿ ಹೊರಬಂದ ಕರ್ನಾಟಕ ಸಾಹಿತ್ಯ ಮಂದಿರದ ಮುಖವಾಣಿ ಯಾದ ‘ ಪರಿಚಯ’ ಪತ್ರಿಕೆಗೆ, ತಿರುಮಲೇಶ್ ರು ಬರೆದ ‘ ಅಕ್ಷರ ಲೋಕದ ಅಂಚಿನಲ್ಲಿ’ ಲೇಖನ ಮಾಲೆ ಪತ್ರಿಕಗೆ ಕುಂದಣಪ್ರಾಯವಾಗಿತ್ತು. ಅತ್ಮ ಕಥನದ ನಿರೂಪಣೆಗೆ ಹೋಲುವ ಈ ಲೇಖನ ಪೂರ್ಣ ಆತ್ಮ ಕಥೆಯಂತೆ ಇರದೆ, ನಿರೂಪಣೆಯಲ್ಲಿ ಕಾವ್ಯದ ಅಂಶಗಳನ್ನು ಒಳಗೊಂಡು ಕನ್ನಡ ಸಾಹಿತ್ಯ ಲೋಕದಲ್ಲಿ ಸಂಚಲನವನ್ನು ಸೃಷ್ಟಿಸಿ ಹೊಸ ಮಾರ್ಗಗಳಿಗೆ ದಿಕ್ಸೂಚಿಯಾಯಿತು. ಇದರಿಂದ ಆಗಿನ ಅನೇಕ ಯುವ ಬರಹಗಾರರು ಪ್ರಭಾವಿತರಾದದ್ದು ಸರ್ವವಿದಿತ.

ತಿರುಮಲೇಶ್ ರು ಮಹಾನ್ ಸಾಹಿತಿಗಳು, ಶ್ರೇಷ್ಠ ವಿಮರ್ಶಕರು, ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ದೊರಕಿಸಿ ಕೊಟ್ಟ ವ್ಯಕ್ತಿಗಳು ಎಂದು ಹೇಳುವ ಉಸಿರಲ್ಲೇ, ಅವರು ಒಬ್ಬ ಸಾದಾ, ಸರಳ, ಮತ್ತೊಬ್ಬರ ಬಗ್ಗೆ ಕಾಳಜಿ- ಕಳಕಳಿಯನ್ನು ಹೊಂದಿದ, ಮಾನವೀಯತೆಯೇ ಮೂರ್ತಿವೆತ್ತಂಥ ಅಂತಃಕರಣ ಕೂಡಿದ ಸ್ನೇಹಪರ ಜೀವಿ ಎಂಬುದನ್ನು ನಾನು ಇಲ್ಲಿ ತಿಳಿಸ ಬಯಸುತ್ತೇನೆ, ‘ಹ್ಯೂಮನ್ ಬಿಯಿಂಗ್ ಪಾರ್ ಎಕ್ಸೆಲ್ಲೆನ್ಸ್’. ಇದರಲ್ಲಿ ಎಳ್ಳಷ್ಟೂ ಅತಿಶಯೋಕ್ತಿ ಇಲ್ಲ. ಹೈದರಾಬಾದಿನಲ್ಲಿ ಸಾಹಿತ್ಯಾಸಕ್ತರ, ಸಾಹಿತ್ಯ ರಚನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮಿತ್ರ ವೃಂದವೊಂದು ಅವರ ಜೊತೆ ಆಪ್ತವಾಗಿ ಸಾಹಿತ್ಯದ
ವಿಷಯಗಳ ವಿವಿಧ ಪಾರ್ಶ್ವಗಳ ಕುರಿತು ಚರ್ಚೆ ನಡೆಸುತ್ತಿದ್ದ ದಿನಗಳನ್ನು ಇಲ್ಲಿ ನೆನೆಯ ಬಯಸುತ್ತೇನೆ. ಆ ಗುಂಪಿನಲ್ಲಿ, ಕತೆಗಾರ ಎಮ್ ಎಸ್ ಶ್ರೀರಾಮ್, ಗೋನವಾರ ಕಿಶನ್ ರಾವ್, ಕಾದಂಬರಿಕಾರರಾದ ಎಚ್.ಕೆ. ಅನಂತ ರಾವ್, ಪ್ರೊ. ಲಿಂಗಪ್ಪ ಗೋನಾಳ್ ಹಾಗೂ ಅರವಿಂದ್ ಸಂಗಮ್ ಅವರು ಇರುತ್ತಿದ್ದೆವು.

ನಾವು ಸೇರಿದಾಗಲೆಲ್ಲ, ನಮ್ಮ ಬರಹಗಳ ಬಗ್ಗೆ ಮತ್ತು ಹೊಸ ರಚನೆಗಳ ಕುರಿತು ಕಳಕಳಿಯಿಂದ ವಿಚಾರಿಸುತ್ತಿದ್ದರು. ನಾವು ಬರೆದುದನ್ನು ಓದಿದಾಗ ಬಹಳ ಖುಷಿಯಿಂದ ಕೇಳಿ ನಮ್ಮೆಲ್ಲರ ಬೆನ್ನು ತಟ್ಟುತಿದ್ದ ವಿಷಯವನ್ನು ನೆನೆನಿಸಿಕೊಂಡರೆ, ನಾವೆಷ್ಟು ಭಾಗ್ಯ ಶಾಲಿಗಳು ಎಂದು ಅನಿಸದೆ ಇರದು. ಎಷ್ಟೋ ಸಲ ಅವರ ಕವನಗಳ ಕುರಿತು ಅವರ ಸಮ್ಮುಖದಲ್ಲಿ ಚರ್ಚಿಸುತ್ತಾ, ಆ ಕವನದ ನೇಪಥ್ಯದ ಬಗ್ಗೆ ಮತ್ತು ಅದರಲ್ಲಿಯ ಶಬ್ದಗಳು ಸ್ಫುರಿಸುವ ಅರ್ಥಗಳ ಬಗ್ಗೆ ಅವರನ್ನೇ ಕೇಳಿದಾಗ, ಅವರು ಮುಗುಳ್ನಕ್ಕು, “ ನಾನು ಬರೆದ ಮೇಲೆ ಅದು ಓದುಗನ ಸ್ವತ್ತು; ಅವರವರು ಅರ್ಥ ಮಾಡಿಕೊಂಡಂತೆ ” ಎಂದು ಹೇಳಿ ಸುಮ್ಮನಾಗುತ್ತಿದ್ದರು. ಒಮ್ಮೆ ಗೆಳೆಯ ಶ್ರೀರಾಮ್ ಅವರು, ಅವರ ‘ ಪಾಪೀಯೂ’ ಸಂಕಲನದ ಒಂದು ಕವಿತೆಯಲ್ಲಿ ಬರುವ ‘ ಕುಂಬಳ ಕಾಯಿಯನ್ನು ಹೆಚ್ಚುವ’ ಬಗೆಯ ಬಗ್ಗೆ ದಿರ್ಘವಾಗಿ ಮಂಥನ ನಡೆದದ್ದು ಇನ್ನೂ ಮನದ ಮುಂದೆ ನಿಂತಂತಿದೆ. ಈ ಗೋಷ್ಠಿಗಳಲ್ಲಿ, ಹಲವು ಬಾರಿ ತಿರುಮಲೇಶ್‌ರೇ ಮುಂದಾಳತ್ವ ವಹಿಸಿ ಡಿ.ವಿ. ಜಿ. ಅವರ ಮಂಕು ತಿಮ್ಮನ ಕಗ್ಗವನ್ನು ತಾವೂ ಓದಿ, ನಮ್ಮಿಂದಲೂ ಓದಿಸಿ ಅದನ್ನು ಅರ್ಥೈಸಿದ ದಿನಗಳನ್ನು, ಅವರ ಜೊತೆ ಕಳೆದ ಅವಿಸ್ಮರಣೀಯ ಘಳಿಗೆಗಳನ್ನು ಹೇಗೆ ಮರಯಲು ಸಾಧ್ಯ.

ನಾವು ತಿರುಮಲೇಶ್ ರ ಮನೆಯಲ್ಲಿ ಗೋಷ್ಠಿ ನಡೆಸಿದಾಗಲೆಲ್ಲಾ, ಅವರ ಮನೆಯವರಾದ ಅಕ್ಕ ನಿರ್ಮಲಾ ಅವರು ನಮ್ಮನ್ನೆಲ್ಲಾ ಬಹಳ ಆತ್ಮೀಯತೆಯಿಂದ ನೋಡಿಕೊಂಡು ನಮಗೆ ನೀಡುತ್ತಿದ್ದ ಆತಿಥ್ಯವನ್ನು ಮರೆಯಲು ಸಾಧ್ಯವೇ ಇಲ್ಲ.
ತಿರುಮಲೇಶ್ ರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಾಗ ಅದು ನಮಗೇ ದೊರಕಿದಷ್ಟು ಸಂತೋಷ ಪಟ್ಟೆವು.

ಕನ್ನಡ ಸಂಸ್ಕೃತಿ ಇಲಾಖೆ ಅವರು ಆಯೋಜಿಸಿದ ‘ ಸಾಹಿತಿಯ ಮನೆಯ ಅಂಗಳಕೆ’ ಕಾರ್ಯಕ್ರಮಕ್ಕೆ, ತಿರುಮಲೇಶ್ ರ ಸಂದರ್ಶನಕ್ಕೆ ಕನ್ನಡದ ಖ್ಯಾತ ವಿಮರ್ಶಕರಾದ ವಿಜಯಸಿಂಹ ಅವರು ಆಗಮಿಸಿದ್ದರು. ಮಿತ್ರ ಗೋನವಾರ ಕಿಶನ್ ರಾವ್ ಅವರೂ ಸಹ ಈ ಪ್ರಶ್ನಾವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.ತಿರುಮಲೇಶ್ ರು ಆತ್ಮೀಯತೆಯಿಂದ ನನ್ನನ್ನೂ ಆ ಕಾರ್ಯಕ್ರಮಕ್ಕೆ ಕರೆದದ್ದನ್ನು ಮರೆಯಲಾರೆ. ಅದೇ ರೀತಿ, ಒಂದು ಸಲ ಕನ್ನಡದ ಖ್ಯಾತ ಬರಹಗಾರ್ತಿ ವೈದೇಹಿ ಅವರು ತಿರುಮಲೇಶ್ ರ ಭೇಟಿಗಾಗಿ ಅವರಲ್ಲಿಗೆ ಬಂದಾಗ, ತಿರುಮಲೇಶ್‌ರು ಫೋನ್ ಮಾಡಿ ನನಗೆ ಅವರ ಮನೆಗೆ ಬರಲು ಹೇಳಿದರು. ಅಂದು ಅವರಿಬ್ಬರ ಸಮೃದ್ಧ ಸಂವಾದದ ರಸದೌತಣ ನನಗೆ ದೊರೆಯಿತು. ತಿರುಮಲೇಶ್‌ರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತ ಪ್ರಯುಕ್ತ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ, ಪ್ರೊ. ತಾರಕೇಶ್ವರ್ ಹಾಗೂ ಪ್ರೊ. ನಿಖಿಳಾ ಅವರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲೂ ಭಾಗವಹಿಸುವ ಅವಕಾಶ ದೊರೆಯಿತು. ಆಗ ತಾರಕೇಶ್ವರ್ ಮತ್ತು ನಿಖಿಳಾ ಅವರ ಮಾರ್ಗದರ್ಶನದಲ್ಲಿ ಅವರ ವಿದ್ಯಾರ್ಥಿಗಳ ತಂಡ ತಿರುಮಲೇಶ್‌ರ ‘ ಪೆಂಟಯ್ಯನ ಅಂಗಿ’ ಕವನವನ್ನು ರೂಪಕವಾಗಿ ಪ್ರದರ್ಶಿಸಿ ನಟಿಸಿದ್ದನ್ನು ನೋಡಿದ ಅನುಭವ ನನ್ನ ನೆನಪಿನ ಭಿತ್ತಿಯಲಿ ಕೆತ್ತಿದಂತಿದೆ.
ಕವನ, ಸಣ್ಣ ಕತೆಗಳು, ಕಾದಂಬರಿ, ನಾಟಕ, ವಿಮರ್ಶೆ, ಮಕ್ಕಳ ಸಾಹಿತ್ಯ, ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಸಾಹಿತ್ಯ ಸೇವೆಯಿಂದ ವಿಶಿಷ್ಟ ಸ್ಥಾನವನ್ನು ಗಳಿಸಿದ ತಿರುಮಲೇಶರು ಅಭಿನಂದನಾರ್ಹರು. ಆದರೆ, ಅವರ ಹೈದರಾಬಾದ್ ಕವನಗಳು- ಹೈದೆರಾಬಾದಿಗೆ, ಸೋಮವಾರದ ಗಾಡಿ, ಸೀತಾಫಲ್ ಮಂಡಿ, ತಾರನಾಕಾದ ಚೌಕ, ಆಬಿಡ್ಸ್ ರಸ್ತೆ ಹೀಗೆ ನರ್ತಕಿ ಭಾಗ್ಯ ಮತಿಯ ಐತಿಹ್ಯದಿಂದ ಹಿಡಿದು ಇನ್ನು ಎಷ್ಟೋ ಹೈದರಾಬಾದಿನ ಪ್ರತಿಮೆಗಳನ್ನು ಈ ಕವನಗಳಲ್ಲಿ ತಂದು, ಜಾಹ್ನು ಋಷಿಗಳು ಪವಿತ್ರ ಗಂಗೆಯನ್ನು ಆಪೋಷಣ ಮಾಡಿದಂತೆ, ಹೈದರಾಬಾದನ್ನು ತಮ್ಮೊಳಗೆ ಆವಾಹಿಸಿ, ತಮ್ಮ ಶಬ್ದಗಳ ಮಾಂತ್ರಿಕೆಯನು ಇತ್ತು ಮತ್ತೆ ಹರಿಯುವಂತೆ ಮಾಡಿದ್ದಾರೆ. ಸಬ್ಲಿಮೇಟ್ ಆಗುತ್ತದೆ ನಮ್ಮ ಹೈದೆರಾಬಾದ ; ಆ ಕಾರಣಕ್ಕೆ ಅವರು ನಮಗೆ ಹತ್ತಿರವಾಗುತ್ತಾರೆ, ಪಕ್ಕಾ ಹೈದರಾಬಾದಿಗಳಾಗುತ್ತಾರೆ, ಹೈದರಾಬಾದಿನ ಹೆಮ್ಮೆ ಆಗುತ್ತಾರೆ.

“ ದೇಹ ಸಿಕ್ಕಿತು ಮನಸು ಸಿಕ್ಕಿತೆ/
ಮಡಿಲು ಸಿಕ್ಕಿತು ಮಮತೆ ಸಿಕ್ಕಿತೆ/
ಕೈ ಸಿಕ್ಕಿತು ಸ್ಪರ್ಶ ಸಿಕ್ಕಿತೆ/
ನೋಟ ಸಿಕ್ಕಿತು ದೃಷ್ಟಿ ಸಿಕ್ಕಿತೆ/
ಮಾತು ಸಿಕ್ಕಿತು ಅರ್ಥ ಸಿಕ್ಕಿತೆ ಚೆನ್ನ ಮಲ್ಲಿಕಾರ್ಜುನ’

“ ಯಾವುದೂ ಪೂರ್ತಿಯಾಗುವದಿಲ್ಲ/
ಪೂರ್ಣತೆಯ ಭರವಸೆಯಿಲ್ಲ/
ಲಯವಿಲ್ಲ ಮನೋಮಯದ ಲಯವೊಂದೇ ಲಯ/
ಅವುಗಳ ಅರ್ಥದ ಬಗ್ಗೆಯೂ ಚಿಂತಿಸುವ ಅಗತ್ಯವಿಲ್ಲ/ ಕೆಲವು ಸಾಲುಗಳು ಅರೆನಿದ್ದೆಯಲ್ಲಿ ಬಂದವು/ ಆಮೇಲೆ ಅವೇ ಇತರ ಸಾಲುಗಳನ್ನು ಕರೆತಂದವು”

ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಕವಿಗಳಲ್ಲೊಬ್ಬರಾದ ತಿರುಮಲೇಶ್‌ರ ಅಕ್ಷಯ ಕಾವ್ಯದಿಂದ ಆಯ್ದ ಮೇಲಿನ ಅಮೋಘವಾದ ಸಾಲುಗಳಿಗೆ ಇನ್ನಷ್ಟು ಅನನ್ಯ ಸಾಲುಗಳ ಜೋಡಣೆ ಆಗಲಿ. ಅವರು ಹೀಗೆಯೆ ಬರೆಯುತ್ತಾ ಇರಲಿ; ಬರಿದಾಗದು ಅವರ ಅಕ್ಷಯ ಪಾತ್ರೆ ಎಂದಿಗೂ ಎಂಬ ನಂಬಿಕೆಯೊಂದಿಗೆ, ೮೦ ತುಂಬಿದ ಈ ಸಂದರ್ಭದಲ್ಲಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುವೆ. ತಿರುಮಲೇಶ್‌ರ ಈ ‘ ಮಹಾ ಯಾಗ’ ದಲ್ಲಿ ಅವರ ಜೊತೆ ಹೆಗಲಿಗೆ ಹೆಗಲು ಹಚ್ಚಿ ಪೂರ್ಣ ಬೆಂಬಲ ನೀಡಿದ ಅವರ ಮಡದಿ ನಿರ್ಮಲಾ ಅವರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.