- ಒಡಕಲು ಬಿಂಬಗಳು - ಡಿಸಂಬರ್ 31, 2022
- ಮಂಥನ - ಮೇ 28, 2022
- ದಕ್ಕಿದಷ್ಟು ಒಲಿಯಿತು - ನವೆಂಬರ್ 20, 2021
ಅವನ ಪ್ರಶ್ನೆಗೆ ಅವಳು ಸಿಡಿದಿದ್ದಳು. ಅದ್ಯಾಕೆ ಒತ್ತಾಯ ಮಾಡೋದು ಗಂಡ ಅನ್ನುವ ಸಲುವಾಗಿ ಹೀಗೆ ಹಕ್ಕು ಸ್ಥಾಪಿಸೋದು ಸರಿಯೇ ಅವಳ ವಿತಂಡ ವಾದ
ಉಮೇಶ ದೇಸಾಯಿ ಅವರ ಈ ಕೆಳಗಿನ ಕಥೆಯಿಂದ
ನಾಕು ದಿನ ಅಂತ ಹೋಗಿದ್ದು ವಾರದವರೆಗೂ ಬೆಳೆದಿತ್ತು ವಾಸ್ತವ್ಯ. ಕಾರಣವೂ ಇಲ್ಲದಿರಲಿಲ್ಲ ಅಮ್ಮ ಅಂದಿದ್ದಳು ಮಾಲಿನಿಗೆ “ಅಪ್ಪನ ಮುದ್ದಿನ ಮಗಳು ನೀನು ಅವರ ಹೆಸರಿನಲ್ಲಿ ಅವರ ಮನದಾಸೆಯಂತೆ ಆಶ್ರಮದಲ್ಲಿ ರೂಮು ಕಟ್ಟಿಸಿದ್ದೇವೆ ನೀನು ಇದ್ದು ಅದರ ಪ್ರಾರಂಭ ಹಾಗೆಯೇ ಹಸ್ತಾಂತರ ಮುಗಿಸಿ ಹೋಗು . ಅಂದು ಆಶ್ರಮವಾಸಿಗಳಿಗೆ ಊಟ ಹಾಕಿಸುವ ಕಾರ್ಯಕ್ರಮವೂ ಇದೆ..” ಅಪ್ಪನ ಪ್ರಸ್ತಾಪದಿಂದ ಮಾಲಿನಿ ಎಮೋಶನಲ್ ಆದಳು. ಹೇಗಿದ್ದರೂ ಈಗ ವರ್ಕಫ್ರಂ ಹೋಮ ಬರುವಾಗಲೇ ಲ್ಯಾಪಟಾಪ ಹೊತ್ತು ತಂದಿದ್ದಳು. ಅವಳು ಬಳಸುತ್ತಿದ್ದ ರೂಮು ಅವಳಿಗೇ ಬಿಟ್ಟುಕೊಟ್ಟಿದ್ದರು. ನೆಟ್ ವೇಗವೂ ಇತ್ತು. ವಸತಿ ವಾಡಾಯಿಸಲು ಕಾರಣಗಳಿದ್ದವು ನಿಜ ಆದರೆ ಅವಳ ಮನದ ಕಿರಿಕಿರಿ ಯಾರಿಗೆ ಹೇಳಬೇಕು ಇನ್ನೂ ಹೆಚ್ಚು ದಿನ ಅಲ್ಲಿಯೇ ಉಳಿದರೆ ತಲೆ ಹೋಳಾಗುತ್ತದೆ ಅನಿಸಿತ್ತು.
ಅಂತೂ ತಂದೆಯ ವರ್ಷಾಂತಿಕ ಸಾಕಷ್ಟು ಅರ್ಥಪೂರ್ಣವಾಗಿಯೇ ಮುಗಿಯಿತು. ಆಶ್ರಮದವರು ಅಚ್ಚುಕಟ್ಟು ವ್ಯವಸ್ಥೆಮಾಡಿದ್ದರು. ಮಾಲಿನಿಯ ಅಣ್ಣ ಮಧು ಹಾಗೂ ಹೆಂಡತಿ ರಾಧಾ ಆಸ್ಥೆಯಿಂದಲೇ ಎಲ್ಲ ಮಾಡಿ ಮುಗಿಸಿದರು. ಮಾಲಿನಿಯ ತಾಯಿಯೂ ಉತ್ಸಾಹದಿಂದ ಪಾಲುಗೊಂಡಿದ್ದಳು. ಮಾಲಿನಿಯ ಗಂಡ ಶ್ರೀಕರ ಒಂದೇ ದಿನ ಬಂದಿದ್ದ. ಕಾಲೇಜು ಬಹಳ ದಿನಗಳ ನಂತರ ಸುರುವಾಗಿತ್ತು ಅವನಿಗೆ ರಜೆ ಸಿಕ್ಕಿರಲಿಲ್ಲ. ಬಲವಂತದ ನಗು ಮುಖದ ತುಂಬ ಎಳೆದುಕೊಂಡ ಮಾಲಿನಿ ಅವನಿದ್ದಷ್ಟು ಹೊತ್ತು..ಮುಖ್ಯವಾಗಿ ತಾಕಿದ್ದು ಅಣ್ಣ ಹಾಗೂ ಅತ್ತಿಗೆಯ ಆತ್ಮೀಯತೆ. ಆಗಾಗ ಅಣ್ಣ ಹೆಂಡತಿಯ ಕೆಣಕುವುದೇನು, ಅವಳು ಹುಸಿಮುನಿಸು ತೋರುವುದೇನು ಕಣ್ಣಲ್ಲಿ ನುಂಗುವಹಾಗೆ ಅವನ ನೋಡುವುದೇನು. ದಾಂಪತ್ಯದಲ್ಲಿ ಈ ತರದ ಸವಿ ಇರುತದೆಯೇ..ಅಮ್ಮ ಹೇಳಿದ್ದಳು.. ರಾಧಾ ಈ ತಿಂಗಳು ಮುಟ್ಟಾಗಿಲ್ಲ ಅಂತ… ಸಿಹಿಸುದ್ದಿ ಬರಲಿದೆ ಅಂತ ಅಮ್ಮ ಹೇಳುವಾಗ ಅವಳ ಮುಖದಲ್ಲಿನ ಹಿಗ್ಗು ಎಲ್ಲ ಹೇಳಿತ್ತು. ಬಹುಷಃ ಅಲ್ಲಿ ಅಸುಖಿ ಅಂದರೆ ತಾನೊಬ್ಬಳೇನೋ . ಚಡಪಡಿಕೆ ಹೇಳಲಾಗದ ಸಂಕಟ. ಒಂದೇ ಮಂಟಪದಲ್ಲಿ ಮದುವೆ ಯಾಗಿದ್ದು ಅಲ್ಲವೇ .ತನ್ನ ಹಾಗೂ ಶ್ರೀಕರನ ನಡುವೆ ಈ ಸರಸ ಸಲ್ಲಾಪ ಮರೀಚಿಕೆನೇ ಕಾರಣ ತಾನೇ ತನ್ನ ಅಹಮಿಕೆಯೇ ಕಾರಣ ಅನ್ನುವ ಕಟುವಾಸ್ತವ ಅವಳಿಗೆ ಅವಿರತ ಕಾಡಿತ್ತು.
ಕಾರ್ಯಮುಗಿದು ಬಸ್ಸು ಏರಿ ಕುಳಿತವಳಿಗೆ ಏನೋ ನಿರಾಳತೆ. ಹತ್ತುದಿನದ ದ್ವಂದ್ವ ಕಳೆಯಿತು ಅನ್ನುವ ಭಾವ ಹಾಗೆ ನೋಡಿದರೆ ತವರು ಬಿಟ್ಟು ಅತ್ತೆಮನೆಗೆ ಹೊರಟಿದ್ದಳು ಮಾಲಿನಿ ಆದರೆ ವಿಷಾದ ಇರಲಿಲ್ಲ..ಬದಲು ಬಿಡುಗಡೆಯ ಭಾವ ಮುಖದಲ್ಲಿ.
ಮಾಲಿನಿಯ ಈಗಿನ ಮನಸ್ಥಿತಿಯ ಹಿಂದೆ ಒಂದು ಕತೆಯಿದೆ.ಅವಳ ತಂದೆ ಸರಕಾರಿ ಅಧಿಕಾರಿಯಾಗಿದ್ದವರು. ಮಾಲಿನಿ ಅಂತೆಯೇ ಮಧು ಇಬ್ಬರು ಮಕ್ಕಳು. ತಲಾಂತರದಿಂದ ಬಂದ ತೋಟ ಹೀಗೆ ಸಾಕಷ್ಟು ಸ್ಥಿತಿವಂತ ಕುಟುಂಬ. ಗಂಡನ ಮಾತಿಗೆ ಎದುರಾಡದ ಬಕುಲ ಅಂದರೆ ಮಾಲಿನಿಯ ತಾಯಿ. ಮಧು ಮುಂದೆ ಲೆಕ್ಚರರ್ ಆಗುವುದಾಗಿ ಹೇಳಿದಾಗ ಮಾಲಿನಿಯ ತಂದೆ ವಾದ ಹಾಕಿದ್ದರು ಇಂಜಿನೀಯರ ಓದಿಸಬೇಕು ಇದು ಅವರ ಕನಸಾಗಿತ್ತು. ಅವರ ಕನಸು ಈಡೇರಿಸಿದ್ದು ಮಾಲಿನಿ. ಒಳ್ಳೆಯ ಮಾರ್ಕು ತೆಗೆದು ಪಾಸಾದವಳಿಗೆ ಇದ್ದ ಊರಲ್ಲಿಯೇ ಸೀಟೂ ಸಿಕ್ಕಿತ್ತು. ಓದು ಮುಗಿಸಿ ಬೆಂಗಳೂರಿನ ದೊಡ್ಡ ಕಂಪನಿಯಲ್ಲಿ ಕೆಲಸವೂ ದೊರೆಯಿತು. ಅವಳ ತಂದೆಯ ಎದೆ ಅಭಿಮಾನದಿಂದ ಹಿಗ್ಗಿದ್ದು ಸುಳ್ಳಲ್ಲ. ಅವಳು ಕೆಲಸದಲ್ಲೂ ಅದೇ ಶ್ರದ್ಧೆ ತೋರಿಸಿ ಬೇರೆ ದೇಶ ಕೆಲಸದ ನಿಮಿತ್ತ ಸುತ್ತಿ ಬಂದಾಗಲಂತೂ ಮಗಳ ಮೇಲಿನ ಅಭಿಮಾನ ವಿಪರೀತವಾಗಿತ್ತು. ಲಕ್ಷಾಂತರ ಸಂಬಳ ತರುವ ಮಗಳ ಮದುವೆಯ ವಿಚಾರವೂ ಇಲ್ಲವೇ ಅಂತ ಬಕುಲ ಎಚ್ಚರಿಸುತ್ತಿದ್ದಳು.
ಮಗಳಿಗೆ ಅಂತಿಂತಹ ಸಂಬಂಧ ಬೇಡ ಅವಳ ಓದಿಗೆ ,ಸ್ಟೇಟಸ್ಸಿಗೆ ತಕ್ಕ ವರ ಇರಬೇಕು ಇದು ಮಾಲಿನಿ ತಂದೆಯ ವಾದ. ಹೀಗಾಗಿ ಯಾವುದೇ ಸಂಬಂಧದ ಪ್ರಸ್ತಾಪ ಬಂದಾಗ ತಾವೇ ಮೊದಲಾಗಿ ಅವರ ಬಗ್ಗೆ ವಿಚಾರಿಸುತ್ತಿದ್ದರು ಹುಡುಗನ ಜೊತೆ ಮಾತಾಡುತ್ತಿದ್ದರು ತಮಗೆ ಒಪ್ಪಿಗೆ ಅನಿಸಿದಾಗ ಮಾತ್ರ ಮಗಳ ಹತ್ತಿರ ಅದರ ಪ್ರಸ್ತಾಪ ಮಾಡುತ್ತಿದ್ದರು. ಇವರು ಒಪ್ಪಿದ ಸಂಬಂಧ ಮಗಳು ಒಪ್ಪಲೇಬೇಕು ಅನ್ನುವ ಹಟ ಇರಲಿಲ್ಲ. ಅವಳ ಆಯ್ಕೆಯ ಸ್ವಾತಂತ್ರ ಅವಳದು ಇದು ಅವರ ನಿಲುವಾಗಿತ್ತು. ಇವರಿಗೆ ಮನಸ್ಸು ಬಂದ ಎಷ್ಟೋ ವರಗಳ ಮಾಲಿನಿ ರಿಜೆಕ್ಟ ಮಾಡಿದ್ದಳು.ಅವಳು ಕೊಡುವ ಕಾರಣ ಅವಳ ತರ್ಕ ಎಲ್ಲದಕೂ ಅವರು ಹುಂಗುಡುತ್ತಿದ್ದರು.
ಮಾಲಿನಿಯ ಶರತ್ತುಗಳೂ ಇದ್ದವು. ಹುಡುಗ ತನಗಿಂತ ಜಾಸ್ತಿ ಓದಿರಬಾರದು ಹಾಗೆಯೇ ತನಗಿಂತ ಕಮ್ಮಿನೂ ಓದಿರಬಾರದು. ಮೊದಲಿಂದನೇ ಮಾಲಿನಿ ಬಾಹ್ಯ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಹರಿಸಿದವಳಲ್ಲ. ಕನ್ನಡಕ ತನಗಿದೆ, ನೋಡಲು ಸಹ ಸುಂದರಿ ತಾ ಅಲ್ಲ ಎಂಬುದರ ಅರಿವು ಇತ್ತು. ಆದರೆ ತನ್ನ ನೋಡಲು ಬಂದ ಹುಡುಗ ಮಾತ್ರ ಸರ್ವಗುಣ ಸಂಪನ್ನನಿರಬೇಕು ಇದು ಅವಳ ಬಯಕೆ.
“ಅಪ್ಪ ಆ ಹುಡುಗನಲ್ಲಿ ಕನಸುಗಳೇ ಇಲ್ಲ..”, “ ಕರಿಯರ್ ಮೈಂಡೆಡ್ ಅನಿಸಲಿಲ್ಲ..”,ʼತಂದೆತಾಯಿಯ ಮೇಲೆ ಅವಲಂಬನೆ ಅವನದು” “ಮಾಡರ್ನ ಥಿಂಕಿಂಗ್ ಇಲ್ಲ ಅವನಲ್ಲಿ” ಹೀಗೆ ಮಾಲಿನಿ ಮುಂದಿಡುವ ತರ್ಕಗಳಿಗೆ ಅವಳ ತಂದೆ ಮುಗುಳು ನಗುತ್ತಿದ್ದರು ಹಾಗೆಯೇ ಸ್ಪಷ್ಟವಾಗಿ ತನ್ನ ನಿಲುವು ಹೇಳುವ ಮಗಳ ಕುರಿತು ಅಭಿಮಾನ ಪಡುತ್ತಿದ್ದರು. “ನೋಡೇ ಮಾಲಿನಿ ಹೇಳೋದು ಎಷ್ಟು ನಿಖರವಾಗಿದೆ.ನನಗೂ ಆ ಅನುಮಾನ ಬಂದಿತ್ತು ಅವನ ಮೇಲೆ” ಅಂತ ಬಕುಲಾಳ ಜೊತೆ ಚರ್ಚಿಸುತ್ತಿದ್ದರು.
ಬಕುಲಾಗೋ ಧರ್ಮ ಸಂಕಟ. ಮಧುವಿನ ನಂತರ ನಾಲ್ಕುವರ್ಷಕ್ಕೆ ಹುಟ್ಟಿದವಳು. ಮಧು ಕಾಲೇಜಿನಲ್ಲಿ ಲೆಕ್ಚರರ್. ಅವನಿಗೆ ಪ್ರಸ್ತಾಪಗಳು ಬರುತ್ತಿದ್ದವು ನಿಜ ಆದರೆ ಅವಳದಾಗಲಿ ಇದು ಅವನ ಮಾತು. ಸುಮಾರು ಒಂದೂವರೆ ವರ್ಷದಿಂದ ಮಾಲಿನಿ ಬಂದ ಹುಡುಗರಲ್ಲಿ ಐಬು ಹುಡುಕುವುದರಲ್ಲಿಯೇ ಕಳೆದರೆ ಹೇಗೆ… ಸಾಲದ್ದಕ್ಕೆ ಅವಳ ಅಪ್ಪನ ಬೆಂಬಲ ಬೇರೆ. ಅನೇಕ ಸಲ ಬಕುಲಾ ಗಂಡನಿಗೆ ಅನೇಕ ಸಲ ತಿಳಿ ಹೇಳಲು ಹೋಗಿ ಉಪದೇಶ ಕೇಳಬೇಕಾಗಿತ್ತು. ಮಗಳಿಗೆ ತಿಳಿಸಿ ಹೇಳುವ ಗೊಡವೆಗೆ ಅವಳು ಹೋಗಿರಲಿಲ್ಲ. ಸರೀಕರಲ್ಲಿ, ಸಂಬಂಧಿಕರಲ್ಲಿ ಇದೇ ಮಾತು “ಏನು ಮಾಲಿನಿ ಬಹಳ ಆರಿಸುತ್ತಾಳಂತೆ..ತನ್ನನ್ನ ಸುಂದರಿ ಅಂತ ತಿಳಕೊಂಡು ಭ್ರಮೆಯಲ್ಲಿದ್ದಾಳೆ ಬುದ್ಧಿ ಹೇಳು…” ಮೊನ್ನೆ ಮದುವೆಗೆಂದು ಹೋದಾಗ ಬಕುಲಾಳ ಅಣ್ಣ ಸುಬ್ರಾಯ ಅಂದ. ಎಷ್ಟೋ ಸಮಾರಂಭಗಳಿಗೆ ಬಕುಲಾ ಈಗೀಗ ಹೋಗುತ್ತಿಲ್ಲ. ಪ್ರಶ್ನೆಗಳು ಮುಜುಗರ ತರಿಸುತ್ತಿವೆ ಅವಳಿಗೆ. ಆದರೆ ಯಾರಿಂದ ಅವಳು ಚಿಂತೆಗೆ ಈಡಾಗಿದ್ದಾಳೊ ಅವರು ಅದೇ ಶೈಲಿ ಮುಂದುವರೆಸಿದ್ದಾರೆ. ಒಂದು ವೇಳೆ ಮಾಲಿನಿ ತನಗೆ ತನ್ನ ಕರಿಯರ್ ಮುಖ್ಯ ಈ ಮದುವೆಯ ಗೊಡವೆ ಬೇಡ ಅಂತ ಏನಾದರೂ ಹೇಳಿದ್ದರೆ ಬಕುಲಾ ಒಪ್ಪಿಬಿಡುವ ಹಂತ ತಲುಪಿದ್ದಳು. ಅಮಾಯಕ ಮಧು ಹೀಗೆ ಇವಳ ಹಟದ ಸಲುವ ವಾಗಿ ಮದುವೆಯಾಗದೇ ಸುಮ್ಮನಿರುವುದು ನೋಡಿದರೆ ಸಂಕಟವಾಗುತ್ತದೆ. ಬಕುಲಾಳ ಸಂಕಟ ಕೇಳುವುದು ಗಂಡನ ಕಿವುಡು ಕಿವಿಗಳಿಗೆ ಮಾತ್ರ.
ಒಮ್ಮೆ ಓರ್ವ ಬ್ರೋಕರ ಎದಿರು-ಬದಿರು ಸಂಬಂಧದ ಪ್ರಸ್ತಾಪ ತಂದಿದ್ದ. ಸೊಸೆಯನ್ನು ಬರಮಾಡಿಕೊಳ್ಳುವ ಮನೆಯಿಂದಲೇ ಮಗಳಿಗೆ ಮದುವೆಮಾಡಿ ಕಳಿಸುವುದು. ಹುಡುಗ ಬರೀ ಬಿಕಾಮ್ ಆದರೆ ಬ್ಯಾಂಕಿನಲ್ಲಿ ನೌಕರಿ..ಯಥಾಪ್ರಕಾರ ಮಾಲಿನಿಯದು ನಿರಾಕರಣೆ. ಅದೆಲ್ಲಿತ್ತೋ ರೋಷ ಗಂಡ, ಮಾಲಿನಿ ಇಬ್ಬರ ಮುಂದೆಯೂ ಕೂಗಾಡಿದಳು ಬಕುಲಾ. ಅದುವರೆಗೂ ತಡೆಹಿಡಿದಿದ್ದ ಸಿಟ್ಟು, ಅಸಹನೆ ಹೊರಹಾಕಿದಳು. ಇವಳ ಸಲುವಾಗಿ ಮಧು ಮದುವೆಯಾಗದೇ ಉಳಿಯುತ್ತಾನೆ ವಿಚಾರ ಮಾಡಿ ಎಂದು ಗಂಡನಿಗೆ ಜೋರುಮಾಡಿದಳು.
ಅದೇನೋ ಗೊತ್ತಿಲ್ಲ ಮಾಲಿನಿಯ ತಂದೆ ಕೇಶವ ಹೆಂಡತಿಯ ಈ ಆಕ್ರೋಶದ ಮಾತಿಗೆ ಮಣಿದರು. ಮೊದಮೊದಲಿನ ಅಭಿಮಾನ ಮಗಳ ಮೇಲಿನದು ಕರಗುತ್ತಿತ್ತು. ಮದುವೆ ಬೇಡ ಅಂದಾದರೆ ಓಕೆ ಆದರೆ ಮಗನ ಮೌನದ ದುರುಪಯೋಗ ಮಾಡಿಕೊಂಡೆನೇ ಈ ಅಳುಕು ಅವರಿಗೆ ಕಾಡಿತು. ಆದರೆ ಮಾಲಿನಿ ತಿರುಗಿಬಿದ್ದಳು ಬೇಕಾದರೆ ಅಣ್ಣ ಮದುವೆಯಾಗಲಿ ನಾ ಒಲ್ಲೆ ಅನ್ನುವ ಅವಳ ಹಟ. ಅಪ್ಪ ಮಗಳ ನಡುವೆ ವಾದವಾದವು..ಜಗಳದ ವರೆಗೂ ಹೋಯಿತು. ಪರಿಣಾಮ ಕೇಶವರ ಎದೆನೋವು..ತೋರಿಸಲಾಗಿ ಆಪರೇಶನ ಅಗತ್ಯ ಅಂತ ಡಾಕ್ಟರು ಹೇಳಿದರು. ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದಾಗಲೂ ಮಗಳ ಜೊತೆ ಸರಿಯಾಗಿ ಮಾತಾಡಲಿಲ್ಲ…ಗಂಡನ ಈ ಸ್ಥಿತಿಗೆ ಮಗಳೇ ಕಾರಣ ಅಂತ ಬಕುಲಾ ಸಹ ದೂರಿದಳು. ಎರಡೂ ಕಡೆಯ ದಾಳಿಯಿಂದ ಮಾಲಿನಿ ಕಂಗೆಟ್ಟಳು. ತನ್ನ ತಾ ಅವಲೋಕನ ಮಾಡಿಕೊಂಡಳು..ಕೊನೆಗೆ ಅಪ್ಪನ ಜೊತೆ ತನಗೆ ಒಪ್ಪಿಗೆ ಇದೆ ಅಂತ ಸೂಚಿಸಿದಳು. ಆದರೆ ಈ ಸಂತಸ ಅನುಭವಿಸಲು ಕೇಶವ ಬಹಳ ದಿನ ಬದುಕಿರಲಿಲ್ಲ. ಅಂತೆಯೇ ಆ ಬ್ರೋಕರ ಸೂಚಿಸಿದ ಸಂಬಂಧದ ವಿವಾಹ ಆಗಿಹೋಗಿತ್ತು. ಅಂತಹುದೇ ಯಾವುದಾದರೂ ಇದ್ದಾಗ ಮತ್ತೆ ಸಂಪರ್ಕಿಸುವುದಾಗಿ ಅವ ಹೇಳಿದ. ಬಕುಲಳ ಚಿಂತೆ ಮತ್ತೆ ಸುರುಆಯಿತು.
ಅದಾದ ಕೆಲವೇ ದಿನಗಳಲ್ಲಿ ಮನೆಗೆ ಬಂದ ಬ್ರೋಕರ ಒಂದು ಪ್ರಸ್ತಾಪ ತಂದಿದ್ದ.ಮೈಸೂರಿನ ಸಂಬಂಧ ಹುಡುಗನಿಗೆ ಕಸಿನ್ ಒಬ್ಬಳಿದ್ದಾಳೆ.. ಕೈ ಸ್ವಲ್ಲ ಮೊಂಡು ಅದೂ ಬಲಗೈ ಆ ವಿಕಲತೆಯ ನಡುವೆಯೂ ಅವಳು ಹೈಸ್ಕೂಲಿನಲ್ಲಿ ಶಿಕ್ಷಕಿ, ಬಹಳಷ್ಟು ಸಂಬಂಧಗಳು ಅವಳ ಈ ವಿಕಲತೆಗೆ ಹಿಂದೆಸರಿದಿವೆ. ಮಾಲಿನಿಯ ವರ ಕಾಲೇಜಿನಲ್ಲಿ ಲೆಕ್ಚರರ್ ಆಸ್ತಿ ಇದ್ದ ಒಳ್ಳೆಯ ಮನೆತನ. ಎಲ್ಲ ಕೇಳಿಸಿಕೊಂಡ ಮಧು ಅವಳನ್ನು ತಾ ಮದುವೆಯಾಗುವುದಾಗಿ ಸಾರಿದ. ಮಾಲಿನಿ ಅಣ್ಣನ ಜೊತೆ ಮಾತಾಡಿದಳು ಈ ತ್ಯಾಗ ಇತ್ಯಾದಿ ಸೆಂಟಿಮೆಂಟು ಇದ್ದರೆ ತೆಗೆದುಹಾಕು ಅಂತ ಹೇಳಿದಳು. ಆದರೆ ಮಧು ತನ್ನ ನಿರ್ಧಾರಕ್ಕೆ ಅಚಲನಾಗಿ ನಿಂತಿದ್ದ.ಸರಿ ಒಂದು ಶುಭಮುಹೂರ್ತದಲ್ಲಿ ಒಂದೆ ಮಂಟಪದಲ್ಲಿ ಮದುವೆಯಾತು. ಸೊಸೆ ಬಂದಳೆಂಬ ಹಿಗ್ಗಿಗಿಂತ ಮಾಲಿನಿಯ ಮದುವೆಯಾಗಿದ್ದು ಬಕುಲಳಿಗೆ ಹೆಚ್ಚು ಸಂತಸತಂದಹಾಗಿತ್ತು.
ಶ್ರೀಕರ ಸ್ವಭಾವತಃ ಸೌಮ್ಯ. ಚಿಕ್ಕಪ್ಪನ ಮಗಳು ರಾಧಾ ಈಗ ಮದುವೆಯಾಗಿ ಖುಷಿಯಾಗಿರುವುದು ಅವನಿಗೆ ನೆಮ್ಮದಿ ತಂದಿದೆ. ಅವನ ಚಿಕ್ಕಪ್ಪ ಚಿಕ್ಕಮ್ಮ ಇಬ್ಬರೂ ಅಪಘಾತದಲ್ಲಿ ಹೋದವರು ರಾಧಾಳ ಜವಾಬ್ದಾರಿ ಇವರ ಮೇಲೆ ಹೊರಿಸಿ. ರಾಧಾಳಿಗೆ ನೋವಾಗಬಾರದು ಇದು ಶ್ರೀಕರ ಯಾವಾಗಲೂ ವಹಿಸುತ್ತಿದ್ದ ಕಾಳಜಿ. ಅವಳ ಕೈ ಊನ ಅವಳಿಗೆ ಮಾನಸಿಕವಾಗಿ ಕುಗ್ಗಿಸದಿರಲಿ ಅಂತ ಸದಾ ಪ್ರೋತ್ಸಾಹ ಕೊಡುತ್ತಿದ್ದ. ಮಾಲಿನಿಯನ್ನು ಭೇಟಿಯಾದಾಗಲೂ ರಾಧಾಳ ಬಗ್ಗೆಯೇ ಮಾತಾಡಿದ್ದ. ಮೊದಲಿಂದಲೂ ಯಾವುದೇ ಮಹತ್ವಾಕಾಂಕ್ಷೆ ಇರದ ಅವ ಪಾಲಿಗೆ ಬಂದದ್ದನ್ನು ಆನಂದಿಸುತ್ತಿದ್ದ. ಮದುವೆಯಾಗಿ ಮನೆತುಂಬಿದ ಮಾಲಿನಿ ಅವನ ಮನತುಂಬಿರಲಿಲ್ಲ..ಈ ನೋವು ಅವನಲ್ಲಿತ್ತು ಆದರೂ ತನ್ನ ತಾಯಿಯ ಎದುರು ಹೇಳಲಾಗದೆ ಸುಮ್ಮನಿರುತ್ತಿದ್ದ. ಶ್ರೀಕರನ ತಾಯಿಗೂ ಸೊಸೆಯ ಮೇಲೆ ಹೆಚ್ಚಿನ ಅಪೇಕ್ಷೆ ಇರಲಿಲ್ಲ. ಬ್ರೋಕರ ಹೇಳಿದ್ದ ಸ್ವಲ್ಪ ಧಿಮಾಕಿನವಳು ಅಂತ. ಮಗನಿಗಿಂತ ಹೆಚ್ಚಿಗೆ ಸಂಬಳ ತರತಿದ್ದಳು. ಸದಾ ಕೆಲಸ ಶನಿವಾರವೂ ಬಿಡುವು ಇರುತ್ತಿರಲಿಲ್ಲ ಅವಳಿಗೆ. ಅಡಿಗೆಯವಳಿಗೆ ಸೊಸೆ ಇಷ್ಟಪಟ್ಟಿದ್ದನ್ನು ಮಾಡಿಹಾಕಲು ಸೂಚನೆ ಕೊಟ್ಟ ಶ್ರೀಕರನ ತಾಯಿ ಪುಸ್ತಕ ಓದುತ್ತಲೋ ಅಥವಾ ಟಿವಿ ನೋಡುತ್ತಲೋ ಇರುತ್ತಿದ್ದರು. ಹಾಗಂತ ಮಾಲಿನಿ ಮಾತಾಡುತ್ತಿರಲಿಲ್ಲ ಅಂತಲ್ಲ ತನ್ನ ಕೆಲಸದ ಬಗ್ಗೆ, ರಾಜಕೀಯದ ಬಗ್ಗೆ ಸಾಮಾಜಿಕ ಜಾಲತಾಣಗಳ ಬಗ್ಗೆ ಹೀಗೆ ಅವಳ ಆಸಕ್ತಿ ಇರುವ ವಿಷಯ ಎಲ್ಲ ಹಂಚಿಕೊತಿದ್ದಳು.
ಅತ್ತೆ ಸೊಸೆ ಹೊಂದುಕೊಂಡಿದ್ದು ಶ್ರೀಕರನಿಗೆ ಖುಷಿ ವಿಷಯವಾದರೂ ಮಾಲಿನಿ ಯಾಕೆ ತನ್ನೊಡನೆ ಬೆರೆಯುತ್ತಿಲ್ಲ ..ಇದು ಅವನಿಗೆ ಕಾಡುವ ಸಂಗತಿ. ಒಂದೇ ಹಾಸಿಗೆಯಲ್ಲಿ ಮಲಗಿದರೂ ದೂರ ದೂರ ಇರುವ ಸ್ಥಿತಿ. ಅವಳಿಗೆ ಕೆಲಸದ ಒತ್ತಡ ಹೀಗಾಗಿ ಹನಿಮೂನಿಗೂ ಅವರು ಹೋಗಿರಲಿಲ್ಲ. ಅನೇಕ ಸಲ ಅವಳೊಡನೆ ಮಾತಾಡಲು ಪ್ರಯತ್ನ ಮಾಡಿದ್ದಾನೆ ಅವಳ ಒಳಗನ್ನು ಅರಿಯಲು. ಹೊಂದಿಕೊಳ್ಳಲು ವೇಳೆ ಬೇಕು ಇಷ್ಟಕ್ಕೂ ನಮಗೇನು ವಯಸ್ಸಾಗಿಲ್ಲ.ಒಂದು ವರ್ಷವಾದರೂ ಸುಮ್ಮನಿರೋಣ ಅವಳ ಸಲಹೆ. ಈಗಿನ ದಿನಗಳಲ್ಲಿ ಅದೆಷ್ಟೋ ಸಾಧನಗಳಿವೆ.. ಗಂಡಸಿಗೂ ಅನುಕೂಲಕರ ಅಂತೆಯೇ ಹೆಂಗಸಿಗೂ ಸೇಫ್ ಆಗಿರುವ ಮಾತ್ರೆಗಳಿವೆ ಅವನ್ನು ಬಳಸಬಹುದಲ್ಲ… ಅವನ ಪ್ರಶ್ನೆಗೆ ಅವಳು ಸಿಡಿದಿದ್ದಳು. ಅದ್ಯಾಕೆ ಒತ್ತಾಯ ಮಾಡೋದು ಗಂಡ ಅನ್ನುವ ಸಲುವಾಗಿ ಹೀಗೆ ಹಕ್ಕು ಸ್ಥಾಪಿಸೋದು ಸರಿಯೇ ಅವಳ ವಿತಂಡ ವಾದ. ಮಾತು ಬೆಳೆಸಿದರೆ ಮತ್ತಷ್ಟು ದೂರವಾಗುತ್ತದೆ ಸಮನ್ವಯ…. ಇದು ಅವ ಕಂಡುಕೊಂಡ ಸತ್ಯ. ಕಾಯುವಿಕೆ ಅನಿವಾರ್ಯ ಅಂತ ಅವ ಭಾವಿಸಿದ ಹಾಗೆಯೇ ನಡೆದುಕೊಂಡ.
ಮಾಲಿನಿಯ ವರ್ತನೆಯಲ್ಲಿ ಏನೋ ಬದಲಾವಣೆ ಗಮನಿಸಿದ ಶ್ರೀಕರ. ಹೀಗೆ ಅಂತ ಬೊಟ್ಟುಮಾಡಿ ತೋರಿಸಲಾಗದಿದ್ದರೂ ಅವಳಲ್ಲಿನ ಆ ಬದಲಾವಣೆ ಅವನ ಅರಿವಿಗೆ ಬಂತು. ಅವಳು ಊರಿಂದ ಬಂದ ಮರುದಿನ ಶ್ರೀಕರನ ತಾಯಿ ತಮ್ಮ ಮಂಡಳಿ ವತಿಯಿಂದ ಎರಡುದಿನ ಯಾತ್ರೆಗೆ ಹೊರಟುನಿಂತರು. ಅಂದು ಕಾಲೇಜ ಮುಗಿಸಿ ಮನೆಗೆ ಬಂದವನಿಗೆ ಎದಿರುಗೊಂಡದ್ದು ನಗುಮುಖದ ಮಾಲಿನಿ. ಅವಳು ಕೊಟ್ಟ ಕಾಫಿಯ ರುಚಿ ಅನುಭವಿಸುತ್ತಿದ್ದವನಿಗೆ ಎಲ್ಲಾದರೂ ಹೊರಗಡೆ ಹೋಗೋಣ..ಮಾತಾಡುವುದಿದೆ ಅಂತ ಅವಳು ಹೇಳಿದಾಗ ಅಚ್ಚರಿ.
ಮನೆಯ ಹತ್ತಿರವೇ ಇದ್ದ ಪಾರ್ಕಿನ ಬೆಂಚಿನ ಮೇಲೆ ಕುಳಿತವನಿಗೆ ಪಕ್ಕದಲ್ಲಿ ಕುಳಿತವಳು ಹೊಸದಾಗಿ ಕಂಡಳು. ಇವನೆಡೆಗೆ ನೇರವಾಗಿ ನೋಡುತ್ತಲೇ ನುಡಿದಳು. ಅದುವರೆಗೂ ತಡೆಹಿಡಿದ ಮಾತುಗಳು ಎಗ್ಗಿಲ್ಲದೆ ಹರಿದವು ಅವಳ ಮುಖದಿಂದ. ಅವ ಮೌನವಾಗಿ ಆಲಿಸುತ್ತಿದ್ದ.
“ಹೇಳು ಶ್ರೀ ಏನನಿಸಿತು ನಿನಗೆ ನಾ ಒಂದು ಭ್ರಮೆಯಲ್ಲಿಯೇ ಇದ್ದೆ ಈಗ ಮತ್ತೆ ಮರಳಿ ಬೇರೆ ದಾರಿ ಹಿಡಿಯುವುದಿದೆ ನನಗೆ.. ನನ್ನ ಮಟ್ಟಿಗೆ ಹೇಳುವುದಾದರೆ ನಾ ಅಹಮಿಕೆಯ ಕೋಟೆಯಲ್ಲಿ ಬಂಧಿಯಾಗಿದ್ದೆ. ನಾನೇನೂ ರೂಪವತಿ ಅಲ್ಲ ಆದರೆ ನಾ ಜಾಣೆ ಅನ್ನುವ ಗರ್ವ…ಕೇವಲ ನನ್ನ ಜಾಣತನದಿಂದನೇ ನಾ ಗಳಿಸಿದ ಹೆಸರು ನನಗೆ ಒಂದು ಅಹಮಿಕೆ ಕೊಟ್ಟಿತು. ಕೇವಲ ಅಡ್ಜಸ್ಟಮೆಂಟಿಗೆ ನಿನ್ನ ಜೊತೆ ಮದುವೆಯಾದೆ ಅಂತ ಬೇರೆ ಬೇಸರ..ಅನೇಕ ಕಾರಣ ..ಆದರೆ ಒಂದು ಮಾತಿದ ನೀ ಯಾಕೆ ಸುಮ್ಮನಾದೆ ಅಂದರೆ ನೀ ಗಂಡಸು ಅನ್ನುವ ಸಂಗತಿ ಸಹಜವಾಗಿಯೇ ಕೆರಳಿಸಬೇಕಿತ್ತು..ನನ್ನ ಎಷ್ಟೊ ಕೊಲಿಗ್ ಗ ಳು ತಮ್ಮ ಗಂಡಂದಿರ ಪ್ರತಾಪ ಹೇಳತಿರತಾರೆ ಹಾಗೆ ಹೇಳುವಾಗ ಅವರ ಮಾತಿನಲ್ಲಿ ಹೊಮ್ಮುವ ತಿರಸ್ಕಾರ ಗಮನಿಸಿದ್ದೆ..ಪಕ್ಕದಲ್ಲಿಯೇ ಮಲಗಿರುತ್ತಿದ್ದೆ ನಾನು ಒಂದು ಸಲವೂ ತಬ್ಬಲಿಲ್ಲ ನೀನು..ಕೆಲವು ಸಲ ನೀನು ಹೀಗೇ ಇರಬಹುದೇನೋ ಎಂಬ ಸಂಶಯವೂ ಬಂದಿತ್ತು…”
ಅವಳ ಕೈ ತನ್ನ ಕೈಯಲ್ಲಿ ತಗೊಂಡವ ಅಮುಕಿದ. ಆ ಸ್ಪರ್ಶ ನೂರು ಮಾತು ಹೇಳಿತ್ತು.
“ನೀ ಅನ್ನುವುದೇನೋ ನಿಜ.. ಮೊದಲಿಂದಲೂ ನಾ ಹಾಗೆಯೇ ದಕ್ಕಿದಷ್ಟು ಮಾತ್ರ ನನ್ನದು ಅಂತ ತಿಳಿದುಕೊಂಡವ. ಯಾಕೋ ಈ ಮದುವೆ ನಿನಗೆ ಇಷ್ಟವಿಲ್ಲ ಅಂತ ಮೊದಲ ದಿನವೇ ಅನಿಸಿತ್ತು.ರಾಧೆಯ ಬಾಳು ಹಸನಾಗಲಿ ಈ ಸಂಗತಿ ಮನದಲ್ಲಿಟ್ಟುಕೊಂಡೇ ಒಪ್ಪಿದ್ದೆ. ನಿನ್ನ ತಾಯಿ ಮದುವೆಯ ಗಡಿಬಿಡಿಯ ನಡುವೆಯೂ ಮಾತಾಡಿದ್ದರು ನಿನ್ನ ಸ್ವಭಾವದ ಬಗ್ಗೆ ಹೇಳಿದ್ದರು ಒಂಥರಾ ಪ್ರಿಪೇರ ಆಗಿದ್ದೆ ನಾನು. ನೀ ಕರಗಬಹುದು ಅಂತ ಕಾಯುತ್ತಲೇ ಬಂದೆ..ಕೊನೆಗೆ ಗೆದ್ದೆ.”
ಅಂದು ರಾತ್ರಿ ತಾ ತಂದ ಮಲ್ಲಿಗೆ ಮಾಲೆ ಧರಿಸಿ ಒಳಬಂದವಳು ಹೊಸದಾಗಿ ಕಂಡಳು. ಆ ರಾತ್ರಿ ಮಧುರಮೈತ್ರಿಯ ಭಾಷ್ಯ ಬರೆದಿತ್ತು.
ಬೆಳಿಗ್ಗೆ ಅವಳಿಗೆ ಎಚ್ಚರವಾದಾಗ ಅವನಾಗಲೇ ಕಾಫಿ ತಯಾರಿಸಿದ್ದ. ಕೆದರಿದ ಮುಂಗುರಳ ನೇವರಿಸುತ್ತ ಕುಳಿತವಳಿಗೆ ಒಂದು ಹೂ ಮುತ್ತನೊತ್ತಿದ. ಅವಳ ನಳಿದೋಳು ಇವನಿಗೆ ಬಿಗಿದಪ್ಪಿತು. ಅವರ ನಡುವಿನ ಸಂಬಂಧ ಹೊಸ ಕತೆ ಬರೆಯುತ್ತಿತ್ತು.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ