ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನನಗಿಂತ ದೊಡ್ಡದಾಗಿಬಿಟ್ಟೆಯಲ್ಲಾ!!

ಅನಂತ ಕುಣಿಗಲ್
ಇತ್ತೀಚಿನ ಬರಹಗಳು: ಅನಂತ ಕುಣಿಗಲ್ (ಎಲ್ಲವನ್ನು ಓದಿ)

ಪ್ರತಿ ದಿನ ಸಾವಿನ ಸುದ್ದಿ ಕೇಳಿ
ಭಯವಾಗುತ್ತಿತ್ತು
ನನಗ್ಯಾರು ಮಕ್ಕಳಿಲ್ಲವೆಂದು
ಏಕಾಂತ ಕಾಡುತ್ತಿತ್ತು
ಅದಕ್ಕಾಗಿ ತುಂಬಾ ಹುಡುಕಾಡಿದೆ
ನನ್ನೊಂದಿಗಿರಲು ಯಾರೂ ಒಪ್ಪಲಿಲ್ಲ
ನಾಲ್ಕು ಪುಟ್ಟ ಗಿಡಗಳು ಸಿಕ್ಕವು
ಹೊಂದಾಣಿಕೆ ಇಲ್ಲದೆಯೂ ಬಾಳಲು

ಅಷ್ಟು ದಿನ ಒಂಟಿಯಾಗಿ ಕಳೆದಿದ್ದರಿಂದ
ನನ್ನ ಮೇಲೆ ನನಗೆ ಅಸಹ್ಯ ಅನಿಸಿತ್ತು
ಆದರೆ ಯಾರ ಬಳಿ ಹೇಳಬೇಕಿತ್ತು?
ನನಗೂ ಬಿಡುವಿಲ್ಲದೆ,
ದುಡಿಮೆಯಲ್ಲಿ ನಿರಂತರವಾಗಿ ಓಡಿದ್ದೆ
ಈಗ ನಡೆಯಲೂ ಶಕ್ತಿ ಇಲ್ಲ
ಎಲ್ಲದರ ನಡುವೆ ನಾನೇ ಊತು ಹೋಗಿದ್ದೆ
ಯಾವುದರ ಪರಿವೆಯಿಲ್ಲದೆ
ಈಗ ಬಾಲ್ಯ ಬೇಕೆನಿಸುತ್ತಿದೆ
ಸಾವು ಹತ್ತಿರವಾಗುತ್ತಿದೆಯಲ್ಲಾ..

ನನ್ನ ಅಸಹಾಯಕ ಸ್ಥಿತಿಯನ್ನು
ಯಾರೂ ಗುರುತಿಸಲಿಲ್ಲ
ಹೆಚ್ಚಾಗಿ ನಾನು ಬೆರೆಯಲೇ ಇಲ್ಲ ಬಿಡಿ
ಗಳಿಸಿದ್ದೆಲ್ಲವನ್ನೂ ಬಿಟ್ಟು ಬಂದೆ
ಈಗ ಪರವಾಗಿಲ್ಲ,
ಉಸಿರಾಡುತ್ತಿದ್ದೇನೆ
ನನಗೆ ಸಿಕ್ಕ ಗಿಡಗಳಿಂದ

ಅದೆಷ್ಟು ಬೇಗನೆ ಬೆಳೆದುಬಿಟ್ಟವು
ನನಗೆ ಕನಸಲ್ಲಿಯೂ ತಿಳಿಸಿರಲಿಲ್ಲ
ನಾನೇ ಚಿಕ್ಕವನೆಂಬಂತೆ ಕಾಣುತ್ತಿದ್ದೇನೆ
ನಾನೇ ನೆಟ್ಟು, ನೀರುಣಿಸಿದ ಮರಗಳ ಕೆಳಗೆ
ಈಗ ಆವ ಚಿಂತೆಯೂ ಇಲ್ಲ
ಸಾಯುವ ಯೋಜನೆಯನ್ನು
ಮುಂದೂಡಲಾಗಿದೆ
ಸಂತಸದ ಹಬ್ಬ ನಡೆದಿದೆ ಪ್ರತಿದಿನವೂ
ಹಸಿರು, ನೆರಳು, ಗಾಳಿ, ತಂಪು, ಮಧುರ
ಹಕ್ಕಿಗಳ ಕಲರವ, ಮೊರೆತ, ಹಣ್ಣು-ಬೇರು
ಎಲ್ಲವೂ ನನ್ನದಾಗಿವೆ;
ನನಗೆ ಸಿಕ್ಕ ನಾಲ್ಕು ಪುಟ್ಟ ಗಿಡಗಳಿಂದ
ಈಗ ನಾನೇ ಶ್ರೀಮಂತ

ಆದರೂ ಒಂದು ಹಿಂಜರಿಕೆಯಿದೆ
ನಾನೇ ನೆಟ್ಟ ಮರಗಳ ಕೆಳಗೆ
ನಾನೀಗ ಚಿಕ್ಕವನಾಗಿದ್ದೇನೆ;
ದೊಡ್ಡವರಾಗಲು ಎಷ್ಟು ಉದಾರಿಗಳಾಗಬೇಕಲ್ಲವೇ??
ಈ ಮರಗಿಡಗಳ ಥರ!