- ನನ್ನಕ್ಕ ನಿಲೂಫರ್ - ಆಗಸ್ಟ್ 7, 2021
‘ಹಿಜಬ್ ನಮ್ಮ ಅಧೋಗತಿಯ ಮೊದಲ ಹೆಜ್ಜೆ,’ ಎಂದು ಮುಂತಾಗಿ ಘೋಷಿಸುತ್ತ ಚೌಕಕ್ಕೆ ಸುತ್ತುಬರುತ್ತಿದ್ದ ಗುಂಪನ್ನು ನಾನು ಇಲ್ಲೇ ಈ ಬದಿಯಲ್ಲಿ ನಿಂತು ನೋಡುತ್ತಿದ್ದೆ. ಅಕ್ಕ ಆಚೆ ಬದಿಯಿಂದ, ಆ ಬರ್ಗರ್ ಅಂಗಡಿ ಇದೆಯಲ್ಲ, ಅಲ್ಲೇ ಬಸ್ಸಿನಿಂದ ಇಳಿದು ನನ್ನತ್ತ ಬರುತ್ತಿದ್ದಳು. ಅವಳ ಆ ಕೆಂಪು ಅಂಗಿ ನನ್ನ ಕಣ್ಣಿಗೆ ಬಿದ್ದಿತ್ತು.
ಮಿತ್ರಾ ವೆಂಕಟ್ರಾಜ್ ಅವರ “ನನ್ನಕ್ಕ ನಿಲೂಫರ್” ಕಥೆಯಿಂದ .
‘ನನಗೆ ಗೊತ್ತಿದ್ದ ಒಬ್ಬರ ಹಾಗೆ ನೀವು ಕಾಣುತ್ತಿದ್ದೀರಿ. ನಿಮ್ಮ ಮುಖಚರ್ಯೆ, ನಡೆಯುವ ರೀತಿ, ನಿಮ್ಮ ಬೆನ್ನು…. ಒಟ್ಟಾರೆ ಆಶ್ಚರ್ಯವಾಗುವಷ್ಟು ಹೋಲಿಕೆ.’ ಎಂದಿದ್ದಳು ಅವಳು.
ಈಗ ಸುಮಾರು ಏಳೆಂಟು ವರ್ಷಗಳ ಹಿಂದಿನ ಮಾತಿದು. ಇಸ್ತಾಂಬೂಲಿನ ಗಲಾಟಾ ಗೋಪುರದ ರೆಸ್ಟಾರೆಂಟಿನಲ್ಲಿ ಕಾಫಿ ಕುಡಿಯುತ್ತಿದ್ದಾಗ, ಅವಳು ನನ್ನ ಮೇಜಿನ ಹತ್ತಿರ ಬಂದು ತನ್ನ ಪರಿಚಯ ಮಾಡಿಕೊಂಡಿದ್ದಳು. ದಟ್ಟ ಕಪ್ಪು ಗುಂಗುರು ಕೂದಲು, ಕಾಡಿಗೆ ಹಚ್ಚಿದ ಕಪ್ಪು ಕಣ್ಣುಗಳು, ಸಣ್ಣ ಬಾಯಿ, ಮಾತನಾಡುವಾಗ ಉರುಟು ವರ್ತುಲವಾಗುತ್ತಿದ್ದ ನವಿರಾಗಿ ಬಣ್ಣ ಹಚ್ಚಿದ ಗುಲಾಬಿ ತುಟಿಗಳು.
ನನಗೆ ಏನು ಹೇಳಬೇಕೆಂದು ತಿಳಿಯದೆ, ‘ಹೌದೇ? ಆಶ್ಚರ್ಯ.’ ಎಂದಿದ್ದೆ.
‘ಓ, ಸ್ವರ ಸಹ ನಿಮ್ಮ ಹಾಗೆ!’ ಎಂದು ಹುಬ್ಬು ಮೇಲೆತ್ತಿ ಹೇಳಿದಳು. ‘ನೀವು ಬಾಲ್ಕನಿಯಲ್ಲಿ ನಿಂತು ಫೋಟೋ ತೆಗೆಯುತ್ತಿದ್ದಾಗ ನಾನು ನಿಮ್ಮನ್ನೇ ನೋಡುತ್ತಿದ್ದೆ.’
ಗಲಾಟಾ ಗೋಪುರದ ಮೆಟ್ಟಿಲು ಹತ್ತಿ ಮೇಲೆ ಬಂದವಳೇ ಕಾಲುನೋವನ್ನೂ ಲೆಕ್ಕಿಸದೆ ನಾನು ಸೀದಾ ಬಾಲ್ಕನಿಗೆ ಓಡಿದ್ದೆ. ಸುತ್ತಲಿನ ದೃಶ್ಯ ಕಣ್ಣು ತುಂಬುವಂತಿತ್ತು. ಮುಂದೆ ಹರಡಿದ್ದ ಬೊಸ್ಫೊರಸ್ ಕಡಲಮಾರ್ಗದ ಆಕರ್ಷಕ ನೀಲಿ ಬಣ್ಣಕ್ಕೆ ಸರಿಸಾಟಿಯಾಗಿ ಮೇಲೆ ವ್ಯಾಪಿಸಿದ್ದ ವಿಶಾಲ ಆಕಾಶದ ತಿಳಿ ನೀಲ; ಬೊಸ್ಫೊರಸಿನ ಎರಡೂ ಬದಿಗಳಲ್ಲಿ ಹೊಂಬಿಸಿಲು ತುಂಬಿದ ಕಟ್ಟಡಗಳು, ಮಧ್ಯ ಕಲ್ಲಸೇತುವೆ, ಮಸೀದಿಗಳ ಮಿನಾರಗಳು – ಎಲ್ಲವೂ ಚಿತ್ರ ಬಿಡಿಸಿದಂತಿದ್ದುವು. ಕಳೆದ ಎರಡು ದಿನಗಳಿಂದ ಇಸ್ತಾಂಬೂಲಿನ ಸುತ್ತಮುತ್ತ ನೋಡಿದ್ದ ಜಾಗಗಳನ್ನು ಗುರುತಿಸುತ್ತ ಎಷ್ಟೋ ಹೊತ್ತು ಅಲ್ಲೇ ನಿಂತಿದ್ದೆ. ಆಗ ಆಕೆ ನನ್ನನ್ನು ನೋಡಿದ್ದಿರಬೇಕು ಎಂದುಕೊಂಡೆ.
‘ಕಾಫಿ ಬೇಕೇ?’ ಎಂದು, ಪರಿಚಾರಕನನ್ನು ಕರೆದು ನನ್ನ ಕಪ್ಪಿಗೆ ಇನ್ನಷ್ಟು ಕಾಫಿ ಹಾಕಿಸಿದಳು.
ಅವಳ ಹೆಸರು ಪರ್ವೀನ್. ಶಾಲೆಯಲ್ಲಿ ಉಪಾಧ್ಯಾಯಿನಿಯಾಗಿ ಕೆಲಸ ಮಾಡುತ್ತಿದ್ದೇನೆಂದೂ, ಬೇಸಿಗೆಯ ಸಮಯ ಶಾಲೆಗೆ ರಜೆ ಇರುವಾಗ ಪ್ರವಾಸಿಗರಿಗೆ ಇಸ್ತಾಂಬೂಲ್ ತೋರಿಸುವ ಗೈಡ್ ಕೆಲಸ ಮಾಡುತ್ತೇನೆಂದೂ ಪರಿಚಯ ಮಾಡಿಕೊಂಡಳು. ಎಲ್ಲಿಗಾದರೂ ಹೋಗಬೇಕಾದರೆ ತಾನು ಕರೆದುಕೊಂಡು ಹೋಗಿ ತೋರಿಸುತ್ತೇನೆಂದೂ ಹೇಳಿದಳು.
ನಾನು ಆಫೀಸಿನ ಕೆಲಸದಲ್ಲಿ ಇಸ್ತಾಂಬೂಲಿಗೆ ಬಂದು ನಾಲ್ಕೈದು ದಿನಗಳಾಗಿದ್ದವು. ಮುಂಚಿನ ದಿನದ ಬೊಸ್ಫೊರಸ್ ಸಮುದ್ರಯಾನದಲ್ಲಿ ದೋಣಿಯ ಮೆಟ್ಟಿಲು ಹತ್ತುವಾಗ ನನ್ನ ಕಾಲಪಾದವು ತುಸುವೇ ತಿರುಚಿ ಹೋಗಿದ್ದು ಅದರ ನೋವು ಇತ್ತಾಗಿ, ಬೆಳಿಗ್ಗೆನ ಹೊತ್ತು ಆಫೀಸಿಗೆ ಹೋಗಿರಲಿಲ್ಲ; ಹೋಟೇಲಿನಲ್ಲಿಯೇ ವಿರಾಮಮಾಡಿದ್ದೆ. ಮಧ್ಯಾಹ್ನದ ಮೇಲೆ ನೀಲಿ ಮಸೀದಿಯನ್ನು ನೋಡಿಕೊಂಡು ನೇರವಾಗಿ ಮೊದಲೇ ನಿಗದಿಪಡಿಸಿದಂತೆ ಇಲ್ಲಿಗೆ ಬಂದಿದ್ದೆ. ಆಫೀಸಿನ ಸಂಗಾತಿಗಳಿಬ್ಬರು ಸ್ವಲ್ಪ ಹೊತ್ತಿನಲ್ಲಿ ನನ್ನನ್ನು ಸೇರಿಕೊಳ್ಳುವವರಿದ್ದರು. ಹತ್ತು-ಹದಿನೈದು ದಿನಗಳ ಕೆಲಸದ ಮೇಲೆ ಮುಂಬಯಿಯಿಂದ ಇಸ್ತಾಂಬೂಲಿಗೆ ಹೊರಡುವಾಗ ಎಲ್ಲರೂ ನನಗೆ ಆಶ್ವಾಸನೆ ಕೊಟ್ಟದ್ದು ಹಾಗೆಯೇ, ಅದು ಸುರಕ್ಷಿತ ದೇಶ, ಒಬ್ಬಳೇ ಸುತ್ತುವುದರಲ್ಲಿ ಏನೂ ತೊಂದರೆಯಿಲ್ಲ, ಎಂದು. ಇಲ್ಲಿಗೆ ಬಂದ ಮೇಲೆ ಇಲ್ಲಿನ ಸಹೋದ್ಯೋಗಿಗಳೂ ಅದನ್ನೇ ಅನುಮೋದಿಸಿದ್ದರಾಗಿ, ಆಫೀಸಿನ ಕೆಲಸಗಳ ನಡುವೆ ಕೆಲವು ಪ್ರವಾಸಿ ಸ್ಥಳಗಳನ್ನು ನೋಡಲು ಸಾಧ್ಯವಾಗಿತ್ತು.
‘ಈಗ ಹೇಗಿದೆ ಕಾಲು ನೋವು?’ ಎಂದು ಪರ್ವೀನ್ ಕಾಳಜಿ ತೋರಿಸಿದಳು.
ಅಷ್ಟರಲ್ಲಿ, ‘ದಾರಿಯಲ್ಲಿದ್ದೇವೆ, ಹತ್ತೇ ನಿಮಿಷದಲ್ಲಿ ಅಲ್ಲಿ,’ ಎಂದು ಸಹೋದ್ಯೋಗಿಗಳ ಸಂದೇಶ ಬಂತು. ಅವರು ಬಂದ ಮೇಲೆ ಪುನಃ ಬಾಲ್ಕನಿಗೆ ಹೋಗಿ ಫೋಟೋ ತೆಗೆಯುವುದಾಯಿತು. ಗಂಟೆ ಆರೂವರೆ ದಾಟುತ್ತಿದ್ದರೂ ಸಂಜೆಯ ಪ್ರಖರವಾದ ಬಿಸಿಲು ಬಾಲ್ಕನಿಯುದ್ದಕ್ಕೆ ಬಿದ್ದಿತ್ತು. ಒಂದೆರಡು ಫೋಟೋ ತೆಗೆಯುವುದರೊಳಗೆ ಅಲ್ಲಿಗೆ ಬಂದ ಪರ್ವೀನ್ ನಮ್ಮೆಲ್ಲರ ಫೋಟೋ ತೆಗೆಯಲು ಮುಂದಾದಳು. ಅವರೆಲ್ಲರ ಹತ್ತಿರವೂ ಅದೇ ಮಾತಿನ ಪುನರಾವರ್ತನೆಯಾಯಿತು, ‘ಓಹ್, ಇವಳು ನಮ್ಮ ನೀಲೂಫರಳನ್ನು ಎಷ್ಟು ಹೋಲುತ್ತಾಳೆಂದರೆ, ಎಷ್ಟು ಹೋಲುತ್ತಾಳೆಂದರೆ…. ನೀವು ನಂಬಲಿಕ್ಕಿಲ್ಲ.’ ಕ್ಯಾಮೆರಾ ವಾಪಸ್ಸು ಕೊಡುವಾಗ ನನ್ನ ಕೈಯ್ಯನ್ನೊಮ್ಮೆ ಒತ್ತಿಹಿಡಿದು ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು.
ಅವಳು ಅಷ್ಟು ಭಾವನಾಪರವಶಳಾದುದನ್ನು ನೋಡಿ ಆ ನೀಲೂಫರ್ ಎಂಬವಳು ಬಹುಶಃ ಈಗ ಇಲ್ಲವೆಂದು ನಾನೂ, ಉಳಿದವರೂ ಅರ್ಥಮಾಡಿಕೊಂಡೆವು.
ಒಳಗೆ ಹಾಡುಗಾರನ ಹಾಡು ಸುರುವಾಗುತ್ತಲೇ ನಾವು ನಮ್ಮ ಮೇಜಿಗೆ ಬಂದು ಕುಳಿತೆವು. ಹೊಟ್ಟೆಯ ಸ್ನಾಯುಗಳನ್ನು ಗಲಗಲನೆ ಅಲುಗಾಡಿಸಿಕೊಂಡು ಕೋಣೆ ತುಂಬ ಓಡಾಡುತ್ತ ನರ್ತಿಸುತ್ತಿದ್ದ ನೃತ್ಯಗಾತಿಯರನ್ನು ನೋಡುತ್ತ ನಮ್ಮ ಊಟ ಸಾಗಿತು. ಇದ್ದಕ್ಕಿದ್ದಂತೆ ಪರ್ವೀನ್ ಎದ್ದು ಹಾಡು ಹೇಳುವವನ ಹತ್ತಿರ ಹೋಗಿ ಏನೋ ಹೇಳುತ್ತಿರುವುದು ತೋರಿತು. ಅವನು ತಲೆಯಾಡಿಸುತ್ತ ನಾವು ಕುಳಿತತ್ತ ನೋಡಿ ಎರಡೂ ಕೈ ಜೋಡಿಸಿ ‘ನಮಸ್ತೇ…’ ಎಂದು ಗಟ್ಟಿಯಾಗಿ ಹೇಳಿ ಹಾಡಲು ಸುರುಮಾಡಿದ. ಸುರುಮಾಡಿದರೆ ಯಾವ ಹಾಡು? ರಾಜ್‍ಕಪೂರನ ‘ಆವಾರಾ ಹೂಂ….’!! ಅಬ್ಬ ಅವನ ಸ್ವರವೇ! ನನ್ನ ತಂದೆ ಆಗಿಂದಾಗ ಹಾಡುತ್ತಿದ್ದ ಆ ಹಾಡು ನನ್ನನ್ನು ಎಲ್ಲಿಂದ ಎಲ್ಲಿಗೋ ಒಯ್ದುಬಿಟ್ಟಿತು. ಚಾಚೂ ತಪ್ಪದೆ ಹಾಡನ್ನು ಹೇಳಿದ ರೀತಿಯೋ! ಪದಗಳ ಸ್ಪಷ್ಟ ಉಚ್ಚಾರವೋ! ನಮ್ಮೂರಿನಿಂದ ಎಷ್ಟೋ ದೂರ, ಯಾವುದೋ ದೇಶದಲ್ಲಿ, ಯಾವ್ಯಾವುದೋ ದೇಶದ ಜನಗಳ ಮಧ್ಯ ಕುಳಿತವಳನ್ನು ಭಾವನಾತ್ಮಕವಾಗಿ ಮೈಮರೆಯುವಂತೆ ಮಾಡಿತು. ಕೊನೆಯ ಸಾಲು ಹೇಳುವಾಗ ಅವನು ಎದೆಯ ಮೇಲಿನ ಅಕೋರ್ಡಿಯನ್ನನ್ನು ಆಧರಿಸಿ ಹಿಡಿದಂತೆ ಹಿಂದೂ ಮುಂದೂ ಬಗ್ಗುತ್ತ ಹತ್ತಿರ ಬಂದು, ನಮ್ಮ ಮೇಜಿನ ಎದುರೇ ನಿಂತು ಹಾಡು ಹೇಳಿ ಮುಗಿಸಿ ಬಾಗಿ ವಂದಿಸಿದ. ನಾವು ಎದ್ದು ನಿಂತು ಅವನನ್ನು ಅಭಿನಂದಿಸುವಾಗ ಪರ್ವೀನ್ ಸಹ ಬಂದು ನಮ್ಮೊಡನೆ ಸೇರಿದ್ದಳು.
ಊಟ ಮುಗಿಸಿ ಅಲ್ಲಿಂದ ಹೊರಡುವಾಗ ಪುನಃ ನಮ್ಮ ಬದಿಯಲ್ಲಿ ಪ್ರತ್ಯಕ್ಷಳಾದ ಅವಳು ಕೆಳಗಿನವರೆಗೆ ಬಂದು ಬೀಳ್ಕೊಟ್ಟಳು. ಅವಳಿಗೆ ವಿದಾಯ ಹೇಳುತ್ತ ಕಾರಿನಲ್ಲಿ ಮುಂದೆ ಸರಿಯುತ್ತಿದ್ದಾಗ ಪುನಃ ಅವಳನ್ನು ಭೇಟಿಯಾಗಬಹುದೆಂಬ ಊಹೆಯೂ ನನಗಿರಲಿಲ್ಲ. ಎಷ್ಟೋ ಪ್ರವಾಸಗಳಲ್ಲಿ ಆದಂತೆ ಈ ಭೇಟಿಯೂ ಇಲ್ಲಿಗೆ ಮುಗಿಯಿತು ಎಂದುಕೊಂಡಿದ್ದೆ.
ಆದರೆ ನನ್ನೆಣಿಕೆ ತಪ್ಪಾಗಿತ್ತು. ಮರುದಿನ ಬೆಳಿಗ್ಗೆ ನಾನು ಉಳಕೊಂಡಿದ್ದ ಹೋಟೇಲಿನ ಪ್ರವೇಶಾಂಗಣದಲ್ಲೇ ಎತ್ತರದ ಸ್ವರದಲ್ಲಿ ಮ್ಯಾನೇಜರ್‍ನೊಂದಿಗೆ ಮಾತನಾಡುತ್ತಿದ್ದ ಪರ್ವೀನಳ ದರ್ಶನವಾಯ್ತು. ನನ್ನನ್ನು ನೋಡಿದ್ದೇ ಎಷ್ಟೋ ದಿನಗಳ ಪರಿಚಯದವಳಂತೆ ಓಡಿ ಬಂದು ಕೈಕುಲುಕಿ ಆಲಂಗಿಸಿದ್ದಾಯಿತು. ಆಫೀಸಿನ ಕಾರು ಇನ್ನೂ ಬಂದಿರಲಿಲ್ಲವಾಗಿ, ಅದಕ್ಕಾಗಿ ಕಾಯುತ್ತಿದ್ದಾಗ, ಅವಳೂ ನನ್ನೊಡನೆ ಸೋಫಾದಲ್ಲಿ ಕುಳಿತು ಮಾತಾಡತೊಡಗಿದಳು. ಅವಳ ವರ್ತನೆ ನೋಡಿದರೆ ನನ್ನನ್ನೇ ಎದುರುನೋಡುತ್ತಿದ್ದವಳಂತಿತ್ತು.
ಹೋಟೇಲಿನ ಮ್ಯಾನೇಜರ್ ಕೂಗಿ ಕರೆದು ಕಾರು ಬಂದಿದೆಯೆಂದು ತಿಳಿಸಿದವ, ಅದೇ ಏರುದನಿಯಲ್ಲಿ ಪರ್ವೀನಳೊಡನೆ ಏನೋ ಹೇಳಿದ. ಅವಳು ಅದನ್ನು ಹಚ್ಚಿಸಿಕೊಂಡಂತೆ ಕಾಣಲಿಲ್ಲ. ಕೈಬೀಸಿ ಅವನನ್ನು ಸುಮ್ಮನಿರುವಂತೆ ಹೇಳಿ ಪುನಃ ತನ್ನ ಮಾತನ್ನು ಮುಂದುವರಿಸುತ್ತಾ, ಪರ್ಸಿನಿಂದ ಒಂದು ಫೋಟೋ ತೆಗೆದು ನನಗೆ ತೋರಿಸಿದಳು. ಒಬ್ಬರ ಹೆಗಲ ಮೇಲೊಬ್ಬರು ಕೈ ಹಾಕಿ ನಿಂತ ಇಬ್ಬರು ಹುಡುಗಿಯರ ಫೋಟೋ. ‘ಇದು ನಾನು, ಇದು ನನ್ನ ಅಕ್ಕ ನಿಲೂಫರ್; ಇವಳನ್ನೇ ನಾನು ನಿಮ್ಮ ಹಾಗೆ ಎಂದದ್ದು.’ ಎಂದಳು. ಅಷ್ಟೇ ಹೇಳುವಾಗ ಅವಳ ಕಣ್ಣುಗಳು ಪಸೆಗೂಡಿದ್ದವು. ಸ್ವರ ತೀರ ಮೆದುವಾಗಿ ಹೋಗಿತ್ತು. ಕುತೂಹಲದಿಂದ ಬಗ್ಗಿ ಫೋಟೋ ನೋಡಿದೆ. ನನ್ನ ಮಟ್ಟಿಗೆ ಅದೇನೂ ಸಿನೆಮಾಗಳಲ್ಲಿರುವಂತಹ, ‘ಆಹಾ’ ಕ್ಷಣವಂತೂ ಆಗಲಿಲ್ಲ. ನನ್ನ ಚಹರೆಗಳನ್ನು – ಬಹುಶಃ ಕಣ್ಣು, ಅಥವಾ ಮೂಗೇ? ಇಲ್ಲ ಎತ್ತರದ ಹಣೆಯಿರಬಹುದೇ… ನೀಳವಾದ ಕೂದಲನ್ನು ಉದ್ದಕ್ಕೆ ಬಾಚಿ ತುದಿಯಲ್ಲಿ ಬಗ್ಗಿಸಿದ ರೀತಿಯೋ – ಎಂದು ಫೋಟೋದಲ್ಲಿ ಹುಡುಕುವ ಪ್ರಯತ್ನ ಮಾಡತೊಡಗಿದೆ.
ಮ್ಯಾನೇಜರನು ಈಗ ನಾವಿದ್ದಲ್ಲಿ ಬರುತ್ತ, ಪರ್ವೀನಳನ್ನು ಉದ್ದೇಶಿಸಿ ಬಡಬಡನೆ ಏನೇನೋ ಹೇಳತೊಡಗಿದ್ದ. ಉತ್ತರವಾಗಿ ಪರ್ವೀನಳೂ ಅವನ ಹತ್ತಿರ ಸ್ವರ ಏರಿಸಿ ಮಾತನಾಡಿದಳು. ಒಂದೇ ಒಂದು ಶಬ್ದ ಅರ್ಥ ಆಗದಿದ್ದರೂ, ಅವರಿಬ್ಬರ ಸಂಭಾಷಣೆಯು ಜಗಳದ ಧಾಟಿಯಲ್ಲಿದೆಯೆಂಬುದಷ್ಟನ್ನು ಗ್ರಹಿಸುವುದಾಯಿತು. ಪುನಃ ನನ್ನತ್ತ ತಿರುಗಿದ ಪರ್ವೀನಳು ಅದೇ ಮೃದು ಕಣ್ಣುಗಳಿಂದ ಆ ಫೋಟೋವನ್ನು ನೋಡುತ್ತ ತನ್ನ ಅಕ್ಕನ ಮುಖವನ್ನೊಮ್ಮೆ ಸವರಿ, ಅದನ್ನು ತನ್ನ ಕೈಚೀಲದ ಒಳಗೆ ಇಟ್ಟಳು. ‘ಸಂಜೆ ನಿನ್ನ ಕೆಲಸ ಮುಗಿದ ಮೇಲೆ ತಕ್ಸಿಮ್ ಚೌಕಕ್ಕೆ ಬರುತ್ತೀಯಲ್ಲ. ಅಲ್ಲಿ ಸಿಕ್ಕಿ ಎಲ್ಲ ಹೇಳುತ್ತೇನೆ. ನನಗೆ ನಿನ್ನ ಹತ್ತಿರ ಎಲ್ಲ ಹೇಳಲೇ ಬೇಕು,’ ಕರವಸ್ತ್ರದಿಂದ ಮೂಗು ಒರೆಸುತ್ತ ಅವಳು ಹೇಳಿದಳು.
ಹೋಟೇಲಿನಿಂದ ಹೊರಗೆ ಬಂದು ಕಾರಿನೊಳಗೆ ಕುಳಿತುಕೊಳ್ಳುವಾಗಲೂ ಮ್ಯಾನೇಜರ್ ಮತ್ತು ಪರ್ವೀನರ ವ್ಯಾಗ್ಯುದ್ಧ ಕಿವಿಗೆ ಬೀಳುತ್ತಲೇ ಇತ್ತು. ಮಾತಿನ ಓಘವನ್ನು ನೋಡಿದರೆ ಅವಳು ಅಲ್ಲಿಗೆ ಬಂದುದೇ ತಪ್ಪು ಎಂಬಂತಿತ್ತು. ಪ್ರವಾಸೀ ಜಾಗಗಳಲ್ಲಿ ಗೈಡ್‍ಗಳ ನಡುವೆ, ಟ್ಯಾಕ್ಸಿಯವರ ನಡುವೆ, ಅವರವರ ಕಾರ್ಯವ್ಯಾಪ್ತಿಯ ವಿಚಾರದಲ್ಲಿ ಒಮ್ಮೊಮ್ಮೆ ಹೀಗೆ ಜಗಳಗಳಾಗುವುದು ಸಾಮಾನ್ಯವಾಗಿದ್ದರಿಂದ ಅಂಥದ್ದೇ ಇರಬೇಕು ಎಂದುಕೊಂಡೆ. ಆದರೂ ಕೈಬೆರಳು ಬಾಗಿಲತ್ತ ತೋರಿಸಿ, ಅಂಗೈಗೆ ಮುಷ್ಟಿ ಗುದ್ದುತ್ತ ಆ ಮ್ಯಾನೇಜರ್ ಮಾತನಾಡುವ ರೀತಿಯೋ, ಬೆದರಿಸುವ ಅವನ ಕಣ್ಣುಗಳೋ! ಪರ್ವೀನಳ ಬಗ್ಗೆ ನನಗೆ ‘ಪಾಪ’ ಎನ್ನಿಸಿತು. ಆದರೆ ಪರ್ವೀನಳೂ ಏನು ಕಡಿಮೆಯಿರಲಿಲ್ಲ. ನನ್ನೊಡನೆ ಮಾತನಾಡುವಾಗಿನ ಪರ್ವೀನಳೇ ಬೇರೆ; ಮೈಮೇಲೆ ಆವಾಹಿಸಿಕೊಂಡ ನಾಟಕದ ಪಾತ್ರಧಾರಿಯಂತೆ, ‘ನನ್ನ ಖುಶಿ, ನಾನು ಏನು ಬೇಕಾದರೂ ಮಾಡುತ್ತೇನೆ. ನೀನು ಯಾರು ಕೇಳುವವನು?’ ಎಂಬ ಅಧಿಕಾರವಾಣಿಯಲ್ಲಿ ಅವನಿಗೆ ಪ್ರತ್ಯುತ್ತರ ಕೊಡುವ ಅವಳ ನಿಲುವೇ ಬೇರೆ ಇತ್ತಲ್ಲ ಎಂದು ನನಗೆ ನಗು ಬಂತು.
ಸಾಯಂಕಾಲ ತಕ್ಸಿಮ್ ಚೌಕದಲ್ಲಿ ಕುಳಿತು ಸಹೋದ್ಯೋಗಿಗಳೊಂದಿಗೆ ಪಿಝಾ ತಿನ್ನುತ್ತ ಸುತ್ತಲೂ ನೋಡುತ್ತಿದ್ದಾಗ ನನಗೆ ಇಡೀ ಜಗತ್ತೇ ನಮ್ಮೆದುರು ಹಾದುಹೋಗುತ್ತಿದೆಯೆಂಬಂತೆ ಭಾಸವಾಯಿತು. ನಾಲ್ಕು ರಸ್ತೆಗಳು ಕೂಡುವ ಆ ಜಾಗದ ವಿಶಾಲತೆ, ತರತರದ ಜನರು, ವಿಧವಿಧದ ವಾಹನಗಳು, ಮುಖ್ಯವಾಗಿ ಒಟ್ಟಾರೆ ಅಲ್ಲಿನ ವಾತಾವರಣದ ಲವಲವಿಕೆಯನ್ನು ನೋಡುತ್ತ, ‘ಇಲ್ಲಿ ನಾನು ಎಷ್ಟು ಹೊತ್ತು ಬೇಕಾದರೂ ಕುಳಿತೇನು.’ ಎಂದೆ.
ಪಿಝಾ ಇನ್ನೂ ಪೂರ್ತಿ ತಿಂದು ಮುಗಿಸಿರಲಿಲ್ಲ, ಪರ್ವೀನ್ ಹಾಜರು. ನಮ್ಮ ಎದುರು ಕುಳಿತವಳೇ, ‘ನನ್ನ ಅಕ್ಕನಿಗೆ ತಕ್ಸಿಮ್ ಚೌಕ ಎಂದರೆ ಆಯ್ತು. ಇಲ್ಲಿ ಎಷ್ಟು ಹೊತ್ತು ಬೇಕಾದರೂ ಕುಳಿತೇನು, ಎನ್ನುತ್ತಿದ್ದಳು.’ ಎಂದಳು. ಇದು ಅಲ್ಲಿಗೆ ಬಂದ ಎಲ್ಲರೂ ಹೇಳುವ ಸಾಮಾನ್ಯ ಮಾತೇ ಆದರೂ, ನನಗೆ ಒಂದು ಸಲ ಜುಮ್ಮೆನಿಸಿತು.
ಆಫೀಸಿನ ಗೆಳೆಯರು ಹೋದ ಮೇಲೂ ಪರ್ವೀನ್ ಮತ್ತು ನಾನು ತುಂಬ ಹೊತ್ತು ಅಲ್ಲೇ ಕುಳಿತಿದ್ದೆವು. ಎಷ್ಟು ಹೇಳಿದರೂ ಪಿಝಾ ತಿನ್ನಲು ಅವಳು ಒಪ್ಪಲಿಲ್ಲ. ಚಾ ಮಾತ್ರ ಸಾಕು ಎಂದಳು. ‘ಪಿಝಾ ತಿನ್ನದೆ ಆರು ವರ್ಷಗಳಾದುವು. ಬರುವ ತಿಂಗಳಿಗೆ ಆರು ವರ್ಷ.’ ಬಣ್ಣದ ಗಾಜಿನ ಪುಟ್ಟ ಹೂಜಿಯಂತಹ ಲೋಟೆಯಲ್ಲಿ ಟರ್ಕಿಯ ಚಾ ಹೀರುತ್ತ, ಅವಳ ಅಕ್ಕನ ಕತೆ ಕೇಳಿದೆ.
ಅವಳ ಅಕ್ಕ ನಿಲೂಫರ್ ವಿಶ್ವವಿದ್ಯಾಲಯದ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಳಂತೆ. ಕೆಲಸ ಮುಗಿಸಿ ಮನೆಗೆ ಹೋಗುವ ಮೊದಲು ತಕ್ಸಿಮ್ ಚೌಕದಲ್ಲಿ ಒಂದರ್ಧ ಗಂಟೆ ಕುಳಿತೇ ಮನೆಗೆ ಹೋಗುವ ವಾಡಿಕೆ. ಆ ಹೊತ್ತಿಗೆ ಒಮ್ಮೊಮ್ಮೆ ಪರ್ವೀನಳೂ ಬಂದು ಅವಳ ಒಟ್ಟಿಗೆ ಕುಳಿತಿರುತ್ತಿದ್ದಳಂತೆ. ಕೆಲವೊಮ್ಮೆ ಜೊತೆಯಾಗಿ ಪಿಝಾ ಅಥವಾ ಬರ್ಗರ್ ತಿನ್ನುತ್ತಿದ್ದರಂತೆ.
‘ಆವತ್ತು ಅಕ್ಕ ಕೆಂಪು ಬಣ್ಣದ ಅಂಗಿ ಹಾಕಿದ್ದಳು. ಇಲ್ಲ, ತಡಿ ಕೆಂಪಲ್ಲ, ಕಪ್ಪು ಒತ್ತಿದ ಕೆಂಪು, ಅದರಲ್ಲಿ ತೆಳ್ಳಗಿನ ಹಳದಿ ಗೀಟುಗಳಿದ್ದವು. ಪೂರ ಹಳದಿಯೂ ಅಲ್ಲ, ಬಿಳಿ ಮತ್ತು ಹಳದಿಯ ನಡುವಿನ ಬಣ್ಣವೇನೋ…’ ಎಷ್ಟು ಹೊತ್ತಾದರೂ ಅಕ್ಕನ ಅಂಗಿಯ ಬಣ್ಣದ ವರ್ಣನೆ ಮುಗಿಯುವ ಸೂಚನೆ ಕಾಣಲಿಲ್ಲ.
‘ಇಲ್ಲೇ ಈ ಚೌಕದಲ್ಲೇ ಅಫಘಾತ ನಡೆದುದು. ಅದಕ್ಕೆ ಕಾರಣ ನಾನೇ… ನಾನೇ ದರಿದ್ರದವಳು. ನಾನೇ ಅವಳನ್ನು…..ಮುಗಿಸಿದವಳು…’ ನನ್ನ ಕಿವಿಗೆ ಅವಳ ಮಾತು ಸರಿಯಾಗಿ ಕೇಳಿತ್ತೋ ಇಲ್ಲವೋ ಎಂದು ಸಂಶಯವಾಯಿತು. ಕಣ್ಣಗಲಿಸಿ ಅವಳನ್ನೇ ನೋಡಿದೆ.
‘ಅಬ್ಬ!’ ಎಂದು ಎರಡೂ ಅಂಗೈಯನ್ನು ಗಲ್ಲದ ಮೇಲಿರಿಸಿ, ಶ್ವಾಸ ಕಟ್ಟಿದವಳಂತೆ ಕುರ್ಚಿಗೆ ಒರಗಿ ಕುಳಿತು ನನ್ನನ್ನೇ ದಿಟ್ಟಿಸತೊಡಗಿದಳು. ‘ನಾನು ಏನಾದರೂ ತಪ್ಪಿ ಮಾತಾಡಿದರೆ ಹೀಗೆ, ಹೀ….ಗೆ ಕಣ್ಣರಳಿಸಿ ನನ್ನನ್ನು ನೋಡುತ್ತಿದ್ದಳು. ಸತ್ಯ ಹೇಳಬೇಕೆ? ನಾನು ಏನು ಮಾಡಿದರೂ ಅವಳಿಗೆ ತಪ್ಪು ಕಾಣುತ್ತಿತ್ತು. ನಾನು ಸಣ್ಣವಳೆಂದು ನನ್ನ ಮಾತೆಂದರೆ ಯಾವಾಗಲೂ ಅವಳಿಗೆ ತಾತ್ಸಾರವೇ. ನನಗಿಂತ ಕೇವಲ ಎರಡು ವರ್ಷ ದೊಡ್ಡವಳಷ್ಟೇ. ಆದರೂ ಹಾಗೆ..’ ಅವಳ ಕಣ್ಣುಗಳಲ್ಲಿ ನೀರು ತುಂಬಿದಂತಿತ್ತು. ಅದು ಕಾಣಬಾರದೆಂದೋ ಏನೋ ಮುಖ ತಿರುಗಿಸಿ, ಹೋಗಿ ಬರುವ ಮಂದಿಯನ್ನು ನೋಡುತ್ತ ಮಾತು ಮುಂದುವರಿಸಿದಳು –
ಹೀಗೆ ಸುಮ್ಮನೆ ಕುಳಿತಿರುವಾಗಲೂ ಅವಳಿಗೆ ನನ್ನ ತಪ್ಪುಗಳೇ ಕಾಣುತ್ತಿದ್ದುದು. ‘ಕೂದಲು ಸರಿ ಮಾಡಿಕೊ,’ ‘ಬಗ್ಗಿ ಕೂತದ್ದು ಯಾಕೆ? ಬೆನ್ನು ನೆಟ್ಟಗೆ ಮಾಡು,’ ಹೀಗೆ ಏನಾದರೊಂದು ಹೇಳುತ್ತ ಇರಬೇಕು…. ಅವಳ ಎದುರು ಬರುವುದೂ ನನಗೆ ಇಷ್ಟವಾಗದಷ್ಟು. ಆದರೆ ಈಗ? ಈಗ ನನ್ನನ್ನು ಯಾರೂ ತಿದ್ದುವವರಿಲ್ಲ. ನನ್ನ ಅಮ್ಮಿ-ಅಬ್ಬಾ ಕೂಡ ನನಗೆ ಏನನ್ನೂ ಹೇಳುವುದಿಲ್ಲ. ಅವರು ನನಗೆ ಹೆದರುತ್ತಾರೋ ಎಂದು ನನಗೆ ಒಮ್ಮೊಮ್ಮೆ ಸಂದೇಹವಾಗುತ್ತದೆ. ಇಲ್ಲ ನನ್ನ ಮೇಲೆ ಅವರಿಗೆ ಇನ್ನಿಲ್ಲದ ತಿರಸ್ಕಾರವಿದ್ದಿರಲೂ ಬಹುದು, ಅವರ ಮುದ್ದು ಮಗಳ ದುರವಸ್ಥೆಗೆ ಕಾರಣವಾದವಳಲ್ಲವೇ ನಾನು? ಅಥವಾ… ಅಥವಾ… ನನ್ನ ಸಂಪಾದನೆಯಲ್ಲೇ ಅವರ ಮನೆ, ಮಗನ ವಿದ್ಯಾಭ್ಯಾಸ ಎಲ್ಲ ನಡೆಯುತ್ತಿದೆಯೆಂಬ ಮುಜುಗರವು ಅವರನ್ನು ಏನೂ ಹೇಳದಂತೆ ತಡೆಹಿಡಿಯುತ್ತಿದೆಯೋ ನನಗೆ ಗೊತ್ತಿಲ್ಲ.
ಮನೆಯವರ, ಬಂಧು-ಬಾಂಧವರೆಲ್ಲರ ಮೆಚ್ಚಿನವಳಾಗಿದ್ದಳು ನನ್ನಕ್ಕ. ಏನು ಹೊಸ ವಸ್ತು ತಂದರೂ ಅದು ಅಕ್ಕನಿಗೇ. ಚಿಕ್ಕಂದಿನಿಂದಲೂ ನನಗೆ ಹೊಸ ಅಂಗಿ ಹೊಲಿಸಿದ್ದು ಬಹಳ ಕಡಿಮೆ. ಅಕ್ಕನ ಹಿಂದಿನ ವರ್ಷದ ಅಂಗಿ ಮರುವರ್ಷ ನನಗೆ ಸಿಗುತ್ತಿತ್ತು. ನಾನು ಹುಟ್ಟಿನಂದಿನಿಂದಲೂ ಹಾಗೆ. ಅದರ ಮೇಲೆ ಅಮ್ಮಿ ‘ಇವಳ ಹತ್ತಿರ ರಾಶಿ ಅಂಗಿ, ಪಾಪ ನಿಲೂಫರಳ ಹತ್ತಿರ ಹೆಚ್ಚು ಅಂಗಿಯೇ ಇಲ್ಲ,’ ಎಂದು ಅವಳಿಗೇ ಹೊಸ ಹೊಸ ಅಂಗಿ ಹೊಲಿಸುತ್ತಿದ್ದಳು. ನನಗೆ ಹೇಗಾಗಬೇಡ? ಒಮ್ಮೆಯಂತೂ ಈದ್ ಹಬ್ಬದ ಹಿಂದಿನ ರಾತ್ರಿ ಅವಳ ಹೊಸ ಅಂಗಿಯ ತುದಿಯನ್ನು ನಾನು ಕತ್ತರಿಯಿಂದ ಕತ್ತರಿಸಿಬಿಟ್ಟಿದ್ದೆ. ಯಾಕೆ ಹಾಗೆ ಮಾಡಿದೆನೋ ನನಗೆ ಅರ್ಥ ಆಗುವುದಿಲ್ಲ. ಎಷ್ಟು ಕ್ರೂರ ಬುದ್ಧಿಯಲ್ಲವೇ ತನ್ನದು? ನಿಲೂಫರ್ ಪಾಪ ಅದನ್ನೇ ಹೊಲಿದು ಹಾಕಿಕೊಂಡಿದ್ದಳು…. ಈಗ ಹಿಂದಿನ ಒಂದೊಂದು ನೆನಪೂ ನನ್ನ ಜೀವ ಹಿಂಡುತ್ತಿದೆ,
ಹೀಗನ್ನುವಾಗ ಮ್ಲಾನತೆಯ ತೂಕದಿಂದ ಪರ್ವೀನಳ ಮುಖವು ಕೆಳಗೆ ಎಳೆದಿಟ್ಟಂತಾಗಿತ್ತು. ಅವಳು ನನ್ನ ಹತ್ತಿರ ಹೇಳುತ್ತಿದ್ದಾಳೆಯೋ ಅಥವಾ ತನ್ನಷ್ಟಕ್ಕೇ ಮಾತಾನಾಡುತ್ತಿದ್ದಾಳೆಯೋ ಎಂದು ನನಗೆ ಸ್ಪಷ್ಟವಾಗಲಿಲ್ಲ.
ಕಾಲೇಜಿನಲ್ಲಿರುವಾಗ ನಾನು ಒಂದು ಚಳುವಳಿಗೆ ಸೇರಿದ್ದೆ. ಅಕ್ಕನಿಗೆ ಅದು ಏನೂ ಇಷ್ಟವಿರಲಿಲ್ಲ. ನಮಗೆಲ್ಲ ಆಗ ಉಮೇದು. ತಲೆಗೆ ಮೇಲುದಿಕೆ(ಹಿಜಬ್) ಹಾಕಿಕೊಂಡು ಕಾಲೇಜಿಗೆ ಹೋಗುತ್ತಿದ್ದೆವು. ನಂಬುತ್ತೀಯಾ? ಅದೊಂದು ಗಮ್ಮತ್ತು. ಈಗ ಎಲ್ಲರೂ ಆ ಬಗ್ಗೆ ಚರ್ಚಿಸುತ್ತಿದ್ದಾರಲ್ಲವೇ? ಆಗ ಅದು ಹೊಸತು. ನಮಗೆ ಕಾಲೇಜಿನಲ್ಲಿ ಮೇಲುದಿಕೆ ಹಾಕುವುದನ್ನು ಯಾವಾಗಲೋ ನಿಷೇಧಿಸಲಾಗಿತ್ತು. ಈಗಲ್ಲ, ಎಷ್ಟೋ ವರ್ಷಗಳಿಂದ. ಆಟಟುರ್ಕ್ ಬಂದ ಲಾಗಾಯ್ತು, ನನ್ನ ಪಿಜ್ಜಿ ಹುಟ್ಟುವಾಗಲೇ, ಅಂದರೆ ಸಾವಿರದ ಒಂಭೈನೂರ ಇಪ್ಪತ್ತರ ಹೊತ್ತಿಗೇ ಎಲ್ಲ ವಿಷಯದಲ್ಲೂ ನಾವು ಯುರೋಪಿನವರಂತೆ ಆಗಿದ್ದೆವು.
ನಮ್ಮ ಅಮ್ಮನಿಗೂ, ದೊಡ್ಡಮ್ಮನಿಗೂ ತಾವು ಮುಂದುವರಿದವರೆಂದು ಹೆಮ್ಮೆ. ನಮ್ಮ ತಂದೆಯಂತೂ ಕೆಮಾಲ್ ಪಾಶಾನ ದೊಡ್ಡ ಭಕ್ತ.
ಆದರೆ ನಮ್ಮ ಹೊಸ ಚಳುವಳಿ ಏನಿತ್ತೆಂದರೆ – ಯಾಕೆ ಸುಮ್ಮನೆ ಯುರೋಪಿನವರ ಅಥವಾ ಯಾವುದೇ ಪಶ್ಚಿಮ ದೇಶದವರ ಅಂಧ ಅನುಕರಣೆ ಮಾಡುವುದು? ನಮ್ಮದೇ ಸಂಸ್ಕೃತಿ ಇರುವಾಗ ಅದನ್ನು ನಾವು ಯಾಕೆ ಬಿಡಬೇಕು ಎಂಬುದು. ನಮ್ಮ ವಾದ ಕೇಳಿ ಅಕ್ಕನಿಗೆ ಕೆಟ್ಟ ಕೋಪ ಬರುತ್ತಿತ್ತು. ಒಮ್ಮೊಮ್ಮೆ ಮನೆಯ ಹಂಚು ಹಾರಿಹೋಗುವಂತೆ ನಾವಿಬ್ಬರು ಕೂಗಾಡುತ್ತಿದ್ದೆವು. ಇದು ಪೂರ್ವದಿಂದ ಬೀಸುವ ವಿಷಗಾಳಿ, ಗೊತ್ತಿರಲಿ ಎಂದು ನಿಲೂಫರ್ ಕೂಗಿದರೆ, ನಮ್ಮ ಚಳುವಳಿಯ ಮುಖಂಡರ ಮಾತುಗಳೇ ನನ್ನ ಉತ್ತರವಾಗುತ್ತಿತ್ತು, – ನಮಗೆಲ್ಲ ಗೊತ್ತು, ಆ ಮತಾಂಧರಿಗೂ ನಮಗೂ ಏನೂ ಸಂಬಂಧವಿಲ್ಲ; ನಮ್ಮ ಚಳುವಳಿಯ ಉದ್ದೇಶವೇ ಬೇರೆ; ಬೇಡವಾದುದನ್ನು ಹೊರಗೆಸೆಯುವ ಭರದಲ್ಲಿ ನಮ್ಮ ಪೂರ್ವಿಕರ ಅಮೂಲ್ಯ ಬಳುವಳಿಗಳನ್ನು ಕಿತ್ತೆಸೆದುದನ್ನು ನಾವು ವಿರೋಧಿಸುತ್ತೇವೆ. ನಮಗೆ ಕೆಟ್ಟ ಹೆಸರು ಕೊಡಲು ಏನೆಲ್ಲಾ ಕುತಂತ್ರ ನಡೆದಿದೆ ಎಂದು ನಮಗೆ ಗೊತ್ತು, ಎಂದು ನಾನೂ ಬೊಬ್ಬಿಡುತ್ತಿದ್ದೆ.
ಒಮ್ಮೊಮ್ಮೆ – ನಾನು ಹೇಳಿದ್ದನ್ನು ಅರ್ಥ ಮಾಡಿಕೊ ಸ್ವಲ್ಪ ಎಂದು ಕಿರಿಚುತ್ತಿದ್ದೆ. ಅವಳು ತಿಳಿ ಹೇಳಿದಷ್ಟೂ ನನ್ನ ಹಠ ಜಾಸ್ತಿಯಾಗುತ್ತಿತ್ತು. ಈಗ ಯೋಚಿಸಿದರೆ, ನಾನು ಅವಳಿಗೆ ಸ್ವಲ್ಪ ಕಷ್ಟ ಕೊಡಲಿಲ್ಲ. ವಿರೋಧಿಸುವುದರಲ್ಲೇ ನಮ್ಮ ಚಳುವಳಿಯವರಿಗೆ ಒಂದು ಮಜಾ ಇರುತ್ತಿತ್ತೆಂದು ಈಗ ನನಗೆ ಅನಿಸುತ್ತಿದೆ. ಒಂದು ವೇಳೆ ನಮ್ಮ ಹಿಂದಿನವರು ಮೇಲುದಿಕೆ ತೊಡುತ್ತಿದ್ದಿದ್ದರೆ, ನಾವು ಅದು ಬೇಡವೇ ಬೇಡ ಎಂದು ವಿರೋಧಿಸುತ್ತಿದ್ದೆವೇನೋ!
ಅವಳ ಮಾತು ಕೇಳಿ ನನಗೆ ನಗು ಬಂತು. ಅವಳೂ ನಕ್ಕಳು.
ಒಂದೆರಡು ಸಲ ನಮ್ಮ ಗುಂಪಿನವರು ಹಿಜಬ್ ಹಾಕಿಕೊಂಡು ಹೋಗಿ, ಮುಖ್ಯೋಪಾಧ್ಯಾಯರಿಂದ ಬೈಸಿಕೊಂಡದ್ದೂ ಆಗಿತ್ತು. ಮುಖ್ಯೋಪಾಧ್ಯಾಯರಾದರೂ ಅಕ್ಕನಿಗೆ ಯಾಕೆ ಹೇಳಿ ಕಳಿಸಬೇಕಿತ್ತೊ ಗೊತ್ತಿಲ್ಲ. ನನ್ನಿಂದಾಗಿ ತನ್ನ ಮರ್ಯಾದೆ ಹೋಯಿತು ಅಂತ ಅವಳು ಆದಿನ ಸ್ವಲ್ಪ ನೊಂದುಕೊಳ್ಳಲಿಲ್ಲ. ನಮಗೋ ಹರೆಯದ ಉಮೇದು. ಏನೇನೋ ಸಾಧಿಸಿಬಿಡುತ್ತೇವೆಂಬ ಹೆಮ್ಮೆ.
ಆದರೆ ನಮ್ಮ ಸಮಿತಿ ಎಂದೆನಲ್ಲ. ನಾವು ಹರತಾಳ ಮಾಡುತ್ತಿದ್ದೆವು, ಫಲಕ ಹಿಡಿದು ತಿರುಗುತ್ತಿದ್ದೆವು, ಪತಾಕೆ ಹಾರಿಸುತ್ತಿದ್ದೆವು, ಮುಷ್ಠಿ ಮೇಲೆ ಮಾಡಿ ಘೋಷಣೆ ಕೂಗುತ್ತಿದ್ದೆವು, ಅಷ್ಟೇ ಹೊರತು ಬೇರೇನೂ ಕೆಡುಕು ಮಾಡಲು ಹೊರಟವರಲ್ಲ; ಅದರಲ್ಲೇ ನಮಗೊಂದು ನಶೆ ಏರಿದಂತಾಗುತ್ತಿತ್ತು. ಕಾಲೇಜಿನ ಅಭ್ಯಾಸವಲ್ಲದೆ ಮತ್ತೇನನ್ನೋ ಸಾಧಿಸುತ್ತಿದ್ದೇವೆಂಬ ಗರ್ವದಿಂದ ನಾವು ಉಬ್ಬುತ್ತಿದ್ದೆವು. ಮನೆಗೆ ಬಂದ ಕೂಡಲೇ ಅಕ್ಕ ಏನಾದರೂ ಹೇಳಿ ಆ ಪುಗ್ಗೆಯನ್ನು ಠುಸ್ ಎಂದು ಒಡೆದುಬಿಡುತ್ತಿದ್ದಳು.
ಅಕ್ಕ ಪುನಃ ಪುನಃ ಹೇಳುತ್ತಿದ್ದಳು, – ಇಂಥದ್ದೆಲ್ಲ ಇಲ್ಲಿಗೆ ನಿಲ್ಲುವುದಿಲ್ಲ. ಆ ದೇಶದಲ್ಲಿ ಏನಾಯ್ತು ನೋಡು, ಮತ್ತೊಂದು ಕಡೆಯ ಅವಸ್ಥೆ ಹೇಗಾಗಿದೆ ಎಂದು ಅವಳ ಬುದ್ಧಿವಾದ ಸುರುವಾಗುತ್ತಿತ್ತು. ನಾನು ಒಂದಕ್ಕೂ ಕಿವಿಗೊಡುತ್ತಿರಲಿಲ್ಲ. ಇವೆಲ್ಲ ನನ್ನನ್ನು ವಾದದಲ್ಲಿ ಸೋಲಿಸುವ ಅವಳ ಹುನ್ನಾರಗಳೆಂದು ನನಗೆ ನೆತ್ತಿಗೇರುತ್ತಿತ್ತು. ನಮ್ಮದು ಬೇರೆಯೇ ರೀತಿಯ ಚಳುವಳಿ. ಅಲ್ಲಿನ ಪರಿಸ್ಥಿತಿಗೂ ನಮಗೂ ಏನೂ ಸಂಬಂಧ ಇಲ್ಲ ಎಂದು ವಾದಿಸಿದರೆ, ಅವಳಿಗೆ ಅವಳದ್ದೇ ಸರಿ. ಒಟ್ಟಾರೆ ಏನೆಂದರೆ – ನನಗೆ ಏನೂ ಗೊತ್ತಿಲ್ಲ, ನಾನೊಬ್ಬ ಬುದ್ಧಿಹೀನೆ, ಅಷ್ಟೆ. ಅವಳ ಮಾತು ಕೇಳಿ ಎಲ್ಲರೂ ನನ್ನ ಮೇಲೆ ತಿರುಗಿ ಬೀಳುತ್ತಿದ್ದರು, – ಅಪ್ಪ, ಅಮ್ಮ, ಅಜ್ಜಿ, ದೊಡ್ಡಮ್ಮ, ಮಾವ, ಮನೆಯವರೆಲ್ಲರೂ; ಅಥವಾ ನನಗೆ ಹಾಗೆ ತೋರುತ್ತಿತ್ತೋ ಗೊತ್ತಿಲ್ಲ.
ಅಂದರೆ ಆ ಹೊತ್ತಿಗೆ ಈ ಚರ್ಚೆ ನಮ್ಮ ಮನೆಗೆ ಸೀಮಿತವಾಗಿರಲಿಲ್ಲ. ನಿಧಾನವಾಗಿ ಅದು ರಾಜಕೀಯಕ್ಕೆ ಹಬ್ಬಲು ಸುರುವಾಗಿತ್ತು. ತುರ್ಕೀ ಸಂಸ್ಕೃತಿಯ ಪುನರುತ್ಥಾನಕ್ಕೆ ಕೈಂಕರ್ಯ ತೊಟ್ಟ ರಾಜಕೀಯ ಪಕ್ಷ ಬಲಗೊಳ್ಳುತ್ತಿದ್ದು, ನಮ್ಮ ಚಳುವಳಿಗೆ ರೆಕ್ಕೆ ಬಂದಂತಾಗಿತ್ತು. ನಮ್ಮ ವಾದಕ್ಕೆ ಬಲ ಹೆಚ್ಚಿದಂತೆ, ಅಟಾಟುರ್ಕನ ಮಾರ್ಗ ಶಾಶ್ವತವೆಂದು ಬಗೆದಿದ್ದ ಅವನ ಸೆಕ್ಯೂಲರ್ ಮಂದಿಯೂ ಚುರುಕಾಗತೊಡಗಿದ್ದರು.
‘ನಿಮಗೆ ಇದು ಅರ್ಥವಾಗಲಿಕ್ಕಿಲ್ಲ, ನಿಮ್ಮ ದೇಶದ ರೀತಿನೀತಿಗಳು ಬೇರೆ,’ ಎಂದು ಪ್ರರ್ವೀನ್ ನನ್ನೊಡನೆ ಹೇಳಿದಳು.
ಆದರೆ ನನಗದು ಸರಿಯಾಗಿ ಅರ್ಥವಾಗುತ್ತಿತ್ತು. ‘ಯಾವುದೋ ಪ್ರಾಚೀನ ವೈಭವವನ್ನು ವಾಪಾಸು ತರಬೇಕೆನ್ನುವ ಉಮೇದು ಇತ್ತೀಚೆಗೆ ನಮ್ಮಲ್ಲೂ ಸುರುವಾಗಿದೆ,’ ಎಂದೆ.
‘ಇಲ್ಲ, ಇಲ್ಲ, ನಮ್ಮದು ಹಾಗಿರಲಿಲ್ಲ, ಕೆಲವರು ಅಂಥವರು ಇದ್ದರು, ಇಲ್ಲವೆಂದಲ್ಲ, ಅವರಿಂದಾಗಿಯೇ ನಮಗೆ ಕೆಟ್ಟ ಹೆಸರು ಬರುವಂತಾಯಿತು. ಆದರೆ ನಾವು ಅವರಿಗಿಂತ ಭಿನ್ನವಾಗಿದ್ದೆವು.’ ಎಂದಳು.
ಈಗ ಕೆಲವು ತಿಂಗಳುಗಳ ಕೆಳಗೆ ನಮ್ಮ ಊರಿನಲ್ಲಿ ನಡೆದ ಪ್ರಸಂಗವೊಂದರ ನೆನಪಾಗಿ ನಾನು ಸುಮ್ಮನಾದೆ. ಊರಿನ ದೇವಳದ ಒಂದು ಸಂಘಟನೆಯಲ್ಲಿ ಸಕ್ರಿಯನಾಗಿದ್ದ ನಮ್ಮ ಬಂಧುವೊಬ್ಬನಿಂದಾಗಿ ಅವನ ಅಪ್ಪ-ಅಮ್ಮ ಇಕ್ಕಟ್ಟಿಗೆ ಸಿಲುಕಿದ ಸಂಗತಿಗಳೆಲ್ಲ ಒಂದರ ಹಿಂದೊಂದರಂತೆ ಕಣ್ಣೆದುರು ಬಂದುವು. ಇಷ್ಟೆಲ್ಲ ಕಲಿತಿದ್ದರೂ, ಹೊಸ ತಲೆಮಾರಿನವನಾಗಿಯೂ ಹಳೆಯ ನಿಷ್ಠೆಗಳಲ್ಲಿ ಮಗ ನಂಬಿಕೆ ಇಟ್ಟುಕೊಂಡಿದ್ದಾನೆ, ದೇವರು-ದಿಂಡರೆಂದು ಭಕ್ತಿ ತೋರುತ್ತಾನೆ ಎಂದು ಮೊದಮೊದಲು ಅವನ ಅಪ್ಪ-ಅಮ್ಮ ಎಷ್ಟು ಖುಶಿಯಲ್ಲಿದ್ದರು. ಮತ್ತೆ ಮತ್ತೆ ಅದು ಹೇಗೆ ವಿಕೋಪಕ್ಕೆ ಹೋಗತೊಡಗಿತೆಂಬುದೇ ತಿಳಿಯಲಿಲ್ಲ. ಊರಿನ ವಿದ್ಯಮಾನಗಳಲ್ಲಿ ಮೂಗು ತುರುಕಿದ ಈ ಸಂಘಟನೆಯು ಅನವಶ್ಯಕ ಗೊಂದಲಗಳಿಗೆ ಕಾರಣವಾಗಿ, ಮುಂದೆ ರಾಷ್ಟ್ರೀಯ ಸುದ್ದಿಯಾದ ಘಟನಾವಳಿಗಳು ಜೈಲಿಗೆ ಹೋಗುವ ವರೆಗೂ ಮುಟ್ಟಿದಾಗ ಅವರು ಅನುಭವಿಸಿದ ಆಘಾತ, ಮನಃಕ್ಲೇಶ……
‘ಏನು ಸುಮ್ಮನಿದ್ದೀ? ನಿನಗೆ ಬೇಜಾರಾಯಿತೇ?’ ಎಂದು ಪರ್ವೀನ್ ಕೇಳಿದಾಗ ನಾನು ವರ್ತಮಾನಕ್ಕೆ ಬರುವಂತಾಯಿತು.
‘ಇಲ್ಲ, ಇಲ್ಲ, ನಮ್ಮಲ್ಲಿ ನಡೆದ ಘಟನೆಯ ನೆನಪಾಯಿತು,’ ಎಂದೆ. ‘ನಿಮ್ಮ ಉದ್ದೇಶ ಭಿüನ್ನವೆಂದು ನಿನಗೆ ಅನಿಸಬಹುದು. ಆದರೆ ನಿಜವಾಗಿಯೆಂದರೆ ಯಾವ ಗಳಿಗೆಯಲ್ಲಿ ಇಂತಹ ಚಳುವಳಿಗಳು ವಿಕೋಪಕ್ಕೆ ಹೋಗಬಹುದೆಂದು ಹೇಳಲಾಗುವುದಿಲ್ಲ.’
‘ಅಕ್ಕ ಹೀಗಿದ್ದೇ ಮಾತು ಹೇಳುವಾಗ ನಾನು ಉದ್ರಿಕ್ತಳಾಗುತ್ತಿದ್ದೆ; ನನ್ನಲ್ಲಿ ರೋಷ ಉಕ್ಕುತ್ತಿತ್ತು!’
ಮತ್ತೆ ಎಷ್ಟೋ ಹೊತ್ತು ಅವಳು ಮೌನಿಯಾಗಿ ನಮ್ಮ ಎದುರಿನ ವಿಶಾಲ ಚೌಕದ ನಡುವಿನ ಗಾಳಿಯಲ್ಲಿ ಅಸ್ತಿತ್ವದಲ್ಲಿರದ ಯಾವುದೋ ಒಂದು ಬಿಂದುವನ್ನು ದಿಟ್ಟಿಸುತ್ತ ಕುಳಿತಳು. ಹಠಾತ್ತಾಗಿ, ಅವಳ ಬಾಯಿಯಿಂದ ಮಾತುಗಳು ಸಿಡಿದವು:
ಆದಿನ ಫೋನಿನಲ್ಲಿ ಅಕ್ಕನ ಸಂದೇಶವನ್ನು ನೋಡಿದವಳೇ ಕಾಲೇಜಿನಿಂದ ನೇರವಾಗಿ ತಕ್ಸಿಮ್ ಚೌಕಕ್ಕೆ ಬಂದಿದ್ದೆ. ಚೌಕದ ನಡುವೆ ನಮ್ಮ ಚಳುವಳಿಯ ವಿರುದ್ಧ ಸೆಕ್ಯೂಲರ್ ಸಂಘಟನೆಗಳ ಪ್ರತಿಭಟನೆ ನಡೆಯುತ್ತಿತ್ತು. ತಕ್ಸಿಮ್‍ನ ಎಂದಿನ ಗವಗವ ಸದ್ದಿನ ಬದಲು, ಘೋಷಣೆಗಳ ಗದ್ದಲವೆದ್ದಿತ್ತು. ಸುತ್ತಲೂ ಪೋಲೀಸ್ ಪಡೆಗಳು, ಅವರ ವಾಹನಗಳು! ಪ್ರತಿಭಟನಕಾರರು ಹಿಡಿದಿದ್ದ ‘ಸ್ವಾತಂತ್ರ್ಯ’, ‘ಉದಾರತೆ’, ‘ಆಧುನಿಕತೆ’ ಎಂದು ಬರೆದಿದ್ದ ಫಲಕಗಳು ನಿಬಿಡವಾದ ಆ ಗುಂಪುಗಳ ಮೇಲಿನಿಂದ ತೇಲುತ್ತಿದ್ದವು. ‘ಮುಂದೆ ಬಂದ ನಾವು, ಹಿಂದೆ ಹೋಗಲಾರೆವು’, ‘ಅಟಾಟುರ್ಕನ ಮಾತು ಮರೆಯಬೇಡಿ, ಮರೆಯಬೇಡಿ’, ‘ಅಂಧಕಾರದೊಡನೆ ಸಂಧಾನವಿಲ್ಲ’, ‘ಹಿಜಬ್ ನಮ್ಮ ಅಧೋಗತಿಯ ಮೊದಲ ಹೆಜ್ಜೆ,’ ಎಂದು ಮುಂತಾಗಿ ಘೋಷಿಸುತ್ತ ಚೌಕಕ್ಕೆ ಸುತ್ತುಬರುತ್ತಿದ್ದ ಗುಂಪನ್ನು ನಾನು ಇಲ್ಲೇ ಈ ಬದಿಯಲ್ಲಿ ನಿಂತು ನೋಡುತ್ತಿದ್ದೆ. ಅಕ್ಕ ಆಚೆ ಬದಿಯಿಂದ, ಆ ಬರ್ಗರ್ ಅಂಗಡಿ ಇದೆಯಲ್ಲ, ಅಲ್ಲೇ ಬಸ್ಸಿನಿಂದ ಇಳಿದು ನನ್ನತ್ತ ಬರುತ್ತಿದ್ದಳು. ಅವಳ ಆ ಕೆಂಪು ಅಂಗಿ ನನ್ನ ಕಣ್ಣಿಗೆ ಬಿದ್ದಿತ್ತು. ನಾನು ಅವಳನ್ನು ಗುರುತಿಸಿದ್ದೆ. ಸ್ಪಷ್ಟ ಚಿತ್ರ ನನ್ನ ಕಣ್ಣೆದುರಿಗೆ…. ಈಗ ನಡೆಯುತ್ತಿರುವಂತೆ…
ಒಂದು ಕ್ಷಣ ಕೆಂಪು ಅಂಗಿ ಅವಳ ಕಣ್ಣಿಗೆ ಬಿತ್ತಂತೆ, ಇನ್ನೊಂದು ಕ್ಷಣದಲ್ಲಿ ಅಲ್ಲಿ ಯಾರೂ ಇರಲಿಲ್ಲ. ಬರೇ, ಬೆಂಕಿ, ಹೊಗೆ, ಧೂಳಿನ ಮುದ್ದೆ… ಕಣ್ಣಿಗೆ ಕತ್ತಲು ಬರುವ ಹಾಗಿನ ಬೆಳಕು… ಕಿವಿ ಕೆಪ್ಪಾಗಿಸುವ ಸದ್ದು… ಆ ಮೇಲೆ ಮನಸ್ಸೆಲ್ಲ ಮೌನವಾದ ದಿಗ್ಭ್ರಮೆ!
ಪರ್ವೀನಳ ಸ್ವರದಲ್ಲಿನ ರೋಧನ ನನಗೂ ಅಂಟಿದಂತಾಯಿತು. ಅವಳು ಹೇಳಿದ್ದನ್ನೇ ಹೇಳುತ್ತಿದ್ದಳು:
ನಿಜ ಹೇಳಬೇಕೆಂದರೆ ಬಾಂಬಿಗೂ ನಮ್ಮ ಚಳುವಳಿಗೂ ಏನೇನೂ ಸಂಬಂಧ ಇರಲಿಲ್ಲ. ಆದರೆ ನಮ್ಮ ಚಳುವಳಿಯ ಮೇಲೆಯೇ ಎಲ್ಲರ ಗುಮಾನಿ, ಬಹುಶಃ ನಮ್ಮ ಮನೆಯವರದೂ. ನಮ್ಮ ಶಾಂತಿಯುತ ಚಳುವಳಿಯಲ್ಲಿ ಮತಾಂಧ ಕುಹಕಿಗಳು ಸೇರಿಕೊಂಡ ಸುಳಿವೂ ನಮಗೆ ಸಿಗದೆ ಹೋಯಿತು. ಅಲ್ಲಾನ ಸಾಕ್ಷಿಯಾಗಿ ಹೇಳುತ್ತಿದ್ದೇನೆ, ನನಗೆ ಆಬಗ್ಗೆ ಏನಂದರೆ ಏನೂ ಗೊತ್ತಿರಲಿಲ್ಲ. ಆದರೆ ಇದನ್ನು ನಾನು ಯಾರಿಗೆ ಹೇಳುವುದು? ನನ್ನ ತಂದೆ-ತಾಯಂದಿರು ಇದುವರೆಗೆ ನನ್ನ ಹತ್ತಿರ ಈ ವಿಷಯ ಕೇಳಿಲ್ಲ. ನಾನು ಹೇಳಿದರೂ ಅವರು ಕಿವಿಯ ಮೇಲೆ ಹಾಕಿಕೊಳ್ಳುವವರಲ್ಲ. ಅಂದಿನಿಂದ ಇಂದಿಗೆ ನಾವು ಏನೆಲ್ಲ ತೊಡಕುಗಳನ್ನು ದಾಟಿಬಂದಿದ್ದೇವೆ. ಆ ಕುರಿತು ಮಾತನಾಡುವ, ಕೇಳುವ, ಕಿವಿಗೊಡುವ ವ್ಯವಧಾನ ಯಾರೊಬ್ಬರಿಗೂ ಇಲ್ಲ.
‘ಇಲ್ಲ, ನಿಮಗೆ ಗೊತ್ತಿಲ್ಲ. ಅವಳಿಗಾಗಿ ನಾನು ಏನು ಮಾಡಲೂ ಸಿದ್ಧ. ಅವಳು ಒಂದು ಸಲ, ಒಂದೇ ಸಲ ನನ್ನೆದುರು ನಿಂತು….’ ಅವಳ ಸ್ವರ ನಡುಗುತ್ತಿತ್ತು. ಮೇಜಿಗೆ ಕೈ ಊರಿದ್ದಂತೆ ಅವಳು ಎರಡೂ ಅಂಗೈ ಜೋಡಿಸಿ ಹಣೆಗೆ ಒತ್ತಿ ಹಿಡಿದು, ಪ್ರಾರ್ಥಿಸುವವಳಂತೆ ಹೇಳಿದಳು: ‘ಎಷ್ಟೋ ವಿಷಯದಲ್ಲಿ ನನಗೆ ಅವಳ ಕ್ಷಮೆ ಕೇಳಲಿಕ್ಕುಂಟು. ನೋಡಿ, ನಾನೀಗ ಹಿಜಬ್ ಹಾಕುವುದನ್ನೂ ಬಿಟ್ಟಿದ್ದೇನೆ; ನನ್ನ ನಿಲುವಿಗೆ ವಿರುದ್ಧವಾಗಿ; ಯಾಕೆ? ಅಕ್ಕನ ಖುಶಿಗಾಗಿ. ಅವಳಿಗೋಸ್ಕರ ಏನು ಮಾಡಲಿಕ್ಕೂ ತಯಾರು ಎಂದೆನಲ್ಲ. ಈಗ ಹೋಗಿ ಆ ಸಮುದ್ರದಲ್ಲಿ ಹಾರಲೂ ಸಿದ್ಧ ನಾನು.’ ಅವಳ ಆವೇಶಪೂರಿತ ಮಾತುಗಳನ್ನು ಕೇಳಿ ನಾನು ದಿಗಿಲುಗೊಂಡೆ. ಹೋಟೇಲು ಕೋಣೆಗೆ ವಾಪಸ್ಸು ಬಂದ ಮೇಲೂ ಭಾವಪರವಶತೆಯ ಅವೇ ಶಬ್ದಗಳು ನನ್ನ ಕಿವಿಯಲ್ಲಿ ಅಣುರಣಿಸುತ್ತಿದ್ದವು.
ಇಸ್ತಾಂಬೂಲಿನ ನನ್ನ ಕೆಲಸ ಮುಗಿಯುತ್ತ ಬಂದಿತ್ತು. ವಾಪಸ್ಸು ಹೋಗುವ ದಿನಗಳು ಸನ್ನಿಹಿತವಾಗುತ್ತಿದ್ದವು. ಹೋಗುವುದರೊಳಗೆ ಬಂಧುಗಳಿಗೆ, ಸ್ನೇಹಿತರಿಗೆ ಕೆಲವು ಉಡುಗೊರೆಗಳನ್ನು ಖರೀದಿಸುವುದು ಬಾಕಿ ಉಳಿದಿತ್ತು. ಅದಕ್ಕಾಗಿ, ಮೊದಲೇ ನಿಗದಿತವಾದಂತೆ, ವಾರಾಂತ್ಯದಲ್ಲಿ ಪರ್ವೀನ್ ನನ್ನನ್ನು ಅಲ್ಲಿನ ಹೆಸರಾಂತ ಗ್ರಾಂಡ್ ಬಝಾರಿಗೆ ಕರೆದುಕೊಂಡು ಹೋದಳು. ನಾಲ್ಕೈದು ಶತಮಾನಗಳಷ್ಟು ಪುರಾತನವಾದ ಆ ಬಝಾರಿನಲ್ಲಿ ಸಿಕ್ಕದ ವಸ್ತುಗಳಿಲ್ಲ ಎನ್ನುತ್ತಿದ್ದರು. ಅಲ್ಲಿ ಮೂಗಿನ ವರೆಗೆ ಚರ್ಚೆ(ಪರ್ಝಾಲಿಕ್) ಮಾಡಬೇಕಾಗುತ್ತದೆಂದು ಪ್ರತಿಯೊಬ್ಬರೂ ಮೊದಲೇ ಹೆದರಿಸಿದ್ದರಾದರೂ, ಪರ್ವೀನಳ ಚೌಕಾಶಿ ಮಾಡುವ ಕುಶಲತೆಯನ್ನು ಕಣ್ಣಾರೆ ನೋಡಿ ಮುಂಬಯಿಯವಳಾದ ನಾನೂ ಕಂಗಾಲಾಗುವಂತಾಯಿತು. ಎಡೆಯಲ್ಲಿ, ಬೂ ನೇ? (ಇದು ಏನು?) ಬೂ ನೆ ಕದರ್? (ಇದಕ್ಕೆ ಎಷ್ಟು?) ಇತ್ಯಾದಿ ಟರ್ಕಿ ಭಾಷೆಯ ಶಬ್ದಗಳ ಪರಿಚಯವೂ ಅವಳಿಂದಾಗಿ ಆಯಿತು.
ವ್ಯಾಪಾರ ಮುಗಿದ ಮೇಲೆ ಅವಳು ಸಂಜೆಯ ಚಾಕ್ಕೆ ತನ್ನ ಮನೆಗೆ ಬರಲೇ ಬೇಕೆಂದು ಒತ್ತಾಯದಿಂದ ಕರೆದುಕೊಂಡು ಹೋದಳು. ಗ್ರಾಂಡ್ ಬಝಾರದಿಂದ ಅವಳ ಮನೆಗೆ ಹೆಚ್ಚೇನೂ ದೂರವಿದ್ದಿರಲಿಲ್ಲ. ಒಳಗೆ ಹೋದ ಕೂಡಲೇ ಪರ್ವೀನಳ ಅಮ್ಮ ಮಗಳನ್ನು ತಬ್ಬಿ ಹಿಡಿದು ಮುಖವನ್ನೆಲ್ಲ ಸವರಿದಳು. ‘ಅಮ್ಮ, ಬಿಡು, ಬಿಡು,’ ಎಂದು ಕೊಸರಿಕೊಂಡು ಅವಳು ಒಳಗೆ ಹೋದಳು. ಅವಳ ಅಮ್ಮ, ಅಜ್ಜಿಯರೊಡನೆ ‘ಸಲ್ಲಾಂಅಲೈಕುಮ್..’ ಇತ್ಯಾದಿ ಅಭಿವಾದನಗಳ ವಿನಿಮಯವಾಗಿ, ನಾವು ಕುಳಿತ ಮೇಲೆ, ‘ಇವಳು ಬರುವುದು ಒಂದು ಕ್ಷಣ ತಡವಾದರೂ, ಜೀವ ಹೊಡಕೊಳ್ಳುತ್ತದೆ, ಬದುಕಿನ ಮೇಲಿನ ನಂಬಿಗೆಯೇ ಹೋಗಿದೆ.’ ಅವಳ ಅಮ್ಮ ತುಂಡು ತುಂಡು ಇಂಗ್ಲೀಷಿನಲ್ಲಿ ಹೇಳಿದಳು.
ಅವಳ ಅಮ್ಮ-ಅಜ್ಜಿಯರಾಗಲೀ, ಅನಂತರ ಭೇಟಿಯಾದ ಅವಳ ತಂದೆಯೇ ಆಗಲಿ, ನನ್ನನ್ನು ನೋಡಿ ತಮ್ಮ ಹಿರಿಯ ಮಗಳನ್ನು ನೆನೆದುಕೊಂಡಂತಾಗಲೀ, ಯಾವುದೇ ಅಚ್ಚರಿಯ ಉದ್ಗಾರ ಮಾಡಿದಂತಾಗಲೀ ನನಗೆ ತೋರಿಬರಲಿಲ್ಲ. ಅವರ ಭಾಷೆ ನನಗೆ ಅರ್ಥವಾಗುತ್ತಿರಲಿಲ್ಲವೆಂದು ಮಾಡುವ. ಹಾಗಂತ, ಪರಿಚಯ ಮಾಡಿಸುವಾಗ ಎರಡು ಮೂರು ಸಲ ‘ನಿಲೂಫರ್’ ನಿಲೂಫರ್’ ಎಂದು ಪರ್ವೀನ್ ಹೇಳುತ್ತಿದ್ದದ್ದು ಕೇಳುತ್ತಿತ್ತು. ಅವರು ನನ್ನನ್ನೇ ನೋಡುತ್ತ ಬರೇ ತಲೆ ಆಡಿಸುತ್ತಿದ್ದರು.
ಹಲವು ಬಗೆಯ ಬಿಸ್ಕೀಟುಗಳು, ತಿಂಡಿಗಳು ಮೇಜಿನ ತುಂಬ ಬಂದು ಕುಳಿತಿದ್ದವು. ಕೆಲವು ಲೋಕಾಭಿರಾಮದ ಮಾತುಗಳ ಜೊತೆಯಲ್ಲಿ ಚಹಾ ಕುಡಿದು, ಅಲ್ಲಿಂದ ಹೊರಡಲು ಎದ್ದಾಗ, ‘ಅಕ್ಕನನ್ನು ನೋಡಬಹುದಿತ್ತು. ಆದರೆ ಒಮ್ಮೊಮ್ಮೆ ಅವಳಿಗೆ ಮನಸ್ಸು ಸರಿ ಇರುವುದಿಲ್ಲ.’ ಎಂದು ಪರ್ವೀನ್ ಪಿಸುಗುಟ್ಟಿದಳು.
‘ಯಾವ ಅಕ್ಕ?’ ಎಂದೆ ನಾನು.
‘ಅವಳೇ, ನಿಲೂಫರ್,’ ತಟ್ಟೆ-ಲೋಟೆಗಳನ್ನು ಜೋಡಿಸಿ ಒಳಗೆ ತೆಗೆದುಕೊಂಡು ಹೋಗುತ್ತ ಪರ್ವೀನ್ ಹೇಳಿದಳು. ನಿಲೂಫರಳು ಬದುಕಿದ್ದಿರಲಿಕ್ಕಿಲ್ಲ ಎಂದು ಬಗೆದಿದ್ದ ನನಗೆ ಅವಳ ಮಾತೇ ಅರ್ಥವಾಗದಂತಾಯಿತು.
‘ಎಲ್ಲಿ?’
‘ಒಳಗೆ ಕೋಣೆಯಲ್ಲಿದ್ದಾಳೆ. ಕೇಳಿಬರುತ್ತೇನೆ.’ ಎಂದು ಅವಳು ಒಳಗೆ ಹೋದಳು.
ಸ್ವಲ್ಪ ಹೊತ್ತಿನ ನಂತರ ಪರ್ವೀನ್ ಹೊರಗೆ ಬಂದು ನನ್ನನ್ನು ಒಳಗೆ ಬರುವಂತೆ ಸಂಜ್ಞೆ ಮಾಡಿದಳು. ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ ನಿಧಾನವಾಗಿ ಅವಳು ಹೋಗುವ ಪರಿ, ಪಿಸುಮಾತಿನ ಅವಳ ಸ್ವರ ನನ್ನನ್ನು ಅದೆನೋ ತಲ್ಲಣಕ್ಕೆ ಒಳಪಡಿಸಿದುವು. ನನ್ನನ್ನು ಹೋಲುವವಳನ್ನು ನೋಡುವವಳಿದ್ದೇನೆಂಬ ಯೋಚನೆಯಿಂದಲೋ, ಸಂದರ್ಭದ ನಿಗೂಢತೆಯಿಂದಲೋ ನನಗೆ ಮುಜುಗರವೂ ಆಗತೊಡಗಿತ್ತು.
ಒಳಗೆ ಹೋಗಿ ಕೂತದ್ದೇ ಬಂತು. ಅಕ್ಕನನ್ನು ನೋಡಲೂ ಆಗಲಿಲ್ಲ; ಅಕ್ಕನ ಮಾತನ್ನು ಸರಿಯಾಗಿ ಕೇಳಲೂ ಆಗಲಿಲ್ಲ. ಕೋಣೆಯಲ್ಲಿ ದೀಪ ಹಚ್ಚಿರಲಿಲ್ಲ. ಕಿಟಿಕಿಯ ಹತ್ತಿರ ಯಾರೋ ಕುಳಿತಿದ್ದಾರೆಂಬುದು ಆಕೃತಿಯಿಂದ ತಿಳಿಯುತ್ತಿತ್ತೇ ವಿನಃ ಸ್ಪಷ್ಟವಾಗಿ ಏನೂ ಕಾಣುತ್ತಿರಲಿಲ್ಲ. ಹೋಗಿ ಕುಳಿತ ಸ್ವಲ್ಪ ಹೊತ್ತಿನ ನಂತರ, ಕಣ್ಣುಗಳು ಅಲ್ಲಿನ ಮಂದ ಬೆಳಕಿಗೆ ಹೊಂದಿಕೊಳ್ಳುತ್ತಿದ್ದಂತೆ, ಕುಳಿತ ವ್ಯಕ್ತಿಯ ತಲೆಯ ಮೇಲೆ ಮೇಲುಹೊದಿಕೆಯಿದ್ದುದು ಕಂಡಿತು. ಕಿಟಿಕಿಯ ಹೊರಗೆ ನೋಡುತ್ತಿದ್ದ ಆ ಮುಖ ಪರ್ವೀನಳ ಕರೆಗೆ ನಮ್ಮತ್ತ ತಿರುಗಿದಾಗ, ಮೇಲುಹೊದಿಕೆಯೆಂಬುದು ಮುಖವನ್ನೂ ಮುಚ್ಚಿದ್ದುದು ಗೋಚರಕ್ಕೆ ಬಂತು. ಮತ್ತೆ ನೋಡಿದರೆ ಅದು ಮೇಲುಹೊದಿಕೆ ಮಾತ್ರವಾಗಿರದೆ, ಅವಳು ತೊಟ್ಟ ಕಪ್ಪು ಬಣ್ಣದ ಬುರ್ಕಾದ ಭಾಗವಾಗಿತ್ತು.
ಆ ಕೋಣೆಯ ಮೂಲೆಮೂಲೆಯಲ್ಲಿ ಮೌನದ ಹಾಸು ಹಾಸಿದಂತಿತ್ತು. ಸಮಯ ಸ್ಥಬ್ಧವಾದ ಆ ಗಳಿಗೆಯೆಂಬುದು ನನ್ನ ಮನಃಪಟಲದಲ್ಲಿ ಇಂದಿಗೂ ನಿಚ್ಚಳವಾಗಿ ಉಳಿದುಬಿಟ್ಟಿದೆ. ಹಾಗೆಂದು ಅಲ್ಲಿರುವಷ್ಟು ಹೊತ್ತೂ ಯಾವಾಗ ಅಲ್ಲಿಂದ ಹೊರಬಿದ್ದೇನೋ ಎಂದು ಚಡಪಡಿಸಿಕೊಂಡಿದ್ದೆ.
‘ಗುಡ್ ಇವ್‍ನಿಂಗ್, ನೀವು ಹೇಗಿದ್ದೀರಿ?’ ಎಂದು ಅವಳು ಕೇಳಿದಳು. ‘ಚಾ ಕುಡಿದಾಯಿತೇ?’ ಎಂದಳು. ನಿಲೂಫರಳ ಕ್ಷೀಣವಾದ ಮಾತುಗಳು ಇಂಗ್ಲೀಷಿನಲ್ಲಿದ್ದರೂ, ಪರ್ವೀನಳು ಅದನ್ನು ಪುನರುಚ್ಚರಿಸಿದ ಮೇಲಷ್ಟೇ ನನಗೆ ಅರ್ಥವಾಯಿತು. ಮತ್ತೆ ಅಲ್ಲಿ ನೀರವತೆ ವ್ಯಾಪಿಸಿತು. ಪರ್ವೀನಳೂ ಬಾಯಿಕಟ್ಟಿದವಳಂತೆ ವರ್ತಿಸುತ್ತಿದ್ದಳು.
ಇದ್ದಕ್ಕಿದ್ದಂತೆ, ಕ್ಷೀಣವಾದ ಆದರೆ ಮೊನಚಾದ ಇನ್ನೊಂದು ಮಾತು ಹೊರಟಿತು; ಈಗ ಅದು ಸ್ಲೇಟಿನ ಮೇಲೆ ಕಲ್ಲಿನಿಂದ ಗೀಚಿದಂತೆ ತೀಕ್ಷ್ಣವಾಗಿತ್ತು, ‘ಯಾರು ಯಾರನ್ನೋ ಕರೆದುಕೊಂಡು ಬರುತ್ತಾಳೆ, ಹುಚ್ಚಿ! ನಾನೇನು ಶೋ-ಪೀಸೇ?’
ಅವಳ ಮಾತನ್ನು ಕೇಳಿಸಿಕೊಳ್ಳದವಳಂತೆ, ‘ಕತ್ತಲಾಗುತ್ತಿದೆ, ಅವರನ್ನು ಹೋಟೆಲಿಗೆ ಬಿಟ್ಟು ಬರುತ್ತೇನೆ,’ ಎಂದು ಗೊಣಗಿಕೊಂಡು ಪರ್ವೀನ್ ಎದ್ದುನಿಂತಳು.
ಕೋಣೆಯಿಂದ ಹೊರಗೆ ಬರುವಾಗ ನನಗೆ ಕನಸಿನಿಂದ ಎಚ್ಚರಾದಂತೆ ಅನಿಸಿತು.
ಅಲ್ಲಿಂದ ಹೊರಟು ರಸ್ತೆಯುದ್ದಕ್ಕೂ ನಡೆದು ಬಸ್ ನಿಲ್ದಾಣವನ್ನು ತಲಪುವ ವರೆಗೂ ನಾವಿಬ್ಬರೂ ಒಂದೇ ಒಂದು ಅಕ್ಷರ ಮಾತನಾಡಲಿಲ್ಲ. ಮುಖಭಂಗವಾದಂತಾಗಿ ನನ್ನ ಬಾಯಿಯಿಂದ ಮಾತೇ ಹೊರಡುತ್ತಿರಲಿಲ್ಲ. ನನಗೇ ಹೀಗಾಗಬೇಕಾದರೆ ಪರ್ವೀನಳ ಅವಸ್ಥೆ ಹೇಗಿದ್ದಿರಬಹುದೆಂಬ ಕಸಿವಿಸಿಯಲ್ಲಿ ನಾನು ಅವಳತ್ತ ನೋಡಲೂ ಹೋಗಿರಲಿಲ್ಲ. ಅಲ್ಲದೆ, ಅವಳ ಮಾತಿಗೆ ಮರುಳಾಗಿ ಇಕ್ಕಟ್ಟಿಗೆ ಸಿಲುಕಿದೆನೆಂಬ ಅರಿವಿನಿಂದ ವ್ಯಗ್ರಳಾಗಿದ್ದ ನನಗೆ ಅವಳ ಮೇಲೆ ತುಸು ಸಿಟ್ಟೂ ಬರತೊಡಗಿತ್ತು.
ಬಸ್ಸಿಗೆ ಕಾಯುತ್ತಿದ್ದಾಗ ಅದೇ ದಾರಿಯಲ್ಲಿ ಹೋಗುತ್ತಿದ್ದ ಟಾಹಿರ್ ಎಂಬ ನಮ್ಮ ಆಫೀಸಿನ ಹುಡುಗ ನಮ್ಮ ಬದಿಯಲ್ಲಿ ಕಾರು ನಿಲ್ಲಿಸಿ, ಕಿಟಿಕಿಯಿಂದ ಬಗ್ಗಿ, ನಮ್ಮ ಕೈಯ್ಯಲ್ಲಿದ್ದ ಐದಾರು ಚೀಲಗಳನ್ನು ನೋಡಿ, ‘ಎಲ್ಲಿಗೆ? ನಾನು ಬಿಡಲೇ?’ ಎಂದು ಕೇಳುತ್ತ, ಕಾರಿನ ಬಾಗಿಲು ತೆಗೆದ. ಹೋಟೇಲು ಹೆಚ್ಚು ದೂರ ಇರಲಿಲ್ಲವಾದರೂ, ಸಾಮಾನು ಹೊತ್ತುಕೊಂಡು ಬಸ್ಸಿನಲ್ಲಿ ಹೋಗುವುದು ತಪ್ಪಿತೆಂದು ನನಗೆ ಖುಶಿಯಾಯಿತು. ಆತ ಪರ್ವೀನಳಿಗೂ ವಂದಿಸಿ, ‘ಚಿಂತೆ ಬೇಡ, ನಮ್ಮ ಆಫೀಸಿನಲ್ಲೇ ಕೆಲಸ ಮಾಡುವವಳು,’ ಎಂದ.
ಪರ್ವೀನಳಿಂದ ಬೀಳ್ಕೊಟ್ಟು ನಾವು ಹೊರಟ ಮೇಲೆ, ‘ನಿಮಗೆ ಪರ್ವೀನ್‍ಳ ಪರಿಚಯ ಹೇಗೆ?’ ಎಂದು ಟಾಹಿರ್ ಕೇಳಿದ. ‘ಅವಳು ಪ್ರವಾಸಿಗರಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಾಳಲ್ಲವೇ?’ ಎಂದು ನಾನು ಮರುಪ್ರಶ್ನೆ ಹಾಕಿ, ‘ನಿನಗೆ ಅವಳು ಹೇಗೆ ಗೊತ್ತು?’ ಎಂದು ಕೇಳಿದೆ.
‘ನಾವು ದೂರದ ಬಂಧುಗಳು. ಅವಳ ಅಕ್ಕನದು ದೊಡ್ಡ ದುರಂತ. ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿದ್ದಳು; ಸತ್ತು ಬದುಕಿದ್ದು ಎನ್ನಬಹುದು. ಅಥವಾ ಬದುಕಿಯೂ ಸತ್ತಂತೆ….’ ಎಂದು ಕಾರನ್ನು ಚಲಿಸುತ್ತಿದ್ದಂತೆ ಭುಜ ಹಾರಿಸಿದ, ‘ಮುಖ ಗುರುತು ಸಿಗದ ಹಾಗೆ ಲಾಚಾರಾಗಿ ಹೋಗಿದೆ ಅಂತ ನನ್ನ ಅತ್ತೆ ಹೇಳುತ್ತಿದ್ದರು. ಅವರ ಮಗನೊಟ್ಟಿಗೆ ಅವಳ ಮದುವೆ ನಿಶ್ಚಯವಾಗಿತ್ತು. ಮತ್ತೆ ಅದು ರದ್ದಾಯಿತು.’
‘ಈಗಲೂ ಆಗಿಂದಾಗ ಆಸ್ಪತ್ರೆಗೆ ದಾಖಲಾಗಿ ಸೋಂಕಿನ ಭಾಧೆಗಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆಂದು ಅವರಿವರು ಹೇಳುವುದನ್ನು ಕೇಳಿದ್ದೆ; ಆದರೆ ನಾಲ್ಕು ವರ್ಷದಲ್ಲಿ ಅವಳನ್ನು ನೋಡಿದವರಿಲ್ಲ. ಹೊರಗೆ ಬಂದರಲ್ಲವೇ ಯಾರಾದರೂ ನೋಡುವುದು?’ ಎಂದೂ ಹೇಳಿದ.
‘ಅಕ್ಕನದು ಹಾಗಾದರೆ, ತಂಗಿಯದು ಇನ್ನೂ ದೊಡ್ಡ… ದುರಂತ ಎನ್ನಲೇ ದುರಾದೃಷ್ಟ ಎನ್ನಲೇ?’ ಎಂದ.
ನಾನು, ‘ಯಾಕೆ?’ ಎಂದೆ.
‘ಮದುವೆ ಇಲ್ಲ, ಮನೆಯ ಪೂರ್ಣ ಜವಾಬ್ದಾರಿ ತಲೆಯ ಮೇಲೆ. ಕಾಲೇಜು ಅರ್ಧಕ್ಕೆ ಬಿಟ್ಟು ಕೆಲಸಕ್ಕೆ ಸೇರಿದ್ದು ಅವಳು. ಖಾಸಗಿಯಾಗಿ ಪರೀಕ್ಷೆಗೆ ಕುಳಿತಿರಬೇಕೆಂದು ಕಾಣುತ್ತದೆ. ಕಾಲೇಜಿನಲ್ಲಿರುವಾಗ ಅವಳ ಆತ್ಮೀಯ ಸ್ನೇಹಿತನೊಬ್ಬನಿದ್ದ, ಝಫರ್ ಅಂತ. ನನಗೂ ಅವನ ಪರಿಚಯ. ಅವರು ಮದುವೆಯಾಗುವವರಿದ್ದರೋ ಗೊತ್ತಿಲ್ಲ. ಆದರೆ ಮತ್ತೆ ಅವರ ಗೆಳೆತನ ಮುಂದುವರಿಯಲಿಲ್ಲ. ಅವನಿಗೆ ಈಗ ಮದುವೆಯಾಗಿ ಒಂದು ಮಗುವಿದೆ. ಅವಳೇ ಒಪ್ಪಲಿಲ್ಲ ಅಂತ ಕೆಲವರು ಹೇಳುತ್ತಾರೆ.’
ನನ್ನನ್ನು ಹೋಟೆಲಿನೆದುರು ಬಿಡುವಾಗ ಟಾಹಿರ್ ಹಿಂಜರಿಯುತ್ತಲೇ ಹೇಳಿದ,
‘ಮನೆಯ ಜವಾಬ್ದಾರಿ ಪರ್ವೀನಳನ್ನು ಪೂರಾ ಬದಲಾಯಿಸಿಬಿಟ್ಟಿದೆ. ಕಷ್ಟ, ಪಾಪ, ಒಂದೊಂದು ಸಲ ತಲೆ ಬಿಂಗ್ರಿ ಆದವರ ಹಾಗೆ ಮಾಡುತ್ತಾಳೆ ಅಂತ ನನ್ನ ಅತ್ತೆ ಹೇಳುತ್ತ ಇರುತ್ತಾರೆ. ನಾನು ಯಾಕೆ ಹೇಳುತ್ತೇನೆಂದರೆ, ನೀವು ತುಸು ಜಾಗ್ರತೆಯಿಂದಿರಿ. ಹೆಚ್ಚು ಒಡನಾಟ ಬೇಡವೋ ಏನೋ.’
‘ಹೇಗಿದ್ದರೂ ಇನ್ನೆರಡು ದಿನಗಳಲ್ಲಿ ನಾನು ಹೋಗುವವಳು.’ ಎಂದೆ.
ಆಶ್ಚರ್ಯವೆಂದರೆ, ಹೋಟೆಲಿನೊಳಗೆ ಕಾಲಿಡುವಾಗ ಅಲ್ಲಿನ ಮ್ಯಾನೇಜರ್ ನನ್ನನ್ನು ಬದಿಗೆ ಕರೆದು ಹೇಳಿದ ಮಾತುಗಳೂ ಸುಮಾರಾಗಿ ಹಾಗೇ ಇದ್ದವು. ಅದು ವಿದೇಶ ಪ್ರಯಾಣದ ವೇಳೆ ಎಲ್ಲರೂ ಹೇಳುವ ರೂಢಿಗತ ಮಾತುಗಳೇ ಆದರೂ ನಾನು ಸ್ವಲ್ಪ ವಿಚಲಿತಳಾಗದಿರಲಿಲ್ಲ.
ಆತ. ‘ನಿಮಗೆ ಒಂದು ಸಲಹೆ, ಅಷ್ಟೆ,’ ಎಂದು ಸುರುಮಾಡಿ, ‘ನೀವು ಇಲ್ಲಿ ತಿರುಗುವಾಗ ಪರಿಚಯದ ಪ್ರವಾಸಿ ಏಜೆಂಟರನ್ನೇ ಆದಷ್ಟು ಸಂಪರ್ಕಿಸಿ. ನಿಮ್ಮೊಡನೆ ಹೋಗಿದ್ದಳಲ್ಲ ಆಕೆಯದು ಹಾಗೇನೂ ತೊಂದರೆ ಇಲ್ಲ…. ಆದರೆ ಒಮ್ಮೊಮ್ಮೆ ತುಸು ಮಾನಸಿಕ ತಳಮಳಕ್ಕೆ ಒಳಗಾಗಿ ಇಲ್ಲಿನ ವ್ಯವಸ್ಥೆಗೆ ತೊಂದರೆ ಮಾಡುತ್ತಾಳೆ. ಜಾಗರೂಕರಾಗಿರಿ.’ ಎಂದ.
ಅವನಿಗೆ ಕೃತಜ್ಞತೆ ಸೂಚಿಸಿ ಕೋಣೆಗೆ ಬಂದರೂ ಮನಸ್ಸು ಅದನ್ನೇ ಯೋಚಿಸುತ್ತಿತ್ತು. ಪರ್ವೀನ್‍ಳ ಫೋನು ಸಂದೇಶವನ್ನೂ ಉತ್ತರಿಸಲು ಹೋಗಲಿಲ್ಲ. ಮನೆಯಿಂದ ಬಂದ ಫೋನಿನಲ್ಲೂ ಈ ಯಾವುದೇ ವಿಷಯವನ್ನು ಎತ್ತಲು ಹೋಗಲಿಲ್ಲ. ಯಾರದೋ ಮಾತಿಗೆ ಮರುಳಾಗಿ ಬೇಸ್ತು ಬಿದ್ದೆನೆಂಬ ಕರಕರಿಯು ಮನಸ್ಸನ್ನೆಲ್ಲ ತುಂಬಿತ್ತು. ಮುಂದಿನ ಎರಡು ದಿನಗಳೂ ನಾನು ಆಫೀಸಿನ ಕೆಲಸದಲ್ಲೇ ನಿರತಳಾಗಿದ್ದೆ. ಬೆಳಿಗ್ಗೆ ಎಂದಿಗಿಂತ ಬೇಗ ಹೊರಟು ಆಫೀಸು ತಲಪುತ್ತಿದ್ದೆ.
ಹೊರಡುವ ದಿನ ವಿಮಾನ ನಿಲ್ದಾಣಕ್ಕೆ ಹೋಗಲು ಆಫೀಸಿನಿಂದ ನಿಗದಿತವಾದ ಕಾರೇ ಬಂದಿತ್ತು. ಕಾರಿನಿಂದ ಇಳಿದು ಸಾಮಾನು ದೂಡಿಕೊಂಡು ನಿಲ್ದಾಣದ ಒಳಗೆ ಹೋಗುತ್ತಿರುವಾಗ ಯಾರೋ ನನ್ನ ಹೆಸರು ಕರೆದಂತೆ ಅನಿಸಿತು. ತಿರುಗಿ ನೋಡಿದರೆ ಪರ್ವೀನ್. ಕೈಯ್ಯಲ್ಲಿ ಒಂದು ಸಣ್ಣ ಉಡುಗೊರೆಯ ಕಟ್ಟು ಹಿಡಿದು ನಿಂತಿದ್ದಳು. ಸಮೀಪದ ಬೆಂಚಿನಲ್ಲಿ ನನ್ನೆದುರು ಕುಳಿತು, ಆ ಉಡುಗೊರೆಯನ್ನು ಬಿಚ್ಚಿ ಒಳಗಿದ್ದ ಕಲಾತ್ಮಕ ಲಾಟೀನನ್ನು ತೋರಿಸಿದಳು. ಕೆಂಪು ಬಣ್ಣದ ಆ ಪುಟ್ಟ ಲಾಟೀನನ್ನು ಆವತ್ತು ಗ್ರಾಂಡ್ ಬಝಾರಿನ ಅಂಗಡಿಯೊಂದರಲ್ಲಿ ಬಹುವಾಗಿ ಮೆಚ್ಚಿದ್ದೆ. ಅವಳು ಅದನ್ನು ಗಮನಿಸಿದ್ದಿರಬೇಕು. ‘ಇದನ್ನು ನೋಡಿ ನನ್ನ ನೆನಪು ಮಾಡಿಕೊ.’ ಎಂದಳು.
ಅವಳ ಕೈ ಹಿಡಿದು, ‘ತ್ಯಾಂಕ್ಯೂ…’ ಎಂದೆ. ಅವಳಿಗೆ ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ನನಗೆ ವೇದ್ಯವಾಯಿತು. ಭಾವನೆಗಳ ಒತ್ತಡದಲ್ಲಿ ಕದಡಿಹೋದವಳಂತೆ ಅವಳ ಮುಖ ಬೀಗಿತ್ತು. ನನ್ನನ್ನು ಆಲಂಗಿಸಿ, ‘ನಿನಗೆ ತೊಂದರೆ ಕೊಟ್ಟಿದ್ದರೆ ಕ್ಷಮಿಸು…’ ಎಂದು ಪಿಸುಗುಟ್ಟಿದಳು.
ಅವಳಿಗೆ ವಿದಾಯ ಹೇಳಿ, ಕೈಯ್ಯಲ್ಲಿದ್ದ ಉಡುಗೊರೆಯನ್ನು ಅದರ ಡಬ್ಬಿಯಲ್ಲಿ ಹಾಕಿ ಕೈಚೀಲದಲ್ಲಿಟ್ಟುಕೊಳ್ಳುತ್ತಾ ಒಳಗಿನ ಗೇಟಿನ ಕಡೆಗೆ ನಡೆದೆ. ಗೇಟಿನಲ್ಲಿ ನಿಂತು ಹಿಂತಿರುಗಿ ನೋಡಿದರೆ, ಪರ್ವೀನ್ ಇನ್ನೂ ಅಲ್ಲೇ ನಿಂತು ಕೈಯಾಡಿಸುತ್ತಿರುವುದು ಕಂಡಿತು.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ