ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನರಕಕ್ಕೆ ಹೋಗುವಿರಿ…

ಜಬೀವುಲ್ಲಾ ಎಂ. ಅಸದ್
ಇತ್ತೀಚಿನ ಬರಹಗಳು: ಜಬೀವುಲ್ಲಾ ಎಂ. ಅಸದ್ (ಎಲ್ಲವನ್ನು ಓದಿ)

ಪವಿತ್ರ ಅಲ್ಲಾಹನ ನಾಮದಲಿ
ಜಿಹಾದಿನ ನೇಮದಲಿ
ಶಾಂತಿಯ ಧರ್ಮವನ್ನು
ಭಯೋತ್ಪಾದನೆಯ ಧರ್ಮವಾಗಿಸಿದ ಉಮೇದಿನಲಿ
ತನ್ನೊಳಗಿನ ಸೈತಾನನನ್ನು
ಕೊಲ್ಲುವ ಬದಲು
ಧರ್ಮದ ನಶೆಯಲ್ಲಿ ಧುತ್ತರಾಗಿ
ಅಮಾಯಕರನ್ನು ಕೊಲ್ಲುವ ನಿಮ್ಮನ್ನು
ಅಲ್ಲಾಹನು ಸಹ ಕ್ಷಮಿಸಲಾರನು
ನೆನಪಿರಲಿ….

ಧರ್ಮ ಎಂದರೆ…
ಕೊಲ್ಲುವುದಲ್ಲ ಪಾಪಿಗಳೇ
ಬಾಲಿಸುವುದು, ಬದುಕಿಸುವುದು
ಹಸಿದವನಿಗೆ ನಿಮ್ಮ ರೊಟ್ಟಿಯನು
ಮುರಿದು ಹಂಚಿಕೊಳ್ಳುವುದು
ನೀರು ಕುಡಿಸಿ ದಾಹ ಕಳೆಯುವುದು
ನೊಂದವರ ನೋವಿಗೆ ಮಿಡಿಯುವುದು
ಅವಶ್ಯಕತೆಗಿಂತ ಸಂಪತ್ತು ಹೊಂದದಿರುವುದು
ಯಾರಿಗೂ ಕೆಡಕು ಮಾಡದಿರುವುದು
ಸರ್ವರಿಗೂ ಒಳಿತನ್ನು ಕೋರಿ ಪ್ರಾರ್ಥಿಸುವುದು
ಇತರೆ ಎಲ್ಲಾ ಧರ್ಮಗಳನ್ನು
ಗೌರವದಿಂದ ಕಾಣುವುದು

ನಿಮ್ಮ ಇಸ್ಲಾಂ ಯಾವುದು?
ನಿಮಗೆ ಇಮಾನ್ ಎಲ್ಲಿದೆ?
ಮದ್ದು ಗುಂಡು ಬಂದುಕುಗಳ ಸದ್ದಿನಿಂದ
ಅಕಾಲಿಕ ಯುದ್ಧ ಸಾರುವಿರಿ
ಜನರ ನೆಮ್ಮದಿ ಶಾಂತಿಯ ಕದಡಿ
ನೆಮ್ಮದಿಯ ಭಂಗ ಮಾಡುವಿರಿ
ಅಸಂಖ್ಯ ಮಕ್ಕಳನ್ನು ಅನಾಥರನ್ನಾಗಿಸಿದಿರಿ
ನಿಮ್ಮ ಕಾಮ ವಾಂಛೆಗೆ
ಹೆಣ್ಣುಮಕ್ಕಳ ಅತ್ಯಾಚಾರಗೈಯುವಿರಿ
ನರ ರೂಪದ ರಾಕ್ಷಸರು
ಅಮಾಯಕರ ಕೊಂದು ಸಂಭ್ರಮಿಸುವ
ರಕ್ತಬೀಜಾಸುರರು
ನೀವು….

ಭಯೋತ್ಪಾದನೆಯಿಂದ
ಇಡೀ ಜಗತ್ತನ್ನೇ ನರಕ ಮಾಡಲು
ಹೊರಟಿರುವಿರಿ
ನಿಮ್ಮ ಮತಿಹೀನತೆ ಮತ್ತು ಸ್ವಾರ್ಥಕ್ಕೆ
ನಿಮ್ಮಂತಹ ವಿಕೃತರಿಗೆ
ಎಲ್ಲಿಯ ಸ್ವರ್ಗ?
ಎಲ್ಲಾ ನಿಮ್ಮ ಭ್ರಮೆ…
ನಿಮ್ಮಂಥವರಿಗಾಗಿಯೇ ಇದೆ ನರಕ
ಅಲ್ಲಾಹನು ನಿಮ್ಮನ್ನು ಕ್ಷಮಿಸಲಾರನು