- ಮರಿಹಕ್ಕಿ ಮರಳಿತು ಕಾಡಿಗೆ… - ಅಕ್ಟೋಬರ್ 29, 2024
- ಕೆಟ್ಟಿದ್ದು ಕಾಲವಲ್ಲ ಮತ್ತು ಒಡಲ ನುಡಿಗಳು - ಮಾರ್ಚ್ 25, 2023
- ಕಲಿಕೆಯ ಮಾಧ್ಯಮವಾಗಿ ಕನ್ನಡ - ನವೆಂಬರ್ 27, 2022
ನಾಗರ ಹಾವೇ ಮತ್ತು ಇತರ ಕವಿತೆಗಳು…
ಡಾ. ಚಿಂತಾಮಣಿ ಕೊಡ್ಲೆಕೆರೆ ಕನ್ನಡದ ಮಹತ್ವದ ಕವಿಗಳಾಗಿ ಓದುಗರಿಗೆ ಚಿರ ಪರಿಚಿತರು. ಅವರ ಕವಿತೆಗಳು ವಿಶಿಷ್ಟ ಕಾವ್ಯ ಗುಣಗಳಿಂದಲೂ, ಸರಳ ಸಂಕೀರ್ಣ ವಾಗಿಯೂ, ಗೂಡಾರ್ಥ, ಭಾವಾರ್ಥಗಳಿಂದಲೂ ಓದುಗರಿಗೆ ಒಂದು ವಿಶಿಷ್ಟ ಅನುಭೂತಿಯನ್ನು ಒದಗಿಸುವಲ್ಲಿ ಯಶಸ್ವಿಯಾಗುತ್ತವೆ. ನಾಗರಹಾವೇ ಮತ್ತು ಇತರ ಕವಿತೆಗಳು ಕನ್ನಡದ ಕಾವ್ಯಾಸಕ್ತರಿಗೊಂದು ವಿಶೇಷ ಪ್ರಸ್ತುತಿ… ಅವರ ಸಪ್ತ ಕವಿತೆಗಳ ಗುಚ್ಚ ದೊಂದಿಗೆ ಚಿಂತಾಮಣಿ ಕೊಡ್ಲೆಕೆರೆ ಕಾವ್ಯೋತ್ಸವ ಕ್ಕೆ ಸ್ವಾಗತ. ಕಾವ್ಯ ಗಂಗೆಯಲ್ಲಿ ಮುಳುಗಿ ಮನಸಾರೆ ಆನಂದಿಸಿ…
1
ನಾಗರ ಹಾವೇ
ನಾಗರಹಾವೇ ಹಬ್ಬದ ದಿವಸ
ಬಂದಿದ್ಯಾತಕೆ ಮನೆಗೆ?
ಮಕ್ಕಳ ಹಾಗೆ ಕೈವಶವಾಗಿ
ಹೊರಟಿದ್ಯಾತಕೆ ಕೊನೆಗೆ?
ರಹಸ್ಯ ಲೋಕದ ಪ್ರತಿನಿಧಿಯಂತೆ
ಕಾಣಿಸಿ ಕನಸಿನ ಒಳಗೂ
ಕನಸಲ್ಲಷ್ಟೇ ಸಾಲದು ಎಂದು
ಬಂದೆ ಮರುದಿನ ಬೆಳಗು!
ಬೆಚ್ಚಿ ಸರಿದಳು ಮನೆಯ ಯಜಮಾನಿ
ಅರಿಯದೆ ನಿನ್ನನು ಮುಟ್ಟಿ
ಹಾವ ಹಿಡಿವವನ ಕೋಲನ್ನೇರಿ
ಹೊರಟೆ ನೀನು ಹೆಡೆ ಎತ್ತಿ!
ಆಳಗರ್ಭದಲಿ ಅಡಗಿದ ನಿಗೂಢ
ರಹಸ್ಯ ಹೀಗೆ ಒಮ್ಮೊಮ್ಮೆ
ತಣ್ಣಗೆ ಬಂದು ಮುಟ್ಟಿ ನಡೆಯುವುದು!
ಅರಿವೆಂಬುದು ಒಣಹೆಮ್ಮೆ!
2
ಎಂದೂ ಮುಗಿಯದ ಕಥೆ
ತಲೆಯ ಮೇಲೆ ಶಿಶುವ ಹೊತ್ತು
ಕಾವಲು ಕಣ್ತಪ್ಪಿಸಿ
ವಸುದೇವ ನಡೆಯುತಿದ್ದ
ನಿಶೆಗೆ ತನ್ನನೊಪ್ಪಿಸಿ
ಕತ್ತಲನ್ನು ಒದೆಯುತಿತ್ತು
ಶಿಶುವಿನ ಅಂಗಾಲು
ತಾಯಿ ಯಮುನೆ ಪ್ರಾರ್ಥಿಸುವಳು
ನನಗೂ ಬೇಕು ಪಾಲು!
ಶಿಶುವಿಗೆ ಬೆಂಗಾವಲಾಗಿ
ಸಾವಿರ ಹೆಡೆ ಶೇಷ
ತೂಗಿ ತೂಗಿ ಬರುತಲಿದ್ದ
ದಮಿಸುತ ಆವೇಶ
ಸುರಿವ ಮಳೆ ಹೊಳೆವ ಸಿಡಿಲು
ಆರ್ಭಟಿಸುವ ಗುಡುಗು
ಕಾರ್ಗತ್ತಲು ಬಿರುಗಾಳಿ
ದಡ ಸೇರುವವರೆಗೂ
ಕಥೆ ದೊಡ್ಡದು ವಸುದೇವ
ನಡೆವ ದಾರಿ ದೂರ
ಭಕ್ತ ಭಾಗವತರ ಮೇಲೆ
ಭಗವಂತನ ಭಾರ!
3
ಅಜ್ಜನ ಕಾಲದ ವಿಚಾರಗಳು
ನಾಡಿಗೆ ಭೂಪ
ಆದರೆ ಪಾಪ
ಮೊಬೈಲು ಫೋನಿಲ್ಲ – ಹೋಗಲಿ
ಲ್ಯಾ೦ಡ್ ಲೈನೂ ಇಲ್ಲ!
ಭಳಿರೇ ಭೂಪ
ಆದರೆ ಪಾಪ
ಟಿವಿ ಇರಲಿಲ್ಲ – ಹಾರಲು
ವಿಮಾನ ಇರಲಿಲ್ಲ!
ಆದರೂ ಭೂಪ
ದೇವರ ರೂಪ
ಎಂದರು ಜನರೆಲ್ಲ – ಹಾಗೇ
ಇದ್ದರು ನೃಪರೆಲ್ಲ
ನಾಡಿನ ಭೂಪ
ಮಾಡಲು ಪಾಪ
ಕೇಡಾಗುವುದೆಂದು – ಪ್ರಳಯ
ಸಂಭವಿಸೀತೆಂದು
ಜನರ ನಂಬಿಕೆ.
ದೊರೆಗೂ ಅಂಜಿಕೆ
ಎಚ್ಚರದಿಂದಿದ್ದ – ದೊರೆತನ
ಸಾರ್ಥಕಗೊಳಿಸಿದ್ದ
ದೇವರ ಭೀತಿ
ಧರ್ಮ ನೀತಿ
ಬೇಡವಂತೆ ಇಂದು – ಮತ್ತೆ
ಮುಂದೂ ಎಂದೆಂದೂ!
ಅಜ್ಜ ಕೇಳುವನು
ನೆರೆದ ನಮ್ಮನು
ಇದು ಎಂಥಾ ರಾಜ್ಯ! – ಇಲ್ಲಿ
ಬಾಳಲೆಂತು ಸಾಧ್ಯ?
ಮೇಲೆ ದೇವರು
ಕೆಳಗೆ ಆಳ್ವರು
ಕಾಯಬೇಕು ನಾಡ – ಭೀತಿ
ನೀತಿ ಬೇಕು ನೋಡ
“ಹೊಸ ಕಾಲಕ್ಕೆ
ಕಳೆ ಬರಲಿಕ್ಕೆ
ಹೊಸದೆಲ್ಲವು ಬರಲಿ – ಜೊತೆಗೆ
ಹಳೆಯ ಸ್ಮೃತಿಗಳಿರಲಿ”
4
ಕಾಣದೂರಲ್ಲಿ
ಕಾಣದೂರಲ್ಲಿ ಒಂದು ರಸ್ತೆಯಿದೆ
ಹಾಗೇ ನಡೆದು ಹೋಗಿ
ಒಳದನಿ ಹೇಳಿದ ಹಾಗೇ ನಡೆದರೆ
ಆಗಬಹುದು ಯೋಗಿ
ಉಬ್ಬು ತಗ್ಗುಗಳ ತಿರುವು ರಸ್ತೆಯದು
ಅಡ್ಡದಾರಿಯಿಲ್ಲ!
ನಡುವಲಿ ಕಾಣುವ ದೃಶ್ಯಾವಳಿಗಳ
ಸೊಬಗು ಕಡಿಮೆಯಲ್ಲ!
ಮಾವಿನ ತೋಪಲಿ ಹಣ್ಣಿನ ಮರಗಳು
ನೆರಳು,ಹಕ್ಕಿ ಹಾಡು
ನದೀತೀರದಲಿ ತಣ್ಣನೆ ಗಾಳಿ
ಮೇಲೆ ದಟ್ಟ ಕಾಡು
ಒಳದನಿ ಹೇಳಿದ ಹಾಗೇ ನಡೆದರೆ
ಆಗಬಹುದು ಯೋಗಿ
ಒಳಗೊಳಗೊಳಗೇ ಇಳಿಇಳಿಯುತ್ತಿರಿ
ತಣ್ಣಗೆ ತಲೆಬಾಗಿ
ಅಲ್ಲೆ ವಿಶ್ರಮಿಸಿ ದಣಿವೆನಿಸಿದರೆ
ದೊಡ್ಡ ಮರದ ನೆರಳು!
ನಡೆಯುವುದೆಲ್ಲಿಯವರೆಗೆ ಎಂದಿರ?
ಗುರಿ ಮುಟ್ಟುವವರೆಗೂ!
ಗುಡ್ಡಗಳೇರಿ ನದಿಗಳಲಿಳಿದು
ಮಳೆ ಚಳಿ ಬಿಸಿಲೆನದೆ
ನಡೆಯದೆ ನೀನು ಹಾದಿಕಾರನೇ
ಜಡವಾಗಿರಬಹುದೆ!
ಒಳದನಿ ಹೇಳಿದ ಹಾಗೆ ನಡೆಯುವುದು
ಬಾಳಿನ ಸೌಭಾಗ್ಯ
ನಡೆದು ಮುಟ್ಟುವುದು ಬೆಳಕೇ ಆಗುವುದು
ಯತ್ನಿಸಿದರೆ ಸಾಧ್ಯ!
5
ಆಡದ ಮಾತು
ಲವ ಕುಶರಿಗೆ ಋಷಿಕವಿ ರಾಮಾಯಣ
ಕಾವ್ಯ ಕಲಿಸುವಾಗ
ತಾಯಿ ಜಾನಕಿಗೆ ಅಡುಗೆ ಒಳದಲ್ಲಿ
ಕೇಳುತಿತ್ತು ರಾಗ
ಯಾವ ಹಾಡು ಇದು ಎದೆಯ ಮಿಡಿಯುವೀ
ಭಾವ ಯಾವುದೆಂದು
ಅಮ್ಮ ಕಿವಿಗೊಟ್ಟು ಆಲಿಸಿದಳು-ಅದೊ
ರಾಮ ಬಂದನಂದು!
ರಾಮ ಬಂದ ರಘುರಾಮ ಬಂದ ಅದೋ
ಶಿವಧನುಸ್ಸನೆತ್ತಿ
ಪಂಥ ಗೆದ್ದ ಪುರುಷೋತ್ತಮ- ನೋಡಿರೆ!
ಹರ್ಷದಶ್ರು ಉಕ್ಕಿ
ಬಾಲಕಿ ಸೀತಾದೇವಿ ಬಂದಳು
ಪುಷ್ಪಮಾಲೆ ಹಿಡಿದು
ಕಾಣದಾಯೋಧ್ಯೆಗೆ ಹೊರಟಳು ಕನ್ನಿಕೆ
ಅವನ ನಂಬಿ ನಡೆದು
ಮಿಥಿಲೆಯ ದಾಟಿ ಮುದ್ದಿನ ಮಗಳು
ಹೆಜ್ಜೆ ಇರಿಸುವಾಗ
ಯಾರೂ ಕಾಣದ ಹಾಗೆ ಕಂಗಳನು
ಒರೆಸಿಕೊಂಡ ರಾಜ
ಜನಕನ ಕಣ್ಣಿಗೆ ಕಂಡಿದ್ದೇನು?
ಹೆತ್ತ ತಂದೆ ಬಲ್ಲ
ಜಾನಕಿ ಬಲ್ಲಳು.ಋಷಿಕವಿ ಬಲ್ಲನು.
ಮಾತಲಿರಿಸಲಿಲ್ಲ
ಆಡದ ಭಾವಗಳಿರುವವು ಬಾಳಲಿ
ಆಳ ತಿಳಿದು ನೋಡೆ
ಕಾವ್ಯವು ಬರಿದೇ ಆಡುವ ಮಾತೇ?
ನಾನು ಒಪ್ಪಲಾರೆ!
6
ನಾಯಿಪಾಡು
ನಮ್ಮ ಬೀದಿನಾಯಿಗೆ ಡಾಲಿ ಎಂದು ಹೆಸರು
ಸುಡುವ ಬಿಸಿಲು ಹಗಲಿನಲ್ಲಿ ಹೋಯಿತದರ ಉಸಿರು
ಹೇಳಿಕೇಳಿ ಬೀದಿನಾಯಿ. ಬ್ರೇಕಿಂಗ್ ಸುದ್ದಿ ಅಲ್ಲ
ನಮ್ಮ ಬಿಟ್ಟು ಯಾರಿಗೂ ವಿಷಯ ತಿಳಿಯಲಿಲ್ಲ
ಸದಾ ಹಸಿದ ಪ್ರಾಣಿ ಅದು. ಏನಿಟ್ಟರೂ ತಿಂದು
ಮನೆಯ ಮುಂದೆ ಮರದ ನೆರಳಿನಲ್ಲಿ ಮಲಗಿಕೊಂಡು
ಹಗಲು ರಾತ್ರಿ ಮನೆಗಳಿಗೆ ಇವುಗಳದೇ ಕಾವಲು
ಮರಿ ಬಂಟು ಜೊತೆಗೆ ಇರಲು ಯಾರೂ ಇತ್ತ ಹಾಯರು
ಮರಳುಗುಡ್ಡೆ ಮೇಲೆ ತಾಯಿ,ಮಗರ ಅಗ್ರಪೀಠ
ಮೈ ತುಂಬಾ ಮರಳು ಮೆತ್ತುವಂಥ ಆಟ,ಓಟ
ಚಪ್ಪಲಿಗಳಲೇನಿದೆಯೋ! ಡಾಲಿ ಎತ್ತಿ ಓಡಿ
ಕಚ್ಚಿ ಕಡಿದು ತಾಯಿ ಮಗ ಕುಣಿವರಾಟ ಆಡಿ
ಹಸಿವೆ ನಿದ್ರೆ ಆಟ ಕೂಟ ಬಿಟ್ಟು ಬೇರೆ ತಿಳಿಯದು
ಬೀದಿನಾಯಿ ಬಾಳ್ವೆಗೆ ಬೇರೆ ಭಾಗ್ಯ ಬಾರದು
____
ಈಗ ಸ್ವಲ್ಪ ದಿನಗಳಿಂದ ಡಾಲಿ ಅನಾಸಕ್ತ
ಜೀವ ಕುಸಿದು ಅರೆದೋಸೆ ತಿನ್ನಲೂ ಅಶಕ್ತ
ಇಂದು ಬೆಳಗು ಮೋರಿಗಿಳಿದು ಕಣ್ಮುಚ್ಚಿತು ಡಾಲಿ
ಕಾಯುತಿತ್ತು ಪ್ರಾಣವಾಯು ನಿಷ್ಕ್ರಮಿಸುವ ಪಾಳಿ
ಮಧ್ಯಾಹ್ನದ ಹೊತ್ತಿಗೆ ಸೂರ್ಯ ಬಂದ ನೆತ್ತಿಗೆ
ಬಂಟು ಮೂಸಿ ಹೋದ.ವಾರೆಯಾಯ್ತು ಡಾಲಿ ಕುತ್ತಿಗೆ
ಗಡಪಾರಿ ಕುಠಾರಿ ತಂದು ಚನ್ನಿಗರಾಯಪ್ಪ
ಬೀದಿ ನಾಯಿ ಬಾಳಿಗೂ ಬೆಲೆ ಇದೆ ಎನ್ನುತ್ತ
ತಗ್ಗು ತೋಡಿ ಡಾಲಿಯನ್ನು ಮಣ್ಣಲಿರಿಸುವಾಗ
ಬಂಧುವಿಲ್ಲ ಬಳಗವಿಲ್ಲ ಸಂದಿತೊಂದು ಜೀವ
7
ಯಾರೇ ಬಂದದ್ದು?
ಮಧ್ಯಾಹ್ನದ ಉರಿಬಿಸಿಲಲಿ
ಯಾರೇ ಬಂದದ್ದು?
“ಗೋವರ್ಧನ”ಎಂದು ನಮ್ಮ
ಹುಡುಗನ ಕರೆದದ್ದು?
ಆನಿಸಿಟ್ಟ ಸೈಕಲ್ಲನು
ಯಾರೇ ಎತ್ತಿದ್ದು?
ದೊಡ್ಡವರಿಗೆ ತಿಳಿಯದಂತೆ
ಒಳಪೆಡಲ್ ಹೊಡೆದದ್ದು?
ರಥಬೀದಿಯ ಕೊನೆವರೆಗೂ
ಟ್ರಿಣ್ ಟ್ರಿಣ್ ಒತ್ತಿದ್ದು?
ಟೂರಿಂಗ್ ಟಾಕೀಸ್ ವರೆಗೂ
ಡಬ್ಬಲ್ ಹೊಡೆದದ್ದು?
ಮರ್ತು ಪೈ ಅಂಗಡಿಯಲಿ
ಶೇಂಗಾ ತಿಂದದ್ದು?
ಸದ್ದಿಲ್ಲದೆ ಕೇರಿ ಹೊಕ್ಕಿ
ಸೈಕಲ್ ಇಟ್ಟಿದ್ದು?
‘ಸಂಜೆ ಬೇಲೆಯಲ್ಲಿ ಭೇಟಿ’
ಸಣ್ಣಗೆ ನುಡಿದದ್ದು?
ಯಾರೂ ತಿಳಿಯರೆಂದೇ ತಿಳಿದು
ಸುಮ್ಮನೆ ಮಲಗಿದ್ದು?
ಚಿಗುರುಮೀಸೆ ಹುಡುಗನೀಗ
ಯಾಕೇ ನಕ್ಕಿದ್ದು?
ಕನಸಿನಲ್ಲೂ ಟ್ರಿಣ್ ಟ್ರಿಣ್ ಟ್ರಿಣ್
ಗಂಟೆಯ ಒತ್ತಿದ್ದು?
ಒಳಪೆಡಲಿನ ಹಾಗೇ ಕೈ
ಕಾಲನು ಮುದುರಿದ್ದು?
ಮಧ್ಯಾಹ್ನದ ಉರಿಬಿಸಿಲಲಿ
ಯಾರೇ ಬಂದದ್ದು?
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ