ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾಡಿಗೆ ಬಂತು ನಾಗರ ಪಂಚಮಿ

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

ಪಂಚಮಿ ಹಬ್ಬಕ ಉಳಿದಾವ ದಿನ ನಾಕ

ಅಣ್ಣ ಬರಲಿಲ್ಲ ಯಾಕ ಕರಿಯಾಕ.

ಡಾ!! ದ.ರಾ ಬೇಂದ್ರೆ.

ಶ್ರಾವಣ ಶುದ್ಧ ಪಂಚಮಿಗೆ ನಾಗ ಪಂಚಮಿ ಎಂದು ಹೆಸರು. ಅಂದು ಭಯಭಕ್ತಿಯಿಂದ ನಾಗರಾಧನೆ ಮಾಡುವವರಿಗೆ ಸರ್ಪಭಯವಿಲ್ಲ.
ಗಿಡ, ಮರ, ಕಲ್ಲು,ಮಣ್ಣು,ಪಶು,ಪಕ್ಷಿ ಮುಂತಾದವುಗಳನ್ನು ಒಂದೊಂದು ಸಂದರ್ಭದಲ್ಲಿ ದೇವರೆಂದು ಪೂಜಿಸುವ ಪದ್ಧತಿ ಹಿಂದಿನಿಂದಲೂ ಬಂದಿದೆ. ಗೀತೆಯಲ್ಲಿ ಅನಂತಶ್ಚ್ಮಾಸಿನಾಗಾನಾಮ್ ಇಂದು ಇದೆ. ಅಂದರೆ ನವ ನಾಗಳಲ್ಲಿ ಅನಂತನಾಗ ನಾನಾಗಿದ್ದೇನೆ ಎಂದು ಶ್ರೀಕೃಷ್ಣನ ಹೇಳಿರುವನು. ಪ್ರತಿವರ್ಷ ನಾಗಪಂಚಮಿ ಅಥವಾ ನಾಗರಪಂಚಮಿ ಹಬ್ಬ ಬರುವುದು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ. ಸಾಮಾನ್ಯವಾಗಿ ನಮ್ಮ ದೇಶದ ಎಲ್ಲಾ ಭಾಗಗಳಲ್ಲೂ ಎಲ್ಲ ಮತ ಪಂಥ ಪಂಗಡಗಳಲ್ಲೂ ಈ ಹಬ್ಬವನ್ನು ಆಚರಿಸಲಾಗುತ್ತದೆ. ಜನರು ಈ ಹಬ್ಬವನ್ನು ಅಪಾರ ಭಯ,ಭಕ್ತಿ ಹಾಗೂ ಶ್ರದ್ಧೆಗಳಿಂದ ಆಚರಣೆ ಮಾಡುತ್ತಾರೆ.

ನಾಗನ ಮಹಾತ್ಮೆ

ವಿಘ್ನೇಶ್ವರನ ಒಡಲಿಗೆ ಕಟ್ಟಾಗಿ, ಪರಮೇಶ್ವರನಿಗೆ ಆಭರಣವಾಗಿ, ವಿಷ್ಣುವಿಗೆ ಹಾಸಿಗೆಯಾಗಿ, ಕುಂಡಲಿನೀ ಶಕ್ತಿಯ ಪ್ರತೀಕವಾಗಿ, ತ್ರಿಪುರ ಸಂಹಾರ ಕಾಲದಲ್ಲಿ ಮೇರುವೆಂಬ ಬಿಲ್ಲಿನ ಹದೆಯಾಗಿ, ಸಮುದ್ರ ಮಂಥನ ಸಮಯದಲ್ಲಿ ಮಂದರ ಪರ್ವತವೆಂಬ ಕಡಲಿಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜ ಚಿಹ್ನೆಯಾಗಿ, ಭೂಮಿಯನ್ನು ಹೊತ್ತ ಆದಿಶೇಷನಾಗಿ, ಪಾರ್ಶ್ವನಾಥ ತೀರ್ಥಂಕರನ ಶಿರೋಲಾಂಛನವಾಗಿ, ಇತಿಹಾಸ ಪುರಾಣಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಹಾಗೆ ತ್ರೇತ್ರಾಯುಗದಲ್ಲಿ ಶ್ರೀ ವಿಷ್ಣು ರಾಮನ ಅವತಾರ ತೆಗೆದುಕೊಂಡಾಗ ಶೇಷನು ಲಕ್ಷ್ಮಣನ ಅವತಾರ ತೆಗೆದುಕೊಂಡಿದ್ದನು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾಗಿದ್ದನು. ಅಲ್ಲದೆ ಸುಬ್ರಹ್ಮಣ್ಯ ಸ್ವಾಮಿಯ ಅನನ್ಯ ಸ್ವರೂಪವಾಗಿ, ಒಕ್ಕಲಿಗನ ಆಪ್ತಮಿತ್ರನಾಗಿ ಸೇವೆ ಸಲ್ಲಿಸುತ್ತಿರುವ ನಾಗನ ನಿಷ್ಠೆ ಅನುಪಮವಾದುದು.

ನಾಗಪ್ಪ ಸಾಂಪ್ರದಾಯಿಕ ನಂಬಿಕೆಯಂತೆ ವಿಷದ ಪ್ರಾಣಿಯಾಗಿರುವುದರಿಂದ ಅದು ನಮ್ಮನ್ನು ಕಚ್ಚದೆ ಇರಲಿ ಎಂಬುದಾಗಿ ಪ್ರಾರ್ಥಿಸುವ ಸದುದ್ದೇಶದಿಂದ, ಆತನಿಗೆ ಗೌರವ ಸೂಚಿಸಲು ನಾಗಪೂಜೆ ನಿರಂತರವಾಗಿ ನಡೆದಿರುವುದು. ನಾಗಪೂಜೆಯೇ ನಾಗರ ಪಂಚಮಿಯ ವೈಶಿಷ್ಟ್ಯ.

ಅಲ್ಲದೆ ‘ ನಾಗ ‘ ಬಹುತೇಕ ಭಾರತೀಯರಿಗೆ ಪೂಜಾರ್ಹವಾಗಿದೆ. ಅದು ಕೇವಲ ಭಾರತೀಯರಿಗಷ್ಟೇ ಅಲ್ಲದೆ, ಚೀನಾ,ಜಪಾನ್, ಈಜಿಪ್ಟ್ , ಗ್ರೀಸ್ ಮೊದಲಾದ ಪುರಾತನ ಸಂಸ್ಕೃತಿಯುಳ್ಳ ರಾಷ್ಟ್ರಗಳ ಜನರಿಗೂ ಪೂಜಾರ್ಹವಾದುದಾಗಿರಿವುದು.

ಮಾನವ ಜನಾಂಗದ ಆದಿ ಕಾಲದಿಂದಲೂ ನಾಗರಾಧನೆ ನಿರಂತರವಾಗಿ ನಡೆದು ಬಂದಿರುವುದು ವ್ಯಾಪಕವಾಗಿ ಗುರುತಿಸಬಹುದಾಗಿದೆ. ಭಾರತದಲ್ಲಿ ಶೈವ, ಶಾಕ್ತ-
ವೈಷ್ಣವ, ಬೌದ್ಧ, ಜ್ಯೆನ ಮುಂತಾದ ಎಲ್ಲಾ ಸಂಪ್ರದಾಯಗಳನ್ನು ನಾಗಪೂಜಾ ಆಚರಣೆಯಲ್ಲಿದೆ. ಪುತ್ರಪ್ರಾಪ್ತಿಗಾಗಿ, ಇಷ್ಟಾರ್ಥ ಸಿದ್ಧಿಗಾಗಿ, ನಾಗರಪಂಚಮಿಯಂದು ನಾಗದೇವತೆಯನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ.
‌ ಅನಂತ,ವಾಸುಕಿ,ಶಂಖ, ಪದ್ಮ, ಕಂಬಲ, ಕರ್ಕೋಟಕ,ಧೃತರಾಷ್ಟ್ರ, ಶಂಖಕ, ಕಾಳಿಯ, ತಕ್ಷಕ,ಪಿಂಗಳ ಮತ್ತು ಮಣಿಭದ್ರಕ. ಹೀಗೆ ಹನ್ನೆರಡು ಮುಖ್ಯ ನಾಗದೇವತೆಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪ ಭಯವಿರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ಇದೆ.

ಪೌರಾಣಿಕ ಹಿನ್ನೆಲೆ .

ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನ ಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಸರ್ಪ ಯಜ್ಞವನ್ನು ನಿಲ್ಲಿಸಿಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಸರ್ಪಯಜ್ಞ ವನ್ನು ನಿಲ್ಲಿಸಿದ ದಿನವು ಪಂಚಮಿಯಾಗಿತ್ತು. ಇದರಿಂದ ಆ ದಿನ ನಾಗಗಳಿಗೆ ಅತ್ಯಂತ್ಯ ಪ್ರಿಯವಾಗಿದೆ. ಆ ದಿನ ಪೂಜೆಯಿಂದ ಪ್ರಸನ್ನ ಗೊಂಡ ನಾಗಗಳು ಭಕ್ತರನ್ನು ಹರಸುತ್ತದೆ.
ಪಂಚಮಿ ತಿಥಿಯು ಗರುಡದೇವತೆಗೆ ಪ್ರಿಯವಾದದ್ದು. ಶ್ರಾವಣ ಶುದ್ಧ ಪಂಚಮೀ ತಿಥಿಗೆ ಗರುಡ ಪಂಚಮಿ ಎಂದು ಕರೆಯುತ್ತಾರೆ.

ಜಾನಪದ ಕಥೆ ( ಅಣ್ಣ-ತಂಗಿ ಹಬ್ಬ).

ಕಡುಬಡವಳಾದ ಹೆಣ್ಣುಮಗಳು ದೇವರ ಕೃಪೆಯಿಂದ ಶ್ರೀಮಂತನ ಪತಿಯನ್ನು ಪಡೆದಿದ್ದಳು. ಪ್ರತಿವರ್ಷದಂತೆ ಆ ವರ್ಷವು ತಂಗಿಯನ್ನು ತವರು ಮನೆಗೆ ಕರದುಕೊಂಡು ಹೋಗಲು ಅಣ್ಣನು ಬಂದಿದ್ದನು. ಇಬ್ಬರು ಮನೆಗೆ ಬರುತ್ತಿರುವಾಗ ದಾರಿಯ ಮಧ್ಯದಲ್ಲಿ ತಂಗಿಯು ಧರಿಸಿದ ಆಭರಣಗಳ ಮೇಲೆ ಆಸೆವುಂಟಾಗಿ, ಎಲ್ಲಾ ಒಡವೆಗಳನ್ನು ತನಗೇ ಕೊಟ್ಟು ಬಿಡುವಂತೆ ಪರಿಪರಿಯಾಗಿ ಬೇಡಿದ, ತಾನು ಕೊಟ್ಟರೆ ತನ್ನ ಗಂಡ ಹಾಗೂ ಅತ್ತೆ-ಮಾವ ತಪ್ಪು ತಿಳಿಯುತ್ತಾರೆ ಎಂಬುದಾಗಿ ಎಷ್ಟೇ ಸಮಜಾಯಿಸಿ ಹೇಳಿದರೂ ದುರಾಸೆಯ ದಳ್ಳುರಿಯಲ್ಲಿ ಬೇಯುತ್ತಿದ್ದ ಆತ ಸುಮ್ಮನಾಗಲಿಲ್ಲ, ಆಕೆಯನ್ನು ಕೊಂದು ಹಾಕಿಯಾದರೂ ಆ ಒಡವೆಗಳನ್ನು ದಕ್ಕಿಸಿಕೊಳ್ಳಬೇಕು ಎಂಬ ಅತಿಯಾಸೆಯಿಂದ, ಆಕೆ ತಲೆ ಮೇಲೆ ಒಂದು ದೊಡ್ಡ ಕಲ್ಲು ಎತ್ತಿಹಾಕಿ ಸಾಯಿಸಲು ಮುಂದಾದ. ಆದರೆ ಆಕೆಯ ಅದೃಷ್ಟ ಚೆನ್ನಾಗಿತ್ತು. ಆ ಕಲ್ಲಿನ ಅಡಿಯಲ್ಲಿದ್ದ ನಾಗರಹಾವು ಆತನ ಕಾಲಿಗೆ ಕಚ್ಚಿತು. ಅಣ್ಣನು ಮರಣಾವಸ್ಥೆಯಲ್ಲಿದ್ದನು. ಅಣ್ಣನ ಸಾವಿನಿಂದ ಅಪಾರವಾಗಿ ನೊಂದ ತಂಗಿ,ಆಗ ಆ ಕ್ಷಣ ಅಲ್ಲೇ ನಾಗ ದೇವನನ್ನು ಪ್ರಾರ್ಥಿಸಿ, ಪೂಜಿಸಿ ಅಣ್ಣನ ಪ್ರಾಣವನ್ನು ಮರಳಿ ಪಡೆಯುವಂತೆ ಮಾಡಿದಳು. ಇದು ನಡೆದ ದಿನ ಶ್ರಾವಣಮಾಸದ ಪಂಚಮಿ ದಿನ. ಈ ಕಾರಣಕ್ಕಾಗಿ ಈ ಹಬ್ಬವನ್ನು ಅಣ್ಣ-ತಂಗಿ ಹಬ್ಬ ಎನ್ನುವರು.

ನಾಗರಪಂಚಮಿ ಹಬ್ಬವು ಹಲವಾರು ವಿಶೇಷ ಗಳಿಂದ ಕೂಡಿರುತ್ತದೆ. ಇದನ್ನು ಒಡಹುಟ್ಟಿದವರ ಹಬ್ಬ ಎಂಬುದಾಗಿಯೂ ಕರೆಯುವುದಿದೆ. ಅಂದು ಸೋದರ-ಸೋದರಿಯರು ಒಂದು ಕಡೆ ಸೇರಿ ಪರಸ್ಪರ ಶುಭಾಶಯಗಳನ್ನು ಗಳನ್ನು ಹೇಳುತ್ತಾರೆ. ಸೋದರಿಯರು ತಮ್ಮ ಸೋದರರನ ಬೆನ್ನಿಗೆ ಮತ್ತು ಹೊಟ್ಟೆಗೆ ನಾಗನ ಅಭಿಷೇಕದ ಹಾಲನ್ನು
ಸವರಿ ‘ನಾಗಪ್ಪ ನಿನ್ನ ಹೊಟ್ಟೆ ಬೆನ್ನು ತಣ್ಣಗಿರಲೆಂದು’ ಮೂರು ಸಾರಿ ಹಚ್ಚುತ್ತಾರೆ. ಇದರಿಂದ ಅವರಿಬ್ಬರ ಸಂಬಂಧ ಶಾಶ್ವತವಾಗಿರಲಿ ಎಂಬುದು ಇದರ ಅರ್ಥ.
ನಾಗರಪಂಚಮಿ ಹಬ್ಬವು ಪ್ರಮುಖವಾಗಿ ಹೆಣ್ಣು ಮಕ್ಕಳ ಹಬ್ಬ, ಅದು ಅವರಿಗೆ ‘ಮಾಂಗಲ್ಯ ಪ್ರದ’, ‘ಸಂತಾನಪ್ರದ’ಎಂಬ ನಂಬಿಕೆ ಇದೆ.

ಪೂಜಾ ಕ್ರಮ.

ಪುರಾಣದಲ್ಲಿ ಉಲ್ಲೇಖವಾಗಿರುವಂತೆ ನಾಗರ ಪಂಚಮಿ ದಿನದಂದು ಅಕ್ಕಿಹಿಟ್ಟಿನ ತೊಟ್ಟಿಲು ಮಾಡಿ, ಅದರಲ್ಲಿ ನಾಗದೇವತಾ ವಿಗ್ರಹವನ್ನು ಇಡುತ್ತಾರೆ. ಆ ದೇವತೆಗೆ ಉಪವಾಸವಿದ್ದು, ಅರಿಶಿನ ಮತ್ತು ರಕ್ತ ಚಂದನ ದಿಂದ ಪೂಜೆಯ ಮಾಡಿ ಹಾಲಿನಿಂದ ತನಿ ಎರೆಯುವುದು ಮತ್ತು ತಾಳೆ ಹೂವಿನಿಂದ ಅಲಂಕರಿಸುವುದು ಪದ್ಧತಿ. ನಾಗ ವಾಸ ಮಾಡುವ ತಾಳೆ ಬನದ ಹೂವು ನಾಗನಿಗೆ ಶ್ರೇಷ್ಠ ವಾದುದು. ಮತ್ತೆ ಕೆಲವು ಕಡೆ ಹುತ್ತದ ಮಣ್ಣು ತಂದು ಅದನ್ನು ನೀರಿನಿಂದ ಕಲಸಿ ನಾಗಗಳನ್ನು ಮಾಡಿ ರಂಗೋಲಿ ಬಿಟ್ಟು ತಟ್ಟೆಯಲ್ಲಿ ನಾಗಗಳನ್ನು ಸ್ಥಾಪಿಸಿ ವೇದೋಕ್ತ ಪೂಜೆ ಮಾಡಿ, ಒದ್ದೆ ಮಡಿಯಲ್ಲಿ ಹಾಲಿನ ತನಿ ಎರಯಬೇಕು. ತಂಬಿಟ್ಟು, ಹಸಿಕಡಲೆ,ಹಸಿ ಚಿಗಳಿ, ಕಾರೆಹಣ್ಣು,ಹಾಲನ್ನು ನಿವೇದನ ಮಾಡಬೇಕು. ಮತ್ತೆ ಕೆಲವರು ಹಾವು ವಾಸಮಾಡುವ ಹುತ್ತಕ್ಕೆ ಹಾಲು ಎರೆದು, ಹೂವಿನಿಂದ ಹುತ್ತವನ್ನು ಅಲಂಕರಿಸಿ, ಪ್ರದಕ್ಷಿಣೆ ಮಾಡಿ ಪೂಜಿಸುತ್ತಾರೆ. ಮತ್ತು ಕೆಲವು ಕಡೆ ನಾಗ ಪ್ರತಿಷ್ಠಾಪನೆ ಯಾದ ದೇವಾಲಯಗಳಿಗೆ ಹೋಗಿ ಕ್ಷೀರಾಭಿಷೇಕ, ಎಳೆನೀರಿನ ಅಭಿಷೇಕ ಮಾಡಿ, ತಾಳೆಗರಿ ಪೂಜಿಸಿ ಅರಳು, ಕಡ್ಲೆಕಾಳು ತಂಬಿಟ್ಟಿನ ನಿವೇದನೆ ಮಾಡುತ್ತಾರೆ. ವ್ರತವನ್ನು ಮಾಡುವವರು ಅಂದು ಕೋಪ ತಾಪಗಳಿಗೆ ಒಳಗಾಗದೆ ಸಂಯಮದಿಂದಿರಬೇಕು. ಪಂಚಮಿಯ ದಿವಸ ಉಪವಾಸವಿದ್ದು ರಾತ್ರಿ ಊಟ ಮಾಡುತ್ತಾರೆ. ಕೆಲವರು ನಿಜವಾದ ಹಾವಿಗೆ ಹಾಲನ್ನು ನೀಡುವ ಸಂಪ್ರದಾಯವಿದೆ. ಹುತ್ತಕ್ಕೆ ಪೂಜೆ ಮಾಡಿ ಲೋಟದಲ್ಲಿ ಹಾಲನ್ನು ಎರದರೆ ಹಾವು ಬಂದು ಕುಡಿಯುವ ಸನ್ನಿವೇಶಗಳು ಇವೆ.

ಶ್ರಾವಣ ಪಂಚಮಿ ದಿನ ನಾಗಪೂಜೆ ಮಾಡಿದರೆ ಏಳು ತಲೆಮಾರಿನವರೆಗೂ ಆ ಕುಲದಲ್ಲಿ ನಾಗ ಪೀಡೆ ವುಂಟಾಗುವುದಿಲ್ಲ ಎಂಬ ನಂಬಿಕೆ ಈಗಲೂ ಇದೆ ನಿಷೇಧ.

ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು, ಮುಂತಾದ ನಿಯಮಗಳನ್ನು ಪಾಲಿಸಬೇಕು. ಹಾಗೆ ಈ ದಿನ ಭೂಮಿಯನ್ನು ಅಗೆಯಬಾರದು ಎಂಬ ಪದ್ಧತಿ ಇದೆ.
ಹಾವಿನ ಬಗ್ಗೆ ಸತ್ಯ-ಮಿಥ್ಯೆಗಳು.
ಹಾವಿನ ದ್ವೇಷ ಹನ್ನೆರಡು ವರುಷ ಎನ್ನುವರು ಆದರೆ ವಿಜ್ಞಾನಿಗಳು ಇದನ್ನು ಒಪ್ಪುವುದಿಲ್ಲ. ಏಕೆಂದರೆ ಹಾವಿಗೆ ಜ್ಞಾಪಕ ಶಕ್ತಿ ಇಲ್ಲ ಎಂದು. ತಾನು ವಾಸವಾಗಿದ್ದ ಹುತ್ತ ಬಿಟ್ಟು ಬಂದರೆ ಮತ್ತೆ ಅದೇ ಹುತ್ತಕ್ಕೆ ಹೋಗುವುದಿಲ್ಲ ಎನ್ನುವರು.

ಹಾವು ಹಾಲನ್ನು ಕುಡಿಯುವುದಿಲ್ಲ. ಅದು ಇಲಿ ಮತ್ತು ಕಪ್ಪೆಯನ್ನು ತಿಂದು ಜೀವಿಸುತ್ತದೆ. ಇದೆಲ್ಲಾ ಏನೇ ಇದ್ದರೂ ನಾಗರಪಂಚಮಿ ದಿನ ಹಾಲು ಎರೆಯುವುದು ಬಿಡುವುದಿಲ್ಲ.

ನಾಗನ ದೋಷ.

ಮದುವೆಯಾಗದೆ ಇರುವವರು,ಸಂತಾನಭಾಗ್ಯ ಇಲ್ಲದೆ ಇರುವವರು, ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆ ಇರುವವರು ಹೀಗೆ ಅನೇಕ ತೊಂದರೆಗಳು ನಾಗ ದೋಷದಿಂದ ಬರಬಹುದು. ಈ ದೋಷ ಪರಿಹಾರಕ್ಕೆ ನಾಗನಪ್ರತಿಷ್ಠೆ, ಆಶ್ಲೇಷ ಬಲಿ, ಸರ್ಪ ಸಂಸ್ಕಾರ, ನಾಗ ಶಾಂತಿಯನ್ನು ಮಾಡಿಸಿಕೊಂಡರೆ ದೋಷ ಪರಿಹಾರ ಆಗುವುದು ಎಂದು ಶಾಸ್ತ್ರದಲ್ಲಿ ತಿಳಿಸಿದೆ. ಒಟ್ಟಿನಲ್ಲಿ ನಾಗರ ಪಂಚಮಿ ದಿನ ನಾಗ ಪೂಜೆ ಮಾಡಿ, ಎಲ್ಲರಿಗೂ ಆರೋಗ್ಯ ಆಯುಷ್ಯ ಸುಖ ಶಾಂತಿ ನೆಮ್ಮದಿ ಕೊಡಲಿ ಎಂದು ಪ್ರಾರ್ಥಿಸೋಣ.

ನಾಗರ ಪಂಚಮಿ ನಾಡಹೆಣ್ಣಿಗೆ ಹಬ್ಬ
ನಾಗಪ್ಪಗ್ಹಾಲ ಎರೆಯೋಣ, ನನ್ ಗೆಳತಿ
ನಾಗರ ಹೆಡಿಹಾಂಗ ಆಡೋಣ!
ಅಳ್ಳಿಟ್ಟು- ತಂಬಿಟ್ಟು ಮಾಡಿಟ್ಟ ಎಳ್ಳುಂಡೆ
ದಳ್ಳುರಿ ಕಣ್ಣ ಹಣೆಯಾನ ಕೊರಳಾನ
ನಾಗ ನಿನಗೆಡೆಯೋ ಕೈಮುಗಿದೊ!!
-ಜಾನಪದ.