ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು 

ಸುಮಾ ವೀಣಾ

      

ಕನ್ನಡ ಸಾರಸ್ವತ ಲೋಕದ ಹಿರಿಯ ಚೇತನವೊಂದು ನಮ್ಮಿಂದ ಇಂದು ದೂರವಾಗಿದೆ ಎಂದು ಹೇಳಲು ಅತ್ಯಂತ ವಿಷಾದವೆನಿಸುತ್ತಿದೆ…. ಏಳೆಂಟು ತಿಂಗಳ ಹಿಂದೆ ಹಂಪನಾ ಸರ್ ಗೆ ಕರೆ ಮಾಡಿದ್ದೆ ನಾನು “ನಮಸ್ತೆ ಸರ್ ನಮಸ್ತೆ ” ಎನ್ನುತ್ತಿದ್ದರೆ ಸರ್ “ಹಲೋ ಹಲೋ ನನಗೆ ಕಿವಿ ಸರಿಯಾಗಿ ಕೇಳಿಸೋದಿಲ್ಲ….”ಎನ್ನುತ್ತಿದ್ದಂತೆ ಕಮಲಾ ಮೇಡಂ “ಯಾತಕ್ಕೆ ಕಿವಿ ಕೇಳಿಸುತ್ತಿಲ್ಲ ಎನ್ನಬೇಕು ಅವರಿಗೆ ಗಟ್ಟಿಯಾಗಿ ಮಾತನಾಡಲು ಹೇಳಿ…….”ಎನ್ನುತ್ತಿದ್ದನ್ನು ಕೇಳಿಸಿಕೊಂಡೆ ಅಬ್ಬಾ ಎಂಥ ಆತ್ಮ ವಿಶ್ವಾಸ ಅನ್ನಿಸಿತು. ಗಂಭೀರ ಮತ್ತು ಅತ್ಮವಿಶ್ವಾಸಗಳೆ ಮೂರ್ತಿವೆತ್ತಂತೆ ಇದ್ದ ನಾಡೋಜ ಕಮಲಾ ಹಂಪನಾರದ್ದು ಮಾದರಿ ವ್ಯಕ್ತಿತ್ವ.

 ಪ್ರಾಚೀನ ಹಾಗೂ ಅರ್ವಾಚೀನ ಕೃತಿಗಳ ಅನುಸಂಧಾನಕಾರರಾಗಿ ನಮ್ಮ ನಡುವೆ ಇದ್ದ ಹಿರಿಯ ಶಕ್ತಿ. ಮಹಿಳಾ ಸಾಹಿತ್ಯದ ಅಗ್ರಮಾನ್ಯರಲ್ಲಿ ಒಬ್ಬರಾಗಿದ್ದ ಕಮಲಾ ಮೇಡಂ 2003 ರಲ್ಲಿ ಮೂಡುಬಿದರೆಯಲ್ಲಿ ನಡೆದ  71ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದವರು. ಕನ್ನಡ ಮಾತ್ರವಲ್ಲದೆ ಇಂಗ್ಲಿಷ್ನಲ್ಲಿಯೂ ಕೃತಿ  ರಚಿಸಿರುವ ಹೆಗ್ಗಳಿಕೆ ಇವರದು. ಉತ್ತಮವಾಗ್ಮಿಗಳಾಗಿದ್ದ  ಇವರು ಸಂಶೋಧನೆ , ಅಧ್ಯಾಪನ,ಮೌಲ್ವಿಕ ಬರಹಗಳುಹಾಗು ಉಪನ್ಯಾಸಗಳ ಮೂಲಕ ಸಾಹಿತ್ಯ ಸಹೃದಯರಮನಸ್ಸಿನಲ್ಲಿ ನೆಲೆಸಿದ್ದಾರೆ. ಕಥಾಸಂಕಲನ,ಸಂಶೋಧನಾ ಕೃತಿಗಳು. ವಿಮರ್ಶೆ,ಗ್ರಂಥಸಂಫಾದನೆ,ಆಧುನಿಕ ವಚನಗಳು,  ಶಿಶುಸಾಹಿತ್ಯ ಅನುವಾದ ಆಕಾಶವಾಣಿಗಾಗಿ ನಾಟಕ ರೂಪಕಗಳ ರಚನೆ ಹೀಗೆಸಾಹಿತ್ಯದ ಎಲ್ಲಾ ಪ್ರಕಾರಗಳಿಗೂ ತಮ್ಮ ಅಮೂಲ್ಯ ಕೊಡುಗೆಯನ್ನಿತ್ತಿದ್ದಾರೆ. 

ಜೈನಧರ್ಮ ಸಾಹಿತ್ಯ ಸಂಸ್ಕೃತಿ ಬಗ್ಗೆ ವಿಶೇಷಒಲವಿದ್ದ ಇವರು. ಅಜ್ಞಾತರಾಗಿಯೇ ಉಳಿದಿದ್ದ ಜೈನ ಮಹಿಳೆಯರಾದ ಕಾಳಲಾದೇವಿ, ಚಂಪಾದೇವಿ, ಅತ್ತಿಮಬ್ಬೆ ಮೊದಲಾದವರ ಬಗ್ಗೆ ಕನ್ನಡ ಪ್ರಾಕೃತ, ಜೈನಸಾಹಿತ್ಯಗಳನ್ನು ಅಧ್ಯಯನ ಮಾಡಿ ಕಟ್ಟಿಕೊಟ್ಟಿರುವ ಅವರ ವ್ಯಕ್ತಿ ಚಿತ್ರಣಗಳು ಅಮೂಲ್ಯವಾದವು. ಸಂಶೋಧನಾ ಕಾರ್ಯದಲ್ಲಿ ಇವರು ವೈಜ್ಞಾನಿಕತೆಗೆಹೆಚ್ಚು ಆದ್ಯತೆ ಕೊಡುತ್ತಿದ್ದರಂತೆ. ಕಮಲಾ ಮೇಡಂ ಅವರ ವಿದ್ಯಾರ್ಥಿಯಾಗಿದ್ದ ಪ್ರೊಫೆಸರ್ ಲಕ್ಷ್ಮಿ ದೇವಿಯವರ ವಿದ್ಯಾರ್ಥಿ ನಾನು. ನಾನು ಅಂತಿಮ ಬಿ.ಎ ವ್ಯಾಸಂಗ ಮಾಡುತ್ತಿದ್ದಾಗ ಕನ್ನಡ ಐಚ್ಛಿಕ ತರಗತಿಗಳಲ್ಲಿ ವಿಮರ್ಶೆ ಮತ್ತು ಗ್ರಂಥಸಂಪಾದನೆ ಕುರಿತ ಉಪನ್ಯಾಸಗಳಲ್ಲಿ ಅನೇಕ ಬಾರಿ ಕಮಲ ಮೇಡಂ ಅವರ ವಸ್ತುನಿಷ್ಠ ಅಧ್ಯಾಪನ, ಉಪನ್ಯಾಸ ನೀಡುತ್ತಿದ್ದ ಪಠ್ಯವ್ಯಾಪ್ತಿಗೆ ಮೀರಿದ ವಿಷಯದ ಹರಹಿನ ಬಗ್ಗೆ , ತರಗತಿ ಶಿಸ್ತಿನ ಬಗ್ಗೆ ಪ್ರಸ್ತಾಪವಾಗಿದ್ದಿದೆ. ಅನುಕರಣೀಯ ಅಧ್ಯಾಪನ ಹಾಗೂ ಸಂಶೋಧನಾಮಾರ್ಗಿಯಾಗಿದ್ದ ಕಮಲಮೇಡಂ ಅಗಲಿರುವುದು ಸಾಹಿತ್ಯಕ್ಷೇತ್ರ ಹಾಗೂ ವಿದ್ಯಾರ್ಥಿಗಣಕ್ಕೆ ತುಂಬಲಾರದ ನಷ್ಟವಾಗಿದೆ.