ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿನಯಾ ಕೌಂಜೂರು
ಇತ್ತೀಚಿನ ಬರಹಗಳು: ವಿನಯಾ ಕೌಂಜೂರು (ಎಲ್ಲವನ್ನು ಓದಿ)

ಅವನ ಜೊತೆ ಮಾತಾಡಲೆಂದೇ‌ ಹೊಸ ಇಯರ್ ಫೋನ್ ಕೊಂಡಿದ್ದಳು.
ಈಗ ಅವರಿಬ್ಬರು ಮುನಿಸಿಕೊಂಡಿದ್ದಾರೆ.
ಮತ್ತೆ, ಇಯರ್ ಫೋನ್ ಕೆಲಸವಿಲ್ಲದೆ ಮೂಲೆ ಸೇರಿದೆ.

—#-#-#—

ಹತ್ತಿರದಲ್ಲೇ ಗವರ್ನಮೆಂಟ್ ಶಾಲೆ ಇರುವಾಗ
ಅಷ್ಟು ದೂರದ ಖಾಸಗಿ ಶಾಲೆ ನಿನ್ನ ಮಗಳಿಗೇಕೆ?
ಎಂದು ಜರೆದವನ ಮಗ ನಗರದಲ್ಲೇ ಪ್ರತಿಷ್ಠಿತ ಶಾಲೆಯಲ್ಲಿ ಎಲ್.ಕೆ.ಜಿ ಓದುತ್ತಿದ್ದ.

—#-#-#—

ಈಗವರ ಮಕ್ಕಳ ದನಿಗಳು ನನ್ನ ಕಿವಿಗೆ ಮುದ್ದಾಗಿ ಕೇಳಿಸುತ್ತಿರುವಂತೆ
ನನ್ನ ದನಿಯೂ ನನ್ನ ಬಾಲ್ಯದಲ್ಲಿಯೂ ಅವರಿಗೆ ಹೀಗೇ ಕೇಳಿಸಿರಲಿಲ್ಲವೇ?
ಮತ್ತ್ಯಾಕೆ ಆಗೆಲ್ಲ ಮಾತು-ಮಾತಿಗೆ ಅಷ್ಟು ಮೂದಲಿಸುತ್ತಿದ್ದರು?

—#-#-#—

ಅವನು ಮಾಡಿದ ಸಹಾಯಕ್ಕೆ ಅವಳು
ಅವತ್ತು ಥ್ಯಾಂಕ್ಯೂ ಎಂದು ಮೊತ್ತಮೊದಲ‌ ಮೆಸೇಜ್ ಮಾಡಿದಳು.
ಅದು ಅವಳು ಮಾಡಿದ ಮೊದಲ ತಪ್ಪು.
ನಂತರದ ದಿನಗಳಲ್ಲಿ ಅವನವಳ ಬೆನ್ನ ಬಿಡದ ಬೇತಾಳವಾದ.
ಕೊನೆಗೆ ಅವರಿಬ್ಬರೂ ಬದ್ಧ ಶತ್ರುಗಳಾಗುವುದರ ಮೂಲಕ ಒಂದು ಸಂಬಂಧ ಮುಕ್ತಾಯವಾಯಿತು.

—#-#-#—

ಮಲತಾಯಿಯೋರ್ವಳು ತನ್ನ ಮನೆಯ ಚಿಕ್ಕಮಕ್ಕಳು
ತುಸು ಗಲಾಟೆ ಮಾಡಿದರೂ ಮನಬಂದಂತೆ ಚಚ್ಚುತ್ತಿದ್ದಳು.
ತನಗೂ ಮಕ್ಕಳಾದಾಗ‌ ಸಹಜವೇ ಎಂಬಂತೆ ನಿರ್ಲಿಪ್ತಳಾದಳು

—#-#-#—

ಇಂದು ಪ್ರೀತಿಯಲ್ಲಿದ್ದೂ ನಾಳಿನ ಅರೇಂಜ್ ಮ್ಯಾರೇಜ್ ಕುರಿತು
ಬಣ್ಣಬಣ್ಣವಾಗಿ ಕನಸು ಕಟ್ಟಿಕೊಂಡು ಮುಖವರಳಿಸಿ
ಮಾತಾಡುವುದ ಕಂಡು ಇವಳು ಸೋತುಹೋದಳು.

—#-#-#—

ಮಗ ಪುಟ್ಟ ಮಗುವಿದ್ದಾಗಿನಿಂದ
ಎಂದೂ ಪ್ರೀತಿಯಿಂದ ಮಾತನಾಡಿಸದ ಅಪ್ಪನೋರ್ವ
ಆತ ಉನ್ನತ ಹುದ್ದೆಗೇರಿದಾಗ ಕಾಳಜಿಯ ನಾಟಕವಾಡಿದ್ದ.

—#-#-#—