- ಪರ್ವ ನಾಟಕ:ಹೀಗೊಂದು ರಂಗ ವಿಮರ್ಶೆ - ಮೇ 4, 2022
ನಾಟಕ: ಎಸ್ ಎಲ್ ಭೈರಪ್ಪನವರ ಪರ್ವ ಕೃತಿ ಆಧಾರಿತ
ರಂಗ ತಂಡ : ರಂಗಾಯಣ, ಮೈಸೂರು
ಸ್ಥಳ: ಹಾಸನದ ಕಲಾಕ್ಷೇತ್ರ ರಂಗ ಮಂದಿರ
ದಿನಾಂಕ; 30.04.2022
ತುಂಬಾ ಸದ್ದು ಮಾಡಿದ್ದ ಎಸ್ ಎಲ್ ಭೈರಪ್ಪನವರ ‘ ಪರ್ವ ‘ ಕಾದಂಬರಿ ನಿನ್ನೆ ಹಾಸನದ ಕಲಾಭವನದಲ್ಲಿ ಯಶಸ್ವಿಯಾಗಿ ಪ್ರಯೋಗವಾಯಿತು.ರಂಗಮಂದಿರ ಭರ್ತಿಯಾಗಿ ತುಂಬಿ ತುಳುಕಿ ರಂಗಮಂದಿರಕ್ಕೆ ಕಳೆ ತಂದುಕೊಟ್ಟಿದಂತೂ ನಿಜ.ಬೌದ್ದಿಕ ವರ್ಗದ ಎಲ್ಲಾ ಆಪಾದನೆಗಳಿಗೂ ಈ ರಂಗ ಪ್ರಯೋಗ ದಿಟ್ಟ ಉತ್ತರದಂತಿತ್ತು.
ನಾಟಕ ಶುರುವಾಗೋದೆ, ಕುರುಕ್ಷೇತ್ರ ಯುದ್ಧ ಮುಗಿದು,ಧೃತರಾಷ್ಟ್ರನ ಆಶೀರ್ವಾದ ಬೇಡಲು ಬಂದು ಆತನ ಇರಿತದಿಂದ ಪಾರಾಗುವುದರಿಂದ ಶುರುವಾಗುತ್ತದೆ.
ಮಹಾಭಾರತ ಕಥೆಯ ಕಲ್ಪನೆಗಳನ್ನು ವಾಸ್ತವದ ನೆಲೆಗೆ ತರುವು ಸಾಹಸವನ್ನು ಭೈರಪ್ಪನವರು ಮಾಡಿದ್ದಾರೆ.ನಾಲ್ಕು ದಶಕಗಳ ಹಿಂದೆಯೇ ಕಾದಂಬರಿಯಲ್ಲಿ ಪ್ರಯೋಗ ಮಾಡಿ ಪೂರ್ವಸೂರಿಗಳ ಕಥಾನಕದಿಂದ ಒಂದು ಓದುವ ವರ್ಗವನ್ನು ಬದಲಾಯಿಸುವುದು ನಿಜವಾದ ಸಾಹಸದ ವಿಷಯ.ಅಂತೆಯೇ ಈ ರಂಗ ಪ್ರಯೋಗ ಕೂಡ.
ಈ ನಾಟಕದಲ್ಲಿ ಮುಖ್ಯವಾಗಿ ಪಾತ್ರಗಳ ಸ್ವಗತ ಗಳೇ ಕೇಂದ್ರ ಬಿಂದು.ಮುಖ್ಯವಾಗಿ ಗಮನ ಸೆಳೆಯುವುದು ಗಾಂಧಾರಿಯ ಸ್ವಗತ.ನಂತರ ಕುಂತಿ, ಮಾದ್ರಿ, ….ಹೀಗೆ. ಯಾವ ಸ್ಥಾನದಲ್ಲೇ ಇರಲಿ ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣಿನ ಶೋಷಣೆ ನಿರಂತರವಾಗಿತ್ತು….ಆದು ಮೇಲ್ವರ್ಗವೇ ಇರಲಿ ಕೆಳವರ್ಗವೇ ಇರಲಿ.ಈ ನಾಟಕದಲ್ಲಿ ಈ ಪಾತ್ರಧಾರಿಗಳು ತಮ್ಮ ಪಾತ್ರಕ್ಕೆ ಖಂಡಿತವಾಗಿ ನ್ಯಾಯ ಒದಗಿಸಿದ್ದಾರೆ.
ಕೆಳವರ್ಗ ಅನುಭವಿಸಿದ ನೋವು ಕೂಡ ಪರ್ವದಲ್ಲಿ ತೆರೆದಿಡುತ್ತದೆ.ರಾಜನ ಆಸ್ಥಾನದಲ್ಲಿದ್ದರೂ ವಿದುರ ಅನುಭವಿಸಿದ ನೋವು, ಅಸಹಾಯಕತೆ ಕಣ್ಣಿಗೆ ಕಟ್ಟುತ್ತದೆ.ತನ್ನ ಅಸಹಾಯಕತೆ, ಪ್ರಭುತ್ವ ದ ಮೇಲಿನ ತಣ್ಣನೆಯ ಸಿಟ್ಟನ್ನು ಈ ಪಾತ್ರಧಾರಿ ಅತ್ಯಂತ ಯಶಸ್ವಿಯಾಗಿ ಅಭಿನಯಿಸಿದ್ದಾನೆ.
ಈ ರಂಗ ಪ್ರಯೋಗದಲ್ಲಿ ನಾಲ್ಕು ವಿರಾಮದ ಜೊತೆಗೆ ಒಂದು ಊಟದ ವಿರಾಮವಿದ್ದು ಎಂಟು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಡುವುದು ಸುಮ್ಮನೆ ಮಾತಲ್ಲ.ನಿರ್ದೇಶನದ ಸವಾಲು ಇಲ್ಲಿ ಗೊತ್ತಾಗುತ್ತದೆ.ಆ ಸವಾಲನ್ನು ನಿರ್ದೇಶಕ ಅತ್ಯಂತ ಯಶಸ್ವಿಯಾಗಿ ನಿರ್ವಹಿದ್ದಾನೆ.
ಈ ರಂಗಪ್ರಯೋಗದಲ್ಲಿ ಪ್ರೇಕ್ಷಕರನ್ನು ಮನಸೂರೆಗೊಳ್ಳುವಂತೆ ಮಾಡಿದ್ದು ಸಂಜಯ ಪಾತ್ರಧಾರಿ ರಾಜಶೇಖರ ಗಂಗಾವತಿ.ನಿರ್ದೇಶಕರ ಅರ್ಧ ಕೆಲಸವನ್ನು ಈ ಹುಡುಗ ಸುಲಭಗೊಳಿಸಿದ್ದಾನೆ ಪ್ರೇಕ್ಷಕರ ಹಿಡಿದು ಕೂರಿಸಲು.ಅದರಂತೆಯೇ ಕೌರವ ಪಾತ್ರಧಾರಿ ನಂದ ಕುಮಾರ ಜಿ.ಕೆ. ದ್ರೌಪದಿ ಪಾತ್ರಧಾರಿ ಸೌಮ್ಯ ಪಾಣಾಜೆದು ಅದ್ಭುತ ಅಭಿನಯ.ಹಿರಿಯ ಕುಂತಿಯ ಪಾತ್ರಧಾರಿ ಕೂಡ ಕಡೆತನಕ ಕಣ್ಣಿಗೆ ಕಟ್ಟುವಂತಿದೆ.
ಆದರೆ ಕುರುಕ್ಷೇತ್ರ ಯುದ್ಧದ ಮುನ್ನ ಭೀಷ್ಮಚಾರರನ್ನು ಕೇವಲವಾಗಿ ಚಿತ್ರಿಸಿದ್ದು ನನಗಂತೂ ಸರಿ ಕಾಣಲಿಲ್ಲ.ಹಾಗೆಯೇ ದೃತರಾಷ್ಟ್ರನದ್ದು ಕೂಡ. ಒಬ್ಬ ಸಾಮ್ರಾಟನನ್ನು ಚಿತ್ರಿಸುವುದು ಹೀಗಲ್ಲ ಎಂಬುದೇ ನನ್ನ ಭಾವನೆ.
ಈ ರಂಗ ಪ್ರಯೋಗ ದ ಭೋಜನ ವಿರಾಮದ ನಂತರ ನಾಟಕ ಸ್ವಲ್ಪ ಹೊತ್ತು ಬೇಸರ ಮೂಡಿಸುತ್ತದೆ.ಇದಕ್ಕೆ ಕಾಣಿಕೆಯಾಗಿ ಈ ರಂಗ ಮಂದಿರದ ಧ್ವನಿ ವ್ಯವಸ್ಥೆ ಅಂದ್ರೆ ತಪ್ಪಲ್ಲ.
ಆರುನೂರು ಪುಟದ ಕಾದಂಬರಿಯನ್ನು ಕಾದಂಬರಿಯ ಆಶಯಕ್ಕೆ ಲೋಪವಾಗದಂತೆ ತಂದಿದ್ದಾರೆ ಎಂಬುದು ಬಹು ಮುಖ್ಯ. ಆದರೆ ರಂಗಾಯಣದಂತಹ ಸಂಸ್ಥೆಗೆ ಪ್ರಸಾದ್ ಬಿದ್ದಪ್ಪನವರ ವಸ್ತ್ರ ವಿನ್ಯಾಸ ಅಷ್ಟು ಸರಿ ಬರಲಿಲ್ಲ.ವೃತ್ತಿ ರಂಗಭೂಮಿ ಗೂ , ರಂಗ ಪ್ರಯೋಗಶೀಲತೆಯನ್ನೇ ಜೀವವನ್ನಾಗಿ ಮಾಡಿಕೊಂಡಿರುವ ರಂಗಾಯಣಕ್ಕೆ ಶೋಭೆ ಅಲ್ಲ.
ಉಳಿದಂತೆ ರಂಗ ವಿನ್ಯಾಸ, ರಂಗ ಸಜ್ಜಿಕೆ , ಬೆಳಕು ವಿನ್ಯಾಸ ಮನ ಸೆಳೆಯಿತು.ಇಡೀ ರಂಗ ಪ್ರಯೋಗದಲ್ಲಿ ಕಪ್ಪುಚಿಕ್ಕೆ ಧ್ವನಿ ನಿರ್ವಹಣೆ.ಅದು ಈ ರಂಗಮಂದಿರದ ನ್ಯೂನತೆ.ಅದನ್ನು ಸಂಬಂಧಪಟ್ಟ ಅಧಿಕಾರಿ ಸರಿ ಮಾಡಬೇಕಿದೆ.
ಸಂಗೀತ ನಿರ್ದೇಶನ, ಸಂಗೀತ ಸಾಂಗತ್ಯ ವಿಶಿಷ್ಟವಾಗಿತ್ತು.ಜೊತೆಗೆ ಪ್ರಸಾದನ ಕೂಡ.
ಈ ರಂಗಪ್ರಯೋಗದಲ್ಲಿ ಕೊನೆಗೆ ಅನಿ ಸಿದ್ದು, ಈ ರಂಗಪ್ರಯೋಗವನ್ನು ಕೆಲವರು ಯಾಕಾಗಿ ವಿರೋಧಿಸಿದರೋ ಎಂಬುದು ಮಾತ್ರ ಅಪ್ಪಟ ಸತ್ಯ.
ಹೆಚ್ಚಿನ ಬರಹಗಳಿಗಾಗಿ
ಕನ್ನಡ ನಾಟ್ಕ ಇನ್ ತೆಲುಗು ದೇಶಂ ..!
ಬದುಕಿನ ಫಿಲಾಸಫಿ ಹೊದ್ದ ‘ಬೈ 2 ಕಾಫಿ’