ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪುಟಗಳು ಹೇಳಿದ ‘ಅವರ’ ಕಥೆ

ಡಾ. ಪ್ರಶಾಂತ್ ಗಾಂವ್ಕರ್
ಇತ್ತೀಚಿನ ಬರಹಗಳು: ಡಾ. ಪ್ರಶಾಂತ್ ಗಾಂವ್ಕರ್ (ಎಲ್ಲವನ್ನು ಓದಿ)

     ‘ಅಲ್ಲಿ….’ ಎಲ್ಲಿ ನೋಡಿದರಲ್ಲಿ ಹಲವರು ಸಮಾನ ವಯಸ್ಕರು.. ‘ಅವರಂ’ತೆ ಎಲ್ಲರಿಗೂ
ಅರವತ್ತರಾಸುಪಾಸು.. ಕೆಲವರಿಗಷ್ಟೇ ಎಪ್ಪತ್ತೆಂಭತ್ತಿದ್ದಿರಬಹುದು.. ‘ಅವರು’ ‘ಅಲ್ಲಿ’ಗೆ ಬಂದು ಒಂದು
ವಾರವಾಯಿತಷ್ಟೆ.. ‘ಅಲ್ಲಿ’ಗೆ ಬಂದಾಗಿನಿಂದ ‘ಅವರು’ ಅವರಾಗಿರಲಿಲ್ಲ.. ಆಸೆ-ಆಕಾಂಕ್ಷೆಗಳಿಲ್ಲದೇ
ಎಲ್ಲರೊಳಗೊಬ್ಬರಾಗಿದ್ದರು.. ‘ಅಲ್ಲಿ’ರುವ ಎಲ್ಲರಂತೆ…
     ‘ಅಲ್ಲಿ’ಯ ಚಿತ್ರಣ ‘ಅವರು’ ಕಂಡಂತೆ-
     ‘ಅಲ್ಲಿ’ ಅವರವರಲ್ಲಿಯೇ ಮಾತಾನಾಡುವವರು ಕೆಲವರು.. ಅದಾವುದೋ ಲೋಕದಲ್ಲಿ ತಮ್ಮನ್ನು
ತಾವು ಮರೆತಿರುವವರು ಕೆಲವರು.. ತಮ್ಮದೇ ಕೆಲಸದಲ್ಲಿ ಮಗ್ನರಾಗಿರುವವರು ಕೆಲವರು.. ತಮ್ಮವರ ಮನ
ಬದಲಾಗಿ ತನ್ನನ್ನೂ ತಮ್ಮವರಾಗಿಸಿಕೊಳ್ಳುವರೆಂಬ ಆಸೆಗಣ್ಣಿನಿಂದ ದಾರಿ ನೋಡುವವರು ಕೆಲವರು..
‘ಊರು ಹೋಗು ಅನ್ನತ್ತೆ, ಕಾಡು ಬಾ ಅನ್ನತ್ತೆ’ ಅನ್ನುವವರು ಹಲವರು.. ಇನ್ನು ಮುಂದೆ ‘ತನ್ನಂಥವರೇ
ತನ್ನವರು’ ಎಂದುಕೊಳ್ಳುತ್ತಾ ನೆಮ್ಮದಿ ಹುಡುಕುವವರು ಹಲವರು.. ಹರಟುವವರು ಹಲವರು.. ಹೊರಗೆ
ನಗು-ನಗುತ್ತಿದ್ದರೂ ಮನದ ಕತ್ತಲ ಕೋಣೆಯಲ್ಲಿ ಬಿಕ್ಕಳಿಸಿ ಅಳುವವರೇ ಎಲ್ಲರು.. ಹಳೆಯ ನೆನಪುಗಳ
ಗಿಡಕ್ಕೆ ನೀರೆರೆವವರು ಎಲ್ಲರು.. ತಮ್ಮವರಿಗೇ ‘ಕೇವಲ’ವಾದವರು ಎಲ್ಲರು.. ತನ್ನಂಥವರಿದ್ದರೂ
ತನ್ನವರಿಲ್ಲವೆಂದು ಕೊರಗುವವರು ಎಲ್ಲರು.. ನೆನಪಿನ ಮಾಶಾಸನ ಪಡೆಯುವವರೇ ಎಲ್ಲರು..
ನನ್ನಂಥವರೇ ಎಲ್ಲರು…
     ‘ಅವರ’ನ್ನು ‘ಅವರ’ ಮಗ ‘ಅಲ್ಲಿ’ಗೆ ಬಿಡಲು ಬಂದಾಗ ‘ಅವರು’ ತನ್ನೊಂದಿಗೆ ತಂದಿದ್ದು ತನ್ನ ಈಗಿನ
ಸಂಗಾತಿಯಾದ ಬಾಳಿನಕ್ಷರವ ಹೊತ್ತಿಹ ಪುಟಗಳ ಹೊತ್ತಗೆಯನ್ನು ಮಾತ್ರ.. ಉಳಿದದ್ದೆಲ್ಲವನ್ನೂ ‘ಅವರ’
ಮಗ ಎನಿಸಿಕೊಂಡವ ಅದಾವುದೋ ಮನದ ಮೂಲೆಯಲುಳಿದಿಹ ಕೊಂಚ ಪ್ರೀತಿಯಿಂದ ತಂದಿರಿಸಿದ್ದ.. ಎಲ್ಲ
ಇದೆ, ಜೊತೆಗೆ ತನ್ನವರಿಲ್ಲವೆಂಬ ಕೊರಗೂ ಇದೆ.. ‘ಅವರ’ ಮನದಲ್ಲಿ…
     ‘ಅಲ್ಲಿ’ರುವ ಎಲ್ಲರನ್ನೂ ನೋಡಿ ‘ಅವರಿ’ಗನ್ನಿಸಿದ್ದಿಷ್ಟು – ಎದುರಿಗಿರುವ ‘ಅವರು’ ಬೇರೆಯಲ್ಲ..
‘ನಾನು’ ಬೇರೆಯಲ್ಲ…
     ಅದೊಂದು ಜಡಿಮಳೆಯ ಮುಸ್ಸಂಜೆ.. ‘ಅಲ್ಲಿ’ಯ ಹೊರಜಗುಲಿಯ ಕಟ್ಟೆಯ ಮೇಲೆ ‘ಅವರು’
ಎಂದಿನಂತೆ ತನ್ನ ಈಗಿನ ಸಂಗಾತಿಯನು ತೊಡೆಯ ಮೇಲಿಟ್ಟು ಕುಳಿತಿದ್ದರು.. ಹಳೆಯ ನೆನಪುಗಳ ಕೆದಕಿತ್ತು
‘ಅವರ’ ಮನಸು.. ಅರವತ್ತರ ಅರಳು-ಮರುಳೂ ನೆನಪನ್ನು ಮಸುಕಾಗಿಸದೇ ಸ್ವಚ್ಛವಾಗಿಸಿತ್ತು.. ಸಂಗಾತಿ..
ವಂಶೋದ್ಧಾರಕ.. ನಲಿವಿನ ಮನೆ.. ನೆಮ್ಮದಿ.. ಅಗಲಿದ ಜೀವ.. ಲಕ್ಷ್ಮೀ.. ಪುಟ್ಟಪಾಪು.. ನಾ ಜಾರಿದ್ದು..
ನನಗರವತ್ತೈದು.. ನನ್ನಂತಿರುವ ನನ್ನವರಲ್ಲದವರ ನಡುವೆ.. ನೆನಪುಗಳೊಂದೊಂದೇ ಪುಟಗಳು
ಒಂದೊಂದಾಗಿ ಮಗುಚಿ ಬೀಳುತ್ತಿದ್ದವು ‘ಅವರ’ ಮನದ ಹೊತ್ತಗೆಯಲಿ.. ಗಾಳಿಗದುರಿದ ‘ಅವರ’ ತೊಡೆಯ
ಮೇಲಿನ ಹೊತ್ತಗೆಯ ಪುಟಗಳೂ ಮಗುಚಿದ್ದವು ಒಂದೊಂದಾಗಿ.. ಹೊತ್ತಗೆಯ ಪುಟಗಳು.. ‘ಅವರ’ ಬಾಳ
ಪುಟಗಳು…

     ನನ್ನ ಪ್ರಾಮಾಣಿಕತೆಗೆ ಮೆಚ್ಚಿ ತನ್ನ ಮಗಳನ್ನು ನನಗೇ ಧಾರೆಯೆರೆದು ಕೊಟ್ಟ ಪುಣ್ಯಾತ್ಮ
ನನ್ನನ್ನದಾತ.. ತಾಯಿಯನ್ನು ಕಳೆದುಕೊಂಡ ನಾನು ನನ್ನಪ್ಪನ ಕರ್ಮಕಾಂಡದಿಂದ ಅಪ್ಪನ ಹಿಂದೆಯೇ
ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗಿದ್ದೆ.. ನನಗಾಗ ವಯಸ್ಸು ಹತ್ತರ ಮೇಲೆ ಆರು.. ಆಗ ನನ್ನನ್ನು
ಕರೆದು ಊಟ ಕೊಟ್ಟ ಸ್ವಾಮಿಯಾತ…
     ನನ್ನ ಮನವನರ್ಥೈಸಿಕೊಳ್ಳುವ ನನ್ನ ಅರ್ಧಾಂಗಿ, ನನ್ನ ಸಂಗಾತಿ.. ಅವಳಿಗೂ ತಾಯಿಯಿಲ್ಲ,
ನನ್ನಂತೆಯೇ.. ನನಗೆ ಅವಳೇ ತಾಯಾಗಿ ನಿಂತಿದ್ದಳು.. ಪ್ರೀತಿಯಲಿ-ಮಮತೆಯಲಿ.. ಸುಖ ಸಂಸಾರಕ್ಕೆ
ಸಾಕ್ಷಿಯಾಗಿ ವರಿಸಿ ವರ್ಷ ಕಳೆಯುವ ಹೊತ್ತಿಗೆ ಪುತ್ರ ಸಂತಾನ ನನಗೆ.. ಅದೆಷ್ಟು ಮುದ್ದಾದ ಮಗುವ ಮೊಗ..
ನನ್ನವಳಂತೆ.. ಕಾಲ ನಿಲ್ಲದು.. ಸಾಗಿತ್ತು.. ಯಾವುದೇ ಕುಂದು-ಕೊರತೆಯಿಲ್ಲದೆಯೇ ನನ್ನ-ನನ್ನವಳ
ಸಂಪೂರ್ಣ ಪ್ರೀತಿಯಿಂದ ನಮ್ಮ ಬಾಳ ತೋಟದ ಸಸಿ ಬೆಳೆಯುತ್ತಲಿತ್ತು.. ಯಾವುದೇ ಅಡೆ-ತಡೆಗಳಿಲ್ಲದೇ..
ನನ್ನನ್ನದಾತನಾಶ್ರಯದಲ್ಲಿ…
     ಗಾಳಿಗೆ ಪುಟಗಳ ಮಗುಚುವಿಕೆ ಸಾಗಿತ್ತು.. ನೆನಪಿನ ಪುಟಗಳ ಮಗುಚುವಿಕೆ ಮನದ ಹೊತ್ತಗೆಯಲಿ..
ಬಾಳಿನಕ್ಷರದ ಪುಟಗಳ ಮಗುಚುವಿಕೆ ‘ಅವರ’ ತೊಡೆಯ ಮೇಲಿನ ‘ಅವರ’ ಈಗಿನ ಸಂಗಾತಿಯೆಂಬ
ಹೊತ್ತಗೆಯಲಿ…
     ನನ್ನನ್ನದಾತ ಮರಣಿಸಿದ ನಂತರ ಅವರ ಜವಾಬ್ದಾರಿಯೆಲ್ಲ ನನ್ನದಾಗಿತ್ತಲ್ಲ…
     ವಿಧಾತೃವಿನ ಎಣೆಯಂತೆ ಬಾಳ ದೋಣಿ ಸಾಗಿತ್ತು ಸಂಸಾರ ಸಾಗರದಲ್ಲಿ.. ಸಹ ಪಯಣಿಗರಾದ
ಸಂಗಾತಿಯೊಂದಿಗೆ, ನನ್ನ ಪ್ರತಿರೂಪದೊಂದಿಗೆ.. ಅದಾರ ಕಣ್ಣು ಬಿತ್ತೋ..?! ನನ್ನವಳ ಸೆಳೆದೊಯ್ದಿತ್ತು ಆ
ಅಲೆ.. ಯಾವುದೇ ಮುನ್ಸೂಚನೆಯಿಲ್ಲದೇ ಬಂದ ಆ ಅಲೆ ನನ್ನರ್ಧಾಂಗಿಯ ಹೃದಯ ಬಡಿತವನ್ನೇ
ನಿಲ್ಲಿಸಿತ್ತಲ್ಲ..!! ‘ನನ್ನವಳನ್ನು ನನ್ನಿಂದ ದೂರ ಮಾಡಬೇಡ ದೇವ’ ಎಂದು ಗೋಗರೆದಿದ್ದೆನಲ್ಲ ನಾನು..!!
ನಾನು ಪಡೆದುಕೊಂಡು ಬಂದದ್ದು ಇಷ್ಟೆಯೇ..? ಯವುದೂ ಶಾಶ್ವತವಲ್ಲವಲ್ಲ…
     ‘ಅವರ’ ಜೀವನದ ಜೀವದ ಸಂಗಾತಿ ದೂರವಾದ ಆ ಹೊತ್ತಿನಿಂದ ‘ಅವರ’ ಸಂಗಾತಿ, ಈ ಕಥೆ
ಹೇಳುತ್ತಿರುವ ಪುಟಗಳ ಹೊತ್ತಿಹ ಹೊತ್ತಗೆಯೇ…
     ಇನ್ನೇನು..? ನನ್ನ ಮಗ ಜವಾಬ್ದಾರಿ ಹೊರುವ ಪ್ರಾಯಕ್ಕೆ ಬಂದಿದ್ದಾನಲ್ಲ, ಎಲ್ಲವನ್ನೂ ಅವನ
ಹೆಗಲಿಗೇರಿಸಿ ನಾನವನ ನೆರಳಿನಲ್ಲಿ ಇದ್ದುಬಿಡುವೆನೆಂಬ ನಿರಾಳತೆಯಿತ್ತು…
     ನನ್ನ ಮಗ ಅವಳ ಪ್ರೀತಿಯನ್ನು ಗೆದ್ದಿದ್ದ.. ಅವಳ ಪ್ರೀತಿಗೆ ಸೋತಿದ್ದ.. ಅವನ ಖುಷಿಗಾಗಿಯೇ
ಅಲ್ಲವೇ ನಾನು ಮಾಡುವುದೆಲ್ಲ.. ಅದೇ ನನ್ನ ಖುಷಿ.. ನಾನೂ ಸಮ್ಮತಿಸಿದ್ದೆ.. ನನ್ನ ಮನೆಗೆ ಕಾಲಿಟ್ಟಳು
ಲಕ್ಷ್ಮಿಯಂತೆ.. ‘ಹೆಣ್ಣಿಲ್ಲದ ಮನೆಯೆಂದು, ಅತ್ತೆಯ ಕಾಟವಿಲ್ಲ, ಇವಳೇ ಎಲ್ಲವೂ ಎಂದು ಒಪ್ಪಿದ್ದಾರೆ
ಅವಳ ಮನೆಯವರು’ ಎಂಬ ಗಾಳಿಮಾತು ನನ್ನ ಕಿವಿಯನ್ನು ಹೊಕ್ಕಿರದೆಯೇ ಇರಲಿಲ್ಲ.. ಸೊಲ್ಲೆತ್ತಲಿಲ್ಲ..
ಮಗನಿಗೋಸ್ಕರ…

     ನನಗಾಗ ಅರವತ್ತೈದು.. ಅಗಲಿದ ಸಂಗಾತಿಯ ನೆನಪು ಮರುಕಳಿಸಿ ಒಳಗೊಳಗೇ ಬಿಕ್ಕಳಿಸಿದ ಕ್ಷಣಗಳಿಗೆ
ಲೆಕ್ಕವಿಲ್ಲ.. ನಾನಷ್ಟು ಪ್ರೀತಿಸುವೆ ನನ್ನವಳನ್ನು, ಸಂಗಾತಿಯನ್ನು.. ಅವಳ ನೆನಪಲ್ಲಿದ್ದೆ.. ಆಗಲೇ ಬಂದ
ಸಿಹಿ ಸುದ್ದಿ.. ಧರೆಗೆ ಬಂದಿದ್ದ ನನ್ನ ಮೊಮ್ಮಗ.. ನನ್ನೆದೆಗೆ ತನ್ನ ಪುಟಾಣಿ ಕಾಲುಗಳಿಂದ ಒದೆಯುವ ನನ್ನ
ಮೊಮ್ಮಗ.. ಭೋರ್ಗರೆವ ದುಃಖದಲೆಗಳನ್ನು ಸಂತಸದಲೆಗಳನ್ನಾಗಿಸುವ ನನ್ನ ಸುಧಾಂಶು ಧಾವಿಸಿ
ಬಂದಿದ್ದ.. ಕಂಡೊಡನೆಯೇ ಅಪ್ಪಿ ಮುದ್ದಾಡಿಬಿಡಲೇ..!? ಪುಟ್ಟ ಪಾಪುವಿನ ಮುದ್ದಾದ ಮುಗುಳುನಗು..
ಕಣ್ಣಲ್ಲಿ ಮಿಂಚಿನ ಹೊಳಪು.. ನನಗಿನ್ನೇನು ಬೇಕು…
     ನೆನಪಿನ ಪುಟಗಳು ‘ಅಲ್ಲಿ’ ಕೂತ ‘ಅವರ’ ಮನದ ಹೊತ್ತಗೆಯಲ್ಲಿ ಸಾಗಿದ್ದವು.. ಕಥೆ ಹೇಳುವ
ಪುಟಗಳು.. ‘ಅವರ’ ಕಥೆ ಹೇಳುತಿಹ ‘ಅವರ’ ಬಾಳ ಪುಟಗಳು ಮಗುಚಿಬೀಳುತ್ತಿದ್ದವು…
     ಅಂದೊಮ್ಮೆ ಹೊತ್ತಗೆಯ ಗೀಚುವ ಹೊತ್ತಿನಲ್ಲಿ ಪಾಪು ಹೊರ ಹೋಗಿದ್ದನ್ನು ಗಮನಿಸದೇ ಇದ್ದುದು
ನನ್ನ ತಪ್ಪು.. ಅವನನ್ನರಸಿ ಒಳ ಕರೆತರುತ್ತಿದ್ದ ಪಾಪುವಿನಮ್ಮ ಅದೇನೋ ಗೊಣಗಿದ್ದಳು.. ಅಂದೇ
ನಿರ್ಧರಿಸಿದ್ದೆ.. ನನ್ನ ನಾನು ಮರೆಯಬಾರದೆಂದು.. ಆದರೆ, ಒಮ್ಮೆ ಅದೇನಾಯ್ತೋ..!! ಮೆಟ್ಟಿಲಿಂದ
ಜಾರಿದ್ದೆ ನಾನು.. ಕೈಯಲ್ಲಿ ಪುಟ್ಟ ಪಾಪು.. ನನಗೇನಾದರಾಗಲೆಂದು ಅವನನ್ನು ನನ್ನೆದೆಗವುಚಿ
ಉರುಳಿದ್ದೆನಲ್ಲ.. ಮೊಣಕಾಲು ಮೊಣಕೈಗಳಲ್ಲಿ ರಕ್ತ ಚಿಮ್ಮಿತ್ತು.. ಮುಪ್ಪಾದ ಚರ್ಮದ ಹೊದಿಕೆಯ
ಮೈ-ಕೈಯೆಲ್ಲ ನೋವು.. ತೋರಿಸಿಕೊಳ್ಳಲಿಲ್ಲ.. ಹೆದರಿದ ಪಾಪು ಚೀರಿದ್ದ.. ಒಳಗಿನಿಂದ ಬಂದ
ಪಾಪುವಿನಮ್ಮ ನನ್ನಿಂದ ಪಾಪುವನ್ನು ಸೆಳೆದುಕೊಂಡು ಹೋಗಿಬಿಟ್ಟಳಲ್ಲ…!!
     ಮಗುವಿನ ಮೇಲಿನ ಮಮಕಾರ ಹೀಗೆ ಮಾಡಿಸಿತೇ..? ನನ್ಮದೇ ತಪ್ಪೇ..? ಮರುದಿನವೇ ನನ್ನನ್ನು
‘ಅಲ್ಲಿ’ಗೆ ಕಳುಹಿಸುವ ಮಾತಾಯಿತಲ್ಲ..!! ಮಗುವ ಕಣ್ತುಂಬ ನೋಡುತ್ತ ಆನಂದಿಸುವೆ,
ಮುಟ್ಟುವುದಿಲ್ಲವೆಂದರೂ ಕೇಳಲಿಲ್ಲ.. ತನ್ನ ಮಗುವಿನ ಮೇಲಿನ ಮಮಕಾರ, ನಾ ನನ್ನ ಮಗನಿಗೆ ನೀಡಿದ
ಮಮತೆಯ ನನ್ನ ಮಗನ ಕಣ್ಣಿಗೆ ಕಾಣದಂತೆ ಮರೆಮಾಚಿತ್ತು.. ಇದೇನಾಗಿ ಹೋಯಿತು…?!
     ‘ಆಗಾಗ ಬರುವೆನಪ್ಪ…’ ಎಂದು ಸಂತೈಸಿದ್ದ ಮಗ.. ‘ಆಗಾಗ’ ಎಂಬ ಮಾತೇ ‘ಯಾವಾಗಲೂ’ ಜತೆ
ಬಯಸಿದ್ದ ನನ್ನನ್ನು ಚುಚ್ಚಿತ್ತು.. ಅಂದರೆ ನಾನು ನನ್ನವರೊಂದಿಗಿರಲರ್ಹನಲ್ಲವೇ..? ನನ್ನಂಥವರೊಡನೆ
ಮಾತ್ರ ನಾನಿರಬೇಕೇ…?
     ನಾನಿಷ್ಟು ಮಾಡಿದ್ದು ನನ್ನ ಮಗನಿಗೋಸ್ಕರವೇ ಅಲ್ಲವೇ..? ನಾನು ‘ಅಲ್ಲಿ’ಗೆ ಹೋದರೆ ತಾನೆ ನನ್ನ
ಪ್ರೀತಿಯ ಮಗನಿಗೆ ‘ಅವನ ಪ್ರೀತಿ’ ದೊರೆಯುವುದು..?! ನನಗೋ, ನನ್ನ ಸಂಗಾತಿಯಿಲ್ಲ, ಪ್ರೀತಿಯ ಮಗನಿಗೆ
‘ಪ್ರೀತಿ’ ಸಿಗಬೇಕು.. ನಾ ಹೊರಡಬೇಕು ‘ಅಲ್ಲಿ’ಗೆ.. ಇನ್ನೇನು..? ನಾ ಬಯಸಿದ್ದೂ ಅದನ್ನೇ.. ನನ್ನವರು
ಚೆನ್ನಾಗಿರಲೆಂದು.. ನನ್ನವರ ಆನಂದಕ್ಕೆ ನಾನು ನನ್ನನ್ನೇ ತೇಯ್ದುಕೊಳ್ಳಲೂ ಸಿದ್ಧ.. ಆದರೆ ಆ
ಆನಂದವನು ಕಣ್ತುಂಬಿಕೊಳ್ಳುವ ಭಾಗ್ಯವಿಲ್ಲದಾಯಿತಲ್ಲ ನನ್ನ ಪಾಲಿಗೆ…
     ಅದನ್ನೊಂದನ್ನು ಕರುಣಿಸದೆಯೇ ಉಳಿದುಬಿಟ್ಟ ಆ ಭಗವಂತ.. ನನ್ನ ಬಾಳಲದೊಂದು ಪುಟವನ್ನು
ಖಾಲಿ ಉಳಿಯುವಂತೆ ಮಾಡಿಬಿಟ್ಟ.. ನನ್ನದಿನ್ನೂ ಪುಣ್ಯ ಬಾಕಿಯಿದ್ದರೆ ನನ್ನದೊಂದು ಪ್ರಾರ್ಥನೆ..
ಯಾರಿಗೂ ಈ ಸ್ಥಿತಿ ತಂದೊಡ್ಡಬೇಡ ತಂದೆಯೇ.. ನಾನಾದರೋ ಮೊದಲೇ ಒಮ್ಮೆ

‘ಯಾರಿಲ್ಲ’ವೆಂಬುದನ್ನು ಅನುಭವಿಸಿದವ.. ಅನುಭವಿಸಿದವನಿಗೇ ಈ ಅನುಭವ ಇಷ್ಟು ನೋವು
ತಂದೊಡ್ಡುತ್ತಿದೆ.. ಇನ್ನು..!! ಹೇ ದೇವ..!! ಯಾರಿಗೂ ಈ ನರಕ ಯಾತನೆಯನುಭವ ನೀಡಬೇಡ…!!
     ಜಡಿಮಳೆಯು ನಿಂತಿತ್ತು.. ಬೀಸುವ ಗಾಳಿಯೂ ತನ್ನ ವೇಗವ ನ್ಯೂನವಾಗಿಸಿದಂತೆಯೇ ‘ಅವರ’
ತೊಡೆಯಮೇಲಿನ ಈಗಿನ ಸಂಗಾತಿಯೆಂಬ ಹೊತ್ತಗೆಯ ಪುಟಗಳ ಮಗುಚುವಿಕೆಯೂ ನಿಂತಿತ್ತು.. ಮನದ
ಹೊತ್ತಗೆಯಲಿ ನೆನಪಿನ ಪುಟಗಳ ಮಗುಚುವಿಕೆಯೂ ನಿಂತಿತ್ತು.. ಹೊತ್ತಗೆಯ ಪುಟಗಳು ‘ಅವರ’ ಕಥೆಯನ್ನು
ಹೇಳಿ ಮುಗಿಸಿದ್ದವು.. ‘ಅವರಿ’ಗೀಗ ಎದುರಿಗಿರುವ ತನ್ನಂಥವರೇ ತನ್ನವರು.. ‘ಅವರಿ’ಗೀಗ ಎದುರಿಗಿರುವ
‘ಅವರೆ’ಲ್ಲ ಬೇರೆ ಅಲ್ಲ.. ‘ತಾನು’ ಬೇರೆಯಲ್ಲ.. ‘ಅವರಿ’ಗೀಗ ‘ಅವರೇ’ ‘ನಾನು’, ‘ನಾನೇ’ ‘ಅವರು…’
     ಮುಂದಿನ ಪುಟಗಳು ಖಾಲಿ-ಖಾಲಿ.. ನೆನಪುಗಳಿನ್ನು ನೆನಪುಗಳಷ್ಟೆ.. ನೆನಪಿನ ಪುಟಗಳ ಮನದ ಹೊತ್ತಗೆ
ಅಲ್ಲಿಗೇ ಸೀಮಿತವಾಗಿತ್ತು.. ಮನದ ಹೊತ್ತಗೆಯ ನೆನಪಿನ ಪುಟಗಳ ಮಗುಚುವಿಕೆ ನಿಲ್ಲುತ್ತಿದ್ದಂತೆಯೇ
‘ಅವರ’ ಕಣ್ಣೀರು ‘ಅವರ’ ಕಣ್ಣಿಂದ ಜಿಗಿದು, ‘ಅವರ’ ಕೆನ್ನೆಯ ಮುಪ್ಪಾದ ಚರ್ಮದ ಗೆರೆಗಳನ್ನು ದಾಟಿ
‘ಅವರ’ ತೊಡೆಯ ಮೇಲಿನ ‘ಅವರ’ ಈಗಿನ ಸಂಗಾತಿಯೆಂಬ ಹೊತ್ತಗೆಯಲಿ ಮುಂದಿರುವ ಖಾಲಿ ಪುಟಗಳನ್ನು
ತೋಯಿಸಿತ್ತು.. ಅಲ್ಲಿ ‘ಅವರ’ ‘ಅಲ್ಲಿ’ನ ಮುಂದಿನ ಕಥೆಯನ್ನು ಅಕ್ಷರಗಳ ಆಸರೆಯಿಲ್ಲದೆಯೇ ತಾ
ಹೇಳಿತ್ತು..