- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
ಓದು ಎಂದರೆ ಏನನ್ನು ಓದಬೇಕು? ಏಕಾಗಿ ಓದಬೇಕು? ಯಾರಿಗೋಸ್ಕರ ಓದಬೇಕು? ಅದರಿಂದ ಏನು ಪ್ರಯೋಜನ? ಮುಂತಾಗಿ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಸುಳಿದಾಡುತ್ತವೆ. ಬರೇ ಪಠ್ಯವನ್ನು ಓದುವುದು ಎನ್ನುವುದಾದದರೆ ಅದು ಸಂಕುಚಿತ ಓದು. ಓದು ಪದವನ್ನು ವಿಶಾಲವಾಗಿ ಅವಲೋಕಿಸುವುದಾದರೆ ಸುದ್ದಿ ಪತ್ರಿಕೆಗಳನ್ನು ಓದುವುದು, ಹೊಸದಾಗಿ ತಂದ ಗೃಹೋಪಯೋಗಿ ವಸ್ತುಗಳ ಮೇಲೆ ಅಚ್ಚಾಗಿರುವ ಬರೆಹಗಳನ್ನು ಓದುವುದು, ಅವುಗಳ ಮ್ಯಾನುವೆಲ್ ಓದುವುದು. ಸಿಗ್ನಲ್ ಬಿದ್ದಾಗ ಅಲ್ಲೆಲ್ಲೋ ಗೋಚರಿಸುವ ಜಾಹಿರಾತುಗಳನ್ನು ,ಪ್ರಕಟಣೆಗಳನ್ನು ಓದುವುದು, ಸಾಂಬಾರ್ ಪುಡಿ, ಜಾಮೂನ್ಮಿಕ್ಸ್ ತಂದಾಗ ಅದರಲ್ಲಿ ಸೇರಿಸಿರುವ ಸಾಮಾಗ್ರಿಗಳ ಕುರಿತು ಓದುವುದು, ಅಡುಗೆ ಮಾಡುವ ಕ್ರಮವನ್ನು ಓದುವುದು. ಯಾವಾಗ ಎಕಸ್ಪೈಯರಿ? ಎಷ್ಟು ಗ್ರಾಂ? ಎಷ್ಟು ಬೆಲೆ?ಇತ್ಯಾದಿಗಳನ್ನು ಓದುವುದು ಸಹ ಓದುವಿಕೆಯೇ, ಆದರೆ ‘ಓದು’ ಎಂಬ ಪದದ ಜೊತೆಗೆ ಹವ್ಯಾಸ ಎಂಬ ಪದ ಸೇರಿದ ಮೇಲೆ ಅದರ ವ್ಯಾಪ್ತಿಯೇ ಬೇರೆ.
ಹಾಗಿದ್ದರೆ ಹವ್ಯಾಸ ಎಂದರೇನು? ಎಂದಾಗ , ನಾವು ನಮಗಿರುವ ಬಿಡುವಿನ ವೇಳೆಯಲ್ಲಿ ನಮಗಿಷ್ಟ ಬಂದ ಯಾವುದಾದರೊಂದು ವಿಷಯದಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುವುದು ಎಂದರ್ಥ. ಸಮಯ ಕಳೆಯಲು ಓದುವ ವ್ಯಕ್ತಿ ಏನು ಓದಿದರೂ ಸರಿಯೇ. ಓದುವ ಹವ್ಯಾಸ ಎಂದಾಗ ಗಂಭೀರ ಓದಿನ ಅಗತ್ಯವಿರುತ್ತದೆ. ವಿದ್ಯಾರ್ಥಿಗಳೂ ಗಂಭೀರವಾಗಿಯೇ ಓದುತ್ತಾರಲ್ಲ ಎಂಬ ಪ್ರಶ್ನೆಯೂ ಬರಬಹುದು. ಅವರಲ್ಲಿ, ಅವರ ಓದುವಿಕೆಯ ಹಿನ್ನೆಲೆಯಲ್ಲಿ ಒಂದು ಗುರಿ ಇರುತ್ತದೆ. ಇಂತಿಷ್ಟೇ ಅಂಕಗಳು ಬರಲೇಬೇಕೆಂಬ ಮಾನದಂಡವಿರುತ್ತದೆ. ಆದರೆ ಹವ್ಯಾಸಿ ಓದುಗನಲ್ಲಿ ಇಂತಹ ಕಟ್ಟುಪಾಡುಗಳು, ಮಾನದಂಡಗಳು ಇರುವುದಿಲ್ಲ. ಆತ ಪುಸ್ತಕವನ್ನೋದುವ ವೇಗ, ಓದಿಗೆ ಮೀಸಲಿಡುವ ಸಮಯ ಇತ್ಯಾದಿಗಳ ಮೇಲೆಯೂ ಆತನ ಓದಿನ ಹರಹು ಹರಡಿಕೊಳ್ಳುತ್ತದೆ.
ಹತ್ತು ಜನ ಒಳ್ಳೆಯ ಸ್ನೇಹಿತರೊಡನೆ ಕಾಲ ಕಳೆಯುವುದಕ್ಕಿಂತಲೂ ಹತ್ತು ಒಳ್ಳೆಯ ಪುಸ್ತಕ ಸಂಗ್ರಹಿಸಿದರೆ ಅದೊಂದು ಘನಕಾರ್ಯವೇ. . ಈಗಂತೂ ನಮ್ಮ ಮೊಬೈಲ್ಗಳೇ ಪುಸ್ತಕ ಸಂಗ್ರಹಾಲಯಗಳಾಗಿವೆ. ಈಗ ಓದುವ ಪುಸ್ತಕಗಳೊಡನೆ ಕೇಳು ಪುಸ್ತಕಗಳು ಸೇರ್ಪಡೆಗೊಂಡಿವೆ. ಇವು ಪ್ರಯಾಣ ಮಾಡುವಾಗಲೋ, ಊರುಗಳಿಗೆ ಹೋದಾಗಲೋ ಓದಲು ಸರಿ. ವಿದೇಶದಲ್ಲೋ ಪುಸ್ತಕ ತರಿಸಿಕೊಳ್ಳಲು ಅಸಾಧ್ಯ ಎಂದಾಗಲೂ ಸರಿ ಆದರೆ ಅಷ್ಟೊಂದು ಪರಿಣಾಮಕಾರಿಯಾದ ಓದುವ ಮಾಧ್ಯಮ ಅಲ್ಲ ಎನ್ನುವುದು ನನ್ನ ಅನಿಸಿಕೆ.
ಹತ್ತು ಗೆಳೆಯರೊಂದಿಗೆ ಸೇರಿದಾಗ ಯಾವುದಾದರೊಂದು ವಿಚಾರವನ್ನು ಮುಂದಿಟ್ಟಾಗ ನಮಗೆ ಹನ್ನೊಂದು ಅಭಿಪ್ರಾಯಗಳು ಸಿಗುತ್ತವೆ ಭಿನ್ನಾಭಿಪ್ರಾಯಗಳು ಬರುತ್ತವೆ. ಆದರೆ ಪುಸ್ತಕವನ್ನೂ ಹತ್ತಲ್ಲ ಅದಕ್ಕಿಂತ ಹೆಚ್ಚು ಬಾರಿ ಓದಿದಾಗಲೂ ಹೊಸ ಓದುಗನಾಗಿ ಅನಂತವಾದ ಅನುಭವವನ್ನು , ಹೊಸ ಉಲ್ಲಾಸವನ್ನು ಪಡೆಯುತ್ತಾ ಹೋಗುತ್ತಾನೆ. ಜೊತೆಗೆ ನವನವೋನ್ಮೇಷಶಾಲಿನಿಯಾದ ಪ್ರತಿಭೆ ಆತನನ್ನು ಸುತ್ತುವರಿಯುತ್ತದೆ.
“ಪುಸ್ತಕದ ಹುಳು, ಪುಸ್ತಕದ ಬದನೆಕಾಯಿ ಕೊಳೆಯೋದು ಇಲ್ಲ ಬೆಳೆಯೋದೂ ಇಲ್ಲ” ಎಂಬ ಮಾತಿದೆ. ಈ ಮಾತು ಹವ್ಯಾಸಿ ಓದುಗನಿಗೆ ಅನ್ವಯಿಸುವುದಿಲ್ಲ. . ಕಾಲಚಕ್ರ ಹಿಂದೆ ನಿಂತಿಲ್ಲ, ಹಾಗೆ ನಿಲ್ಲದು ಕೂಡ. ನಾವೇನೇ ಸಾಧನೆ ಮಾಡಲಿ ಬಿಡಲಿ ಯಾರ ಗೊಡವೆಯೂ ಬೇಡ ಎಂದು ನಿರಂತರವಾಗಿ ಉರುಳುತ್ತಲೇ ಇರುತ್ತದೆ. ಅದರಿಂದ ಕಾಲಕ್ಕೆ ನಷ್ಟವಿಲ್ಲ. ಮನುಷ್ಯ ೨೪ ಗಂಟೆಯನ್ನೂ ಒಂದು ದಿನ ಎಂದು ಕರೆದಿದ್ದಾನೆ. ಅದರಲ್ಲಿ ಹಗಲು ಕೆಲಸ ಕಾರ್ಯಗಳಿಗೆ ಮೀಸಲು , ರಾತ್ರಿ ನಿದ್ದೆಗೆ ಅದರಲ್ಲಿ ಲೋಕಾಭಿರಾಮವಾಗಿ ಹೇಳೋದೆ ಆದರೆ ನಮ್ಮ ಡ್ಯೂಟಿ ಬೆಳಗ್ಗೆ ೯ ರಿಂದ ಸಂಜೆ ೫ ರವರೆಗೆ ಮಾತ್ರ ಅದರಲ್ಲಿಯೂ ಕಾಫಿ ತಿಂಡಿ, ಊಟ, ವ್ಯಾಯಾಮ ವಿಹಾರ ಎನ್ನುತ್ತೇವೆ. ಅದರಲ್ಲೂ ಆಯಾಸವೆಂದರೆ ಮಧ್ಯಾಹ್ನದ ನಿದ್ರೆ ಬೇರೆ. ಇನ್ನು ಸಾಧನೆಗೆ ಎಲ್ಲಿದೆ ಸಮಯ . ಇನ್ನೂ ಒಂದು ಸಂಗತಿ ಎಂದರೆ ನಮ್ಮ ಸ್ಮಾರ್ಟ್ ಫೋನ್ಗಳು,ಟ್ಯಾಬ್ಗಳು ನಮ್ಮ ಹೆಚ್ಚಿನ ಸಮಯ ಕಸಿದುಕೊಳ್ಳುತ್ತಿವೆ. ಇದೆಲ್ಲವನ್ನು ಒತ್ತಟ್ಟಿಗಿಟ್ಟರೆ ನಿಜವಾದ ಓದುಗ ಎಷ್ಟೇ ಕೆಲಸದ ಒತ್ತಡ ಇದ್ದರೂ ಓದಿಗಾಗಿ ಕೆಲ ಸಮಯವನ್ನು ಮೀಸಲಿಟ್ಟಿರುತ್ತಾನೆ. ಹೆಚ್ಚು ಹೆಚ್ಚು ಓದುತ್ತಾ ಹೋದಂತೆ ಅವನ ಬರೆವಣಿಗೆಗೂ ಸ್ಫೂರ್ತಿಯಾಗಬಹುದು.
ಓದುವುದೆಂದರೆ ಸುಲಭದ ಮಾತಲ್ಲ. ಆರಾಮವಾಗಿ ಪುಸ್ತಕವನ್ನು ಕಣ್ಮುಂದೆ ಹಿಡಿದು ಕುಳಿತರೆ ಓದಿದ ಹಾಗಾಗುತ್ತದೆಯೇ? ಮನಸ್ಸು ಬೇಕು! ಮನಸ್ಸಿನಲ್ಲಿ ಓದುವ ಹಂಬಲ ಇದ್ದರೆ ಮೆದುಳಿಗೆ ಸಂದೇಶ ಹೋಗುತ್ತದೆ. ಅದು ಕುತ್ತಿಗೆ ಹಾಗು ಕಣ್ಣ ನರಗಳಿಗೆ ಸೂಚನೆ ನೀಡಿತ್ತದೆ ಓದು ನಿರಂತರವಾಗಿ ಸಾಗುತ್ತದೆ. ಮತ್ತೆ ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ, ಬರೇ ಓದಿದರೆ ಸಾಕೇ? ಅರ್ಥ ಮಾಡಿಕೊಳ್ಳುವುದು ಬೇಡವೆ? ಮನನ ಮಾಡಿಕೊಳ್ಳುವುದು ಬೇಡವೇ? ಬೇಕು! ಯಾವ ಉಡಾಫೆಯ ಮನೋಭಾವ ಇರುವುದಿಲ್ಲವೋ ಅಂಥ ವ್ಯಕ್ತಿ ಖಂಡಿತಾ ಓದಿದ್ದನ್ನು ಅರ್ಥ ಮಾಡಿಕೊಳ್ಳುತ್ತಾನೆ. ಟಿಪ್ಪಣಿ ಮಾಡಿಕೊಂಡು ಸಮಯೋಚಿತವಾಗಿ ಉಪಯೋಗಿಸಿಕೊಳ್ಳುತ್ತಾನೆ.
ನಮ್ಮಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆ. ಇನ್ನೂ ಕೆಲವರು ಓದುತ್ತಾರೆ ತಮ್ಮ ಅಭಿಪ್ರಾಯವನ್ನು ಹಾಳೆಗಿಳಿಸುತ್ತಾರೆ. ಕೆಲವರು ಗ್ರಂಥಾಲಯಗಳಿಂದ ಎರವಲು ತಂದು ಓದುತ್ತಾರೆ ಅದರಲ್ಲಿ ಕೆಲವರು ಅಲ್ಲಿಯೂ ಹಾಳೆಗಳನ್ನು ವಿರೂಪಗೊಳಿಸುತ್ತಾರೆ. ತೋಚಿದ್ದನ್ನು ಬರೆಯುತ್ತಾರೆ ಪ್ರಮುಖ ಹಾಳೆಗಳಿಗೆ ಕತ್ತರಿ ಪ್ರಯೋಗ ಮಾಡುತ್ತಾರೆ. ಇನ್ನೂ ಕೆಲವರು ಪುಟಗಳನ್ನು ಮಡಿಸುತ್ತಾರೆ, ಇನ್ನೂ ಕೆಲವರು ಟಿಪ್ಪಣಿಗಳನ್ನು , ಪ್ರಮುಖಾಂಶಗಳನ್ನು ಅಲ್ಲಿಯೇ ಗುರುತು ಮಾಡುತ್ತಾರೆ. ಇತ್ತೀಚಿಗೆ ಫೋನ್ ನಂಬರಗಳನ್ನು ತಕ್ಷಣಕ್ಕೆ ಅಲ್ಲೇ ಬರೆದಿರುತ್ತಾರೆ, ಇನ್ನು ಕೆಲವರು ತಮಗೆ ತೋಚಿದ ಘೋಷಣೆಗಳನ್ನು ಅಲ್ಲೇ ಬರೆಯುತ್ತಾರೆ ಇವೆಲ್ಲಾ ಪುಸ್ತಕಗಳಿಗೆ ತೋರಿಸುವ ಅಗೌರವ ಎಂದೇ ಹೇಳಬಹುದು. ಇನ್ನೂ ಕೆಲವರೂ ಪುಸ್ತಕ ತಂದು ಎರಡು ಮೂರು ಪುಟ ತಿರುಗಿಸಿ ಸುಮ್ಮನೆ ಇದ್ದು ಬಿಡುತ್ತಾರೆ ಅದೂ ಓದಲ್ಲ. ಕೇಳು ಪುಸ್ತಕಗಳು ಇ-ಪುಸ್ತಕಗಳು ಈಗ ಬಾರೀ ಪ್ರಚಲಿತದಲ್ಲಿವೆ ಇವುಗಳನ್ನೂ ಓದಿ ಹಾಳೆರೂಪಿ ಪುಸ್ತಕವನ್ನೂ ಸಂಗ್ರಹಿಸಬೇಕು. ಅಕ್ಷರಗಳನ್ನು ಕೈಯಾರೆ ಮುಟ್ಟಿ ಪಡೆಯುವ ಅನುಭವವನ್ನು ಅನುಭವಿಸಿಯೇ ತೀರಬೇಕು! ಹಾಗೆ ಎಳೆಯರಿಗೂ ಪ್ರಾರಂಭಿಕ ಹಂತದಲ್ಲಿ ಹಾಳೆಗಳಿಂದ ಕೂಡಿದ ಪುಸ್ತಕಗಳನ್ನು ಓದುವುದಕ್ಕೇ ಪ್ರೇರೇಪಿಸಬೇಕು.
ಯಾವುದಾದರೂ ಬರೆವಣಿಗೆಯನ್ನು ಓದಿದಾಗ ಅದು ನಮಗೆ ವಿಶೇಷ ಅನ್ನಿಸಬೇಕು . ಪ್ರಸ್ತುತ ದಿನಮಾನಗಳಿಗೆ ಹೊಂದಿಕೆಯಾಗಬೇಕು. ಅದರಿಂದ ನಾವೇನಾದರೂ ಸಂದೇಶವನ್ನು ಗ್ರಹಿಸುವಂತಾಗಬೇಕು. ಅಂತಹ ಕೃತಿಗಳು ಹವ್ಯಾಸಿ ಓದುಗನ ಆಯ್ಕೆಯಾದರೆ ಅದು ಸಾರ್ಥಕತೆಯ ದ್ಯೋತಕ. ಅಕ್ಷರ ಅಕ್ಷರ ಸೇರಿ, ಪದ ಪದಗಳು ಸೇರಿ , ವಾಕ್ಯ ವಾಕ್ಯ ಸೇರಿ ವಾಕ್ಯ ವೃಂದ ಅದಾದ ಮೇಲೆ ಅರ್ಥ ಅರ್ಥ ಹೊಳೆದ ಮೇಲೆ ಸರಿ ತಪ್ಪುಗಳ ವಿವೇಚನೆ. ತಪ್ಪು ಒಪ್ಪುಗಳ ಜಿಜ್ಞಾಸೆಯಾದ ನಂತರ ಆ ಕೃತಿಯ ಬಗ್ಗೆ ಒಂದು ಅಭಿಪ್ರಾಯ, ಆನಂತರ ಅಭಿಪ್ರಾಯಗಳ ವಿನಿಮಯ ಇದುವೇ ನಿಜವಾದ ಹವ್ಯಾಸ! ಉತ್ತಮ ಸ್ನೇಹಿತರಷ್ಟೇ , ಸ್ನೇಹಿತನಾಗೆ ಒಳ್ಳೆಯ ಪುಸ್ತಕಗಳು ನಿರಂತರ ನಮ್ಮ ಸಂಗ್ರಹವನ್ನು ಸೇರುತ್ತಲಿರಲಿ! ಅರಿವಿನ ಪರಿಧಿ ಹಿಗ್ಗಲಿ!
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..