- ಡಾ. ಅರವಿಂದ ಮಾಲಗತ್ತಿ ಬರೆದ ಹೊಸ ನಾಟಕದ ಕುರಿತು - ಅಕ್ಟೋಬರ್ 11, 2022
- ಸಾವಿತ್ರಿಬಾಯಿ ಫುಲೆ : ಕ್ರಾಂತಿಯ ದೀಪಮಾಲೆ - ಸೆಪ್ಟೆಂಬರ್ 8, 2022
- ಬರಗೂರರ ´ಪರಂಪರೆಯೊಂದಿಗೆ ಪಿಸುಮಾತು´ - ಆಗಸ್ಟ್ 23, 2022
ಪರಂಪರೆಯೊಂದಿಗೆ ಪಿಸುಮಾತು : ಸಾಹಿತ್ಯ -ಸಾಂಸ್ಕೃತಿಕ ಜೀವನ ಕ್ರಮಗಳ ಚಿತ್ರಣ
ಪರಂಪರೆಯೊಂದಿಗೆ ಪಿಸುಮಾತು
ಲೇ : ಬರಗೂರು ರಾಮಚಂದ್ರಪ್ಪ
ಪುಟ : 140, ಬೆಲೆ : 70/-
ಪ್ರಕಾಶನ : ಅಂಕಿತ ಪುಸ್ತಕ ಬೆಂಗಳೂರು
ಡಾ. ಬರಗೂರು ರಾಮಚಂದ್ರಪ್ಪ ಕನ್ನಡ ಸಾಹಿತ್ಯ, ಸಂಸ್ಕೃತಿ, ಸಿನಿಮಾ, ಸಂಘಟನೆ ಲೋಕ ಕಂಡ ವಿಶಿಷ್ಟ ವ್ಯಕ್ತಿ. ಬಂಡಾಯ ಸಾಹಿತ್ಯದ ಸಂಘಟನೆಯ ಮುಂಚೂಣಿ ನಾಯಕರೆನಿಸಿದ ಬರಗೂರರು ಕಥೆ, ಕಾವ್ಯ, ನಾಟಕ, ಕಾದಂಬರಿ ಮತ್ತು ವಿಮರ್ಶೆಗಳನ್ನು ಬಹು ಸಮರ್ಥವಾಗಿ ಬರೆದಿದ್ದಾರೆ. ಬಂಡಾಯ ಸಾಹಿತ್ಯ ಸಂಘಟನೆಗೆ ಖಚಿತವಾದ ಧೋರಣೆ ರೂಪಗೊಳ್ಳಲು ಬರಗೂರರು ಬಹಳಷ್ಟು ಶ್ರಮಿಸಿದ್ದಾರೆ. ಕವಿ, ಕಥೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಾಮಾಜಿಕ- ರಾಜಕೀಯ ಚಿಂತಕ, ಸಂಘಟಕ, ಸಾಂಸ್ಕೃತಿಕ ದ್ರಷ್ಟಾರ, ಏಕಕಾಲಕ್ಕೆ ಎಲ್ಲವೂ ಆಗಿರುವ ಬರಗೂರು ರಾಮಚಂದ್ರಪ್ಪ; ಇವೆಲ್ಲವೂ ಸುಸಂಬದ್ಧವಾಗಿ ಹದಗೊಂಡು ಎರಕವಾಗಿ ರೂಪಗೊಂಡಿರುವ ಸೋಜಿಗದ ವ್ಯಕ್ತಿಯಾಗಿದ್ದಾರೆ. ಇವೆಲ್ಲವು ಅವರ ವ್ಯಕ್ತಿತ್ವದಲ್ಲಿ ಎಷ್ಟೊಂದು ಹಾಸು ಹೊಕ್ಕಾಗಿ ಹೆಣೆಯಲ್ಪಟ್ಟಿವೆಯೆಂದರೆ ಯಾವುದೇ ಸಂದರ್ಭದಲ್ಲೂ ಅದರಲ್ಲಿ ಯಾವುದೇ ಒಂದನ್ನು ವಿಂಗಡಿಸಿ ವಿಶ್ಲೇಷಿಸುವುದಾಗಲಿ, ಅರ್ಥೈಸುವುದಾಗಲಿ ಅತ್ಯಂತ ಕಷ್ಟ ಸಾಧ್ಯದ ಕಾರ್ಯವೇ ಸರಿ. ಯಾವುದನ್ನೇ ಕೈಗೆತ್ತಿಕೊಂಡರೂ, ಅಂತಿಮವಾಗಿ ´’ ಬೆಂಕಿ ಮಾರ್ಕಿನ ಕವಿ ಬರಗೂರು ರಾಮಚಂದ್ರಪ್ಪ’ನೆಂಬ ಪ್ರಖರ ವೈಚಾರಿಕ ಅಪರೂಪದ ವ್ಯಕ್ತಿಯನ್ನೇ ಮುಖಾಮುಖಿಯಾಗಬೇಕಾದ ಅನಿವಾರ್ಯಕ್ಕೆ ನಾವು ಸಹಜವಾಗಿ ಎದುರಾಗುತ್ತೇವೆ.
ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ತಿರುವನ್ನು ಕೊಟ್ಟ ಬಂಡಾಯ ಸಾಹಿತ್ಯ ಚಳವಳಿಗಳ ಪ್ರಮುಖ ಲೇಖಕರಾದ ಬರಗೂರು ರಾಮಚಂದ್ರಪ್ಪನವರು ಮೊದಲಿನಿಂದಲೂ ತಾವು ನಂಬಿದ್ದನ್ನು ಬರೆಯುತ್ತ, ಬದುಕುತ್ತ ಬಂದಿದ್ದಾರೆ. ಬಂಡಾಯ ಸಾಹಿತ್ಯ ಚಳವಳಿಗೆ ತಾತ್ವಿಕ ಚೌಕಟ್ಟನ್ನು ಕೊಟ್ಟ ಮುಖ್ಯ ಚಿಂತಕ- ಲೇಖಕರಲ್ಲಿ ಬರಗೂರು ರಾಮಚಂದ್ರಪ್ಪನವರು ಪ್ರಮುಖರು. ತಮ್ಮ ಸೈದ್ಧಾಂತಿಕ ಬರೆಹ- ಮಾತುಗಳಿಂದ ಪ್ರಸಿದ್ಧರಾಗಿರುವ ಬರಗೂರರು, ಉದ್ದಕ್ಕೂ ಸಾಹಿತ್ಯಮೀಮಾಂಸೆಯನ್ನು ರೂಪಿಸುವ ದಿಸೆಯಲ್ಲಿ ನಿರಂತರ ಶ್ರಮಿಸಿದವರು. ಸಾಹಿತ್ಯ, ಸಿನಿಮಾ, ಸಂಸ್ಕೃತಿ, ಸಂಘಟನೆ- ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಒಡ್ಡಿಕೊಂಡಿರುವ ಬರಗೂರರದು ಎಂದಿಗೂ ರಾಜಿಮಾಡಿಕೊಳ್ಳದ ಮನೋಭಾವ, ಮುಕ್ಕಾಗದ ಮಾನವೀಯತೆ ಮತ್ತು ಬತ್ತದ ಸೆಲೆಯಂಥ ಬಂಡಾಯ ಗುಣಗಳು ಇವರ ಸೃಜನಶೀಲತೆಯ ಶಕ್ತಿ ನೆಲೆಗಳೆಂದು ನಿಸ್ಸಂಶಯವಾಗಿ ಹೇಳಬಹುದು. ಸಮಕಾಲೀನ ಕರ್ನಾಟಕದ ಮಹತ್ವದ ಸಾಹಿತ್ಯ- ಸಾಂಸ್ಕೃತಿಕ ವ್ಯಕ್ತಿಯಾಗಿ ರಾಷ್ಟ್ರೀಯ- ಅಂತರಾಷ್ಟ್ರೀಯ ಮನ್ನಣೆ ಪುರಸ್ಕಾರಗಳಿಗೆ ಭಾಜನರಾಗಿದ್ದರೂ ದೈನಂದಿನ ಬದುಕಿನಲ್ಲಿ ಅತ್ಯಂತ ಸರಳ, ಸೌಜನ್ಯದ ನಡೆ ಮತ್ತು ನಿಷ್ಠುರದ ನುಡಿಗಳನ್ನು ಒಟ್ಟಿಗೇ ಬೆಸೆದುಕೊಂಡಿರುವುದು ಬರಗೂರರ ವಿಶಿಷ್ಟ ವ್ಯಕ್ತಿತ್ವ.
ಪ್ರಸ್ತುತ ´’ಪರಂಪರೆಯೊಂದಿಗೆ ಪಿಸುಮಾತು’ ಬರಗೂರು ರಾಮಚಂದ್ರಪ್ಪನವರ ವಿಮರ್ಶಾ ಲೇಖನಗಳ ಸಂಕಲನ. ಈ ಕೃತಿಯು ಹದಿನೆಂಟು ವಿಮರ್ಶಾ ಲೇಖನಗಳನ್ನು ಒಳಗೊಂಡಿದೆ. ಬರಗೂರರು ಕನ್ನಡ ಸಾಹಿತ್ಯ ಪರಂಪರೆಯ ಕುರಿತು ನಡೆಸಿದ ಸಂಸ್ಕೃತಿನಿಷ್ಠ ಸೃಜನಶೀಲ ವ್ಯಾಖ್ಯಾನಕ್ಕೆ ಈ ಕೃತಿಯೇ ಸಾರ್ಥಕ ನಿದರ್ಶನ; ನವೀನ ಒಳನೋಟಗಳ ಮೂಲಕ ಸಾಹಿತ್ಯ ಪ್ರವೇಶ ಮತ್ತು ಪರಿಶೀಲನೆಯ ವಿಭಿನ್ನ ಆಯಾಮಗಳನ್ನು ಸಮರ್ಥವಾಗಿ ಅನಾವರಣಗೊಳಿಸುತ್ತದೆ. ಆಧುನಿಕಪೂರ್ವ ಕನ್ನಡ ಸಾಹಿತ್ಯದ ಹೊಸನೆಲೆಯ ಅಧ್ಯಯನಕ್ಕೆ ಈ ಕೃತಿಯೇ ಸಾಕ್ಷಿಯಾಗಿದೆ. ಬರಗೂರರು ಭಾರತೀಯ ಸಂಸ್ಕೃತಿಯನ್ನು ಅಭ್ಯಸಿಸಿ ಬರೆದ ಲೇಖನಗಳು, ಕನ್ನಡ ಸಾಹಿತ್ಯದ ಕುರಿತಾದ ಅವರ ಲೇಖನಗಳು ತಮ್ಮ ವಿಶಿಷ್ಟ ಒಳನೋಟಗಳಿಂದಾಗಿಯೇ ಓದುಗರ ಗಮನಸೆಳೆಯುತ್ತವೆ. ಬರಗೂರರ ಲೇಖನಗಳಿಗೆ ವಿಭಿನ್ನವಾದ ವಿಮರ್ಶಾತ್ಮಕ ಒಳನೋಟಗಳು ಇವೆ. ಅದು ಅವರ ´’ ಧರ್ಮದಾಚೆಗೆ ಬಂದ ಧಾರ್ಮಿಕತೆ’, ´’ಪುರಾಣದೊಳಗೆ ಚರಿತ್ರೆಯ ಚಡಪಡಿಕೆ’, ´’ಮಹಾಭಾರತ : ಬಹುಸಂಸ್ಕೃತಿಯ ಒಕ್ಕೂಟ’, ´’ವೈಜ್ಞಾನಿಕ ಜಾನಪದ’, ´’ದೇಸಿಯತೆ : ಅಂತರಂಗದ ಆಧುನಿಕತೆ’, ´’ ಕನ್ನಡ ಸಾಹಿತ್ಯ ಮತ್ತು ಮನುಷ್ಯನ ಹುಡುಕಾಟ’ ಹಾಗೂ ´’ ಕನ್ನಡ ಸಾಹಿತ್ಯ ಮತ್ತು ಸಿನಿಮಾ ಪರಂಪರೆ’ಯಂತಹ ಅನೇಕ ಲೇಖನಗಳಲ್ಲಿ ಬಹು ಸ್ಪಷ್ಟವಾಗಿ ಕಾಣುತ್ತದೆ. ಬರಗೂರು ರಾಮಚಂದ್ರಪ್ಪನವರ ಲೇಖನಗಳನ್ನು ಓದುವುದೆಂದರೆ ಅದೊಂದು ಬೇರೆಯಾದ ದರ್ಶನವನ್ನು ನೀಡುವ ಪ್ರಯಾಣವೇ. ಆಧುನಿಕಪೂರ್ವ ಕನ್ನಡ ಸಾಹಿತ್ಯಮೀಮಾಂಸೆ ಎಂಬ ಹೆಸರಿನಲ್ಲಿ, ಈ ಕೃತಿಯಲ್ಲಿನ ಲೇಖನಗಳನ್ನು ಒಂದುಗೂಡಿಸಿ ನೋಡುವಾಗ ಹಲವು ವಿಶೇಷ ಅಂಶಗಳು ಗೋಚರಿಸುವುದು ಸಹಜವಾಗಿದೆ.
´’ಕಾಲವೇ ನಾಯಕ, ಕವಿ ಪ್ರತಿನಾಯಕ’ ಬರುವ ದಾರಿಗಳ ಹುಡುಕಾಟದ ಸ್ಪಷ್ಟ ಸೂಚನೆಗಳನ್ನು ಕೊಡುವ ಈ ಲೇಖನ ಕಾವ್ಯಶಿಲ್ಪಗಳನ್ನು ಗುರುತಿಸುವುದರಲ್ಲಿ ಅಧಿಕ ಆಸಕ್ತವಾಗಿದೆ. ಯುಗಧರ್ಮದ ಪ್ರತಿನಿಧಿಯಾಗುವ ಕಾವ್ಯದ ಸಾಮಾಜಿಕ ಕ್ರಿಯೆಯ ವಿಸ್ತಾರಗೊಳ್ಳುವ ವಿಧಾನವಾಗಿ ಹೊಸತನದ ಮೂಲ ಪ್ರತಿಮೆಯ ಹೊಸತನದಲ್ಲಿರಬಹುದೋ ಎನ್ನುವುದನ್ನು ಮುಟ್ಟಿ, ತಡವಿ ನೋಡಲು ಈ ಲೇಖನ ಪ್ರಯತ್ನಿಸುತ್ತದೆ.
´’ಧರ್ಮದಾಚೆಗೆ ಬಂದ ಧಾರ್ಮಿಕತೆ’ ಲೇಖನ ವೀರಶೈವ ಧರ್ಮ ಮನುಕುಲದ ನಂದಾದೀಪವೆಂದು ಸಾರುತ್ತದೆ. ಬೌದ್ಧ, ಜೈನ, ವೀರಶೈವ, ವೈದಿಕ – ಮುಂತಾದ ಧರ್ಮಗಳು ಮಾನವಧರ್ಮವನ್ನು ಪ್ರತಿಪಾದಿಸಿವೆ. ಅವುಗಳ ಹುಟ್ಟು -ಬೆಳವಣಿಗೆ ವಿಶಾಲ ತಳಹದಿಯ ಮೇಲೆ ರೂಪಗೊಂಡಿವೆ. ಮನುಕುಲಕ್ಕೆ ಹೊಸ ಆಶಾಕಿರಣವಾಗಿ ಉದಾತ್ತ ಚಿಂತನೆಗಳನ್ನು ಹಾಗೂ ಆದರ್ಶ ಮೌಲ್ಯಗಳನ್ನು ಬೋಧಿಸಿ ನೆಮ್ಮದಿಯನ್ನುಂಟು ಮಾಡುತ್ತವೆ. ಧರ್ಮ ಎಂದುದು ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಉನ್ನತಿಗೆ ಪ್ರೇರಕ ಶಕ್ತಿಯಾಗಿದೆ. ಶಾಂತಿಯೇ ಅಸ್ತ್ರ ಬದುಕಿನ ಶ್ರೇಯಸ್ಸೇ ಅದರ ಗುರಿ. ಇಂತಹ ಅಪೂರ್ವವಾದ ಚಿಂತನೆಗಳನ್ನು ಹೊರಸೂಸುವ ´’ಧರ್ಮದಾಚೆ ಬಂದ ಧಾರ್ಮಿಕತೆ’ ಲೇಖನದಲ್ಲಿ ಕಾಣಬಹುದಾಗಿದೆ.
´’ಗಿಡುಗನ ಒಡಲಲ್ಲಿ ಗುಬ್ಬಚ್ಚಿ ಗೂಡು’ ಕನ್ನಡದ ಶ್ರೇಷ್ಠ ಕಾವ್ಯಗಳಿಂದ ಪ್ರತಿಮೆಯ ಎಲ್ಲ ರೀತಿಗಳಿಗೂ ಐದಾರು ಆಕರ್ಷಕ ನಿದರ್ಶನಗಳನ್ನು ನೀಡುವ ಈ ಲೇಖನ ಪ್ರಾಚೀನ ಕಾವ್ಯ ಮಾರ್ಗದ ಬಗ್ಗೆ ಬೆಳಕು ಚೆಲ್ಲುತ್ತದೆ. ಹೊಸ ಮಾರ್ಗ ಹುಡುಕುವುದು ಮತ್ತು ಹಿಂದಿನವರು ತ್ಯಜಿಸಿದ ಮಾರ್ಗದಲ್ಲಿ ಹೊರಡುವುದು _ ಇವೆರಡರ ಕಷ್ಟಗಳನ್ನು ಹೇಳುತ್ತಲೇ ಅದು ಕಾವ್ಯದೊಳಗೆ ಪ್ರವೇಶ ಪಡೆಯುವ ರೀತಿ ನಮ್ಮ ಅರಿವನ್ನು ಹೆಚ್ಚಿಸುತ್ತದೆ. ವಸ್ತುವಿನ ಘನತೆ ಮತ್ತು ಕಾವ್ಯ ನಿದರ್ಶನಗಳ ಗಾಂಭೀರ್ಯತೆಯಿಂದಾಗಿ ಈ ಲೇಖನ ಮೀಮಾಂಸೆಗೊಂದು ಉನ್ನತ ಕೊಡುಗೆಯಾಗಿದೆ.
ಜನಸಾಮಾನ್ಯರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಮಹಾಕಾವ್ಯಗಳಾದ ರಾಮಾಯಣ – ಮಹಾಭಾರತ ಗ್ರಂಥಗಳ ಬಗ್ಗೆ ಬಂದ ಪುಸ್ತಕಗಳ ಮತ್ತು ಲೇಖನಗಳ ಸಂಖ್ಯೆ ಅಗಣಿತ. ಆ ಮಹಾಕಾವ್ಯಗಳ ಕುರಿತು ಎಷ್ಟು ತಿಳಿದುಕೊಂಡರೂ ಕಡಿಮೆ ಅನ್ನುವಂತಹ ದಾಹ. ಜನರ ಕುತೂಹಲ ಮತ್ತು ಆಸಕ್ತಿಯನ್ನು ತಣಿಸಲೆಂಬಂತೆ ವಿವಿಧ ರೀತಿಯ ವ್ಯಾಖ್ಯಾನಗಳಿರುವ ಹಲವು ಆವೃತ್ತಿಗಳು ಇಂದಿಗೂ ಪ್ರಕಟವಾಗಿತ್ತಿವೆ. ಬರಗೂರರು ´’ಮಹಾಭಾರತ : ಬಹುಸಂಸ್ಕೃತಿಯ ಒಕ್ಕೂಟ’ ಲೇಖನದಲ್ಲಿ ಮಹಾಭಾರತ ಪ್ರೀತಿ, ಪ್ರೇಮ,ಯುದ್ಧ, ದ್ವೇಷ, ಸಾಹಸ ಕಥೆಗಳಿಂದಾಗಿ ಅಮರಕಾವ್ಯವಾಗಿರುವಂತಹದ್ದು. ´’ಮಹಾಭಾರತ’ವು ಒಳಗೊಳ್ಳದ ವಸ್ತು ವಿಷಯಗಳೇ ಇಲ್ಲವೇನೋ ಎಂಬಂತೆ ಬೆಳೆದು ನಿಂತಿರುವುದು ಗಮನಿಸಲೇಬೇಕಾದ ಪ್ರಮುಖ ಅಂಶವಾಗಿದೆ. ರಾಜಕೀಯ, ಸಂಸ್ಕೃತಿ, ಸಾಮಾಜಿಕ ಸಂಗತಿ, ಧರ್ಮನೀತಿ, ಜನಪದ ಕಲ್ಪಕತೆ, ಹಿಂಸೆ- ಅಹಿಂಸೆ, ಯುದ್ಧ- ಶಾಂತಿ -ಹೀಗೆ ಹಲವು ವಸ್ತು ವಿಶೇಷಗಳ ಪಟ್ಟಿ ಮಾಡುತ್ತಾ ಹೋಗಬಹುದು. ಲೇಖಕರು ಈ ಲೇಖನದಲ್ಲಿ ಇಡೀ ಮಹಾಭಾರತದ ಕಥೆಯನ್ನೇ ವಿಭಿನ್ನ ಮಾದರಿಯಲ್ಲಿ ಚರ್ಚಿಸಿದ್ದಾರೆ.
´’ರಾಮಾಯಣದ ರಾಜಕೀಯ’ ಲೇಖನ ಕನ್ನಡ ರಾಮಾಯಣ ಮಹಾಕಾವ್ಯದಲ್ಲಿ ಉಪಲಬ್ಧ ಮಾಹಿತಿ ಹಾಗೂ ವಿವರಗಳ ಶಾಸ್ತ್ರೀಯ ಅಧ್ಯಯನ, ವಿಸ್ತೃತ ಚರ್ಚೆಗೆ ಆಹ್ವಾನಿಸುತ್ತದೆ. ´’ರಾಮಾಯಣ’ವು ಸಾಂಸ್ಕೃತಿಕ ರಾಜಕೀಯ, ಅಧಿಕಾರ ರಾಜಕೀಯ ಹಾಗೂ ಯುದ್ಧ ರಾಜಕೀಯಗಳ ವಿಷಯದಲ್ಲಿ ಅನೇಕ ವಿವಾದಾಸ್ಪದ ಅಂಶಗಳನ್ನು ಒಳಗೊಂಡಿದೆಯೆಂದು ಲೇಖಕರು ಹಲವಾರು ನಿದರ್ಶನಗಳ ಮುಖಾಂತರ ´’ರಾಮಾಯಣದ ರಾಜಕೀಯ’ ನೆಲೆಗಳನ್ನು ಆಧಾರಸಹಿತವಾಗಿ ಪರಿಶೀಲಿಸಿದ್ದಾರೆ; ಅರ್ಥಸಾಧ್ಯತೆಗಳನ್ನು ವಿಸ್ತರಿಸಿದ್ದಾರೆ.
ಬರಗೂರರು ಅಪ್ಪಟ ಹೊಸತನವನ್ನು ಸಾಧಿಸಿರುವ, ಪ್ರಯೋಗಶೀಲರಾಗಿರುವ ಲೇಖನವೆಂದರೆ, ´’ ಭಕ್ತ ಭವಿಗಳ ನಡುವೆ ಬೆಚ್ಚಿಬಿದ್ದ ಭಕ್ತಿ’. ಅಲ್ಲಮಪ್ರಭು ಕೇಳುವ ಪ್ರಶ್ನೆಗಳಿಗೆ ಉತ್ತರಗಳನ್ನು ಎಲ್ಲಿಂದ ಹುಡುಕಬೇಕು ಎನ್ನುವ ಪ್ರಶ್ನೆಯನ್ನು ಮೈಮೇಲೆ ಹಾಕಿಕೊಳ್ಳುವ ಈ ಲೇಖನಕ್ಕೆ ಹಲವಾರು ಆಯಾಮಗಳಿವೆ. ಇದರೊಳಗೆ ಒಂದು ಭಕ್ತಿವಾದ ಓದಿದೆ, ಸಾಂಸ್ಕೃತಿಕ ರಾಜಕಾರಣದ ಓದಿದೆ, ಭಕ್ತಿ ಮತ್ತು ಭವಿಯ ಕಲ್ಪನೆ ಓದಿದೆ. ಹೀಗೆ ಹಲವಾರು ಓದಿನ ಸಾಧ್ಯತೆಗಳನ್ನಿಟ್ಟುಕೊಂಡು ಈ ಲೇಖನ ವರ್ಗೀಕೃತ ಓದಿನಲ್ಲಿ ಮಾತ್ರ ಆಸಕ್ತವಾದುದಲ್ಲ. ಎಲ್ಲವುಗಳನ್ನು ಬಳಸಿಕೊಂಡು ಅಂತಿಮವಾಗಿ ಅಲ್ಲಮಪ್ರಭುವಿನ ವ್ಯಕ್ತಿತ್ವ ಮತ್ತು ಬರವಣಿಗೆಯ ಸಮಗ್ರತೆಯನ್ನು ಹಿಡಿಯುವುದಕ್ಕೆ, ಒರೆಗಲ್ಲಿನ ಚರ್ಚೆಯ ಮುಖಾಂತರವೇ ಸಿಗಬಹುದಾದ ಅವರ ಸಮಗ್ರ ವ್ಯಕ್ತಿತ್ವವನ್ನು ಹಿಡಿಯಲು ಲೇಖಕರು ಪ್ರಯತ್ನಿಸಿದ್ದಾರೆ. ವಚನಕಾರರ ವಚನಗಳಲ್ಲಿಯೇ ಅಂತರ್ಗತವಾಗಿರುವ ತಾತ್ವಿಕ ವಿನ್ಯಾಸವನ್ನು ಈ ಲೇಖನ ಹುಡುಕುತ್ತದೆ.
´’ವೈಜ್ಞಾನಿಕ ಜಾನಪದ’ ಲೇಖನ ನಮ್ಮ ಬದುಕಿನ ರೀತಿ ನೀತಿಗಳೇ ಜಾನಪದವೆಂದು ಸ್ಪಷ್ಟಪಡಿಸುತ್ತದೆ. ಜಾನಪದ ಎಂಬುವುದು ನಮ್ಮ ಜೀವನ ಜಲ. ಜೀವನ ಕೂಡಲು, ಬದುಕಾಗಲು ಮತ್ತು ನಿರಂತರವಾಗಲು ಜೀವನಬಲವನ್ನುಂಟು ಮಾಡುವುದೇ ಈ ಜೀವನ ಜಲ. ಜಾನಪದವು ಗ್ರಾಮೀಣ ಪರಂಪರೆಯಿಂದ ನಗರಕ್ಕೆ ಬಂದಿದೆ; ಮೌಖಿಕ ಪರಂಪರೆಯಿಂದ ಲಿಖಿತಕ್ಕೂ ಬಂದಿದೆ; ಈಗ ವಿಜ್ಞಾನವಲಯಕ್ಕೂ ವಿಕಸನ ಹೊಂದಿದೆ. ಜೀವನದಲ್ಲಿ ನಾವು ಎಷ್ಟೇ ನಾಗರಿಕರಾಗುತ್ತಾ ನಡೆದರೂ ಆಂತರ್ಯದಲ್ಲಿ ಎಲ್ಲೋ ಜಾನಪದೀಯ ಅಂಶಗಳು ಉಳಿದುಕೊಂಡು ಬಿಡುತ್ತವೆ. ಆದ್ದರಿಂದ ನಾವು ಅರ್ಥಮಾಡಿಕೊಳ್ಳಬೇಕು; ಜಾನಪದವು ವಿವಿಧ ರೂಪಗಳಲ್ಲಿ ಪರಿವರ್ತನೆಗೊಳ್ಳುತ್ತಾ ಸದಾ ವಿಕಸನಶೀಲವಾದ ಒಂದು ಪರಂಪರೆ. ಈ ಪರಂಪರೆಯ ಭಾಗವಾಗಿ ಲಿಖಿತ-ನಗರ ಜಾನಪದಗಳನ್ನು ಒಳಗೊಂಡಂತೆ ´’ ವೈಜ್ಞಾನಿಕ ಜಾನಪದ’ (Sಛಿieಟಿಣiಜಿiಛಿ ಜಿoಟಞಟoಡಿe) ಕಲ್ಪನೆಯನ್ನು ಚೆನ್ನಾಗಿ ಗ್ರಹಿಸಬೇಕಾಗಿರುವುದು ಅವಶ್ಯಕ. ಈ ಲೇಖನ ಜಾನಪದದ ವಿಶ್ವರೂಪವನ್ನು ಪರಿಚಯಿಸುತ್ತದೆ. ಲೇಖಕರು ನಮ್ಮ ಜಾನಪದ ಮತ್ತು ಜಗತ್ತಿನ ಇತರ ದೇಶಗಳ ಜಾನಪದವನ್ನು ಸಾಂದರ್ಭಿಕವಾಗಿ ಹೋಲಿಸಿ ಅಧ್ಯಯನದ ಹರವನ್ನು ಈ ಲೇಖನದಲ್ಲಿ ವಿಸ್ತರಿಸಿ ಚರ್ಚಿಸಿರುವುದು ಸೂಕ್ತವಾಗಿದೆ.
´’ದೇಸಿಯತೆ: ಅಂತರಂಗದ ಆಧುನಿಕತೆ’ ಲೇಖನ ಭಾರತೀಯನ ಕಣ್ಣಿನಿಂದ ಪಶ್ಚಿಮದ ವೈಶಿಷ್ಟ್ಯತೆಗಳನ್ನು ಹಾಗೂ ಮಿತಿಗಳನ್ನು ಗಮನಿಸಿ, ನಮ್ಮ ಸಂಸ್ಕೃತಿಯ ಯತಾರ್ಥ ತಿಳುವಳಿಕೆಗೆ ಹೊಸ ವೈಜ್ಞಾನಿಕ ಹಾದಿಗಳನ್ನು ತೆರೆಯಲು ಪ್ರಯತ್ನಿಸುತ್ತದೆ. ದೇಸೀಯತೆಯೆನ್ನುವುದು ಅಂತರಂಗದ ಆಧುನಿಕತೆ. ಈ ಲೇಖನ ದೇಸಿಯ ಸಂಸ್ಕೃತಿಗೆ ಸಂಬಂಧಿಸಿದಂತೆ ಗೊಂದಲಪೂರ್ಣ ಸನ್ನಿವೇಶದಿಂದ ಹೊರಬರಲು ಭಾರತೀಯ ಸಂಸ್ಕೃತಿ ಚಿಂತಕರಿಗೆ ನೆರವಾಗುತ್ತದೆ.
‘ಕನ್ನಡ ಸಾಹಿತ್ಯ ಮತ್ತು ಸಿನಿಮಾ ಪರಂಪರೆ’ ಲೇಖನವು ಕನ್ನಡ ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರಗಳ ನಡುವಿನ ಅಂತರ್ ಸಂಬಂಧದ ನೆಲೆಗಳನ್ನು ಬಹು ತಾತ್ವಿಕವಾಗಿ ವಿವರಿಸುವ ಪ್ರಯತ್ನ ಮಾಡುತ್ತದೆ. ಕನ್ನಡ ಸಿನಿಮಾ ಕ್ಷೇತ್ರಕ್ಕೆ ಬಳಕೆಯಾಗಿರುವ ಸಾಹಿತ್ಯಿಕ ಕಥೆ, ಕಾದಂಬರಿ ಮತ್ತು ಭಾವಗೀತೆಗಳ ಸ್ವರೂಪವನ್ನೂ, ಅವುಗಳ ಬೇರೆ ಬೇರೆ ಬಗೆಗಳನ್ನೂ ಇದು ವಿಶದವಾಗಿ ಖಚಿತ ಮಾತುಗಳಲ್ಲಿ ನಿರೂಪಿಸುತ್ತದೆ. ಕಥೆ- ಚಿತ್ರಕಥೆ, ಲೇಖಕ- ನಿರ್ದೇಶಕ, ಸಂಭಾಷಣೆ- ಕವಿತೆ ಇತ್ಯಾದಿಗಳು ಕನ್ನಡ ಸಿನಿಮಾ ಕ್ಷೇತ್ರಕ್ಕೆ ಸಾಹಿತ್ಯದ ನಿಕಟ ಸಂಬಂಧವಿರುವುದನ್ನು ಸೂಚಿಸುತ್ತದೆ. ಕನ್ನಡದ ಜನಪ್ರಿಯ ಸಾಹಿತ್ಯ ಕೃತಿಗಳನ್ನು ಆಧರಿಸಿ ಅನೇಕ ಚಿತ್ರಗಳು ಬಂದಿವೆ. ಕನ್ನಡದ ಶ್ರೇಷ್ಠ ಕಥೆ, ಕಾದಂಬರಿ ಮತ್ತು ಕವಿತೆಗಳಿಂದ ಸಿನಿಮಾದ ಎಲ್ಲ ರೀತಿಗಳಿಗೂ ಹಲವಾರು ವಾಸ್ತವಿಕ ನಿದರ್ಶನಗಳನ್ನು ನೀಡುವ ಈ ಲೇಖನ ಸಾಹಿತ್ಯದ ಗಂಭೀರ ಓದುಗರಿಗೂ ಮತ್ತು ಸಿನಿಮಾ ನಿರ್ದೇಶಕರಿಗೂ ಬಹಳ ಉಪಯುಕ್ತ ಲೇಖನವಾಗಿದೆ.
´’ಕನ್ನಡ ಸಾಹಿತ್ಯ ಮತ್ತು ಮನುಷ್ಯನ ಹುಡುಕಾಟ’ ಲೇಖನದಲ್ಲಿ ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟಗಳಲ್ಲಿ ಕವಿಗಳು ಕಂಡ ಮನುಷ್ಯ ಕಲ್ಪನೆಯಿದೆ. ಇಂತಹ ಮನುಷ್ಯ ಹುಡುಕಾಟ ಬಾದಾಮಿ ಶಾಸನದಿಂದ ಆರಂಭವಾಗಿ ಬಂಡಾಯ ಸಾಹಿತ್ಯದವರೆಗೂ ವಿಸ್ತರಿಸಿಕೊಂಡಿದೆ. ಈ ಲೇಖನದಲ್ಲಿ ರನ್ನ, ಪಂಪ,ರಾಘವಾಂಕ, ಹರಿಹರ, ಬಸವಾದಿ ಶರಣರ, ಕುವೆಂಪು, ಬೇಂದ್ರೆ, ಕಾರಂತರಂತಹ ಕವಿ- ಸಾಹಿತಿಗಳ ಬಿಗಿಯಾದ ಪ್ರತಿಮಾತ್ಮಕ ಕವನಗಳನ್ನು ವಾಸ್ತವಿಕ ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಮನುಷ್ಯ ಮನುಷ್ಯನ ನಡುವೆ ಶೋಷಣೆ, ಮೇಲುಕೀಳೆಂಬ ಭೇದ, ಅಸ್ಪøಶ್ಯತೆ ಆಚರಣೆ, ಜಾತೀಯತೆ ಮತ್ತು ಮೌಢ್ಯ ಮನೆಮಾಡಿರುವ ಹಿಂದೂ ಧರ್ಮದಲ್ಲಿ ದಮನಿತರು ಮನುಷ್ಯರಾಗಿ ಸ್ವಾಭಿಮಾನದಿಂದ ಬದುಕಲು ಇನ್ನೂ ಸಾಧ್ಯವಾಗಿಲ್ಲ. ಇಂತಹ ವ್ಯವಸ್ಥೆಯ ನಡುವೆ ಮನುಷ್ಯನ ಹುಡುಕಾಟಕ್ಕಾಗಿ ಎಪ್ಪತ್ತರ ದಶಕಲ್ಲಿ ಕರ್ನಾಟಕದಲ್ಲಿನ ಬಂಡಾಯ ಚಳವಳಿ ಮತ್ತು ಸಾಹಿತ್ಯದ ಹುಟ್ಟು ಚಾರಿತ್ರಿಕವಾಗಿ ಒಂದು ಮಹತ್ತವದ ಘಟ್ಟ. ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ ಮತ್ತು ರಾಜಕೀಯದ ಬಗೆಗೆ ಯುವಕರಲ್ಲಿ ವೈಚಾರಿಕತೆ- ಸಮಾನತೆಗಳನ್ನು ಬೆಳೆಸಿದ ಕಾಲವದು. ಆದ್ದರಿಂದ ಅದೊಂದು ಚಳವಳಿಯ ಯುಗ. ಕನ್ನಡ ಸಾಹಿತ್ಯ ಮೀಮಾಂಸೆಯ ಮುಖ್ಯ ಧೋರಣೆಯು ಯಜಮಾನಿಕೆಯೊಂದರ ವಿರುದ್ಧ ಸೆಣಸಾಟ, ಸ್ವಂತಿಕೆಯನ್ನು ಕಂಡುಕೊಳ್ಳುವುದರ ಹಂಬಲ, ವಿಶಾಲ ಸಮುದಾಯಗಳ ಬಿಡುಗಡೆಯ ಕನಸುಕಾಣುವಿಕೆ ಆಗಿದೆ. ಇಡೀ ಕನ್ನಡ ಸಾಹಿತ್ಯ ಘಟ್ಟಗಳಲ್ಲಿ ಕಂಡುಬಂದ ಮನುಷ್ಯ ಜಾಗೃತಿಯ ಪ್ರಜ್ಞೆಯನ್ನು ಬರಗೂರರು ಈ ಲೇಖನದಲ್ಲಿ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ.
ಬರಗೂರು ರಾಮಚಂದ್ರಪ್ಪನವರ ´’ಪರಂಪರೆಯೊಂದಿಗೆ ಪಿಸುಮಾತು’ ವಿಮರ್ಶಾ ಲೇಖನಗಳ ಸಂಕಲನವು ಹಲವಾರು ಕಾರಣಗಳಿಗಾಗಿ ಆಧುನಿಕಪೂರ್ವ ಕನ್ನಡ ಸಾಹಿತ್ಯದ ಹೊಸನೆಲೆಯ ಅಧ್ಯಯನಕ್ಕೆ ಉಪಯುಕ್ತ ಕೃತಿಯಾಗಿದೆ. ಆಧುನಿಕಪೂರ್ವ ಕನ್ನಡದ ಮಹಾಕಾವ್ಯ, ವಚನ,ಕಥೆ,ಕಾದಂಬರಿಗಳಿಂದಲೂ ಅತ್ಯುತ್ತಮ ಕವಿತೆ-ಕಥನ ಭಾಗಗಳನ್ನು ನಿದರ್ಶನಗಳಿಗೆ ಬಳಸಲಾಗಿದೆ. ಲೇಖಕರ ಪಾಂಡಿತ್ಯ ಪ್ರತಿಭೆ ಇಲ್ಲೆಲ್ಲ ಬೆರಗುಗೊಳಿಸುವಂತೆ ಕೆಲಸ ಮಾಡಿದೆ. ಪುಸ್ತಕವನ್ನು ಓದಿ ಮುಗಿಸಿದ ನಂತರ ಅಸಾಧಾರಣ ವಿದ್ವತ್ ಗ್ರಂಥವೊಂದರ ಸಂಪರ್ಕ ಪಡೆದ ಅನುಭವ ನಮ್ಮದಾಗುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಹಾಗೂ ಸಾಹಿತ್ಯದ ಓದನ್ನು ಗಂಭೀರವಾಗಿ ಆರಂಭಿಸಿದವರಿಗೆ ಉಪಯುಕ್ತವಾಗಬಹುದಾದ ಪುಸ್ತಕವಿದು.
ಈ ಕೃತಿಯಲ್ಲಿನ ಎಲ್ಲ ಲೇಖನಗಳು ಸಾರ್ವತ್ರೀಕವಾಕ ಮೌಲ್ಯ ಹೊಂದಿವೆ. ದೇಸಿ ಪ್ರಜ್ಞೆ, ಮಾರ್ದವತೆ, ಸಮಾಜಮುಖಿ ಚಿಂತನೆ, ಮಾನವೀಯ ಮೌಲ್ಯಗಳ ಪರವಾಗಿ ಹರಿಯುವ ಚಿಂತನೆಗಳು ಓದುಗರ ಮನಸ್ಸನ್ನಾವರಿಸುತ್ತವೆ. ಸಮಾನತೆ ಭಾವನೆಗಳ ಮೌಲ್ಯವಿವೇಚನೆ, ಮಾನವೀಯ ಅನುಕಂಪ, ಸಾಹಿತ್ಯ- ಸಂಸ್ಕೃತಿ- ಸಿನಿಮಾ- ಸಾಮಾಜಿಕ ಚಿಂತನೆಗಳು ಲೇಖನದಲ್ಲಿ ಮುಪ್ಪರಿಗೊಂಡು ಇಲ್ಲಿ ಅಭಿವ್ಯಕ್ತವಾಗಿವೆ. ಬರಗೂರರು ಈ ಕೃತಿಯನ್ನು ಸಿದ್ಧಪಡಿಸುವಲ್ಲಿ ಒಂದು ಶಿಸ್ತಿದೆ, ಶ್ರದ್ಧೆಯಿದೆ, ಆಳವಾದ ಅಧ್ಯಯನವಿದೆ, ಸಂವಾದದ ಉತ್ಸಾಹವಿದೆ, ಗಂಭೀರವಾದ ಚರ್ಚೆಗೆ ಮುಕ್ತ ಅವಕಾಶವಿದೆ, ತೀರ್ಮಾನಕ್ಕೆ ಚಿಕಿತ್ಸಕ ಬುದ್ಧಿಯಿದೆ. ಭೂತ- ವರ್ತಮಾನ- ಭವಿಷ್ಯತ್‍ಗಳ ಸಮಸ್ಯೆಗಳನ್ನು ಬಿಡಿಸಿ ನೋಡುವ ವಿಚಾರಶಕಿಯಿದೆ, ಎಲ್ಲಕ್ಕಿಂತ ಮಿಗಿಲಾಗಿ ವಿಮರ್ಶಾತ್ಮಕ ಎಚ್ಚರವಿದೆ. ಸಾಹಿತ್ಯದ ಓದುಗರಿಗೆ ಈ ಕೃತಿ ಒಂದು ಮಾದರಿ ಎನ್ನುವಂತಿದೆ. ಅಷ್ಟೇ ಅಲ್ಲ ಇದೊಂದು ಅಮೂಲ್ಯ ಆಕರ ಗ್ರಂಥವಾಗಿದೆ. ಬರಗೂರರು ಸಿದ್ಧಿಸಿಕೊಂಡಿರುವ ತಾತ್ವಿಕ ನೆಲೆಯಲ್ಲೆ ಈ ಕೃತಿಯನ್ನು ಗಮನಿಸಿದರೆ ಈ ಲೇಖನಗಳ ಯಶಸ್ಸು ಅತ್ಯಂತ ದೊಡ್ಡಮಟ್ಟದ್ದು. ಆದ್ದರಿಂದ ಇದನ್ನು ಆಧರಿಸಿ ಆಧುನಿಕಪೂರ್ವ ಕನ್ನಡ ಸಾಹಿತ್ಯ- ಸಂಸ್ಕೃತಿಯ ಬಗೆಗೆ ಗಂಭೀರ ಸಮಸ್ಯೆಗಳನ್ನು ಎತ್ತಲು ಸಾಧ್ಯವಿದೆ. ಇದು ಸಹ ಕೃತಿಯ ಮಹತ್ವವನ್ನು ಸೂಚಿಸುತ್ತದೆ. ಕನ್ನಡ ಸಾಹಿತ್ಯ- ಸಂಸ್ಕೃತಿ ಚಿಂತನೆಯ ಹೊಸ ಘಟ್ಟಗಳ ಹೆಜ್ಜೆಗಳು ಮತ್ತು ಸೂಚನೆಗಳು ಈ ಕೃತಿಯಲ್ಲಿರುವುದು ಗಮನಾರ್ಹವಾಗಿದೆ.
– ಸಿ.ಎಸ್. ಭೀಮರಾಯ (ಸಿಎಸ್ಬಿ)
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ