- ಕವಿಗಳು ಕಂಡ ಸಂಭ್ರಮದ ಯುಗಾದಿ. - ಏಪ್ರಿಲ್ 9, 2024
- ವಿಜಯದಶಮಿ ರೈತರ “ಬನ್ನಿ ಹಬ್ಬ” - ಅಕ್ಟೋಬರ್ 24, 2023
- ಮುನ್ನಡೆಯುವ ಹಕ್ಕು ಮಹಿಳೆಯರಿಗೂ ಇದೆ - ಮಾರ್ಚ್ 8, 2023
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಆದರೆ ನಾವು ಕಳೆದ ಸಮಯ ಮಾತ್ರ ಮರಳಿ ಬರುವುದಿಲ್ಲ.ನಮ್ಮ ಹಿಂದೂಗಳಲ್ಲಿ ಹಬ್ಬಗಳ ಆಚರಣೆ ಬಹಳ ಇವೆ. ಅವುಗಳಲ್ಲಿ ಯುಗಾದಿಯು ಬಹಳ ಮುಖ್ಯವಾದ ಹಬ್ಬವಾಗಿದೆ.
ಯುಗಾದಿ ಎಂದರೆ ಯುಗದ ಆದಿ, ವರ್ಷದ ಆದಿ, ವರ್ಷದ ಆರಂಭ ಎಂಬುದಾಗಿ ಹೇಳಬಹುದಾಗಿದೆ. ಮಾಹೆಗಳಲ್ಲಿ ಚೈತ್ರ ಇದ್ದಂತೆ, ಋತುಗಳಲ್ಲಿ ವಸಂತಋತು ಇದ್ದಂತೆ, ಹಬ್ಬಗಳಲ್ಲಿ ಯುಗಾದಿ ಹಬ್ಬವು ಪ್ರಪ್ರಥಮವಾಗಿ ಆಚರಿಸಲ್ಪಡುವುದು.
ಯುಗಾದಿ ಹಬ್ಬದ ದಿನವು ತ್ರಿಮೂರ್ತಿಗಳಲ್ಲಿ ಒಬ್ಬನೂ ಸೃಷ್ಟಿಕರ್ತನೂ ಆದ ಬ್ರಹ್ಮದೇವನು ಜಗತ್ತನ್ನು ಸೃಷ್ಟಿ ಮಾಡಿದ ದಿನ. ಅಂದಿನಿಂದಲೇ ವರ್ಷ,ಋತುಗಳು, ಮಾಸಗಳು, ಗ್ರಹಗಳು, ನಕ್ಷತ್ರಗಳು ಸೃಷ್ಟಿಸಿದನೆಂಬ ನಂಬಿಕೆಯಿದೆ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣಾ ಮತ್ತು ದಕ್ಷಿಣಾಯನವನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದಲೇ ವರ್ಷವನ್ನು ಯಗ ಎಂದೂ, ಅದರ ಮೊದಲ ದಿನವನ್ನು ಯುಗಾದಿ ಎಂದೂ ಕರೆಯಲಾಗಿದೆ.
ಸೂರ್ಯಚಂದ್ರರ ಹಿನ್ನೆಲೆಯಲ್ಲಿ ಯುಗಾದಿ ಎರಡು ಬಾರಿ ಆಚರಣೆಯಲ್ಲಿದೆ. ನಮ್ಮಲ್ಲಿ ಸೌರ ಚಂದ್ರಮಾನದ ಹಬ್ಬಗಳು ರೂಡಿಯಲ್ಲಿದೆ. ಆಚರಣೆಯಲ್ಲೂ ಕೆಲವು ವಿಶೇಷಗಳಿವೆ.
ಐತಿಹಾಸಿಕ ಕಾರಣಗಳು
ಶ್ರೀರಾಮನು ಈ ದಿನವೇ ವಾಲಿಯನ್ನು ವಧಿಸಿದನು. ದುಷ್ಟ ಪ್ರವೃತ್ತಿಯುಳ್ಳ ರಾಕ್ಷಸರ ಮತ್ತು ರಾವಣನನ್ನು ವಧಿಸಿ ಅಯೋಧ್ಯೆಗೆ ಹಿಂದಿರುಗಿ ಈ ಯುಗಾದಿ ಶುಭದಿನದಂದು ಶ್ರೀರಾಮಚಂದ್ರ ಪಟ್ಟಾಭಿಷಕ್ತನಾಗುತ್ತಾನೆ. ಹಾಗೆ ಉಜ್ಜಯಿನಿಯ ವಿಕ್ರಮಾದಿತ್ಯನನ್ನು ಶಾಲಿವಾಹನ ಪರಾಭವಗೊಳಿಸಿ ತನ್ನ ವಿಜಯವನ್ನು ಸಂಪಾದಿಸಿದ್ದು ಇದೇ ದಿನ. ಈ ದಿನದಿಂದಲೇ ಶಾಲಿವಾನ ಶಕೆ ಪ್ರಾರಂಭವಾಯಿತು. ಭಗವಂತನಾದ ಶ್ರೀಕೃಷ್ಣನು ನೃಪಕೇತುವಿಗೆ ದರ್ಶನ ನೀಡಿದ್ದು ವಿಕ್ರಮನಾಮ ಚೈತ್ರಶುದ್ಧ ಪ್ರತಿಪದೆ ಯಂದು. ಗಂಗೆ ಶಿವನ ಜಟೆಯಲ್ಲಿ ಬಂಧಿತಳಾದದ್ದು ರುಧಿರೋದ್ಗಾರಿ ಸಂವತ್ಸರದ ಚೈತ್ರಮಾಸದ ಯುಗಾದಿಯಂದು. ಎಲ್ಲವೂ ಚೈತ್ರಶುದ್ಧ ಪ್ರಥಮದಿನ ಇರುವುದರಿಂದ ಈ ದಿನಕ್ಕೆ ಹೆಚ್ಚು ಮಹತ್ವ ಬಂದಿರುವುದು.
ಆಧ್ಯಾತ್ಮಕ ಕಾರಣಗಳು
ವರ್ಷದಲ್ಲಿ ಮೂರೂವರೆ ಮುಹೂರ್ತಗಳಲ್ಲಿ ಒಂದು ಯುಗಾದಿ ಪಾಡ್ಯ, ಅಕ್ಷಯ ತದಿಗೆ ಮತ್ತು ದಸರಾ (ವಿಜಯದಶಮಿ) ಇವು ಪ್ರತ್ಯೇಕವಾಗಿ ಒಂದೊಂದು ಮತ್ತು ಕಾರ್ತಿಕ ಶುದ್ಧ ಪ್ರತಿಪದೆಯು ಅರ್ಧ ( ದೀಪಾವಳಿ). ಹೀಗೆ ಮೂರುವರೆ ಮೂಹೂರ್ತಗಳಿವೆ. ಈ ದಿನಗಳಂದು ಮೂಹೂರ್ತ ನೋಡುವ ಅವಶ್ಯಕತೆ ಇಲ್ಲ. ಈ ದಿನಗಳಲ್ಲಿ ಪ್ರತಿ ಘಳಿಗೆಯೂ ಶುಭ ಮೂಹೂರ್ತವೇ ಆಗಿರುತ್ತದೆ.
ಈ ಮುಹೂರ್ತದ ಪೈಕಿ ಯುಗಾದಿ ಹಿಂದುಗಳಿಗೆ ಹೊಸ ವರ್ಷದ ಆರಂಭದ ದಿನವಾಗಿದೆ. ಈ ಹಬ್ಬ ಹಳೆಯ ಹೊಸತನ್ನು ಸೇರಿಸುವ ಕೂಂಡಿ. ಫಾಲ್ಗುಣ ಬಹುಳ ಅಮಾವಾಸ್ಯೆಯ ದಿನ ಹಳೆಯ ವರ್ಷಕ್ಕೆ ವಿದಾಯ ಹೇಳಿ, ಮಾರನೇ ದಿನ ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು ಯುಗಾದಿ ಎಂದು ಹೊಸವರ್ಷವನ್ನು ಆಚರಿಸುತ್ತೇವೆ. ಹಿಂದಿನ ವರ್ಷದ ಕಹಿ ಘಟನೆಗಳನ್ನು ಮರೆತು ಸಿಹಿ ಸಂತಸದ ಕ್ಷಣಗಳನ್ನು ನೆನೆಸಿಕೊಳ್ಳುತ್ತಾ ಭವಿಷ್ಯದ ಸುಖಕ್ಕಾಗಿ ಯುಗಾದಿ ಆಚರಿಸುತ್ತೇವೆ.
ದಿವ್ಯ ಸಂದೇಶ.
ಪ್ರತಿಯೊಂದು ಹಬ್ಬವೂ ನಮ್ಮ ಬದುಕಿನ ದಿವ್ಯ ಸಂದೇಶವನ್ನೇ ನೀಡುತ್ತದೆ.ಯುಗಾದಿ ಹಬ್ಬದಂದು ದೇವರಿಗೆ ಅರ್ಪಿಸುವ ಬೇವು-ಬೆಲ್ಲ, ದೈವೀ ಗುಣ ಮೈಗೂಡಿಸಿಕೊಳ್ಳುತ್ತ (ಬೆಲ್ಲ) ಪ್ರಕೃತಿಗಾಗಿ ಹಂಬಲಿಸುತ್ತ (ಬೇವು) ತಾಳ್ಮೆಗೆಡದೆ ಮುನ್ನಡೆಯುವವರಿಗೆ ತನ್ನ ಕೃಪಾ ಪ್ರಸಾದದ ಸವಿ ಕಟ್ಟಿಟ್ಟಿದ್ದು ಎಂಬ ದೇವರ ದಿವ್ಯ ಸಂದೇಶವನ್ನೇ ಬಿಂಬಿಸುತ್ತದೆ.
ನೈಸರ್ಗಿಕ ಕಾರಣಗಳು
ಯುಗಾದಿಯನ್ನು ಸಂತೋಷ ಸಂಭ್ರಮದಿಂದ ಸ್ವಾಗತಿಸಲು ಇಡೀ ಪ್ರಕೃತಿ ಸಜ್ಜಾಗಿರುತ್ತದೆ. ಎಲ್ಲೆಡೆ ಕಂಗೊಳಿಸುತ್ತಿರುವ ಚಿಗುರು ಹೊಸ ಚೈತನ್ಯವನ್ನು ಪ್ರತಿಬಿಂಬಿಸುವ ಹೊತ್ತಿನಲ್ಲಿಯೇ ಬಣ್ಣಬಣ್ಣದ ಹೂಗಳಿಂದ ಅಲಂಕರಿಸಿಕೊಂಡ ಮರ-ಗಿಡಗಳು ಕಣ್ಣಿಗೆ ಸೊಬಗನ್ನು ಮನಕ್ಕೆ ಉಲ್ಲಾಸವನ್ನು ನೀಡುತ್ತದೆ. ಮಾವು-ಬೇವು ಚಿಗುರಿ,ಆ ಚಿಗುರಿಗೆ ಮನಸೋತ ಕೋಗಿಲೆ ಹಾಡಲು ವಸಂತ ನಲಿಯಬೇಕು. ಇದು ಪ್ರಕೃತಿಯ ಸಹಜ ಧರ್ಮ.
ಪ್ರಾದೇಶಿಕ ವಿಭಿನ್ನತೆ
ಯುಗಾದಿ ಹಬ್ಬವನ್ನು ಬೇವು-ಬೆಲ್ಲದ ಹಬ್ಬ ಎಂದು ಕರೆಯುತ್ತಾರೆ.ಹಬ್ಬದ ಮೂಲ ಉದ್ದೇಶ ಒಂದೇ ಆಗಿದ್ದರೂ ಹಬ್ಬಗಳ ಆಚರಣೆಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಕೆಲವು ವ್ಯತ್ಯಾಸಗಳಿವೆ.ಮಹಾರಾಷ್ಟ್ರದಲ್ಲಿ ‘ಗುಡಿ ಪಾಡವ’ ಎನ್ನುತ್ತಾರೆ.ಪಂಜಾಬಿನಲ್ಲಿ ‘ಬೈಸಾಕಿ’, ಅಸ್ಸಾಂನಲ್ಲಿ’ಬಿಹು’,ಕೇರಳದಲ್ಲಿ ‘ವಿಶು’, ತಮಿಳುನಾಡಿನಲ್ಲಿ ಸೌರಮಾನ ಯುಗಾದಿ (ಪುತ್ತೌಂಡು ವಿಳಾ), ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ‘ಯುಗಾದಿ’ಎಂದು ಆಚರಣೆ ಮಾಡುತ್ತಾರೆ.ಒಟ್ಟಿನಲ್ಲಿ ಬದುಕಿನಲ್ಲಿ ಸುಖ,ಶಾಂತಿ, ಸಮೃದ್ಧಿಯನ್ನು ಬಯಸುವುದೇ ಹಬ್ಬದ ಉದ್ದೇಶವಾಗಿದೆ. ಈ ಹಬ್ಬ ಭಕ್ತಿ,ಜ್ಞಾನ,ಕರ್ಮಗಳ ತ್ರಿವೇಣಿ ಸಂಗಮ.
ಹಬ್ಬದ ಸಂಪ್ರದಾಯ
ಮನೆಯ ಗೋವು ಮತ್ತು ಕರುಗಳಿಗೆ ಸ್ನಾನ ಮಾಡಿಸಿ ಅವುಗಳಿಗೆ ಬಣ್ಣದ ಅಲಂಕಾರವನ್ನು ಮಾಡಿ ಹೂಗಳಿಂದ ಸಿಂಗರಿಸಿ ಪೂಜಿಸುತ್ತಾರೆ.ಮನೆಯ ಸದಸ್ಯರೆಲ್ಲರೂ ಬೇವು, ಎಣ್ಣೆ,ಅರಿಶಿನ ಬೆರೆಸಿ ಕಾಯಿಸಿದ ಎಣ್ಣೆಯನ್ನು ಮೈಗೆಲ್ಲಾ ಹಚ್ಚಿಕೊಂಡು ಸ್ಥಾನ ಮಾಡುವ ಸಂಪ್ರದಾಯವಿದೆ. ವೈಶಾಖದ ಮುನ್ನ ಬಿಸಿಲಿಗೆ ಧಗೆ ಹೆಚ್ಚಾಗುತ್ತದೆ.ಇದನ್ನು ತಡೆಗಟ್ಟಲು ಮೈಯಲ್ಲಿ ಶಕ್ತಿ ಬೇಕು ಅದಕ್ಕಾಗಿ ದೇಹದಲ್ಲಿ ಎಣ್ಣೆ ಅಂಶವನ್ನು ಹೆಚ್ಚಿಸಿಕೊಳ್ಳಬೇಕು. ಈ ಕಾರಣದಿಂದಲೇ ಈ ಹಬ್ಬದಲ್ಲಿ ಬೇವು ಮಿಶ್ರಿತ ಎಣ್ಣೆ ಹಚ್ಚಿಕೊಂಡು ಬಿಸಿಲಿಗೆ ಮೈಯೊಡ್ಡಿ ನಂತರ ಅಭ್ಯಂಜನ ಸ್ನಾನ ಮಾಡುತ್ತಾರೆ.ಆರೋಗ್ಯ ದೃಷ್ಟಿಯಿಂದ ಇದು ತುಂಬಾ ಒಳ್ಳೆಯದು.
ನಂತರ ಎಲ್ಲರೂ ಹೊಸ ಬಟ್ಟೆ ಧರಿಸಿ, ದೇವರಿಗೆ ದೀಪ ಬೆಳಗಿಸಿ, ದೇವರ ಹತ್ತಿರ ಹೊಸವರ್ಷದ ಪಂಚಾಂಗ, ಬೇವು-ಬೆಲ್ಲ ಮಿಶ್ರಣ ಮತ್ತು ತಮ್ಮ ಗಳಿಕೆಯ ಸಂಪತ್ತನ್ನು ಇಟ್ಟು ಸಂಕಲ್ಪ ವಿಧಿಯೊಂದಿಗೆ ದೇವರಿಗೆ ಅಭಿಷೇಕ ಮಾಡಿ, ಧೂಪ, ದೀಪ, ನೈವೇದ್ಯಗಳೊಂದಿಗೆ ಪೂಜಿಸಿ, ತಮ್ಮ ಕೃತಜ್ಞತೆಯನ್ನು ಅರ್ಪಿಸಿ, ಹೊಸವರ್ಷದ ಪಂಚಾಂಗವನ್ನು ಓದುತ್ತಾರೆ. ಅನಂತರ ದೇವರನ್ನು ಪ್ರಾರ್ಥಿಸಿ,ಬೇವು ಬೆಲ್ಲವನ್ನು ಸ್ವೀಕರಿಸಿ, ಮನೆಯ ಕಿರಿಯರೆಲ್ಲರೂ ಹಿರಿಯರಿಗೆ, ತಂದೆತಾಯಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ. ಈ ರೀತಿ ಮಾಡುವುದರಿಂದ ಎಲ್ಲಾ ಪಾಪಗಳು ಪರಿಹಾರವಾಗುವುದಲ್ಲದೆ, ಸಂಕಟಗಳು ದೂರವಾಗಿ.ಆಯುಷ್ಯ ವೃದ್ಧಿಯಾಗುತ್ತದೆ. ಮತ್ತು ಧನ ಧಾನ್ಯ ಗಳು ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ಆರೋಗ್ಯಕರವಾದ ಬೇವು-ಬೆಲ್ಲ ಸ್ವೀಕಾರ.
ಯುಗಾದಿ ಹಬ್ಬದ ದಿನ ಬೇವು,ಬೆಲ್ಲ ,ಹುರಿಗಡಲೆ, ಕೊಬ್ಬರಿ ಸೇರಿಸಿ,ದೇವರಿಗೆ ನೈವೇದ್ಯ ಮಾಡಿ ಪ್ರಾರ್ಥಿನೆ ಮಾಡುತ್ತಾರೆ.ನಂತರಬೇವು ಬೆಲ್ಲ ಸೇವನೆ ಮಾಡುತ್ತಾರೆ.ಬೇವು-ಬೆಲ್ಲ ಸ್ವೀಕರಿಸುವಾಗ ಈ ಶ್ಲೋಕವನ್ನು ಹೇಳುತ್ತಾರೆ.
“ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಮ್”
ಈ ಶ್ಲೋಕದ ಅರ್ಥ,ಬೇವು ಬೆಲ್ಲ ತಿನ್ನುವುದರಿಂದ ಮನುಷ್ಯ ನೂರು ವರ್ಷಗಳ ಆಯಸ್ಸು, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿ ರೋಗ ನಿವಾರಣೆಗಾಗಿ ಬೇವು ಬೆಲ್ಲ ಸೇವನೆ ಮಾಡುತ್ತೇವೆ ಎಂದು ಅರ್ಥ. ಬೇವು ಬೆಲ್ಲವನ್ನು ಪ್ರಸಾದ ರೂಪದಲ್ಲಿ ಎಲ್ಲರಿಗೂ ಕೊಟ್ಟು ಶುಭಾಶಯ ಹೇಳುತ್ತಾರೆ.
ಸುಖ-ದುಃಖ ಸ್ವೀಕರಿಸಿ
ಬೇವು-ಬೆಲ್ಲ ನಮ್ಮ ಬದುಕಿನ ಸಿಹಿ-ಕಹಿಗಳ ಪ್ರತೀಕ. ನೋವು ನಲಿವನ್ನು ಸಮಚಿತ್ತದಿಂದ ಸ್ವೀಕರಿಸಬೇಕೆಂಬ ಭಾವ ಇದರಲ್ಲಿದೆ. ಬೇವು ಕಹಿಯ ಸಂಕೇತವಾದರೆ,ಬೆಲ್ಲ ಸಿಹಿಯ ಸಂಕೇತ. ಪ್ರತಿಯೊಬ್ಬರ ಜೀವನದಲ್ಲಿಯೂ ಕೇವಲ ಸಿಹಿ ಯೊಂದೇ ಅಂದರೆ ಸುಖವೇ ಬರುವುದು ಸಾಧ್ಯವಿಲ್ಲ. ಆಗಾಗ್ಗೆ ಕಹಿ ಅಂದರೆ ಕಷ್ಟಗಳು ಬರುತ್ತಿರುತ್ತವೆ. ಪ್ರತಿಯೊಬ್ಬರ ಜೀವನದಲ್ಲಿಯೂ ಏರುಪೇರುಗಳು ನೋವು-ನಲಿವುಗಳು ಕಷ್ಟ-ಸುಖಗಳು ಇದ್ದೇ ಇರುತ್ತವೆ. ಆದ್ದರಿಂದ ಬೇವು-ಬೆಲ್ಲವನ್ನು ಸವಿಯುವುದರ ಮೂಲಕ ಕಷ್ಟ-ಸುಖವನ್ನು ಸಮನಾಗಿ ಕಾಣಬೇಕೆನ್ನುವ ಮನಸ್ಥಿತಿಯನ್ನು ರೂಡಿಸಿಕೊಳ್ಳಬೇಕು. ಕಷ್ಟ-ಸುಖವು ಒಂದೇ ನಾಣ್ಯದ ಎರಡು ಮುಖ ಇದ್ದಹಾಗೆ.ಜೀವನವು ಬರಿ ಸಿಹಿಯು ಅಲ್ಲ ಅಥವಾ ಕಹಿಯೂ ಅಲ್ಲ, ಎರಡು ಸಮ ಮಿಶ್ರಣ ಬದುಕು. ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಜೀವನದಲ್ಲಿ ಇರಬೇಕು. ಏನೇ ಕಷ್ಟ ಸಮಸ್ಯೆಗಳು ಬಂದರೆ ಧೈರ್ಯ, ತಾಳ್ಮೆ ಕಳೆದುಕೊಳ್ಳಬಾರದು. ಶಾಂತ ಸ್ವಭಾವ ಬೆಳೆಸಿಕೊಳ್ಳಬೇಕು.ಈಸಬೇಕು ಇದ್ದು ಜಯಿಸಬೇಕು ಎಂದು ದಾಸರು ಹೇಳಿಲ್ಲವೆ.
ಬೇವು ರೋಗ ನಿವಾರಕ
ಆಯುರ್ವೇದದ ಪ್ರಕಾರ ಬೇವು ರೋಗನಿವಾರಕ, ಕ್ರಿಮಿನಾಶಕ,ಆರೋಗ್ಯದಾಯಕ ಔಷಧೀಯ ಗುಣಗಳಿದ್ದು,ಬೇವು ಅದರಕ್ಕೆ ಕಹಿಯಾದರೂ, ಉದರಕ್ಕೆ ಸಿಹಿ.ರೋಗನಿವಾರಕ ಗುಣಗಳಿಂದ ಕೂಡಿರುವ ಕಾರಣ ಪೂಜಾರ್ಹ ವೃಕ್ಷವೆಂಬ ಕೀರ್ತಿಗೆ ಪಾತ್ರವಾಗಿದೆ. ಇನ್ನು ಬೆಲ್ಲ ಚೇತೋಹಾರಿ, ಜೀರ್ಣಕಾರಕ ಮತ್ತು ವಯೋಮಾನವನ್ನು ವೃದ್ಧಿ ಮಾಡುತ್ತದೆ ಎಂದು ಹಿರಿಯರು ಹೇಳುತ್ತಾರೆ. ಬೇವು-ಬೆಲ್ಲ ಇವು ಕಣ್ಣಿಗೂ,ದೇಹಕ್ಕೂ ತಂಪು, ಜೊತೆಗೆ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತದೆ.
ಆಗಾಗಿ ನಮ್ಮ ಹಿರಿಯರು ಬೇವು-ಬೆಲ್ಲದ ಮಹತ್ವವನ್ನು ಅರಿತಿದ್ದರಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಪ್ರಕೃತಿಯ ವಿದ್ಯಮಾನಕ್ಕನುಗುಣವಾಗಿ ಈ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ.
ಬಿಸಿ ಬಿಸಿ ಹೋಳಿಗೆ ,ತುಪ್ಪದ ಜೊತೆ
ಯುಗಾದಿಯ ಮತ್ತೊಂದು ವಿಶೇಷವೆಂದರೆ ಹೋಳಿಗೆ (ಒಬ್ಬಟ್ಟು), ಪಾಯಸ ಮತ್ತು ಮಾವಿನಕಾಯಿ ಚಿತ್ರಾನ್ನ, ಮಾವಿನ ಹಣ್ಣು ಲಭ್ಯವಿದ್ದರೆ, ಮಾವಿನ ಹಣ್ಣಿನ ಸೀಕರಣೆ(ಪಾಯಸ) ಮಾಡುತ್ತಾರೆ. ಆರೋಗ್ಯ ದೃಷ್ಟಿಯಿಂದಲೂ ಇದು ಉತ್ತಮ ಆಹಾರ.
ಪಂಚಾಂಗ ಶ್ರವಣ ಫಲ
ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದರಿಂದ ಹೆಚ್ಚಿನ ಪ್ರಯೋಜನವಿದೆ. ಪಂಚ ಅಂದರೆ ಐದು, ಅಂಗ ಎಂದರೆ ಭಾಗ. ವಾರ, ತಿಥಿ, ಯೋಗ, ನಕ್ಷತ್ರ ಮತ್ತು ಕರಣ ಇವೇ ಆ ಐದು ಅಂಗಗಳು. ಈ ಐದು ಭಾಗಗಳಿಂದ ಕೂಡಿದ ವಿವರವೇ ಪಂಚಾಂಗ. ಪಂಚ +ಅಂಗ=ಪಂಚಾಂಗ. ಇವುಗಳಲ್ಲಿ ಒಂದು ಭಾಗವನ್ನು ಬಿಟ್ಟರೂ ಪಂಚಾಂಗ ಶಾಸ್ತ್ರ ಪೂರ್ಣವಾಗುವುದಿಲ್ಲ. ಇದು ಐದು ಬೆರಳುಗಳ ಪೂರ್ಣ ಹಸ್ತ ವಿದ್ದಂತೆ. ಯಾವುದೇ ಶುಭಕಾರ್ಯವನ್ನು ನಡೆಸಲು, ಶುಭಕರವಾದ ವಾರ, ತಿಥಿ,ನಕ್ಷತ್ರ, ಸಮಯ ಮುಂತಾದುವುಗಳನ್ನು ಪಂಚಾಂಗದ ಮೂಲಕವೇ ತಿಳಿಯಬೇಕಾಗುತ್ತದೆ. ಆದ್ದರಿಂದ ಈ ದಿನ ಪಂಚಾಂಗಕ್ಕೆ ಎಲ್ಲಿಲ್ಲದ ಮಹತ್ವವಿರುತ್ತದೆ. ಯುಗಾದಿಯಂದು ಪಂಚಾಂಗವನ್ನು ದೇವರಮುಂದೆ ಇಟ್ಟು ಅರಿಶಿನ-ಕುಂಕುಮ ಹಚ್ಚಿ ಪೂಜಿಸುತ್ತಾರೆ. ಸಾಯಂಕಾಲ ಗ್ರಾಮಸ್ಥರು ದೇವಸ್ಥಾನದಲ್ಲಿ ಸೇರಿ ಪಂಚಾಂಗ ಶ್ರವಣ ಮಾಡುತ್ತಾರೆ. ಓದು ಬರಹ ಬಲ್ಲ ಮನೆಯ ಹಿರಿಯರು ಅಥವಾ ಪುರೋಹಿತರು ಪಠಿಸಿ ಅದನ್ನುಹೇಳುತ್ತಾರೆ. ಈ ಪಂಚಾಂಗ ಶ್ರವಣದ ಫಲವನ್ನು ಹೀಗೆ ಹೇಳಲಾಗಿದೆ. ತಿಥಿಯ ಶ್ರವಣದಿಂದ ಲಕ್ಷ್ಮಿಯು ಲಭಿಸುತ್ತಾಳೆ. ವಾರದ ಶ್ರವಣದಿಂದ ಆಯಸ್ಸು ವೃದ್ಧಿಯಾಗುತ್ತದೆ, ನಕ್ಷತ್ರ ಶ್ರವಣದಿಂದ ಪಾಪನಾಶವಾಗುತ್ತದೆ,ಯೋಗ ಶ್ರವಣದಿಂದ ರೋಗನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿಸಿದ ಕಾರ್ಯಸಿದ್ಧಿ ಆಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯ ಶ್ರವಣದಿಂದ ಗಂಗಾ ಸ್ಥಾನದ ಫಲವು ಲಭಿಸುತ್ತದೆ.
ಚಂದ್ರ ದರ್ಶನದಿಂದ ಕಷ್ಟಗಳ ನಿವಾರಣೆ.
ಯುಗಾದಿಯ ದಿನ ಮತ್ತೊಂದು ವಿಶೇಷವೆನೆಂದರೆ ಚಂದ್ರ ದರ್ಶನ ಮಾಡುವುದು. ನವಗ್ರಹಗಳಲ್ಲೊಂದಾದ ಚಂದ್ರನು ಶುದ್ಧತೆ, ಬುದ್ಧಿವಂತಿಕೆ ಮತ್ತು ನಡೆವಳಿಕೆಯ ಸಂಕೇತವಾಗಿ ಬಿಂಬಿಸಲಾಗುತ್ತದೆ. ಅಂತಹ ಚಂದ್ರನನ್ನು ಹೊಸವರ್ಷದ ಯುಗಾದಿಯಂದು ವೀಕ್ಷಿಸಿದರೆ ಇಡೀ ವರ್ಷವೆಲ್ಲಾ ಸುಖ ಸಂತೋಷದಿಂದ ಬಾಳಬಹುದೆಂಬ ಹಿಂದಿನಿಂದಲೂ ವಾಡಿಕೆಯಾಗಿದೆ. ಇಡೀ ವರ್ಷದಲ್ಲಿ ಯಾವುದೇ ಆಪಾದನೆ,ಅಪಕೀರ್ತಿ, ಕಳಂಕಗಳು ಒದಗುವುದಿಲ್ಲ ಮತ್ತು ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.
ಯುಗಾದಿ ಕವಿತೆ ಅವಿಭಾಜ್ಯ ಅಂಗವಾಗಿದೆ.
ಯುಗಾದಿಯ ಆಚರಣೆಗಳೊಂದಿಗೆ ಅವಿಭಾಜ್ಯ ಅಂಗವಾಗಿ ಹೆಣೆದುಕೊಂಡಿದೆ ಬೇಂದ್ರೆಯವರ ಕವಿತೆ. “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…” ಎಂಬ ಈ ಕವಿತೆ ಎಲ್ಲರ ಮನೆಯಲ್ಲೂ ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆ,ನಾಡ ಗೀತೆ ಎಲ್ಲವೂ ಆಗಿ, ಪ್ರತಿಯೊಬ್ಬರ ಮನೆ ಮನದಲ್ಲಿ ಯುಗಾದಿಯಂದು ಹಾಸುಹೊಕ್ಕಾಗಿ ಬೆರೆತು, ಜನರಿಗೆ ನವಚೈತನ್ಯ, ನವ ಉತ್ಸಾಹ ತುಂಬುತ್ತದೆ. ಬೇಂದ್ರೆಯವರ ಈ ಕವಿತೆ ಪಂಚಾಂಗ ಶ್ರವಣದಷ್ಟೇ ಕಡ್ಡಾಯವೆನಿಸಿದೆ.
ಯುಗಾದಿ ಸೃಷ್ಟಿಯ ಸಂಕೇತ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತದೆ. ಆದರೆ ನಾವು ಕಳೆದ ಸಮಯ ಮಾತ್ರ ಮತ್ತೆ ಮರಳಿ ಬರುವುದಿಲ್ಲ. ಅದರಿಂದ ದೊರೆತ ಸಮಯವನ್ನು ಸತ್ಕಾರ್ಯಕ್ಕೆ ಉಪಯೋಗಿಸಿ ಜೀವನವನ್ನು ಸಾರ್ಥಕತೆ ಹೊಂದಬಹುದು. ಅಂತೂ ಯುಗಾದಿ ಸೃಷ್ಟಿಯ ಸಂಕೇತ, ಸೃಷ್ಟಿ ಹೊಸತನ್ನು ಪ್ರತಿನಿಧಿಸುತ್ತದೆ. ಸಿಹಿ ಕಹಿ, ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬ ದಿವ್ಯ ಸಂದೇಶವನ್ನು ಸಾರುವ ಈ ಯುಗಾದಿ ಸಮಸ್ತರಿಗೂ ಸನ್ಮಂಗಳವನ್ನುಂಟು ಮಾಡಲಿ, ಭಗವಂತನ ಕೃಪೆ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಹಾರೈಸುತ್ತಾ, ಹೊಸ ವರ್ಷಕ್ಕೆ ಹೊಸವರ್ಷಕ್ಕೆ “ಶ್ರೀ ಪ್ಲವನಾಮ ಸಂವತ್ಸರ”ಯುಗಾದಿ ಸಂಭ್ರಮದಿಂದ ಶುಭ ಸ್ವಾಗತ ಕೋರೋಣ.
ಹೆಚ್ಚಿನ ಬರಹಗಳಿಗಾಗಿ
ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ
ನೋ ಪಾರ್ಕಿಂಗ್
ಪುತಿನ ರ ವಸಂತ ಚಂದನ