ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಕ್ಕಳೇ ಬರೆದ ಸಾಹಿತ್ಯ ಹೆಚ್ಚು‌ಪ್ರಕಟವಾಗಬೇಕು – ನರಹಳ್ಳಿ

ಕನ್ನಡದಲ್ಲಿ‌ ಮಕ್ಕಳಿಗಾಗಿ‌ ಬರೆದ ಸಾಹಿತ್ಯ ಇದೆ. ಆದರೆ ಮಕ್ಕಳೇ ಬರೆದ ಸಾಹಿತ್ಯವನ್ನು ಪ್ರೋತ್ಸಾಹಿಸಬೇಕಿದೆ ಎಂದು ಬಹುಮುಖಿ‌ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು. ಅವರು ರೂವಾರಿ‌ ಅಭಿನವ ಇಂಪ್ರಿಂಟ್ ಪ್ರಕಟಿಸಿದ ಆದ್ಯ ಗುರುಪ್ರಸಾದ್ ಅವರ ಹೌ ಅಮ್ಮಮ್ಮ ಸೇವ್ಡ್ ದ ವರ್ಲ್ಡ ಕೃತಿಯ ಬಿಡುಗಡೆ ಸಮಾರಂಭದಲ್ಲಿ‌ ಭಾಗವಹಿಸಿ‌ ಮಾತನಾಡಿದರು. ನಾವೆಲ್ಲ ಮಕ್ಕಳಿಗಾಗಿ ಆಸ್ತಿ‌ಮಾಡಲು ಹೊರಟಿದ್ದೇವೆ. ಆದರೆ ಮಕ್ಕಳೇ ಆಸ್ತಿಯಾಗುವಂತೆ‌ ಮಾಡಲು ಅವರಲ್ಲಿರುವ ಸಂವೇದನಾಶೀಲ ಹೆಚ್ಚಿಸಬೇಕು.. ಹಾಗಾದಾಗ‌ ಮಾತ್ರವೇ ಸಾಮಾಜಿಕ‌ ಬದಲಾವಣೆ‌ ಸಾಧ್ಯ ಎಂದರು.

ಕೃತಿ ಬಿಡುಗಡೆ‌ ಮಾಡಿ ಮಾತನಾಡಿದ‌ ಅಂತರರಾಷ್ಟ್ರೀಯ ಮಕ್ಕಳ‌ ಸಾಹಿತಿ‌ ರಾಮೇಂದ್ರಕುಮಾರ್‌ ಮಾತನಾಡಿ ಮೋಬೈಲ್, ಟಿವಿ‌ ಮಾಧ್ಯಮಗಳು ಕೆಟ್ಟವು ಎಂದು ಹೇಳಲಾರೆ. ಅವು ನಮ್ಮ ಮಕ್ಕಳ ಕಲ್ಪನಾಶಕ್ತಿಯನ್ನು ಏಕೀಕೃತಗೊಳಿಸುತ್ತಿವೆ, ಮಿತಿಗೊಳಿಸುತ್ತಿವೆ.  ನಾವು ಪುಸ್ತಕದಲ್ಲಿ ಓದುವಾಗ ಚೋಟಾ ಭೀಮ್‌ ಎಂದ‌ ಕೂಡಲೇ ಆ ಶಬ್ದ ಕೇಳಿದ ತಕ್ಷಣ‌ ಒಬ್ಬಬ್ಬನ ರೂಪ ಮನಸ್ಸಿಗೆ ಒಂದೊಂದು ಆಕೃತಿ ಬರುತ್ತಿತ್ತು. ಅವನ ಮುಖ ಬಣ್ಣ ಆಕೃತಿ ಕಣ್ಣು ಮೂಗುಬಾಯಿಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿತ್ತು. ಆದರೆ ಇವತ್ತು‌ ಮೊಬೈಲ್ ಟಿವಿಗಳು ಒಂದೆ ಬಣ್ಣ ಆಕೃತಿಯನ್ನು ಕಟ್ಟಿಕೊಟ್ಟ ಕಾರಣ ಅದೇ ಆಕೃತಿಗಳು‌ ನಮ್ಮ ಮನಸ್ಸಿನಲ್ಲಿ ಮೂಡಿಸಿತು. ಬರವಣಿಗೆ ಒಂದು‌ ಕಲೆ. ಮಕ್ಕಳು‌ ಹೆಚ್ಚು ಓದಬೇಕು ತಮ್ಮ ಅನುಭವವನ್ನು ಹಂಚಿಕೊಳ್ಳಬೇಕು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಆದ್ಯ ನಮ್ಮ ಕಾಲದ ವಿಶಿಷ್ಟ ಪ್ರತಿಭೆ. ಅವಳ‌ ಭಾಷೆ ಕಲ್ಪನಾಶಕ್ತಿ ಅಸಾಮಾನ್ಯವಾದುದು. ಈ ಕೃತಿಯನ್ನು ಓದುತ್ತಿದ್ದಂತೆ ನನ್ನ‌ಮನಸ್ಸಿನಲ್ಲಿ ನನ್ನ ಬಾಲ್ಯದ‌ ಅನೇಕ‌ ಸಂಗತಿಗಳು ನೆನಪಾದವು ಎಂದರು. 

ಅಭಿನವದ‌ ರವಿಕುಮಾರ ಮಾತನಾಡಿ ಇವತ್ತು ಮಕ್ಕಳ ಸಾಹಿತ್ಯ ತುಂಬ ನಿರ್ಲಕ್ಷಕ್ಕೆ‌ ಒಳಗಾದ‌ ಪ್ರಕಾರ ಮಕ್ಕಳ‌ ಸಾಹಿತ್ಯದ ರಚನೆ‌ ಮತ್ತು ಪ್ರಸಾರಕ್ಕೆ‌ತಮ್ಮ‌ಜೀವನವನ್ನು ಅರ್ಪಿಸಿಕೊಂಡ ಆನಂದ‌ಪಾಟೀಲರ ಮಾರ್ಗದರ್ಶನದಲ್ಲಿ ಅಭಿನವ‌ ಅನೇಕ ಮಕ್ಕಳ ಸಾಹಿತ್ಯಕೃತಿಗಳನ್ನು ಪ್ರಕಟಿಸಿದೆ. ಸಾಹಿತ್ಯ ಪರಿಷತ್ತು ಅಕಾಡೆಮಿಗಳು ಇನ್ನು‌ ಮುಂದಾದರೂ ಮಕ್ಕಳ ಸಾಹಿತ್ಯ ಪ್ರಕಟಣೆಗೆ ಆದ್ಯತೆ ನೀಡಬೇಕು. ಮಕ್ಕಳೇ ಬರೆದ ಕೃತಿಗಳಿಗೆ ಬಹುಮಾನ ನೀಡಬೇಕು ಎಂದರು.

ಆದ್ಯ ಅವರ ತಾಯಿ ಸಹನಾ ಗುರುಪ್ರಸಾದ್ ಮಾತನಾಡಿ ಆದ್ಯಳ ಮುಖ್ಯ ಆಸಕ್ತಿ ಕವಿತೆ. ತನ್ನ ಹೆಚ್ಷಿನ‌ಸಮಯವನ್ನು ಓದುವುದರಲ್ಲಿಯೇ ಕಳೆಯುತ್ತಾಳೆ. ಬೇರೆ ಮಕ್ಕಳಂತೆ ಯಾವುದಕ್ಕೂ ಹಠ ಮಾಡುವುದಿಲ್ಲ. ಆದರೆ ತಾನು ಬರೆದದ್ದನ್ನು ಬೇರೆಯವರು ತಿದ್ದಲು ಬಿಡುವುದಿಲ್ಲ. ಅವಳು ಬರೆದ ಕವಿತೆಗೆ ಸ್ಯಾನ್ ಪ್ರಾನ್ಸಿಸ್ಕೋ ಗ್ರಂಥಾಲಯದ ಬಹುಮಾನ ಕೂಡ ಬಂದಿದೆ.ಅವರ ಅಜ್ಜ ಅಜ್ಜಿಯರ ಪ್ರೋತ್ಸಾಹದಿಂದ ಅವಳು ಹೆಚ್ಚು ಬರೆಯುತ್ತಿದ್ದಾಳೆ ಎಂದರು. ಸ್ನೇಹ ನರಹಳ್ಳಿ ಲೇಖಕಿ ಆದ್ಯರನ್ನು ಪರಿಚಯಿಸಿದರು. ಸೂರ್ಯವಂಶಿ ರಾಮೇಂದ್ರಕುಮಾರ್ ಅವರನ್ನು ಪರಿಚಯಿಸಿದರು. ಹಿರಿಯ ಲೇಖಕಿ ರಜನಿ ನರಹಳ್ಳಿ ಕವಯತ್ರಿ ಪಿ‌.ಚಂದ್ರಿಕಾ ಕಥೆಗಾರ ಸತೀಶ್‌ಚಪ್ಪರಿಕೆ ಪತ್ರಕರ್ತರಾದ ದೇವು ಪತ್ತಾರ್ ಉಪಸ್ಥಿತರಿದ್ದರು. ಗುರುಪ್ರಸಾದ್ ವಂದಿಸಿದರು.