- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
ಧಾರ್ಮಿಕಶಿಸ್ತಿನ ಮಡಿಕೇರಿ ದಸರಾವೈಭವವನ್ನು ಕಸಿದ ಕೊರೊನಾಸುರ!
ಧಾರ್ಮಿಕ ಶಿಸ್ತಿನ ನಾಡಹಬ್ಬ ಎಂದರೆ ದಸರಾ. ಮಂಜಿನ ನಗರಿಯ ದಸರಾ ಹಲವು ವಿಶೇಷತೆಯಿಂದ ಕೂಡಿರುವಂಥದ್ದು. ಮಹಾಲಯ ಅಮವಾಸ್ಯೆ ಕಳೆದು ನವರಾತ್ರಿಯ ಪರ್ವಕಾಲದಲ್ಲಿ ಕರಗಗಳು ಊರತುಂಬೆಲ್ಲಾ ಸಂಚರಿಸಿ ಮನೆಮನೆಗೆ ತೆರಳಿ ಪೂಜೆಸ್ವೀಕರಿಸುವ ಪದ್ಧತಿ. ಕೊಡಗಿನ ಓಲಗದ ಹಿಮ್ಮೇಳದೊಂದಿಗೆ ಕರಗಗಳು ಬಂದರೆ ಮುತ್ತೈದೆಯರಿಗೆ ಎಲ್ಲಿಲ್ಲದ ಪೂಜೆ ಸಲ್ಲಿಸುವ ಖುಷಿ. ಬಾಗಿಲಿಗೆ ರಂಗೋಲಿ ಹಾಕಿ, ಕರಗ ಹೊತ್ತವರ ಕಾಲಿಗೆ ನೀರು ಹಾಕಿ, ಕರಗಕ್ಕೆ ಪೂಜೆ ಮಾಡಿಸಿ ತಮ್ಮದೇ ಹರಿವಾಣದಲ್ಲಿ ಮಂಗಳಾರತಿ ಮಾಡಿಸಿ ತಾವೂ ತೆಗೆದುಕೊಂಡು ಧನ್ಯತಾ ಭಾವ ಅನುಭವಿಸುವುದಿದೆ. ಮಂಗಳಾರತಿ ಮಕ್ಕಳಿಗೆ ಕೊಡೋಣ ಎಂದರೆ ಮಕ್ಕಳು ಹತ್ತಿರ ಇರುವುದಿಲ್ಲ. ವಾಷ್ ರೂಮಿಗೆ ಅವಸರ ಎಂದೋ ಹೋಮ್ವರ್ಕ್ ಇದೆ ಎಂದೋ ಮನೆ ಒಳಗೆ ಇರುತ್ತವೆ .ಅದೇಕೆ ಮಕ್ಕಳು ಆಚೆ ಬರಲೊಪ್ಪುವುದಿಲ್ಲ ಅಂದರೆ ಕರಗ ಹೊತ್ತವರ ಕೈಯಲ್ಲಿರುವ ಚಾಟಿಯ ಭಯದಿಂದ. ಈ ಅಮ್ಮಂದಿರೇನು ಕಡಿಮೆ ಅಲ್ಲ. ಮಕ್ಕಳನ್ನು ಕರಗದವರ ಕೈಯಲ್ಲಿನ ಚಾಟಿ ಹೆಸರು ಹೇಳಿಯೇ ಹೆದರಿಸಿ ಇಟ್ಟುಕೊಳ್ಳುತ್ತಿದ್ದರು. ಕರಗ ಹೊತ್ತವರು ಕಾಲಿಗೆ ಎರಗಿದವರ ಮೇಲೆ ಚಾಟಿಯಿಂದ ಮುಟ್ಟುತ್ತಾರೆ ಅದೇ ಆಶೀರ್ವಾದ. ಆದರೆ ನಾವೆಲ್ಲಾ ಮಡಿಕೇರಿ ಬಿಟ್ಟು ಬಹಳ ವರ್ಷಗಳೆ ಆಗಿರುವುದರಿಂದ ಆ ದಿನಗಳನ್ನು ನೆನಪಿಸಿಕೊಂಡರೆ ತುಂಬಾ ಕಳೆದುಕೊಂಡ ಭಾವವಾಗುತ್ತದೆ.
ಈಗೇನಿದ್ದರೂ ಅತಿಥಿಗಳಾಗಿ ವಿಜಯದಶಮಿ ದಿನ ಅಂದರೆ ದಸರದ ದಿನವೇ ಹೋಗುವ ರೂಢಿಗೆ ಬಂದಿದ್ದೇವೆ. ಕಡೆಪಕ್ಷ ಅಲಂಕೃತ ಕರಗಗಳನ್ನು ಒಮ್ಮೆಗೆ ನೋಡಿ ಕೈ ಮುಗಿದು ಮುಂದೆ ಸರಿದು ಬೇರೆ ದೇವಸ್ಥಾನಗಳಿಗೆ ಹೋಗುತ್ತಿದ್ದೆವು.ಈ ಬಾರಿ ಕೊರೊನಾಸುರ ಬಂದು ಆ ದಸರದ ಖುಷಿಯನ್ನೆ ಆಪೋಶನ ತೆಗೆದುಕೊಂಡಿದ್ದಾನೆ. ಈ ವರ್ಷ ಬರೆ ಸಾಂಪ್ರದಾಯಿಕ ದಸರ ಅಲ್ಲ, ಸರಳ ದಸರ ಅಲ್ಲ, ಕೇವಲ ಸಾಂಕೇತಿಕ ದಸರವಾಗಿದೆ. ಪ್ರತಿ ವರ್ಷದಂತೆ ಈ ಬಾರಿ ಹನ್ನೊಂದು ಮಂಟಪಗಳ ಶೋಭಾ ಯಾತ್ರೆ ಇರುವುದಿಲ್ಲ. ಕಣ್ಣಿಗೆ ಕಾಣದ ಅಗೋಚರ ವೈರಸ್ ಇಡೀ ದಸರ ಶೋಭಾಯಾತ್ರೆಯನ್ನು ನಿಲ್ಲಿಸಿದೆಯಲ್ಲಾ ಅನ್ನೋದೆ ಬೇಸರದ ಸಂಗತಿ. ಇಂಥ ಪರಿಸ್ಥಿತಿಯಲ್ಲೂ ಕರಗ ಕಳೆಗುಂದಿಲ್ಲ. ಕರಗಗಳಿಗೂ ಸಾಂಕ್ರಾಮಿಕ ರೋಗಗಳಿಗೂ ಸಂಬಂಧ ಕಲ್ಪಿಸಿ ನಮ್ಮ ಹಿರಿಯರು ಶ್ರದ್ಧೆಯಿಂದ ಆಚರಿಸಿಕೊಂಡು ಬಂದಿದ್ದಾರೆ.
ಮಡಿಕೇರಿ ದಸರದ ಇತಿಹಾಸವನ್ನು ಒಮ್ಮೆ ಅವಲೋಕನ ಮಾಡಿದರೆ ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿದ ಹಾಲೇರಿ ವಂಶಸ್ಥ ೧೭೮೧ರಿಂದ ೧೮೦೯ರ ವರೆಗೆ ದೊಡ್ಡವೀರರಾಜೇಂದ್ರರು ಮೈಸೂರಿನ ಅರಸರಂತೆಯೇ ದಸರಾವನ್ನು ಪ್ರಾರಂಭ ಮಾಡುತ್ತಾರೆ. ಅಂದಿನ ದಿನಗಳಲ್ಲಿ ಕೋಟೆ ಗಣಪತಿಗೆ ಮೊದಲು ಪೂಜೆ ಸಲ್ಲಿಸುವುದರ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ದೊರಕಿಸಿ ವಿಶೇಷ ದರ್ಬಾರನ್ನು, ನವಮಿಯಂದು ಆಯುಧ ಪೂಜೆಯನ್ನು, ದಶಮಿಯಂದು ಜಂಬೂಸವಾರಿಯನ್ನು ನಡೆಸುತ್ತಿದ್ದರಂತೆ. ೧೮೩೪ ರಲ್ಲಿ ಕೊಡಗನ್ನು ಆಳ್ವಿಕೆ ಮಾಡುತ್ತಿದ್ದ ಚಿಕ್ಕವೀರರಾಜೇಂದ್ರನನ್ನು ಬ್ರಿಟಿಷರು ಸೆರೆಹಿಡಿದ ಕಾರಣ ದಸರಾ ಆಚರಣೆಗೆ ಕೊಂಚ ವಿಘ್ನ ಉಂಟಾಯಿತಾದರೂ ವರ್ಚಸ್ಸನ್ನು ಕಳೆದುಕೊಳ್ಳದೆ ಅನೂಚಾನವಾಗಿ ಇಲ್ಲಿಯವರೆಗೂ ಆಚರಣೆಯಗುತ್ತಾ ಬರುತ್ತಿರುತ್ತದೆ.
“ಕರಗ” ಎಂದರೆ ನಮಗೆ ತಮಿಳುನಾಡಿನ ಕರಗಗಳು, ಬೆಂಗಳೂರು ಕರಗ, ಹೊಳೆನರಸೀಪುರದ ಬಾಗೀವಾಳು ಕರಗ ಅಂದರೆ ಬಿಂದಿಗೆ ಜಾತ್ರೆ ನೆನಪಿಗೆ ಬರಬಹುದು. ಆದರೆ ಮಡಿಕೇರಿಯ ಕರಗಗಳು ವಿಷಿಷ್ಟ ಹಾಗು ವಿಭಿನ್ನ! ಶಕ್ತಿ ದೇವತೆಗಳ ಪ್ರತಿಮೆಗಳಾಗಿ ಇವೆ. ಅದರಲ್ಲೂ ಕರಗ ಇತಿಹಾಸವನ್ನು ನೋಡಿದರೆ ೧೯೦ ವರ್ಷಗಳಿಂದ ಈ ಆಚರಣೆ ಜಾರಿಯಲ್ಲಿದೆ ಎನ್ನುವುದಿದೆ. ಆ ಕಾಲದಲ್ಲಿ ಸಾಂಕ್ರಾಮಿಕ ರೋಗ ವಿಪರೀತವಾಗಿ ಹರಡಿದ್ದರಿಂದ ಊರಿನ ಧಾರ್ಮಿಕ ಮುಖಂಡರು ಊರ ಹೊರಗಿದ್ದ ನಾಲ್ಕು ಶಕ್ತಿದೇವತೆಗಳ ದೇವಾಲಯದಿಂದ ನವರಾತ್ರಿ ಸಂದರ್ಭದಲ್ಲಿ ಕರಗಗಳನ್ನು ಹೊರಡಿಸಿ ನಗರ ಪ್ರದಕ್ಷಿಣೆ ಹಾಕಿಸಿ ವಿಶೇಷವಾಗಿ ಪೂಜಿಸಲಾರಂಭಿಸಿದರಂತೆ. ನಂತರ ಆಗ ಅಲ್ಲಿ ಹರಡಿದ್ದ ಸಾಂಕ್ರಾಮಿಕ ರೋಗ ವಾಸಿಯಾಯಿತು ಎನ್ನುವ ಪ್ರತೀತಿ ಇದೆ. ಹಾಗೆ ಆಚರಣೆಗೆ ಬಂದ ಕರಗ ಇಲ್ಲಿಯವರೆಗೂ ಮುಂದುವರೆದುಕೊಂಡು ಬಂದಿದೆ. ಕೊರೊನದಂಥ ಸಾಂಕ್ರಾಮಿಕ ರೋಗ ಹರಡುವಿಕೆಯಲ್ಲೂ ಈ ವರ್ಷ ಕರಗಗಳು ಸಾಂಪ್ರಾದಾಯಿಕವಾಗಿ ಹೊರಟು ನಗರ ಪ್ರದಕ್ಷಿಣೆ ಆರಂಭಿಸಿವೆ . ಈ ಕಾರಣದಿಂದಲೇ ಈ ಬಾರಿ ದಸರ ಕಳೆಗುಂದಿದರೂ ಅದರ ಅವಿಭಾಜ್ಯ ಅಂಗ ಕರಗ ವಿಶೇಷವಾಗಿದೆ.
‘ಮಡಿಕೇರಿ’ ಎಂದರೆ ‘ಮುದ್ದು ರಾಜನ ಕೇರಿ ‘ ಎಂಬುದಿದೆ. ಆತ ಕಟ್ಟಿಸಿದ ಕೋಟೆ ಬಹಳ ವರ್ಷದವರೆಗೆ ಜಿಲ್ಲಾಡಳಿತದ ಕೇಂದ್ರವಾಗಿತ್ತು. ಅಂದರೆ ಕೋಟೆ. ಆ ಕೋಟೆಯಲ್ಲಿರುವ ಗಣಪತಿಗುಡಿ ಇತಿಹಾಸ ಪ್ರಸಿದ್ಧವಾಗಿದೆ. ಆ ಕೋಟೆಯ ನಾಲ್ಕು ದಿಕ್ಕಿಗೆ ನಾಲ್ಕು ಶಕ್ತಿ ದೇವತೆಗಳ ದೇವಸ್ಥಾನಗಳಿವೆ. ರಾಜಾಸೀಟ್ ಬಳಿಯಿರುವ ಕುಂದೂರುಮೊಟ್ಟೆ ದೇವಸ್ಥಾನ, ಅದರ ಕೆಳ ರಸ್ತೆಯಲ್ಲಿ ಬರುವ ಕಂಚಿ ಕಾಮಾಕ್ಷಿ ದೇವಸ್ಥಾನ, ಕೆಇಬಿ ಬಳಿ ಇರುವ ಕೋಟೆ ಮಾರಿಯಮ್ಮ ದೇವಸ್ಥಾನ, ಅದರ ನಂತರದ ರಸ್ತೆಯಲ್ಲಿ ಬರುವ ದಂಡಿನ ಮಾರಿಯಮ್ಮ ದೇವಸ್ಥಾನ ಹೀಗೆ ಈ ನಾಲ್ಕು ಶಕ್ತಿದೇವತೆಗಳು ಸೇರಿ ಮಡಿಕೇರಿ ನಗರವನ್ನು ಕಾಪಾಡುತ್ತಿವೆ ಎಂಬ ನಂಬಿಕೆ ಈಗಲೂ ಇದೆ. ಮಡಿಕೇರಿ ನಗರದ ಕೋಟೆಯನ್ನು ಕಾಯುವುದು ಕೋಟೆ ಮಾರಿಯಮ್ಮ, ನಗರವನ್ನು ಕಾಪಾಡುವುದು ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ಸೈನ್ಯವನ್ನು (ದಂಡು-ಸೈನ್ಯ) ಕಾಪಾಡುವುದು ದಂಡಿನ ಮಾರಿಯಮ್ಮ, ಆರೋಗ್ಯವನ್ನು ಕಾಪಡುವುದು ಕಂಚಿ ಕಾಮಾಕ್ಷಿ ಎಂದು ನಾಲ್ಕೂ ದೇವಸ್ಥಾನಗಳನ್ನು ಅವುಗಳ ವಿಶೇಷತೆಯಿಂದ ಗುರುತಿಸುವುದಿದೆ.
ಈ ನಾಲ್ಕು ದೇವತೆಗಳ ಕುರಿತು ಪೌರಾಣಿಕ ಕಥೆಯೂ ಪ್ರಚಲಿತದಲ್ಲಿದೆ. ಕಥೆಯ ಪ್ರಕಾರ ಪಾರ್ವತಿ ದೇವಿ ದುಷ್ಟ ಸಂಹಾರಕ್ಕೆಂದು ಹೊರಟಾಗ ಮೊದಲು ತನ್ನ ಅಣ್ಣ ವಿಷ್ಣುವಿನ ಬಳಿ ತೆರಳುತ್ತಾಳೆ. ಆತ ಶಂಕ, ಚಕ್ರ,ಗಧಾ , ಪದ್ಮ ಮೊದಲಾದ ಆಯುಧಗಳನ್ನು ದಯಪಾಲಿಸುತ್ತಾನೆ. ನಂತರ ಪಾರ್ವತಿ ಬೇರೆ ಬೇರೆ ರೂಪ ತಾಳಿ ದುಷ್ಟರ ಮರ್ಧನ ಮಾಡಿದಳು. ಈ ನಾಲ್ಕು ದೇವತೆಗಳು ಪಾರ್ವತಿ ದೇವಿಯ ಅವತಾರಗಳೆ ಎನ್ನುವ ಪ್ರತೀತಿ ಇದೆ.ಹಾಗಾಗಿ ಕರಗ ಅಂದರೆ ಅಷ್ಟೊಂದು ಶ್ರದ್ಧೆ ಮತ್ತು ಭಕ್ತಿ. ಪ್ರತಿ ದೇವಾಲಯಕ್ಕೂ ಪ್ರತ್ಯೇಕ ಆಡಳಿತ ಮಂಡಳಿಗಳು ಇವೆ. ವರ್ಷಪೂರ್ತಿ ದಸರ ಶೋಭಾ ಯಾತ್ರೆಯ ಒಂದಿಲ್ಲೊಂದು ಕಾರ್ಯಕ್ರಮಗಳ ರೂಪುರೇಷೆಯಲ್ಲಿ ಇವು ಕ್ರಿಯಾಶೀಲವಾಗಿರುತ್ತವೆ.
ಅಶ್ವಯುಜ ಮಾಸದ ಪಾಡ್ಯದಂದು ಮಡಿಕೇರಿಯ ಗದ್ದುಗೆ ಬಳಿ ಇರುವ ಪಂಪ್ ಹೌಸ್ನಿಂದ ಕರಗಗಳು ನಗರದ ಪ್ರಮುಖರ, ಗಣ್ಯರ, ಸಾಂಪ್ರದಾಯಿಕ ಪೂಜೆಯಿಂದ ಹೊರಡುತ್ತವೆ. ಇಲ್ಲಿ ನಾಲ್ಕೂ ದೇವಸ್ಥಾನದ ವೃತಧಾರಿ ಅರ್ಚಕರು ಹಳದಿ ಕಚ್ಚೆಯುಟ್ಟು, ಮೈಗೆಲ್ಲಾ ಅರಿಶಿಣಲೇಪನ ಮಾಡಿಕೊಂಡು, ಕೇಶಮುಂಡನ ಮಾಡಿಸಿಕೊಂಡು ಎಡಕೈಯಲ್ಲಿ ಬೆಳ್ಳಿ ಕವಚ ಹೊಂದಿರುವ ಕಠಾರಿಯನ್ನು, ಬಲಕೈಯಲ್ಲಿ ಬೆಳ್ಳಿ ಹಿಡಿಕೆ ಇರುವ ಬೆತ್ತ, ಇಲ್ಲದೆ ಚಾಟಿಯನ್ನು ಹಿಡಿದಿರುತ್ತಾರೆ.
ಇನ್ನು ಕರಗ ಸಿಂಗಾರವಾಗುವುದು ತಾಮ್ರದ ತುಂಬಿದ ಬಿಂದಿಗೆಯಲ್ಲಿ . ಬಿಂದಿಗೆಯನ್ನು ದೇವಿ ಮುಖವಾಡದಿಂದ, ಚಿಕ್ಕ ಛತ್ರಿಗಳಿಂದ, ಚಿಕ್ಕಪ್ರಭಾವಳಿಗಳಿಂದ ಮಲ್ಲಿಗೆ, ಸೇವಂತಿಗೆ, ಕನಕಾಂಬರ ಹೂಗಳಿಂದ ವಿಶೇಷ ಅಲಂಕಾರ ಮಾಡಿರುತ್ತಾರೆ. ಅಲಂಕೃತ ಕಳಶಗಳನ್ನು ನೋಡಿದ ಕೂಡಲೆ ದೇವತೆಗಳೇ ಆವಾಹನೆಯಾದಂತೆ, ಇಂಥ ದೇವಾಲಯದ್ದೆ ಎನ್ನುವಷ್ಟರ ಮಟ್ಟಿಗೆ ವಿಭಿನ್ನತೆಯಿಂದಲೂ ಕೂಡಿರುತ್ತವೆ.
ಕರಗ ಹೊರುವರನ್ನಲ್ಲದೆ ದೇವಸ್ಥಾಕ್ಕೆ ಸಂಬಂಧಿಸಿದವರು ವೃತ ಆಚರಣೆ ಮಾಡಿ ಹಳದಿ ಬಟ್ಟೆಯನ್ನು ತೊಟ್ಟಿರುತ್ತಾರೆ. ತುಂಬಾ ದೂರದವರೆಗೆ ನಡೆಯಬೇಕಾದಾಗ ಮುಖ್ಯ ಕರಗಧಾರಿಗಳ ಬದಲಿಗೆ ಇವರು ಕರಗ ಹೊರುತ್ತಾರೆ. ಅಲಂಕೃತ ಕಳಸಗಳು ಬೀಳುವಂತಿಲ್ಲ ಬಿದ್ದರೆ ಅಪಶಕುನವೆಂಬ ನಂಬಿಕೆಯೂ ಇದೆ.
ಕೊಡಗಿನ ವಿಶೇಷ ವಾದ್ಯದೊಂದಿಗೆ ಕರಗವೃತಧಾರಿಗಳು ಬರೆನೆತ್ತಿಯ ಮೇಲೆ ಅಲಂಕೃತ ಕಳಸ ಹೊತ್ತು ಕೈಗಳಲ್ಲಿ ನಿಂಬೆ ಹಣ್ಣು ಚುಚ್ಚಿದ ಕಠಾರಿ ,ಚಾಟಿ ಹಿಡಿದು ನರ್ತಿಸುತ್ತಿದ್ದರೆ ಭಯ ಭಕ್ತಿ ಒಮ್ಮೆಗೆ ಬರುತ್ತದೆ.
ಮೊದಲ ದಿನ ಅಲಂಕೃತಗೊಂಡ ಕರಗಗಳು ಮಹದೇವಪೇಟೆಯ ಚೌಡೇಶ್ವರಿ, ವಾಸವಿ ದೇವಾಲಯ, ಪೇಟೆ ಶ್ರೀರಾಮಮಂದಿರದಿಂದ ಪೂಜೆ ಸ್ವೀಕರಿಸಿದ ಬಳಿಕ ನಗರ ಪ್ರದಕ್ಷಿಣೆ ಆರಂಭಿಸುತ್ತವೆ. ಕಡೆಯ ದಿನ ದಸರಾ ದಿನದಂದು ಮೊದಲಿಗೆ ಹೊರಡುವುದು ಕುಂದೂರು ಮೊಟ್ಟೆ ಮಾರಿಯಮ್ಮ ದೇವಾಲಯದ ಕರಗ , ನಂತರ ನಾಲ್ಕೂ ಕರಗಗಳು ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಒಟ್ಟಿಗೆ ಪೂಜೆ ಸ್ವೀಕರಿಸಿದ ಬಳಿಕ ದಸರಾ ಶೋಭಾ ಯಾತ್ರೆ ಆರಂಭವಾಗುತ್ತದೆ. ಮೊದಲು ಪೇಟೆ ಶ್ರೀ ರಾಮಂದಿರದ ಮಂಟಪ ಇರುತ್ತದೆ. ನಂತರ ಕರಗಗಳು ಸಂಬಂಧಪಟ್ಟ ದೇವಾಲಯದ ಮಂಟಪದೊಂದಿಗೆ ಹೆಜ್ಜೆ ಹಾಕುತ್ತವೆ. ಮರು ದಿನ ಬೆಳಿಗ್ಗೆ ಮಡಿಕೇರಿ ನಗರದ ಹೊರ ವಲಯದಲ್ಲಿರುವ ಗದ್ದುಗೆಯಲ್ಲಿ ಬನ್ನಿ ಕಡಿದ ನಂತರ ದಸರಾ ಉತ್ಸವ ಸಂಪನ್ನವಾಗುತ್ತದೆ.
ಸ್ವಾತಂತ್ರಾನಂತರದ ವರ್ಷಗಳಲ್ಲಿಯೂ ಕರಗಗಳು ಮಾತ್ರ ದಸರಾ ಶೋಭಯಾತ್ರೆ ನಡೆಸುತ್ತಿದ್ದವು .೧೯೫೮ರಲ್ಲಿ ರಾಜಸ್ಥಾನದಿಂದ ಬಂದು ಮಡಿಕೇರಿಯಲ್ಲಿ ನೆಲೆಸಿದ ಭೀಮಸಿಂಗ್ರವರು ಬಾಣಿಮೊಟ್ಟೆಯ(ಮೊಟ್ಟೆ ಎಂಬುದು ಸ್ಥಳದ ಹೆಸರು. ಅಂಚೆಪಾಳ್ಯ, ಕೊಟ್ಟಿಗೆ ಪಾಳ್ಯಮೂಡುಬಿದ್ರೆ, ಪಡುಬಿದ್ರೆ, ಮೂಡಿಗೆರೆ, ಪಡುಗೆರೆ, ಪಡುವಲಹಿಪ್ಪೆ, ಮೂಡಲಹಿಪ್ಪೆ ಎಂಬ ಸ್ಥಳಗಳ ಹೆಸರಿರುವಂತೆ) ರಘುರಾಮ ಮಂಟಪವನ್ನು ಸೇರ್ಪಡೆ ಮಾಡಿದರು. ೧೯೬೯ರಲ್ಲಿ ಅಂದಿನ ಪುರಸಭೆಯ ಅಧ್ಯಕ್ಷರು ಕೆ.ಎಸ್ ಅಪ್ಪಚ್ಚು ರಂಜನ್ರವರು ದಸರ ಮೆರವಣಿಗೆಗೆ ಹೊಸ ಕಾಯಕಲ್ಪ ಕೊಟ್ಟರು ಎಂದರೆ ತಪ್ಪಿಲ್ಲ. ಈಗ ಪೇಟೆ ಶ್ರೀರಾಮಮಂದಿರ, ಕೋಟೆ ಮಾರಿಯಮ್ಮ, ಕಂಚಿಕಾಮಾಕ್ಷಿ, ಶ್ರೀ ಕುಂದೂರು ಮೊಟ್ಟೆ, ದಂಡಿನ ಮಾರಿಯಮ್ಮ, ಕೋದಂಡರಾಮ, ಶ್ರೀ ಚೌಡೇಶ್ವರಿ, ಶ್ರೀ ದೇಚೂರು ರಾಮಮಂದಿರ, ಕರವಲ ಬಾಡಗ ಗಣಪತಿ, ಶ್ರೀ ಕೋಟೆ ಗಣಪತಿ ಮುಂತಾದ ದೇವಾಲಯಗಳ ಮಂಟಪಗಳು ಶೋಭಾ ಯಾತ್ರೆಯಲ್ಲಿ ಭಾಗವಹಿಸುತ್ತವೆ. ಸರಕಾರದ ಅನುದಾನ, ಸಾರ್ವಜನಿಕರ ಕೊಡುಗೆ, ಖಾಸಗಿಯವರ ಸಹಭಾಗಿತ್ವದೊಂದಿಗೆ ಮಡಿಕೇರಿ ದಸರ ನಡೆದುಕೊಂಡು ಬಂದಿದ್ದು ಜಗತ್ವಿಖ್ಯಾತವಾಗಿದೆ ಎಂದರೆ ತಪ್ಪಿಲ್ಲ.
ಲಕ್ಷಾಂತರ ರೂಗಳ ವೆಚ್ಚದಲ್ಲಿ ಪ್ಯಾರಸ್ ಆಫ್ ಪ್ಲಾಸ್ಟರಿನಿಂದ ಮಾಡಿದ ಕಲಾಕೃತಿಗಳನ್ನು ಯಾವುದಾದರೊಂದು ಪೌರಾಣಿಕ ಸನ್ನಿವೇಶಗಳನ್ನಿರಿಸಿಕೊಂಡು ವಿನ್ಯಾಸ ಮಾಡಿರುತ್ತಾರೆ. ಬಟ್ಟೆಗಳು , ಆಭರಣಗಳು ನೈಜವಾಗಿರುತ್ತವೆ. ಕಲಾಕೃತಿಗಳಿಗೆ ಚಲನೆ ಇರುವಂತೆ, ರಾಕ್ಷಸರ ಬಾಯಿಂದ ಬೆಂಕಿಯೇ ಬಂದಂತೆ, ದೇವಿಯ ತ್ರಿಶೂಲ ಮಿಂಚನ್ನು ಹೊಮ್ಮಿಸುವಂತೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿರುತ್ತಾರೆ. ಸಂದರ್ಭಕ್ಕೆ ತಕ್ಕ ಲೆಸರ್ ಶೋಗಳೂ, ಎಲ್ ಇಡಿ, ಬಲ್ಬ್ಗಳ ಅಲಂಕಾರ ಅದರಲ್ಲಿನ ವಿನ್ಯಾಸಗಳು ಕಂಪ್ಯೂಟರಿನಿಂದ ನಿಯಂತ್ರಣವಾಗುತ್ತಿರುತ್ತವೆ .ಇವುಗಳ ಜೊತೆಗೆ ಪಡ್ಡೆಹುಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ಡಿಜೆಯೂ ಇರುತ್ತದೆ.
ಮಡಿಕೇರಿ ದಸರಾ ರಾತ್ರಿ ನಡೆಯುವ ಕಾರಣ ಹೆಚ್ಚು ಜನಾಕರ್ಷಣೆ ಪಡೆದುಕೊಂಡಿದೆ. ಸೀಮೆ ಎಣ್ಣೆ ಬುಡ್ಡಿ ಬೆಳಕಲ್ಲಿ, ಪೆಟ್ರೊಮ್ಯಾಕ್ಸ್ ಬೆಳಕಲ್ಲಿ ತನ್ನ ಬೆಳಕ ಪ್ರಯಾಣ ಮುಂದುವರೆಸಿಕೊಂಡು ಬಂದ ಹಬ್ಬ ದಸರಾ.ಇಡೀ ಮಡಿಕೇರಿ ನಗರವೆ ಬೆಳಕಿನಲ್ಲಿ ಅಭಿಶಿಕ್ತವಾಗಿದೆಯೇನೋ ಅನ್ನುವ ಭಾವ ವಿದ್ಯುತ್ ದೀಪಾಲಂಕಾರಗಳಿಂದ ಆಗುತ್ತದೆ. ಅದು ಖಾಸಗಿ ಇರಲಿ, ಸರಕಾರಿ ಇರಲಿ, ಹಿಂದೂಗಳ ಕಟ್ಟಡವಿರಲಿ, ಮುಸಲ್ಮಾನರ ಕಟ್ಟಡವಿರಲಿ, ಭೇಧವಿರುವುದಿಲ್ಲ ಎಲ್ಲರೂ ಭಾಗಿಯಾಗುವ ಉತ್ಸವ ಇದು. ಪಟ್ಟಣದ ಮೂರು ಕಡೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಯಾಗುತ್ತವೆ.
ಲೈವ್ ಆಗಿ ನೋಡಲಾಗದಿದ್ದರೆ ಮನೆಯಲ್ಲಿಯೇ ಕುಳಿತು ಟಿವಿಯಲ್ಲೇ ಲೈವ್ ನೋಡಬಹುದು.
ಕಾಲ ಎಲ್ಲವನ್ನು ಹೇಗೆ ಬದಲಿಸಿ ಬಿಡುತ್ತದೆ ಅಲ್ವೆ! ಈ ವರ್ಷ ಕೊರೊನಾ ಕೊರೊನಾ ಕಾರಣದಿಂದ ವೈಭವದ ದಸರಾ ರದ್ದಾಗಿದೆ. ದಸರಾ ದಿನ ಲಕ್ಷಾಂತರ ಜನರು ಮಡಿಕೇರಿಗೆ ಬರುತ್ತಿದ್ದರು. ಬೆಳಗು ಬೈಗು ಆ ಸಂತೋಷದಲ್ಲಿ ಮಿಂದೇಳುತ್ತಿದ್ದರು ಪಡ್ಡೆ ಹುಡುಗರಂತೂ ಡಿಜೆ ಸದ್ದಿಗೆ ರಾತ್ರಿಯಿಡಿ ಕುಣಿದು ಕುಪ್ಪಳಿಸುತ್ತಿದ್ದರು. ಎರಡನೆ ಮಹಾಯುದ್ಧದ ಸಂದರ್ಭದಲ್ಲಿಯೂ ರದ್ದಾಗದ ದಸರಾ , ೧೯೬೨ ರ ಭಾರತ ಚೀನಾ ಯುದ್ಧವಾದಾಗಲೂ ರದ್ದಾಗದ ದಸರ ಈ ಬಾರಿ ರದ್ದಾಗಿದೆ. ಆದರೆ ಕರಗಗಳ ಮೆರವಣಿಗೆ ಮಾತ್ರವಿದೆ. ಆದರೂ ಕಣ್ಣಿಗೆ ಕಾಣದ ಅಗೋಚರ ವೈರಸ್ ಇಡೀ ದಸರ ಶೋಭಾಯಾತ್ರೆಯನ್ನು ನಿಲ್ಲಿಸಿದೆಯಲ್ಲಾ ಅನ್ನೋದೆ ಬೇಸರದ ಸಂಗತಿ.ಈ ಬಾರಿ ಸಂಭ್ರಮವಿಲ್ಲದ, ಜನಜಂಗುಳಿಯಿಲ್ಲದ, ಆಟಿಕೆಗಳ ಸದ್ದಿಲ್ಲದ, ಹೆಣ್ಮಕ್ಕಳ ಶಾಪಿಂಗ್ ಗೆ ಅವಕಾಶವಿಲ್ಲದ ಮಡಿಕೇರಿಯನ್ನು, ದಸರಾ ದಿನವನ್ನು ಊಹಿಸಿಕೊಳ್ಳುವುದು ಕಷ್ಟವಾಗಿದೆ. ಛೇ….ಹೀಗಾಗಬಾರದಿತ್ತು ಅಲ್ವ!
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..