ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎನ್.ಎಸ್.ಶ್ರೀಧರ ಮೂರ್ತಿ
ಇತ್ತೀಚಿನ ಬರಹಗಳು: ಎನ್.ಎಸ್.ಶ್ರೀಧರ ಮೂರ್ತಿ (ಎಲ್ಲವನ್ನು ಓದಿ)

ಇವತ್ತು ಕನ್ನಡದ ಬಹಳ ಮುಖ್ಯ ಬರಹಗಾರ ಚಿಂತಕ ಶಂಕರ್ ಮೊಕಾಶಿ ಪುಣೇಕರ ಅವರ ೯೩ನೇ ಜನ್ಮದಿನ (ಜನನ: ೮ ಮೇ ೧೯೨೮). ನಾನು ಆಗಾಗ ಪುಣೇಕರ ಅವರನ್ನು ಓದುತ್ತಾ ಬಂದಿದ್ದ​ರೂ ಈ ಕರೋನಾದ ಕರಾಳ ದಿನಗಳಲ್ಲಿ ಮತ್ತೆ ಮತ್ತೆ ಅಪ್ಪಳಿಸುತ್ತಿರುವ ಸಾವು ನೋವಿನ ಸುದ್ದಿಗಳನ್ನು ಮನಸ್ಸನ್ನು ಬೇರೆ ಕಡೆ ತಿರುಗಿಸಿಕೊಳ್ಳುವ ಸಲುವಾಗಿ ಶಂಕರ ಮೊಕಾಶಿ ಪುಣೇಕರ​ ಅವರ ಸಮಗ್ರ ಸಾಹಿತ್ಯವನ್ನು ಓದಲು ಆರಂಭಿಸಿದೆ. ಇದಕ್ಕೆ ಪ್ರೇರಣೆ ನೀಡಿದವರು ನನ್ನ ಹಿರಿಯ ಮಿತ್ರರಾದ ಶ್ರೀನಿವಾಸ ದೇಸಾಯಿ ಅವರು. ಪುಣೇಕರ​ರು ‘ಶ್ರೀ ರಾಮಾಯಣ ದರ್ಶನಂ’ ಅನ್ನು ಇಂಗ್ಲೀಷ್‍ಗೆ ಅನುವಾದ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಅವರಿಂದ ಈ ಮಾಹಿತಿ ಮತ್ತು ಪುಸ್ತಕ ಎರಡೂ ದೊರೆತವು. ನಾನು ಓದಲು ಆರಂಭಿಸಿದಾಗ ನಿಜಕ್ಕೂ ಅಚ್ಚರಿಗೊಂಡೆ. ನಮ್ಮದಲ್ಲದ ಭಾಷೆಯಲ್ಲಿ ಅವರು ಭಾವ ಸೂಕ್ಷ್ಮಗಳನ್ನು ತಂದಿರುವ ಕ್ರಮ ನಿಜಕ್ಕೂ ಅವರಿಗೆ ಇರುವ ಅಪಾರ ವಿದ್ವತ್‍ನ ನಿದರ್ಶನ ಎನ್ನಿಸಿತು. ಈ ಮೂಲಕವೇ ಅವರ ಎಲ್ಲಾ ಕೃತಿಗಳನ್ನೂ ಇನ್ನೊಮ್ಮೆ ಓದಬೇಕು ಎನ್ನುವ ಪ್ರೇರಣೆಯೂ ಆಯಿತು.

ಚಿತ್ರ ಕೃಪೆ : ಶ್ರೀ ಎನ್ ಎಸ್ ಶ್ರೀಧರ ಮೂರ್ತಿ

ಪುಣೇಕರರ ಹೆಸರನ್ನು ನಾನು ಮೊದಲು ಕೇಳಿದ್ದು ೧೯೮೧ರಲ್ಲಿ ‘ಸುಧಾ’ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ‘ನಟ​ ನಾರಾಯಣಿ’ ಮೂಲಕ ಈ ಕಾದಂಬರಿ ಆ ವಯಸ್ಸಿನಲ್ಲಿ ಏನೂ ಅರ್ಥವಾಗಿರಲಿಲ್ಲ. ಇದರ ನಂತರ ‘ಅವಧೇಶ್ವರಿ’ ಓದಿದೆ. ‘ಗಂಗವ್ವ ಗಂಗಾಮಯಿ’ ಕಾದಂಬರಿಯನ್ನು ಅವರ ಮಗ ವಸಂತ ಮೊಕಾಶಿ ಪುಣೇಕರ ಅವರ ಸಿನಿಮಾ ನೋಡಿದ ನಂತರ ಓದಿದೆ. ಅವರ ಮೂರೂ ಕಾದಂಬರಿಗಳನ್ನು ನಂತರದ ದಿನಗಳಲ್ಲಿ ಮತ್ತೆ ಮತ್ತೆ ಓದುತ್ತಾ ಬಂದಿದ್ದೇನೆ. ಕಾದಂಬರಿಯ ರೂಢಿಗತ ಪರಿಕಲ್ಪನೆಯನ್ನು ಮುರಿದ ಪುಣೇಕರರು ಅದರ ವೈಚಾರಿಕ ಹಂದರದ ಮೂಲಕವೇ ಸೃಜನಶೀಲ ಸಾಧ್ಯತೆಗಳನ್ನು ಹುಡುಕಿರುವುದು ನನಗೆ ವಿಶಿಷ್ಟ ಎನ್ನಿಸಿತು. ಅವರ ಇಂಗ್ಲೀಷ್‍ನ ‘ಅವಧೂತ ಗೀತ’ಕ್ಕೆ ಬರೆದ ೭೩ ಪುಟಗಳ ವಿದ್ವತ್ಪೂರ್ಣ ಮುನ್ನುಡಿ ಓದಿದ ನಂತರ ‘ನಟ​ ನಾರಾಯಣಿ’ ಹೊಸ ನೆಲೆಯಲ್ಲಿ ಗೋಚರಿಸಿತು. ಇದು ಒಂದು ನೆಲೆಯಲ್ಲಿ ಭಕ್ತಿ ವೇದಾಂತವನ್ನು ಚರ್ಚಿಸಿದರೆ ಇನ್ನೊಂದು ನೆಲೆಯಲ್ಲಿ ಅಸ್ವಿತ್ವವಾದವನ್ನು ಚರ್ಚಿಸುತ್ತದೆ. ಇದರ ನಡುವೆ ರೂಪುಗೊಂಡಿರುವ ಅನೇಕ ಸಾಧ್ಯತೆಗಳನ್ನು ಕೂಡ ಗಮನಿಸಬಹುದು. ‘ಅವಧೇಶ್ವರಿ’ಯನ್ನು ಶಂಕರ ಮೊಕಾಶಿ ಪುಣೇಕರರು ವೇದಕಾಲೀನ ರಾಜಕೀಯ ಕಾದಂಬರಿ ಎಂದು ಕರೆದಿದ್ದಾರೆ. ಇದರ ಹಿಂದೆ ಸಂಶೋಧನೆಯ ನೆಲೆಗಳು ಇದ್ದರೂ ಸಮಕಾಲೀನ ಹೊರ ಚಾಚುಗಳೂ ಇವೆ. ಇದನ್ನು ಮಾನವ ಸಂಬಂಧಗಳ ನಿರಂತರ ಶೋಧದ ಕತೆಯನ್ನಾಗಿ ಕೂಡ ಓದಬಹುದಾಗಿದೆ. ‘ಗಂಗವ್ವ ಗಂಗಾಮಯಿ’ ಇವೆರಡಕ್ಕಿಂತಲೂ ಭಿನ್ನವಾದ ಕೃತಿ ದೇಸಿ ನೆಲೆಯಲ್ಲಿಯೂ ಸಾಗಿ ಬಹುಮುಖಿ ಸಾಧ್ಯತೆಯನ್ನು ಪಡೆಯುವ ಪ್ರಯೋಗ ಇದೆ. ಮೂರೂ ಕಾದಂಬರಿಗಳೂ ಒಂದಕ್ಕಿಂತಲೂ ಇನ್ನೊಂದು ಭಿನ್ನ. ಒಟ್ಟಾಗಿ ಪುಣೇಕರರು ಚಿಂತನಶೀಲತೆಗೆ ಸೃಜನಶೀಲತೆಯ ಅಯಾಮವನ್ನು ಹೇಗೆ ತೊಡಿಸ ಬಹುದು ಎಂದು ಪ್ರಯತ್ನಿಸಿ ಬಹುಮಟ್ಟಿಗೆ ಅದರಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ. ಇನ್ನು ಪುಣೇಕರರು ತಂದಿರುವುದು ಒಂದೇ ಕಥಾ ಸಂಕಲನ. ಅದರಲ್ಲಿ ಇರುವುದೂ ಎಂಟು ಕಥೆಗಳು. ‘ಬಿಲಾಸ ಖಾನ’ ಎನ್ನುವ ತಾನಸೇನನ ಕುರಿತ ಒಂದು ಕಥೆ ಬಿಟ್ಟರೆ ಉಳಿದವೆಲ್ಲವೂ ಸಾಮಾಜಿಕ ನೆಲೆಯ ಕಥೆಗಳು. ಕುತೂಹಲದ ಸಂಗತಿ ಎಂದರೆ ಯಾವ ಕಥೆಯ​ಲ್ಲಿಯೂ ಕಾದಂಬರಿಯಲ್ಲಿ ತಂದಂತೆ ವೈಚಾರಿಕ ನೆಲೆಯನ್ನು ಅವರು ತರಲು ಹೋಗಿಲ್ಲ. ಅವರ ಎರಡು ಕವನ ಸಂಕಲನಗಳಲ್ಲಿ ಸುಮಾರು ಐವತ್ತು ಕವಿತೆಗಳಿವೆ. ನವ್ಯರಿಗಿಂತ ಭಿನ್ನವಾಗಿ ಬರೆಯಲು ಪ್ರಯತ್ನಿಸಿದ ಪುಣೇಕರರು ಕಾವ್ಯದ ಮಟ್ಟಿಗೆ ಹಲವು ಹೊಸ ಸಾಧ್ಯತೆಗಳನ್ನು ಅವಿಷ್ಕರಿಸಿದ್ದಾರೆ ಎನ್ನಬಹುದು.

ಇಂಗ್ಲೀಷಿನಲ್ಲಿ ಪುಣೇಕರರು ದಿ ಕ್ಯಾಪ್ಟಿವ್ (೧೯೬೫), ದಿ ಪ್ರಿಟೆಂಡರ್ (೧೯೬೮), ಟೆಂಟ್ ಪೋಲ್(೧೯೮೭), ಪ್ಯಾರಡೈಮ್ಸ್(೧೯೮೯) ಹೀಗೆ ನಾಲ್ಕು ಕವನ ಸಂಕಲನಗಳನ್ನು ತಂದಿದ್ದಾರೆ. ಕನ್ನಡಕ್ಕಿಂತಲೂ ಅವರ ಇಂಗ್ಲೀಷ್ ಕವಿತೆಗಳು ಲವವಿಕೆಯಿಂದ ಕೂಡಿರುವುದರ ಜೊತೆಗೆ ವಿಭಿನ್ನ ನೆಲೆಗಳನ್ನು ಹೊಂದಿವೆ. ಅವರ ಏಕೈಕ ನಾಟಕ ‘ಶ್ರೀಸಂಗೀತ ವಿಪರ್ಯಾಸ ವಿನೋದ’ವೆಂಬ ನಾಟಕವು. ಸಂಗೀತವನ್ನು ನೆಲೆ ಆಗಿರಿಸಿದರೂ ಹಾಸ್ಯದ ಹೂರಣದಲ್ಲಿ ಬೆಳೆಯುವ ಕಥೆಯನ್ನು ಹೊಂದಿದೆ. ಇಂಗ್ಲೀಷ್ ಕೃತಿಗಳಲ್ಲಿ ಡಬ್ಲ್ಯೂ. ಬಿ. ಯೇಟ್ಸ್ ಕುರಿತೇ ಎರಡು ಕೃತಿಗಳಿವೆ. ‘ನಟ ನಾರಾಯಣಿ’ಯನ್ನು ಅವರೇ ‘ನಾನಾಸ್ ಕನ್‍ಫೆಷನ್’ ಎಂದು ಇಂಗ್ಲೀಷ್‍ಗೆ ಅನುವಾದಿಸಿದ್ದಾರೆ. ಇದು ಕನ್ನಡದಷ್ಟೇ ಇಂಗ್ಲೀಷಿನಲ್ಲಿ ಕೂಡ ಲವಲವಿಕೆಯಿಂದ ಓದಿಸಿ ಕೊಳ್ಳಬಲ್ಲ ಕೃತಿ. ‘ಚಾಮಸ್ಕಿ-ಸ್ಕಿನ್ನರ್ ಎಕ್ಸ್ಪೆರಿಮೆಂಟಲ್ ಮೆಥೆಡ್ ಇನ್ ಲಾಂಗ್ವೇಜ್ ಟೀಚಿಂಗ್’ ಇಬ್ಬರು ಭಾಷಾ ತಜ್ಞರ ಸಿದ್ದಾಂತಗಳನ್ನು ಸಮನ್ವಯಗೊಳಿಸಿ ಶಿಕ್ಷಣ ಹೇಗಿರಬೇಕು ಎಂದು ಚಿಂತಿಸುವ ಮಹತ್ವದ ಕೃತಿ. ಕಾಳಿದಾಸನ ಋತು ಸಂಹಾರವನ್ನು ‘ದಿ ಸೈಕಲ್ ಆಫ್ ಸೀಸನ್ಸ್’ ಎಂದು ಬಹಳ ಸುಂದರವಾಗಿ ಅವರು ಅನುವಾದಿಸಿದ್ದಾರೆ. ಅವರ ಪಾಂಡಿತ್ಯ ಮತ್ತು ಸೃಜನಶೀಲತೆ ಎರಡೂ ಸೇರಿದಂತೆ ಮೂಡಿ ಬಂದಿರುವ ಕೃತಿ ಇದು. ವಿ.ಕೃ.ಗೋಕಾಕ್ ಮತ್ತು ಬಿ.ಪುಟ್ಟಸ್ವಾಮಯ್ಯ ಅವರ ಜೀವನ ಸಾಹಿತ್ಯವನ್ನು ಇಂಗ್ಲೀಷ್‍ನಲ್ಲಿ ಪರಿಚಯಿಸುವ ಕೃತಿಗಳನ್ನು ಪುಣೇಕರ ಅವರು ರಚಿಸಿದ್ದಾರೆ. ಕುವೆಂಪು ಅವರ ಕುರಿತು ರಚಿಸಿರುವ ‘ಹೋಮಿಂಗ್ ಬರ್ಡ್’ (೧೯೭೭) ನನಗೆ ಬಹಳ ಇಷ್ಟವಾದ ಕೃತಿ. ಒಂದು ರೀತಿಯಲ್ಲಿ ಇದು ಕುವೆಂಪು ಅವರ ಸಾಂಸ್ಕೃತಿಕ​ ವಿಮರ್ಶೆ ಕೂಡ ಹೌದು. ಇನ್ನು ಉಳಿದವು ಸಂಶೋಧನಾ ಕೃತಿಗಳು. ‘ಮೆಹಂಜೊದಾರ್ ಸೀಲ್ಸ್(೧೯೮೪) ಇತಿಹಾಸವನ್ನು ಅಧ್ಯಯನ ಮಾಡುವವರಿಗೆ ಉತ್ತಮ ಆಕರ ಗ್ರಂಥವಾಗಬಲ್ಲಂತಹದು.

ಚಿತ್ರ ಕೃಪೆ : ಶ್ರೀ ಎನ್ ಎಸ್ ಶ್ರೀಧರ ಮೂರ್ತಿ

ಜಾಗತಿಕ ಸಾಹಿತ್ಯವನ್ನು ಕನ್ನಡಿಗರಿಗೆ ಪರಿಚಯ ಮಾಡಿ ಕೊಟ್ಟ ಮಹನೀಯರಲ್ಲಿ ಪುಣೇಕರರು ಮುಖ್ಯವಾದವರು. ತೌಲನಿಕವಾಗಿ ಅವರು ಪಾಶ್ವಾತ್ಯ ಮಹಾಕಾವ್ಯಗಳನ್ನು ಅಧ್ಯಯನ ಮಾಡಿದ್ದಾರೆ. ವ್ಹರ್ಜಿಲ್‍ನ ‘ಏನಿಯಡ್’ ಡಾಂಟೆಯ ‘ಡಿವೈನ್ ಕಾಮಿಡಿ’ ಮತ್ತು ಮಿಲ್ಟನ್‍ನ ‘ಪ್ಯಾರಾಡೈಸ್ ಲಾಸ್ಟ್’ ಮಹಾಕಾವ್ಯಗಳನ್ನು ಅಧ್ಯಯನ ಮಾಡಿದ್ದಾರೆ. ಅಮೆರಿಕನ್ ಮತ್ತು ಯೂರೋಪಿಯನ್ ಸಾಹಿತ್ಯದ ವಿಸ್ತೃತ​ ಪರಿಚಯವನ್ನೂ ಕನ್ನಡದಲ್ಲಿ ಮಾಡಿ ಕೊಟ್ಟಿದ್ದಾರೆ. ಕನ್ನಡದಲ್ಲಿ ಎಲ್.ಎಸ್.ಶೇಷಗಿರಿ ರಾವ್, ವಿ.ಎಂ.ಇನಾಂದಾರ್ ಮಾಡಿರುವ ಪಾಶ್ಯಾತ್ಯ ಸಾಹಿತ್ಯದ ಪರಿಚಯದ ಕೃತಿಗಳನ್ನು ನಾನು ಓದಿದ್ದೇನೆ. ಇವರಿಬ್ಬರಿಗೆ ಹೋಲಿಸಿದರೆ ಪುಣೇಕರರು ಭಿನ್ನವಾಗುವುದು ತಮ್ಮ ಪ್ರತಿಪಾದನೆಯ ನೆಲೆಯಲ್ಲಿ, ಅವರಿಗೆ ಪರಿಚಯ ಮಾಡಿ ಕೊಡುವುದರಷ್ಟೇ ಚರ್ಚೆ ಹುಟ್ಟು ಹಾಕುವುದೂ ಕೂಡ ಮುಖ್ಯ. ಅದನ್ನು ಸಾಂಸ್ಕೃತಿಕ​ ನೆಲಗಟ್ಟಿನಲ್ಲಿ ಇರಿಸುವುದು ಮುಖ್ಯ. ನನ್ನ ಅಲ್ಪ ಗ್ರಹಿಕೆಗೆ ದಕ್ಕಿದಂತೆ ಕನ್ನಡ ಸಾಹಿತ್ಯ ಪರಂಪರೆಯನ್ನು ವಿಶ್ವ ಸಾಹಿತ್ಯಕ್ಕೆ ಮುಖಾಮುಖಿಯಾಗಸಿದ ಮೊದಲಿಗರು ಪುಣೇಕರರು ಎನ್ನಬಹುದೇನೋ! ಉದಾಹಣೆಗೆ ಅವರು ಹೇಳುತ್ತಾರೆ ಕುವೆಂಪು ಅವರನ್ನು ಮೊದಲು ವ್ಹರ್ಜಿಲ್, ಡಾಂಟೆ, ಮಿಲ್ಟನ್, ಅರವಿಂದ ಮೊದಲಾದ ಮಹಾಕಾವ್ಯ ಪರಂಪರೆಯಲ್ಲಿ ಇಟ್ಟು ನೋಡಬೇಕು. ಬೇಂದ್ರೆಯವರನ್ನು ವಡ್ಸವರ್ತ್, ಶೆಲ್ಲಿ, ಕೀಟ್ಸ್ ಇಂತಹ ಲಿರಿಕ್ ಪರಂಪರೆಯಲ್ಲಿ ಇಟ್ಟು ನೋಡಬೇಕು. ನಂತರ ಕುವೆಂಪು ಮತ್ತು ಬೇಂದ್ರೆಯವರನ್ನು ಹೋಲಿಸಬೇಕು. ಈ ಕಲ್ಪನೆಯೇ ಎಷ್ಟು ಸುಂದರವಾಗಿದೆ.

ಚಿತ್ರ ಕೃಪೆ : ಶ್ರೀ ಎನ್ ಎಸ್ ಶ್ರೀಧರ ಮೂರ್ತಿ

ಶಂಕರ ಮೊಕಾಶಿ ಪುಣೇಕರರು ನನಗೆ ಬಹಳ ಮುಖ್ಯ ಎನ್ನಿಸುವುದು ವಿಮರ್ಶಕರಾಗಿ. ಬೇಂದ್ರೆ ಮತ್ತು ಗೋಕಾಕರ ಕುರಿತು ಅವರು ವ್ಯಾಪಕವಾಗಿ ಬರೆದಿದ್ದಾರೆ. ಅವರ ‘ಬೇಂದ್ರೆ ಕಾವ್ಯ ಮೀಮಾಂಸೆ (೧೯೬೨) ಅಂತೂ ಸಾಂಸ್ಕೃತಿಕ ವಿಮರ್ಶೆಗೆ ಮಾದರಿ ಎನ್ನುವಂತಿದೆ. ಪುಣೇಕರರ ಬಹಳ ದೊಡ್ಡ ಸಾಧನೆ ಎಂದರೆ ಬೇಂದ್ರೆಯವರ ಕಾವ್ಯದ ವಸ್ತುವಿನ ಸಾಂದರ್ಭಿಕತೆಯನ್ನು ನಿರಾಕರಿಸಿ ಅದರ ಅಗಾಧತೆಯನ್ನು ತೋರಿಸಿ ಕೊಟ್ಟಿದ್ದು. ಇನ್ನೊಂದು ಅವರ ಕಾವ್ಯ ಛಂದಸ್ಸಿನಲ್ಲಿ ಬರೀ ಕನ್ನಡ ಮಾತ್ರವಲ್ಲದೆ ಇಂಗ್ಲೀಷ್, ಮರಾಠಿ, ಸಂಸ್ಕೃತದ​ ಲಯಗಾರಿಕೆ ಇದೆ ಎಂದು ತೋರಿಸಿ ಕೊಟ್ಟಿದ್ದು. ಬೇಂದ್ರೆ ಕವಿತೆಗಳಲ್ಲಿನ ನಾದದ ಸ್ವರೂಪದಲ್ಲಿ ಅವಧೂತ ಪರಂಪರೆಯನ್ನೇ ಕಾಣುವವರಿಗೆ ಅದರಲ್ಲಿ ಶ್ರುತಿಯ ನೆಲೆ ಕೂಡ ಇದೆ ಎಂದು ತೋರಿಸಿ ಕೊಟ್ಟವರು ಪುಣೇಕರರು. ಬೇಂದ್ರೆಯವರಂತೆ ಕುವೆಂಪು ಕೂಡ ಅವರಿಗೆ ಪ್ರಿಯರಾದ ಕವಿ. ಕುವೆಂಪು ಅವರಲ್ಲಿ ಇಂಗ್ಲೀಷ್ ರೋಮ್ಯಾಟಿಸಂ ಮತ್ತು ಭಾರತೀಯ ಭಕ್ತಿ ವೇದಾಂತ ಜೊತೆಗೂಡಿ ಮಾನವೀಕರಣಗೊಳ್ಳುವುದನ್ನು ಪುಣೇಕರರು ಗುರುತಿಸಿದ್ದಾರೆ ಅದರಂತೆ ಸ್ತ್ರೀ ಸೌಂದರ್ಯ ಅವರಲ್ಲಿ ನೇರ ಅಭಿವ್ಯಕ್ತಿಗೊಂಡಿಲ್ಲದ ಕೊರತೆಯನ್ನೂ ಗುರುತಿಸಿದ್ದಾರೆ. ಪುಣೇಕರರು ವಿ.ಕೃ.ಗೋಕಾಕರ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. ‘ಭಾರತ ಸಿಂಧು ರಶ್ಮಿ’ಯನ್ನು ಭೂಗೋಲದ ಸಾಂಸ್ಕೃತಿಕ ಪರಿವರ್ತನೆಯಾಗಿ ನೋಡುವ ಅವರ ಒಳನೋಟ ಕೂಡ ಕುತೂಹಲಕರವಾಗಿದೆ. ಗೋಕಾಕರ ಇಂಗ್ಲೀಷ್ ಕವಿತೆಗಳನ್ನು ಕೂಡ ಆಳವಾದ ವಿಮರ್ಶೆಗೆ ಒಳಪಡಿಸಿದ್ದಾರೆ. ಬಿ.ಪುಟ್ಟಸ್ವಾಮಯ್ಯ, ಅವರು ವ್ಯಾಪಕವಾಗಿ ಅಧ್ಯಯನ ಮಾಡಿ ಇನ್ನೊಬ್ಬ ಬರಹಗಾರ. ಅವರನ್ನು ಜಾಗತಿಕ ಸಾಹಿತ್ಯದ ಹಿನ್ನೆಲೆಯಲ್ಲಿ ಇರಿಸಿ ಓದಿರುವ ಕ್ರಮ ಕೂಡ ಕುತೂಹಲಕರವಾಗಿದೆ. ಈ ನಾಲ್ವರ ಕುರಿತು ವ್ಯಾಪಕವಾಗಿ ಬರೆದಿದ್ದರೂ ಪುಣೇಕರರು ಆರಾಧನೆಯ ಸಮಸ್ಯೆಗೆ ಸಿಲುಕಿಲ್ಲ. ನಾಲ್ವರ ಕುರಿತೂ ಸಾಕಷ್ಟು ಮುಖ್ಯವಾದ ಪ್ರಶ್ನೆಗಳನ್ನೂ ಎತ್ತಿದ್ದಾರೆ. ಅವರು ಭಿನ್ನವಾಗಿ ಕಾಣುವುದೇ ಆ ನೆಲೆಯಲ್ಲಿ ಎನ್ನಬಹುದು.
ಕನ್ನಡದ ಹಲವು ಪ್ರಮುಖ ಲೇಖಕರ ಕುರಿತು ಪುಣೆಕರರು ಬರೆದಿದ್ದಾರೆ. ‘ಕಾರಂತರ ಕಾದಂಬರಿಗಳಲ್ಲಿ ಕನಸುಗಾರಿಕೆ’ ಒಂದು ಕುತೂಹಲಕರ ಲೇಖನ. ಇದರಲ್ಲಿ ಸಂಕೇತಿಕೆ ಎಷ್ಟು? ವಾಸ್ತವಿಕ ನೆಲೆ ಎಷ್ಟು ? ಎಂದು ತೂಗಿ ನೋಡಿ ವಾಸ್ತವ ಆದರ್ಶವಾದದ ನೆಲೆಯಲ್ಲಿ ಇರಿಸಿರುವುದು ಒಂದು ಹೊಸ ಮಾದರಿಯ ಪ್ರಯತ್ನ. ‘ಮಾಸ್ತಿಯವರ ಸಾಹಿತ್ಯದ ಹಿನ್ನೆಲೆಗಿದ್ದ ಸಾಂಸ್ಕತಿಕ​ ಸಂದರ್ಭಗಳು’ ಇನ್ನೊಂದು ಮಹತ್ವದ ಲೇಖನ. ಮಾಸ್ತಿಯವರ ಜೀವನ ಮತ್ತು ಬರಹಗಳನ್ನು ಒಟ್ಟಾಗಿ ಇರಿಸಿ ನೋಡುವ ಈ ಲೇಖನದಲ್ಲಿ ‘ಮಾಸ್ತಿಯವರ ಜೀವನ ಅನೇಕ ಸಮನ್ವಯಗಳಿಂದ ಕೂಡಿದೆ, compromise ಅವರ ಜೀವನವನ್ನು ಶ್ರೀಮಂತಗೊಳಿಸಿದೆ’ ಎನ್ನುವ ನೆಲೆಯನ್ನು ಪುಣೇಕರರು ಗುರುತಿಸುತ್ತಾರೆ. ಬಹಳ ವ್ಯಾಪಕವಾದ ನೆಲೆಗಳುಳ್ಳ ಈ ಲೇಖನ ಮಾಸ್ತಿಯವರ ಕುರಿತ ನಮ್ಮ ಅಧ್ಯಯನಗಳಿಂದ ತಪ್ಪಿ ಹೋಗಿದ್ದೇ ಕುತೂಹಲಕರ ಸಂಗತಿ. ‘ಗಂಗಾಧರ ಚಿತ್ತಾಲರ ದು:ಖಗೀತೆ ಮತ್ತು ಮಾನವತಾವಾದದ ಕೆಲವು ಮೌಲಿಕ ಸಮಸ್ಯೆಗಳು’ ಪುಣೇಕರರು ಇನ್ನೊಂದು ಮಹತ್ವದ ಲೇಖನ. ಇಡೀ ಕವನವನ್ನು ವಿಶಾಲವಾದ ಚಾರಿತ್ರಿಕ ಭಿತ್ತಿಯಲ್ಲಿ ಅವರು ನಿಲ್ಲಿಸಿರುವ ಕ್ರಮ ಅಧ್ಯಯನ ಯೋಗ್ಯವಾಗಿದೆ.

ವಚನಗಳ ಶಿಲ್ಪ ವಿಧಾನದ ಕುರಿತೂ ಪುಣೇಕರರು ಸಾಕಷ್ಟು ಕುತೂಹಲಕರ ಅಂಶಗಳನ್ನು ಪರಿಶೀಲಿಸಿದ್ದಾರೆ. ಅವರಿಗೆ ಪಾಶುಪತ-ಕಾಳಮುಖ-ಕಾಪಾಲ-ಗೋರಖ ಪಂಥಗಳ ಕುರಿತು ಇರುವ ಅಸಾಧಾರಣ ಓದು ಇಂತಹ ಅಧ್ಯಯನಕ್ಕೆ ಸೂಕ್ತ ವೇದಿಕೆಯನ್ನು ಕಲ್ಪಿಸಿದೆ. ಈ ನೆಲೆಯಲ್ಲಿ ಅವರು ಅನೇಕ ಪ್ರಮುಖ ಪ್ರಶ್ನೆಗಳನ್ನು ಆಹ್ವಾನಿಸಿಕೊಂಡು ಸಮರ್ಥ ಉತ್ತರಗಳನ್ನು ನೀಡಿದ್ದಾರೆ ಭಕ್ತಿ ಮಾರ್ಗದ ನೆಲೆಗಳು, ವಚನದಲ್ಲಿನ ಉಪನಿಷತ್ ಪ್ರಭಾವಗಳು, ಅದು ಕನ್ನಡದಲ್ಲಿಯೇ ಮೂಡಿ ಬರುವುದರ ಅಗತ್ಯತೆಗಳು, ಬಸವಣ್ಣನವರು ಬೆಡಗಿನ ವಚನಗಳನ್ನು ಬರೆಯದೇ ಇರಲು ಕಾರಣಗಳು ಎಲ್ಲವೂ ಕನ್ನಡ ಸಾಹಿತ್ಯದ ಓದಿಗೆ ಅನೇಕ ಧನಾತ್ಮಕ ನೆಲೆಗಳನ್ನು ಸೇರಿಸಿವೆ. ಹರಿದಾಸ ಸಾಹಿತ್ಯದ ಕುರಿತೂ ಅವರು ವ್ಯಾಪಕ ಅಧ್ಯಯನ ನಡೆಸಿದ್ದಾರೆ. ಇಲ್ಲಿ ಅವರಿಗೆ ಸಂಗೀತದ ಕುರಿತು ಇರುವ ಅರಿವು ಸಾಕಷ್ಟು ಒಳನೋಟಗಳನ್ನು ಚೆಲ್ಲಲು ನೆರವಾಗಿದೆ. ಹಾಡಲು ಬರುವ ಕಾವ್ಯದ ಕುರಿತು ಅವರ ಮಾಡಿರುವ ಚರ್ಚೆ ವ್ಯಾಪಕ ಸಾಧ್ಯತೆಯನ್ನು ಹೊಂದಿದ್ದು ಚಿತ್ರಗೀತೆಗಳ ಅಧ್ಯಯನದವರೆಗೂ ತೆರೆದುಕೊಳ್ಳಬಹುದಾಗಿದೆ. ರೂಪ-ನಾದ-ರೂಪಕ ಈ ಚಕ್ರವನ್ನು ಅಧ್ಯಯನ ಮಾಡುತ್ತಾ ಅವರು ಬಳಸುವ ‘ಉಚ್ಛೃಂಖಲ​ ಸಡಿಲು’ ಹೊಚ್ಚ ಹೊಸ ಪರಿಕಲ್ಪನೆಯಾಗಿದೆ.

ಪುಣೇಕರರ ಅಗಾಧ ಸಾಹಿತ್ಯವನ್ನು ಈ ಚಿಕ್ಕ ಲೇಖನದಲ್ಲಿ ಪರಿಚಯಿಸುವುದು ಸಾಧ್ಯವಿಲ್ಲ. ಅದು ನನ್ನ ಉದ್ದೇಶವೂ ಅಲ್ಲ. ಕಳೆದ ಒಂದು ತಿಂಗಳ ಕರೊನಾದ ತಲ್ಲಣಗಳನ್ನು ಅವರ ಸಮಗ್ರ ಸಾಹಿತ್ಯದ ಓದು ಸರಿದೂಗಿಸಿದ ಸಮಾಧಾನವನ್ನಷ್ಟೇ ನಿಮ್ಮ ಜೊತೆ ಹಂಚಿಕೊಳ್ಳುವುದು ನನ್ನ ಉದ್ದೇಶ.