ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಳೆ ಬಂದಿತ್ತು ಪುಟ್ಟೀ!..

"...ಅರ್ಧಂಬರ್ಧ ಕಾಣುವ ಕಿಟಕಿ ಗಾಜುಗಳ ಮೇಲೆ ಮಳೆಹನಿಗಳು ಜಾರುವಾಗಲೆಲ್ಲಾ ನಿನ್ನ ಹಣೆಯ ಮೇಲೆ ಪರೇಡಿಗೆ ಹೊರಡುವವರಂತೆ ಶಿಸ್ತಾಗಿ ಕೂರುವ ಬೆವರ ಹನಿಗಳನ್ನ ಕೆಣಕಬೇಕೆಂದಿದ್ದೇನೆ..." ಎಂದು ಬರೆಯುವ ಶ್ರೀ ತಲಗೇರಿಯವರ ಭಾವ ಲಹರಿಗೆ ಸಿಲುಕಿ ತೇಲುವುದೊಂದೇ ಚಂದ...!
ಶ್ರೀ ತಲಗೇರಿ
ಇತ್ತೀಚಿನ ಬರಹಗಳು: ಶ್ರೀ ತಲಗೇರಿ (ಎಲ್ಲವನ್ನು ಓದಿ)

ದಪ್ಪ ದಪ್ಪ ಗೂನು ಮೋಡಗಳು ಅದೆಷ್ಟೋ ವರ್ಷಗಳ ಭೂಮಿಯ ಗಾಯಕ್ಕೆ ತೇಪೆ ಹಾಕಲು ಉದ್ದುದ್ದ ಸೂಜಿಯ ಹಿಡಿದು ಅನುಮತಿಯಿಲ್ಲದೇ ಸೂರ್ಯ ಮತ್ತು ಚಂದ್ರರ ಗುತ್ತಿಗೆಯ ತೋಟಕ್ಕೆ ನುಗ್ಗಿವೆ… ಹಗಲೆಲ್ಲಾ ಬೆವರಿಳಿಸಿದ ಸೂರ್ಯನಿಗೆ ಬೇರೊಂದು ಭಾಗಕ್ಕೆ ವರ್ಗಾವಣೆ… ಹಲ್ಕಿರಿದ ಹೆಂಟೆ ಹೆಂಟೆ ಮೋಡಗಳ ಕಂಡು ಚಂದ್ರನಿನ್ನೂ ಲಾಗಿನ್ ಆಗದೇ ಅಲ್ಲೇ ಎಲ್ಲೋ ಅವಿತಿದ್ದಾನೆಂಬ ಗುಸುಗುಸು… ಕುಂಕುಮಕ್ಕೆ ಅರಿಶಿಣ ಸುರಿದು ನೀರಲ್ಲಿ ಕಲಸಿ ನಮ್ಮನೆಯ ಪುಟ್ಟಿ ಊರ ತುಂಬಾ ಹರಡಿದ್ದಾಳೆ, ಆಗಾಗ ಪೊರಕೆ ಹಿಡಿದು ಸಾರಿಸುತ್ತಾಳೆ.. ಈ ಕಪ್ಪು ಗೀರುಗಳು ಅವಳದ್ದೇ!.. ಮೊನ್ನೆ ತಾನೇ ಶಾಯಿಪೆನ್ನನ್ನ ಅಚ್ಚುಕಟ್ಟಾಗಿ ತಂದಿಟ್ಟಿದ್ದೆ.. ತಲೆಬುಡ ಕಳಚಿ ನೀಲಿಯನ್ನ ಕೆಲವೊಂದು ಬೀದಿ ತುಂಬ ಎರಚಿಬಂದದ್ದು ನಮ್ಮ ಪುಟ್ಟಿಯಿರಲಿಕ್ಕಿಲ್ಲ.. ಬಹುಶಃ ಪುಟ್ಟಿಯ ಟಾಮಿಯ ಕೆಲಸವೇ ಇರಬೇಕು ಇದು… ಬೆಳ್ಳಕ್ಕಿಗಳ ಮತ್ತು ಹೆಸರು ಗೊತ್ತಿರದ ಒಂದಷ್ಟು ಹಕ್ಕಿಗಳ ಬೊಬ್ಬೆ ಬಿದ್ದಿದೆ… ಕರಿಹಲಗೆಯನ್ನ ಇವತ್ಯಾರೋ ಸಾಬೂನು ಹಾಕಿ ತೊಳೆದಿರಬೇಕು, ಹವಾಮಾನಕ್ಕೆ ದೃಷ್ಟಿಯಾಗದಿರಲೆಂದು ಅದ್ಯಾರೋ ಅದೇ ಕಪ್ಪು ಹಚ್ಚಿರಬೇಕು.. ಚಹಾ ಮಾಡಬೇಕಿತ್ತು ನೀನು.. ಒಂದೇ ಒಂದು ಲೋಟ.. ಮಾಡ್ತೀಯಾ?!

ತೀರ ಹೊಸತೇನಲ್ಲದ ನೈಟಿಯಲ್ಲಿ ನೆಲ ಒರೆಸುತ್ತ , ಕೊಡುವಾಗ ಚೂರು ಕೈ ತಾಗಲಿ ಎಂದೇ ಕೇವಲ ಲೋಟ ಮಾತ್ರ ಹಿಡಿದು ಬರುವ ನಿನ್ನ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಹಂಬಲಕ್ಕೆ ಹರೆಯ ಬಂದಿದೆ.. ಒಂದೆರಡು ಸಲ ಸಭ್ಯತೆಯ ಮೀರಿದರೆ ನಡೆದೀತೇನೇ ಹುಡುಗೀ!.. ಅರ್ಧಂಬರ್ಧ ಕಾಣುವ ಕಿಟಕಿ ಗಾಜುಗಳ ಮೇಲೆ ಮಳೆಹನಿಗಳು ಜಾರುವಾಗಲೆಲ್ಲಾ ನಿನ್ನ ಹಣೆಯ ಮೇಲೆ ಪರೇಡಿಗೆ ಹೊರಡುವವರಂತೆ ಶಿಸ್ತಾಗಿ ಕೂರುವ ಬೆವರ ಹನಿಗಳನ್ನ ಕೆಣಕಬೇಕೆಂದಿದ್ದೇನೆ.. ಎಲ್ಲಿಂದ ಶುರು ಮಾಡಲಿ.. ! ಉಬ್ಬಸದ ತವಕಕ್ಕೆ ತಾರೀಖು ಇಡಲಾರೆ, ತಡಮಾಡದೇ ತಡವರಿಸು ತುಟಿಗಳ ಬಳಿಯಲ್ಲಿ ತಿದ್ದಲೇಬೇಕಾದ ಸಹಿ ಬೇಕಿದೆ.. ಇರು ಇರು ಬಾಗಿಲೊಂದ ಹಾಕಿ ಬರುವೆ, ಪುಟ್ಟಿ ಮಲಗಿದ್ದಾಳೆ… !

ಗ್ರಾಮೀಣ ಬೈತಲೆಯ ಕಾಲ್ದಾರಿಯಲಿ ಹೋದಂತೆಲ್ಲಾ ಅಲ್ಲೊಂದು ಗಂಟಿಗೆ ಸಿಕ್ಕಿಕೊಂಡಿತ್ತು ಅದ್ಯಾವುದೋ ಹಳದಿ ಹೂವು.. ಸಂಪಿಗೆಯಂತೆ ಹೆಸರು, ಬಿಡಿಸಿಬಿಟ್ಟೆ.. ಬೆನ್ನಿನಾ ಬಂಡೆಗೀಗ ಬಳ್ಳಿ ಗೊಂಚಲು.. ಮೂಗಿನ ಮೇಲೊಂದು ಪುಟ್ಟ ಪಲ್ಲಕ್ಕಿ ಉತ್ಸವ ನಡೆಯಬೇಕು, ಐದಾರು ಬೆರಳು ಸೇರಿ ನಿನ್ನೆದೆ ಭಾರ ಹೊರಬೇಕು.. “ತಣಿದೀತು ಚಹಾ ಕುಡಿಯೋ ಬೇಗ” ಎಂದು ಕೂಗಿಕೊಂಡಾಗಲೆಲ್ಲ ನಿನ್ನುಸಿರ ಶೇಖರಿಸಿ ಚಹಾದ ಹಬೆಗೆ ಸುರಿಯಬೇಕು.. ಪರಿಮಳ ಇನ್ನಷ್ಟು ಹೆಚ್ಚುತ್ತದೆ.. ಜುಮುಕಿಯ ಪಕ್ಕದಲ್ಲೇ ಕಿವಿಯ ತುದಿಯಲ್ಲೊಂದು ಪಾಗಾರ ಹಾಕಿಕೊಡು, ದಿನಾ ಅಲ್ಲೇ ಕುಂತು ಚುಡಾಯಿಸುವೆ ನಿನ್ನ ಕೆನ್ನೆಗೆ ತಾಕಲೆಂದೇ ಓಲಾಡುವ ಕುಸುರಿಗಳ.. ಲೋಟದ ಸೊಂಟ ಹಿಡಿದಾಗಲೆಲ್ಲಾ , ಚಹಾ ತುಸುವೇ ಅಲ್ಲಾಡುತ್ತದೆ ಬಿಸಿ ಎಲ್ಲಾ ಕಡೆಗೂ ಹರಡಲಿ ಅಂತ ಇರಬೇಕು ಅಲ್ವಾ !..ಕಿಬ್ಬೊಟ್ಟೆಯಲ್ಲಿ ಒಂದೆರಡು ಬಾರಿ ಕಿರು ದೋಣಿಯಲ್ಲಿ ಹುಟ್ಟುಹಾಕುವ ಹುಚ್ಚು ಸಾಹಸಕ್ಕೆ ಇಳಿದಿದ್ದೇನೆ, ದಿಕ್ಕು ತಪ್ಪಿದ ನಾವಿಕ ವರ್ಷಗಟ್ಟಲೆ ಕಣ್ಮರೆಯಾಗಿದ್ದ ಸುದ್ದಿ ಈಗ ರದ್ದಿಯಾದದ್ದರಲ್ಲಿ ಹೇಳದೇ ಜಾರಿದ ಸೊಂಟದ ಸೀರೆಯ ಕೈವಾಡ ಇದ್ದುದರಲ್ಲಿ ಅನುಮಾನವಿಲ್ಲ… ಸಣ್ಣ ಕಂದುಬಣ್ಣದ ಮಚ್ಚೆ ಅಲ್ಲಿ ಇರಬಾರದಿತ್ತು ನೋಡು ಚೂರು ಬೆನ್ನಿನ ಕೆಳಗೆ.. ಪದೇ ಪದೇ ಹುಬ್ಬು ಹಾರಿಸುವ ಕಣ್ಣುಗಳು ಅಲ್ಲಿಯ ತನಕ‌ ಹೋಗದೇ ಇರುವಂತೆ ಯಾವ ಪ್ರಾಥಮಿಕ ತರಗತಿಯಲ್ಲಿ ಹೇಳಿಕೊಡಲಿ.. !

ಯಾರು ಹೇಳಿದರು ಮಳೆಗೆ ಜ್ವರ ಬರುತ್ತದೆಂದು.. ಮೈಬಿಸಿಯಾಗುತ್ತದಷ್ಟೇ.. ಮಳೆಯಲ್ಲಿ ಮಾತ್ರ ಅಂತೇನಿಲ್ಲ ಅಲ್ವಾ.. ! ಒಂದೆರಡು ಸಲ ಅಂಗಳದಿ ಕೂತು ಮಗ್ಗಿ ಹೇಳೋಣ ಬಾ.. ನಿಧಾನಕ್ಕೆ ಒದ್ದೆಯಾಗುವ ನಿನ್ನನ್ನು ಮುದ್ದೆ ಮುದ್ದೆ ವಸ್ತ್ರದಲ್ಲಿ ನೋಡುವಾಗಲೆಲ್ಲ ಪ್ರಕೃತಿಯ ಕಲೆಗಾರಿಕೆಯನ್ನು ಮೆಚ್ಚುತ್ತೇನೆ ನಾನು.. ಖಾಯಂ ತಲ್ಲಣದ ಪುಳಕವೊಂದು ಎಲ್ಲಾ ನರಗಳಲ್ಲೂ ನೀರಾವರಿ ಶುರುಮಾಡುತ್ತದೆ.. ಈ ಮಳೆಗೆ ಎಲ್ಲಾ ತುಂಬಿ ಹರಿಯುತ್ತವೆ.. ಶ್! ಪುಟ್ಟಿ ಎದ್ದುಬಿಡುತ್ತಾಳೆ, ಸದ್ದಿಲ್ಲದೇ ಸ್ನಾನ ಮುಗಿಸಬೇಕು.. ಏನೂ ನಡೆದೇ ಇಲ್ಲವೆಂಬಂತೆ ನಾನು ಸೋಫಾದ ಮೇಲೆ.. ನೀನು ಇನ್ನೊಂದು ಹಳೇ ನೈಟಿಯಲ್ಲಿ ಆರಾಮ ಕುರ್ಚಿಯ ಮೇಲೆ ಪತ್ರಿಕೆ ಓದುತ್ತಾ , ಕೂತುಬಿಡೋಣ.. ಎದ್ದವಳೇ ಅಮ್ಮಾ ಮಳೆ ಬಂತಾ ಅಂದರೆ ಮತ್ತೆ ನಾಚಬೇಡ.. ಅದೆಷ್ಟು ಸಲ ನಿನ್ನ ನಾಚಿಕೆಗೆ ಲಘು ಅಪಘಾತಗಳಾಗಿಲ್ಲ ಹೇಳು.. ಮಳೆ ಬಂದಿತ್ತು ಪುಟ್ಟೀ ಅನ್ನುತ್ತಾ ಚೂರು ನಿನ್ನ‌ ಕೊರಳ ದವಾಖಾನೆಯಲ್ಲಿ ಕೆಮ್ಮುತ್ತ ಬಿದ್ದಿರುವ ಬೆವರ ಹನಿಗಳನ್ನು ನೇವರಿಸು.. ಕಂಕುಳ ತಿರುವುಗಳನ್ನೆಲ್ಲಾ ಸದ್ಯದಲ್ಲೇ ಅತಿಕ್ರಮಿಸುತ್ತೇನೆ… ಅಲ್ಲೆಲ್ಲಾ ಹೊಸ ಬೇಲಿ ಹಾಕಬೇಕು.. ಋತುಚಕ್ರದಲ್ಲಿ ಹೂ ಬಿಡುವ ಸಮಯ.. ಮಳೆ ಬಂದಿತ್ತು ಪುಟ್ಟೀ…!!