ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಹಾನಗರಿಯಲ್ಲಿ ಒಂದು ದಿನ

ಅನಂತ ಕುಣಿಗಲ್
ಇತ್ತೀಚಿನ ಬರಹಗಳು: ಅನಂತ ಕುಣಿಗಲ್ (ಎಲ್ಲವನ್ನು ಓದಿ)

ಕಣ್ತುಂಬಿಕೊಳ್ಳಲು ಜಗ ಮೆಚ್ಚಿದ
ಸೂರ್ಯನೂ ಸಿಗುವುದಿಲ್ಲ!!
ಉದ್ದ ಉದ್ದದ ಮರಗಳ ಬದಲಿ
ದೊಡ್ಡ ದೊಡ್ಡ ಬಿಲ್ಡಿಂಗುಗಳು ತಲೆ ಎತ್ತಿವೆ

ಪ್ರತೀ ಮನೆಗೂ ಒಂದೊಂದು ನಾಯಿ
ಅವುಗಳ ಸಾಕಲು ಇನ್ನೊಂದು ಬಾಯಿ
ಆ ಬಾಯಿಗಳ ಮುಚ್ಚಲು ಒಂದೊಂದು ಕಾಂಪೌಂಡು
ಜೊತೆಗೆ ನೋ-ಪಾರ್ಕಿಂಗ್ ಬೋರ್ಡುಗಳು

ಬೆವರಿಗೆ ಇಲ್ಲಿ ಬೆಲೆ ನಿಗದಿಯೇ ಇಲ್ಲ
ಎಸಿ ಗಾಳಿ ಸೋಕಿದ ಕಲ್ಲಿಗೂ ಫಿಕ್ಸೆಡ್ ರೇಟ್ ಇಲ್ಲಿ
ತರತರಹದ ಬಣ್ಣಬಣ್ಣದ ಹರಿದು ತ್ಯಾಪೆ ಹಾಕಿದ
ಟೀ-ಶರ್ಟ್, ಜೀನ್ಸುಗಳಿಗೇ ವ್ಯಾಲ್ಯೂ ಜಾಸ್ತಿ
ಹೆಚ್ಚೆಂದರೆ ಹೆಚ್ಚು, ಕಡಿಮೆ ಎಂದರೂ ಹೆಚ್ಚು
ಸುಮಾರಷ್ಟು ಜನರಿಗೆ ಬರೀ ನೋಟಿನ ಹುಚ್ಚು

ಮೋರಿಗಳೆಲ್ಲ ತುಂಬಿ ಹರಿದು
ರಸ್ತೆ ಮ್ಯಾಗಳ ಗುಂಡಿ ತುಂಬಲು ಬಂದಿವೆ
ಪ್ಲಶ್ ಆದ ಕೊಳಚೆ ನೀರುಗಳು
ಬ್ಲೀಚ್ ಆಗಿ ಫಿಲ್ಟರ್ ಕ್ಯಾನುಗಳೊಳಗೆ ಸೇರಿಕೊಂಡಿವೆ
ಹತ್ತು ಕೊಟ್ಟರೆ ಇಪ್ಪತ್ತು, ಸಾವಿರ ಕೂಟ್ಟರೆ ಒಪ್ಪತ್ತು
ಲೆಕ್ಕವೇ ಸಿಗದ ಅಂಕಿ ಆಟದೊಳಗೆ ಮೂರ್ಖರದ್ದೇ ದರ್ಬಾರು

ಬಯಸಿದ್ದೆಲ್ಲಾ ಸಿಗುವುದು ಚಿಟಕಿ ಸಮಯದಲ್ಲಿ
ಹೆಜ್ಜೆ ಹೆಜ್ಜೆಗೂ ಸೆಳೆಯಲು ನಿಂತಿದ್ದಾರೆ
ಸುಖದ ಸೊಂಟ ಕಾಣುವ ಅನಾಮಿಕರು
ವೀಡಿಯೋ ಮಾಡಲು ಹೊರಟಿದ್ದಾರೆ
ಕ್ಯಾಮೆ ಇಲ್ಲದವರು
ಇದು ಮಹಾನಗರಿ ಕಾಣ ಮಂಕುತಮ್ಮ

ಮೂರನೆ ಮಹಡಿಯಲ್ಲೊಬ್ಬ ರಾಜ
ಅವನ ಕಾಯಲು ಬಿಸಿ ಕೈಗಳು
ಮತ್ತು ಹಸಿದ ಖುರ್ಚಿಗಳು ಸುತ್ತುಗಟ್ಟಿವೆ
ಅಲ್ಲೊಬ್ಬ ಕನ್ನಡಕ್ಕಾಗಿ
ಮತ್ತೊಬ್ಬ ಜಾತಿಗಾಗಿ ಕಾದಾಡುತ್ತಿದ್ದಾರೆ
ಆದ್ದರಿಂದ,
ನಾಗರೀಕರಿಗೆ ಹುಡುಕಾಟ ನಡೆಸಲಾಗಿದೆ

ನೆತ್ತಿ ಎತ್ತರದಲ್ಲೇ ಕಳ್ಳ-ಕಾಕರ ಹಾರಾಟ
ತಪ್ಪಿಲ್ಲದಿದ್ದರೂ ಆನ್ಲೈನ್ ಟ್ರಾಫಿಕ್ ಫೈನು
ಬಿಎಂಟಿಸಿಗಳಿಗೆ ಎಮಿಶನ್ ಬೇಕಿಲ್ಲ
ಎಲ್ಲರೂ ಹೊಡೆಯುತ್ತಾರೆ ಇಲ್ಲಿ
ಮಾತನಾಡಿದರೆ ಊಳುತ್ತಾರೆ

ಸದ್ಧು ಮಾಡದೆ ನಡೆಯಬೇಕಿದೆ
ಕೆಲವು ನಾಲಗೆಗಳನ್ನು ತಿದ್ದುವ ಕಾರ್ಯ ಬೇಕಿದೆ
ಮೈಕುಗಳ ಸೌಂಡು ಕಮ್ಮಿಯಾಗಬೇಕಿದೆ
ಹೊಗೆಯಾಡದ ಪೈಪುಗಳು ನಿಲ್ಲಬೇಕಿದೆ
ನಮ್ಮವರನ್ನೇ ನಾವು ಕಾಪಾಡಿಕೊಳ್ಳಬೇಕಿದೆ!!

ಲೇಖಕ ಶ್ರೀ ಅನಂತ್ ಕುಣಿಗಲ್