- ಒಕಾಪಿಗಳ ಲೋಕದಲ್ಲಿ - ಅಕ್ಟೋಬರ್ 27, 2024
- ಮಹಾಸಾಗರವಾದಳು - ಸೆಪ್ಟೆಂಬರ್ 13, 2024
- ಅಂಟಿಗೆ ಪಿಂಟಿಗೆ: - ನವೆಂಬರ್ 16, 2020
ಪ್ಯಾಂಟಿನ, ದಪ್ಪ ಮೀಸೆಯ ದೊಡ್ಡ ಸಾಹೇಬರಿಂದ ಬೆತ್ತ ಮುರಿಸಿಕೊಂಡ ಮೇಲೆಯೇ ಸಮಾಧಾನ. ಹಳ್ಳಿಗೆ ವಾಪಾಸು ಬಂದವನೆ ಹುಡುಕುತ್ತಿದ್ದದ್ದೆ ನನ್ನನ್ನು. ಬಡಿಸಿಕೊಂಡ ನೋವು ಲವಲೇಶವೂ ಮುಖದಲ್ಲಿರುತ್ತಿರಲಿಲ್ಲ. ಕಾಮತನ ಕ್ಯಾಂಟೀನಿನಲ್ಲಿ ಕಾಸಿಟ್ಟ ಕೇಟಿ ಕುಡಿದವರೆ, ಬೀಸುಗಾಲಿನಲ್ಲಿ ಸೀದಾ ಮರಾಠರ ಮೇಲಿನ ಕೇರಿಗೆ ಹೋದರೆ, ಬಡಿಸಿಕೊಂಡ ಹುಡುಗರು ಆಗಿದ್ದನ್ನು ಮರೆತು ಖುಷಿಯಾಗಿ ಮಾತನಾಡಿ ಕಳಿಸುತ್ತಿದ್ದರು. ಪೋಲೀಸರ ಏಟಿನ ನೋವಿನ ಮಧ್ಯೆಯೆ ಹುಡುಗರಿಗೊಂದಷ್ಟು ಬುದ್ದಿ ಮಾತು ಹೇಳಿಬರುವಷ್ಟು ದೊಡ್ಡತನ ಮಾರಪ್ಪನಿಗಿತ್ತು.
ವಿಶ್ವಾಸ್ ಭಾರದ್ವಾಜ್ ರ ‘ಮಾರಿಬಲಿ’ ಕಥೆಯಿಂದ
ಮಾರಿಯ ಕೋಣ ಬೀಳುತ್ತದೆ ನೆಲಕ್ಕೆ. ಬಿದ್ದ ತಕ್ಷಣ ಹನಿಕುವ, ಮಹಿಷ ನೆತ್ತರನ್ನು ಮೊದಲೆ ಬುಟ್ಟಿಯಲ್ಲಿ ಶೇಖರಿಸಿಟ್ಟ ಬೇಯಿಸಿದ ಬಿಳಿ ಅನ್ನಕ್ಕೆ ಹಾಕಿ ಕೆಂಪಾಗಿಸಿ ಕಲಸಿ, ಮಾರಮ್ಮನ ಗಡಿ ಇರುವ ಸ್ಥಳಗಳಲ್ಲಿ ಬೀರಿ ಬರಬೇಕು. ಅಲ್ಲಿಗೆ ಈ ಗಡಿಗಳು ಗ್ರಾಮದೇವತೆ ಮಾರಮ್ಮನ ವ್ಯಾಪ್ತಿಗೆ ಒಳಪಟ್ಟು ಸಂರಕ್ಷಿಸಲ್ಪಡುತ್ತವೆ ಎನ್ನುವ ಭರವಸೆ ದೊರಕಿದಂತೆ. ಇನ್ನು ಮುಂದಿನ ಮಾರಿ ಜಾತ್ರೆಯವರೆಗೂ ಊರಿಗೆ ಯಾವುದೇ ಸಂಕಷ್ಟಗಳು ಬರದಂತೆ ನೋಡಿಕೊಳ್ಳುವುದು ಆ ತಾಯಿಯ ಜವಾಬ್ದಾರಿ. ಅದರ ಹರಕೆಯ ಮುಡಿಪೇ ಈ ಕೋಣದ ರಕ್ತ ಮಿಶ್ರಿತ ಅನ್ನವನ್ನು ಬೀರುವ ಪದ್ದತಿ. ಇದನ್ನು ಚರಗ ಬೀರುವುದು ಎನ್ನುತ್ತಾರೆ. ತಲೆತಲೆಮಾರುಗಳಿಂದ ಈ ಪದ್ದತಿಯನ್ನು ತಮ್ಮ ಉಪ್ಪಾರ ಜನಾಂಗದವರು ಮಾತ್ರ ನೆರವೇರಿಸುತ್ತಾ ಬಂದಿದ್ದಾರೆ. ಎಷ್ಟೇ ಆದರೂ ಮಾರಮ್ಮ ತಾಯಿ ಮದುವೆ ಆಗಿದ್ದ ವರ ತಮ್ಮಂತೆ ಕೀಳು ವರ್ಗದವನೇ ಅಲ್ಲವೆ. ಅದೇ ಕಾರಣಕ್ಕೆ ಇರಬೇಕು ಈ ಘಟೇವು ತರುವ, ಚರಗ ಬೀರುವ ಸಂಪ್ರದಾಯಗಳು ಬ್ರಾಹ್ಮಣರಿಗೆ ದಕ್ಕದೆ ತಮ್ಮ ಮತ್ತು ಮಾದಿಗರ ಜನಾಂಗದ ಪಾಲಾಗಿದ್ದು.
ಮಾರಿಕಾಂಬಾ ದೇವಿಯನ್ನು ವರಿಸಿದ್ದ ವರ ಕೋಣನ ರೂಪದಲ್ಲಿ ಅವಿತಿದ್ದಾಗ ಉಗ್ರ ಸ್ವರೂಪಿಣಿಯಾಗಿ ತಾಯಿ ಕೋಣದ ತಲೆ ತರಿದಿದ್ದು, ಅಂದಿನಿಂದಲೆ ಮಾರಿಜಾತ್ರೆಯ ಎರಡನೇ ದಿನ ಕೋಣದ ಬಲಿ ನೀಡುವ ಕಟ್ಟಳೆ ಆರಂಭವಾಯಿತು. ತನ್ನದು ಉಪ್ಪಾರರ ಜನಾಂಗ. ಉಪ್ಪಾರ ಪರಸಪ್ಪ ಎಂದರೆ ತನ್ನ ವರ್ಗದಲ್ಲೆ ಒಂದು ಗೌರವ. ತಾನೆಂದು ತನ್ನತನವನ್ನು ಬಿಟ್ಟವನಲ್ಲ. ಯಾರೊಂದಿಗೂ ಹೆಚ್ಚಿನ ಒಡನಾಟವಾಗಲೀ, ಮುನಿಸಾಗಲಿ ಕಟ್ಟಿಕೊಂಡವನಲ್ಲ. ತನಗಿದ್ದ ಒಬ್ಬನೇ ಗೆಳೆಯನೆಂದರೆ ಮಾದಿಗರ ಮಾರಪ್ಪ ಮಾತ್ರ. ಅವನೊಂದಿಗೆ ತನ್ನದು ಹತ್ತಿರ ಹತ್ತಿರ ಇಪ್ಪತ್ತು ವರ್ಷಗಳ ಭಾಂದವ್ಯ.
ಮಾದಿಗರ ಮಾರಪ್ಪ ಕಳೆದ ಎಂಟು ಮಾರಿಜಾತ್ರೆಗಳಿಂದ ಕೋಣ ಕಡಿಯುತ್ತಾ ಬಂದಿದ್ದಾನೆ. ಆಳು ಕೂಡಾ ಬಾರಿ ಬಿಗಿ ಮನುಷ್ಯ. ಮಾದಿಗರ ಕುಲದಲ್ಲಿ ಹುಟ್ಟಿದ್ದರೂ ಯಾವುದೇ ವ್ಯಸನಗಳಿಲ್ಲದ ಮನುಷ್ಯ. ಮೊದಲು ಅಪರೂಪಕ್ಕೊಮ್ಮೆ ಕಾಸಿದ ಕಳ್ಳಭಟ್ಟಿ ಕುಡಿಯುತ್ತಿದ್ದ, ಹೆಂಡತಿ ಸುಬ್ಬವ್ವ ತೀರಿದ ನಂತರ ಅದನ್ನೂ ಬಿಟ್ಟು ಸಂಭಾವಿತ, ಸಂಪ್ರದಾಯವಾದಿ, ಶಾಸ್ತ್ರೋಕ್ತ, ಶಿಷ್ಟ, ನಿಷ್ಟ ಕರ್ಮಿಷ್ಟ ಮಹಾಬ್ರಾಹ್ಮಣನಂತಾಗಿಬಿಟ್ಟ. ಹುಮ್ಲಾಬಾದ್ನ ಹಳ್ಳಿಯೊಂದರಲ್ಲಿ ಕೂಲಿ ಮಾಡಿಕೊಂಡಿದ್ದ. ಹದಿನೆಂಟಕ್ಕೆ ವಯಸ್ಸು ಬಿದ್ದ ಸಂದರ್ಭ ಅಬ್ಬೆ ನಿಂಗವ್ವ ಹತ್ತಿರದ ಸಿದ್ದಾಪುರದ ವಧು ಸುಬ್ಬವ್ವಳೊಂದಿಗೆ ಮದುವೆ ಮಾಡಿಸಿದಳು. ಆಮೇಲೆ ಹಳ್ಳಿಯಲ್ಲೆ ಗುಡಿಸಲು ಕಟ್ಟಿಕೊಂಡು ಸಂಸಾರ ಶುರುವಿಟ್ಟಿಕೊಂಡ. ಹೇಗಿದ್ದ ಆಗೆಲ್ಲಾ ಮಾರಪ್ಪ. ಬಡಿದಾಟಕ್ಕೆ ನಿಂತನೆಂದರೆ ಶುದ್ದ ರಣ ರಾಕ್ಷಸ. ಮೇಲಿನ ಕೇರಿ ಶಿವಾಜಿ ಗಲ್ಲಿಯ ಮರಾಠರ ಹುಡುಗರು ಗಣಪತಿ ಹಬ್ಬದಲ್ಲಿ ಗಲಾಟೆ-ಬಡಿದಾಟ ಮಾಡಿದಾಗೆಲ್ಲಾ, ಸಾಬರು ಪುಕ್ಕಲು ಹತ್ತಿ ಓಡಿ ಬರುತ್ತಿದ್ದುದ್ದೆ ಮಾರಪ್ಪನ ಬಳಿ.
ಒಂದು ಪುಡಿ ಗಾಂಧಿ ನೋಟು, ಎರಡು ಕೆಜಿಯಷ್ಟು ಎಳೆಯ ದನದ ಮಾಂಸ ಕೊಟ್ಟರೆ ಮುಗಿದೇ ಹೋಯಿತು ಆ ದಿನ ಯಾರಾದರೊಬ್ಬ ಮರಾಠರ ಹುಡುಗ ಆಸ್ಪತ್ರೆ ಸೇರಿದಂತೆಯೇ ಅರ್ಥ. ಸಿಡಿ-ಸಿಡಿ ಸಿಟ್ಟು ನೆತ್ತಿಗೇರಿಬಿಟ್ಟರೆ ಮಾರಪ್ಪನದು ರುದ್ರತಾಂಡವ. ಮರಾಠರ ಉಗ್ರ-ಉಗ್ರ ಹಿಂದುತ್ವದ ಸಂಕಲ್ಪಗಳು ನಿಂತಲ್ಲಿಯೇ ನೀರಾಗಿ ಹೋಗುತ್ತಿದ್ದವು. ಮನೆಗೆ ಬಂದು ಸುಬ್ಬಿ ಕರಿದು, ಮಸಾಲೆ ಸವರಿದ ಹುರಿದಿಟ್ಟ ದನದ ಮಾಂಸ, ಜೊತೆಗೆ ಹದವಾಗಿ ಬೆಂದ ಅದರದ್ದೆ ಸಾರಿನೊಂದಿಗೆ ಮುದ್ದೆಯನ್ನು ಮುರಿದು ತಿನ್ನಲು ಆರಂಭಿಸಿದನೆಂದರೆ ಸುದೀರ್ಘ ಒಂದು ಗಂಟೆಯ ಪಾಂಗಿತ ನೆಮ್ಮದಿಯ ಭೋಜನ. ರಾತ್ರಿ ಮಲಗಿದ್ದಷ್ಟೆ ಸುಬ್ಬಮ್ಮನಿಗೆ ಗೊತ್ತಿರುತ್ತಿತ್ತು. ಬೆಳಿಗೆ ಎದ್ದರೆ ಮೈಯೆ ಮೂಳೆ ಮಾಂಸಗಳೆಲ್ಲಾ ನಜ್ಜುಗುಜ್ಜಾದಂತ ನೋವಿನಿಂದ ಹಿಂಡಿ, ಕಟ್ಟು ಬಿಚ್ಚಿದ ಸೊಪ್ಪಿನಂತಾಗಿರುತ್ತಿದ್ದಳು, ಸುಬ್ಬಮ್ಮನಿಗೆ ಮಾರಪ್ಪ ಕೊಡುವ ಆ ನೋವೇ ಪರಮಾನಂದ. ಮಾರಪ್ಪ ಬಿರುಗಾಳಿಯಂತೆ ಅವಳನ್ನು ಆವರಿಸಿಕೊಂಡರೆ ಅವಳು ಮಲ್ಲಗೆಯ ಚಪ್ಪರದಂತೆ ಕ್ಷಣಕ್ಷಣಕ್ಕೂ ನಲಗುತ್ತಿದ್ದಳು, ಅವಳ ಹೆಣ್ತನದ ಕಾಮನೆಗಳು ಸಂತೃಪ್ತಿಗೊಳ್ಳುತ್ತಿತ್ತು. ಆದರೆ ಮಾರನೆಯ ದಿನ ಮಾರಪ್ಪ ನಾಪತ್ತೆಯಾಗಿರುತ್ತಿದ್ದ. ಬೆಳಗಿನ ಯಾವುದೋ ಜಾವದಲ್ಲಿ ಪಟ್ಟಣದ ಪೋಲೀಸರು ಬಂದು ಹಡೆಮುರಿ ಕಟ್ಟಿ ಒಯ್ದುಬಿಡುತ್ತಿದ್ದರು.
ಮಾರಪ್ಪನಿಗಾದರೂ ಆ ಸಣಕಲು ಪೋಲೀಸರು ಒಂದು ಲೆಕ್ಕವೇ ಅಲ್ಲ ಆದರೂ ಸುಮ್ಮನೆ ತಕರಾರು ಮಾಡದೆ ಅವರ ಲಾಟಿಗೆ ಮೈ ಒಡ್ಡುತ್ತಿದ್ದ. ಕಾರಣವಿಷ್ಟೆ ಆಂತರ್ಯದಲ್ಲಿ ಮಾರಪ್ಪನಿಗೂ ತಾನು ಮಾಡುವ ಈ ಕೆಲಸಗಳು ಬೇಸರ ತರಿಸುತ್ತಿದ್ದವು. ತೀರ ಎಳೆಯ ಹುಡುಗರನ್ನು ಆ ಪಾಟಿ ಬಡಿದು ತರಿಯುವ ಅವಶ್ಯಕತೆಯಿತ್ತಾ ಎಂದು ತನ್ನನ್ನು ತಾನೆ ಕೇಳಿಕೊಳ್ಳುತ್ತಿದ್ದ. ಹಾಗೆಲ್ಲಾ ಚಿಲ್ಲರೆ ಒಂದು ಗಾಂಧಿ ನೋಟು ಮತ್ತು ವಿಸರ್ಜನೆಯಾಗಿಹೋಗುವ ಮಾಂಸದೂಟದ ಆಮೀಶಕ್ಕೆ ಅವನು ಒಳಗಾಗುವವನೆ ಅಲ್ಲ. ಆದರೆ ಸಾಬರ ಕೇರಿಯ ಹಿರಿ ಜೀವ ಬಿಳಿಗಡ್ಡ, ಬಿಳಿ ದೋತರ-ಪೈಜಾಮದ, ನೀಲಿ ಕಣ್ಣಿನ ಮುದುಕ ಕಟ್ಟೆ ಹಸೀನಬ್ಬಾ ಖಾನಿ ಇದ್ದನಲ್ಲ ಅವನೆಂದರೆ ಏನೋ ಅಕ್ಕರೆ.
ಮಾರಪ್ಪನ ತಂದೆ ಮತ್ತು ನನ್ನ ಅಪ್ಪಯ್ಯ ಸಹ ಮುದುಕ ಹಸೀನಬ್ಬಾ ಜೊತೆಗ ಶುಂಟಿ ಕಾಯಲು ಹೋಗುತ್ತಿದ್ದರು. ಹುಮ್ನಾಬಾದ್ ನಿಂದ ಬಂದ ನಂತರ ಯಾವಾಗಲಾದರೂ ಮಾರಪ್ಪನೂ ಹಾಗೆ ಬ್ಯಾಣಕ್ಕೆ ಶುಂಟಿ ಕಾಯಲು ಹೋಗಿಬಿಡುತ್ತಿದ್ದ. ತೊಂಬತ್ತರ ಆಸುಪಾಸಾದರೂ ಆ ಮುದುಕ ಒಬ್ಬನೇ ಪೂರ್ತಿ ಮೂರೆಕರೆ ಹಬ್ಬಿದ ಶುಂಟಿ ಕಾಯುತ್ತಿದ್ದ. ಮಾರಪ್ಪನಿಗೆ ಅಚ್ಚರಿ ಹುಟ್ಟಿಸುತ್ತಿದ್ದಿದ್ದೆ ಅವನ ದೃಷ್ಟಿ ಮತ್ತು ಶ್ರವಣ ಶಕ್ತಿ. ಮುದುಕ ಹೆಜ್ಜೆ ಸಪ್ಪಳವನ್ನು ಗುರುತಿಸುತ್ತಿದ್ದ. ಹಾಗೆ ಹೋದ ದಿನ ಮನೆಯಲ್ಲಿ ಹಿಂದಿನ ದಿನ ಉಳಿದಿದ್ದ ಕೋಳಿಯ ಬಿರಿಯಾನಿ ತಿನ್ನಲು ಕೊಡುತ್ತಿದ್ದ. ಮಾರಪ್ಪ ಮಟ್ಟಸವಾಗಿ ನೆಲದ ಮೇಲೆ ಪದ್ಮಾಸನ ಹಾಕಿ ಕೂತು ಹೊಟ್ಟೆ ಬಿರಿಯೇ ಉಣ್ಣುತ್ತಿದ್ದ. ಮಾರಪ್ಪ ಸಮೃದ್ದವಾಗಿ ಉಂಡ ಎನ್ನುವುದೇ ಮುದುಕನಿಗೆ ಆ ದಿನದ ಸಾರ್ಥಕತೆ.
ರಂಜಾನ್ ಬಂತೆಂದರೆ ಪೂರ್ಣ ಒಂದು ತಿಂಗಳು ಹಸಿನಬ್ಬಾ ಖಾನಿಯದು ಕಠೋರ-ಕರ್ಮಠ ಉಪವಾಸ. ಪಾಪ ಮುದಿ ಸಾಬು ಎನ್ನಿಸಿ ಬಿಡುವಷ್ಟು ಸೊರಗಿಬಿಡುತ್ತಿದ್ದ. ಆದರೂ ಮುದುಕನ ನಿಯಮದಲ್ಲಿದ್ದ ನಿಷ್ಠೆ ಮಾತಿನಲ್ಲಿಯೂ ಹೊರಬಂದು ಬಿಡುತ್ತಿತ್ತು. “ನಿಮ್ಮ ಮಾರವ್ವಂಗೆ ಕೋಣ ಕಡಿಯಾಕೆ ಮುಂಚಿ ನೀವು ಉಪಾಸ ಮಾಡಲ್ಲ, ಹಂಗೇಯಾ ಕಣಾ ಮಾರಾ ನಮ್ದು ರಂಜಾನ್ನಲ್ಲಿ ಉಪಾಸ. ಇಲ್ಲಿತಂಕ ಒಂದೆ ಒಂದು ಬಾಟ್ಲಿ ಗುಲ್ಕೋಸು ಏರ್ಸಿಲ್ಲ. ರಂಜಾನ್ನ ಉಪಾಸ ಅಷ್ಟೊಕ್ಕೊಂದು ಪಯಿತ್ರ. ಅಲ್ಲಾ ಒಳ್ಳೆದು ಮಾಡದೆ ಉಪಾಸ ಸರಿಗೆ ಮಾಡಿದ್ರೆ” ಅಂದುಬಿಡುತ್ತಿದ್ದ.
ಅಂತಹ ಹಸಿನಬ್ಬಾ ಖಾನಿ ಗಣಪತಿ ಹಬ್ಬದ ತಿಂಗಳು ಬಂತೆಂದರೆ ಮಬ್ಬಾಗಿ ಬಿಡುತ್ತಿದ್ದ. ತನ್ನ ಇಬ್ಬರು ಎದೆಯೆತ್ತರ ಬೆಳೆದ ಮಕ್ಕಳನ್ನು ಇದೇ ಗಣಪತಿ ಹಬ್ಬದ ಕೋಮುಗಲಭೆಯ ಬಡಿದಾಟದಲ್ಲಿ ಕಳೆದುಕೊಂಡಿದ್ದ. ಪುಡಾರಿಗಳು ತಮ್ಮ ರಾಜಕೀಯದ ಪಿತೂರಿಗೆ ಸಮಾಜದ ಸಾಮರಸ್ಯ ಕದಡಿ ಬೆಂಕಿ ಇಟ್ಟರೇ ಅದರಲ್ಲಿ ಉರಿದು ಹೋಗಿದ್ದರು ಹಸೀನಬ್ಬಾ ಖಾನಿಯ ದೃಢಕಾಯ ಮಕ್ಕಳು. ಮರಾಠ ಹುಡುಗರು ಗಣಪತಿ ಕೂರಿಸಿ, ಕೊನೆಗೆ ಬಿಡುವ ದಿನದಂದು ಸುಮ್ಮಸುಮ್ಮನೆ ಗಲೆಭೆ ಎಬ್ಬಿಸಿಬಿಡುತ್ತಿದ್ದರು. ಉಳಿದ ಹಿಂದೂಗಳಂತೆ ಸಾಮರಸ್ಯದ ಬಾಳ್ವೆ ಕೆಲ ಮರಾಠ ಹುಡುಗರಿಗೆ ಆಗಿಬರುತ್ತಿರಲಿಲ್ಲ. ಗಣಪತಿ ಮುಳುಗಿಸುವ ದಿನವಂತೂ ಹಿಂದೂಗಳು ಸಹ ಈ ಬಾರಿಯಾದರೂ ಗಲಭೆಗಳಾಗದೆ ಶಾಂತಿಯುತವಾಗಿ ಮೆರವಣಿಗೆ ಮುಗಿಯಲಿ ಎಂದು ಗಣೇಶನಲ್ಲಿಯೇ ಮೊರೆಯಿಟ್ಟರೆ, ಮುಸ್ಲೀಮರ ಸ್ಥಿತಿ ಇನ್ನೂ ಚಿಂತಾಜನಕ.
ಎರಡೂ ಧರ್ಮದಲ್ಲಿಯೂ ಕಿಡಿಗೇಡಿಗಳಿದ್ದಿದ್ದರು. ಹಿಂದೆ ಅವರು ಮಾಡಿದ ಅದ್ವಾನಗಳಿಗೆ ಈಗಿರುವ ನೆಮ್ಮದಿ ಕಲಕುವುದು ಅದ್ಯಾವ ನ್ಯಾಯ ಎನ್ನುವುದು ಗ್ರಾಮದ ಅನೇಕರ ನಿಲುವಾಗಿತ್ತು. ಆದರೂ ಕುರುಡು ಧರ್ಮ ಪ್ರೇಮ ಒಮ್ಮೊಮ್ಮೆ ಮೋಸಮಾಡಿಬಿಡುತ್ತಿತ್ತು. ಅಂತಹ ಸಂದರ್ಭದಲ್ಲಿ ಹಸಿನಬ್ಬಾ ಖಾನಿ ಮಾರಪ್ಪನನ್ನು ಹುಡುಕಿಕೊಂಡು ಓಡಿ ಬಂದುಬಿಡುತ್ತಿದ್ದ. “ನೋಡು ಮಾರ, ಗಣೇಶನಬ್ಬನೂ ಒಂದೇ, ನಂ ರಂಜಾನು ಒಂದೆ ಅಂದ್ಕಂಡವನ್ ನಾನು. ನಂ ಧರ್ಮ ದೊಡ್ಡದು ನಮ್ದು ದೊಡ್ಡದು ಅಂತ ಹೊಡಕ್ಕೊಂಡು ನನ್ ಇಬ್ರೂ ಮಕ್ಳು ಸತ್ತೇ ಹೋದ್ರು. ಅಲ್ಲಾ ಹಾಗೆ ಬರ್ದು ಕಳ್ಸಿದ್ದ. ಅದು ಮುಗ್ದು ಹೋದ್ ಇಚಾರ. ಹಾಗಂತ ಈಗ ಮತ್ತೆ ದೊಂಬಿ ಎಬ್ಸದು ಸರಿ ಬರಕ್ಕಿಲ್ಲ. ಹುಡ್ಗುರು ಚಿಕ್ಕೋರು, ಏನೂ ತಿಳಿಯಕ್ಕಿಲ್ಲ. ಬಿಸಿಕಿನ ರಕ್ತ ಬಡಿದಾಡ್ತವೆ. ಏನಾರ ಹೆಚ್ಚು ಕಮ್ಮಿ ಆದ್ರೆ. ಜಾತಿ ಯಾದಾದ್ರೇನು ಜೀವ ದೊಡ್ದಲ್ಲ. ಏನಾರ ಯವಸ್ಥೆ ಮಾಡು”ಅಂದು ಬಿಡುತ್ತಿದ್ದ. ಸಮಾಜಕ್ಕೆ ಒಳ್ಳೆದನ್ನು ಬಯಸೋ, ಶಾಂತಿಯನ್ನು ನಿರೀಕ್ಷಿಸೋ ಮುದುಕನ ಮಾತು ಕೇಳಿದ ಕೂಡ್ಲೆ ಮಾರಪ್ಪ ಮುಂದಿನ ಆಲೋಚನೆಯನ್ನೆ ಮಾಡದೆ, ಮಸೆದಿಟ್ಟ ಮಚ್ಚನ್ನು ಟವೆಲ್ಲಿನಲ್ಲಿ ಸುತ್ತಿಟ್ಟುಕೊಂಡು ಹೊರಟೆ ಬಿಡುತ್ತಿದ್ದ.
ಮುಂದಿನದೆಲ್ಲಾ ಶುದ್ದ ರಾಕ್ಕಸತಾಂಡವ. ಠಾಣೆಯಲ್ಲಿ ಪ್ಯಾಂಟಿನ, ದಪ್ಪ ಮೀಸೆಯ ದೊಡ್ಡ ಸಾಹೇಬರಿಂದ ಬೆತ್ತ ಮುರಿಸಿಕೊಂಡ ಮೇಲೆಯೇ ಸಮಾಧಾನ. ಹಳ್ಳಿಗೆ ವಾಪಾಸು ಬಂದವನೆ ಹುಡುಕುತ್ತಿದ್ದದ್ದೆ ನನ್ನನ್ನು. ಬಡಿಸಿಕೊಂಡ ನೋವು ಲವಲೇಶವೂ ಮುಖದಲ್ಲಿರುತ್ತಿರಲಿಲ್ಲ. ಕಾಮತನ ಕ್ಯಾಂಟೀನಿನಲ್ಲಿ ಕಾಸಿಟ್ಟ ಕೇಟಿ ಕುಡಿದವರೆ, ಬೀಸುಗಾಲಿನಲ್ಲಿ ಸೀದಾ ಮರಾಠರ ಮೇಲಿನ ಕೇರಿಗೆ ಹೋದರೆ, ಬಡಿಸಿಕೊಂಡ ಹುಡುಗರು ಆಗಿದ್ದನ್ನು ಮರೆತು ಖುಷಿಯಾಗಿ ಮಾತನಾಡಿ ಕಳಿಸುತ್ತಿದ್ದರು. ಪೋಲೀಸರ ಏಟಿನ ನೋವಿನ ಮಧ್ಯೆಯೆ ಹುಡುಗರಿಗೊಂದಷ್ಟು ಬುದ್ದಿ ಮಾತು ಹೇಳಿಬರುವಷ್ಟು ದೊಡ್ಡತನ ಮಾರಪ್ಪನಿಗಿತ್ತು. ಮನೆಗೆ ಬಂದು ಮಲಗಿದರೆ ಸುಬ್ಬಿ ಎಣ್ಣೆ ಕಾಯಿಸಿ ಮೈಗೆ ಸವರಿ ಮಸಾಜು ಮಾಡಿತ್ತಾ, ಉಪ್ಪು ನೀರಿನ ಶಾಖ ಕೊಡುತ್ತಿದ್ದಳು. ಕಣ್ಣಂಚಿನಲ್ಲಿ ಸರಿಯುವ ನೀರಿನ ಹನಿಯನ್ನು ಮಾರಪ್ಪನಿಗೆ ತಿಳಿಯದಂತೆ ಸೆರಗಿನ ತುದಿಯಲ್ಲಿ ಒರೆಸಿಕೊಳ್ಳುತ್ತಿದ್ದಳು. ಆದರೆ ಅವಳು ಮಾರಪ್ಪನಿಗೆ ತಿಳಿಯದು ಎಂದುಕೊಂಡಿದ್ದ ಆ ಸಂಗತಿಯನ್ನು ಅವನು ಕಣ್ಣಂಚಿನಲ್ಲಿ ಗಮನಿಸಿರುತ್ತಿದ್ದ; ಹೇಳುತ್ತಲಿರಲಿಲ್ಲ. ಅದು ಮಾರಪ್ಪನ ಜಾಯಮಾನವೂ ಅಲ್ಲ. ಮೇಲ್ನೋಟಕ್ಕೆ ಶುದ್ದ ಒರಟನಾಗಿದ್ದರೂ, ಮಾರಪ್ಪನಲ್ಲಿ ಮಗುವಿನಷ್ಟೆ ನಿರ್ಮಲವಾದ ಅಗೋಚರ ಅಂತಃಕರಣವಿತ್ತು.
ಮಾರಪ್ಪನ ನಸೀಬು ನೆಟ್ಟಗಿರಲಿಲ್ಲ ಮಕ್ಕಳ ಭಾಗ್ಯವನ್ನು ಶಿವ ಕರುಣಿಸಲಿಲ್ಲ. ಅದೇ ಕೊರಗಿನಲ್ಲಿ ಸುಬ್ಬವ್ವ ಹಾಸಿಗೆ ಹಿಡಿದು ಕಾಲಾಂತರದಲ್ಲಿ ತೀರಿಕೊಂಡು ಬಿಟ್ಟಳು. ಆನಂತರ ಹೆಂಡತಿಯನ್ನು ಮರೆತಿದ್ದನಾದರೂ ಆಗಾಗ ಪೋಲೀಸರಿಂದ ಮೈ ನವೆಯುವಂತೆ ಬಡಿಸಿಕೊಂಡು ಬಂದಾಗಲೆಲ್ಲಾ ಸುಬ್ಬಿ ಮಾಡುತ್ತಿದ್ದ ಹದವಾದ ಮಸಾಜಿನ ಸೇವೆ ಆಗ ತೇವಗೊಳ್ಳುತ್ತಿದ್ದ ಕಣ್ಣಂಚು, ಉಕ್ಕಿಬರುತ್ತಿದ್ದ ಕಂಬನಿಯನ್ನು ಸೆರಗಿನಲ್ಲಿ ಗಂಡನಿಗೆ ಕಾಣದಂತೆ ಒರೆಸಿಕೊಳ್ಳುವದು ಮಾತ್ರ ಆಗಾಗ ನೆನಪಾಗಿ ಬಿಡುತ್ತಿತ್ತು. ಸಂಪೂರ್ಣವಾಗಿ ಮಾರಪ್ಪ ಬದಲಾಗಿಬಿಟ್ಟ. ಕಳ್ಳಭಟ್ಟಿ ಕುಡಿಯುವುದು, ಜಗಳ-ದೊಂಬಿ, ಮರಾಠರ ಹುಡುಗರ ಮೈ ಮೂಳೆ ಮುರಿಯುವುದು ಎಲ್ಲವನ್ನು ಬಿಟ್ಟುಬಿಟ್ಟಿದ್ದ. ಹಾಗಾಗಿ ಊರಿಗೆ ಪೋಲೀಸರು ಬರುವುದು ಕಡಿಮೆಯಾಗಿತ್ತು. ತಾನಾಯ್ತು ತನ್ನ ಪಾಡಾಯ್ತು ಅಂತಿದ್ದ. ಈಗೀಗ ಮರಾಠರ ಹುಡುಗರು ಪ್ರಭುದ್ದರಾಗಿದ್ದರು. ಮುಂಚಿನಂತೆ ಗಣೇಶನ ಗಲಾಟೆಗಳಾಗುತ್ತಿರಲಿಲ್ಲ. ಸಾಬರೊಂದಿಗೆ ವ್ಯಾಪಾರ-ವ್ಯವಹಾರ ಮಾಡಿಕೊಂಡು ಬದುಕುವುದನ್ನು ಕಲಿತಿದ್ದರು. ಎಲ್ಲಾದರೂ ಬಿಸಿ ನೆತ್ತರಿನ ತಲೆ ಮಾಸದ ಹೈಕಳು ಕೆಮ್ಮಲು ಆರಂಭಿಸುವ ಸೂಚನೆ ಸಿಕ್ಕು, ಮಾರಪ್ಪ ಒಂದು ಕ್ಷಣದ ಮಟ್ಟಿಗೆ ಹೋಗಿ ಎದುರು ನಿಂತು ಕಣ್ಣು ಬಿಟ್ಟು ಹೆದರಿಸಿದನೆಂದರೆ ಮುಗಿಯಿತು. ಆ ಬಾರಿಯೂ ಶಾಂತಿಯುತವಾಗಿ ವಿಘ್ನೇಶ್ವರನ ವಿಸರ್ಜನಾ ಮೆರವಣಿಗೆ.
ಸುಬ್ಬವ್ವ ತೀರಿಕೊಂಡ ನಂತರ ಬರುಬರುತ್ತಾ ಮಾರಪ್ಪ ದೈವ ಭಕ್ತನಾಗಿಬಿಟ್ಟ. ಬಲಿಷ್ಟ ದೇಹದ ಕಸುವನ್ನು ಮಾರಿ ಜಾತ್ರೆಯ ಕೋಣನ ಕಡಿಯುವ ಕೆಲಸಕ್ಕೆ ಉಪಯೋಗಿಸಿಕೊಳ್ಳತೊಡಗಿದ. ಕೋಣ ಕಡಿಯುವ ವಾರದ ಮುಂಚೆ, ಕಠಿಣ ನೇಮ-ನಿಷ್ಠೆ. ಎಲ್ಲಿಯೂ ಕಿಂಚಿತ್ತು ಲೋಪವಾಗದಂತೆ ನೆರವೇರಿಸುತ್ತಿದ್ದ. ಊರಿನ ದೊಡ್ಡ ಒಡೆಯರಾದ ಹಿರಿಯೂರು ರಾಮಣ್ಣ ಶಾಸ್ತ್ರಿಗಳು, ಸಾಕಷ್ಟು ಆಸ್ತಪಾಸ್ತಿ ಇದ್ದ, ಶ್ರದ್ಧಾವಂತ ಸಂಪ್ರದಾಯಶೀಲ ಮಡಿವಂತ ಬ್ರಾಹಣರು. ಎಂದಿಗೂ ಯಾರಿಗೂ ಕೇಡು ಹಾರೈಸದೆ ಬದುಕುತ್ತಿರುವ ಹಿರಿಯ ಜೀವ. ಮಾರಪ್ಪನ ವಂಶಸ್ಥರೆಲ್ಲರೂ ಅವರ ಮನೆಯಲ್ಲಿಯೇ ಜೀತ ಮಾಡಿಕೊಂಡಿದ್ದವರು. ನಮ್ಮ ವಂಶಕ್ಕೆ ಬಳುವಳಿಯಾಗಿ ಬಂದಿದ್ದ ಅರ್ಧ ಎಕರೆ ಹೊಲ, ಶಾಸ್ತ್ರಿಗಳ ಜಮೀನಿನ ಪಕ್ಕದಲ್ಲೆ ಇತ್ತು. ಮಾರಪ್ಪನ ಅಪ್ಪ ಸಹ ಅವರ ಹೊಲ, ಗದ್ದೆ, ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ. ಅಬ್ಬೆ ನಿಂಗವ್ವ ಮನೆಯ ಕೊಟ್ಟಿಗೆಯ ಚಾಕರಿ ಮಾಡುತ್ತದ್ದಳು. ವಯಸ್ಸಿನಲ್ಲಿ ಮತ್ತು ಕಸುಬಿನಲ್ಲಿ ಸರೀಕರಾಗಿದ್ದರವರು ನಮ್ಮಪ್ಪ ಮತ್ತು ಮಾರಪ್ಪನ ಅಪ್ಪ. ಅರ್ಧ ಎಕರೆ ಹೊಲದ ಉತ್ಪನ್ನ ನಮ್ಮ ಮನೆಯ ಆರು ಹಸಿದ ಹೊಟ್ಟೆಯನ್ನು ತುಂಬಿಸಲು ಸಾದ್ಯವಾಗದೆ ಇದ್ದಾಗ, ಅಪ್ಪಯ್ಯ ವಿಧಿ ಇಲ್ಲದೆ ಶಾಸ್ತ್ರಿಗಳ ಹೊಲಕ್ಕೆ ಕೂಲಿಗೆ ಹೋಗುತ್ತಿದ್ದ. ಆಗ ಖುದ್ದಾಗಿ ಶಾಸ್ತ್ರಿಗಳೆ ಬಗರ್ ಹುಕುಂ ಮೂಲಕ ಎರಡೆಕರೆ ಜಾಗ ವಿಸ್ತರಿಸಿಕೊಟ್ಟಿದ್ದರು. ಅಪ್ಪಯ್ಯ ಬದುಕಿರುವಷ್ಟು ದಿನವೂ ಶಾಸ್ತ್ರಿಗಳ ಋಣ ನೆನೆಯುತ್ತಿದ್ದ. ಮಾರಪ್ಪನ ಲಗ್ನದಲ್ಲಿ ಹಣದ ಅವಶ್ಯಕತೆ ಬಂದು, ನಿಂಗವ್ವ ಹೋಗಿ ಕೇಳಿದಾಗ, ಮರು ಮಾತಾಡದೆ ಬಡ್ಡಿ ಸಹ ಪಡೆದುಕೊಳ್ಳದೆ ಹಣ ನೀಡಿದ್ದರು ಶಾಸ್ತ್ರಿಗಳು. ಆಗಾಗ ಸುಬ್ಬವ್ವ ಸಹ ಶಾಸ್ತ್ರಿಗಳ ಮನೆಯ ಕೊಟ್ಟಿಗೆಯ ಕೆಲಸಕ್ಕೆ ಹೋಗುತ್ತಿದ್ದಳು. ಶಾಸ್ತ್ರಿಗಳ ಋಣ ನಿಜಕ್ಕೂ ದೊಡ್ಡದಿತ್ತು. ಅವರೆಂದೂ ಮಾರಪ್ಪನ ಬಳಿ ಜೀತ ಮಾಡು ಎಂದಿರಲಿಲ್ಲ. ಆಗೀಗ ಎದುರಿಗೆ ಕೂರಿಸಿಕೊಂಡು ಹೊಡೆದಾಟ ಬಡಿದಾಟ ಬಿಟ್ಟು ನೆಟ್ಟಗೆ ಲಕ್ಷಣವಾಗಿ ಬದುಕೋದನ್ನು ಕಲಿ ಎಂದು ಬುದ್ದಿ ಮಾತು ಹೇಳುತ್ತಿದ್ದರಷ್ಟೆ. ಹೆಂಡತಿ ಸತ್ತ ನಂತರ ಯಾವತ್ತೂ ಶಾಸ್ತ್ರಿಗಳ ಮಾತನ್ನು ಕೇಳದವ, ಸಂಪೂರ್ಣ ಬದಲಾಯಿಸಿ ಸ್ವ ಇಚ್ಚೆಯಿಂದ ಅವರ ಹೊಲ, ಗದ್ದೆ, ತೋಟದ ಕೆಲಸಕ್ಕೆ ಮುಂದಾಗಿದ್ದ ಮಾರಪ್ಪ. ಅವನ ಈ ಬದಲಾವಣೆ ಶಾಸ್ತ್ರಿಗಳಲ್ಲಿ ದೊಡ್ಡ ಸಂತೋಷವನ್ನೇ ಹುಟ್ಟಿಸಿತ್ತು.
ಮದುವೆಯಾದ ಹೊಸದರಲ್ಲಿ ಮಾರಪ್ಪನ ಬಳಿ ಶಾಸ್ತ್ರಿಗಳೆ ಖುದ್ದಾಗಿ ಬಂದು “ನೋಡು ಮಾರ, ನೀನಂತೂ ಓದಲಿಲ್ಲ, ಬರೀಲಿಲ್ಲ. ನಿಂಗೆ ಮಕ್ಳು ಅಂತ ಆದ್ರೆ ಅವರನ್ನ ಶಾಲೆಗೆ ಕಳಿಸು. ಕಾಲ ಬದಲಾಗ್ತಾ ಇದೆ. ವಿದ್ಯೆ ಇರದಿದ್ರೆ ಅವರು ನಿನ್ ತರಹ ಕೂಲಿ ಮಾಡಬೇಕಾಗುತ್ತೆ. ವಿದ್ಯೆ ಅನ್ನೋದು ಕೇವಲ ಮೇಲ್ವರ್ಗದವರ ಸ್ವತ್ತಲ್ಲ. ಸರಸ್ವತಿಯನ್ನು ಒಲಿಸಿಕೊಳ್ಳುವ ಸಂಕಲ್ಪ ಯಾರು ಬೇಕಾದ್ರೂ ಮಾಡಬಹುದು. ತಿಳೀತಾ!” ಎಂದಿದ್ದರು. ಶಾಸ್ತ್ರಿಗಳನ್ನು ಅಪ್ಪಯ್ಯ-ಅಬ್ಬೆ ಯಾಕಷ್ಟು ಆರಾಧಿಸಿದ್ದರು ಎಂದು ಆಗಲೇ ಮಾರಪ್ಪನಿಗೆ ಮನವರಿಕೆಯಾಗಿತ್ತು. ಆದರೆ ಮಾರಪ್ಪ ಮಕ್ಕಳ ಯೋಗವನ್ನು ಪಡೆದುಕೊಂಡು ಬರಲಿಲ್ಲ. ಶಾಸ್ತ್ರಿಗಳಿಗೂ ಈ ವಿಚಾರದ ಕುರಿತಾಗಿ ಮಾರಪ್ಪನ ಮೇಲೆ ಅನುಕಂಪವಿತ್ತು. ಪತ್ನಿ ಸುಬ್ಬಮ್ಮ ಸತ್ತ ನಂತರ ಮಾರಪ್ಪ ಒಂದು ರೀತಿಯಲ್ಲಿ ದೈವೀಕನಾಗಿದ್ದು ಶಾಸ್ತ್ರಿಗಳಿಗೂ ಇಷ್ಟವಾಗಿತ್ತು. ಇನ್ನು ಮಾರಪ್ಪ ಯಾರಿಗೂ ಹಿಂಸೆ ಕೊಡಲ್ಲ, ಹೊಡೆದಾಟ ಬಡಿದಾಟ ಮಾಡಲ್ಲ ಅನ್ನುವುದು ಅವರ ಇನ್ನೊಂದು ಸಮಾಧಾನಕ್ಕೆ ಕಾರಣವಾಗಿತ್ತು. ಅವರು ಆಗಾಗ ಜಗುಲಿಯಲ್ಲಿ ಕುಳಿತು ಭಗವದ್ಗೀತೆಯ ಶ್ಲೋಕಗಳು, ರಾಮಾಯಣ, ಜೈಮಿನೀ ಭಾರತ, ಗರುಡ-ಪುರಾಣಗಳ ಭಾವರ್ಥಾಗಳನ್ನು ವಿವರಿಸುತ್ತಿದ್ದರೆ, ಜಗುಲಿ ಕಟ್ಟೆಯ ಕೆಳಗೆ ಕುಳಿತು ಮಾರಪ್ಪ ಸಹ ಆಸಕ್ತಿಯಿಂದ ಕೇಳುತ್ತಿದ್ದ. ಬಿಡುವಿದ್ದರೆ ಆಗೆಲ್ಲಾ ನಾನೂ ಹೋಗಿ ಬಿಡುತ್ತಿದ್ದೆ.
ಅಂತಹ ಮಾರಪ್ಪ ಮಾರಿಜಾತ್ರೆ ಆರಂಭವಾಗುವ ಹಿನ್ನಲೆಯಲ್ಲಿ ಈಗ ಮತ್ತೆ ಉಪವಾಸ ವೃತ ಮಾಡಿದ್ದಾನೆ. ಧೀರ್ಘ ಆರು ದಿನಗಳ ಉಪವಾಸ ವೃತವದು. ಕಟ್ಟಿನಿಟ್ಟಿನಿಂದ ಮಾಡಿದ್ದಾನೆ. ನಾಳೆ ಅಮ್ಮ ಗಂಡನಮನೆ ಸೇರಿದ ನಂತರ ಮೊದಲ ಜಾವದಲ್ಲಿ ಕೋಣ ಬಲಿಕೊಡುವ ಕಾರ್ಯ ಸಾಗುತ್ತದೆ. ಬ್ರಾಹ್ಮಿ ಮಹೂರ್ತದ ಸುಸಂದರ್ಭದಲ್ಲಿ ವೃತನಿಷ್ಠ ಮಾರಪ್ಪ ಬಲಿಕಾರ್ಯ ನೆರವೇರಿಸುವವನಿದ್ದಾನೆ. ಜಾತ್ರೆಯ ಹಿಂದಿನ ರಾತ್ರಿ ಯಾಕೋ ಎಚ್ಚರವಾಯಿತು. ನೋಡಿದರೆ ಅರ್ಧಜಾವದ ಹೊತ್ತಿಗೆ ಮನೆಯ ಪಡಸಾಲೆಯಲ್ಲಿ ಮಾರಪ್ಪ ಬಂದು ಕುಳಿತುಬಿಟ್ಟಿದ್ದ. ಮಾತನಾಡಿಸಿದರೆ ಸರಿಯಾಗಿ ಮಾತನಾಡಲೂ ಇಲ್ಲ. ವ್ಯಾಕುಲಗೊಂಡಿದ್ದ ತರಹ ಕಂಡುಬರುತ್ತಿದ್ದ. ವಾರದ ಉಪವಾಸ ಅವನಲ್ಲಿ ಆ ರೀತಿಯ ಬದಲಾವಣೆ ತಂದಿರಬಹುದು ಎಂದು ನಾನು ಸುಮ್ಮನಾದೆ.
ಮಾರನೆಯ ಇಡೀ ದಿನ ಅಮ್ಮನ ಆಳೆತ್ತರದ ವಿಗ್ರಹ ತವರುಮನೆಯಲ್ಲಿ ಸ್ಥಾಪನೆಯಾಗಿತ್ತು. ಗ್ರಾಮಕ್ಕೆ ಗ್ರಾಮವೆ ಪೂಜೆ ಸಲ್ಲಿಸಿ, ಹಣ್ಣುಕಾಯಿ ಮಾಡಿಸಿತು. ರಾತ್ರಿ ರಾಜಬೀದಿಯ ಉತ್ಸವ. ಸೋಮಿನಕೊಪ್ಪದ ಪಟಕುಣಿತದವರು, ತುಮಕೂರಿನ ಸಮೀಪದ ಸಿದ್ದರಗುಡ್ಡದಿಂದ ಜೋಗಿಯರು, ಅಸಹ್ಯ-ಅಶ್ಲೀಲವಾಗಿ ಬಯ್ಯುವ ಅಸಾದಿಯರು, ಸೋಮನಕುಣಿತ, ರಂಗಕುಣಿತ ಮತ್ತು ಡೊಳ್ಳುಕುಣಿತದ ತಂಡದವರು, ಕಾಸರಗೋಡಿನ ಕಡೆಯ ಚಂಡೆಯವರು, ಜಾಂಜ್ ಮತ್ತು ನಗಾರಿಗಳ ಸಹಿತದ ಭವ್ಯ ಮೆರವಣಿಗೆಯನ್ನು ನೋಡುತ್ತಿದ್ದರೆ ಕಣ್ಣುಗಳೇ ಧನ್ಯ ಎನ್ನಿಸುತ್ತಿತ್ತು. ಆದರೆ ಈ ಸಡಗರಗಳ ಮದ್ಯೆ ಮಾದಿಗರ ಮಾರಪ್ಪನ ಸುಳಿವೇ ಇರಲಿಲ್ಲ. ಮಾರನೆಯ ದಿನದ ಮೊದಲ ಜಾವದಲ್ಲೆ ತಾಯಿಗೆ ಕೋಣದ ಬಲಿಯಾಗಬೇಕು ಅದಕ್ಕೆ ಮಾರಪ್ಪನ ಉಪಸ್ಥಿತಿಯಿರಬೇಕು. ತಡೆಯಲಾಗಲಿಲ್ಲ ಹೋಗಿ ನೋಡಿಕೊಂಡು ಬರೋಣವೆಂದು ಅವನ ಮನೆಗೆ ತೆರಳಿದೆ. ಬಾಗಿಲಿಗಿ ಬೀಗ ಜಡಿದಿತ್ತು. ಪಕ್ಕದ ಗುಡಿಸಲಲ್ಲಿ ವಾಸವಿದ್ದ ಮೈಮೇಲೆ ಶನಿ ದೇವರು ಬರುವ ಚೌಡಪ್ಪ “ನಿನ್ನೆ ಒತ್ತಾರೆಗೆ ಹೋದ. ಹಸಿನಬ್ಬಾ ಖಾನಿಗೆ ಹುಸಾರಿಲ್ಲ ಅಂತ ಹೋದವನು ಬಂದಿಲ್ಲ ಪರಸಪ್ಪ”ಅಂದ. ಯಾಕೋ ಎಡಗಣ್ಣು ಅದುರಿತು. ಸಾಬರ ಮನೆಕಡೆಗೆ ಹೆಜ್ಜೆ ಹಾಕಿದೆ.
ಮನೆಯಲ್ಲಿ ಅದಾಗಲೆ ಜನ ನೆರೆದಿದ್ದರು. ಮನಸ್ಸು ಕೇಡನ್ನು ಶಂಕಿಸಿತ್ತು. ಒಳಗಡಿಯಿಟ್ಟಾಗ ಅದೇ ಸತ್ಯವೂ ಆಯಿತು. ಎಂಬತ್ಕಾಲ್ಕು ವರ್ಷದ ಹಿರಿಯ ಜೀವ ಪ್ರಾಣ ಬಿಟ್ಟಿತ್ತು. ಮಾರಮ್ಮನ ಜಾತ್ರೆಯ ಆಚಾರವೇನೋ ಎಂಬಂತೆ ಪ್ರತಿ ಜಾತ್ರೆಗೆ ಮುಂಚಿನ ದಿನ ಒಂದು ಸಾವು ಗ್ರಾಮದಲ್ಲಿ ಆಗಿಯೇ ತೀರುತ್ತದೆ. ಈ ಬಾರಿ ಆಚಾರವಂತ, ನಿಷ್ಠ, ಪ್ರಾಮಾಣಿಕ ಸಜ್ಜನ ಮುಸಲ್ಮಾನನಾಗಿದ್ದ ಹಸಿನಬ್ಬಾ ಖಾನ್ ತನ್ನ ಜೀವ ತೊರೆದಿದ್ದ. ಅದಕ್ಕಿಂತ ಸೋಜಿಗದ ಸಂಗತಿ ಎಂದರೆ, ಹಸಿನಬ್ಬಾ ಖಾನಿಯ ಮನೆ ಮಂದಿ ನಿರ್ಲಕ್ಷ್ಯವೆಸಗಿ ದೂರವಿಟ್ಟಿದ್ದ ಮುದುಕನನ್ನು, ಕಡೆಯ ಕ್ಷಣದಲ್ಲಿ ಅಕ್ಕರೆಯಿಂದ ನೋಡಿಕೊಂಡು, ಸಾವಿನ ದೋಣಿ ಏರಿಸಿದ್ದವನು ಅವನ ಕುಟುಂಬದವನಲ್ಲ, ಜಾತಿಯವನಲ್ಲ, ಕೊನೆಗೆ ಧರ್ಮದವನೂ ಅಲ್ಲದ ಕೀಳು ಜಾತಿಯವನು ಎಂದು ಕರೆಸಿಕೊಂಡಿದ್ದ ಮನುಷ್ಯ. ಅವನ ಹೆಸರು ಮಾದಿಗರ ಮಾರಪ್ಪ.
ತಂದೆಯ ಓರಗೆಯವನಾದ ಮತ್ತು ಆಗಾಗ ಒಕ್ಕಲಾಟಗಳಲ್ಲಿ, ಶುಂಠಿ ಕಾಯುವಾಗ ಮಾಂಸದ ಊಟ ಹಾಕಿಸುತ್ತಿದ್ದ ಹಸಿನಬ್ಬಾ ಖಾನಿ, ಸಾವಿನ ಅಂಗಳದಲ್ಲಿದ್ದಾನೆ ಎನ್ನುವ ವಿಷಯ ಅರಿವಾಗುತ್ತಿದ್ದ ಹಾಗೆ ಖಿನ್ನನಾಗಿ ತನ್ನ ಮನೆಯ ಪಡಸಾಲೆಯಲ್ಲಿ ಮಾರಪ್ಪ ಕೂತ ದೃಶ್ಯ ಕಣ್ಣ ಮುಂದೆ ಬಂದಿತು. ನಿನ್ನೆ ರಾತ್ರಿ ಮಾರಪ್ಪನ ಮುಖದಲ್ಲಿದ್ದಿದ್ದು ತಂದೆಯೊಬ್ಬ ಸಾವಿನ ಮನೆಯ ಹಾದಿಯಲ್ಲಿದ್ದಾಗ ಮಗ ವ್ಯಕ್ತಪಡಿಸುವ ನೋವು. ಯಾರು ಹಸೀನಬ್ಬಾ ಖಾನಿ? ಯಾರು ಮಾದಿಗರ ಮಾರಪ್ಪ? ಎಲ್ಲಿಯ ಕೀಳುಕುಲ ಎಲ್ಲಿಯ ಧರ್ಮ?
ಮಾರನೆಯ ಬೆಳಿಗ್ಗೆ ಮೊದಲಿನ ಜಾವದಲ್ಲೇ ಎಳೆಯ ಕುರಿಯನ್ನು ಬಲಿ ನೀಡಲಾಯಿತು. ಮಾರಪ್ಪ ಆಗಲೆ ಕೋಣದ ಬಲಿಯ ಸಿದ್ದತೆಯಲ್ಲಿ ತೊಡಗಿದ್ದ. ಕೋಣದ ರುಂಡ ಬೇರ್ಪಡಿಸುವ ಹರಿತವಾದ ತಲವಾರನ್ನು ಎರಡು ಮೂರು ಸಲ ಮಸೆದು ಚೂಪುಗೊಳಿಸಿಕೊಂಡಿದ್ದ. ಕೆಲವೇ ಗಂಟೆಗಳ ಮೊದಲಿನ ಹಸಿನಬ್ಬಾ ಸಾವಿನ ವ್ಯಾಕುಲತೆ ಈಗ ಅವನ ಕಣ್ಣುಗಳಲ್ಲಿ ಕಾಣುತ್ತಿರಲಿಲ್ಲ. ಅದರ ಬದಲಿಗೆ ಒಂದು ತರಹದ ಸಾವಿನ ನಿರ್ಧಯತೆ ಅಲ್ಲಿ ಮನೆ ಮಾಡಿತ್ತು. ಕೋಣವನ್ನು ಬಲಿ ಕೊಡುವ ಸಂಪ್ರದಾಯವಿದೆಯಾದರೂ, ಕೋಣವೆಂದುಕೊಂಡೆ ಕಾಡಿನಿಂದ ಹಿಡಿದು ತಂದ ಹಂದಿಯನ್ನು ಬಲಿಕೊಡಲಾಗುತ್ತದೆ. ಮೊತ್ತಮೊದಲು ಬಲಿ ನೀಡುವ ಎಳೆಯ ಕುರಿ ಹಿರಿಯೂರು ರಾಮಣ್ಣ ಶಾಸ್ತ್ರಿಗಳ ಮನೆತನದಿಂದ ತಲೆತಲೆಮಾರಿನಿಂದಲೂ ಕೊಡಲಾಗುತ್ತಿತ್ತು. ಮೇಲಾಗಿ ಗ್ರಾಮದೇವತೆ ಮಾರಿಕಾಂಬಾ ರಾಮಣ್ಣ ಶಾಸ್ತ್ರಿಗಳ ಮನೆತನದ ಹೆಣ್ಣುಮಗಳು ಎನ್ನುವ ಪ್ರತೀತಿಯೂ ಇತ್ತು. ತವರಿನ ಮುಡಿಪು ಎನ್ನುವಂತೆ ರಾಮಣ್ಣ ಶಾಸ್ತ್ರಿಗಳು ಮೊದಲ ಕುರಿಯನ್ನು ಪ್ರತಿ ಜಾತ್ರೆಗೂ ನೀಡುತ್ತಿದ್ದರು. ಅದರ ಬಲಿಯಾದ ನಂತರವೇ ಕೋಣವನ್ನು ಬಲಿ ನೀಡುವುದು ವಾಡಿಕೆ.
ಜಾತ್ರೆಯ ಅಂಗಳಕ್ಕೆ ಮಾರಿಕೋಣವನ್ನು ಎಳೆದು ತರಲಾಯಿತು. ಅದಕ್ಕೂ ಮೊದಲೇ ಗ್ರಾಮಕ್ಕೆ ಸಂಭಂದಪಟ್ಟವರು, ಗ್ರಾಮದಲ್ಲಿ ವಾಸ ಮಾಡುವ ಜನರನ್ನ ಮಾತ್ರ ಅಂಗಳದ ಒಳಕ್ಕೆ ಬಿಟ್ಟಿದ್ದರು. ಜಾತ್ರೆಗೆ ಹದಿನೈದು ದಿನ ಮೊದಲು ಅಂಕೆ ಹಾಕುವಾಗ ಇದ್ದ ಜನರನ್ನು ಹೊರತು ಪಡಿಸಿ ಉಳಿದವರು ಆ ಬಲಿಯನ್ನು ನೋಡಬಾರದೆಂಬುದು ಗ್ರಾಮದ ಜಾತ್ರಾ ನಿಯಮವೂ ಆಗಿದೆ. ಜೊತೆಗೆ ಹುಲುಸು ಎಂದು ಕರೆಯುವ ಮಾರಿ ಬಲಿಯ ರಕ್ತದ ಚರುವನ್ನು ಯಾರಾದ್ರೂ ಪರೂರಿನವರು ಹಿಡಿ ಮುಷ್ಟಿಯಷ್ಟಾದರೂ ಕದ್ದೊಯ್ದರೆ ಆ ಊರಿನ ಸಮೃದ್ಧತೆ ಕದ್ದ ಊರಿಗೆ ಹೋಗುತ್ತದೆ ಎನ್ನುವ ನಂಬಿಕೆಯೂ ಇಲ್ಲಿದೆ.
ಅಂಗಳದ ತುದಿಯಲ್ಲಿ ಭವ್ಯ ಪೆಂಡಾಲಿನ ಕೆಳಗಿನ ಮಂಟಪದಲ್ಲಿ ಮಾರಮ್ಮನ ಆರಾಧನಾ ಪ್ರಣೀತ ಮೂರ್ತಿಯ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಲಾಯಿತು. ಬಲಿ ನೀಡುವ ವ್ಯಕ್ತಿಗೆ, ಆ ಸಂದರ್ಭದ ದೇವಿಯ ದೃಷ್ಠಿ ತಾಕಬಾರದು. ದೃಷ್ಠಿ ತೆಗೆಯುವ ಬಲಿತ ಹುಂಜದ ಕೋಳಿಯನ್ನು ಚೆನ್ನಯ್ಯ ಜನಾಂಗದ ಕಟ್ಟು ಮಸ್ತಾದ ಯುವಕನೊಬ್ಬ ಮಾರಿದೇವಿಯ ಎದುರಾಗಿ ಹಿಡಿದುಕೊಂಡ. ಬಲಿಯ ನಂತರ ಬಟ್ಟೆ ಸರಿಸಿದಾಗ ಆ ದೃಷ್ಠಿ ಕೋಳಿಯ ಮೇಲೆ ಬೀಳುತ್ತದೆ. ಕೋಳಿ ಸುಮ್ಮನೆ ಒಂದು ಸಲ ಅರಚಿ ಜೀವ ಬಿಡುತ್ತದೆ. ಮಾರಿತಾಯಿಯ ಮೂಗುತಿ ಕಳಚಿ ಬೀಳುತ್ತದೆ. ಅಲ್ಲಿಂದ ನಂತರ ಊರಮಾರಿ ವಿದವೆಯಾಗುತ್ತಾಳೆ.
ರಕ್ತಕೆಂಪು ವರ್ಣದ ಪಂಚೆ ಉಟ್ಟಿದ್ದ ಮಾರಪ್ಪ ತೋಳುಗಳಿಗೆ ವಿಭೂತಿ ಪಟ್ಟೆ ಬಳಿದುಕೊಂಡಿದ್ದ. ಹಣೆಯಲ್ಲಿ ದುಂಡನೆಯ ಆಕಾರದಲ್ಲಿ ಕುಂಕುಮ ಹೊಳೆಯುತ್ತಿತ್ತು. ಕೈನಲ್ಲಿದ್ದ ತಲವಾರು ಮಿರಗುಟ್ಟುತ್ತಿತ್ತು. ಕಣ್ಣಿಗೆ ಬಟ್ಟೆ ಕಟ್ಟಿದ್ದ ದೇವಿಯ ಮೂರ್ತಿಗೆ ಒಂದು ಬಾರಿ ನಮಿಸಿದವನೇ, ತನ್ನ ಬಲಿಷ್ಠ ತೋಳುಗಳ ಬಲವನ್ನು ತಲವಾರಿನ ಮೇಲೆ ಪ್ರಯೋಗಿಸಿ ಹಂದಿಯ ಕುತ್ತಿಗೆಯ ಮೇಲೆ ಹೇರುವುದಕ್ಕೂ, ಮಾರಮ್ಮನ ಪ್ರತಿಮೆಗೆ ಕಟ್ಟಿದ್ದ ಕಪ್ಪುಬಟ್ಟೆ ವಿನಾಕಾರಣ ಜಾರುವುದಕ್ಕೂ ಸರಿಹೋಯಿತು.
ಹಾಗೆಲ್ಲ ಸಡಿಲವಾಗಿ ಬಟ್ಟೆಯನ್ನು ಕಟ್ಟಿರುವುದಿಲ್ಲ. ನೆರೆದಿದ್ದ ಜನಸ್ತೋಮ ಒಂದು ಸಲ ಮುಗಿಲು ಮುಟ್ಟುವಂತೆ ಕಿರುಚಿ ಅಬ್ಬರಿಸಿದರು. ಹಂದಿಯ ತಲೆ ಎಗರಿ ಬಿದ್ದಿತ್ತು. ಎಲ್ಲರ ಚಿತ್ತ ಮಾರಪ್ಪನ ಮೇಲೆ ಮತ್ತು ಸತ್ತು ಬಿದ್ದು ಹಂದಿಯ ಮೇಲಿತ್ತು. ನಾನು ಮಾತ್ರ ಮಾರಿದೇವಿಯ ವಿಗ್ರಹವನ್ನು ದಿಟ್ಟಿಸಿದ್ದೆ. ಆಗಲೆ ವಿನಾಕಾರಣ ಮಾರಿಯ ಕಣ್ಣು ಕಟ್ಟಿದ್ದ ಕರಿಬಟ್ಟೆ ಜಾರಿಹೋಗಿತ್ತು; ಮಾರಿಯ ದೃಷ್ಟಿ ಮಾತ್ರ ಮಾದಿಗರ ಮಾರಪ್ಪನ ನೇರಕ್ಕೆ ಅಭಿಮುಖವಾಗಿತ್ತು. ಇದು ಒಳ್ಳೆಯದಲ್ಲ. ಆ ಸಂದರ್ಭದಲ್ಲಿ ಮಾರಿಯ ದೃಷ್ಠಿಗೆ ಈಡಾಗುವವನು ರಕ್ತ ಕಾರಿಕೊಂಡು ಸಾಯುತ್ತಾನೆ. ಮಾರಪ್ಪ ಸಾಯುತ್ತಾನಾ ಹಾಗಾದರೆ?
ಪ್ರತಿ ಬಾರಿಯಂತೆ ಈ ಸಲವೂ ಮಾರಮ್ಮನ ಮೂಗುತಿ ನಿಧಾನವಾಗಿ ಜಾರಿ ಭೂಮಿಗೆ ಬಿತ್ತು. ಸ್ಪಷ್ಟ ಸೂಚನೆ ದೇವಿ ವೈದವ್ಯ ಹೊಂದಿದಳು. ದೃಷ್ಠಿಗೆ ಇಟ್ಟಿದ್ದ ಕೋಳಿಯೂ ಒಂದು ಬಾರಿ ಅರಚಿ ಅಸುನೀಗಿತು. ಹಂದಿಯ ತಲೆ ನೆಲಕ್ಕೆ ಬೀಳುತ್ತಲೆ, ಬಸಿಯುವ ನೆತ್ತರನ್ನು, ಚರು ಬುಟ್ಟಿಗೆ ಸುರಿಸಲು ನಮ್ಮ ಉಪ್ಪಾರ ಜನಾಂಗದ ಯುವಕರು ಒಮ್ಮೆಲೆ ನುಗ್ಗಿದರು. ಯಾವುದು ಕಾಣುತ್ತಿಲ್ಲ ಕಣ್ಣಿಗೆ, ಮಾರಪ್ಪ ಕುಸಿದು ಬಿದ್ದಿದ್ದಾನೆ. ಎಲ್ಲರೂ ಆಯಾಸ ಬಳಲಿಕೆ ಆಗಿದೆ ಎಂದು ನೀರು ಕುಡಿಸುತ್ತಿದ್ದಾರೆ. ಮಾರಿದೇವಿಯ ದೃಷ್ಠಿ ತಾಕಿದೆ ಎನ್ನುವ ಅರಿವು ಅವರಲ್ಲಿ ಯಾರಿಗೂ ಆದ ಹಾಗೆ ತೋರುತ್ತಿಲ್ಲ. ಕಣ್ಣಿಗೆ ಕಟ್ಟಿದ್ದ ಬಟ್ಟೆ ಜಾರಿದ್ದು ಯಾರೂ ಗಮನಿಸಿಯೇ ಇಲ್ಲ. ಗಮನಿಸಿರುವ ನಾನು ತೂರಾಡುತ್ತಿದ್ದೇನೆ. ಕಣ್ಣು ಮಂಜಾಗುತ್ತಿದೆ. ಯಾರೊ ಕೂಗಿದಂತಾಗುತ್ತಿದೆಯಾದರೂ ಕೇಳುತ್ತಿಲ್ಲ. ಗೆಳೆಯ ಮಾರಪ್ಪ ಹೋಗಿಬಿಟ್ಟನಾ? ಸೂಕ್ಷ್ಮ ಪ್ರಜ್ಞೆ ಅದನ್ನೆ ಹೇಳುತ್ತಿದೆ.
ಕುಸಿದು ಬಿದ್ದೆ. ಎಚ್ಚರವಾಗುತ್ತಿದ್ದಂತೆ ಕಣ್ತೆರದು ನೋಡಿದರೆ ಶಾಸ್ತ್ರಿಗಳು ಎದುರಲ್ಲಿದ್ದರು. ಮುಖದಲ್ಲಿ ಆಳುಮಗನನ್ನು ಕಳೆದುಕೊಂಡ ಸಂಕಟ ಮನೆ ಮಾಡಿತ್ತು.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ