ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಟ್ಟಾಳೆ

ಇವತ್ತಿನ ಪ್ರಸ್ತುತ ಸನ್ನಿವೇಶದಲ್ಲಿ ಅನೇಕರು ಕೆಲಸ ಕಳೆದುಕೊಂಡು ತಮ್ಮ ಮೂಲ ಹಾಗೂ ಹಳ್ಳಿಗಳಿಗೆ ವಾಪಸ್ ಆಗುವದಕ್ಕೆ, ಅತ್ತ ಶುರುವಾಗುವ ಪ್ರತಿಕ್ರಿಯೆಯ ಬಗ್ಗೆ ಪರಿಣಾಮಕಾರಿಯಾಗಿ ಈ ಸಣ್ಣ ಕಥೆಯಲ್ಲಿ ಲೇಖಕ ಅನ್ಸಾರಿಯವರು ಚಿತ್ರಿಸಿದ್ದಾರೆ.
ಕೆ. ಎ. ಎಂ ಅನ್ಸಾರಿ
ಇತ್ತೀಚಿನ ಬರಹಗಳು: ಕೆ. ಎ. ಎಂ ಅನ್ಸಾರಿ (ಎಲ್ಲವನ್ನು ಓದಿ)

ಮುಟ್ಟಾಳೆ ಮಗನ ದೂರವಾಣಿ ಕರೆ ಸ್ವೀಕರಿಸಿದ ನಂತರ ಅಪ್ಪನ ಮನಸ್ಸಿಗೆ ನೆಮ್ಮದಿಯಿಲ್ಲ … ಮಡದಿ ಕೊರಪ್ಪೋಳು ದಣಿ ಮನೆಗೆ ಕೆಲಸಕ್ಕೆಂದು ಹೋದವಳು ಹಿಂತಿರುಗಲು ಇನ್ನೂ ಒಂದು ಗಂಟೆ ಬಾಕಿಯಿದೆ .. ಅದಲ್ಲಾ .. ಮಗ ಊರಿಗೆ ಬಂದು ಮಾಡುವುದಾದರೂ ಏನನ್ನು .. ? ಒಬ್ಬನೇ ಮಗ ಎಂದು ಓದಿಸಿ ಪೇಟೆಗೆ ಕಳುಹಿಸಿಯಾಯ್ತು … ಅವನ ವಿದ್ಯಾಭ್ಯಾಸಕ್ಕಾಗಿ ಅಲ್ಲವಾ ಇರೋ ಹೊಲ ಮಾರಿದ್ದು .. ? ಹೊಲವೇನೋ ನನ್ನ ಪಿತ್ರಾರ್ಜಿತ ಆಸ್ತಿ ಆಗಿರಲಿಲ್ಲ. ಅಂದು ದಣಿಯ ಹೊಲದಲ್ಲಿ ಹಗಲಿರುಳೆನ್ನದೆ ದುಡಿದು ಕಷ್ಟಪಟ್ಟು ಗೇಣಿ ಕೊಡಲು ಹರಸಾಹಸ ಪಡುವ ಹೊತ್ತಿನಲ್ಲಿ ಸರ್ಕಾರವೇ ದೇವರ ಸ್ವರೂಪದಲ್ಲಿ ಬಂದು .. “ನೋಡಪ್ಪ ಗುರುವಪ್ಪ .. ನೀನು ಇನ್ನು ಹೊಲದಲ್ಲಿ ಗೇಣಿ ಕೊಡಲು ಕಷ್ಟಪಡಬೇಡ. ಹೇಗೂ ಜೋಡಿ ಎತ್ತುಗಳಿವೆ. ಮಡದಿ ಜೊತೆಯಲಿದ್ದಾಳೆ. ಕಷ್ಟಪಟ್ಟು ದುಡಿ. ದುಡಿದಿದ್ದನ್ನು ನೀನೆ ತಿನ್ನು … ” ಉಳುವವನೇ ಹೊಲದೊಡೆಯ ಎಂದು ಘೋಷಣೆ ಬಂತಲ್ಲಾ … ಎಂದು ಖುಷಿಪಟ್ಟ ದಿನಗಳು.. ಆ ಸಂತಸ ಕೊನೆವರೆಗೂ ಇತ್ತಾ .. ?

ಖಂಡಿತಾ ಇರುತ್ತಿತ್ತು. ಮಗನನ್ನು ಓದಿಸಬಾರದಿತ್ತು .. ಛೇ .. ಮಗ ಬರುವುದು ಖುಷಿ ಅಲ್ಲವೇ .. ಗುರುವಪ್ಪ ಮಗದೊಮ್ಮೆ ಚಿಂತಿಸಿದ. ಕೊರಪ್ಪೋಳು ಸುಸ್ತಾಗಿ ಬಂದು ಜಗಲಿಯಲ್ಲಿ ಕೂತದ್ದು ಗುರುವಪ್ಪ ಗಮನಿಸಿರಲಿಲ್ಲ. ಮುಟ್ಟಾಳೆ (ಕಂಗಿನ ಹಾಳೆಯ ಶಿರಸ್ತ್ರಾಣ) ತಲೆಯಿಂದ ಕೆಳಗಿರಿಸಿ ತಲೆ ತುರಿಸುತ್ತಿದ್ದಳು. “ಕೊರಪ್ಪೊಳು .. .. ನೀನು ಜಾಸ್ತಿ ತುರಿಸಬೇಡ. ಬಾಕಿ ಉಳಿದಿದಿರುವ ಒಂದಿಷ್ಟು ಬಿಳಿಗೂದಲೂ ಉದುರಿ ಹೋದೀತು .” ಗುರುವಪ್ಪನ ಮಾತಿನಲ್ಲಿ ವ್ಯಂಗ್ಯವಿತ್ತು. ನೋಡು .. ನಿನ್ನ ಮಗ ಊರಿಗೆ ಬರುತ್ತಿದ್ದಾನಂತೆ. ಒಬ್ಬನೇ ಅಲ್ಲ .. ನಿನ್ನ ಸೊಸೆ ನಿನ್ನ ಒಬ್ಬನೇ ಒಬ್ಬ ಮೊಮ್ಮಗ ಕೂಡಾ ಬರುತ್ತಿದ್ದಾರಂತೆ. ಈಗ ತಾನೇ ಫೋನು ಮಾಡಿದ್ದ. ಅಲ್ಲಿ ರೋಗ ಹರಡುತ್ತಿದೆಯಂತೆ ಗೊತ್ತಿಲ್ವಾ .. ಆಹಾ .. ಬರ್ಲಿ ಬಿಡು ನಿಮಗೇನು ಎಂದು ಕೊರಪ್ಪೋಳು ವಿನ ಉತ್ತರ. ಗುರುವಪ್ಪ ಸುಮ್ಮನಾಗಲಿಲ್ಲ .. ಫೋನು ಮಾಡಿ ಹೇಳು ಅವನಿಗೆ .. ಇಲ್ಲಿ ಬಂದು ಮಾಡಲು ಕೆಲಸವೇನಿಲ್ಲ. ಇದ್ದ ಹೊಲ ಮಾರಿಯಾಗಿದೆ. ಊರಿನ ಎಲ್ಲಾ ಕೆಲಸಕ್ಕೂ ಪರವೂರಿನ ಭಯ್ಯಾ ನವರು ಸುಲಭ ಸಂಬಳದಲ್ಲಿ ಸಿಗುತ್ತಾರೆ. ಸಾಗುವಾಳಿ (ಕೃಷಿ ಚಟುವಟಿಕೆ) ಎಲ್ಲಾ ಕಡೆ ನಿಂತು ಹೋಗಿದೆ. ದಣಿಗಳ ಗದ್ದೆಗಳು ಕೂಡಾ ಪಡೀಲು (ಪಾಳು ) ಬಿದ್ದಿದೆ. ಎಣೆಲು , ಪಾಂಡಿ ಸುಗ್ಗಿ ಕೊಳಕೆ ಏನೂ ಇಲ್ಲ .. ನೊಗ ನಾಯರು ಗೆದ್ದಲು ಹಿಡಿದಿದೆ. ನೊಗ ನಾಯರು ಹಿಡಿವ ಕೈಗಳ ದೇಹ ಸೋತು ಸುಣ್ಣವಾಗಿ ಹಾಸಿಗೆ ಹಿಡಿದಿದೆ .. ಎಲ್ಲಾ ಅವನಿಗೆ ಮನದಟ್ಟು ಮಾಡಿ ಕೊಡು. ಕೊರಪ್ಪೊಳು ಮೌನವಾದಳು. ಅದೆಲ್ಲಾ ಬಿಡು .. ಆ ಮುಟ್ಟಾಳೆಯ ಪಾಕೀಟು ನೋಡು ಏನಾದ್ರೂ ಉಳಿದಿದ್ದರೆ ಹೋಗಿಪಳ್ಳಿ ಬ್ಯಾರಿಯ ಅಂಗಡಿಯಿಂದ ಸ್ವಲ್ಪ ಬಚ್ಚಿರೆ(ವೀಳ್ಯದೆಲೆ) ಪುಗರೆ (ಹೊಗೆಸೊಪ್ಪು) ತಗೊಂಬಾ. ಬರುವಾಗ ಒಂದು ಕಟ್ಟು ದಿನೇಶ್ ಬೀಡಿ ಕೂಡಾ ಮರೀಬೇಡ. ಕೊರಪ್ಪೊಳು ಮರು ಮಾತಿಲ್ಲದೆ ಅಂಗಡಿಯತ್ತ ಹೆಜ್ಜೆಹಾಕಿದಳು. ಬೋಳು ಮಂಡೆಯ ಪಳ್ಳಿ ಬ್ಯಾರಿ ಬೀಸತ್ತಿ (ಚಿಕ್ಕ ಚೂರಿ) ತಲೆ ತುರಿಸುತ್ತಿದ್ದ. ಬಚ್ಚಂಗಾಯಿ(ಕಲ್ಲಂಗಡಿ), ಕಬ್ಬು ಎಲ್ಲವನ್ನೂ ಪೀಸ್ ಪೀಸ್ ಮಾಡಲು ಕೂಡಾ ಅದೇ ಬೀಸತ್ತಿ ಬೇಕು. ಕೊರಪ್ಪೋಳು ಹೊರಗಡೆ ಕೂತು ಮಗ್ಗಿ ಹೇಳ ತೊಡಗಿದಳು .. 50 ಚಾಹುಡಿ, ಕಾಲ್ ಕೆಜಿ ಸಕ್ಕರೆ, ಕಾಲ್ ಕೆಜಿ ಬೇಳೆ, 5 ರೂಪಾಯಿ ನೀರುಳ್ಳಿ,….. ಪಳ್ಳಿ ಬ್ಯಾರಿ ಒಂದೊಂದು ಸಾಮಾನು ತೆಗೆದಿಟ್ಟು ಚೀಲಕ್ಕೆ ಹಾಕುತ್ತಿದ್ದರು. ಕೊನೆಗೆ ಲೆಕ್ಕ ಮಾಡಿ ನೋಡುವಾಗಿ ರೂಪಾಯಿ ನೂರು ದಾಟಿತ್ತು … ಮುಟ್ಟಾಳೆಯ ಪಾಕೇಟಿನಲ್ಲಿ ಇರುವುದು ಮಾತ್ರ ನೂರು. ನೂರರ ಗರಿ ನೋಟು ಕೊಟ್ಟು ಉಳಿದದ್ದು ಲೆಕ್ಕಪುಸ್ತಕ .. ” ಕೊರಪ್ಪೋಳು … ಲೆಕ್ಕ ಹನುಮಂತನ ಬಾಲದ ಹಾಗೆ ಉದ್ದವಾಗುತ್ತಾ ಇದೆ. ಈಗ ವ್ಯಾಪಾರ ಕಡಿಮೆ ಆದಷ್ಟು ಬೇಗ ಸ್ವಲ್ಪ ಸ್ವಲ್ಪ ವಾದರೂ ಜಾಸ್ತಿ ಕೊಟ್ಟು ಲೆಕ್ಕ ಮುಗಿಸು … ” ಕೊರಪ್ಪೊಳು ನಕ್ಕು ಸುಮ್ಮನಾದಳು. ತನ್ನನ್ನು ತಾನೇ ವಿಮರ್ಶಿಸುತ್ತಾ ಮನೆಯತ್ತ ಹೆಜ್ಜೆ ಹಾಕುವಾಗ ಅವಳ ಮನಸ್ಸಲ್ಲಿ ಸಾವಿರಾರು ಪ್ರಶ್ನೆಗಳು ಉಧ್ಭವಿಸಿತು … ಮದುವೆಯಾಗಿ ಸುಮಾರು ಐವತ್ತು ವರುಷ. ಇರುವುದು ಒಬ್ಬನೇ ಒಬ್ಬ ಮಗ. ಅವನನ್ನು ಓದಿಸಿ ಏನು ಸಿಕ್ಕಿದೆ .. ? ಊರುಬಿಟ್ಟು ಹೋದ. ನನ್ನ ಮದುವೆಯ ಮೂರು ದಿವಸಕ್ಕೆ ಹೊಲದಲ್ಲಿ ಕೆಲಸಕ್ಕೆ ಕರೆದುಕೊಂಡು ಹೋದರು. ಇಂದೂ ಹೊಲದಲ್ಲಿಯೇ ಇದ್ದೇನೆ. ಮುಕ್ತಿ ಸಿಕ್ಕಿದೆಯಾ .. ? ಸಿಕ್ಕಿತ್ತು ಸ್ವಲ್ಪ ಸಮಯ. ದುಡಿಯುತ್ತಿದ್ದೆ ಸ್ವಂತ ಹೊಲದಲ್ಲಿ ಸ್ವಲ್ಪ ದಿನ .. ಅದು ಶಾಶ್ವತವಾಯಿತಾ .. ? ಅದೂ ಇಲ್ಲ. ವಾರಾಂತ್ಯಕ್ಕೆ ಕೊಡುವ ಸೇರು ಭತ್ತವನ್ನು ಕುಟ್ಟಿ ಕುಟ್ಟಿ ಬೇಯಿಸಿ ಅಕ್ಕಿ ಮಾಡಿ , ಅನ್ನ ಮಾಡಿ ಮಗನನ್ನು ಓದಿಸಿದೆ. ದೀಪಾವಳಿಗೋ ಅಷ್ಟಮಿಗೋ ದಣಿ ಮನೆಯ ತೆಂಗಿನಕಾಯಿ .. ಆ ದಿನ ಮಾತ್ರ ಕಾಯಿ ಹಾಕಿದ ಸಾರು. ಉಳಿದ ದಿನ ಒಣ ಮೀನು, ಗಂಜಿ ಊಟ. ಕನಸು ಕಾಣುವುದು ಮಾತ್ರ ಇನ್ನೂ ನಿಂತಿಲ್ಲ. ಈಗ ಮಗ ಬೇರೆ ಕೆಲಸ ಕಳೆದುಕೊಂಡು ಊರಿಗೆ ಮರಳುತ್ತಾನಂತೆ.. ಈಗಲೇ ಸಾಲದಲ್ಲಿ ಮುಳುಗಿದ್ದೇವೆ. ಅವನಲ್ಲೂ ರೊಕ್ಕ ಇಲ್ಲದಿದ್ದರೆ ಗತಿಯೇನು .. ? ಅವನು ಊರಿಗೆ ಬಂದು ನಿಲ್ಲುವುದಾದರೆ ಕಷ್ಟಪಟ್ಟು ಓದಿಸಿದ್ದಾದರೂ ಯಾಕಾಗಿ .. ? ಇಲ್ಲೇ ಇದ್ದಿದ್ದರೆ ಸಿಕ್ಕಿದ ಹೊಲವಾದರೂ ಉಳಿಯುತ್ತಿತ್ತು … ಚಿಂತಿಸಿ ನಡೆದಾಗ ಮನೆ ತಲುಪಿದ್ದೇ ತಿಳಿಯಲಿಲ್ಲ .. ಕೊರಪ್ಪೋಳು … ಬಂದ್ಯಾ ಎಂದಾಗ ಸೀರೆ ಸೆರಗಿನಲ್ಲಿ ಕಣ್ಣೆರನೊರಸಿ ಹಾಂ … ಎಂದು ಒಳ ನುಗ್ಗಿದಳು.

ರಾತ್ರಿ ಪೂರಾ ನಿದ್ದೆಯಿಲ್ಲ. ಇಬ್ಬರೂ ಮಗನ ವಿಷಯದ ಬಗ್ಗೆ ಚಿಂತಿಸುತ್ತಾ ರಾತ್ರಿ ಕಳೆದಿದ್ದರು. ಬೆಳಿಗ್ಗೆ ಏಳುವಾಗ ಗಂಟೆ ಏಳು ಕಳೆದಿತ್ತು … ಅಂಗಳದಲ್ಲಿ ಕಾರು ನಿಂತ ಸದ್ದು. ಮಗ ಸೊಸೆ ಮತ್ತು ಮೊಮ್ಮಗ ಕಾರಿನಿಂದ ಇಳಿದು ಬರುತ್ತಿದ್ದರು. ಅವರನ್ನು ಕಂಡಾಗ ಹಿಂದಿನ ದುಃಖವನ್ನು ಕ್ಷಣದ ನೋಟ ಮರೆಯುವಂತೆ ಮಾಡಿತ್ತು. ಮುಂದೇನು ಎನ್ನುವ ಚಿಂತೆಯನ್ನು ಮರೆತು ಮೊಮ್ಮಗನನ್ನೇ ನೋಡುತ್ತಾ ಕಣ್ತುಂಬಿದಳು.

ಜಗುಲಿ ಮೂಲೆಯಲ್ಲಿರುವ ಮುಟ್ಟಾಳೆ ಅವರನ್ನು ನೋಡಿ ನಕ್ಕಂತೆ ಕೊರೊಪ್ಪೋಳುವಿಗೆ ಭಾಸವಾಯಿತು.