- ದಿ ಬ್ಯಾಂಕಿಂಗ್ ವಾರಿಯರ್ಸ್.. - ಆಗಸ್ಟ್ 24, 2020
- ಆತ್ಮವನ್ನು ಗುರುತಿಸುವ ಬಗೆ - ಆಗಸ್ಟ್ 11, 2020
- ಬೆಣ್ಣೆ ಕದ್ದನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ - ಆಗಸ್ಟ್ 10, 2020
ರಾಧಿಕಾ ತುಸು ಕಂದು ಬಣ್ಣದವಳಾದರೂ ಸುಂದರ ಹೆಣ್ಣು. ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಕಳೆದುಕೊಂಡು ಸೋದರಮಾವನ ನೆರಳಿನಲ್ಲಿ ಬೆಳೆದವಳು. ಮಂಗಳೂರಿನ ಹುಡುಗಿ ಬಿ.ಕಾಂ.ನಲ್ಲಿ ಮೊದಲನೆಯ ರ್ಯಾಂಕ್ ಪಡೆದಿದ್ದಳು. ಎಲ್ಲರೂ ಕೆಲಸವನ್ನು ಹುಡುಕಿಕೊಂಡು ಹೋದರೆ, ಬ್ಯಾಂಕಿನ ನೌಕರಿ ಅವಳನನ್ನೇ ಹುಡುಕಿ ಬಂದಿತ್ತು. ಆಫೀಸರ್ ಹುದ್ದೆಗೆ ಆಸೆಪಟ್ಟು ಬೇರೆ ರಾಜ್ಯಕ್ಕೆ ಹೋಗುವ ಬದಲು ನಮ್ಮದೇ ಕನ್ನಡ ನಾಡಿನಲ್ಲಿದ್ದರೂ ಸರಿ ಎಂದು ಗುಮಾಸ್ತೆ ಹುದ್ದೆಗೆ ಸೇರಿದ್ದಳು. ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿಯೇ ಉದ್ಯೋಗವಾಗಿತ್ತು. ಕೆಲಸ ಸಿಕ್ಕ ಒಂದೇ ವರ್ಷದಲ್ಲಿ ತನ್ನೂರಿನವನೇ ಆದ ರತ್ನಾಕರನೊಂದಿಗೆ ಮದುವೆಯೂ ಆಗಿ ಹೋಗಿತ್ತು. ಹಕ್ಕಿಯಂತೆ ಮನ ಬಂದಂತೆ ಸುತ್ತಾಡಿ, ಹಕ್ಕಿಯಂತೆ ಹಾರಾಡಬೇಕೆಂಬ ಕನಸು ಕಟ್ಟಿಕೊಂಡಿದ್ದವಳನ್ನು ಮದುವೆ ಆಗಿದ್ದವನು ಮಿನಿಸ್ಟರ್ ಅವರ ಆಪ್ತ ಕಾರ್ಯದರ್ಶಿ.
ಮದುವೆಯಾದ ಒಂದು ವಾರದಲ್ಲೇ ಕೆಲಸಕ್ಕೆ ಹಾಜರಾಗಿದ್ದ. ಬೆಳಗ್ಗೆ 7ಕ್ಕೆ ಹೋದರೆ ಸಂಜೆ 10ಕ್ಕೆ ಮನೆಗೆ ವಾಪಸ್ಸು ಮನೆಗೆ ಬರುವುದು. ಮನೆಗೆ ಬರುವಾಗಲೇ ಸುಸ್ತು ಅಂತ ಊಟ ಮಾಡಿ ಮಲಗಿಬಿಡುತ್ತಿದ್ದ. ಅವರಿಗೆ ಒಂದೇ ವರ್ಷದಲ್ಲಿ ಒಂದು ಹೆಣ್ಣು ಮಗುವೂ ಆಗಿತ್ತು. ಈಕೆ ಕೆಲಸಕ್ಕೆ ಹೋಗುತ್ತಿದ್ದರಿಂದ ಮಗುವನ್ನು ಅತ್ತೆಯೇ ಅಂದ್ರೆ ಮಗುವಿನ ಅಜ್ಜಿ ನೋಡಿಕೊಳ್ಳುತ್ತಿದ್ದರು. ಮಗುವೂ ಅಜ್ಜ ಅಜ್ಜಿಗೆ ತುಂಬಾ ಹೊಂದಿಕೊಂಡುಬಿಟ್ಟಿತ್ತು. ಅಪ್ಪ ಅಮ್ಮ ಇಲ್ಲದಿದ್ದರೂ ಅದು ಅವಾಂತರ ಮಾಡುತ್ತಿರಲಿಲ್ಲ.
ಜಾಣೆ ರಾಧಿಕಾ ಎರಡೇ ವರ್ಷಗಳಲ್ಲಿ ಬ್ಯಾಂಕಿನ ಎಲ್ಲ ಕೆಲಸಗಳನ್ನೂ ಕಲಿತು, ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಬೆಳಗ್ಗೆ ಎಲ್ಲರಿಗಿಂತ ಮೊದಲೇ ಬಂದು ಎಲ್ಲ ಕೆಲಸವನ್ನೂ ಮಾಡುತ್ತಿದ್ದಳು. ಇತರರಿಗೂ ಸಹಾಯ ಮಾಡುತ್ತಿದ್ದಳು. ಮಧ್ಯಾಹ್ನ 2.30ರ ನಂತರ ಏನೂ ಕೆಲಸವಿಲ್ಲದೇ ಅವರಿವರೊಂದಿಗೆ ಹರಟೆ ಹೊಡೆಯುತ್ತಿದ್ದಳು.
ಆಗಲೇ ನಮ್ಮ ನಾಯಕ ಅಲ್ಲಿಗೆ ಎಂಟ್ರಿ ಕೊಟ್ಟ. ಸಾಂಬಮೂರ್ತಿ ತುಮಕೂರಿನ ತರುಣ. ವಯಸ್ಸಿನಲ್ಲಿ ರಾಧಿಕಾ ಗಿಂತ ಎರಡು ವರ್ಷ ದೊಡ್ಡವನು. ಆಗಿನ್ನೂ ಅದೇ ಬ್ಯಾಂಕಿಗೆ ಕೆಲಸಕ್ಕೆ ಸೇರಿದ್ದ. ಸ್ವಲ್ಪ ಮಂದ ಬುದ್ಧಿಯವನು. ಏನೇ ಹೇಳಿಕೊಟ್ಟರೂ, ಮೊದಲನೆ ಬಾರಿಗೆ ತಪ್ಪು ಮಾಡುತ್ತಿದ್ದ. ಎರಡೆರಡು ಬಾರಿ ಹೇಳಿಕೊಡಬೇಕು. ಅವನಿಗೆ ಕೆಲಸ ಹೇಳಿ ಕೊಡಲು ಮೇಲಧಿಕಾರಿಗಳು ರಾಧಿಕಾಗೆ ಹೇಳಿದ್ದರು. ಒಮ್ಮೆ ಲೆಡ್ಜರ್ ಪೋಸ್ಟ್ ಮಾಡಲು ತಿಳಿಸಿಕೊಟ್ಟಿದ್ದಳು. ಅದೇನೋ ಅವನು ಒಂದೇ ಸಮನೆ ಬರೀತಾನೇ ಇದ್ದ. ಊಟದ ಸಮಯದಲ್ಲೂ ಮೇಲೇಳಲಿಲ್ಲ. ಕೆಲಸ ಜಾಸ್ತಿ ಇರಬೇಕು ಅಂತ ಈಕೆ ಸುಮ್ಮನಾಗಿದ್ದಳು. ಸಂಜೆ 4ರ ವೇಳೆಗೆ ಇನ್ನೂ ಕುಳಿತೇ ಇದ್ದ. ಅದೇನು ಮಾಡ್ತಿದ್ದಾನೆ ನೋಡು ಅಂತ ಮೇಲಧಿಕಾರಿಗಳು ರಾಧಿಕಾ ಹೋಗಿ ನೋಡ್ತಾಳೆ… ಎಲ್ಲ ತಪ್ಪು ತಪ್ಪಾಗಿ ಪೋಸ್ಟ್ ಮಾಡಿದ್ದಾನೆ. ಡೆಬಿಟ್ ಅಂದ್ರೆ ಏನು ಕ್ರೆಡಿಟ್ ಅಂದ್ರೆ ಏನು ಅಂತ ಗೊತ್ತಿಲ್ಲ. ಎಲ್ಲೆಲ್ಲೋ ಏನೇನನ್ನೋ ಬರೆದುಬಿಟ್ಟಿದ್ದಾನೆ. ಆ ದಿನದ ಅಕೌಂಟ್ ಬ್ಯಾಲೆನ್ಸ್ ಮಾಡದೇ ಮನೆಗೆ ಹೋಗುವಂತಿಲ್ಲ. ಏನು ಮಾಡೋದು. ಮೇಲಧಿಕಾರಿಗಳಿಗೆ ಈ ವಿಷಯವಿನ್ನೂ ಗೊತ್ತಿಲ್ಲ. ತನ್ನ ಸುಪರ್ದಿಗೆ ಕೊಟ್ಟಿರುವ ಈತನನ್ನೂ ಬೈಯುವಂತಿಲ್ಲ. ಸರಿಯಾಗಿ ಕೆಲಸ ಯಾಕೆ ಹೇಳಿಕೊಟ್ಟಲ್ಲ ಅಂತ ತನ್ನ ಮೇಲೆಯೇ ಬರುವುದು ಎಂದುಕೊಂಡು, ತಡಬಡಾಯಿಸಿಕೊಂಡು, ಎಲ್ಲ ಕೆಲಸವನ್ನೂ ಮೊದಲಿನಿಂದ ತಾನೇ ಮುಗಿಸುವ ಹೊತ್ತಿಗೆ ಸಂಜೆ 7 ಆಗಿತ್ತು. ಕೆಲಸ ಮುಗಿಸಿದೆನ್ನುವ ಸಮಾಧಾನ ಅವಳಿಗಾದರೂ, ತಪ್ಪು ಮಾಡಿದ ಭಾವ ಆತನಲ್ಲಿ ಮೂಡಿತ್ತು. ಇದಕ್ಕೆ ತಪ್ಪಿನ ಕಾಣಿಕೆ ಎಂದು ಹೊಟೆಲ್ಗೆ ಕರೆದೊಯ್ದು, ತಿಂಡಿ ಕಾಫಿ ಕೊಡಿಸುವೆನೆಂದಿದ್ದ. ಈಕೆ ಬೇಡ ಎಂದೂ ಮನೆಗೆ ಹೋಗಲು ಸಮಯ ಆಗಿದೆಯೆಂದರೂ ಆತ ಕೇಳದೇ ಕರೆದೊಯ್ದಿದ್ದ. ಅದೇಕೋ ಅವನ ಮಾತಿಗೆ ಮೀರಲು ಅವಳಿಂದಾಗಿರಲಿಲ್ಲ. ಅಂದು ಮನೆಗೆ ತಡವಾಗಿ ಹೋಗಿದ್ದರೂ ಯಾರೂ ಏನೂ ಕೇಳಲಿಲ್ಲ. ಮಿಗಿಲಾಗಿ ಮಾವನವರು, ಕೆಲಸ ಎಲ್ಲಾ ಹೇಗಿದೆಯಮ್ಮ, ಊಟ ಮಾಡು, ಸರಿಯಾಗಿ ವಿಶ್ರಾಂತಿ ತಗೊ ಎಂದಿದ್ದರು. ರಾತ್ರಿ ಹತ್ತು ಘಂಟೆಗೆ ಬಂದ ಗಂಡನಿಗೆ ಇದ್ಯಾವುದರ ಪರಿವೆಯೂ ಇಲ್ಲ. ಮಿನಿಸ್ಟರ್ ಟೂರ್, ಜನಗಳ ಕಂಪ್ಲೇಂಟ್ ನೋಡಿಕೊಳ್ಳುವುದು, ತನಗೆ ಬೇಕಾದವರಿಗೆ ಬೇಕಾದ ಕಡೆ ಕೆಲಸಗಳನ್ನು ಮಾಡಿಸಿಕೊಡುವುದು, ಇದೇ ಅವನ ಜೀವನವಾಗಿತ್ತು.
ಮುಂದಿನ ದಿನಗಳಲ್ಲಿ ಬ್ಯಾಂಕಿನ ಎಲ್ಲ ಕೆಲಸಗಳನ್ನೂ ಸಾಂಬಮೂರ್ತಿಗೆ ಹೇಳಿಕೊಟ್ಟಳು. ಅವನೂ ಬಹಳ ಮುತುವರ್ಜಿಯಿಂದ ಕಲಿತನು. ಇಬ್ಬರೂ ಬ್ಯಾಂಕಿನ ಆಸ್ತಿಯಂತಾದರು. ಅವನು ಒಳ್ಳೆಯ ಆಟಗಾರನೂ ಆಗಿದ್ದನು. ಬ್ಯಾಂಕಿನ ಟೀಮಿಗೆ ಟೇಬಲ್ ಟೆನ್ನಿಸ್ ಮತ್ತು ಕೇರಂ ಪಂದ್ಯಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಆಡುತ್ತಿದ್ದನು. ಪ್ರತಿದಿನ 4 ಘಂಟೆಯ ನಂತರ ಪ್ರಾಕ್ಟೀಸ್ ಮಾಡಲು ಅವನಿಗೆ ಅನುಮತಿ ಕೊಟ್ಟಿದ್ದರು.
ಇತ್ತ ಮನೆಯಲ್ಲಿ ಅತ್ತೆಯ ದರ್ಬಾರು ಜೋರಾಗಿತ್ತು. ಮನೆ ಕೆಲಸ, ಮನೆಯ ವ್ಯವಹಾರ ಎಲ್ಲವನ್ನೂ ತನ್ನ ಹದ್ದುಬಸ್ತಿನಲ್ಲಿಟ್ಟು ಕೊಂಡಿದ್ದಳು. ಪಾಪದ ಮಾವ, ಅತ್ತೆ ಹೇಳಿದಂತೆ ಕೇಳಿಕೊಂಡಿದ್ದನು. ಆದರೂ ಆಗೊಮ್ಮೆ ಈಗೊಮ್ಮೆ, ’ಏನಮ್ಮಾ, ಬ್ಯಾಂಕಿನಲ್ಲಿ ತುಂಬಾ ಕೆಲಸ ಅಂತ ಕೇಳಿರುವೆ, ಸಂಜೆ ಏಳಾದರೂ ಮನೆಗೆ ಬರೋದು ಕಷ್ಟವಂತೆ, ನೀನು ಕೆಲಸದ ಕಡೆಗೆ ಹೆಚ್ಚಿನ ಗಮನ ಕೊಡು, ಹೆಚ್ಚಿನ ಹೆಸರು ಮತ್ತು ಕೀರ್ತಿ ಗಳಿಸು’ ಎನ್ನುತ್ತಿದ್ದರು. ಆಗ ಅತ್ತೆ, ’ಮನೆ ಮತ್ತು ಮಗುವಿನ ಬಗ್ಗೆ ನಾನು ಮತ್ತು ಇವರೂ ನೋಡಿಕೊಳ್ತೀವಿ’, ಎನ್ನುತ್ತಿದ್ದರು.
ಮುಂದಿನದು ನಿರೀಕ್ಷಿಸಿ…
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ