- ರೋಆಲ್ಡ್ಡಾಲ್ ನ “ಸ್ಕಿನ್” ಮತ್ತು ಶೈಮ್ ಸೂಚಿನ್ - ಸೆಪ್ಟೆಂಬರ್ 27, 2022
- ರಿಕ್ಷಾ ಪುರಾಣ - ಫೆಬ್ರುವರಿ 5, 2022
- ವಾಘಾ ಗಡಿಯಲ್ಲಿ ಒಂದು ಮಧ್ಯಾಹ್ನ - ನವೆಂಬರ್ 28, 2021
ಶೈಮ್ ಸೂಚಿನ್-Chaim Soutine ( ೧೮೯೩-೧೯೪೩) ಎಕ್ಸ್ ಪ್ರೆಷನಿಸಂ ಶೈಲಿಯನ್ನಳವಡಿಸಿಕೊಂಡು ಕಲಾಕೃತಿಗಳನ್ನು ರಚಿಸಿದ ಅದ್ಭುತ ಚಿತ್ರಕಾರ. ಲಂಡನ್ ನ ಕ್ರಿಸ್ಟಿ’ಸ್ ನಲ್ಲಿಯ ಹರಾಜಿನಲ್ಲಿ ಈತನ ಬೀಫ್ ಬಗೆಗಿನ ತೈಲವರ್ಣ ಚಿತ್ರ ೧೩.೮ ಮಿಲಿಯನ್ ಡಾಲರುಗಳಿಗೆ ಮಾರಾಟವಾಯಿತೆಂದರೆ ಕಲಾ ಸಾಮ್ರಾಜ್ಯದಲ್ಲಿ ಈ ಚಿತ್ರಗಳ ಮೌಲ್ಯದ ಅಂದಾಜಾಗುತ್ತದೆ. ಈ ತೈಲವರ್ಣಗಳ ಒಂದು ಸೀರೀಸ್ ಬಿಡಿಸಲು ಈತ ತನ್ನ ಮನೆಯೊಳಗೇ ಬೀಫ್ ತೂಗು ಹಾಕಿ, ನಿತ್ಯ ಅದರ ಮೇಲೆ ರಕ್ತ ಹನಿಸಿ ಅದು ತಾಜಾ ಆಗಿರುವಂತೆ ನೋಡಿಕೊಳ್ಳುತ್ತಿದ್ದನಂತೆ. ರಕ್ತದ ಬಿಂದುಗಳು ಬಾಗಿಲಿನಿಂದ ಹೊರಕ್ಕೆ ಹರಿದು ಬಂದುದನ್ನು ನೋಡಿದ ನೆರೆಮನೆಯವರು ಸೂಚಿನ್ ನ ಕೊಲೆ ಆಗಿದೆ ಎಂದು ಹುಯಿಲೆಬ್ಬಿಸಿದ್ದರಂತೆ.. ಹೊರಗೆ ಬಂದು ಸೂಚಿನ್ ಸ್ವಚ್ಛತೆಗಿಂತ ಕಲಾತ್ಮಕತೆ ಮುಖ್ಯ ಎಂದು ಎಲ್ಲರ ಬಾಯಿ ಮುಚ್ಚಿಸಿದ್ದರಂತೆ !! ಆ ಮಟ್ಟದ ಒಬ್ಸೆಶನ್ ಮತ್ತು ಪ್ರತಿಭೆ ಮೇಳವಿಸಿದ್ದ ಕಲಾಕಾರ ಸೂಚಿನ್ .
ರೊಆಲ್ಡ್ ಡಾಲ್ ತನ್ನ “ಸ್ಕಿನ್” ಎಂಬ ಸಣ್ಣ ಕತೆಯಲ್ಲಿ ಸೂಚಿನ್ ಅನ್ನು ಮುಖ್ಯ ಪಾತ್ರವನ್ನಾಗಿ ಚಿತ್ರಿಸಿ ಕತೆ ಹೆಣೆದಿದ್ದಾನೆ . ಲೇಖಕರ ಕಥನ ಶೈಲಿಗೂ , ಚಿತ್ರಕಾರನ ಕಲಾತ್ಮಕ ಅಭಿವ್ಯಕ್ತಿಗೂ ಇರುವ ಸಾಮ್ಯತೆಯನ್ನು ಕತೆಯಲ್ಲಿ ಸೃಜನಾತ್ಮಕವಾಗಿ ಬಳಸಿಕೊಳ್ಳಲಾಗಿದೆ.
ಈ ಕತೆ ಶುರುವಾಗುವುದು ಪ್ಯಾರಿಸ್ ನ “ರು ಡಿರಿವೊಲಿ” ಎನ್ನುವ ಅತ್ಯುಚ್ಚ ಮಟ್ಟದ ಅಂಗಡಿ ಮುಂಗಟ್ಟುಗಳಿರುವ ಒಂದು ಬೀದಿಯಲ್ಲಿ, ೧೯೪೬ ರಲ್ಲಿ. ಮೊದಲ ಕೆಲವು ಸಾಲುಗಳಲ್ಲಿಯೇ ಲೇಖಕ, ಮುಖ್ಯ ಪಾತ್ರ ಡ್ರಿಯೋಲಿ ಕಡು ಚಳಿಯಲ್ಲಿ ಬೆಚ್ಚನೆಯ ಬಟ್ಟೆಗಳಿಲ್ಲದೆ , ಹಸಿದು ಕಂಗಾಲಾಗಿ ದೀನ ಪರಿಸ್ಥಿತಿಯಲ್ಲಿರುವವನೆಂದು ಸೂಚಿಸಿಬಿಡುತ್ತಾರೆ . ಕಿಟಕಿಗಳಲ್ಲಿ ಪ್ರದರ್ಶಿಸಲಾದ ಬೆಲೆಬಾಳುವ ವಸ್ತುಗಳತ್ತ ನಿರ್ಲಕ್ಷ್ಯದಿಂದ ನೋಡುತ್ತಲೇ ಪ್ರಯಾಸದಿಂದ ಕಾಲೆಳೆಯುತ್ತಾ ನಡೆಯುವ ಡ್ರಿಯೋಲಿಯ ಗಮನವನ್ನು ಸೆಳೆಯುವುದು ಗ್ಯಾಲರಿಯೊಂದರ ಕಿಟಕಿಯಲ್ಲಿ ತೂಗುಹಾಕಿದ್ದ ಚಿರಪರಿಚಿತ ಶೈಲಿಯದ್ದು ಎಂದೆನಿಸಿದ ಒಂದು ಲ್ಯಾಂಡ್ ಸ್ಕೇಪ್ . ಮೂವತ್ತು ವರ್ಷಗಳ ಹಿಂದೆ ತನ್ನ ಪ್ರಿಯ ಸ್ನೇಹಿತನಾಗಿದ್ದ ಯುವ ಚಿತ್ರಕಾರ ಸೂಚಿನ್ ನ ಛಾಪು ಆ ಚಿತ್ರದಲ್ಲಿ ಅವನಿಗೆ ಎದ್ದು ಕಾಣುತ್ತದೆ . ಹಳೆಯ ನೆನಪುಗಳು ಒಂದರ ಹಿಂದೊಂದು ನುಗ್ಗಿ ಬರುತ್ತವೆ .
ಫ್ರಾನ್ಸ್ ನ ಫಾಲ್ಗೆರ್ ಎನ್ನುವ ಊರಿನಲ್ಲಿ ಡ್ರಿಯೋಲಿ ಟ್ಯಾಟೂ ಕಲಾವಿದನಾಗಿ ಜೀವನ ಸಾಗಿಸುತ್ತಿದ್ದ ಕಾಲವದು. ಸೂಚಿನ್ ನ ವರ್ಣಚಿತ್ರಗಳೆಂದರೆ ಅವನಿಗೆ ಬಹಳ ಇಷ್ಟವಾಗುತ್ತಿತ್ತು . ಸೂಚಿನ್ ಗೆ ಡ್ರಿಯೋಲಿಯ ಹೆಂಡತಿ ಜೋಸಿ ಅಂದರೆ ಇಷ್ಟ . ಅವಳನ್ನು ರೂಪದರ್ಶಿಯಾಗಿ ಬಳಸಿಕೊಳ್ಳುತ್ತಿದ್ದ . ಅದೊಂದು ಸಂಜೆ ಡ್ರಿಯೋಲಿಯ ಕೈಗೆ ನಿತ್ಯಕ್ಕಿಂತ ಜಾಸ್ತಿ ಕಾಸು ಬಂದಾಗ ಮೂವರು ಸೇರಿ ವೈನ್ ಕುಡಿದು ಮೋಜು ಮಾಡುವ ಹುಕಿ ಬರುತ್ತದೆ . ಪಾನಮತ್ತ ಡ್ರಿಯೊಲಿಗೆ ಸೂಚಿನ್ ನ ಕೈಯಲ್ಲಿ ತನ್ನ ಬೆನ್ನ ಮೇಲೆ ಜೋಸಿಯ ಚಿತ್ರ ಬಿಡಿಸಿ ಎಂದೆಂದೂ ಅಳಿಸಿಹೋಗದಂತೆ ಟ್ಯಾಟೂ ಮಾಡಿಸಿಕೊಳ್ಳುವ ಬಲವತ್ತಾದ ಅಸೆ ಇದ್ದಕ್ಕಿದ್ದಂತೆ ಕಾಡಿಸಿಬಿಡುತ್ತದೆ. ವಿಷಣ್ಣ ವದನದ ಮಿತಭಾಷಿ ಸೂಚಿನ್ ಮೊದಲು ಒಪ್ಪದಿದ್ದರೂ ಕೊನೆಗೆ ಒಪ್ಪುತ್ತಾನೆ . ಡ್ರಿಯೋಲಿ ಅವನಿಗೆ ಟ್ಯಾಟೂ ಗನ್ ಮತ್ತು ಶಾಯಿ ಬಳಸುವುದನ್ನು ನಿಮಿಷಗಳಲ್ಲಿ ಹೇಳಿಕೊಡುತ್ತಾನೆ. ಜೋಸಿಯ ಮುಖದ ಚಿತ್ರವನ್ನು ಇಡೀ ಬೆನ್ನ ಮೇಲೆ ಬೆನ್ನಹುರಿಯನ್ನು ಪಕ್ಕೆಲುಬುಗಳನ್ನು ಚತುರತೆಯಿಂದ ಬಳಸಿ ಮೊದಲು ಕುಂಚದಿಂದ ಅರ್ಧ ಗಂಟೆಯೊಳಗೆ ಚಿತ್ರ ಮೂಡಿಸುತ್ತಾನೆ. ಇಡೀ ರಾತ್ರಿ ಕೂತು ಟ್ಯಾಟೂ ಗನ್ ಹಾಗೂ ಶಾಯಿ ಬಳಸಿ ಹಸಿರು , ಸ್ವರ್ಣ ,ನೀಲ , ಕಪ್ಪು,ಕೆಂಪು ಬಣ್ಣಗಳಿಂದ ತುಂಬಿಸಿ ಅದ್ಭುತವಾದ ಚಿತ್ರ ಮೂಡಿಸುತ್ತಾನೆ. ಸೂಚಿನ್ ನ ಎಲ್ಲಾ ಚಿತ್ರಗಳಂತೆ ಇದೂ ಹುಡುಗಿಯ ತದ್ರೂಪವಾಗಿರದೆ ನೋಡುಗರನ್ನು ಕಾಡುವ ಪರಿಣಾಮಕಾರಿ ಭಾವವೊಂದನ್ನು ಮೂಡಿಸುವಂತಿರುತ್ತದೆ . ಸ್ವತಃ ಸೂಚಿನ್ ಗೆ ಚಿತ್ರ ಇಷ್ಟವಾಗಿ ಅವನು ತನ್ನ ಸಹಿಯನ್ನೂ ಬೆನ್ನ ಮೇಲೆ ಟ್ಯಾಟೂ ಮಾಡಿಬಿಡುತ್ತಾನೆ.
ಮೊದಲ ಮಹಾಯುದ್ಧದಲ್ಲಿ ಪಾಲ್ಗೊಳ್ಳಲು ಹೋದ ಡ್ರಿಯೋಲಿ ಮರಳಿ ಬಂದಾಗ ಸೂಚಿನ್ ದೊಡ್ಡ ಚಿತ್ರಕಾರನಾಗಲು ಹೋಗಿಯಾಗಿರುತ್ತದೆ . ಡ್ರಿಯೋಲಿ ಮತ್ತು ಜೋಸಿ ಬೇರೊಂದು ಊರಲ್ಲಿ ಟ್ಯಾಟೂ ಮಾಡಿಕೊಂಡು ಜೀವಿಸುತ್ತಾರೆ . ಎರಡನೇ ಮಹಾಯುದ್ಧ ಸಮಯದಲ್ಲಿ ಜೋಸಿ ಸಾಯುತ್ತಾಳೆ . ಜರ್ಮನ್ನರು ಬಂದಮೇಲೆ ಟ್ಯಾಟೂ ಹಾಕಿಸಿಕೊಳ್ಳುವವರಿಲ್ಲದೆ ಡ್ರಿಯೋಲಿ ನಿರುದ್ಯೋಗಿಯಾಗುತ್ತಾನೆ . ಪ್ಯಾರಿಸ್ ಗೆ ಬರುತ್ತಾನೆ .ಇದುವರೆಗೆ ತನ್ನ ಬೆನ್ನ ಮೇಲೊಂದು ಟ್ಯಾಟೂ ಇದೆಯೆಂದೇ ಮರೆತುಬಿಟ್ಟಿದ್ದವನಿಗೆ ಮೇಲ್ಮಟ್ಟದ ಆರ್ಟ್ ಗ್ಯಾಲರಿಯಲ್ಲಿ ಸೂಚಿನ್ ಚಿತ್ರಗಳ ಪ್ರದರ್ಶನ ನಡೆಯುತ್ತಿದ್ದುದು ಅಚ್ಚರಿ ಹುಟ್ಟಿಸುತ್ತದೆ, ಬೆನ್ನ ಮೇಲಣ ಟ್ಯಾಟೂ ನೆನಪಾಗುತ್ತದೆ. ಹಿಂಜರಿಕೆಯಿಂದಲೇ ಒಳ ಹೋಗುವ ಯೋಚನೆ ಮಾಡುತ್ತಿದ್ದವನನ್ನು ಗ್ಯಾಲರಿಯ ಮಾಲಕ ನಿಷ್ಠುರವಾಗಿ ಹೊರದಬ್ಬಲು ಪ್ರಯತ್ನಿಸಿದಾಗ ಒಮ್ಮೆಲೇ ಸಿಡಿದು ಅವನಿಂದ ತಪ್ಪಿಸಿಕೊಂಡು ಗ್ಯಾಲರಿಯುದ್ದಕ್ಕೂ ಓಡಿ ತನ್ನ ಮೇಲಂಗಿ ಕಳಚಿ ನೆರೆದ ಕಲಾಭಿಮಾನಿಗಳಿಗೆ ಬೆನ್ನು ತೋರುತ್ತಾನೆ . ಒಂದು ಕ್ಷಣ ದಿಗ್ಭ್ರಮೆ ತುಂಬಿದ ಮೌನ ಎಲ್ಲೆಡೆ . ಈಗ ಗ್ಯಾಲರಿಯ ವಾತಾವರಣ ಬದಲಾಗುತ್ತದೆ . ಸಾಕ್ಷಾತ್ ಸೂಚಿನ್ ನ ಕುಂಚದಿಂದ ಮೂಡಿದ ಚಿತ್ರವನ್ನು ಬೆನ್ನ ಮೇಲೆ ಹೊತ್ತವನ ತೊಗಲಿಗಾಗಿ ಭಯಾನಕ ಪೈಪೋಟಿ ಶುರುವಾಗುತ್ತದೆ . ಸರ್ಜರಿಯ ಮೂಲಕ ಚರ್ಮವನ್ನು ತೆಗೆದು ಸ್ಕಿನ್ ಗ್ರಾಫ್ಟಿಂಗ್ ಮಾಡುವ ಸಲಹೆ ಡೀಲರ್ ನದ್ದಾದರೆ , ಧನಿಕನೋರ್ವ ಕಾನ್ ನಲ್ಲಿರುವ ತನ್ನ ಬ್ರಿಸ್ಟಲ್ ಎಂಬ ಹೋಟೆಲಿನಲ್ಲಿ ಐಷಾರಾಮಿ ಜೀವನ ನಡೆಸುವ ಆಮಿಷಗಳನ್ನು ನಾನೋಪಾದಿಯಲ್ಲಿ ಒಡ್ಡುತ್ತಾ ಕೊನೆಗೂ ಡ್ರಿಯೋಲಿಯನ್ನು ತನ್ನೊಂದಿಗೆ ಕರೆದೊಯ್ಯುವಲ್ಲಿ ಸಫಲನಾಗುತ್ತಾನೆ .
ಮುಂದೆ ಕೆಲವೇ ವಾರಗಳೊಳಗೆ ಸೂಚಿನ್ ನ ಈ ಅಪರೂಪದ ಚಿತ್ರ ಚಂದದ ಚೌಕಟ್ಟಿನೊಂದಿಗೆ ಬೆನೊಸ್ ಐರಿಸ್ ನಲ್ಲಿ ಮಾರಾಟವಾಯಿತು ಹಾಗೆಯೇ ಕಾನ್ ನಲ್ಲಿ ಬ್ರಿಸ್ಟಲ್ ಎಂಬ ಹೋಟೆಲೇ ಇಲ್ಲವೆಂದು ಸೂಚಿಸುತ್ತಾ , ಡ್ರಿಯೋಲಿ ಈಗ ತಾನು ಬಯಸಿದ ಐಷಾರಾಮಿ ಜೀವನವನ್ನು ಅನುಭವಿಸುತ್ತಿರಬಹುದು ಎಂದುಕೊಳ್ಳುತ್ತಿದ್ದೇನೆ ಎನ್ನುವ ನಿರೂಪಕನ ಆಶಯದೊಂದಿಗೆ ಕತೆ ಮುಕ್ತಾಯವಾಗುತ್ತದೆ.
ಬಹು ಆಯಾಮಗಳುಳ್ಳ ಈ ಕಥೆ ಕಲೆಯ ಸಾರ್ಥಕತೆ ಯಾವುದರಲ್ಲಿದೆ ಎನ್ನುವ ಪ್ರಶ್ನೆಯನ್ನು ಓದುಗರ ಮನದಲ್ಲಿ ಮೂಡಿಸುತ್ತದೆ . ಗ್ಯಾಲರಿಯಲ್ಲಿ ಹಂತ ಹಂತವಾಗಿ ಡ್ರಿಯೋಲಿಯ ಬೆನ್ನ ಮೇಲಿನ ಚಿತ್ರಕ್ಕಾಗಿ ಚೌಕಾಸಿ ನಡೆಯುವುದು , ಸ್ವತಃ ಒಬ್ಬ ಕಲಾವಿದನಾಗಿದ್ದ, ಸೂಚಿನ್ ನ ಪ್ರತಿಭೆಯನ್ನು ಗುರುತಿಸಿದ ಗುಣಗ್ರಾಹಿ ಡ್ರಿಯೋಲಿ ಈ ಚೌಕಾಸಿಯಲ್ಲಿ ಸ್ವಇಚ್ಛೆಯಿಂದ ಪಾಲ್ಗೊಳ್ಳುವುದು ಕೊನೆಗೆ ಬಲಿಯಾಗಿಬಿಡುವುದು ಇನ್ನಿಲ್ಲದಂತೆ ಕಾಡುತ್ತದೆ . ಐಷಾರಾಮಿ ಬದುಕಿನ ಪ್ರಲೋಭನೆ ಅವನನ್ನೂ ನುಂಗಿಯೇಬಿಟ್ಟಿತು . “ಸಾಕಷ್ಟು ದುಡ್ಡು ಕೊಟ್ಟರೆ ಈಗಲೇ ಕೊಲ್ಲಿಸಿಕೊಳ್ಳಲು ಒಪ್ಪಿಗೆ ಕೊಡಬಹುದೇನೋ ಈತ ಯಾರಿಗ್ಗೊತ್ತು ?” ಗುಂಪಿನಲ್ಲಿ ನೆರೆದವನೊಬ್ಬ ಆಡುವ ಈ ಮಾತು ಹಣಕ್ಕಾಗಿ ಹಪಹಪಿಸುವ ಮನುಷ್ಯ ಸ್ವಭಾವದ ವ್ಯಾಖ್ಯೆ ಯಂತೆಯೇ ಕಾಣುತ್ತದೆ
ಶುದ್ಧ ಸಂತಸದ ಒಂದು ಸೃಜನಶೀಲ ಕ್ಷಣದಲ್ಲಿ ಅಪ್ರತಿಮ ಕಲಾವಿದನೊಬ್ಬನ ಕುಂಚದ ಮೂಲಕ ಮೂಡಿ ಬಂದ ಚಿತ್ರ ಮುಂದೊಂದು ದಿನ ವ್ಯಾಪಾರದ ಸರಕಾಗಿ ಮನುಷ್ಯ ಜೀವದ ಉಳಿವಿನ ಕಾಳಜಿಯಿಲ್ಲದೆ ಧನ ಪಿಪಾಸುವೊಬ್ಬನ ಮೂಲಕ ಬಿಕರಿಯಾಗುವ ಕತೆ ಮೂಡಿಸುವ ವಿಷಾದ ಸೂಚಿನ್ ನ ಚಿತ್ರ ಕಲೆಯಲ್ಲಿ ಕಾಣಿಸುವಂತೆಯೇ ರೊಆಲ್ಡ್ ಡಾಲ್ ನ ಲೇಖನಿಯ ಮೂಲಕ ಓದುಗರ ಮನದಾಳದಲ್ಲಿಳಿದು ಮಾಸದಂತೆ ಉಳಿದುಬಿಡುತ್ತದೆ.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ