ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಲಖನೌನ ಬಡಾ ಇಮಾಂಬರಾ

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಭಾರತ ಸರ್ಕಾರದಿಂದ ಪ್ರಾಯೋಜಿತ ಮನರೇಗಾ ಅನ್ನೋ ಒಂದು ಯೋಜನೆ ಬಗ್ಗೆ ನೀವು ಕೇಳಿರಬಹುದು. ಗ್ರಾಮೀಣ ಪ್ರದೇಶದ ನಿರುದ್ಯೋಗಿ ರೈತರು, ಕಾರ್ಮಿಕರಿಗೆ ರಸ್ತೆ ನಿರ್ಮಾಣ ದಂತಹ ಸರಕಾರಿ ಕೆಲಸಗಳಲ್ಲಿ ತೊಡಗಿಸಿಕೊಂಡು ದುಡಿತಕ್ಕೆ ಪ್ರತಿಯಾಗಿ ಸಂಬಳ ಕೊಟ್ಟು ಬದುಕು ಸಾಗಿಸಲು ಅನುವು ಮಾಡಿಕೊಡುವುದು. ಹೆಚ್ಚು ಕಮ್ಮಿ ಇದೆ ತರದ ಯೋಜನೆ ಹದಿನೇಳು ನೂರಾ ಎಂಬತ್ತೈದರ ಸುಮಾರಿಗೆ ಉತ್ತರದ ಅವಧ್ ಪ್ರಾಂತದಲ್ಲಿ ರೂಢಿಯಿತ್ತು.

ಆಗ ನವಾಬ ಅಸಫ್ ಉದ್ದೌಲ ಎಂಬಾತ ರಾಜ್ಯವಾಳುತ್ತಿದ್ದ. ಆ ಸಮಯದಲ್ಲಿ ಜನಸಾಮಾನ್ಯರೂ ಕೂಡ ಅಲ್ಲದೇ ಶ್ರೀಮಂತರೂ ಕೂಡ ಆಹಾರಕ್ಕಾಗಿ ಅಭಾವ ಮತ್ತು ಹಣಕಾಸಿನ ತೀವ್ರ ಬಿಕ್ಕಟ್ಟು ಉಂಟಾಗಿತ್ತು. ಈ ನಿಟ್ಟಿನಲ್ಲಿ ಪರಿಹಾರಾರ್ಥವಾಗಿ ನವಾಬನ ಆಜ್ಞೆಯಂತೆ ಒಂದು ದೊಡ್ಡ ಕಟ್ಟಡದ ನಿರ್ಮಾಣ ರಾಜಧಾನಿ ಲಖನೌನಲ್ಲಿ ಆರಂಭವಾಗುತ್ತದೆ.  ಸಾಮಾನ್ಯ ಜನರು ದಿನವೀಡೀ ಕಟ್ಟಿದ್ದನ್ನ ನಾಲ್ಕನೇ ದಿನದ ರಾತ್ರಿ ಪ್ರತಿಷ್ಟಿತ ವರ್ಗಕ್ಕೆ ಸೇರಿದವರು ಕೆಡವಿ ಹಾಕುತ್ತಿದ್ದರು. ಕಾರಣ, ನಿರ್ಮಾಣ ಕಾರ್ಯ ಸತತವಾಗಿ ಸಾಗುತ್ತಲೇ ಇರಲಿ ಹಾಗೂ ಪ್ರಜೆಗಳಿಗೆ ಕೆಲಸ ಹಾಗೂ ತಕ್ಕ ಕೂಲಿ ಸಿಗುತ್ತಿರಲಿ ಎನ್ನುವ ಉದ್ದೇಶವಷ್ಟೆ. ಈ ಪ್ರೊಜೆಕ್ಟ್ ಸುಮಾರು ಇಪ್ಪತ್ತು ಸಾವಿರ ಜನಕ್ಕೆ ಉದ್ಯೋಗದ ಅವಕಾಶ ಕಲ್ಪಿಸಿಕೊಟ್ಟಿತ್ತು. 

ಹೀಗೆ ಕಟ್ಟಿದ್ದು ಕೆಡವಿದ್ದು ಮಾಡಿದ್ರೂ ಸಹ ಮೊಘಲ್ ವಾಸ್ತುಶಿಲ್ಪವನ್ನು ಸರಿಗಟ್ಟುವ ಒಂದು ಬೃಹತ್ ನಿರ್ಮಾಣ ಪೂರ್ತಿಯಾಗುತ್ತದೆ. ಅದರ ಹೆಸರು ಬಡಾ ಇಮಾಂಬರಾ. ಸಿಮೆಂಟ್ ಮತ್ತು ಕಬ್ಬಿಣವಿಲ್ಲದೇ ಕಟ್ಟಿದ ಬಡಾ ಇಮಾಂಬರಾಗೆ ಯಾವುದೇ ಸ್ಥಂಬಗಳ ಆಧಾರವಿಲ್ಲ ಎಂದರೆ ಅಚ್ಚರಿಯಾಗುತ್ತದೆ.  ಇವೆಲ್ಲ ಒತ್ತಟ್ಟಿಗಿರಲಿ, ಬಡಾ ಇಮಾಂಬರಾ ದ ಮುಖ್ಯ ಅಚ್ಚರಿಯೇನು ಗೊತ್ತೇ, ಅದೇ ಭೂಲ್ ಬುಲೈಯ್ಯ ಅಥವಾ ಜಟಿಲ ಚಕ್ರವ್ಯೂಹ.  ಇವತ್ತಿಗೂ ಲಖನೌ ನಲ್ಲಿ ಕಾಣ ಸಿಗುವ, ಅನೇಕ ಅಂತಸ್ತುಗಳ ಈ ಕಟ್ಟಡದ ಒಳಗೆ ಅನೇಕ ಆಂತರಿಕ ದ್ವಾರಗಳಿವೆ. ಮೆಟ್ಟಿಲು ಇಳಿಯುತ್ತಾ ಹೋದರೆ ನೀವು ತಲುಪುವುದು ಎತ್ತರದ ಭಾಗಕ್ಕೆ, ಮೇಲಕ್ಕೆ ಮೆಟ್ಟಿಲು ಹತ್ತುತ್ತಾ ಹೋದಂತೆ ನೀವು ಕೆಳಕ್ಕಿಳಿಯುತ್ತೀರಿ. ಒಂದು ವೇಳೆ ಹೊರಗೆ ಹೋಗೊಣ ಅಂದ್ರೆ..ಉಹೂಂ..ಸುತ್ತುತ್ತಾನೇ ಇರುತ್ತೀರಿ, ಯಾವ ದಾರಿಗಳೂ ನಿಮ್ಮನ್ನು ಹೊರಕ್ಕೆಕರೆದೊಯ್ಯುವುದಿಲ್ಲ. ನುರಿತವರು ಅಥವಾ ಗೈಡ್ ಗಳ ಸಹಾಯನೇ ಬೇಕು ನಾನೂರ ಎಂಬತ್ತೊಂಬತ್ತು ಬಾಗಿಲುಗಳಿಲ್ಲದ ದ್ವಾರಗಳ ಚಕ್ರ ವ್ಯೂಹದಿಂದ ಹೊರ ಬರೋದಕ್ಕೆ. ಪ್ರವಾಸಿಗರಿಗೆಲ್ಲಾ ಈ ಒಂದು ಸವಾಲು ಕಾದಿರುತ್ತದೆ. 

ಇದೆ ಕಟ್ಟಡದಲ್ಲಿ ನವಾಬನ ಹಾಗೂ ಕಟ್ಟಡದ ವಾಸ್ತು ತಂತ್ರಜ್ಞಾನ ಸಮಾಧಿಯೂ ಕಾಣಸಿಗುತ್ತದೆ. ಈ ಕಟ್ಟಡದ ಹೊಂದಿಕೊಂಡಂತೆ ನೆರೆಯಲ್ಲಿ ಪ್ರವೇಶ ದ್ವಾರಕ್ಕೆ ಬರೋಬ್ಬರಿ ೪೫ ಡಿಗ್ರೀ ಕೋನಾಂತರದಲ್ಲಿ ಒಂದು ನೀರಿನ ಕೊಳವಿದೆ. ಪ್ರವೇಶ ದ್ವಾರದಲ್ಲಿ ಯಾರೇ ಬಂದರೂ ಸ್ಪಷ್ಟ ಪ್ರತಿಫಲನ ಕಟ್ಟಡದ ಒಳಗೆ ಇರೋರಿಗೆ ಕಾಣಿಸುತ್ತಿತ್ತು. ಯಾವ ಕ್ಶಣದಲ್ಲೂ ಕೆಂಪು ಸಮವಸ್ತ್ರದ ಬ್ರಿಟಿಷ್ ಸಿಪಾಯಿಗಳು ನುಗ್ಗುವ ಸಾಧ್ಯತೆ ಇತ್ತು ತಾನೇ.  ಹಾಗೆಯೇ ನವಾಬ ಅಸಫ್ ಉದ್-ದೌಲನ ಬಗ್ಗೆ ಕೂಡ ಒಂದು ಮಾಹಿತಿಯಿದೆ.

ಈತನಿಗೆ ತನ್ನಷ್ಟಕ್ಕೆ ತಾನು ನಗುವ ಹಾಗುವ ಇನ್ನೊಬ್ಬರನ್ನು ಬೈದು, ಹಂಗಿಸಿ, ಇತರರಿಂದಲೂ ಬೈಸಿಕೊಳ್ಳುವ ಒಂದು ಹುಚ್ಚುತನ ಇತ್ತಂತೆ. ಯಾರು ಹೆಚ್ಚು ಕೆಟ್ಟದಾಗಿ ಅಶ್ಲೀಲವಾಗಿ ಬೈತಾರೋ ಅಂತಹ ಬೈಗುಳ ಬಂಟರಿಗೆ ಬಹುಮಾನ ಬೇರೆ. ಅರಮನೆಯ ಕೆಲಸದೋರ ಜೊತೆಗೂ ಮದ್ಯ ಕುಡಿಯುತ್ತಿದ್ದನಂತೆ. ಹಾಗಿದ್ದರೂ ನವಾಬನ ಔದಾರ್ಯದ ಬಗ್ಗೆ ಹೇಳಿಕೊಳ್ಳಲು ಕಮ್ಮಿ ಏನಿರಲಿಲ್ಲ. ಜಿಸ್ ಕೋ ನ ದೇ ಮೌಲಾ ಉಸ್ ಕೋ ದೇ ಅಸಫ್ ಉದ್ ದೌಲಾ… (ದೇವರು ಕೊಡದಿದ್ದರೂ ಅಸಫ್ ಉದ್ ದೌಲಾ ಕೊಡುತ್ತಾನೆ.) ಇವತ್ತಿಗೂ ಲಖನೌದ ಅನೇಕ ಅಂಗಡಿಕಾರರು ಬೆಳಗ್ಗೆ ನವಾಬನ ಹೆಸರೆತ್ತಿಕೊಂಡೇ ಅಂಗಡಿ ಬಾಗಿಲು ತೆರೆಯುತ್ತಾರಂತೆ.