ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ

ಕೆ.ಜನಾರ್ದನ ತುಂಗ
ಇತ್ತೀಚಿನ ಬರಹಗಳು: ಕೆ.ಜನಾರ್ದನ ತುಂಗ (ಎಲ್ಲವನ್ನು ಓದಿ)

ನವರಾತ್ರಿಗೆ ಊರಿಗೆ ಹೋಗಿದ್ದೆ. ದೇವಸ್ಥಾನದ ಹೊರಗೆ ಅಶ್ವತ್ಥಕಟ್ಟೆಯ ಮೇಲೆ ಪುರಾಣಿಕರು ಕುಳಿತಿದ್ದರು. ಇವರು ಸೂತಪುರಾಣಿಕರಲ್ಲ; ಸೂತಕದಲ್ಲಿದ್ದ ಪುರಾಣಿಕರು. ಸೂತಕವಿದ್ದ ಕಾರಣ ದೇವಸ್ಥಾನದ ಒಳಗೆ ಹೋಗದೆ ಅಶ್ವತ್ಥಕಟ್ಟೆಯ ಮೇಲೆಯೇ ಕುಳಿತು ಎದುರು ಬಂದವರನ್ನು ಹಿಡಿದು ಕೊರೆಯುತ್ತಿದ್ದರು. ಇಂದು ನನ್ನ ಸರದಿ.

“ಬಾರಯ್ಯಾ, ಅಪರೂಪಕ್ಕೆ ದರ್ಶನ, ಬಾ, ಕುಳಿತುಕೋ”

ಪುರಾಣಿಕರ ಮಾತನ್ನು ಮೀರುವುದುಂಟೆ? ಕಟ್ಟೆಯ ಮೇಲೆ ಕುಳಿತೆ. ನನ್ನಲ್ಲಿದ್ದ ಕಿಡಿಗೇಡಿ ಎಚ್ಚೆತ್ತ.

“ಪುರಾಣಿಕರೆ, ನೀವು ಇಷ್ಟೆಲ್ಲ ಪುರಾಣ ಹೇಳಿದ್ದೀರಿ; ಅಧ್ಯಾತ್ಮ ಎಂಬುದು ಏನು ಎಂದು ನಿಮಗೇನಾದರೂ ಅರ್ಥವಾಯಿತೆ?” ಎಂದು ಪ್ರಶ್ನೆಯ ಬಾಣ ಎಸೆದೆ.

“ನಿನಗೆ ನಮ್ಮ ಭಾಷೆಯಲ್ಲಿ ಹೇಳಿದರೆ ಅರ್ಥವಾಗುವುದಿಲ್ಲ, ನಿಮ್ಮ ಭಾಷೆಯಲ್ಲಿಯೇ ಹೇಳುತ್ತೇನೆ, ಕೇಳು” ಪುರಾಣಿಕರ ಮುಖದಲ್ಲಿ ಹೊಸ ಉತ್ಸಾಹ ಕಾಣಿಸಿತು. ಪುರಾಣಿಕರು ಗುರಾಣಿ ಹಿಡಿದರೋ, ಕತ್ತಿ ಹಿರಿದರೋ – ನನಗೆ ತಿಳಿಯಲಿಲ್ಲ. ಕಿವಿಯೊಪ್ಪಿಸಿ ಕುಳಿತೆ.

ಸೃಷ್ಟಿಯ ಆದಿಯಲ್ಲಿ ಅವನೊಬ್ಬನೇ ಇದ್ದನು. ಭೂತ, ಭವಿಷ್ಯ, ವರ್ತಮಾನಗಳೆಂಬುದಿರಲಿಲ್ಲ. ಅವನು ಯೋಚಿಸಿದನು, ಹೊಸದೊಂದು ಲೋಕವನ್ನು ಸೃಷ್ಟಿಸುವೆನೆಂದು.

ಅವನು ತಪಸ್ಸು ಮಾಡಿದನು. ಬಿಸಿಯೇರಿತು. ಪೆನ್ನು ತೆಗೆದುಕೊಂಡು ಒಂದು ಹಾಳೆಯ ಮೇಲೆ ತನ್ನ ಮಾನಸಪುತ್ರ ವಿಶ್ವನನ್ನು ಸೃಷ್ಟಿಸಿದನು. ಬಹುಕಾಲ ವಿಶ್ವ ತಾನೊಬ್ಬನೇ ಇದ್ದ. ಅವನಿಗೆ ಭಯ ಆವರಿಸಿತು. ಬದುಕು ನೀರಸವಾಯಿತು. ವಿಶ್ವ ಅವನಿಗೆ ತನ್ನ ಗೋಳನ್ನು ಹೇಳಿಕೊಂಡ. ಅವನು ವಿಶಾಲೂವನ್ನು ಸೃಷ್ಟಿಸಿದ. ವಿಶ್ವನ ಭಯ, ಬೋರು ಎಲ್ಲವೂ ನಿವಾರಣೆಯಾಯಿತು. ಸೃಷ್ಟಿಕ್ರಿಯೆ ನಿರಾತಂಕವಾಗಿ ಮುಂದುವರಿಯಿತು.

ಅವನು ತನ್ನ ಪ್ರತಿರೂಪವಾಗಿಯೇ ವಿಶ್ವ-ವಿಶಾಲೂರನ್ನು ಸೃಷ್ಟಿಸಿದ್ದ. ಹೀಗಾಗಿ, ಅವರಲ್ಲಿ ಅನ್ಯೋನ್ಯತೆಯಿತ್ತು. ಅವನ ಎಲ್ಲ ಸೃಷ್ಟಿಯಲ್ಲೂ ವಿಶ್ವ-ವಿಶಾಲೂರೇ ಇದ್ದರು. ಹೀಗಾಗಿ ಅವನಿಗೂ ಸೃಷ್ಟಿಗೂ ಭೇದವಿರಲಿಲ್ಲ. ಇಡೀ ಸೃಷ್ಟಿ ಅವನ ಪ್ರತಿಬಿಂಬವಾಯಿತು.

“ಇದೇ ಅಧ್ಯಾತ್ಮ, ಇದೇ ಅದ್ವೈತ” ಎಂದು ಹೇಳಿ ಪುರಾಣಿಕರು ಮಂಗಳ ಹಾಡಿದರು.

“ಇದರಲ್ಲಿ ಅದ್ವೈತ ಎಲ್ಲಿ ಬಂತು, ಪುರಾಣಿಕರೇ?”

“ಅದನ್ನು ತಿಳಿಯಲು ಭಾನುವಾರ ಬೆಳಿಗ್ಗೆ ಸಾಹಿತ್ಯ ಪರಿಷತ್ತಿನ ಸಭಾಂಗಣಕ್ಕೆ ಹೋಗು. ಅದ್ವೈತವನ್ನು ಅನುಭವದಿಂದ ಅರಿಯಬಹುದೇ ಹೊರತು, ನನ್ನ ಪ್ರವಚನ ಕೇಳುವುದರಿಂದಲ್ಲ” – ಪುರಾಣಿಕರು ಪಾಣಿಪಂಚೆ ಕೊಡವಿಕೊಂಡು ಹೆಗಲಿಗೇರಿಸಿ ಹೊರಡಲನುವಾದರು.

“ಹೊರಡುವ ಮುಂಚೆ, ಈ ʼಅವನುʼ ಯಾರು ಎಂದು ತಿಳಿಸಿ ಹೋಗಿ” ಎಂದೆ.

“ಅವನೇ ಹಾಸ್ಯಬ್ರಹ್ಮ” ಎಂದು ಎದ್ದರು. ನಾನು ಕುಳಿತೇ ಇದ್ದೆ.

ಪುರಾಣಿಕರು ಹಿಂದೆ ತಿರುಗಿ,

“ಬಿಸಿಯೇರಿತು ಎಂದರೆ ಅವನ ಮಂಡೆ ಬಿಸಿಯಾಯಿತು, ಅವನು ಬರೆದದ್ದು ವಿಶ್ವ-ವಿಶಾಲೂರ ಹಣೆಬರಹ. ಅದನ್ನು ಇಂದಿಗೂ ಅವರಿಗೆ ಮೀರಲಾಗಿಲ್ಲ” ಎಂದು ಹೇಳಿ ಹೊರಟೇ ಹೋದರು.

ನಾನು ಅದ್ವೈತದ ಅನುಭವ ಪಡೆಯಲು ಸಾಹಿತ್ಯ ಪರಿಷತ್ತಿನ ಸಭಾಂಗಣಕ್ಕೆ ಹೋದೆ. ಹಾಸ್ಯಬ್ರಹ್ಮರು ವೇದಿಕೆಯಿಂದ ಮಾತನಾಡುತ್ತಿದ್ದರು. ಸಭಿಕರೆಲ್ಲರ ಮುಖದಲ್ಲಿಯೂ ವಿಶ್ವ-ವಿಶಾಲೂರೇ ಕಾಣಿಸಿದರು, ನನಗೆ. ಕ್ರಮೇಣ ವಿಶ್ವ-ವಿಶಾಲೂರೂ ಮರೆಯಾಗಿ ಹಾಸ್ಯಬ್ರಹ್ಮರೇ ಎಲ್ಲ ಕಡೆ ಕಾಣಿಸಿದರು.

ಪುರಾಣಿಕರು ಹೇಳಿದ ಅದ್ವೈತಾನುಭವ ಉಂಟಾಗಿ ನಾನೂ ಹಾಸ್ಯಬ್ರಹ್ಮನ ಒಂದಂಶವೇ ಆಗಿ ಈ ಕಿರುಸೃಷ್ಟಿಯನ್ನು ಮಾಡಿರುವೆ. ನೀವೂ ಆಸ್ವಾದಿಸಿ ಆನಂದಿಸಿ.

ಕೆ. ಜನಾರ್ದನ ತುಂಗ