ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವೇಷ

ಉಮೇಶ ದೇಸಾಯಿ
ಇತ್ತೀಚಿನ ಬರಹಗಳು: ಉಮೇಶ ದೇಸಾಯಿ (ಎಲ್ಲವನ್ನು ಓದಿ)

ನೀಲಾದ್ರಿ ಅಪಾರ್ಟಮೆಂಟಿನ ಫ್ಲಾಟ್ ನಂಬರ ೩೦೪ ರಲ್ಲಿ ವಾಸವಿದ್ದ ಮೋಹನ ಕೊಲೆಯಾಗಿದ್ದ. ಫ್ಲಾಟ್ ನಿಂದ ಸುಟ್ಟ ವಾಸನೆ ಬರುವುದ ಗಮನಿಸಿದ ಎದುರಿನಮನೆ ಸೆಲ್ವಿ ವಿಚಾರಿಸಲು ಮೋಹನ ಮನೆಯ ಕಾಲಿಂಗ ಬೆಲ್ ಒತ್ತಿದ್ದಾನೆ..ಒಳಗಡೆಯಿಂದ ಯಾವ ಉತ್ತರ ಸಿಗದಿದ್ದಾಗ ಬಾಗಿಲು ನಾಕ್ ಮಾಡಿ ಕೊನೆಗೆ ನೂಕಿದರೆ,ಒಳಗಿನಿಂದ ಬೋಲ್ಟ ಹಾಕದ ಕಾರಣ ಬಾಗಿಲು ತೆರೆದುಕೊಂಡಿದೆ. ಒಳಗಡೆ ಬಂದವನಿಗೆ ಕಂಡಿದ್ದು ಕುರ್ಚಿಯಲ್ಲಿ ಕುಳಿತ ಭಂಗಿಯಲ್ಲಿದ್ದ ಮೋಹನ ಅವನ ಎದೆಯಿಂದ ಹರಿದ ರಕ್ತ…ಹಾಗೂ ಬೆಡ್ ರೂಮಿನಿಂದ ಬರುತ್ತಿರುವ ಸುಟ್ಟ ಅರಿವೆಗಳ ಘಾಟು ವಾಸನೆ. ತಡಮಾಡದೆ ಹತ್ತಿರದ ಪೋಲಿಸ ಠಾಣೆಗೆ ಫೋನ ಮಾಡಿ ವಿಷಯ ತಿಳಿಸಿದ್ದಾನೆ..ಹಾಗೂ ಅಧಿಕಾರಿ ಮುನಿಸ್ವಾಮಿ ಬರುವವರೆಗೂ ಬಾಗಿಲು ಹೊರಗಿನಿಂದ ಹಾಕಿಕೊಂಡು ನಿಂತಿದ್ದಾನೆ.

ಸೆಲ್ವಿ ಫೋನ ಮಾಡಿ ಪೋಲಿಸ ಬಂದಿದ್ದು ಈ ಎಲ್ಲ ಘಟನೆ ನಡೆದು ಅದಾಗಲೇ ಒಂದು ತಾಸು ಗತಿಸಿದೆ. ತನ್ನ ಸಹಾಯಕ ಓಂಕಾರಪ್ಪನ ಜೊತೆ ಬಂದ ಮುನಿಸ್ವಾಮಿ ಮೊದಲು ಮಾಡಿದ ಕೆಲಸ ಅಂದರೆ ರೂಮಿನಲ್ಲಿರುವ ಅರಿವೆ ಗುಡ್ಡೆಗೆ ಬಿದ್ದಿದ್ದ​ ಬೆಂಕಿ ಆರಿಸಿದ್ದು. ಮಹಿಳೆಯರು ಧರಿಸುವ ಅರಿವೆ ಅಂದರೆ ಚೂಡಿದಾರ,ಕಮೀಜುಗಳು ದುಪ್ಪಟ್ಟಾಗಳು ಅಂತೆಯೇ ಒಳ ಉಡುಪುಗಳು ಹೀಗೆ ಒಟ್ಟುಗೂಡಿಸಿ ಬೆಂಕಿ ಹಚ್ಚಲಾಗಿತ್ತು. ಬೆಂಕಿ ಅಷ್ಟಾಗಿ ಹೊತ್ತಿಕೊಳ್ಳದ ಕಾರಣ ಅವು ಅರೆಸುಟ್ಟ ಸ್ಥಿತಿಯಲ್ಲಿದ್ದವು. ತನ್ನ ಕೋಲಿಂದ ಗುಡ್ಡೆ ಕೆದಕಿದಾಗ ಮುನಿಸ್ವಾಮಿಗೆ ಕೆಲವು ಪ್ಯಾಡೆಡ್ ಬ್ರಾ ಸಹ ಕಂಡಿದ್ದವು..ಇವನ್ನು ನೋಡಿ ಹುಬ್ಬೇರಿಸಿದ.

ಶವ ಕುಳಿತ ಭಂಗಿಯಲ್ಲಿತ್ತು. ಎದೆಗೆ ಗಾಯವಾಗಿತ್ತು …ಸುರಿದ ರಕ್ತ ಹೆಪ್ಪುಗಟ್ಟತೊಡಗಿತ್ತು. ಬಾಯಿಯಲ್ಲಿ ಅರಿವೆ ಉಂಡೆ ತುರುಕಲಾಗಿತ್ತು. ಹೊರಗಿನವರಿಗೆ ಶಬ್ದ ಬರಬಾರದು ಅಂತ ಕೊಲೆಗಾರ ಎಚ್ಚರ ವಹಿಸಿದಂತಿತ್ತು. ಮುಂಗೈ ಮೇಲೆ ಮೂಡಿದ ಗುರುತು ಅದಾರೋ ಮೋಹನನನಿಗೆ ಕುರ್ಚಿಯಲ್ಲಿ ಕೂಡಿಸಿ ಹಗ್ಗ ಕೈ ಕಾಲಿಗೆ ಬಿಗಿದಂತೆ ತೋರುತ್ತಿತ್ತು. ಶವದ ಪಕ್ಕ ಇರುವ ಟೀಪಾಯಿಯ ಮೇಲೆ ಒಂದು ಬಿಳಿಹಾಳೆಯ ಮೇಲೆ ಎಮ್ ಅನ್ನುವ ಇಂಗ್ಲೀಷ ಭಾಷೆಯಲ್ಲಿ ಬರೆದದ್ದು….. ತನ್ನ ಫೋನನಿಂದ ಮೇಲಧಿಕಾರಿ ದೇಶಪಾಂಡೆಗೆ ಸುದ್ದಿ ತಿಳಿಸಿ ಬೆರಳಚ್ಚು ತಜ್ಞರು ಹಾಗೆಯೇ ಫೋಟೋಗ್ರಾಫರರು ಡಾಕ್ಟರರಿಗೆ ಫೋನ ಮಾಡಿದವ ನಿಡಿದಾಗಿ ಉಸಿರುಬಿಟ್ಟ. ಹೀಗೆ ಕೊಲೆಯಾಗಿರಬೇಕಾದರೆ ಯಾರೋ ಈ ಮೋಹನನ್ನು ಬಲವಾಗಿ ದ್ವೇಷಿಸುವವರೇ ಮಾಡಿದ್ದಾರೆ ಅಂದುಕೊಂಡ ಮುನಿಸ್ವಾಮಿ.

ಮತ್ತೊಂದು ತಾಸು ಉರುಳಿತ್ತು. ಫ್ಲಾಟ ತುಂಬ ಈಗ ತಜ್ಞರು ತುಂಬಿದ್ದರು. ಸಿಗಬಹುದಾದ ಬೆರಳು ಗುರುತುಗಳಿಗಾಗಿ ಹುಡುಕಾಟ, ವಿವಿಧಕೋನಗಳಿಂದ ಚಿತ್ರ ತೆಗೆಯುತ್ತಿರುವ ಫೋಟೋಗ್ರಾಫರ ಅಂತೆಯೇ ಶವದ ಪ್ರಾಥಮಿಕ ಪರೀಕ್ಷೆ ಮಾಡುತ್ತಿರುವ ಡಾಕ್ಟರ ಹೀಗೆ ಎಲ್ಲ ಕೆಲಸ ನಡೆದಿದ್ದವು. ಈ ಅವಧಿಯಲ್ಲಿ ಮುನಿಸ್ವಾಮಿ ಸೆಲ್ವಿಯನ್ನು ಮಾತನಾಡಿಸಿದ್ದ. ಸೆಲ್ವಿ ಹೇಳಿದ್ದಿಷ್ಟು…ತನ್ನ ಪಾಡಿಗೆ ತಾನಿರುವ ವ್ಯಕ್ತಿ ಮೋಹನ. ಅವ ಈ ಫ್ಲಾಟ ಕೊಂಡುಕೊಂಡು ೭ ತಿಂಗಳಾಗಿವೆ. ಮುಂಜಾನೆ ಒಂಬತ್ತಕ್ಕೆ ಮನೆಬಿಟ್ಟರೆ ರಾತ್ರಿ ಹತ್ತಕ್ಕೆ ಮನೆಸೇರುವ ಐಟಿ ಕಂಪನಿಯಲ್ಲಿ ಕೆಲಸಮಾಡುವವ. ವೀಕೆಂಡ ಮಾತ್ರ ಅವನ ಮುಖದರ್ಶನ ಆಗುತ್ತಿತ್ತು. ಅದೂ ಅಪರೂಪವಾಗಿ. ಅದಾರೋ ಅವನ ಸ್ನೇಹಿತ ಬರುತ್ತಿದ್ದ ಪ್ರತಿ ಶುಕ್ರವಾರ ರಾತ್ರಿ. ಅವ ರವಿವಾರ ಬೆಳಿಗ್ಗೆವರೆಗೆ ಇರುತ್ತಿದ್ದ. ಇಷ್ಟೇ ಮಾಹಿತಿ ಸೆಲ್ವಿಯಿಂದ ದೊರೆತದ್ದು. ಒಂದು ಫ್ಲೋರನಲ್ಲಿ ಮೂರು ಮನೆಗಳಿದ್ದವು. ಸೆಲ್ವಿಯ ಪಕ್ಕದ ಮನೆಯ ಮೂರ್ತಿಅವರೂ ಮಾತುಕತೆಗೆ ಸೇರಿಕೊಂಡರು. ಸಂಜೆ ಸುಮಾರು ನಾಲ್ಕುವರೆಯಿಂದಲೇ ಕೊಲೆಯಾದ ಮೋಹನನ ಮನೆಯಿಂದ ಜೋರಾದ ಹಾಡು ಹಚ್ಚಿದ ಶಬ್ದ ಅದು ಎಷ್ಟು ಜೋರಾಗಿತ್ತೆಂದರೆ ಹೋಗಿ ಸೌಂಡ ಕಮಿಮಾಡಲು ಹೇಳಬೆಕೆಂದಿದ್ದೆ ಅಂದರು. ಮೂರ್ತಿಯ ಮನೆಗೆ ಹೊಂದಿಕೊಂಡೇ ಇರುವುದು ಮೋಹನನ ರೂಮು. ಆ ರೂಮಿನಲ್ಲಿಯೇ ಅರಿವೆ ಗುಡ್ಡಹಾಕಿ ಸುಟ್ಟಿರುವುದು. ಈ ಎಲ್ಲ ಸಂಗತಿ ನೋಟ್ ಮಾಡಿಕೊಂಡ ಓಂಕಾರಪ್ಪ.

ಡಾಕ್ಟರ ಕೊಲೆ ನಡೆದಿದ್ದು ಸರಿಸುಮಾರು ಐದುಗಂಟೆಯಿಂದ ಆರು ಗಂಟೆಯ ಒಳಗೆ ಅಂತ ಅನುಮಾನ ಪಟ್ಟರು. ಎದೆಗೆ ಬಲವಾಗಿ ಚುಚ್ಚಿದ ಗಾಯಗಳಿಂದ ಸಾವು ಸಂಬಂಧಿಸಿದೆ….ಬಳಸಿದ ಆಯುಧ ಹರಿತವಾಗಿತ್ತು….ಆಳವಾದ ಗಾಯವಾಗಿದೆ… ಹಲವು ಸಲ ಅವನ ಎದೆಗೆ ಚುಚ್ಚಲಾಗಿದೆ. ಹೌದು, ಮೋಹನನ ಕೈಕಾಲು ಹಗ್ಗದಿಂದ ಬಂಧಿಸಿ ಕೊಲೆಮಾಡಲಾಗಿದೆ. ಹತ್ತಿರದ ಬಿಳಿಹಾಳೆಯಮೇಲೆ ಮೂಡಿಸಿದ ಅಕ್ಷರದ ಶಾಯಿ ಅವನ ರಕ್ತವೇ ಹೌದೋ ಅಲ್ಲವೋ ಇದು ವಿವರವಾದ ತನಿಖೆಯಿಂದ ಗೊತ್ತಾಗಬೇಕು ಇದು ಡಾಕ್ಟರ್ ನೀಡಿದ ಹೇಳಿಕೆ. ಡಾಕ್ಟರ್ ಹೇಳುವಾಗ ಮುನಿಸ್ವಾಮಿಯ ಹಿರಿಯ ಅಧಿಕಾರಿ ದೇಶಪಾಂಡೆ ಸಹ ಬಂದಿದ್ದ. ಅವನೂ ಡಾಕ್ಟರ್ ಮಾತಿಗೆ ಒಪ್ಪಿಗೆ ಸೂಚಿಸಿದ. ಅಂತೆಯೇ ಮುನಿಸ್ವಾಮಿ ಕಡೆಯಿಂದ ಅದುವರೆಗೆ ನಡೆಸಿದ ತನಿಖೆಯ ವಿವರ ಪಡೆದ. ಒಂದು ಸುತ್ತು ಹಾಕಿದವ ಮುನಿಸ್ವಾಮಿಗೆ ಮೋಹನ ಬಳಸುತ್ತಿದ್ದ ಮೊಬೈಲ ಅಂತೆಯೇ ಲ್ಯಾಪಟಾಪ ವಶಪಡಿಸಿಕೊಂಡು ತನಿಖೆಗೆ ತಜ್ಞರಿಗೆ ಕೊಡಲು ಹೇಳಿದ. ಕೊಲೆಗೆ ಬಳಸಿದ ಛೂರಿ ಸಾಧಾರಣ ಕಿಚನ್ ನೈಫ್ ಆಗಿತ್ತು. ಸುಟ್ಟ ಅರಿವೆಗಳು ಹೆಂಗಸರು ಬಳಸುವವು ಅದೂ ಪ್ಯಾಡೆಡ್ ಬ್ರಾಗಳು ದೇಶಪಾಂಡೆಗೂ ವಿಚಿತ್ರ ಅನಿಸಿತು. ಶವ ಪೋಸ್ಟಮಾರ್ಟಂ ಗೆ ಕಳಿಸಲು ಸೂಚನೆಯಿತ್ತ ದೇಶಪಾಂಡೆ ಸಿಸಿಟಿವಿ ಬಗ್ಗೆ ಕೇಳಿದ. ನಕಾರಾತ್ಮಕವಾಗಿ ತಲೆ ಅಲ್ಲಾಡಿಸಿದ ಮುನಿಸ್ವಾಮಿ.

“ಸರ್ ಅಪಾರ್ಟಮೆಂಟಿನೊಳಗೆ ಹೊರಗಿನವರಿಗೆ ಪ್ರವೇಶವಿಲ್ಲ. ಯಾರಾದರೂ ಹೊರಗಿನವರು ಬಂದರೆ ಇಂಟರಕಾಂ ಮೂಲಕ ಮನೆಯವರನ್ನು ಡ್ಯೂಟಿಮೇಲಿರುವ ಸೆಕ್ಯುರಿಟಿಯವ ಸಂಪರ್ಕಿಸುತ್ತಾನೆ, ಮನೆಯವರು ವ್ಯಕ್ತಿ ತಮಗೆ ಪರಿಚಿತ ಅಂತ ಹೇಳಿದರೆ ಮಾತ್ರ ಆ ಹೊರಗಿನವರಿಗೆ ಒಳಗೆ ಬಿಡುತ್ತಿದ್ದರು. ಹಾಗೆ ಒಳಗೆ ಹೋದವರ ಹೆಸರು ವಿಳಾಸ ಮತ್ತು ಮೊಬೈಲ ನಂಬರ ಎಲ್ಲ ಪಡೆದುಕೊಂಡು ಒಳಗೆ ಬಿಡಲಾಗುತ್ತದೆ. ಇಂದು ಮಧ್ಯಾಹ್ನ ಮೂರುವರೆ ಸುಮಾರು ಗೇಟಿನಲ್ಲಿ ಬಂದ ಯುವತಿ ತನ್ನ ಹೆಸರು ಮಾಲತಿ ಅಂತ ಹೇಳಿ ಅಲ್ಲಿರುವ ಗಾರ್ಡಮೂಲಕ ಈ ಮೋಹನನಿಗೆ ಫೋನ ಮಾಡಿಸಿದ್ದಾಳೆ. ಮೋಹನ ಒಳಗೆ ಬಿಡುವಂತೆ ಹೇಳಿದ್ದಾನೆ…ಈ ಮಾಲತಿ ಯಾರು ಅಂತ ತಿಳಿಯಬೇಕಾಗಿದೆ…”

“ಹಾಗೆ ನೋಡಿದರೆ ಮುನಿಸ್ವಾಮಿ ನಮಗೆ ತಿಳಿಯದ ಅನೇಕ ವಿಷಯಗಳಿವೆ, ನೀವು ನಿಮ್ಮ ಪ್ರಾಥಮಿಕ ಎನಕ್ವಯರಿ ಎಲ್ಲ ಮಾಡಿ. ಆ ಮಾಲತಿ ಬಗ್ಗೆ ಈ ಕೊಲೆಯಾದ ವ್ಯಕ್ತಿಗೆ ಏನು ಸಂಬಂಧ ಅಂತೆಯೇ ಗೇಟಿನ ಬುಕ್ ನಲ್ಲಿ ಆ ಮಾಲತಿ ಫೋನ ನಂಬರ ಕೊಟ್ಟಿದ್ದರೆ ಅಲ್ಲಿ ಮಾತಾಡಿ …ನನಗನಿಸುತ್ತದೆ ಪರಿಚಿತರೇ ಕೊಲೆ ಮಾಡಿದ್ದಾರೆ…ಅಂತೆಯೆ ಈ ಮೋಹನನ ಮೇಲೆ ಕೊಲೆಗಾರನಿಗೆ ಭಯಂಕರ ಸೇಡಿತ್ತು ಅಂತ ಕಾಣುತ್ತದೆ….ಈ ಪರಿ ಚುಚ್ಚಿದ್ದಾರೆ ಅಂದರೆ. ಆದರೆ ಅಷ್ಟೊಂದು ಡ್ರೆಸ್ ಯಾಕೆ ಸುಟ್ಟರು ಅದೂ ಆ ಪ್ಯಾಡೆಡ್ ಬ್ರಾ ಇದು ತಲೆಕೆಡಿಸಿದೆ. ಓಕೆ ಎರಡುದಿನಗಳ ನಂತರ ಭೇಟಿಯಾಗಿ…” ದೇಶಪಾಂಡೆ ತನ್ನ ಕಿರಿಯ ಅಧಿಕಾರಿಗೆ ಹೇಳಿ ಹೊರಟ.

******

ಎರಡು ದಿನ ಮುನಿಸ್ವಾಮಿ ಸುಮ್ಮನೆ ಕೂತಿರಲಿಲ್ಲ. ಕೊಲೆಯಾದ ಮೋಹನನ ತಂದೆತಾಯಿಯ ಫೋನ ಪತ್ತೆ ಹಚ್ಚಿ ಅವರಿಗೆ ವಿಷಯ ತಿಳಿಸಿದ. ಅವರು ಇರುವುದು ಧಾರವಾಡದಲ್ಲಿ.…ಅವರು ಬೆಂಗಳೂರಿಗೆ ಬಂದಾಗ ಅವರಿಗೆ ಭೇಟಿಯಾಗಿ ಕೆಲವು ಮುಖ್ಯ ಪ್ರಶ್ನೆ ಸಹ ಕೇಳಿದ. ಅವನ ಪ್ರಶ್ನೆಗಳಿದ್ದುದು ಮೋಹನನ ಆರ್ಥಿಕತೆಯ ಸ್ಥಿತಿ ಅವ ಏನಾದರೂ ಸಾಲ ಸೋಲ ಮಾಡಿಕೊಂಡಿದ್ದನೇ ಹೇಗೆ ಹಾಗೂ ಅವನ ಪ್ರೇಮಪ್ರಕರಣಗಳ ಕುರಿತಾಗಿ ಇದ್ದವು. ಅವನಿಗೆ ತಿಳಿದ ಸಂಗತಿ ಅಂದರೆ ಮಾಲತಿ ಹಾಗೂ ಮೋಹನ ಇಬ್ಬರ ಮದುವೆ ನಿಶ್ಚಯವಾಗಿತ್ತು. ಮದುವೆಯ ತಯಾರಿ ಅಂತಿಮ ಹಂತದಲ್ಲಿದ್ದವು.ಮದುವೆಗೆ ೩೦ ದಿನ ಬಾಕಿ ಇತ್ತು ಅಂತ. ಮಗನಿಗಿರಬಹುದಾದ ಕೆಟ್ಟಹವ್ಯಾಸಗಳ ಬಗ್ಗೆ ಒತ್ತಿ ಕೇಳಿದಾಗ ಮುನಿಸ್ವಾಮಿಗೆ ಸಿಕ್ಕಿದ್ದು ತಂದೆಯ ಅಸಹನೆಯ ಪ್ರತಿಕ್ರಿಯೆ. ಮೋಹನನ ತಾಯಿ ಮಾತ್ರ ಮಾತಾಡಲು ಮುಂದಾದರು. ಆದರೆ ಗಂಡನ ಗದರುವಿಕೆ ಅವರನ್ನು ಸುಮ್ಮನಾಗಿಸಿತು ಅವರಿಗೆ ಏನೋ ಹೇಳುವುದಿತ್ತು ಅಂತ ಮುನಿಸ್ವಾಮಿಗೆ ಅನಿಸಿತ್ತು. ಮಾತಾಡಲು ಅದೇಕೋ ಹಿಂಜರಿತ ಮೇಲಾಗಿ ಗಂಡನ ಒತ್ತಾಯ ಇತ್ತು. ತನ್ನ ನಂಬರ ಕೊಟ್ಟ ಮುನಿಸ್ವಾಮಿ ಏನಾದರೂ ಹೊಸ ಸುಳಿವು ಸಿಕ್ಕರೆ ತಿಳಿಸಿ ಎಂದು ಕೇಳಿಕೊಂಡ. ಮಾಲತಿಯ ನಂಬರಿಗೂ ಸೆಕ್ಯುರಿಟಿಯವ ಹೇಳಿದ ನಂಬರಿಗೂ ತಾಳೆಯಾಗುತ್ತಿತ್ತು. ಆದರೆ ಕೊಲೆ ನಡೆದ ದಿನ ಮಾಲತಿ ಊರಲ್ಲಿ ಇರಲಿಲ್ಲ..ಅವಳ ಗೆಳತಿಯ ಮದುವೆಗಾಗಿ ಅವಳು ಬೆಳಗಾವಿಯಲ್ಲಿದ್ದಳು ಅಂತ ಗೊತ್ತಾಗಿ ಈ ಕೇಸು ಜಟಿಲವಾಗತೊಡಗಿದೆ ಅನಿಸಿತು. ಅವಳಿಗೆ ಸ್ಪಷ್ಟೀಕರಣ ಕೇಳಿದಾಗ ಅವಳು ಅವಳ ಗೆಳತಿಯ ಫೋನ ಕೊಟ್ಟಳು..ಮುನಿಸ್ವಾಮಿ ಆ ಗೆಳತಿಗೆ ಉತ್ತರ ಕೇಳಿದಾಗ ಸಕಾರಾತ್ಮಕವಾದ ಉತ್ತರವೇ ಸಿಕ್ಕಿತು. ಅವಳ ಬೆರಳುಗುರುತು ತಗೊಂಡು ಮತ್ತೆ ಕರೆದಾಗ ಬರುವಂತೆ ಹೇಳಿ ಕಳಿಸಿದ. ಹಾಗೆಯೇ ತಗೊಂಡ ಬೆರಳ ಗುರುತು ಲ್ಯಾಬಗೆ ಕಳಿಸಿಕೊಟ್ಟ ಆದರೆ ಅವಳ ಹೆಸರು ಬಳಸಿ ಅದಾರೋ ಪ್ರವೇಶ ಗಿಟ್ಟಿಸಿದ್ದಾರೆ…ಹಾಗೂ ಹಾಗೆ ಬಂದ ವ್ಯಕ್ತಿಗೆ ಮಾಲತಿಯ ಫೋನ ನಂಬರ ಗೊತ್ತಿದೆ. ಅಂದು ಡ್ಯೂಟಿಮೇಲಿದ್ದ ಗಾರ್ಡಗೆ ಮಾಲತಿಯನ್ನು ತೋರಿಸಿ ಬಂದವಳು ಇವಳೇನೇ ಅಂತ. ಗಾರ್ಡ ಹೇಳಿದ ಅಂದು ಬಂದ ಹೆಂಗಸು ಮುಖಮುಚ್ಚುವ ಹಾಗೆ ಸ್ಕಾರ್ಫ ಹಾಕಿದ್ದಳು.. ನೋಡಲು ಮಾಲತಿಗಿಂತ ತೆಳ್ಳಗಿದ್ದಳು ಅಂತ ಹೇಳಿದ. ಹಾಗೆಯೇ ಆ ವ್ಯಕ್ತಿ ಲ್ಯಾಪಟಾಪ ಬ್ಯಾಗ ತಗೊಂಡು ಬಂದಿದ್ದ ಅನ್ನುವ ವಿಷಯ ಹೇಳಿದ. ಮಾಲತಿ ಬೆಳಗಾವಿಗೆ ಹೋದ ವಿಷಯ ಮೋಹನನಿಗೂ ಗೊತ್ತಿತ್ತು ಆದರೂ ಅವ ಸೆಕ್ಯುರಿಟ ಗಾರ್ಡು ಹೇಳಿದಾಗ ಮೇಲೆ ಕಳಿಸಲು ಅದೇಕೆ ಹೇಳಿದ.

ಗಾರ್ಡ ಹೇಳಿದ ಇನ್ನೊಂದು ಸಂಗತಿ ಮುಖ್ಯವಾಗಿತ್ತು. ಅದೆಂದರೆ ಸಾಮಾನ್ಯವಾಗಿ ಒಳಗೆ ಹೋದ ವಿಸಿಟರ್ಸ ಹೊರಗೆ ಹೋಗುವಾಗ ಸೆಕ್ಯುರಿಟಿಯವರು ರಿಜಿಸ್ಟರ್‍ನಲ್ಲಿ ಅವರು ಹೊರಗೆ ಹೋದ ವೇಳೆ ದಾಖಲಿಸುತ್ತಾರೆ…ಆದರೆ ಆ ಗಾರ್ಡ ಹೇಳಿದ ಪ್ರಕಾರ ಆ ಹೆಂಗಸಿನ ಹೊರಹೋದ ದಾಖಲೆ ಖಾಲಿಯಾಗಿತ್ತು. ವಿವರಣೆ ಕೇಳಿದಾಗ ಅವನು ತನ್ನ ಡ್ಯೂಟಿ ನಾಲ್ಕುಗಂಟೆಗೆ ಮುಗಿಯುತ್ತದೆ ಹೀಗಾಗಿ ದಾಖಲು ಮಾಡುವ ಕೆಲಸ ತನ್ನ ನಂತರ ಬಂದ ವ್ಯಕ್ತಿಯದು ಅಂದ. ಈ ಗಾರ್ಡನ ರಿಲೀವರ್ ಎರಡು ದಿನದಿಂದ ಕೆಲಸಕ್ಕೆ ಬಂದಿರಲಿಲ್ಲ..ಜ್ವರದಿಂದ ಬಳಲುತ್ತಿದ್ದವ ಮರುದಿನ ಬರಬಹುದು ಅಂತ ಸೂಪರವೈಸರ್ ಹೇಳಿದ. ಆ ಗಾರ್ಡ ಬಂದಕೂಡಲೇ ಫೋನ ಮಾಡಿ ತಿಳಿಸುವಂತೆ ತಾಕೀತು ಮಾಡಿದ ಮುನಿಸ್ವಾಮಿ.

ವೈದ್ಯಕೀಯ ವರದಿ ಬಂದಿತ್ತು. ಕೊಲೆಯಾಗಿರುವುದು ಚೂರಿಯ ಇರಿತದಿಂದಲೇ..ಅದೂ ಹಲವಾರು ಸಲ ಚುಚ್ಚಿದುದರಿಂದ.ಈ ಅಂಶ ಧೃಡಪಟ್ಟಿತ್ತು. ಆದರೆ ಕೊಲೆಯಾಗುವ ಮೊದಲು ಮೋಹನ ಕುಡಿದ ಪಾನೀಯದಲ್ಲಿ ಮತ್ತಿನ ಅಂಶ ಇತ್ತು ಅಂತ ಉಲ್ಲೇಖವಿತ್ತು. ಇದು ಮುನಿಸ್ವಾಮಿಗೆ ಕೊರೆಯುತ್ತಿದ್ದ ಒಂದು ಪ್ರಶ್ನೆಗೆ ಉತ್ತರರೂಪದಲ್ಲಿ ಸಿಕ್ಕಿತು. ನೋಡಲು ಮೋಹನ ದಷ್ಟಪುಷ್ಟ ಯಾವುದೇ ಹೆಂಗಸು ಒತ್ತಾಯದಿಂದ ಅವನಿಗೆ ಹಗ್ಗ ಬಿಗಿದು ಕೈಕಾಲು ಕಟ್ಟುವುದು ಬಾಯಿಯಲ್ಲಿ ಅರಿವೆ ಉಂಡೆ ತುರುಕುವುದು ಅಷ್ಟು ಸುಲಭವಲ್ಲ ಇದು ಮುನಿಸ್ವಾಮಿಯ ತರ್ಕವಾಗಿತ್ತು. ಅವನಿಗೆ ಮತ್ತಿನ ಔಷಧಿ ಕುಡಿಸಿ ಕೈಕಾಲಿಗೆ ಹಗ್ಗ ಬಿಗಿದು ನಂತರ ಅವನ ಎದೆಗೆ ಚೂರಿ ಹಾಕಲಾಗಿದೆ…ಮೇಲಾಗಿ ಮೂರ್ತಿ ಹೇಳಿದ ಹಾಗೆ ಜೋರಾದ ಹಾಡು ಹಚ್ಚಲಾಗಿತ್ತು..ಒಂದು ವೇಳೆ ಮೋಹನ ಚೀರಿದರೂ ಹೊರಗೆ ಕೇಳುತ್ತಿರಲಿಲ್ಲ. ಮೋಹನ ಪ್ರತಿಭಟಿಸಿಲ್ಲ…ಕೊಲೆಗಾರನ ಕೆಲಸ ಸುಲಭವಾಗಿದೆ. ಮಾಲತಿಯ ಹೆಸರು ಉದ್ದೇಶಪೂರ್ವಕವಾಗಿ ಬಳಸಿಕೊಳ್ಳುವ ಮೂಲಕ ಕೊಲೆಗಾರ ಏನೋ ಸೂಚನೆಕೊಡುತ್ತಿದ್ದಾನೆ.. ಬಹುಷಃ ಮಾಲತಿಗೆ ಯಾರಾದರೂ ಬಾಯಫ್ರೆಂಡ ಇದ್ದು ಅವನಿಗೆ ಮಾಲತಿ ಮೋಹನನನ್ನು ಮದುವೆಯಾಗೋದು ಇಷ್ಟವಾಗದೇ ಈ ಕೆಲಸ ಮಾಡಿರಬಹುದೇ…ಆ ಸಾಧ್ಯತೆ ಬಲವಾಗಿದೆ ಅನಿಸಿತು. ಮಾಲತಿಯ ಬೆರಳಚ್ಚು ಗುರುತು ರೂಮಿನ ಬೆರಳ ಗುರುತುಗಳಿಗೆ ಹೊಂದಿಕೆಯಾಗುತ್ತಿರಲಿಲ್ಲ. ತನ್ನ ಮೇಲಧಿಕಾರಿಗೆ ವೈದ್ಯಕೀಯ ವರದಿಗಳು ಹಗೂ ಬೆರಳಚ್ಚುಗಳ ವರದಿ ತೋರಿಸಿ ಮುಂದೆ ಏನು ಮಾಡಬಹುದು ಅಂತ ಯೋಚಿಸುವುದು ಅಂತ ಅಂದುಕೊಂಡ. ತನ್ನ ಸಹಾಯಕ ಓಂಕಾರಪ್ಪನ ಕರೆದು ಮಾಲತಿಗೆ ಯಾರಾದರೂ ಬಾಯ್ ಫ್ರೆಂಡ ಇರುವ ಬಗ್ಗೆ ಮಾಹಿತಿ ತೆಗೆಯಲು ಹೇಳಿದ. ಅಂತೆಯೇ ಆ ರಿಲೀವರ್ ಗಾರ್ಡನನ್ನು ಕರೆದುಕೊಂಡು ಬರಲು ಹೇಳಿದ.

*****

“ಯಾವುದೇ ಕೊಲೆಗೆ ಮೋಟಿವ್ ಬಹಳ ಮುಖ್ಯ ..ಯಾರೂ ಸುಖಾಸುಮ್ಮನೇ ಯಾರನ್ನೂ ಕೊಲ್ಲುವುದಿಲ್ಲ. ಮೋಹನ ಮನೆಯಲ್ಲಿ ಹಣ ಅಥವಾ ಒಡವೆ ಯಾವುದೇ ಕಳುವಾಗಿಲ್ಲ…ಸೋ ಮೋಹನ ಮೇಲೆ ಸೇಡು ತೀರಿಸಿಕೊಳ್ಳಬೆಕಾಗಿತ್ತು ಕೊಲೆಗಾರನಿಗೆ. ಅವನನ್ನು ಆ ಪರಿ ಚುಚ್ಚಿಸಾಯಿಸಿದ ಪರಿ ಇದನ್ನೇ ಹೇಳುತ್ತದೆ…ಮೋಟಿವ್ ಹುಡುಕು ಅರ್ಧ ಕೇಸ ಮುಗಿದಂತೆಯೇ….” ದೇಶಪಾಂಡೆ ಮುನಿಸ್ವಾಮಿ ತಂದ ಫೈಲಿನ ಸಂಗತಿಗಳನ್ನು ಪರಿಸೀಲಿಸಿ ಅಂತೆಯೇ ಮುನಿಸ್ವಾಮಿ ನೀಡಿದ ವಿವರಣೆ ಕೇಳಿಸಿಕೊಂಡಾದ ನಂತರ ನುಡಿದ.

“ಸರ್ ಮಾಲತಿಗೇನಾದರೂ ಹಳೆಯ ಅಫೇರ ಇದ್ದು ಆ ಪಾಗಲ್ ಪ್ರೇಮಿ ಹೀಗೆ ಮಾಡಿರಬಹುದು ಅನ್ನುವುದು ಸರಿ ಅನಿಸಬಹುದುದಾದರೂ ಮಾಲತಿಗೆ ಅಂತಹ ಯಾವ ಹಿಂದಿನ ಜೀವನ ಇರಲಿಲ್ಲ…ಎಲ್ಲ ವಿಚಾರಿಸಿದೆ ಅವಳು ಕೆಲಸ ಮಾಡುವ ಕಚೇರಿ, ಅವಳ ಗೆಳತಿಯರು ಉಹುಂ ಕ್ಲೀನ ಇಮೇಜ್ ಇದೆ ಅವಳದು. ಕರಿಯರ್ ಗೋಲ್ ಸಾಧಿಸುವತ್ತ ಅವಳ ಗಮನ..ಸಾಧಾರಣ ಕುಟುಂಬದ ಹಿನ್ನೆಲೆಯಿಂದ ಬಂದವಳು ಈಗ ಮದುವೆ ನಿಶ್ಚಯವಾಗಿತ್ತು ಆದರೆ ವಿಧಿ ಬೇರೆಯದೇ ಕತೆ ಬರೆದಿದೆ…”

“ಇನ್ನೊಂದು ಸಂಗತಿ ಗಮನಿಸು…ಅಂದು ಆಕೆ ಬೆಳಗಾವಿಗೆ ಹೋಗುವವಳಿದ್ದಾಳೆ ಈ ವಿಷಯ ಮೋಹನನಿಗೆ ತಿಳಿದಿತ್ತು….ಯಾಕೆಂದರೆ ಸೆಕ್ಯುರಿಟಿಯವ ಅವಳು ಬಂದಿದಾಳೆ ಅಂತ ಹೇಳಿದಾಗ ಇವ ಸ್ವಾಗತಿಸಿದ್ದಾನೆ…ಬಂದವಳು ಅವಳಲ್ಲ ಅಂತ ಗೊತ್ತಾಗಿದ್ದುದು ಆ ವ್ಯಕ್ತಿ ಬಾಗಿಲ ಬಳಿ ಬಂದಾಗಲೇ….ವಿಚಿತ್ರ ಅಂದರೆ ಅವ ಒಳಗೆ ಬಿಟ್ಟುಕೊಂಡಿದ್ದಾನೆ ಅಂದರೆ ಮೋಹನನಿಗೆ ಹಾಗೆ ವೇಷ ಬದಲಾಯಿಸಿ ಬಂದ ವ್ಯಕ್ತಿ ಪರಿಚಿತನೇ…ಮತ್ತು ಆ ವ್ಯಕ್ತಿಗೆ ಆ ದಿನ ಮಾಲತಿ ಊರಲ್ಲಿಲ್ಲ ಅನ್ನೋದು ಗೊತ್ತಿರಲಾರದು. ಹೆಂಗಸಿನ ಡ್ರೆಸ ಹಾಕಿಕೊಂಡು ಬಂದಿದ್ದು, ಸೆಕ್ಯುರಿಟಿಯವನಿಗೆ ಮಾಲತಿಯ ಹೆಸರು ಹೇಳಿದ್ದು ..ಮೋಹನನ ಪಕ್ಕ ಸಿಕ್ಕ ಹಾಳೆಯ ಮೇಲಿನ ಎಮ್ ಅಕ್ಷರ ಈ ಎಲ್ಲಾ ಸಂಗತಿಗಳು ಮಾಲತಿಗೆ ಫ್ರೇಮ್ ಮಾಡಲು ಮಾಡಿದ್ದು……” ದೇಶಪಾಂಡೆ ತನ್ನ ದೀರ್ಘಮಾತು ನಿಲ್ಲಿಸಿದ.

“ಅಹುದು ಸರ್ ಈ ಕೇಸು ಜಟಿಲವಾಗಿದೆ. ನೂರೆಂಟು ಸಿಕ್ಕು ಇವೆ. ಬ್ರೇಕ್ ಸಿಗಬೇಕು ಯಾವುದಾದರೂ ಸರಿ….” ಮುನಿಸ್ವಾಮಿಯ ದನಿಯ ಹತಾಶೆ ಗಮನಿಸಿದ ದೇಶಪಾಂಡೆ ಮುಗುಳ್ನಕ್ಕ.

“ಎಂತಹ ಚಾಣಾಕ್ಷ ಕೊಲೆಗಾರನಾದರೂ ಒಂದು ತಪ್ಪು ಮಾಡಿಯೇ ಮಾಡಿರುತ್ತಾನೆ…ಆ ತಪ್ಪು ಯಾವುದು ಅದು ಗೊತ್ತಾದರೆ ಈ ಕೆಲಸ ಸುಲಭ…”

ಮೇಲಧಿಕಾರಿಗೆ ವಂದನೆ ಸಲ್ಲಿಸಿ ಮುನಿಸ್ವಾಮಿ ಹೊರ ನಡೆದ. ದಾರಿಯುದ್ದಕೂ ಯೋಚನೆ ಮಾಡಿದ. ಕಣ್ಣ ಮುಂದೆ ತೇಲಿಬಂದ ಮೋಹನನ ಶವ ಎದೆತುಂಬ ಚುಚ್ಚಿದ ಗಾಯ ಒಸರಿದ ರಕ್ತ ಸುಟ್ಟ ಅರಿವೆಗುಂಪು ಅದರಲ್ಲಿನ ಪ್ಯಾಡೆಡ್ ಬ್ರಾ….ಎಲ್ಲ ಗೋಜಲುಗೋಜಲಾಗಿದೆ ಅಂದುಕೊಂಡ.

*****

ಮುಂದಿನ ಎರಡುಮೂರು ದಿನ ಮುನಿಸ್ವಾಮಿ ಬಯಸಿದ ಬ್ರೇಕ್ ಸಿಗಲಿಲ್ಲ. ರಿಲೀವರ ಗಾರ್ಡನ ಹುಡುಕಲು ಹೋದ ಓಂಕಾರಪ್ಪ ಗಾರ್ಡಗೆ ಜ್ವರ ತೀವ್ರವಾಗಿ ತನ್ನ ಹುಟ್ಟಿದೂರಿಗೆ ಹೋಗಿದ್ದಾಗಿ ತಿಳಿಸಿದ್ದ. ಅಂತೆಯೇ ಎಲ್ಲ ರಿಪೋರ್ಟ ಹರಡಿಕೊಂಡು ಕೂತು ತಡಕಾಡಿದಾಗಲೂ ಏನೂ ಹೊಳೆದಿರಲಿಲ್ಲ. ಮೋಹನನ ಲ್ಯಾಪಟಾಪ ಎಲ್ಲ ಬಗೆದು ನೋಡಿದ ತಜ್ಞ ಸಹ ರಿಪೋರ್ಟ ಕೊಟ್ಟಿದ್ದ. ತನ್ನ ಖಾಸಗಿ ಲ್ಯಾಪಟಾಪಿನಲ್ಲಿ ಕೆಲವು ವೈಯಕ್ತಿಕ ಫೋಟೋಗಳನ್ನು ಕಲೆಹಾಕಿದ್ದ. ಅವನ ಫೇಸಬುಕ್ ಖಾತೆ ಸಹ ವಿಶೇಷವಾಗಿ ಏನೂ ಹೇಳಿರಲಿಲ್ಲ. ಒಂದು ಫೋಲ್ಡರಿನಲ್ಲಿ ಮಾತ್ರ ಸಲಿಂಗಕಾಮದ ಬಗ್ಗೆ ಕೆಲವು ವಿಡಿಯೋಗಳು, ಅನುಭವದ ಲೇಖನಗಳು ಇದ್ದವು. ಹಾಗೂ ಕೆಲ ವಬಸೈಟ್ ನ ಲಿಂಕಗಳು ಇದ್ದವು. ಮೋಹನನಿಗೆ ಮದುವೆಯಾಗುವುದಿತ್ತು..ಸಾಮಾನ್ಯವಾಗಿ ಈ ಸಲಿಂಗಿಗಳು ಮದುವೆ, ಹೆಂಗಸು ಇತ್ಯಾದಿಗಳಿಂದ ದೂರ ಇರುತ್ತಾರೆ…. ಈ ಬಗ್ಗೆ ಮಾಲತಿಗೆ ಕೇಳಬೇಕು ಅನಿಸಿತು ಮುನಿಸ್ವಾಮಿಗೆ.

“ವಾಟ್ ನನಗೆ ನಂಬಲಾಗುತ್ತಿಲ್ಲ… ನಮ್ಮ ಮದುವೆ ನಿಕ್ಕಿಯಾದಮೇಲೆ ಸಾಕಷ್ಟು ಸಲ ನಾವು ಮಾತಾಡಿದ್ದೇವೆ… ಆಫಕೋರ್ಸ ತಮ್ಮ ಅತೀತ ಹಂಚಿಕೊಂಡರೆ ಮುಂದಿನ ಜೀವನದ ತಳಪಾಯ ಗಟ್ಟಿಯಾಗಿರುತ್ತದೆ ಅಂತ ನಾ ಅನೇಕ ಸಲ ಹೇಳಿದ್ದೆ…..ಆದರೆ ಅವ ಇಂತಹ ಪ್ರಮುಖ ಸಂಗತಿ ಯಾಕೆ ಮುಚ್ಚಿಟ್ಟ….” ಮಾಲತಿ ಮುನಿಸ್ವಾಮಿಯ ಮುಂದೆ ಕುಳಿತಿದ್ದಳು. ಅವಳ ಆಫೀಸಿನ ಹತ್ತಿರದ ಕಾಫಿಬಾರ್ ನಲ್ಲಿ ಭೇಟಿಯಾಗಲು ಬರುವಂತೆ ಮುನಿಸ್ವಾಮಿ ಹೇಳಿದ್ದ.

“ಆದರೆ ನಮಗೆ ಸಿಕ್ಕಿರೋದು ಬರೀ ವಿಡಿಯೋಗಳು ಹಾಗೂ ಗೇ ತನಕ್ಕೆ ಸಂಬಂಧಿಸಿದ ಸಾಹಿತ್ಯಮಾತ್ರ…. ಮೋಹನ್ ಗೇ ಆಗಿದ್ದನೋ ಇಲ್ಲವೋ ಗೊತ್ತಿಲ್ಲ. ಬೈದಿ ವೆ ನೀವು ಮೋಹನನ ಫ್ಲಾಟಗೆ ಎಷ್ಟು ಸಲ ವಿಸಿಟ್ ಮಾಡಿರುವಿರಿ…”

“ಅವನ ತಂದೆ ತಾಯಿ ಬಂದಾಗ ಒಮ್ಮೆ ಹೋಗಿದ್ದೆ… ಯಾಕೆ…?.” ಅವಳ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ.

“ಅಂದು ನೀವು ಬೆಳಗಾವಿಗೆ ಹೋಗಿರೋದು ಮೋಹನನಿಗೆ ಗೊತ್ತಿತ್ತು ಆದರೂ ಗಾರ್ಡ ಹೇಳಿದುದ ಅವ ಯಾಕೆ ನಂಬಿದ ನೀವು ನಿಮ್ಮ ಫೋನ ನಂಬರ ಬೇರೆಯವರಿಗೆ ಶೇರ ಮಾಡಿದೀರಾ ….ಹಾಗೆಯೇ ರೂಮಿನಲ್ಲಿ ಸಿಕ್ಕ ಸುಟ್ಟ ಅರಿವೆಗಳು ನಿಮ್ಮವಲ್ಲ ಅಂತ ನೀವು ಖಾತ್ರಿಯಿಂದ ಹೇಳುವಿರಾ…..’ ಅವನ ನೇರ ಪ್ರಶ್ನೆ ಅವಳಿಗೆ ಸಿಟ್ಟು ತರಿಸಿತ್ತು.

“ಸರ್ ನಾನು ಮದುವೆಯಾಗೋ ಹುಡುಗ ಕೊಲೆಯಾಗಿದ್ದಾನೆ…ನಿಮಗೇ ಗೊತ್ತು ನಾ ಅವತ್ತು ಊರಲ್ಲಿರಲಿಲ್ಲ ಅಂತ ಸೋ ನೀವು ಒಂಥರಾ ನನ್ನ ಕ್ಯಾರೆಕ್ಟರ್ ಬಗ್ಗೆ ಸಂದೇಹ ಪಡುತ್ತಿದ್ದೀರಾ…ನಾ ಮತ್ತೆ ಹೇಳುವೆ..ಮೋಹನ ತಂದೆತಾಯಿ ಇದ್ದಾಗ ಮಾತ್ರ ನಾ ಅವನ ಮನೆಗೆ ಹೋಗಿದ್ದೆ…” ಅವಳಿಗೆ ಕೋಪ ಬಂದಿತ್ತು. ಮುನಿಸ್ವಾಮಿಯ ವಿವರಣೆಗೂ ಕಾಯದೇ ಅವಳೆದ್ದು ಹೋದಳು.

*****

ಬೆಳಿಗ್ಗೆ ಠಾಣೆಗೆ ಬಂದವನಿಗೆ ಓಂಕಾರಪ್ಪ ಶುಭಸುದ್ದಿ ಹೇಳಿದ. ಮೂಲೆಯ ಬೆಂಚಿನ ಮೇಲೆ ನಡುಗುತ್ತ ಕುಳಿತ ವ್ಯಕ್ತಿ ರಿಲೀವರ್ ಗಾರ್ಡ ಆಗಿದ್ದ. ಅವ ಕೆಲಸ ಮಾಡುವ ಏಜೆನ್ಸಿಯ ಸೂಪರವೈಸರಗೆ ಓಂಕಾರಪ್ಪ ಇವ ಡ್ಯೂಟಿಗೆ ಬಂದರೆ ತಕ್ಷಣ ಠಾಣೆಗೆ ಕಳಿಸಿಕೊಡುವಂತೆ ಬಜಾಯಿಸಿ ಬಂದಿದ್ದ. ಇಂದು ಆ ಗಾರ್ಡ ರಜೆ ವಿಸ್ತರಿಸಿಕೊಳ್ಳಲು ಬಂದಿದ್ದ. ಸುಪರವೈಜರ ಪೋಲಿಸರು ಹುಡುಕಿಕೊಂಡು ಬಂದಿದ್ದರು ಅಂತ ಹೇಳಿದಾಗ ಇವ ಠಾಣೆಗೆ ಬಂದಿದ್ದಾನೆ. ಮುನಿಸ್ವಾಮಿ ತನ್ನ ಎದುರು ಕುಳಿತವನನ್ನು ಗಮನಿಸಿದ. ಜ್ವರದಿಂದ ಬಳಲಿದ ಗುರುತು ಅದರ ಕುರುಹಾಗಿ ಒಳಗಿಳಿದ ಕೆನ್ನೆ, ಕಣ್ಣುಗಳು..ಕುರುಚಲು ಗಡ್ಡ . ಕಾಫಿ ತರಿಸಿದ ಮುನಿಸ್ವಾಮಿ ಕುಡಿಯಲು ಆಗ್ರಹ ಮಾಡಿದ.

ಅವ ಕಾಫಿ ಕುಡಿದಾದ ಮೇಲೆ ಪ್ರಶ್ನೆ ಕೇಳಲು ಸುರುಮಾಡಿದ. ಅವನ ಪ್ರಶ್ನೆಗಳು ಅಂದು ಶುಕ್ರವಾರ ಅವ ಡ್ಯೂಟಿಗೆ ಹಾಜರಾದ ವೇಳೆ ಹಾಗೂ ಆ ಸಮಯದಲ್ಲಿ ಯಾರಾದರೂ ಹೆಂಗಸು ಹೊರಗೆ ಹೋದ ಬಗ್ಗೆ ದಾಖಲಾತಿ ಇದೆಯೇ ಈ ಕುರಿತಾಗಿ ಇತ್ತು.

“ಇಲ್ಲ ಸರ್ ನಮ್ಮ ರಿಜಿಸ್ಟರಿನಲ್ಲಿ ಒಳಗಡೆ ಹೋದವರ ವಿವರ ದಾಖಲಾಗುತ್ತದೆ. ಮನೆಕೆಲಸದವರು ಹಾಗೂ ಮೇಡ್ ಗಳಿಗೆ ಬೇರೆ ರಿಜಿಸ್ಟರ್ ಇದೆ ವಿಸಿಟರ್ಸಗೆ ಬೇರೆ..ಸಾಮಾನ್ಯವಾಗಿ ವಿಸಿಟರ್ಸ ಬಂದವರ ಹೊರಗಡೆ ಹೋದ ದಾಖಲಾತಿ ಅಂದರೆ ಅವು ಹೊರಗೆ ಹೋದ ವೇಳೆ ನಾವೇ ಅಂದರೆ ಡ್ಯುಟಿ ಮೆಲಿರುವವರು ಗುರುತು ಮಾಡಿಕೊಳ್ಳುತ್ತೇವೆ…..”

“ಆದರೆ ಅವತ್ತು ಮಾಲತಿ ಅಂತ ವಿಸಿಟರ್ ಒಳಗೆ ಬಂದ ದಾಖಲಾತಿ ಮಾತ್ರ ಇದೆ ಹೊರಗಡೆ ಹೋದಬಗ್ಗೆ ನೀನು ಉಲ್ಲೇಖಿಸಿಲ್ಲ ಯಾಕೆ?” ಮುನಿಸ್ವಾಮಿಯ ಗಡಸು ದನಿಗೆ ಬೆದರಿದಂತೆ ಕಂಡ ಗಾರ್ಡ.

“ನಿಜ ಸರ್ ನಾನು ಈ ಬಗ್ಗೆ ಅಂದರೆ ಔಟರ್ ಕಾಲಮ ಖಾಲಿ ಇದ್ದ ಬಗ್ಗೆ ಸೂಪರವೈಸರ್ ಗೆ ಹೇಳಿದೆ. ಅಂದು ನನಗೆ ಡ್ಯೂಟಿಗೆ ಬರುವುದೇ ಮನಸ್ಸಿರಲಿಲ್ಲ…ವಿಪರೀತ ಜ್ವರವಿತ್ತು. ನನ್ನ ಡ್ಯೂಟಿ ಮುಗಿಯೋದು ರಾತ್ರ ೧೧ ಗಂಟೆಗೆ ಆದರೆ ನನಗೆ ತೀರ ಕಸಿವಿಸಿಯಾಗಿತ್ತು ಹೀಗಾಗಿ ಬೇಗ ಅಂದರೆ ೫:೩೦ಕ್ಕೆ ಹೊರಟುಹೋದೆ….”

“ಅಂದರೆ ಮೋಹನ್ ಕೊಲೆಯಾದಾಗ ಅಥವಾ ಅವನ ಶವ ಪತ್ತೆಯಾದಾಗ ನೀನು ಇರಲಿಲ್ಲ….ಓಕೆ ಆ ಒಂದು ಒಂದೂವರೆ ಗಂಟೆಯಲ್ಲಿ ಮತ್ತಾರಾದರೂ ಬಂದಿದ್ದರಾ…ವಿಸಿಟರ್ಸ….ಅಥವಾ ಯಾರಾದರೂ ಹೊರಗಡೆ ಹೋದರಾ ನೆನಪುಮಾಡಿಕೊಂಡು ಹೇಳು….”

“ಸರ್ ಮದನ ಸರ ಬಂದಿದ್ದರು. ಅಂದರೆ ಒಳಗಿನಿಂದ ಹೊರಗೆ ಹೊರಟಿದ್ದರು. ಆದರೆ ಅವರು ಒಳಗೆ ಹೋದ ಬಗ್ಗೆ ರಿಜಿಸ್ಟರ್ ನಲ್ಲಿ ದಾಖಲಾಗಿಲ್ಲ. ಒಂಥರಾ ವಿಚಿತ್ರ ಗಡಿಬಿಡಿಯಲ್ಲಿದ್ದರು ಅವರು…ಬಹುಷಃ ಮೋಹನಸರರ ಪ್ಯಾಂಟ ಹಾಕಿಕೊಂಡಿದ್ದರೇನೋ..ಅದು ಇಳಿಇಳಿದು ಹೋಗುತ್ತಿತ್ತು. ಕೈಯಲ್ಲಿ ಗ್ಲವಸ್ ಹಾಕಿಕೊಂಡಿದ್ದರು.. ನಾ ಮಾತನಾಡಿಸಿದೆ. ಅವರು ನನಗೆ ಬೇರೆ ಕಡೆ ಕೆಲಸ ಕೊಡಿಸುವುದಾಗಿ ಹೇಳಿದ್ದರು ಹಲವು ಸಲ ದುಡ್ಡಿನ ಸಹಾಯ ಮಾಡಿದ್ದರು. ಆ ಬಗ್ಗೆ ಅವರಿಗೆ ನೆನಪಿಸಿದೆ….ಈಗ ಅದಕೆಲ್ಲ ಟೈಮಿಲ್ಲ ಅಂತ ರೇಗಿ ಹೊರಟು ಹೋದರು…..ಸಹಸಾ ಅವರು ತಮ್ಮ ಕಾರಿನಲ್ಲಿ ಬರುತ್ತಿದ್ದರು…. ಆದರೆ ಅವರು ಹೊರಗಡೆ ಹೋಗಿ ಆಟೋ ಹತ್ತಿದರು…”

“ ಈ ಮದನ್ ಯಾರು ನಿನಗೆ ಗೊತ್ತಿದೆಯೇ?”

“ಅವರು ಮೋಹನ ಸರ ಅವರ ಕ್ಲೋಸಫ್ರೆಂಡು. ಪ್ರತೀ ಶುಕ್ರವಾರ ಸಂಜೆ ಮೋಹನ ಸರ ಮನೆಗೆ ಬರೋರು…ಶನಿವಾರದ ಸಾಯಂಕಾಲ ಇಲ್ಲವೇ ರವಿವಾರದ ಬೆಳಿಗ್ಗೆಯವರೆಗೂ ಇರುತ್ತಿದ್ದರು. ತುಂಬಾ ಒಳ್ಳೆಯ ಮನುಷ್ಯ ಸರ್…ನನಗೆ ವಿಶ್ವಾಸದಿಂದ ಯಾವಾಗಲೂ ಮಾತಾಡಿಸುತ್ತಿದ್ದರು. ನಾನು ನಿನಗೆ ಒಂದು ಒಳ್ಳೆಯ ಕೆಲಸ ಕೊಡಿಸುವೆ ಅಂತ ತಮ್ಮ ಕಾರ್ಡ ಸಹ ಕೊಟ್ಟಿದ್ದರು…ನೋಡಿ ಇಲ್ಲಿದೆ ಆ ಕಾರ್ಡ….” ಗಾರ್ಡ ತನ್ನ ಬಳಿ ಇದ್ದ ಕಾರ್ಡ ಮುನಿಸ್ವಾಮಿಗೆ ಕೊಟ್ಟ. ಒಂದು ಕಂಪನಿಯ ದೊಡ್ಡ ಹುದ್ದೆ ಮದನ್ ಹೊಂದಿದ್ದ ಅಂತ ಹೇಳುತ್ತಿತ್ತು ಆ ಕಾರ್ಡ…ಅಲ್ಲಿರುವ ಫೋನ ನಂಬರ ನೋಟ ಮಾಡಿಕೊಂಡು ಅಂತೆಯೇ ಕಾರ್ಡಿನ ನಕಲು ತೆರೆಯಲು ಹೇಳಿದ.

“ನೀ ಗಮನಿಸಿದ ಹಾಗೆ ಮದನ್ ಅವರ ವರ್ತನೆ ಹೇಗಿತ್ತು ಅಂದರೆ ಗಾಬರಿಗೊಂಡಿದ್ದರಾ ಅಥವಾ ಮತ್ತೆ ಹೇಗಿತ್ತು ಅವರ ವರ್ತನೆ?”

“ಇಲ್ಲ ಸರ ಬಹುಷಃ ಅವರು ಹಾಕಿಕೊಂಡ ಪ್ಯಾಂಟು ಇಳಿದು ಹೋಗುತ್ತಿತ್ತು…ಬೆಲ್ಟ ಹಾಕಿಕೊಂಡಿರಲಿಲ್ಲ…ವಿಚಿತ್ರ ಅನಿಸಿದ್ದು ನನ್ನ ಜೊತೆ ಅವರು ಮಾತನಾಡಲಿಲ್ಲ…ತಮ್ಮ ಗ್ಲವಸ್ ಹಾಕಿಕೊಂಡ ಮುಂಗೈಯಿಂದ ಬರೀ ವೇವ್ ಮಾಡಿ ಅವಸರವಾಗಿ ಹೋದರು….”

“ಆದರೆ ಮದನ್ ಒಳಗೆ ಹೋಗಿದ್ದು ನಿಮ್ಮ ರಿಜಿಸ್ಟರ್ ನಲ್ಲಿ ದಾಖಲಾಗಿಲ್ಲ ಅವರು ಹೊರಗೆ ಹೋಗಿದ್ದಾರೆ ಅಂದರೆ ಅವರು ಒಳಹೋಗಿರಲೇ ಬೇಕು..ಹೋಗಲಿ ನೀನು ಅವರು ಹೊರಗೆ ಹೋದ ವೇಳೆ ಗುರುತು ಮಾಡಿಕೊಂಡಿರುವೆಯಾ…ಹೇಗೆ…”

“ಸರ್ ನನ್ನ ಡ್ಯೂಟಿ ನಾ ಮಾಡಿದೆ. ಹೊರಗಡೆ ಹೋದ ವೇಳೆ ದಾಖಲು ಮಾಡಿದೆ. ನನಗೂ ಅವರು ಒಳಗಡೆ ಹೋದ ಬಗ್ಗೆ ದಾಖಲು ಇರದಿದ್ದುದು ವಿಚಿತ್ರ ಅನಿಸಿತು….ಅಂತೆಯೇ ಆ ಮಾಲತಿ ಮ್ಯಾಡಂ ಹೊರಗಡೆ ಹೋದ ಬಗ್ಗೆನೂ ಯಾವ ದಾಖಲೆ ಇಲ್ಲ…” ಗಾರ್ಡ ಸಹಜವಾಗಿಯೇ ನುಡಿದ.

ಮುನಿಸ್ವಾಮಿ ಆ ಗಾರ್ಡಗೆ ಹೋಗಲು ಹೇಳಿ ಅವಶ್ಯ ಬಿದ್ದರೆ ಮತ್ತೆ ಬರಬೇಕಾಗಬಹುದು ಅಂತ ಎಚ್ಚರಿಸಿ ತನ್ನ ಫೋನ ನಂಬರ ವಿಳಾಸ ಕೊಟ್ಟು ಹೋಗುವಂತೆ ತಾಕೀತು ಮಾಡಿದ. ದೊಡ್ಡ ಕಂಪನಿ ಅಧಿಕಾರಿ ಅವ ಮೋಹನನ ಮನೆಗೆ ಯಾಕೆ ಪ್ರತಿ ಶುಕ್ರವಾರ ಬರುತ್ತಿದ್ದ…ಅಂದು ಅವ ಮೋಹನನ ಪ್ಯಾಂಟ ತನಗೆ ಹೊಂದುತ್ತಿರಲಿಲ್ಲವಾದರೂ ಧರಿಸಿದ್ಯಾಕೆ…ಗಾರ್ಡ ಹೇಳಿದ ಹಾಗೆ ಗಲಿಬಿಲಿಗೊಂಡಿದ್ದ…ಏನೋ ಇದೆ ಅವನಿಗೆ ವಿಚಾರಿಸಬೇಕು ಆದರೆ ಅದಕೂ ಮೊದಲು ಈ ಬೆಳವಣಿಗೆಯ ಬಗ್ಗೆ ದೇಶಪಾಂಡೆ ಸಾಹೇಬರಿಗೆ ಹೇಳಬೇಕು ಅಂದುಕೊಂಡ. ಮೇಲಧಿಕಾರಿಯ ಭೇಟಿಯಾಗಲು ಹೊರಟು ನಿಂತವನಿಗೆ ಒಂದು ಕಾಲ್ ಬಂತು. ಮತನಾಡುತ್ತ ಹೋದಂತೆ ಉತ್ಸಾಹಿತನಾದ. ಜಟಿಲವೆನಿಸಿದ ಕೇಸಿನ ಈ ತಿರುವು ಅನಿರೀಕ್ಷಿತವಾಗಿತ್ತು. ಕಾಲ್ ಬಂದಿದ್ದು ಮೋಹನನ ತಾಯಿಯಿಂದ. ಅವರು ಬೆಂಗಳೂರಿಗೆ ಬಂದಿದ್ದಾರೆ ಕೆಲ ವಿಷಯ ಮಾತನಾಡಬೇಕು ಭೇಟಿಯಾಗಬಹುದೇ ಅಂತ ಕೇಳಿದರು. ಅವರು ಉಳಿದುಕೊಂಡ ಬಳಗದವರ ಮನೆಯ ವಿಳಾಸ ಗುರುತಿಸಿಕೊಂಡ ಮುನಿಸ್ವಾಮಿ ತಾನೇ ಬಂದು ಭೇಟಿಯಾಗುವುದಾಗಿ ಹೇಳಿದ.

*****

ಅದೇ ತಾನೇ ಒಂದು ಮುಖ್ಯವಾದ ಮೀಟಿಂಗ ಮುಗಿಸಿ ತನ್ನ ಕ್ಯಾಬೀನಿಗೆ ಬಂದು ತಂಪು ನೀರು ಕುಡಿಯುತ್ತಿದ್ದ ಮದನನಿಗೆ ರಿಸೆಪ್ಷನನಿಂದ ಫೋನ ಬಂತು. ಪೋಲಿಸ ಅಧಿಕಾರಿಯೊಬ್ಬ ಭೇಟಿಯಾಗಲು ಕಾದಿದ್ದಾನೆ ಅಂತ ಮೆಸೇಜು ನೀಡಿದಳು ರಿಸೆಪ್ಷನ್ ಹುಡುಗಿ. ಒಂದರೆಕ್ಷಣ ದಿಗಿಲಾದರೂ ತೋರಿಸದೆ ಅವರಿಗೆ ಹೊರಗಡೆಯ ವಿಜಿಟರ್ಸ ರೂಮಲ್ಲಿ ಕಾಯಲು ಹೇಳಿ ಮತ್ತೆ ನೀರು ಕುಡಿದ. ರೆಸ್ಷ ರೂಮಿನ ಕನ್ನಡಿಯಲ್ಲಿ ಮುಖನೋಡಿಕೊಂಡ ಸ್ವಲ್ಪ ಬಿಳಿಚಿದಂತನಿಸಿತು ಕೆಲಸದ ಒತ್ತಡವೋ ಅಥವಾ ಪೋಲಿಸ ಬಂದಿದ್ದಕ್ಕೋ ಏನೇ ಇರಲಿ ಹೋಗಿ ಮಾತನಾಡಿಸುವುದು ಅಂದುಕೊಂಡ.

ಪ್ಯೂನ ತಂದಿಟ್ಟ ಕಾಫಿ ರುಚಿಯಾಗಿತ್ತು. ಮುನಿಸ್ವಾಮಿ ಧನ್ಯವಾದ ಹೇಳಿದ. ಕ್ಯಾಬಿನ್ ಬಾಗಿಲು ದೂಡಿಕೊಂಡು ಒಳಬಂದವ ತೆಳ್ಳಗೆ ಬೆಳ್ಳಗಿದ್ದ. ಅವ ನೀಡಿದ ಕೈ ಕುಲುಕಿದಾಗ ತೀರ ಮೆದುವೆನ್ನಿಸಿತು ಸ್ಫರ್ಶ.

“ಹೇಳಿ ಸರ್ ನನ್ನ ಬಳಿ ಏನು ಕೆಲಸವಿತ್ತು” ತನ್ನ ಎದಿರು ಕುಳಿತ ವ್ಯಕ್ತಿ ಗಾಬರಿಗೊಂಡಿದ್ದಾನೆಯೇ ಅಥವಾ ಈತ ಮಾತನಾಡುವುದು ಹೀಗೆಯೇ ತೀರ ಮೆದುವಾಗಿ ಒಂದೊಂದು ಶಬ್ದ ಆಯ್ದು ಆಯ್ದು ಮಾತನಾಡಿದಂತಿತ್ತು.

“ಮದನ್ ಅವರೇ ಮೋಹನ ಯಾರು ನಿಮಗೆ ಗೊತ್ತೇ ನೀಲಾದ್ರಿ ಅಪಾರ್ಟಮೆಂಟಿನ ಫ್ಲಾಟ್ ೩೦೪ರಲ್ಲಿ ವಾಸವಾಗಿದ್ದರು…ಅವರು ಕೊಲೆಯಾಗಿರುವುದು ನಿಮಗೆ ಗೊತ್ತೇ….”

“ವಾಟ್ ಮೋಹನ ಕೊಲೆಯಾಯಿತೇ…ಈಗೊಂದೆರಡು ದಿನದಿಂದ ಫೋನ ತೆಗೀತಿಲ್ಲ…ಆದ್ರೆ ಇದು ಶಾಕಿಂಗ ನ್ಯೂಸ ನೀವು ಹೇಳಿದ್ದು…ಯಾರು ಕೊಲೆಗಾರ ಸುಳಿವು ಸಿಕ್ಕಿದೆಯೇ ಅರೆಸ್ಟ ಆಗಿದ್ದಾನೆಯೇ….” ದನಿಯಲ್ಲಿ ಉದ್ವೇಗವಿತ್ತು. ಒಂದಂತೂ ಮುನಿಸ್ವಾಮಿಗೆ ನಿಜವೆನ್ನಿಸಿತು ಇವ ನಿಜಕ್ಕೂ ಶಾಕ್ ಗೆ ಒಳಗಾಗಿದ್ದಾನೆ ಅಥವಾ ಈತ ಒಳ್ಳೆಯ ಆಕ್ಟರ್ ಅಂದುಕೊಂಡ.

ಮೋಹನನ ಕಾಲ ಹಿಸ್ಟರಿ ತೆಗೆಸಲಾಗಿತ್ತು. ಈ ಮದನ ಹೆಸರನ್ನು ಅವ ಬೇರೆ ಹೆಸರಿನಲ್ಲಿ ಸೇವ ಮಾಡಿಕೊಂಡಿದ್ದ. ಆ ನಂಬರ ಓದಿ “ಇದು ನಿಮ್ಮ ನಂಬರ ಅಲ್ವೇ.. ಬುಧವಾರ ರಾತ್ರಿ ಅವನಿಗೆ ನೀವು ಫೋನ ಮಾಡಿದ್ರಿ ಅಲ್ಲವೇ” ಇನಸ್ಪೆಕ್ಟರನ ಪ್ರಶ್ನೆಗೆ ಮದನ ವಿಚಲಿತನಾದ. ಅದನ್ನು ಗಮನಿಸಿದ ಚಾಣಾಕ್ಷ ಮುನಿಸ್ವಾಮಿ ಇನ್ನೊಂದು ಪ್ರಶ್ನೆ ಎಸೆದ.

“ಹೋದ ಗುರುವಾರ ನೀವು ನೀಲಾದ್ರಿ ಅಪಾರ್ಟಮೆಂಟಿಗೆ ಯಾಕೆ ಹೋಗಿದ್ರಿ ಅಂತ ಕೇಳಬಹುದೇ….” ನೇರವಾಗಿತ್ತು ಪ್ರಶ್ನೆ.

“ನಾನಾ ಇಲ್ಲ ಹೋಗಿಲ್ಲ…ಅವತ್ತೇನಾ ಅವನು ಕೊಲೆಯಾಗಿದ್ದು ನಾನು ವೀಕೆಂಡ್ ಊರಲ್ಲಿರಲಿಲ್ಲ ಹೀಗಾಗಿ ಗೊತ್ತಿಲ್ಲ…”

“ನಿಮ್ಮ ಆತ್ಮೀಯ ಸಂಗಾತಿ ಕೊಲೆಯಾಗಿದ್ದಾನೆ ನಿಮ್ಮ ವರ್ತನೆ ನೊಡಿದರೆ ನಿಮಗೆ ಏನೂ ಅನಿಸಿಯೇ ಇಲ್ಲ ಅನ್ನುವ ಹಾಗಿದೆ..ಇರಲಿ ನೀವು ಅಂದು ಅಪಾರ್ಟಮೆಂಟಿನಿಂದ ಸಂಜೆ ಸುಮಾರು ೫ ಗಂಟೆಗೆ ಹೋಗಿದ್ದು ಆ ಅಪಾರ್ಟಮೆಂಟಿನ ರಿಜಿಸ್ಟರನಲ್ಲಿ ದಾಖಲಾಗಿದೆ. ಅಂತೆಯೇ ಅಂದು ಆ ವೇಳೆಗೆ ಡ್ಯೂಟಿಮೇಲಿದ್ದ ಗಾರ್ಡ ನಿಮಗೆ ಚೆನ್ನಾಗಿ ಪರಿಚಿತ ಅವ ನೀವು ಹೊರಗಡೆ ಹೋಗಿದ್ದನ್ನು ನೋಡಿದ್ದಾನೆ, ನಿಮ್ಮನ್ನು ಮಾತನಾಡಿಸಿದ್ದಾನೆ ಕೂಡ…ನೀವು ಯಾವಾಗಲೂ ಗ್ಲವುಸ್ ಹಾಕತೀರಾ “ ಮುನಿಸ್ವಾಮಿಯ ಮಾತು ಅವನಿಗೆ ನಟ್ಟಿದ್ದವು. ಆಸಾಮಿ ಗಲಿಬಿಲಿಗೊಂಡಿದ್ದ.

“ನೋಡಿ ಮದನ್, ಮೋಹನ ಕೊಲೆಯಾಗಿದ್ದಾನೆ ಹಾಗೂ ಆ ವೇಳೆಯಲ್ಲಿ ಅವನ ಮನೆಯಲ್ಲಿ ನೀವು ಇರುವುದು ಸಾಬೀತಾಗಿದೆ. ನಿಮಗೆ ಹೆಣ್ಣಿನಂತೆ ಸಿಂಗರಿಸಿಕೊಳ್ಳಲು ಆಸಕ್ತಿ ಇರುವಂತೆ ಕಾಣುತ್ತದೆ…ಅಲ್ಲವೇ ಮದನ್ …” ಮುನಿಸ್ವಾಮಿ ಪಟ್ಟು ಬಿಡಲಿಲ್ಲ.

“ನೋಡಿ ಮದನ್, ಸತ್ಯ ನಿಮ್ಮಿಂದ ಅಪೇಕ್ಷಿತ. ಎಲ್ಲ ನೇರವಾಗಿ ಹೇಳಿಬಿಡಿ. ಇಲ್ಲವಾದರೆ ಬಾಯಿ ಹೇಗೆ ಬಿಡಿಸಬೇಕು ಇದು ನಮಗೆ ಗೊತ್ತಿದೆ…” ದನಿಯಲ್ಲಿ ಕಾಠಿಣ್ಯತೆ ಇತ್ತು. ಮದನ ಬೆವರತೊಡಗಿದ. ನೀರಿನ ಗ್ಲಾಸ ಅವನಿಗೆ ಕೊಟ್ಟು ಮುನಿಸ್ವಾಮಿ ಕಾದ.

“ನಿಮಗೆ ಮೋಹನ ಮತ್ತು ಮಾಲತಿ ಮದುವೆಯಾಗುತ್ತಿದ್ದಾರೆ ಅಂತ ತಿಳಿದಿತ್ತು… ನಿಮ್ಮ ಸ್ವತ್ತುಅಂತ ನೀವು ಭಾವಿಸಿದ ಮೋಹನ ಈಗ ಬೇರೆ ಹುಡುಗಿಯನ್ನು ಮದುವೆಯಾಗುವುದು ನಿಮಗೆ ರುಚಿಸಿಲ್ಲ. ನೀವು ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಮೋಹನ ನಿಮ್ಮನ್ನು ಬಿಟ್ಟು ಒಂದು ಹೆಂಗಸನ್ನು ಮದುವೆಯಾಗುತ್ತಿದ್ದಾನೆ ಇದು ನಿಮಗೆ ತಡೆಯಲು ಅಸಾಧ್ಯವಾಯಿತು ಅಲ್ಲವೇ? ನೋಡಿ ನಮಗೆಲ್ಲ ಗೊತ್ತಿದೆ..ನೀವು  ಗೇ, ಮದನ ಜೊತೆ ನಿಮಗೆ ಸಲಿಂಗ ಸಂಬಂಧವಿತ್ತು ಆದರೆ ತಪ್ಪೊಪ್ಪಿಗೆ ನಿಮ್ಮಿಂದಲೇ ಬರಲಿ ಇದು ಹಂಬಲ. ಹೇಳಿ ಮಾತಾಡಿ ಸುಮ್ಮನಿದ್ದರೆ ಆಗುವುದಿಲ್ಲ ಮದನ್..” ಮುನಿಸ್ವಾಮಿ ಖಚಿತತೆಯಿಂದ ನುಡಿದ.

ಮದನ್ ಕುಸಿದವರಂತೆ ಸುಮ್ಮನೇ ಕುಳಿತಿದ್ದ. ಕೆಳಗಡೆ ಜೀಪಿನಲ್ಲಿ ಕಾದು ಕುಳಿತ ಓಂಕಾರಪ್ಪನಿಗೆ ಕರೆಯಿಸಿಕೊಂಡ ಮುನಿಸ್ವಾಮಿ ಮದನನ್ನು ಜೀಪಹತ್ತಿಸಿ ಕರೆದೊಯ್ದ.

*****

“ಕಂಗ್ರಾಟ್ಸ್ ಮುನಿಸ್ವಾಮಿ ಆದರೆ ನಿಮಗೆ ಯಾವ ಸುಳಿವು ಸಿಕ್ಕಿತು ಮದನ್ ಬಗ್ಗೆ“ ದೇಶಪಾಂಡೆ ಮುನಿಸ್ವಾಮಿಯ ಕಡೆ ಮೆಚ್ಚುಗೆಯಿಂದ ನೋಡಿದ.

“ಸರ್ ಆ ರಿಲೀವರ್ ಗಾರ್ಡ ಹೇಳಿದ ಹೇಳಿಕೆ ಮದನ್ ಕೊಲೆ ನಡೆದ ವೇಳೆಯಲ್ಲಿ ಅಪಾರ್ಟಮೆಂಟಿನಲ್ಲಿದ್ದ ಇದು ಸಾಬೀತು ಪಡಿಸಿತ್ತು. ಆದರೆ ಅವ ಒಳಗೆ ಹೇಗೆ ಹೋದ ಇದು ಪ್ರಶ್ನೆ ಯಾಮಾರಿಸಲು ಅವ ಮಾಲತಿ ಹೆಸರು ಹೇಳಿದ. ಅಂತೆಯೇ ಪುಷ್ಟಿ ಕೊಡಲು ಹೆಂಗಸಿನ ಡ್ರೆಸ ಹಾಕಿದ್ದ. ಮೋಹನನನಿಗೆ ಮಾಲತಿ ಬಂದಿದ್ದಾಳೆ ಇದು ಕೇಳಿ ಸಹಜವಾಗಿಯೇ ದಿಗಿಲಾಗಿದೆ. ಕಳಿಸುವಂತೆ ಸೆಕ್ಯುರಿಟಿಯವರಿಗೆ ಹೇಳಿದ್ದಾನೆ. ಇನ್ನೊಂದು ಸಂಗತಿ ವಿಚಾರಣೆ ವೇಳೆಯಲ್ಲಿ ಗೊತ್ತಾತು. ಅದೆಂದರೆ ಹೋದವಾರ ಮದನ್ ಬಂದಾಗ ಸೆಕ್ಯುರಿಟಿಯವರು ಮೋಹನನಿಗೆ ಫೋನಮಾಡಿ ಕೇಳಿದ್ದಾರೆ… ಆಗ ಮೋಹನ ಅವನನ್ನು ವಾಪಸ್ ಕಳಿಸಿದ್ದಾನೆ. ಹೀಗಾಗಿ ಮದನ್ ತಲೆ ಓಡಿಸಿ ಮಾಲತಿಯ ವೇಷದಲ್ಲಿ ಬಂದಿದಾನೆ.  ಮಾಲತೀನೆ ಬಂದಿದಾಳೆ ಅಂತ ನಂಬಿದ ಮೋಹನ ಒಳಗೆ ಬಿಟ್ಟುಕೊಂಡಿದ್ದಾನೆ..ಒಂದು ರೀತಿಯಲ್ಲಿ ತನ್ನ ಮೃತ್ಯುವನ್ನು ಆಹ್ವಾನಿಸಿಕೊಂಡಿದ್ದಾನೆ”

“ಆದರೆ ಮೋಟಿವ್ ಏನು? ಹೀಗೆಯೇ ಸಹಜವಾಗಿ ಈ ಕೊಲೆ ನಡೆದಿರಲಾರದು..ಅದರ ಬಗ್ಗೆ ಏನು ಕಂಡುಹಿಡಿದಿರಿ?”

“ಮೋಹನನ ಲ್ಯಾಪಟಾಪನಲ್ಲಿ ಸುಳಿವು ಸಿಕ್ಕವು ಅವ ಗೇ ಆಗಿದ್ದ ಅನ್ನುವುದಕ್ಕೆ ಸಾಕ್ಷಿಯಾಗಿ. ಒಂದು ಗೇ ವೆಬಸೈಟ್ ಮೂಲಕ ಮದನ ಅವನಿಗೆ ಪರಿಚಯವಾದ. ಇಬ್ಬರಲ್ಲೂ ಹೆಚ್ಚಿನ ಆತ್ಮೀಯತೆ ಬೆಳೆಯಿತು. ಪ್ರತಿ ಶುಕ್ರವಾರ ಮದನ್ ಬಂದವ ರವಿವಾರದವರೆಗೂ ಮೋಹನನ ಮನೆಯಲ್ಲಿಯೇ ಇರುತ್ತಿದ್ದ. ಅಂತೆಯೇ ಈ ಫ್ಲಾಟ್ ಕೊಳ್ಳಲು ಮದನ್ ಆರ್ಥಿಕವಾಗಿಯೂ ಸಹಾಯ ಮಾಡಿದ್ದಾನೆ. ತುಸುಜಾಸ್ತಿ ಮೊತ್ತ ಕೂಡ. ಆದಾಗ ವಾಪಸ್ ಮಾಡು ಅಂತಾನೂ ಹೇಳಿದ್ದ. ಇದರ ಬದಲು ಮದನ್ ಮೋಹನನನ್ನು ಬಳಸಿಕೊಳ್ಳುತ್ತಿದ್ದ… ಅದು ಹೇಗಿತ್ತೆಂದರೆ ಅವರಿಬ್ಬರ ನಡುವೆ ಒಂದು ಅಲಿಖಿತ ಕರಾರು ಆಗಿತ್ತು. ಆರು ತಿಂಗಳು ಮದನ ಹೆಣ್ಣು ವೇಷ ಧರಿಸೋದು ಜೊತೆಯಲ್ಲಿರುವ ವೀಕೆಂಡ ಪೂರ್ತಿ ಮದನ ಹೆಂಗಸಿನ ವೇಷ ಹಾಕಿರುತ್ತಿದ್ದ. ರೂಮಿನಲ್ಲಿ ಸಿಕ್ಕ ಹೆಣ್ಣುಮಕ್ಕಳ ಅರಿವೆಗಳು ಪ್ಯಾಡೆಡ ಬ್ರಾಗಳು ಇವನ್ನು ಪುಷ್ಟೀಕರಿಸುತ್ತವೆ. ಆದರೆ ಅದು ಹೀಗಿತ್ತು ಅಂತ ನಿಖರವಾಗಿ ಮೋಹನನ ತಾಯಿ ಹೇಳಿದರು. ಮಗನ ಮನೆಗೆ ಇರಲೆಂದು ಬಂದವರು ಆ ವೇಳೆಗೆ ವೀಕೆಂಡಿಗೆ ಮದನ್ ಬಂದಿದ್ದಾನೆ, ಮದನ ಆಡುತ್ತಿದ್ದ ಸರಸದ ಮಾತುಗಳು ಅವನ ಹಾವಭಾವ ಎಲ್ಲ ಅವರಿಗೆ ದಿಗಿಲು ತಂದಿವೆ. ರಾತ್ರಿ ರೂಮಿನಲ್ಲಿ ಇಬ್ಬರೂ ಮಲಗಿದ್ದಾಗ ಒಳಗಿನಿಂದ ಬಂದ ಸರಸದ ನುಡಿಗಳು, ನಗಾಟ ಎಲ್ಲ ಬೇರೆ ಕತೆ ಹೇಳಿವೆ. ಮರುದಿನ ಮಗನಿಗೆ ಕೇಳಿದಾಗ ಅವ ಮೊದಮೊದಲು ಜಾರಿಕೊಂಡರೂ ಜೋರುಮಾಡಿದಾಗ ಅವರ ತೊಡೆಯಲ್ಲಿ ತಲೆ ಇಟ್ಟು ಬಿಕ್ಕಿಬಿಕ್ಕಿ ಅತ್ತು ಎಲ್ಲ ಹೇಳಿದ್ದಾನೆ. ಅವ ಮಾಡಿಕೊಂಡ ಸಾಲ ಅವರ ಅಲಿಖಿತ ಕರಾರು ಎಲ್ಲ ತಿಳಿದು ಸುಮ್ಮನೇ ಅಳುತ್ತ ಕೂಡದೇ ಮದನ್ ಗೆ ಪ್ರಶ್ನಿಸಿದ್ದಾರೆ ಅವರು. ಆದರೆ ಮದನ್ ನ ಒರಟು ಉತ್ತರ ಅಂತೆಯೇ ಈಗಾಗಲೇ ಮೋಹನನ ಜೊತೆ ಹೊಂದಿದ ದೈಹಿಕ ಸಂಪರ್ಕ ಅಂತೆಯೇ ತಾನು ಹೆಣ್ಣಾಗಿ ಈ ವರೆಗೂ ವರ್ತಿಸುತ್ತಿದ್ದೆ ಆ ಅವಧಿ ಮುಗಿಯಲು ಬಂದಿದೆ ಇನ್ನೇನು ನಿಮ್ಮ ಮಗ ಹೆಣ್ಣಾಗಿ ವೇಷ ಧರಿಸಿ ನನಗೆ ರಮಿಸಬೇಕು ಅದು ತಪ್ಪಿಸಲು ಯಾರಿಂದಲೂ ಸಾಧ್ಯ ಇಲ್ಲ ಅಂತ ಹೇಳಿದ್ದಾನೆ….

ಇದು ಕೇಳಿದ ಅವರು ಮಗನಿಗೆ ಅಭಯವಿತ್ತಿದ್ದಾರೆ. ಧಾರವಾಡದ ತಮ್ಮ ಪರಿಚಯದ ಮಾನಸಿಕ ವೈದ್ಯರ ಬಳಿ ಮೋಹನನಿಗೆ ಕೌನ್ಸೆಲಿಂಗ ಮಾಡಿಸಿದ್ದಾರೆ. ಎರಡು ಮೂರು ಸೆಶನ್ ಯಶಸ್ವಿಯಾಗಿ ಮುಗಿದಿವೆ ಈ ನಡುವೆ ಮಗನಿಗೆ ಅಭಯ ತುಂಬಿ ಮಾಲತಿಯ ಪ್ರಸ್ತಾಪ ತಂದಿದ್ದಾರೆ. ಅವರು ಮಾಡಿದ್ದು ಒಂದು ತಪ್ಪು..ಅದೆಂದರೆ ಆ ಮದನ್ ಗೆ ಫೋನ ಮಾಡಿ ತಮ್ಮ ಸಾಧನೆ ಹೇಳಿಕೊಂಡಿದಾರೆ. ಅದೇಗೋ ಮದನ ಚಾಣಾಕ್ಷತನದಿಂದ ಮಾಲತಿ ನಂಬರ ಗಿಟ್ಟಿಸಿಕೊಂಡಿದ್ದಾನೆ…ಅದನ್ನು ಅವ ತನ್ನ ಕಾರ್ಯಸಾಧನೆಗೆ ಬಳಸಿದ್ದಾನೆ. ಅವನಿಂದ ಹೇಳಿಕೆ ತಗೊಂಡಾಗಿದೆ ತನಗಿಂತ ಬಲಾಢ್ಯನಾದ ಮೋಹನನಿಗೆ ಮಣಿಸಲು ಅವ ಪಾನೀಯದಲ್ಲಿ ಎಚ್ಚರ ತಪ್ಪುವ ಪುಡಿ ಹಾಕಿದ್ದಾನೆ…ಕೇಳಿದಾಗ ನಿಜ ಅಂತ ಒಪ್ಪಿಕೊಂಡಿದ್ದಾನೆ ಅವನ ಎದೆಗೆ ಚುಚಿ ಚುಚ್ಚಿ ಕೊಂದೆ ಅಂತ ಹೇಳುವಾಗ ಅವನ ಮಾತಿನಲ್ಲಿ ವಿಚಿತ್ರ ಸಮಾಧಾನವಿತ್ತು. ಸರ್…” ತನ್ನ ದೀರ್ಘ ವಿವರಣೆ ಮುಗಿಸಿದ ಮುನಿಸ್ವಾಮಿ.

“ಮತ್ತೊಮ್ಮೆ ಕಂಗ್ರಾಟ್ಸ ನಿಮಗೆ ಮುನಿಸ್ವಾಮಿ….” ದೇಶಪಾಂಡೆ ಎದ್ದು ನಿಂತು ಕೈ ಕುಲುಕಿದ.

—0—0—0—