- ಕಲಿಗುಲ - ಸೆಪ್ಟೆಂಬರ್ 12, 2020
- ಸಂಧ್ಯಾದೇವಿ – ಕೆ.ವಿ. ತಿರುಮಲೇಶ್ - ಸೆಪ್ಟೆಂಬರ್ 11, 2020
ತಿರುಮಲೇಶರ ಕಥೆಗಳಲ್ಲಿ ಎರಡು ರೀತಿಯನ್ನ ನಾನು ಗಮನಿಸಿದ್ದೀನಿ. ಒಂದು ಬಹಳ ಹಳೆಯ ಬಾಲ್ಯಕಾಲ ಕಥೆಗಳ, ಪ್ರಾಂತೀಯ ಭಾಷೆಯ, ಸಂಸ್ಕೃತಿಯ ನಿರೂಪಣೆಯಲ್ಲಿರುವುದು. ಇನ್ನೊಂದು ಇವತ್ತಿನ ಅರ್ಬೇನ್, ಗ್ಲೋಬಲ್ ಮಹಾ ಆಧುನಿಕ ಮನುಷ್ಯನ/ಳ ಮನಸ್ಸಿನಲ್ಲಿ ನಡೆಯುತ್ತಿರುವುದು. ಹಳೇ ವಿಷಯಗಳ ಕಥೆ ಬರೆದಾಗ ಆ ನಿರೂಪಣೆಯ ಭಾಷೆಯಂತೂ ಆ ದಿನಗಳ ಬನಿಯಲ್ಲಿ ಅದ್ದಿ ತೆಗೆದು ಕನ್ನಡದ ಮೇಲಿನ ಮಮಕಾರವನ್ನು ಹೆಚ್ಚಿಸುತ್ತವೆ. ಆಧುನಿಕ ವಿಷಯಗಳ ಕಥೆಯಲ್ಲಿ ಭಾಷೆಯ ವಿವಿಧ ನೆಲೆ, ವಿವಿಧ ಭಾಷೆಯ ನೆಲೆ ಎರಡೂ ಒಂದರೊಳಗೊಂದಾಗಿ ಕಥೆಯ ವಿಷಯದ ಸಾಧ್ಯಾಸಾಧ್ಯತೆಗಳ ಜೊತೆಗೆ ತಾವೂ ಮೆರೆಯುತ್ತ ಇರುತ್ತವೆ. ಈಗ ನಾನು ಓದಿ ಅನಿಸಿಕೆ ವ್ಯಕ್ತಪಡಿಸಲು ಆರಿಸಿರುವ ಕಥೆ ತಿರುಮಲೇಶರ “ಅಪರೂಪದ ಕಥೆಗಳು” ಸಂಕಲನದಲ್ಲಿರುವ “ಸಂಧ್ಯಾದೇವಿ” ಎಂಬ ಆಧುನಿಕೋತ್ತರ ಕಥೆ.
ಈ ಕಥೆ ಓದುವಾಗ ಕಥೆಯಲ್ಲಿನ ಭಾಷಾಬಳಕೆಯ ಚಂದವನ್ನು ಅನುಭವಿಸಿದರೂ ಕಥೆಯ ಮೂಲ ಕೇಂದ್ರದಿಂದ ಎಲ್ಲೆಲ್ಲೋ ಹೋಗಿ ಗೊಂದಲವಾಗುತ್ತಿತ್ತು. ಒಂದು ಸಣ್ಣಕಥೆಯೆಂದರೆ ಇರಬಹುದಾದ ರಚನೆಗಿಂತ ತೀರಾ ಭಿನ್ನವಾದ ರಚನೆ. ಒಂದೊಂದು ಪ್ಯಾರಾ ಮಾತ್ರ ಓದಿದರೆ ಇದುಯಾವುದೋ ಭಾಷಾವಿಜ್ಞಾನಿಯ ಲಹರಿ ಎನ್ನಿಸಿಬಿಡಬಹುದಾದ ಅಪಾಯದ ಅಂಚುದಾರಿಯಲ್ಲಿ ಈ ಕಥೆ ನೇಯಲ್ಪಟ್ಟಿದೆ. ಆದರೆ ಒಟ್ಟಾರೆಯಾಗಿ ಓದಿಮುಗಿಸುವಾಗ ಈ ಕಥೆಯ ಸೊಗಸು ಕೈಹಿಡಿಯುತ್ತದೆ. ಮುತ್ತುಸಂಜೆಯಿಂದ ಹಿಡಿದು ರಾತ್ರೆ ಕಪ್ಪಗಾಗುವವರೆಗೆ ಬಣ್ಣ ಬದಲಾಯಿಸುವ ಆಕಾಶದ ಕ್ಯಾನ್ವಾಸಿನಂತೆ ಮನಸ್ಸನ್ನು ಕಥೆ ಆವರಿಸುತ್ತದೆ.
ಒಂಚೂರು ಕಥೆಯ ಒಂದೊಂದು ಝಲಕ್ ನೋಡುವ ಬನ್ನಿ.
“ಎಲ್ಲಕ್ಕೂ ಒಂದು ಮೂಲ ಇರುತ್ತೆ. ಮೂಲ ಹುಡುಕುತ್ತ ಹೋದರೆ ತಲುಪುವುದು ಪ್ರೈಮ್ ಮೂವರನ್ನ. ಏನು ಮೂವರನ್ನ? ಇಲ್ಲಿ ಮೂವರನ್ನ ಎಂದರೆ ಇಂಗ್ಲಿಷ್ ಮೂವರನ್ನ ಎಂದು ಪದವಿಂಗಡಣೆ, ಕನ್ನಡದ ಮೂವರ್ ಅಲ್ಲ. ಪ್ರೈಮ್ ಮೂವರೇ ಸ್ವಯಂ ಮೂವರ್. ತದನಂತರ ನಾನು ಗೊಂದಲದಲ್ಲಿ ಬಿದ್ದೆ. ಮೂವರ್ಸ್ ನ ಮೆಟಫಿಸಿಕಲ್ ಅರ್ಥ ನನಗೆ ಹೊಳೆದಿರಲಿಲ್ಲ. ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಾಗಲೇ ಅದು ಗೊತ್ತಾದುದು.ಮೂವ್ ಮೂವ್ ಮೂವ್ ಸ್ವಲ್ಪ ಎಡಕ್ಕೆ ಮೂವ್, ಸ್ವಲ್ಪ ಬಲಕ್ಕೆ ಮೂವ್, ಸ್ವಲ್ಪ ಮೇಲಕ್ಕೆ ಮೂವ್, ಸ್ವಲ್ಪ ಕೆಳಕ್ಕೆ ಮೂವ್ ಮನುಷ್ಯ ಮೂವ್ ಆಗುತ್ತಲೆ ಇರಬೇಕು. ಸ್ವಲ್ಪ ಕಾಲದ ನಂತರ ನಾನು ನನ್ನ ಎಕ್ಸ್ ಬಾಸನ್ನು ಬಸ್ಸಿನಲ್ಲಿ ಕಂಡೆ ಅವನೂ ಮೂವಾಗಿದ್ದ.”
“ಅವತ್ತು ಅಪ್ಪನ ಕೈಗೆ ಸಿಕ್ಕಿದರೆ ನನ್ನ ಜೀವ ಉಳಿಯುವುದಿಲ್ಲ ಎಂದು ನನಗೆ ಖಚಿತವಿತ್ತು. ಅಪ್ಪ ಓಡಿಸಿಕೊಂಡು ಬರುತ್ತಿದ್ದರು. ಅಪ್ಪನಿಗೆ ಅಕ್ಷರಗಳ ಮೇಲೆ ಅಷ್ಟೊಂದು ಭಕ್ತಿಯೇ ಅಥವಾ ನನ್ನ ಮೇಲೆ ಅಷ್ಟೊಂದು ದ್ವೇಷವೇ ಅಥವಾ ಅಕ್ಷರಳ ಆಕಾರದಲ್ಲಿ ನಾನು ಹುಯ್ದ ಉಚ್ಚೆಯ ಮೇಲೆಯೋ ಹೇಳುವಂತಿರಲಿಲ್ಲ. ನಾವು ಅಪ್ರದಕ್ಷಿಣಾಕಾರದಲ್ಲಿ ಮನೆಯ ಸುತ್ತ ಓಡುತ್ತಿದ್ದೆವು. ನಮ್ಮ ಗಲಾಟೆ ಕೇಳಿಸಿ ಹೊರಬಂದ ಅಮ್ಮ ಏನೋ ಆಗುತ್ತದೆ ಎಂದು ಊಹಿಸಿದಳು. ಯಾಕೆಂದರೆ ನಾವು ಸದಾ ಯುದ್ಧ ಮತ್ತು ಶಾಂತಿಯ ಅಂಚಿನಲ್ಲಿ ಬದುಕುತ್ತಿದ್ದೆವು. ಅವಳು ಅಪ್ಪನನ್ನು ತಡೆಯಲು ಪ್ರಯತ್ನಿಸಿದಳು. ಅಪ್ಪ ಅವಳನ್ನು ದೂಡಿದ ರಭಸಕ್ಕೆ ಅವಳು ನನ್ನ ಮೈಮೇಲೆ ಬಿದ್ದು ನಾನೂ ಕಾಲು ಜಾರಿ ಕಲ್ಲಿಗೆ ಅಪ್ಪಳಿಸಿಬಿಟ್ಟೆ, ಕೊನೆಗೂ ಗೆಲುವು ಅಪ್ಪನದಾಗಿತ್ತು. ಆಯಿತು ಅದು ಯಾವಾಗಲೂ ಹಾಗೆಯೇ, ಅಪ್ಪಂದೇ.”
“ಆದರೆ ಈ ಘಟನೆಯಿಂದಾಗಿ ನನ್ನ ಮೇಲ್ಪಂಕ್ತಿಯ ನಾಲ್ಕು ಚಂದದ ಹಲ್ಲುಗಳೂ ನಾನು ಹೆಮ್ಮೆ ಪಡುತ್ತಿದ್ದ ಹಲ್ಲುಗಳು ಮುರಿದು ನನ್ನ ಮುಂದೆಯೇ ಆಚೀಚೆ ಗತಿಯಿಲ್ಲದಂತೆ ಬಿದ್ದಿದ್ದವು. ಇವು ನನ್ನವೇ?! ಎಂದು ಕೇಳಿಕೊಂಡೆ.”
“ಮಣಲಲ್ಲಿ ಬರೆದರೂ ಒಂದೇ, ಮಣ್ಣಲ್ಲಿ ಬರೆದರೂ ಒಂದೆಏ ಅಕ್ಷರ ಅಕ್ಷರವೇ ಎಂದುಕೊಂಡ ಆದಿಮ ರ್‍ಯಾಷನಲಿಸ್ಟ್ ನಾನು, ಮೂತ್ರಾಕ್ಷರ ಸ್ಪರ್ಧೆಯಲ್ಲಿ ಗೆದ್ದವನು.”
“ನನ್ನ ಜೀವನದಲ್ಲಿ ಸಂಧ್ಯೆ ಎಂಬುದೊಂದು ಇಲ್ಲದಿರುತ್ತಿದ್ದರೆ ಎಷ್ಟೊಂದು ನಷ್ಟ! ಮಲ್ಲಿಗೆ ಅರಳೋದು ಹೇಗೆ, ದನ ಮರಳೋದು ಹೇಗೆ, ಹಕ್ಕಿಗಳು ಗೂಡು ಸೇರೋದು ಹೇಗ್, ಆದರೂ ಸಂಧ್ಯೆ ನೀನು ಯಾಕೆ ನಾಚುತ್ತೀ”
“ಡ್ರೆಸ್ಸಿಂಗ್ ಬಾಯ್ ಅರ್ಥಾತ್ ಕಲಾವಿದ ಮೆನೆಕ್ವಿನ್ ನಿನ್ನೆ ಉಟ್ಟಿದ್ದ ಲಂಗ ತೆಗೆಯುತ್ತಿದ್ದಾನೆ. ಪ್ರತಿದಿನವೂ ಹೊಸ ಡ್ರೆಸ್ ಆಗಬೇಕಿದೆ ಅವಳಿಗೆ.
ಯಾರೊಬ್ಬರ ಡ್ರೆಸ್ ತೆಗೆಯುವಾಗಲೂ ಅವನ ಕೈ ಕಂಪಿಸುವುದಿಲ್ಲವೇ ಅವಳನ್ನು ಮನೆಗೆ ಒಯ್ಯಬೇಕೆಂದು ಅನಿಸುವುದಿಲ್ಲವೇ? ಆಶ್ಚರ್ಯ! ನೋಡ ನೋಡುತ್ತ ಇದ್ದಂತೆ ಆತ ಅವಳನ್ನು ವಿವಸ್ತ್ರಗೊಳಿಸಿದ್ದಾನೆ. ಒಳಗೆ ನೋಡಿದರೆ ಎಲ್ಲವೂ ಸಪಾಯಿ ಚಂದ್ರಖಂಡ, ಮೀನಖಂಡ ಎಲ್ಲಾ ಖಂಡ ಒಂದೇ ಖಂಡ. ಎಲ್ಲಾ ಸಪಾಟು ಫಳ ಫಳ ಹೊಳೆಯುವುದು. ಇದನ್ನೇ ನಾನು ದೈವತ ಎನ್ನುವುದು. ಸಂಧ್ಯೆಯಂತೆಯೇ ಈ ಮೆನೆಕ್ವಿನ್ ಸಹಾ ಪರಿಶುಭ್ರ ರೂಪಿಣಿ. ಯಾವ ಕಳಂಕವೂ ಇಲ್ಲದವಳು. ಅತೀತೆ. ಎಲ್ಲ ದೇವತೆಗಳೂ ಇದೇ ರೀತಿ ಇರುತ್ತಾರೆ. ಅವರು ಉಣ್ಣುವುದಿಲ್ಲ, ತಿನ್ನುವುದಿಲ್ಲ, ಕುಡಿಯುವುದಿಲ್ಲ, ಅವರ ತ್ವಚೆ ಬೆವರುವುದಿಲ್ಲ. ಆದರೆ ಮೆನೆಕ್ವಿನೆ ಎಂದರೆ ಮೇನಕೆ, ರಂಭೆ, ಊರ್ವಶಿ, ತಿಲೋತ್ತಮೆ ಎಂದು ಇವರು ಯಾರಿಗೂ ಗೊತ್ತಿಲ್ಲವಲ್ಲ.
ಇಲ್ಲಿ ನೀಡುವುದಕ್ಕಲ್ಲದೆ ಪಡೆಯುವುದಕ್ಕೇನೂ ಇಲ್ಲ…”
“ಹೋಗುವುದಿಕ್ಕೆ ಅವಳಿಗೆ ಕಾರಣಗಳಿದ್ದವು. ಬರುವುದಕ್ಕೆ ಯಾವ ಕಾರಣವೂ ಇರಲಿಲ್ಲ. ನನ್ನ ಹಲ್ಲಿನ ಸೆಟ್ಟು ಮಾಯವಾದಂತೆಯೇ ಈಕೆ ಕೂಡ ನನ್ನ ಬಿಟ್ಟು ಮಾಯವಾಗಿ ಹೋದಳಲ್ಲ. ಬಹುಶಃ ಈಕೆಗೂ ನನ್ನ ಜತೆ ಏಗಲು ಸಾಧ್ಯವಾಗಲಿಲ್ಲ. ನಾನು ಏನೂ ಅಪೇಕ್ಷೆ ಮಾಡದೆ ಇದ್ದರೂ ದೇವರಿಗೆ ಹೇಳ್ತೇನೆ. ದೇವರೇ ಇನ್ನು ನನ್ನಂಥ ಇನ್ನೊಬ್ಬನನ್ನು ಸೃಷ್ಟಿಸಬೇಡ. ಈ ಎಕ್ಸ್ ಪೆರಿಮೆಂಟ್ ಟೋಟಲ್ ಫೇಲ್ಯೂರ್..”
ಸಂಧ್ಯೆಯೆನ್ನುವ ರೂಪಕ, ಮ್ಯಾನಿಕ್ವಿನ್ ಎನ್ನುವ ರೂಪಕ, ಅಕ್ಷರಗಳ ರೂಪಕ, ಕಟ್ಟಿಸಿದ ಹಲ್ಲಿನ ರೂಪಕ, ಅಪ್ಸರೆಯ ರೂಪಕ, ಮತ್ತು ಇಡೀ ಕಥೆಯನ್ನ ಆವರಿಸುವ ಸಮಯದ ರೂಪಕ.. ಇವೆಲ್ಲವನ್ನೂ ಹೀಗೆ ಒಟ್ಟಿಗೆ ನೇಯ್ದು ಬದುಕಿನ ಸಂಜೆಯನ್ನು ಓದುಗನ ಕಣ್ಣೆದುರಿಗೆ ಕಥೆಗಾರ ಸೊಗಸಾಗಿ ಇಟ್ಟಿದಾರೆ. ಇಡೀ ಕಥೆಯುದ್ದಕ್ಕೂ ಬಾಲ್ಯದ ಒಂದು ನೋವು ಅಂಡರ್ ಕರೆಂಟಾಗಿ ಹರಿಯುತ್ತಲೆ ಇರುತ್ತದೆ. ಬತ್ತಲಾಗುವ ಅಥವಾ ಅಲಂಕೃತಗೊಳ್ಳುವುದಕ್ಕೂ ಮುನ್ನಿನ ಮ್ಯಾನಿಕ್ವಿನ್ನಿಗಾಗಿ ಹಂಬಲಿಸುವ ನಿರೂಪಕ ಜೀವನದುದ್ದಕ್ಕೂ ತನ್ನನ್ನ ಬಿಟ್ಟೂಬಿಡದೆ ಕಾಡಿದ ಕೀಳರಿಮೆಗಳಿಂದ ಮುಕ್ತನಾಗಲು ಹವಣಿಸುವ ಹಂಬಲು, ತನ್ನ ಮಿತಿಯನ್ನು ಮೀರಲು ಹೋಗಿ ಸಿಕ್ಕು ಬಿದ್ದು ಒದ್ದಾಡುವ ಗೋಜಲು, ವಿಸ್ತಾರ ನೀಲಿಗೆ ರೆಕ್ಕೆ ಬಿಚ್ಚಿ ಹಾರಲು ಕಲಿತರೂ, ಕೂತ ಕೊಂಬೆಗೇ ನೇತುಬಿದ್ದ ನೆಳಲಾಗುವ ಅಳಲು ಇವೆಲ್ಲ ಗಾಢವಾಗಿ ಕಟ್ಟಲ್ಪಟ್ಟಿವೆ. ನನಗೆ ಈ ಕಥೆ ಬಹಳ ಇಷ್ಟವಾಗಿದ್ದು ಇದರಲ್ಲಿನ ಯುನಿವರ್ಸಲ್ ಅಪ್ಲಿಕಬೆಲಿಟಿ. ಓದುವವಳು ಐಸಿಯುನಲ್ಲಿ ಮಲಗಿರಬೇಕಿಲ್ಲ. ಟ್ರಾಫಿಕ್ಕಿನಲ್ಲಿ, ಮನೆಗೆಲಸದಲ್ಲಿ, ಅಥವಾ ವೃತ್ತಿಯ ಪ್ರಗತಿಯ ದಾರಿಯಲ್ಲಿ ಓಡುತ್ತಿರುವ all-encompassing ದಿನದಿನದ ಕೆಲಸದಲ್ಲಿ ಸಿಕ್ಕಿಹಾಕಿಕೊಂಡು ಸಹ ಅದೇ ಭಾವವನ್ನು ಅನುಭವಿಸಬಹುದು. ಅವನ ಹಲ್ಲುಮುರಿದಿದೆ. ಓದುವವನ ಮನಸ್ಸೇ ಮುರಿದಿರಬಹುದು, ಕೂದಲು ಬೋಳಾಗಿರಬಹುದು, ಅಥವಾ ಇನ್ನೊಂದೇನೋ ಬಾಹ್ಯಸ್ವರೂಪದ ಗೋಜಲಿನಲ್ಲಿ ಸಿಕ್ಕಿ ನರಳುವ ಒಳಮನಸ್ಸು. ಇದು ಈ ಕಥೆಯ ವಿಸ್ತಾರ. ಮ್ಯಾನಿಕ್ವಿನ್ ಮೇನಕೆ, ಮತ್ತು ಸಂಧ್ಯಾದೇವಿಯೆಂಬ ಸಂಜೆ ಈ ಎರಡು ಮಹೋನ್ನತ ರೂಪಕಗಳನ್ನ ಇಡೀ ಕಥೆಗಳಲ್ಲಿ ಇಡಿಕಿರಿದಿರುವ ಸಣ್ಣ ಸಣ್ಣ ರೂಪಕಗಳು ಹೊತ್ತಿವೆ. ಒಂದ್ಸಲ ಇದು ಕಾದಂಬರಿಯಾಗಿದ್ದರೆ ಚೆನ್ನಿತ್ತಾ ಅನಿಸಿತು. ಇಲ್ಲ ಹೀಗೇ ಚೆನ್ನು. ಹೆಚ್ಚಿನ ವಿವರಣೆಗೆ ಸಿಕ್ಕರೆ ಅದು ಬರಿದೆ ಕಥೆಗಾರನ ವರದಿಯಾಗುಳಿಯುತ್ತಿತ್ತು, ಈಗ ಕಥೆಯೊಳಗೆ ಹೊಕ್ಕು ಓದುಗನ ಅಂಗೈಗೆ ದಕ್ಕಿದೆ. ನಮ್ಮೊಳಹೊಕ್ಕು ತನಗೆ ಬೇಕಾದ ರೂಪವನ್ನ ಧರಿಸುತ್ತಿದೆ ಅನಿಸಿತು.
ಈ ಕಥೆಯೆಂಬ ಮ್ಯಾನಿಕ್ವಿನ್ನಿಗೆ ನಮಗೆ ಬೇಕಾದ ಅಂಗಿಯನ್ನು ತೊಡಿಸುವ ಅನುಕೂಲವನ್ನ ಕಥೆಗಾರ ನಮಗೆ ಕೊಟ್ಟಿದ್ದಾರೆ.
ಆಗಲೇ ಹೇಳಿದ ಹಾಗೆ ತಿರುಮಲೇಶರ ಟ್ರಂಪ್ ಆದ ಭಾಷೆಯ ಹಿಡಿತ, ಆಳ ಮತ್ತು ವಿಸ್ತಾರ ಈ ಕಥೆಯ ಶಕ್ತಿಯೂ ಹೌದು ಮತ್ತು ಮಿತಿಯೂ ಹೌದು. ಇವರ ಬೇರೆ ಕಥೆಗಳನ್ನ ಕವಿತೆಗಳನ್ನ ಓದಿಲ್ಲದೆ ಇರುವ ಹೊಸಬರು ಮೊದಮೊದಲ ಪ್ಯಾರಾ ಓದುತ್ತಲೇ ಕಥೆಯನ್ನು ಓದದೇ ಇರುವ ಸಾಧ್ಯತೆಗಳು ಸಹಾ ಉಂಟು.
ನನಗೆ ಈ ಕಥೆ ಮೊದಲು ಕಷ್ಟ ಕೊಟ್ಟರೂ ಓದಿ ಮುಗಿಸಿದ ಮೇಲೆ ಬಹಳವೇ ಇಷ್ಟವಾಯಿತು. ಇದೇ ಸಂಕಲನದಲ್ಲಿ ಇರುವ ಐತ ಕಥೆ (ಹಳೇ ವಿಷಯ, ಭಾಷೆ, ಬಾಲ್ಯದ ನೆನಪುಗಳ ಮೇಲೆ ವಿಸ್ತರಿಸಿದ ಕಥೆ)ಯನ್ನೂ ಮತ್ತು ಈ ಸಂಧ್ಯಾದೇವಿ (ಹೊಸ ವಿಷಯ, ಗ್ಲೋಬಲ್ ಭಾಷೆ, ಬಾಲ್ಯದ ನೋವು ಮತ್ತು ಇಳಿಬದುಕಿನ ವಿಷಾದಗಳಲ್ಲಿ ತೂಗಿಕೊಳ್ಳುವ ಕಥೆ) ಎರಡನ್ನೂ ಮತ್ತೆ ಒಟ್ಟಿಗೆ ಓದಿ ಈಗ ಈ ತಿರುಮಲೇಶ್ ಎಂಬ ಕಥೆಗಾರನ ಬಗ್ಗೆ ಅಚ್ಚರಿ, ಅಕ್ಕರೆ, ಮತ್ತು ಗೌರವ. ಕಥೆಗಾರ ನಮಗೆ “ಓದು ಬಾ, ನಿನ್ನ ನಾಲಗೆಯ ಮೇಲೆ ಬರೆಯುವೆ ಅಸ್ತಿ ಕಶ್ಚಿತ್ ವಾಗ್ವಿಶೇಷಃ” ಎಂದು ಹೇಳುತ್ತಿರಬಹುದೇ ಎನಿಸುತ್ತಿದೆ.
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ