ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಾಜಿದಾ ಅಲಿಯಾಸ್ ಸಲ್ಮಾ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

“ತೇಜಾ! ಅವರು ಬರಲಿಕ್ಕೆ ಮತ್ತೊಂದು ಗಂಟೆಯಾಗಬಹುದಂತೆ. ರಸ್ತೆ ಸರಿ ಇಲ್ಲ ಅಂತಿದ್ದಾರೆ.”

ಅರ್ಧ ತೆರೆದ ಕಾರಿನ ಕಿಟಕಿಯಿಂದ ಹೊರಗಡೆ ನೋಡುತ್ತ ಹೇಳಿದಳು ರೂಮಿ. ಅಲ್ಲಿಗೆ ಮೂರು ಗಂಟೆಗಳಿಂದ ಮೈಸೂರ್-ಊಟಿ ರಸ್ತೆಯ ಮೇಲೆ ಕಾರಿನಲ್ಲೇ ಕೂತಿದ್ದರಿಂದ ಮಂಡಿಗಳು ಬಿಗಿಯಾಗಿದ್ದವು. ಮೈಯೆಲ್ಲಾ ಡೀಪ್ ಫ್ರೇಜರ್ ನಲ್ಲಿಟ್ಟು ತೆಗೆದ ಚಿಕೆನ್ ತರ ಬಿಗಿದ ಹಾಗಾಗಿತ್ತು. ನಲವತ್ತಕ್ಕೆ ಬಂದ ವಯಸ್ಸಿನ ಅನುಭವವಾಗತೊಡಗಿತ್ತು.

ಬಾಗಿಲು ತೆಗೆದುಕೊಂಡು ಕೆಳಗಿಳಿದೆ. ಸುತ್ತಲೂ ಹೊಗೆಮಂಜು. ಈ ಡಿಸೆಂಬರ್ ತಿಂಗಳಲ್ಲಿ ಊಟಿ ಪ್ರಯಾಣ ಇಟ್ಟುಕೊಂಡಿದ್ದೇ ಬೇಜಾರಿನ ಸಂಗತಿ ಅಂದುಕೊಂಡರೆ ನಡುವೆ ಕಾರು ಕೈಕೊಟ್ಟು ಮಧ್ಯದಲ್ಲಿ ಕಾಯುತ್ತಿರುವುದು ಮತ್ತಷ್ಟು ಬೇಜಾರಿನ ಸಂಗತಿ. ಮೈತುಂಬಾ ರಜಾಯಿ ಹೊದ್ದ ಹಾಗೆ ಸ್ವೆಟ್ಟರ್ ಗಳಿದ್ದರೂ ಚಳಿ ತಡಿತಾ ಇಲ್ಲ.

ನಾನು ಕಾರಿನಿಂದ ಇಳಿದ ತಕ್ಷಣ ಬಾಯ್ನೆಟ್ ಹತ್ತಿರದಿಂದ ಬಂದು ಮುಂದೆ ನಿಂತ ರತ್ನವೇಲು. ಆ ಕಾರಿನ ಮಾಲಿಕ ಕಮ್ ಡ್ರೈವರ್ ಅವನು. ಯಾವುದೋ ಅಪರಾಧ ಮಾಡಿದವನ ತರ ನಿಂತಿದ್ದ ಅವನ ಕಡೆನೋಡುತ್ತಲೇ “ ಹೀಗಾಗುತ್ತೆ ಅಂತ ಅಂದ್ಕೊಳ್ಳಿಲ್ಲ ಸಾರ್!…. ಗಾಡಿ ಒಳ್ಳೆ ಕಂಡಿಷನ್ ನಲ್ಲಿತ್ತು. ಆದರೆ ಮಧ್ಯದಲ್ಲಿ ಹೀಗೇ ಯಾಕೋ…… ನಮ್ಮವರು ಒಂದು ಗಂಟೆಯಲ್ಲಿ ಬಂದ್ಬಿಡ್ತಾರೆ ಸಾರ್!” ದೊಡ್ಡಉಪಕಾರ ಮಾಡಿದವನ ಹಾಗೆ ಹೇಳಿ, ಯಾವುದೋ ಕೆಲಸವಿದ್ದ ಹಾಗೆ ಗಾಡಿಯ ಹಿಂದುಗಡೆ ಮುಖ ಮರೆಸಿಕೊಂಡ.

ರೂಮೀ ಸಲಹೆ ಕೊಟ್ಟ ಹಾಗೆ ಈ ರಾತ್ರಿ ಮೈಸೂರಲ್ಲೇ ಇರಬೇಕಿತ್ತು. ಹೋಟೆಲ್ ರೂಮ್ ಬುಕ್ ಮಾಡ್ತೀನಿ ಅಂದರೂ ಕೇಳದೇ “ಬೆಳೆಗ್ಗೆ ಬೆಳೆಗ್ಗೆ ಷೂಟ್ ಶುರು ಮಾಡಬೇಕು” ಎನ್ನುತ್ತ ಹೊರಡಿಸಿದ್ದೆ. ರೂಪದರ್ಶಿಗಳನ್ನ, ಕೆಮೆರಾ ಸಹಾಯಕರನ್ನ ಸಹ ಹಾಗೇ ಅವಸರಮಾಡಿ ಬರೆಸಿದ್ದೆ. ಅಲ್ಲಿ ಅವರೆಲ್ಲ ನಮ್ಮ ಹಾದಿ ಕಾಯುತ್ತಿರುತ್ತಾರೆ. ನಾವು ನೋಡಿದರೆ ನಡು ರಸ್ತೆಯಲ್ಲಿ ಹೀಗೆ…..

ದೊಡ್ಡ ಟೀ ಕಂಪೆನಿಗೋಸ್ಕರ ಯಾಡ್! ಎರಡು ದಿನಗಳ ಫೋಟೋಷೂಟ್! ಮೂರು ಜನ ರೂಪದರ್ಶಿಗಳು, ಟೀ ತೋಟಗಳಲ್ಲಿಮುಂಜಾವಿನ ತೆಳು ಮಂಜಿನಲ್ಲಿ ಷೂಟ್ ಮಾಡಬೇಕು ಅಂತ ಎಣಿಸಿಹೊರಟಿದ್ದೆವು.

ಹತ್ತಿರವಾಗುತ್ತೆ ಅಂತ ಈ ಹಾದಿಯಲ್ಲಿ ಬಂದು ಸಿಕ್ಕಿಬಿದ್ದಿದ್ದೀವಿ. ಈ ದಾರಿಗೆ ಯಾವ ಗಾಡಿಗಳು ಬರೋದು ಕಾಣ್ತಾ ಇಲ್ಲ.

ಪಕ್ಕದಲ್ಲಿ ಯಾರೋ ಸುಳಿದಂತಾಗಿ, ತಲೆಯಲ್ಲಿ ಸುತ್ತುತ್ತಿರುವ ಗುಂಗಿನಿಂದ ಹೊರಬಂದು ನೋಡಿದಾಗ…. ರೂಮೀ. ಸಂಜೆ ನನ್ನ ರಿಸೀವ್ ಮಾಡಿದಾಗ ಹೇಗೆ ನಕ್ಕಿದ್ದಳೋ ಈಗಲೂ ಅದೇ ನಗುವಿನ ಮೂಡಲ್ಲಿದ್ದಾಳೆ. ಒಂದೇ ಮೂಡನ್ನ ಇಷ್ಟು ಗಂಟೆಗಳು ಅದು ಹೇಗೆ ಮುಂದುವರೆಸುತ್ತಾರೋ ಗೊತ್ತಾಗುವುದಿಲ್ಲ. ಕ್ಲಯಿಂಟ್ ಕಳಿಸಿದ ಅಸೆಸ್ಟೆಂಟ್ ಕಮ್ ಗೈಡ್ ರೂಮೀ. ಇಪ್ಪತ್ತೈದರ ಹರೆಯದಲ್ಲಿ, ತಾನು ಮೆಚ್ಚಿದ ಕ್ಷೇತ್ರದಲ್ಲಿ ಕೆಲಸ ಮಾಡುವ ಹುಮ್ಮಸ್ಸು ಹೊತ್ತು ಹೀಗೆ ನನ್ನ ಜೊತೆ ಸಿಕ್ಕಿ ಹಾಕಿಕೊಂಡಿರುವ ರೂಮೀ. ಈ ಹೆಸರೇ ನನಗೆ ಹೊಸದೆನಿಸಿತ್ತು. ಆದರೆ ಹುಷಾರು ಹುಡುಗಿ. ಈ ತಲೆಮಾರಿನಲ್ಲಿ ಕಾಣುವ ಈಜೀ ಗೋಯಿಂಗ್ ಹುಡುಗಿ.

“ಚಳಿ ತುಂಬಾ ಇದೆ ಅಲ್ವಾ?”ಎನ್ನುತ್ತ ಕೋಟ್ ಕಿಸೆಯಿಂದ ಸಿಗರೆಟ್ತೆಗೆದು ನನಗೆ ಆಫರ್ ಮಾಡಿದಳು.

“ಇಷ್ಟು ಚಳಿ ಇರತ್ತೆ ಅಂತ ಅಂದುಕೊಂಡಿಲ್ಲ.”

ಸಿಗರೆಟ್ ಹಚ್ಚಿಕೊಳ್ಳಲು ಬೆರಳುಗಳು ಸ್ಪಂದಿಸದಾದಾಗ…. ತಾನೇ ಲೈಟರ್ ನಿಂದ ನನ್ನ ಸಿಗರೆಟ್ ಸಹ ಬೆಳಗಿಸಿದಳು.

ಒಂದು, ಎರಡು ಮೂರು ಝರುಕಿಗಳು ಎಳೆದು, ಅವುಗಳ ಹೊಗೆ ಹೊರಗೆ ಬಿಡುತ್ತಿದ್ದ ಹಾಗೆ ಯಾವುದೋ ತರದ ಬಿಡುಗಡೆ. ಅವಳಿಗೂ ಹಾಗೇ ಅನಿಸಿರಬೇಕು. ಒಬ್ಬರಿಗೊಬ್ಬರು ನೋಡಿಕೊಂಡು ನಕ್ಕೆವು.

ಕಾಟೇಜಿಗೆ ಸೇರಿದ ತಕ್ಷಣ ಮೊದಲು ಮಾಡಿದ ಕೆಲಸ ಕಾಫಿಗೆ ಆರ್ಡರ್ ಮಾಡಿದ್ದು. ತಲೆಯೆಲ್ಲಾ ಬಿಗಿದಿತ್ತು. ಮುಂಬೈನಿಂದ ಬಂದ ರೂಪದರ್ಶಿಗಳು ಇಂದಿನ ಷೂಟಿಂಗ್ ಆಗದಿರುವ ಕಾರಣ ಇರಲು ಆಗುವುದಿಲ್ಲವೆಂದು, ತಾವು ಈ ಪ್ರಾಜೆಕ್ಟಿನಿಂದ ಹೊರಬೀಳುತ್ತೇವೆಂದು ಹೇಳಿದ್ದಾರಂತೆ. ರೂಮೀ ಅವರನ್ನು ಒಪ್ಪಿಸುವುದರಲ್ಲಿದ್ದಳು.

ಸ್ನಾನ ಮಾಡುವುದು ಸಹ ಬೇಡವೆನಿಸಿತು. ಕರೆ ಗಂಟೆ ಹೊಡೆದಾಗ ಬಾಗಿಲು ತೆಗೆದೆ. ರೂಮೀ ಅಲ್ಲ. ರೂಮ್ ಸರ್ವೀಸ್ ಹುಡುಗಿ ಕಾಫಿ ತಂದಿದ್ದಳು. ಕಾಫಿ ಟ್ರೇ ಟೇಬಲ್ ಮೇಲಿಟ್ಟು ರೂಮಿನಲ್ಲಿಯ ಸಿಗರೆಟ್ ವಾಸನೆ ತನಗೆ ಬೀಳದವಳಂತೆ ಮುಖ ಮಾಡಿ, ಬಿಲ್ ಮೇಲೆ ಋಜುಹಾಕಿದ ತಕ್ಷಣ ಓಡುತ್ತ ಮರೆಯಾದಳು.

ಕಾಫಿ ಹೀರುತ್ತ, ಮತ್ತೊಂದು ಸಿಗರೇಟು ಹಚ್ಚಿ, ಎದುರಲ್ಲಿದ್ದ ಕನ್ನಡಿಯಲ್ಲಿ ಮುಖ ನೋಡಿಕೊಂಡೆ. ಮುಖಕ್ಷೌರ ಮಾಡಿ ಮೂರು ದಿನಗಳಾಗಿತ್ತು.

ಮೂರು ವರ್ಷಗಳ ಹಿಂದೆ ಅಲ್ಲಲ್ಲಿ ಕಾಣಿಸುತ್ತಿದ್ದ ಬಿಳಿ ಮಿಂಚುಗಳ ದಾಳಿ ಈಗ ಪೂರ್ತಿಯಾಗಿ ಆಕ್ರಮಣ ನಡೆದಿತ್ತು. ಮುಂದಿನ ಭಾಗದ ಕೂದಲು ಸಹ ತಿಳಿಯಾಗಿತ್ತು. ಯಾಕೋ ಅಪ್ಪ ನೆನಪಾದರು. ಈ ಪಾಶ್ಚಿಮಾತ್ಯ ಉಡುಗೆಯಲ್ಲದೇ ಮಾಸಿದ ಪಂಚೆ, ತೋಳಿನ ಬನಿಯನ್, ಭುಜಕ್ಕೆ ನೇತಾಡುವ ಜನಿವಾರ ಇದ್ದರೆ ನಾನು ಸಹ ಅಪ್ಪನ ಹಾಗೆ ಕಾಣುತ್ತೇನೆ. ಒಮ್ಮೆ ಊರಿಗೆ ಹೋಗಿ ಬರಬೇಕು. ಒಮ್ಮೆಯಾದರೂ ನನ್ನ ಶಾಲೆಯನ್ನೂ, ಅಲ್ಲಿಯ ಮನುಷ್ಯರನ್ನು ನೋಡಬೇಕು. ಅಲ್ಲಿಯ ಮಸೀದಿಯ ಪಕ್ಕದ ಸಂದಿನಲ್ಲಿ ತಿರುಗಾಡಬೇಕು ಅಂತ ಖಯಾಲಿ ಬಂದತಕ್ಷಣ ಆ ಬೀದಿಯಲ್ಲಿ ಬರುತ್ತಿದ್ದ ಮಸಾಲೆಯ ಪರಿಮಳ, ಮಲ್ಲಿಗೆ ಹೂಗಳ ಸುಗಂಧ ಮರುಕಳಿಸಿದ ಹಾಗೆ ಅನಿಸಿ….

“ಬ್ರಾಹ್ಮಣರಾಗಿ ಹುಟ್ಟಿ, ಆ ಮನೆಗಳ ಸುತ್ತ ತಿರುಗಾಡುತ್ತಿಯೇನೋ?”ಎನ್ನುವ ಅಪ್ಪನ ಮಾತು ಮತ್ತೆ ಈಗಲೇ ಕೇಳಿಬಂತು. ಅದರ ಜೊತೆಗೆ “ಸ್ವಾಮೋರೇ!…” ಅಂತ ಕೋಪದಿಂದ ಸಾಜಿದಾಳ ಅಪ್ಪನ ಮಾತು ಸಹ.

ಆ ದಿನಗಳೆಲ್ಲ ನನ್ನ ಮನಃಪಟಲದ ಮೇಲೆ ಬರುತ್ತಿದ್ದ ಹಾಗೆ ಬಾಗಿಲಹತ್ತಿರ ಸದ್ದು….. ರೂಮೀ!

ರೂಮಿನೊಳಗೆ ಬರುತ್ತಲೇ ನೀರಸವಾಗಿ ಕುರ್ಚಿಯಲ್ಲಿ ಕುಸಿದು ನನ್ನ ಕಡೆಗೆ ನೋಡಿದಳು. ಏನಾಯಿತು ಎನ್ನುತ್ತ ಕಣ್ಣು ಹಾರಿಸಿದೆ. ಏನು ಹೇಳುತ್ತಾಳೆ ಅನ್ನೋದು ಊಹಿಸಬೇಕಾಗಿದ್ದಿಲ್ಲ. ಆ ಇಬ್ಬರೂ ಮತ್ತೊಂದುದಿನ ಇರಲು ಒಪ್ಪಿರಲಿಲ್ಲ.

“ಇನ್ನಷ್ಟು ಹಣದ ಆಸೆ ಸಹ ತೋರಿಸಿದೆ. ಆದರೂ ಒಪ್ಪಲಿಲ್ಲ.” ಕೈಯಲ್ಲಿದ್ದ ಫೋಟೋಗಳನ್ನ ಟೀಪಾಯ್ ಮೇಲೆ ಒಗೆದು.. ಸಿಗರೆಟ್ಟಿಗಾಗಿ ಕೈಚಾಚಿದಳು. ಸಿಗರೆಟ್ ಕೊಡುತ್ತ ಫೋಟೋಗಳ ಕಡೆಗೆನೋಡಿದೆ.

ಆ ಮೂರನೆಯ ಫೋಟೋ… ಆ ಮುಖ, ಕಣ್ಣು ಎಲ್ಲೋ ನೋಡಿದ ಹಾಗೆ ಅನಿಸಿ, ಆ ಫೋಟೋ ನೋಡುತ್ತ ಕೂತೆ.

“ಈ ಹುಡುಗಿ ಒಬ್ಬಳೇ.. ಲೋಕಲ್ ಬಡ್ಡಿ, ಚೆನ್ನೈ. ಈಗ ನಮಗೆ ಒಪ್ಪಿರುವುದು. ಅವಳ ಹೆಸರು ಸಲ್ಮಾ”

ರೂಮೀ ಮಾತಾಡುತ್ತಲೇ ಇದ್ದಳು.

“ಹೋಗಲಿಕ್ಕೆ ಹೇಳು”

“ವಾಟ್?” ಕಿರುಚಿದಳು ಎನ್ನಬಹುದು ರೂಮೀ.

“ಅವರಿಬ್ಬರನ್ನೂ ಹೋಗಲು ಹೇಳು. ಷೂಟ್ ಈ ಹುಡುಗಿಯ ಜೊತೆಯಲ್ಲೇ ಮಾಡೋಣ. ಸಾಧ್ಯವಾದರೆ ಈಗಲೇ ಶುರು ಮಾಡೋಣ. ಲೊಕೇಷನ್ಸ್ ನೋಡಿ ಬರೋಣ. ಈಗ ಬರಬಹುದೇನೋ ಕೇಳು”ಎಂದೆ.

“ಅಂದರೆ ಥೀಂ ಬದಲಾಯಿಸುತ್ತೀರಾ? ಆರ್ ಯೂ ಆಲ್ರೈಟ್?” ಇನ್ನೂ ಏನೋ ಹೇಳುತ್ತಿರುವಷ್ಟರಲ್ಲೆ….

“ಪ್ಲೀಜ್ ರೂಮೀ!”

“ಕೂಲ್…. ಆದರೆ ಆ ಹುಡುಗಿ ಈಗಷ್ಟೇ ಮೋಡಲಿಂಗ್ಗೆ ಬಂದಿದ್ದಾಳೆ. ನೆನಪಿರಲಿ.”

“ಅಡ್ಡಿ ಇಲ್ಲ. ಅವಳು ಮಾಡ್ತಾಳೆ…..”

“ನಿನ್ನಿಷ್ಠ”

ಸಿಗರೆಟ್ ಟ್ರೇಯಲ್ಲಿ ಬಿಸಾಡಿ ಹೊರಗಡೆಗೆ ಹೋದಳು. ಒಂದು ಗಂಟೆಯ ನಂತರ ಮೂವರೂ ಟೀ ಎಸ್ಟೇಟ್ ಗಳ ಕಡೆಗೆ ಕಾರಲ್ಲಿ ಹೋಗುತ್ತಿದ್ದೆವು.

ರಿಯರ್ ವ್ಯೂ ಕನ್ನಡಿಯಿಂದ ಅವಳ ಕಡೆಗೇ ನೋಡುತ್ತಿದ್ದೆ. ಪರಿಚಯ ಇದ್ದಂತೆ ಕಾಣುತ್ತಿದ್ದ ಚಹರೆ, ಮುಖ್ಯವಾಗಿ ಆ ಕಂಗಳು…. ಎಂದಿನದೋ ಮರೆತುಹೋದ ನನ್ನ ಜೀವನವನ್ನು ಮತ್ತೆ ನೆನಪಿಸುವಂತೆ, ಮರೆತುಹೋಗಬೇಕೆಂದುಕೊಳ್ಳುತ್ತಾ, ದಿನಾಲೂ ನೆನಪಿಸಿಕೊಳ್ಳುವ ಗಾಯವನ್ನು ಮತ್ತೆ ಕೆದಕಿದಹಾಗೆ, ಎಲ್ಲಿ ನೋಡಿರಬಹುದು ಈ ಹುಡುಗಿಯನ್ನ, ಆ ಕಂಗಳನ್ನ?

ಎಲ್ಲಿ ಅಂದರೆ…. ಬಹುಶಃ ನನ್ನ ಊರಲ್ಲೇನೋ?

ಕಂಗಳು…ಆ ಕಂಗಳು… ಅವಳ ತರಾನೇ ಇವೆ. ಹೌದು. ಬುರಖಾದೊಳಗಿಂದ ಬಟ್ಟಲಿನ ತರಾ ದೊಡ್ಡದಾಗಿ ಕಾಣುವ ಆ ಎರಡುಕಂಗಳು ಅವಳವೇ……


‘ಗಾತುಮ್ ಯಜ್ಞಾಯಾ

ಗಾತುಮ್ ಯಜ್ಞಪತಯೇ… ದೈವೀ ಹೀ…..!’

ಅಪ್ಪನ ಕಂಠದಿಂದ ಪುರುಷ ಸೂಕ್ತ. ಬೆಳೆಗ್ಗೆ ಈ ಪುರುಷ ಸೂಕ್ತ ಕೇಳುತ್ತಾ ನಿದ್ರೆಯಿಂದ ಏಳುವುದು, ಆ ಕಂಠವನ್ನ ತಪ್ಪಿಸಿಕೊಂಡು ತಿರುಗುವುದು ಅಭ್ಯಾಸವಾಗಿ ಹೋಗಿದೆ. ನಾನು ಇಂಗ್ಲೀಷ್ ಮೀಡಿಯಂ ಸ್ಕೂಲಿಗೆ ಸೇರುವುದು, ಅದು ಕ್ರೈಸ್ತರ ಮಿಷನರಿ ಸ್ಕೂಲ್ ಆಗಿರುವುದು ಅಪ್ಪನಿಗೆ ಇಷ್ಟವಿಲ್ಲ. ಅಮ್ಮನಿಗೆ ಅಪ್ಪನ ತರಾ ಗುಡಿಯ ಪೂಜಾರಿಯಾಗುವುದು ಇಷ್ಟವಿಲ್ಲ. ಅವರಿಬ್ಬರಿಗೂ ನಡೆಯುವ ಸಮರದಲ್ಲಿ ನಡುವೆ ನಾನಿರುವುದು ನನಗಂತೂ ಇಷ್ಟವೇ ಇಲ್ಲ. ಅದಕ್ಕೇ ಅಪ್ಪನಿಗೆ ಕಾಣದಂತೆ ಇರುವುದು ರೂಢಿ ಮಾಡಿಕೊಂಡಿದ್ದೆ. ನಮ್ಮೂರಿನಿಂದ ೩ ಕಿಮೀ ದೂರನಮ್ಮ ಶಾಲೆ. ನಾನು ಹತ್ತನೆ ತರಗತಿಗೆ ಬರುವಾಗ ಆ ಊರಿಗೆ ಕರೆಂಟುಬಂದಿತ್ತು. ಬಸ್ಸು ತಿರಗಲು ಆರಂಭಿಸಿತ್ತು.

ಸರಿಯಾಗಿ ಅದೇ ಸಮಯದಲ್ಲಿ ಅವಳು ಸಹ ನಮ್ಮ ಸ್ಕೂಲಿಗೆಸೇರಿದ್ದಳು. ಬುರಖಾದಲ್ಲಿರುವ ಹುಡುಗಿ ಕ್ಲಾಸಿಗೆ ಬಂದ ತಕ್ಷಣ ಕ್ಲಾಸೆಲ್ಲ ನಿಶಬ್ದವಾಗಿತ್ತು.

ಅವಳ ಹೆಸರು ಸಾಜಿದಾ…. ವಿಜ್ಞಾನದ ಮೇಡಂ ಪರಿಚಯ ಮಾಡಿಸುತ್ತಿದ್ದರೆ ಅವಳನ್ನೇ ನೋಡುತ್ತಿದ್ದೆ.

ಬುರಖಾದೊಳಗಿಂದ ಕಾಣುತ್ತಿದ್ದ ಆ ಕಂಗಳು….

ಸಾಜಿದಾಳ ಕಂಗಳು….

ಹಾಗೇ ನೋಡ್ತಾ ಇರಬೇಕೆನಿಸುವ ಸುಂದರ ಕಂಗಳು.

ಪರಿಚಯ ಆದ ತಕ್ಷಣ ಹೋಗಿ ಮೂರನೆಯ ಬೆಂಚಿನಲ್ಲಿ ಕುತಳುಸಾಜಿದಾ. ಅವರಪ್ಪ ಆರ್ಟೀಸಿ ಡ್ರೈವರ್. ನಮ್ಮೂರಿನಿಂದ ಹತ್ತಿರದ ಟೌನಿಗೆ ತಿರುಗುವ ಬಸ್ಸಿನಲ್ಲಿ ಆತನ ಡ್ಯೂಟಿ. ಹೊಸದಾಗಿ ನಮ್ಮೂರಿಗೆ ಬಂದಿದ್ದಾರೆ. ಮಸೀದಿ ಪಕ್ಕದ ಗಲ್ಲಿಯಲ್ಲಿರೋ ಗಫಾರ್ ಮಾಮನ ಮನೆಯಲ್ಲಿ ಬಾಡಿಗೆಗೆ ಇರ್ತಾರಂತೆ. ಪಕ್ಕದಲ್ಲಿ ಕೂರುವ ಪ್ರಕಾಶ್ ಇಡೀ ವಿವರಗಳನ್ನ ಕಿವಿಯಲ್ಲಿ ಉಸುರಿದ್ದ..

“ಓಯ್ ಪುಳಿಚಾರೂ! ನೀನು ಮನೆಗೆ ಹೋಗುವ ರಸ್ತೆಯಲ್ಲೇ ಆ ಹುಡುಗಿ ಇರೋದು”ಎನ್ನುತ್ತ ಗೇಲಿ ಮಾಡಿದ್ದ. ಸ್ಕೂಲಿಗೆ ಸಹ ಬುರಖಾದಲ್ಲೇ ಬರುವ ಆ ಹುಡಿಗಿಯನ್ನ ವಿಸ್ಮಯದಿಂದ ನೋಡುತ್ತಿದ್ದೆ. ಯಾಕೋ ಅವಳ ಮುಖವನ್ನು ನೋಡುವದಕ್ಕಿಂತ ಬುರಖಾದೊಳಗಿಂದ ಇಣುಕುವ ಆ ಕಣ್ಣುಗಳನ್ನು ನೋಡುವುದೇ ಇಷ್ಟವಾಗಿತ್ತು.

ಸಾಜಿದಾ ಎರಡೇ ತಿಂಗಳಲ್ಲಿ ನನಗೆ ಸ್ಪರ್ಧಿಯಾದಳು. ನನ್ನ ಮೊದಲನೆಯ ಸ್ಥಾನ ಕಿತ್ತುಕೊಂಡಳು. ನನ್ನ ನೋಟಗಳನ್ನ, ಕನಸುಗಳನ್ನ ಸಹ. ಕ್ಲಾಸಲ್ಲಿ ಮಾತ್ರ ಬುರಖಾ ತೆಗೆಯುತ್ತಿದ್ದಳು. ಆದರೇತಲೆ ತಿರುಗಿಸಿ ನೋಡುತ್ತಿರಲಿಲ್ಲ, ಅವಳನ್ನು ನೋಡಲು ಪ್ರಯತ್ನಿಸಿದರೂ. ಸ್ಕೂಲಲ್ಲಿ ಸೇರಿದ ಒಂದು ವಾರಕ್ಕೇ ಬಿ ಸೆಕ್ಷನ್ ರಫಿಕ್ ಅವಳಿಗೆ ಲವ್ ಲೆಟರ್ ಬರೆದಿರುವುದು ಗೊತ್ತಾಗಿ, ಅಂದು ಅವಳ ಜೊತೆಗೆ ಬಂದ ಅವರ ತಂದೆ ಅವನನ್ನು ಹೊಡೆದದ್ದು ನೋಡಿದ ಮೇಲೆ ಅವಳ ಕಡೆಗೆ ನೋಡುವ ಧೈರ್ಯವೂ ಮಾಡಿರಲಿಲ್ಲ ಯಾರೋಬ್ಬರೂ.

“ಈ ಸಾಬರ ಉಸಾಬರಿನೇ ಬೇಡ ಮಗಾ. ನಾನು ಸ್ವರೂಪರಾಣಿಗೆ ಟ್ರೈಮಾಡ್ಕೊತೀನಿ” ಅಂದಿದ್ದ ಪ್ರಕಾಶ್. ಇಬ್ಬರದ್ದೂ ಒಂದೇ ಜಾತಿ ಅಂತೆ. ಹಾಗಾಗಿ ಮದುವೆಗೆ ಏನೂ ಸಮಸ್ಯೆ ಆಗುವುದಿಲ್ಲ ಅಂತ ಹೇಳಿದ್ದ. ( ಆದರೆ ಆ ಸ್ವರೂಪರಾಣಿ, ಪಿಯುಸಿಯ ನಂತರ ಇತರೆ ಜಾತಿಯವನಾದ ಜುವಾಲಜಿ ಲೆಕ್ಚರರ್ ನ ಮದುವೆ ಯಾಗಿದ್ದಳು. ಅದು ಬೇರೇ ವಿಷಯ.)

ಆಗಾಗ ಸಾಜಿದಾಳನ್ನು ನೋಡಬೇಕೆಂಬ ತವಕ ಹೆಚ್ಚಾಗಿ ಅವಳ ಕಡೆಗೆ ನೋಡುತ್ತಲೇ ಇರುತ್ತಿದ್ದೆ. ದಸರಾ ಸೀಜನ್ ಮೊದಲಾಗಿತ್ತು. ಅಪ್ಪನಿಗೆ ಪೂಜೆಗಳ ಗಿರಾಕಿ. ರಜೆಗಳಾದ್ದರಿಂದ ನಾನು ಸಹ ಖಾಲಿಯಾಗಿತಿರುಗುತ್ತಿದ್ದೆ. ಆದರೆ ಅಪ್ಪನ ಕಣ್ಣಿಗೆ ಬೀಳುತ್ತಿರಲಿಲ್ಲ. ಆದರೆ ಒಂದು ದಿನಮಾತ್ರ ಅಪ್ಪನ ಜೊತೆ ಹೋಗಲೇ ಬೇಕಾಯ್ತು, ದೇವಸ್ಥಾನದಲ್ಲಿ ಸಹಾಯ ಮಾಡಲಿಕ್ಕೆ. ಅಭ್ಯಾಸವಿಲ್ಲದ ಪಂಚೆ ಉಟ್ಟು ಅಪ್ಪನ ಜೊತೆಗುಡಿಯಲ್ಲಿ ಕಾಲಿಟ್ಟೆ. ಮಧ್ಯಾಹ್ನವಾಯಿತು. ಒಳಗಡೇ ಇನ್ನೂ ಏನೋಪೂಜೆ ನಡೆಯುತ್ತಿತ್ತು. ನಾನು ಚಡಪಡಿಸುತ್ತಿದ್ದೆ. ಹೇಗೂ ಅರ್ಚನೆಗಳ ಸಮಯ ಮುಗಿದಿತ್ತು. ಜನ ಸಹ ಕಮ್ಮಿಯಾಗುತ್ತಿದ್ದರು. ಒಂದು ಕೊಬ್ಬರಿ ಚಿಪ್ಪನ್ನು ತೆಗೆದುಕೊಂಡು ಗುಡಿಯ ಹಿಂಭಾಗದಲ್ಲಿದ್ದಮೆಟ್ಟಿಲಗಳ ಮೇಲೆ ಕೂತೆ. ಮೆಟ್ಟಿಲುಗಳೆಂದರೆ ಜಾಸ್ತಿ ಅಲ್ಲ. ಒಂದೈದಾರು ಮೆಟ್ಟಿಲುಗಳು ಅಷ್ಟೇ. ನಮ್ಮ ಊರು ಅಷ್ಟೇನೂ ದೊಡ್ಡದಲ್ಲವಾದ್ದರಿಂದ, ನಮ್ಮೂರ ದೇವರಿಗೆ ಇನ್ನೂ ದುಡ್ಡಿನ ಮೈಲಿಗೆ ಅಂಟದಿರುವುದರಿಂದ ಬಿಕ್ಷುಕರ ಸಂಚಾರ ಇರುವುದಿಲ್ಲ. ಒಳಗೆ ಹೋಗುವ ಭಕ್ತರ ಕೈಯಲ್ಲಿ ಕಾಣುವ ಹೂ ಬುಟ್ಟಿಗಳನ್ನ. ಅವರ ಜೊತೆಬರುವ ಹುಡುಗಿಯರನ್ನ ನೋಡುತ್ತಾ ಕುಳಿತಿದ್ದೆ.

ಚಿಕ್ಕಂದಿನಿಂದ ಅದೇ ದೇವರನ್ನ ನೋಡುತ್ತಿರುವುದರಿಂದ, ಆ ದೇವರೆಂದರೆ ಜಾಸ್ತಿ ಭಕ್ತಿ, ಭಯ ಎರಡೂ ಇಲ್ಲವಾಗಿತ್ತು. ಮಿಷನರಿಸ್ಕೂಲಲ್ಲಿ ಸೇರಿದನಂತರ ಜೀಸಸ್, ಸಾಜಿದಾಳಿಂದ ಮುಂಚೆ ಅಷ್ಟೇನೂ ಪರಿಚಯವಿಲ್ಲದ ಅಲ್ಲಾ ಗೊತ್ತಾದರೂ, ಅವರ ಬಗ್ಗೆ ಸಹ ಅಷ್ಟೇನೂನಂಬಿಕೆ ಇರಲಿಲ್ಲ.

ಸ್ಕೂಲಲ್ಲಿ ಕಲಿಸಿದ ಯಾವುದೋ ಪ್ರಾರ್ಥನಾ ಗೀತೆಯನ್ನ ಹಾಡುತ್ತಿದ್ದೆ. ದೇವರ ಮೇಲೆ ನಂಬಿಕೆ ಇಲ್ಲದಿದ್ದರೂ ಹಾಡು ಹಿಡಿಸಿತ್ತು. ಆದರೆ ಆ ಹಾಡು ಹಾಡುವಾಗ ನಾನೆಲ್ಲಿ ಕೂತಿದ್ದೆ ಅಂತ ನನ್ನ ಗಮನದಲ್ಲಿಲ್ಲದ್ದು ದೊಡ್ಡ ತಪ್ಪಾಗಿತ್ತು. ಹಾಡ್ತಾ ಹಾಡ್ತಾ ಮುಂದೆ ನೋಡಿದಾಗ ಸಾಜಿದಾಗುಡಿಯ ಮುಂದೆ ಸೈಕಿಲ್ ಮೇಲೆ ಬರುತ್ತಿದ್ದ ಮತ್ತೊಂದು ಹುಡುಗಿಯಜೊತೆ ಮಾತನಾಡುತ್ತಿದ್ದಿದ್ದು ಕಂಡಿತು. ಬುರಖಾ ಇರಲಿಲ್ಲ. ಆಗಷ್ಟೇ ನಮ್ಮೂರಿಗೆ ಕಾಲಿಡುತ್ತಿದ್ದ ಪಂಜಾಬಿ ಡ್ರೆಸ್ ನಲ್ಲಿ ಸಾಜಿದಾ. ಅವಳ ಕಡೆಗೆ ನೋಡ್ತಾ, ಅವಳು ನನ್ನ ಕಡೆಗೆ ನೋಡಲೆಂದು ಸ್ವಲ್ಪ ಸ್ವರ ಎತ್ತರಿಸಿದೆ. ಆಗ ಬಿತ್ತು ಕತ್ತಿನ ಮೇಲೆ ಹೊಡೆತ. ಏನು ಅಂತ ಅರ್ಥವಾಗುವುದರಲ್ಲಿ ಮತ್ತೊಂದು ಪೆಟ್ಟು ಬೆನ್ನಿಗೆ ಬಿತ್ತು. ನಾನು ಮಾಡಿದ ತಪ್ಪೇನು ಅಂತ ತಕ್ಷಣ ಹೊಳೆದಿತ್ತು. ಮಾಮೂಲಾಗಿ ಹಾಡಿಕೊಳ್ಳುವ ದೇವರ ನಾಮ ಅಲ್ಲದೇ ಅವತ್ತು ಮಿಷನರೀ ಸ್ಕೂಲಲ್ಲಿ ಹೇಳಿಕೊಟ್ಟ ಕ್ರೈಸ್ತರ ಪ್ರಾರ್ಥನೆ ಹಾಡನ್ನು ಹಾಡುತ್ತಿದ್ದೆ. ಒಳಗೆ ಲಿಂಗ ಪೂಜೆ ನಡೆಯುತ್ತಿದ್ದರೆ ಹೊರಗೆ ನಾನು ಏಸುವಿನ ಹಾಡು ಹಾಡುತ್ತಿದ್ದೆ. ಸಹಜವಾಗೇ ಅಪ್ಪನಿಗೆ ಸಿಟ್ಟುನೆತ್ತಿಗೇರಿತ್ತು. ಹಿಂದೆ ತಿರುಗಿ ನೋಡಲಿಕ್ಕಿಲ್ಲ, ಕಾಲಿಂದ ಒದೆ ಬಿತ್ತು. ಮೆಟ್ಟಿಲುಗಳಿಂದ ರೋಡ್ಡಿಗೆ ಬಿದ್ದಿದ್ದೆ, ಸಾಜಿದಾಳ ಮುಂದೆ. ಎದ್ದು ಧೂಳು ಜಾಡಿಸಿಕೊಳ್ಳುತ್ತ, ಕಣ್ಣೀರು ತಡೆದುಕೊಳ್ಳುತ್ತ ಸಾಜಿದಾಳ ಕಡೆಗೇನೋಡಿದೆ. ಆದರೆ ಎಂದಿನಂತೆ ಅವಳ ಕಣ್ಣೂಗಳೊಳಗಲ್ಲ. ಮೇಲಿನಿಂದ ಅಪ್ಪನ ಬೈಗುಳ ಕೇಳಿಬರುತ್ತಿತ್ತು. ಸಾಜಿದಾ ನಿಶಬ್ದವಾಗಿ ಹೊರಟುಹೋದಳು. ನಂತರ ಹಬ್ಬ ಮುಗಿಯುವವರೆಗೆ ದೇವಸ್ಥಾನದ ಕಡೆಗೆಹೋಗುವುದು ಬಿಟ್ಟೆ.


ವಾವ್…! ಎನ್ನುವ ರೂಮೀಯ ಉದ್ಗಾರದೊಂದಿಗೆ ಈ ಲೋಕಕ್ಕೆಬಂದೆ. ಕಾರಿಳಿದು ನೋಡಿದರೆ, ಸುತ್ತಲೂ ಚಹಾ ಎಲೆಗಳ ಪೊದೆಗಳು. ಅಲ್ಲಲ್ಲಿ ಮರಗಳು, ಪಕ್ಕದಲ್ಲಿ ಕಣಿವೆ ತರ ಕಾಣುವ ಇಳಿತ. ಮಧ್ಯಾಹ್ನವಾಗಿದ್ದು ಹೊಗೆಮಂಜೆಲ್ಲ ಕರಗಿ ಹೋಗಿ ಹಸಿರ ವರ್ಣದಲ್ಲಿ ಮಿನುಗುತ್ತಿತ್ತು ಆ ಪ್ರದೇಶವೆಲ್ಲ. ಚಹಾ ಎಲೆಗಳನ್ನು ಕಿತ್ತುತ್ತಿದ್ದ ಹೆಂಗಸರು, ಕೆಳಗೆ ಘಾಟ್ ರಸ್ತೆ ಮೇಲೆ ಹೋಗುವ ಒಂದೆರಡು ಗಾಡಿಗಳು. ಯಾವುದೇ ಸಮಯದಲ್ಲಾದರೂ ಸುಂದರವಾಗಿ ಕಾಣುವಊಟೀ ಪರಿಸರ.

ಯಾವುದೋ ಸೌಖ್ಯ ಒಳಕೆ ಹೊಕ್ಕಂತೆನಿಸಿತು. ಎದೆ ತುಂಬಾ ಗಾಳಿ ಎಳೆದುಕೊಂಡು ಸಿಗರೆಟ್ ಹಚ್ಚಿದೆ. ಹಿಂದಿನ ಸೀಟಿನಲ್ಲಿದ್ದ ರೂಮೀ ಆಗಲೇ ಇಳಿದು ಪ್ರಕೃತಿಯ ಹುಡುಗಿಯಾಗಿದ್ದಾಳೆ. ಬಂದ ಕೆಲಸ ಬಿಟ್ಟು ಹಾಗೆ ಪರವಶಳಾಗುವುದು ಹಿಡಿಸದಿದ್ದರೂ ಏನೂ ಮಾತಾಡಲಿಲ್ಲ.

ಕೆಳಗಿಳಿಯುವಂತೆ ಕಣ್ಸನ್ನೆ ಮಾಡಿದೆ ಸಲ್ಮಾಳಿಗೆ. ನಮ್ಮಆಲೋಚನೆಗಳನ್ನ ಅವಳಿಗೆ ವಿವರಿಸುತ್ತಾ, ಎಲ್ಲಿ ನಿಲ್ಲಬೇಕು, ಹೇಗೆ ನಿಲ್ಲಬೇಕು ಅಂತ ಹೇಳ್ತಾ ಇದ್ದೆ. ಬೆಳೆಗ್ಗೆಯ ಬೆಳಕು ಬೇಗ ಬೇಗ ಬದಲಾಗುತ್ತ ಹೋಗುತ್ತದೆ. ಆ ಕಮ್ಮಿ ಸಮಯದಲ್ಲೇ ನಮ್ಮ ಕೆಲಸಮುಗಿಸಬೇಕು. ಅದು ಮಾಡಲು ಇಷ್ಟು ತಾಲೀಮು ಬೇಕು.

ಆದರೆ ಅವಳ ಜೊತೆ ಮಾತಾಡುವಷ್ಟು ಹೊತ್ತು ಅವಳಿಂದ ಕಣ್ಣುಕೀಳಲು ಆಗುತ್ತಿಲ್ಲ. ಎಲ್ಲ ಕೋನಗಳು ನೋಡಿಕೊಂಡು, ಗುರ್ತುಗಳು ಹಾಕಿ, ಕೆಲ ಮಾದರಿ ಫೋಟೋಗಳನ್ನು ತೆಗೆದುಕೊಳ್ಳುವುದರಲ್ಲಿ ಸಂಜೆಯಾಗಿ ಹೋಗಿತ್ತು. ಏಳು ಗಂಟೆಗೆ ಹೋಟೆಲ್ ತಲುಪಿದೆವು. ಅಷ್ಟರಲ್ಲಿ ಹೊಗೆ ಮಂಜು ಆವರಿಸಿತು. ಲೌಂಜಲ್ಲಿ ಕೂತೆವು. ಬೇಕಾದದಿರಿಸು, ಉಪಕರಣ ಎಲ್ಲ ತಯಾರು ಅಂತ ಹೇಳಿದಳು ರೂಮೀ. ಚಳಿಗೆ ನಡುಗುತ್ತಿದ್ದ ಸಲ್ಮಾಗೆ ಬೇಗ ನಿದ್ರೆ ಮಾಡಲು ಹೇಳಿದೆ. ನಾಳೆ ಷೂಟಿಗೆ ಜಾಸ್ತಿ ಮೇಕಪ್ ಬೇಡ ಎಂದು ಸಹ ಹೇಳಿದೆ. ಯಾವುದಕ್ಕೂ ಅವಳು ಕೊಲೆ ಬಸವನಂತೆ “ಸರಿ ಸರ್”..ಎನ್ನುತ್ತ ತಲೆ ಅಲ್ಲಾಡಿಸುವುದು ನನಗೇಕೋ ಹಿಡಿಸಲಿಲ್ಲ. ಅವಳು ಹೊರಡುತ್ತಿದ್ದಂತೆ ಸಲ್ಮಾಳಿಗೆ ಹೇಳಿದೆ “ಸ್ವಲ್ಪ ಹೊತ್ತು ನನ್ನ ರೂಮಿಗೆ ಬಂದು ಹೋಗು” ಎಂದು. ಸಂದೇಹದಿಂದ, ಭಯದಿಂದ ನನ್ನ ನೋಡಿ ಹೊರಟು ಹೋದಳು.

ಮನಸ್ಸಿನಲ್ಲೆಲ್ಲ ಮತ್ತೆ ಮಂಜು ಸುರಿಯಲು ಶುರುವಾಯುತು. ಎಲ್ಲಿಯನಾನು, ಎಲ್ಲಿಯ ಈ ಹುಡುಗಿ. “ಸಾಜಿದಾ” ಹೊರಗೇ ಅಂದೆ.

“ವಾಟ್?” ಯಾವಾಗೋ ಬಂದು ಪಕ್ಕದಲ್ಲೇ ನಿಂತಿದ್ದಳು ರೂಮೀ.

“ಸರ್! ಷಿ ಈಜ್ ಸಲ್ಮಾ!”

“ಯಾ! ಐ ನೋ….”

ರೂಮಿಗೆ ಬಂದು ಸೋಫಾದಲ್ಲಿ ಕುಸಿದೆ. ಕೈಯಲ್ಲಿದ್ದ ಕವರ್ ನಿಂದತೆಗೆದು ಟೀಪಾಯ್ ಮೇಲೆ ಬಾಟಲ್ ಇಟ್ಟಳು ರೂಮಿ.

“ದಿಸ್ ಈಜ್ ಲೋಕಲ್ ಸ್ಟಫ್. ಯು ಮೇ ಲೈಕೆಟ್. ನಮ್ಮವರಿಗೆ ಇದು ಇಷ್ಟವಾಗುತ್ತದೆಂದು ಇಲ್ಲಿಯವರು ಅಂದುಕೊಳ್ಳುತ್ತಿದ್ದಾರೆ.”

“ರೂಮೀ! ತೆಲುಗು ಎಲ್ಲಿ ಕಲೆತೆ?”
“ಅಪ್ಪಂದು ಚಿತ್ತೂರ್. ನಂತರ ಮೈಸೂರಿಗೆ ಬಂದೆವು. ಅದಕ್ಕೆ ನನಗೆ ತೆಲುಗು ಬರುತ್ತೆ” ಗ್ಲಾಸ್ ಕೈಗೆ ಕೊಡುತ್ತ ಹೇಳಿದಳು.

ಇಬ್ಬರ ನಡುವೆ ಕೆಲ ಹೊತ್ತು ನಿಶಬ್ದ….. ಇದ್ದಕ್ಕಿದ್ದ ಹಾಗೆ ಕೇಳಿದಳು.

“ನಿಮಗೆ ಆ ಹುಡುಗಿ ಅಂದರೆ ಇಂಟರೆಸ್ಟ್ ಇದ್ದಂತೆ ಕಾಣತ್ತೆ. ಆದರೆಅವಳಿನ್ನೂ ಮೋಡಲಿಂಗ್ ಗೆ ಹೊಸಬಳು.”

“ಅದಲ್ಲ, ನನಗಿರುವ ಇಂಟರೆಸ್ಟ್ ಬೇರೇದು.”

“ಸರಿ. ಆದರೆ ಸಾಜಿದಾ ಯಾರು ಅಂತ ತಿಳ್ಕೋಬಹುದಾ? ಇಷ್ಟಕ್ಕು ಮುಂಚೆ ಅವಳ ಹೆಸರು ತೆಗೆದುಕೊಂಡ್ರಿ ” ತುಂಟತನ ತರಲು ಪ್ರಯತ್ನಿಸಿದಳು. ಆದರೆ ಅದಕ್ಕೆ ಅವಳ ಆಸಕ್ತಿಯನ್ನು ದಾಟಲಾಗಲಿಲ್ಲ. ಎರಡು ನಿಮಿಷ ಅವಳನ್ನೇ ದಿಟ್ಟಿಸಿದೆ. ಸಡಿಲಬಿಟ್ಟ ಕೂದಲು, ಹರೆಯದವಯಸ್ಸು, ಶಿಸ್ತಾಗಿರಿಸಿದ ಬಾಡಿ. ಆದರೆ ಕಣ್ಣುಗಳಲ್ಲಿ ಇನ್ನೂ ಮುಗ್ಧಛಾಯೆ ಹೋಗಿಲ್ಲ. ನಾನೇನಾದರೂ ಹೇಳಬಹುದು ಅಂತ ನನ್ನ ಕಡೆಗೇ ನೋಡುತ್ತಿದ್ದಳು.


ಶಾಲೆ ಪ್ರಾರಂಭವಾದರೂ ಹೋಗಿರಲಿಲ್ಲ. ಶಾಲೆ ಎಂದಾಕ್ಷಣ ಸಾಜಿದಾ, ಅವಳ ಎದುರಲ್ಲಿ ನನಗಾದ ಅವಮಾನ ನೆನಪಿಗೆ ಬರುತ್ತಿದ್ದವು. ಹೇಗೆ ಮತ್ತೆ ಅವಳ ಎದುರು ನಿಲ್ಲೋದು? ಎನ್ನುವ ಆಲೋಚನೆಯಲ್ಲೇ ಎರಡುದಿನ ಕಳೆದಿದ್ದೆ. ಆದರೆ ಕಡ್ಡಾಯ ಎನ್ನುವ ಹಾಗೆ ಮೂರನೆಯ ದಿನತರಗತಿಗೆ ಅಡಿ ಇಟ್ಟಿದ್ದೆ. ಮೂರನೆಯ ಬೆಂಚ್ ಖಾಲಿಯಾಗಿ ಕಂಡಿತು. ಆಮರುದಿನ, ಅದರ ಮರುದಿನ ಸಹ ಆ ಬೆಂಚಲ್ಲಿ ಸಾಜಿದಾ ಕೂತುಕೊಳ್ಳುವ ಜಾಗ ಖಾಲಿಯಾಗೇ ಕಂಡಿತು.

“ಸಾಜಿದಾಳ ಅಮ್ಮ ತೀರಿಹೋದರಂತೆ ಕಣೋ! ಅದಕ್ಕೆ ಅವಳು ಬರ್ತಾಇಲ್ಲ.” ಪ್ರಕಾಶ್ ವರದಿ ಕೊಟ್ಟ. ಸಂಜೆ ಅವಳನ್ನ ನೋಡಲು ಹೊರಟ ಹುಡುಗಿಯರ ಜೊತೆ ಅವಳ ಮನೆಗೆ ಹೋಗಬೇಕೆಂದು ಪ್ಲಾನ್ಮಾಡಿದ್ದರೂ ಹೆದರಿಕೆಯಿಂದ ಹೋಗಲಿಲ್ಲ.

ಅವಳ ಅಮ್ಮ ಸತ್ತರೆ ಸಾಜಿದಾ ಅಳುತ್ತಾಳಾ? ಯಾರ ಅಮ್ಮ ಸತ್ತರೂ ಅಳ್ತಾರಲ್ಲಾ! ಅಳುತ್ತಿರುವ ಸಾಜಿದಾ ಕಂಗಳನ್ನ ಊಹಿಸದಾದೆ.

ಮರುದಿನ ಶಾಲೆಗೆ ಬಂದಳು ಸಾಜಿದಾ. ಅವಳನ್ನ ಮಾತನಾಡಿಸಲು ಪ್ರಯತ್ನಪಟ್ಟೆ. ಪ್ರೇಯರ್ ಹಾಲ್ ಹತ್ತಿರ ಕಂಡಳು. ಇಬ್ಬರೂ ಮೊದಲಿಗರಾಗಲು ಪೈಪೋಟಿ ನಡೆಸುವವರು ತಾನೇ ! ಅವಳ ಹತ್ತಿರಕ್ಕೆಹೋಗಲು ಒಳ್ಳೆ ನೆಪ ಸಿಕ್ಕಿತು.

“ಸಾಜಿದಾ! ಕ್ಲಾಸುಗಳು ಮಿಸ್ಸಾಗಿವೆಯಲ್ಲ! ನೋಟ್ಸ್ ಬೇಕಾ?”

ಕೊಂಚ ಆಶ್ಚರ್ಯದಿಂದಲೂ, ಕೊಂಚ ಹೆದರಿದವಳಂತೆ ನೋಡಿದಳು. ಅಷ್ಟು ನೋವಲ್ಲೂ ಅವಳ ಕಂಗಳು ಮುಂಚಿನಷ್ಟೇ ಸುಂದರವಾಗಿ ಕಾಣುವುದರಲ್ಲಿ ನನ್ನ ಹರೆಯದ ಪ್ರಭಾವವಿತ್ತೇನೋ ಗೊತ್ತಿಲ್ಲ. ಅವಳೇನೂ ಮಾತಾಡದಿದ್ದರೂ ಹಾಗೇ ನಿಂತಿದ್ದೆ. ನಂತರ ಎರಡು ನೋಟ್ಸ್ ತೊಗೊಂಡು ತನ್ನ ಬ್ಯಾಗಲ್ಲಿಟ್ಟುಕೊಂಡಳು. ಗಣಿತದ ನೋಟ್ಸಲ್ಲಿದ್ದ ಲವ್ ಲೆಟರ್ ಸಹ. ಆದರೆ ಅದು ನಾನು ಸಾಜಿದಾಳಿಗೆ ಬರೆದದ್ದಲ್ಲ. ಪ್ರಕಾಶ್ ಸ್ವರೂಪರಾಣಿಗೆ ಬರೆದದ್ದು. ಅಂದು ಸಂಜೆ ಅವನು ಹೇಳೋವರೆಗೂ ನನಗದು ನೆನಪೇ ಇರಲಿಲ್ಲ. ಆದರೆ ಆಗಿಂದ ಹೆದರಿಕೆ ಶುರುವಾಯ್ತು. ಸಾಜಿದಾಳ ಅಪ್ಪ ಕಣ್ಣೆದುರು ಬಂದು ನಡುಗು ಶುರುವಾಯ್ತು. ನೋಟ್ಸ್ ನಲ್ಲಿದ್ದ ಆ ಪತ್ರವನ್ನ ಅವಳು ನೋಡಬಾರದೆಂದು ಎಂದೂ ನಂಬದ ದೇವರನ್ನು ಅಂದು ನಂಬಿ ಹರಕೆಹೊತ್ತಿದ್ದೆ. ಮಾರನೆಯ ದಿನ ಬಸ್ಸಿಗಾಗಿ ಕಾಯದೆ, ಪ್ರಕಾಶನ ಸೈಕಿಲ್ಮೇಲೆ ಶಾಲೆಗೆ ಹೋಗಿದ್ದೆ. ಸಾಜಿದಾಳ ಅಪ್ಪ ಬರಲಿಲ್ಲ. ಸಾಜಿದಾಳು ಸಹ ಬರಲಿಲ್ಲ. ಅವತ್ತೇ ಅಲ್ಲ ಮತ್ಯಾವ ದಿನವೂ ಸಾಜಿದಾ ಶಾಲೆಗೆ ಬರಲಿಲ್ಲ.


ಎರಡು ತಿಂಗಳು ಕಳೆದು, ಆ ದಿನ ನನ್ನ ಹುಟ್ಟುಹಬ್ಬಕ್ಕೆ ದೇವಸ್ಥಾನದಿಂದ ಅಮ್ಮ, ನಾನು ಬರುತ್ತಿರುವಾಗ ಕಾಣಿಸಿದಳು. ಬುರಖಾದಲ್ಲಿಯ ಎರಡು ಕಂಗಳಿಂದ ಅಶ್ವತ್ಥ ಗಿಡದ ಕಡೆಗೆ ಸನ್ನೆ ಮಾಡಿ, ಬಲಗೈಯ ಬೆರಳುಗಳನ್ನುಒಮ್ಮೆ ಮುಚ್ಚಿ ತೆಗೆದು ಹೊರಟು ಹೋದಳು. ಅಂದು ಸಂಜೆ ಚಳಿಗೆನಡುಗುತ್ತಾ, ಕತ್ತಲು ಹರುಡುತ್ತಿರುವಂತೆ, ಐದು ಗಂಟೆಗೆ, ಅಶ್ವತ್ಥ ಗಿಡದ ಹತ್ತಿರಕ್ಕೆ ಹೋದೆ. ಹತ್ತು ನಿಮಿಷಗಳ ನಂತರ ಸಾಜಿದಾ ಬಂದಳು. ಇಬ್ಬರೂ ಎದುರುಬದುರಾಗಿ… ಮಾತಿಲ್ಲದೆ….

“ಸಾಜಿದಾ! ಆ ಪತ್ರ….” ನಂತರ ಏನು ಹೇಳಲು ತೋಚದೆ ನಿಲ್ಲಿಸಿಬಿಟ್ಟೆ.

“ಅಬ್ಬಾ ನೋಡಿದರು. ಆದರೆ ಅವರಿಗೆ ತೆಲುಗು ಬರಲ್ಲ.” ಮೆಲ್ಲಕ್ಕೆ ನಗುತ್ತ ಹೇಳಿದಳು.

ಒಳಗೊಳಗೆ ನಿಡುಸುಯ್ದೆ.

“ಹಾಗಾದರೆ ಶಾಲೆಗೆ ಯಾಕೆ ಬರ್ತಾ ಇಲ್ಲ?”

“ನನಗೆ ನಿಕಾ ಮಾಡ್ತಾರಂತೆ. ಅಬ್ಬಾನ ಡಿಪೋ ಮೇನೇಜರ್ ಮಗನಂತೆ.”

ಅವಳ ಮುಖದಲ್ಲಿ ಯಾವ ಭಾವವೂ ತುಳುಕಾಡುತ್ತಿರಲಿಲ್ಲ.

“ಮದುವೆನಾ?” ಯಾಕೋ ಗೊತ್ತಿಲ್ಲ. ಅಲ್ಲ ಗೊತ್ತಿತ್ತು. ಆದರೆ, ಆ ವಯಸ್ಸಿನಲ್ಲಿ ಏನು ಮಾಡಬೇಕೋ ತಿಳಿಯದ ಸ್ಥಿತಿ. ಕಣ್ಣಲ್ಲಿ ನೀರುತುಂಬಿತು. ಹಾಗೇ ನಿಂತುಬಿಟ್ಟಿದ್ದೆ. ಸಣ್ಣಗೆ ಹರಡಲು ಶುರುವಾದಕತ್ತಲೆಯ ಬಾಹುಗಳು ಇಬ್ಬರನ್ನೂ ತಬ್ಬಿಕೊಳ್ಳುತ್ತಿದ್ದವು.

ಹಠಾತ್ತನೆ ಹತ್ತಿರಕ್ಕೆ ಬಂದು ನನ್ನ ಅಪ್ಪಿಕೊಂಡಳು.

ಸಾಜಿದಾ….. ಬಟ್ಟಲುಗಣ್ಣಿಂದ ನನ್ನನ್ನು ನೋಡುತ್ತ ಸಾಜಿದಾ…..

ಬುರಖಾದಲ್ಲೂ ಭಯಪಡುತ್ತಾ ನಡೆಯುವ ಸಾಜಿದಾ…..

ಒಮ್ಮೆಯಾದರೂ ನಾನು ಮಾತನಾಡಬೇಕೆಂದು ಕಾದಿದ್ದ ಸಾಜಿದಾ…..

ತುಟಿಗಳ ಮೇಲೆ ಹೂ ಮುತ್ತನಿತ್ತು, ಕಂಗಳಲ್ಲಿ ನೀರು ತುಂಬಿಕೊಳ್ಳುತ್ತಾ, ಹೊರಟು ಹೋಗುತ್ತಿದ್ದವಳು ಹಿಂದೆ ತಿರುಗಿ ನೋಡಿದಳು. ಅವೇ ಸುಂದರ ಕಂಗಳು.. ಬಹುಶಃ ಅದೇ ಕೊನೆಯಬಾರಿ ಅವಳನ್ನುನೋಡಿದ್ದು.

ಅದು ಪ್ರೀತಿನಾ ಅಲ್ಲವಾ ಅನ್ನೋದು ಅಪ್ರಸ್ತುತ. ಇದು ಆಕರ್ಷಣೆಯಾ? ಎನ್ನುವ ಸಂದೇಹ ಬೇಡ. ಆದರೆ ಒಂದು ಜೀವನ ಕಾಲದ ಅನುಭವಮಾತ್ರ ಹೌದು. ಸತ್ಯ ಸುಳ್ಳುಗಳಿಗೆ ಸಂಬಂಧವಿಲ್ಲದೆ ಒಂದು ಕಲ್ಪನಾಪ್ರಪಂಚ ಸೃಷ್ಟಿಸುವ ಸಮಯ. ಈ ಸ್ಥಿತಿಯಲ್ಲಿ ಪ್ರತಿಯೊಬ್ಬನೂ ಒಬ್ಬಅದ್ಭುತ ಕವಿ ಅಥವಾ ಬರಹಗಾರನಾಗುತ್ತಾನೆ. ಒಂದು ಸುಂದರವಾದ ಜೀವನದ ಕತೆಯನ್ನು ಊಹಿಸುತ್ತಾನೆ. ಅದೇ ಕಾರಣಕ್ಕೆ ಪ್ರಥಮಪ್ರೀತಿಯಲ್ಲಿರುವ ಮುಗ್ಧತೆ, ಉದ್ವೇಗ ಮತ್ತೆ ಯಾವಗಲೂ ಕಾಣದು.

ಅವಳ ಮದುವೆಯಾಗುವವರೆಗೂ ಸುತ್ತಮುತ್ತ ತಿರುಗುತ್ತಿದ್ದೆ. ಮದುವೆಯಾದ ಮೇಲೆ ಸಹ ಆ ಮಸೀದಿ ಸಂದಿನಲ್ಲಿ ಬಂದಾಕ್ಷಣ ಉದ್ದೇಶಪೂರ್ವಕವಾಗಿ ನಡಿಗೆ ನಿದಾನ ಮಾಡಿ ನಡೆಯುತ್ತಿದ್ದೆ. ಎಸ್ಸೆಲ್ಸಿಯ ನಂತರ ಪಿಯುಸಿಗಾಗಿ ನಗರಕ್ಕೆ ಬಂದುಬಿಟ್ಟೆ. ಸ್ವರೂಪರಾಣಿ ಕೈಕೊಟ್ಟ ಮೇಲೆ ಪ್ರಕಾಶ್ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗಿ ಊರಲ್ಲೇ ಗೊಬ್ಬರದಂಗಡಿ ತೆಗೆದಿದ್ದ.

ನಾನು ಫೋಟೋಗ್ರಫಿಯಲ್ಲಿ ಡಿಪ್ಲಮಾದಲ್ಲಿರುವಾಗಲೇ ಕುಂಭಮೇಲಕ್ಕೆ ಹೋಗಿ ಅಲ್ಲಿಯ ತುಳಿದಾಟಕ್ಕೆ ಸಿಕ್ಕಿ ಸತ್ತ ಅಮ್ಮ, ಅದರ ನೋವಿನಲ್ಲಿ ಕೆಲವೇ ದಿನಗಳಲ್ಲಿ ಅವಳನ್ನು ಅನುಸರಿಸಿದ ಅಪ್ಪನ ಸಾವಿನ ನಂತರ ನಾನು ಊರಿಗೆ ದೂರವಾದೆ. ಆದರೆಸಾಜಿದಾಳನ್ನು ಭೇಟಿಯಾದ ಆ ಮರದ ಹತ್ತಿರಕ್ಕೆ ಒಮ್ಮೆಯಾದರೂ ಹೋಗಬೇಕೆನ್ನುವ ಹಂಬಲ ಹಾಗೇ ಉಳಿದಿತ್ತು.

​​​​​***

ಕೈಯಲ್ಲಿಯ ಸಿಗರೆಟ್ ಬೆರಳನ್ನು ಸುಟ್ಟಿತು. ಸುತ್ತುವರೆದ ಕತ್ತಲುಮತ್ತಷ್ಟು ಗಾಡವೆನಿಸಿತ್ತು. ಏನು ಮಾತಾಡಬೇಕೆಂದು ತಿಳಿಯದ ರೂಮೀ ಸುಮ್ಮನೆ ಕೂತಿದ್ದಳು.

“ಎಷ್ಟು ವರ್ಷವಾಯಿತು?”

“ಏನು?”

“ಸಾಜಿದಾ ಹೋಗಿ… ಐ ಮೀನ್ ಸಾಜಿದಾ ನಿಮ್ಮನ್ನು ಹಗ್ ಮಾಡಿಕೊಂಡು.”

“ಇಂದಿಗೆ ಸರಿಯಾಗಿ ೨೭ ವರ್ಷಗಳು.”

“ಅಂದರೆ…….”

“ಹೌದು. ಡಿಸೆಂಬರ್ ೧೨ ೧೯೯೨, ನನ್ನ ಹುಟ್ಟುಹಬ್ಬದ ದಿನ.”


ಮರುದಿನದ ಷೂಟಿಂಗ್ ಮುಗಿಯುವ ವೇಳೆಗೆ ಬೆಳೆಗ್ಗೆ ಒಂಬತ್ತುದಾಟಿತ್ತು. ನೆನ್ನೆ ರಾತ್ರಿ ರೂಮೀಗೆ ಸಾಜಿದಾ ಬಗ್ಗೆ ತಿಳಿಸಿರುವುದರಿಂದ ಇವತ್ತು ಸಲ್ಮಾಳ ಕಂಗಳಿಂದ ತೊಂದರೆ ಎನಿಸಲಿಲ್ಲ. ಮರುದಿನ ಸಹ ಎರಡು ಕಡೆ ಷೂಟಿಂಗ್ ಮುಗಿಸಿದೆವು. ಕೊನೆಯ ಫೋಟೋ ಸಹತೆಗೆದಮೇಲೆ ಹೇಳಿದೆ.

“ಸಲ್ಮಾ! ಯು ಹ್ಯಾವ್ ಎ ಗ್ರೇಟ್ ಫ್ಯೂಚರ್!”

ಹಾಗೆ ಹೇಳುವಾಗ ಅವಳ ಕಣ್ಣುಗಳ ಕಡೆಗೆ ನೋಡುವುದು ಮಾತ್ರ ಬಿಡಲಿಲ್ಲ.

ಅದೇ ನೋಟ….. ಅಂದು ಸಂಜೆ ನನ್ನನ್ನ ಬಿಟ್ಟು ಹೋಗುತ್ತ ಅವಳು ನೋಡಿದ ನೋಟವೇ ನೆನಪಾಗಿ ಒಂದು ಕ್ಷಣ ಅಧೀರನಾದೆ.

“ಸರ್! ಎನ್ನ ಅಪ್ಪ ಅಮ್ಮ ಬಂದಿದ್ದಾರೆ. ಸಂಜೆ ಡಿನ್ನರ್ ಗೆ ನಿನ್ನ ಇನ್ವೈಟ್ಮಾಡು ಅಂತ ಹೇಳಿದ್ದಾರೆ” ತಮಿಳು ಮಿಶ್ರಿತ ತೆಲುಗು. ನಿಜ. ಸಲ್ಮಾ ತೆಲುಗು ಮಾತಾಡುತ್ತಿದ್ದಾಳೆ.

“ನಿನಗೆ ತೆಲುಗು ಬರುತ್ತಾ?” ಎಲ್ಲಿಂದಲೋ ಹೌದು, ಹೌದು ಅಂತ ಯಾರೋ ಕಿರುಚಿತ್ತಿದ್ದ ಹಾಗೆ. ಇವಳ ಮುಖದಲ್ಲಿ ಅವಳ ಹೋಲಿಕೆಗಳನ್ನ ಮತ್ತಷ್ಟು ಹುಡುಕುತ್ತಿದ್ದ ಹಾಗೆ ನೋಡುತ್ತ ಕೇಳಿದೆ.

“ಯಾ! ಮೈ ಮಾಮ್ ಬಿಲಾಂಗ್ಸ್ ಟು ಹೈದ್ರಾಬಾದ್. ಅಲ್ಲಿಂದ ಇಲ್ಲಿಗೆ ಬಂದಿದ್ದಾರೆ.”

ಊಟಿ ಬೆಟ್ಟಗಳ ನಡುವೆ ಒಮ್ಮೆ ಹಾರಿ ನಮ್ಮ ಊರಿನಲ್ಲಿ ಬಿದ್ದ ಹಾಗೆ, ಮತ್ತೆ ಆ ಮಸೀದಿ ಸುತ್ತ ಮುತ್ತ ತಿರುಗುತ್ತಿದ್ದ ಹಾಗೆ ಒಮ್ಮೆಗೇ ಸುತ್ತುಮುತ್ತಿದ ನೆನಪುಗಳು. ಇವಳು.. ಅವಳೇನಾ? ಈ ಕಂಗಳು ಆಕಂಗಳೇನಾ? ಸಾಜಿದಾ…. ಸಾಜಿದಾ… ಸಾಜಿದಾ…

“ಸರ್! ಆರ್ ಯು ಒಕೆ?” ಆತಂಕಗೊಂಡಂತೆ ನನ್ನ ಕೈ ಹಿಡಿದು ಕೇಳುತ್ತಿದ್ದ ಸಲ್ಮಾ, ಸ್ವಲ್ಪ ದೂರದಿಂದ ನಮ್ಮ ಕಡೆಗೆ ಓಡಿ ಬರುತ್ತಿದ್ದ ರೂಮೀ, ಉಳಿದ ಅಸಿಸ್ಟೆಂಟ್ ಗಳು. ನಂತರ ಕಣ್ಣಲ್ಲಿ ನೆಲೆಸಿದ ಕತ್ತಲೆ….

ಕಣ್ಣು ತೆಗೆದಾಗ ನನ್ನನ್ನೇ ಆತಂಕದಿಂದ ನೋಡುತ್ತಾ…. ನನ್ನ ನೋಟಮಾತ್ರ ಸಲ್ಮಾನನ್ನು ಹುಡುಕುತ್ತಾ…..

ಸ್ವಲ್ಪ ಪಕ್ಕಕ್ಕೆ ನಿಂತು, ಆತಂಕದಿಂದ ನನ್ನ ಕಡೆಗೇ ನೋಡುತ್ತಿದ್ದ ಸಲ್ಮಾ……


ರಾತ್ರಿ ತಿರ್ರುಗಿ ಬರುವಾಗ ರೂಮೀ ಕೇಳಿದಳು. “ಪಾಪ! ಅವರುನಮ್ಮ ಸಲುವಾಗಿ ಕಾದಿರಬೇಕು. ಅದೆಷ್ಟು ಸಲ ಕಾಲ್ ಮಾಡಿದರೂಯಾಕೆ ಬೇಡ ಅಂದಿರಿ? ಅವಳು ಸಾಜಿದಾಳೇ ಆಗಿರಬಹುದಲ್ವಾ?”

ಉತ್ತರ ಕೊಡದೇ ಹಾಗೇ ಸೀಟಲ್ಲಿ ಒರಗಿಕೊಂಡೆ. ಕಣ್ಣಿನ ಮುಂದೆಮತ್ತೊಮ್ಮೆ ನಮ್ಮೂರ ಮಸೀದಿ ಕಂಡಿತು….

ಸಾಜಿದಾಳ ಮದುವೆಯಾದ ಕೆಲ ದಿನಗಳ ಬಳಿಕ, ಆ ಮಸೀದಿಯಗೋಡೆಯ ಹಿಂದೆ ನನ್ನನ್ನು ಹಿಡಿದುಕೊಂಡ ಸಾಜಿದಾಳ ಅಪ್ಪ “ ಹೌದುಸ್ವಾಮೇರಾ! ನನ್ನ ಮಗಳಿಗೆ ಪತ್ರ ಬರಿತಿಯಾ? ಅವಳ್ನ ಮದ್ವೆಮಾಡ್ಕೊಬೇಕು ಅಂದುಕೊಂಡೆಯಾ? ಮತ್ತೆ ಈ ಕಡೆ ಕಾಣಬೇಡ ನೀನು. ಪ್ರತೀ ಸಲ ನನ್ನ ಸಿಟ್ಟನ್ನ ನಾನು ತಡಕೊಳ್ಳಲಾರೆ. ನನ್ನ ಕೈಯಲ್ಲಿ ಸತ್ತುಹೋಗಬೇಡ” ಅಂತ ಮಾತಾಡಿದ ಮಾತುಗಳು ನೆನಪಿಗೆ ಬಂದವು. ನನ್ನತಪ್ಪಿಂದಲೇ ಸಾಜಿದಾ ಓದು ಬಿಡಬೇಕಾಯಿತು ಎನ್ನುವ ವಿಷಯಅವಳಿಗೆ ಗೊತ್ತಾಗದಿದ್ದರೂ, ನನಗೆ ಗೊತ್ತಾಯಿತೆಂದು, ಅದೇ ಭಾವನೆನನ್ನನ್ನು ಒಳಗೊಳಗೇ ಸುಡುತ್ತಿದೆಯೆಂದು ಅವಳಿಗೆ ಹೇಗೆ ಹೇಳಲಿ.