ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ನೇಹವೆಂದರೆ…

ಸುಮಾ ವೀಣಾ
ಇತ್ತೀಚಿನ ಬರಹಗಳು: ಸುಮಾ ವೀಣಾ (ಎಲ್ಲವನ್ನು ಓದಿ)

ಸ್ನೇಹವೆಂದರೆ ಭಾವನೆಗಳು ವಿಹರಿಸುವ ಅನಂತ ಕಡಲು. ಒಮ್ಮೆ ಶಾಂತ! ಮತ್ತೊಮ್ಮೆ ಪ್ರಕ್ಷುಬ್ಧ! ಆದರೂ ಏನಂತೆ ಭಾವಚಿಮ್ಮಿ ಉಕ್ಕುವ, ಭಾವಬಿರಿದು ಇರಿಯುವ ಎಲ್ಲಾ ಬೇಧಗಳನ್ನು ಮೀರಿಸಿ ಪಿಸುಮಾತನ್ನು ಒಡಮೂಡಿಸುವ ಭಾವಭಿತ್ತಿ ಈ ಸ್ನೇಹ.

ನಿಜ ಸ್ನೇಹವೆಂದರೆ ಆಕ್ಷೇಪ, ಅಪೇಕ್ಷೆಗಳಿಲ್ಲದ ಮಧುರಿಮ ಸಂಬಂಧದಲ್ಲಿ ಪರಸ್ಪರರು ಪರಸ್ಪರ ಏಳಿಗೆಗಾಗಿ ಶ್ರಮಿಸುವುದು. ಸ್ನೇಹ ಅರ್ಹತೆ, ಹಣ, ಅಂತಸ್ತು, ಅಧಿಕಾರವಲ್ಲ – ಸಹೃದಯತೆಯ ಹೂರಣ ಮಾತ್ರ.

ಮಹಾಭಾರತದಲ್ಲಿ ಸ್ನೇಹದ ವಿಭಿನ್ನ ಮಾದರಿಗಳನ್ನು ನೋಡಬಹುದು. ಮೊದಲನೆಯದ್ದು ಸಫಲ ಸ್ನೇಹ.

ದುರ್ಯೋಧನ – ಕರ್ಣರ ಗೆಳೆತನ ಸ್ನೇಹದ ಅಪೂರ್ವ ಮಾದರಿಗಳಲ್ಲೊಂದು. ಗೆಳೆಯನೇ ಎಲ್ಲವೂ… ಅವನಿಲ್ಲದಿದ್ದರೆ ನನಗೆ ಏನು ಬೇಕು ಎನ್ನುವ ಮಟ್ಟಿಗೆ ಗಟ್ಟಿಯಾಗಿ ಅವರ ಭಾಂದವ್ಯ ಬೆಸಿಕೊಂಡಿರುತ್ತದೆ. ಆದಿಕವಿ ಪಂಪನ “ವಿಕ್ರಮಾರ್ಜುನ ವಿಜಯ”ದ ನವಮಾಶ್ವಾಸದಲ್ಲಿ ಬರುವ ಒಂದು ಪದ್ಯ:

ಎಂದಿರುವ ಎಂಥ ಮೌಲ್ಯಯುತವಾದ ಮಾತುಗಳು! ಕನ್ನಡ ಸಾಹಿತ್ಯಕ್ಕೆ ಶ್ರೀಮಂತಿಕೆಯನ್ನು ತಂದಿರುವ ಪಂಪನಭಾರತದ ದಿಗ್ದರ್ಶಕ ಪದ್ಯಗಳಲ್ಲಿ ಇದೂ ಒಂದು. ಸ್ನೇಹದ ಮಹತ್ವವನ್ನು ಹೇಳುವ ಈ ರೀತಿಯ ಪದ್ಯ ಸಾರ್ವಕಾಲಿಕವಾಗಿದೆ.

ಕರ್ಣನ ಮತ್ತು ದುರ್ಯೋಧನರ ಸ್ನೇಹದ ಪರಾಕಾಷ್ಠತೆಯನ್ನು ಹೇಳಿ, ಸ್ನೇಹದಲ್ಲಿ ಸಲುಗೆಯಿದ್ದರೂ ಸಾಮಾಜಿಕ ಬಂಧವನ್ನು ಧಾಟದೆ ಇರುವ ಪರಿಯನ್ನು ಇದು ಹೇಳುತ್ತದೆ. ಎಂಥ ಸಂಯಮಿ ದುರ್ಯೋಧನ – ಪಗಟೆಯಾಟದಲ್ಲಿ ಸೋತಾಗ ಪಣಕ್ಕಿಟ್ಟ ಮುತ್ತಿನ ಸರವನ್ನು ಕೊಡಲಾರೆ ಎಂದಾಗ ಕರ್ಣ ಆ ಸರವನ್ನು ಎಳೆಯುವುದು, ಮುತ್ತಿನ ಸರ ಹರಿದು ಹೋಗುವುದು. ಅದೇ ಸಮಯಕ್ಕೆ ದುರ್ಯೋಧನ ಬಂದು, ಎಳ್ಳಷ್ಟು ದ್ರೋಹ ಬಗೆಯದೆ ಬಿದ್ದು ಚೆಲ್ಲಾಡಿರುವ ಮುತ್ತುಗಳನ್ನು ಆಯ್ದು ಕೊಡಲೇ ಎಂದು ಕೇಳುವ ಸ್ನೇಹಕಾತುರ ವ್ಯಕ್ತಿ ದುರ್ಯೋಧನನಾಗುತ್ತಾನೆ.

ಇಂಥ ಸ್ನೇಹಕ್ಕೆ ನಾನು ದ್ರೋಹ ಮಾಡಲಾರೆ ಎಂಬ ಕರ್ಣನ ನಿಲುವು ಅವನ ವ್ಯಕ್ತಿತ್ವದ ಉನ್ನತಿಯನ್ನು ಸಾರುತ್ತದೆ. ಆ ಕರ್ಣ, ದುರ್ಯೋಧನ, ಭಾನುಮತಿ – ಈ ಮೂವರ ಸಂಬಂಧದ ಕುರಿತು ಎಳ್ಳಷ್ಟು ಗೊಂದಲವಿಲ್ಲ; ಅವರು ನಿರ್ಮಲರಾಗಿರುತ್ತಾರೆ. ಸಾಮಾಜಿಕ ಸಂಬಂಧಗಳು ಸ್ಫಟಿಕ ಶುದ್ಧ ಮನೋಭಾವದಿಂದ ಇರಬೇಕು ಎಂಬುದನ್ನು ಪ್ರಸ್ತುತ ಪದ್ಯ ನಿರ್ದೇಶಿಸುತ್ತದೆ:

ನೀನು ಇದ್ದರೆ ಮಾತ್ರ ರಾಜ್ಯ, ಪಟ್ಟ, ಬಿಳಿಯ ಕೊಡೆ ಎಲ್ಲವೂ. ನೀನಿಲ್ಲದ ಮೇಲೆ ಇವೆಲ್ಲಾ ಇದ್ದರೂ ಏನು, ಇಲ್ಲದಿದ್ದರೂ ಏನು?

ಅಂಗರಾಜ್ಯದ ರಾಜನಾಗಿದ್ದ ಕರ್ಣನ ಶವವನ್ನು ನೋಡುತ್ತಾ,

ನನಗಿಂದು ಕರ್ಣನಿಲ್ಲದೆ ಮನಸ್ಸು, ಮನೆ, ಪಾಳಯ, ಭೂಮಿ ಎಲ್ಲವೂ ಶೂನ್ಯವಾಗಿದೆ ಎಂದು ರೋಧಿಸುತ್ತಾನೆ. ಪವಿತ್ರ ಸ್ನೇಹಕ್ಕೆ ಇದೊಂದು ನಿದರ್ಶನ. ಇದನ್ನು ಸಫಲ ಸ್ನೇಹ ಎನ್ನುವುದಾದರೆ, ಇದಕ್ಕೆ ವಿರುದ್ಧವಾಗಿರುವ ವಿಫಲ ಸ್ನೇಹ ದ್ರೋಣ ಮತ್ತು ದ್ರುಪದರ ಸ್ನೇಹದ ಮಾದರಿ.

ದ್ರೋಣ ಮತ್ತು ದ್ರುಪದರು ಗುರುಕುಲದಲ್ಲಿ ಒಳ್ಳೆಯ ಸ್ನೇಹಿತರಾಗಿರುತ್ತಾರೆ. ವಿದ್ಯಾಭ್ಯಾಸ ಮುಗಿದ ಬಳಿಕ ತಮ್ಮ ತಮ್ಮ ಬದುಕಿನ ಹಾದಿ ಹಿಡಿಯುತ್ತಾರೆ. ತೀವ್ರ ಬಡತನ ಬಂದಾಗ ಮಗನಿಗೋಸ್ಕರ ಸ್ನೇಹದ ಸಲುಗೆಯಲ್ಲಿ ದ್ರೋಣನು ದ್ರುಪದನ ಬಳಿ ಸಹಾಯಹಸ್ತ ಚಾಚುತ್ತಾನೆ. ಹಿಂದಿನ ಭರವಸೆಯ ನುಡಿಗಳನ್ನು ನೆನೆಸುತ್ತಾನೆ. ಆದರೆ ಪ್ರತಿಕ್ರಿಯೆ ಹೀನಮಾನವಾಗುತ್ತದೆ.

ಸ್ನೇಹದ ಹೊರತಾಗಿ ಬಡವರು ಮತ್ತು ಶ್ರೀಮಂತರ ನಡುವೆ ಸ್ನೇಹ ಇರಲಾರದು, ಕಾಲಾನಂತರದಲ್ಲಿ ವಸ್ತುಗಳು ಕ್ಷೀಣಿಸುವಂತೆ ಸ್ನೇಹವೂ ಕ್ಷೀಣಿಸುತ್ತದೆ ಎಂದು ದ್ರೋಣನನ್ನು ಅವಮಾನಿಸುತ್ತಾನೆ. ದ್ರೋಣರು ಶಿಷ್ಯರನ್ನು ತಯಾರು ಮಾಡುವುದಾಗಿ ಶಪಥ ಮಾಡುತ್ತಾರೆ. ಇದು ವಿಫಲ ಸ್ನೇಹ, ದ್ವೇಷದ ಹಾದಿ.

ನಿಷ್ಕಲ್ಮಷ ಸ್ನೇಹ – ಕೃಷ್ಣ ಮತ್ತು ಕುಚೇಲರ ಸ್ನೇಹ ಪ್ರಾಪಂಚಿಕ ಸ್ಥಾನಮಾನಗಳನ್ನು ಮೀರಿ ನಿರೀಕ್ಷಾರಹಿತ ಅಂತರಂಗದ ಭಾವ ಬೆಸುಗೆಯದ್ದಾಗಿತ್ತು. ಸಹಾಯ ಕೇಳಲು ಬಂದ ಕುಚೇಲ ಹಿಂತಿರುಗಿದರೂ ಕೃಷ್ಣ ಅವನಿಗೆ ಹೇಳದೆ ಸಹಾಯ ಮಾಡುತ್ತಾನೆ.

ಕೃಷ್ಣಾರ್ಜುನರ ಸ್ನೇಹ – ಸುಫಲ ಸ್ನೇಹದ ಮಾದರಿ. ಬಲರಾಮನ ವಿರುದ್ಧವಿದ್ದಾಗಲೂ ಸುಭದ್ರೆಯೊಂದಿಗೆ ಅರ್ಜುನನಿಗೆ ವಿವಾಹ ಮಾಡಿಸಿ ಭಾವ ಮೈದುನ ಸಂಬಂಧವಾಗಿಸುತ್ತಾನೆ. ಅರ್ಜುನ ಶಸ್ತ್ರ ನ್ಯಾಸ ಮಾಡಿದಾಗ ಕೃಷ್ಣನು ಧರ್ಮ ಬೋಧನೆಯಾಗಿ ಭಗವದ್ಗೀತೆಯ ಉಪದೇಶ ನೀಡುತ್ತಾನೆ. ಈ ಬೋಧನೆ ಸಾವಿರ ವರ್ಷಗಳಾದರೂ ಪ್ರಸ್ತುತವಾಗಿಯೇ ಇದೆ – ಇದು ಸ್ನೇಹದ ಫಲ.

ಇದಕ್ಕೂ ವಿರುದ್ಧವಾಗಿ ವರ್ಗ ಸಂಘರ್ಷದಿಂದ ಹುಟ್ಟಿದ ಸ್ನೇಹದ ವೈಫಲ್ಯ:

ಶುಕ್ರಾಚಾರ್ಯರ ಮಗಳು ದೇವಯಾನಿ ಮತ್ತು ವೃಷಪರ್ವನ ಮಗಳು ಶರ್ಮಿಷ್ಟೆ – ಬಾಲ್ಯದ ಗೆಳತಿಯರು. ಒಮ್ಮೆ ಜಲಕ್ರೀಡೆಯಲ್ಲಿ ಶರ್ಮಿಷ್ಟೆ ದೇವಯಾನಿಯ ಸೀರೆ ತೊಟ್ಟುಕೊಳ್ಳುತ್ತಾಳೆ. ಈ ಕಾರಣಕ್ಕೆ ತೀವ್ರ ವಾಗ್ವಾದ, ಸಂಘರ್ಷ ನಡೆಯುತ್ತದೆ. ಶರ್ಮಿಷ್ಟೆ ದೇವಯಾನಿಯನ್ನು ಭಾವಿಗೆ ದೂಡುತ್ತಾಳೆ. ನಂತರ ದೇವಯಾನಿಯನ್ನು ಯಯಾತಿ ರಕ್ಷಿಸುತ್ತಾನೆ, ಮದುವೆಯಾಗಿ ಕೊಳ್ಳುತ್ತಾನೆ. ಶರ್ಮಿಷ್ಟೆಯ ಮೇಲಿದ್ದ ಕೋಪ ತಣಿಯದೆ, ಅವಳನ್ನು ಸೇವಕಿಯಾಗಿ ಮಾಡುತ್ತಾಳೆ. ಇದು ವರ್ಗಸಂಘರ್ಷದಿಂದ ಒಡೆದ ಸ್ನೇಹದ ಮಾದರಿ.

ಸಫಲ ಸ್ನೇಹದ ಮತ್ತೊಂದು ಮಾದರಿ: ಷಡಕ್ಷರ ಕವಿಯ ‘ರಾಜಶೇಖರ ವಿಳಾಸ’. ಸತ್ಯೇಂದ್ರಚೋಳನ ಮಗ ರಾಜಶೇಖರ ಮತ್ತು ಮಿತವಚನ – ದೇಹವೆರಡು, ಪ್ರಾಣ ಒಂದು. ಬೇಟೆ ಹಿಂದಿರುಗುವಾಗ ಶಂಕರ ಎಂಬ ಬಾಲಕನ ಪ್ರಾಣ ಕಳೆದುಹೋಗುವುದು. ತಪ್ಪು ಅರಿತ ರಾಜಶೇಖರ ಮತ್ತು ಮಿತವಚನ ಆಧ್ಯಾತ್ಮಕ್ಕೆ ಶರಣಾಗುತ್ತಾರೆ.

ಜಾನಪದ ಕಥನ ಗೀತೆ ‘ಕೆರೆಗೆಹಾರ’ – ಭಾಗೀರಥಿ ತನ್ನ ಗೆಳತಿಗೆ ಕೆರೆಗೆ ಹಾರವಾಗುತ್ತಿರುವ ವಿಷಯವನ್ನು ಹೇಳುವುದು. ದಂಡಿನಲ್ಲಿದ್ದ ಮಾದೇವರಾಯ ತನ್ನ ಮಡದಿಯ ಬಗ್ಗೆ ಗೆಳತಿಯಿಂದ ಮಾಹಿತಿ ಪಡೆಯುತ್ತಾನೆ.

ಸಮಾರೋಪ:

ಕಾಲ ಎಷ್ಟೇ ಸರಿದರೂ “ಸ್ನೇಹ” ಎಂಬ ಪರಿಭಾಷೆ ಒಂದೇ. ಎಲ್ಲಾ ಕಾಲದಲ್ಲೂ ಸ್ನೇಹವಿತ್ತು, ಈಗಲೂ ಇದೆ. ಆದರೆ ಇಂದಿನ ಸ್ನೇಹದ ವ್ಯಾಪ್ತಿ ಅಪೇಕ್ಷೆ ಮತ್ತು ಆಕ್ಷೇಪಗಳಿಗೆ ಸೀಮಿತವಾಗಿದೆ.

ಸ್ನೇಹವೆಂದರೆ ತಪ್ಪುಗಳಾಗಿದೆಯೆಂದು ಖಂಡನೆಯಿರಬೇಕು, ಓಲೈಕೆ ಅಲ್ಲ. ಈರ್ಷೆ, ಹಗೆ, ಅಧಿಕಾರ, ದ್ರೋಹ, ಆಡಂಬರ ಅಲ್ಲ. ಸ್ನೇಹವೆಂದರೆ ಪಿತೂರಿಯಲ್ಲ. ಬಳಸಿ ಬಿಸಾಡುವ ಸರಕಲ್ಲ. ಬಡಿದಾಟವಿಲ್ಲದ ಒಡನಾಟ, ಮಾತಿಗೂ ಮೀರಿದ ಸಹೋದರ ಪ್ರೇಮವನ್ನು ಮೀರಿದ ಅನುಬಂಧ.

ಗೆಳೆತನ ಸ್ವಾರ್ಥ ಮತ್ತು ಹಿತಾಸಕ್ತಿಯಿಂದ ಹೊರತಾಗಿರಬೇಕು.
ಸ್ನೇಹವೆಂದರೆ ಭಾವಬಂಧದ ಕಡಲು, ಆತ್ಮೀಯತೆಯ ಹೊನಲು.

ಸ್ನೇಹ ದಿನದ ಶುಭಾಶಯಗಳು.
ಸುಮಾ ವೀಣಾ