- ಕ್ಯಾಮೆರಾ ಮನ್.. - ಡಿಸಂಬರ್ 31, 2021
- ಯುದ್ಧ ಗೆದ್ದ ನಂತರ - ಜುಲೈ 20, 2021
- ಪುಸ್ತಕ ದಿನ ಮತ್ತು ಚೆಕ್ ರೋಲ್ ಸಾಹಿತ್ಯ - ಏಪ್ರಿಲ್ 23, 2021
ಹಾಡು ಬರೆಯುವವಳನ್ನು ಪ್ರೇಮಿಸುವುದೆಂದರೆ
ಏಣಿಯಾಗಿಸಿದಂತೆ ಕಡಿದು
ಹೂ ಬಿಡುವ ಕೊಂಬೆಯನ್ನು.
ನಂಬಬಹುದೇ ಕಿಂಚಿತ್ತದರೂ ಅವಳನ್ನು
ಮಾತು-ಮಳೆಯಲ್ಲೇ ತೋಯಿಸುವಳು
ಹಿಡಿಯದೆ ಕೊಡೆಯನ್ನು.
ಉರಿಬಿಸಿಲ ಹಗಲೊಳಗೆ ಹರಿಸುವಳು
ನೆರೆ ಬಂದ ನದಿ;
ಉಪಮೆ ಪ್ರತಿಮೆಗಳಿಗಾಗಿ ಅಲೆಯುವಳು
ಸುತ್ತೆಂಟು ಬದಿ.
ಅವಳೆರಡು ಎವೆ ನಡುವೆ ಉಪ್ಪು ಕಡಲೊಂದಿದೆ;
ತುಟಿಯ ಡೊಂಕಿನಲೊಂದು ಇನಿದಾದ ಹಾಡು.
ಪ್ರೀತಿ ಕೌದಿಯ ಹೊದ್ದು ಮಲಗುವಳು ಮೈತುಂಬ;
ಅದರ ಒಡಲೊಳಗುಂಟು ಜಗದೆಲ್ಲ ಬಿಂಬ.
ಕೋಣೆಯ ಕಿಟಿಕಿಯಲ್ಲಿ ತೂಗು ಹಾಕಿರುವಳು
ಒದ್ದೆ ನಗುವನ್ನು;
ಚುಕ್ಕಿಯಾಗಿಸುವ ವಿದ್ಯೆ ಕರಗತವಾಗಿದೆ ಅವಳಿಗೆ ಕಣ್ಣಹನಿಯನ್ನು.
ಹೊಳಪಿಲ್ಲವೆನ್ನುವಳು ಇಳಿಸಂಜೆಗೆ;
ಕಡುಗಪ್ಪು ಎನ್ನುವಳು ಇರುಳು;
ಸಿಟ್ಟಿನಲ್ಲಿ ‘ಹುಚ್ಚೇ ನಿನಗೆ?’ ಎಂದರೆ
ಹ್ಞೂಗುಟ್ಟಿ ನಗುವಳು.
‘ಸಾಕಾಯಿತು ನಿನ್ನ ಸಹವಾಸ’ ಎಂದರೆ ನರನಾಡಿಯೊಳಗೆ ನೆರೆ ಉಕ್ಕುವಂತೆ ಅಪ್ಪುವ
ಈ ಇವಳಿಗೆ ನಾ ದಾಸಾನುದಾಸ.
ಕೇಳು ಗೆಳೆಯನೇ,
ಕವಿತೆ ಬರೆಯುವಳನ್ನು ಪ್ರೇಮಿಸುವುದು ಎಂದರೆ
ಹೊತ್ತು ನಡೆದಂತೆ ತೆನೆ ಬಲಿತ ಪೈರ ಹೊರೆ
ಕಾಳುದುರದಂತೆ.
ಮಲಯಾಳಂ ಮೂಲ: ಆರ್.ಸಂಗೀತ
ಭಾವಾನುವಾದ - ನಂದಿನಿ ವಿಶ್ವನಾಥ ಹೆದ್ದುರ್ಗ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ