ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕ್ಯಾಮೆರಾ ಮನ್..

ನಂದಿನಿ ಹೆದ್ದುರ್ಗ
ಇತ್ತೀಚಿನ ಬರಹಗಳು: ನಂದಿನಿ ಹೆದ್ದುರ್ಗ (ಎಲ್ಲವನ್ನು ಓದಿ)

ನಡುರಾತ್ರಿಯಾದರೂ ನೆಪಮಾತ್ರಕ್ಕೂ ರೆಪ್ಪೆ ಒಂದಕ್ಕೊಂದು ಸೇರದೆ ಮುಷ್ಕರ ಹೂಡಿದ್ದವು.ಒಂದಷ್ಟು ಕಣ್ಣೀರು ದಿಂಬು ತೋಯಿಸಿತ್ತು.ನೋವು ಕಣ್ಣೀರಾಗಿ ಹರಿದ ಮೇಲೆ ಮನಸು ನಿರಾಳವಾಗಬಹುದು ಅಂದುಕೊಂಡಿದ್ದ ಚಾರುವಿಗೆ ಮತ್ತಷ್ಟು ನೆನಪುಗಳು ಕಾಡಿ ಸಣ್ಣ ವಿಷಯಕ್ಕೆ ಅತಿರೇಕ ಮಾಡಿಕೊಳ್ತಿದ್ದೀನಾ ಅನಿಸ್ತು.ಅಟ್ಟದ ಮೇಲಿನ‌ ಇಲಿ ಸಂಸಾರ ನಡುರಾತ್ರಿಯಲ್ಲಿ ಸರಸವಾಡೋ ಸದ್ದು ರಾತ್ರಿಯ ನೀರವತೆಗೆ ಇನ್ನಷ್ಟು ಜೋರುಕೇಳಿಸಿ ಇಡೀಮನೆಯಲ್ಲಿ ಒಂಟಿಯಾಗಿರುವ ಭಯ ಒಮ್ಮೆಗೆ ಕಾಡಿ ಕಾಲು ತಣ್ಣಗಾದ ಹಾಗೆ.
ಇಲಿಯೆಂದ ಕೂಡಲೇ ಮತ್ತೆ ಅವನದ್ದೇ ನೆನಪು.

ಇಲಿ ಕಂಡರೆ ಸಾಕು ,ಪುಟುಪುಟು ಓಡಾಡುತ್ತ ಅದೆಷ್ಟು ಸಂಭ್ರಮಿಸುತ್ತಿದ್ದ.ಅವರಪ್ಪನ ಹತ್ತಿರ ಚೂಚುಪೂಚು ಅಂತೆಲ್ಲಾ ಗೊತ್ತಿಲ್ಲದ ಚೈನಾ ಭಾಷೆಯಲ್ಲಿ ಮಾತಾಡಿ ಇಲಿಯನ್ನು ಜೀವಂತ ಹಿಡಿಸಿ ಬಕೆಟ್ಟಿನೊಳಗಿಟ್ಟು ಅದು ಅತ್ತಿಂದ್ದಿತ್ತ ಆಡುವಾಗ ಅದೆಷ್ಟು ಖುಷಿ ಅವನಿಗೆ.ಪುಟ್ಟ ಕೈಗಳಲಿ ಅವನು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದರೆ ಚಾರುವಿಗೋ ‘ಅಮ್ಮು’ ಸಾಕ್ಷತ್ ಶ್ರೀ ಕೃಷ್ಣ ನ ಪ್ರತಿರೂಪ ಅನಿಸ್ತಿತ್ತು.ಆಗಷ್ಟೇ ಕೆಲಸಕ್ಕೆ ಸೇರಿದ ಅಣ್ಣ ಕೊಡಿಸಿದ ನೋಕಿಯಾ ಕ್ಯಾಮೆರಾ ದಲ್ಲಿ ಅಮ್ಮುವಿನ ಫೋಟೋ ತೆಗೆದದ್ದೇ ತೆಗೆದದ್ದು.
ಹೊಕ್ಕುಳುಬಳ್ಳಿ ಅಂಟಿದಾಗಿನಿಂದ ತಪ್ಪು ಹೆಜ್ಜೆ ಇಡುವವರೆಗೆ ಎಲ್ಲವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಜಿಪುಣ ಗಂಡನಿಗೆ ದಮ್ಮಯ್ಯ ಬೇಡಿ ಅದನ್ನು ವಾಷ್ ಮಾಡಿಸಿ’ನೋಡುನೋಡು,ನನ್ ಚಿನ್ನಾರಿ ಎಷ್ಟ್ ಚನಾಗಿದೆ’ಅಂತಲೋ,’ಅಮು ನಿನಗಿಂತ ಇಲಿನೇ ಚಂದ ಕಾಣ್ತಿದೆ ‘ಅಂತಲೋ ಅವನ ಮುದ್ದಿಸಿದಾಗ ಆಗ ತಾನೇ ಹಲ್ಲುಬಿದ್ದು ಅವಲಕ್ಷಣವಾಗಿದ್ದ ಅಮ್ಮು ಕಣ್ಣರಳಿಸಿ ನಗುತ್ತಿದ್ದದ್ದು ಚಾರುವಿಗೆ ಕೋಟಿ ಕೊಟ್ಟಷ್ಟು ಖುಷಿ ನೀಡ್ತಿತ್ತು.

ಅತ್ತೆ,ಮಾವ, ನಾದಿನಿ,ವಾರಗಿತ್ತಿ,ಮೈದುನ,ಡಝನುಗಟ್ಟಲೇ ಕೊಟ್ಟಿಗೆ ಮನೆಕೆಲಸದವರು,ನಿತ್ಯವೂ ತಪ್ಪದ ಅತಿಥಿಗಳು ಇವರೆಲ್ಲರ ನಡುವೆಯೂ ಅಮ್ಮುವಿನ ಎಳೆತನವನ್ನು,ತನ್ನ ಮಾತೃತ್ವವನ್ನು ಅದೆಷ್ಟು ಹಿತವಾಗಿ ,ಬೆಚ್ಚಗೆ ಅನುಭವಿಸಿದ್ದಳು ಚಾರು.ಅವಳ ಪೋಟೋ ಹುಚ್ಚಿಗೆ ಅತ್ತೆ ಒಮ್ಮೆ ಥರಾಮಾರಿ ಬೈದರೂ ಬಿಡದೆ ಕದ್ದುಮುಚ್ಚಿ ಕಂದನ ಫೋಟೋ ತೆಗೆದು ಕುಂಕುಮಕ್ಕೆ ಸಿಕ್ಕಿದ ಹಣದಲ್ಲಿ ವಾಷ್ ಮಾಡಿಸುವ, ರೀಲುಕೊಳ್ಳುವ ಸಂಭ್ರಮ ಚಾರುವಿನದ್ದು.

ಅಮ್ಮು..ಅಮನ್, ಬೆಳೆದು ದೊಡ್ಡವನಾಗಿದ್ದು ಅದ್ಯಾವಗ ಅನ್ನೋದೆ ಗೊತ್ತಾಗದಷ್ಟು ಕಾಲದ ಹರಿವು ವೇಗವಾಗಿತ್ತು.
ಮೊನ್ನೆಮೊನ್ನೆಯಷ್ಟೆ ತಪ್ಪು ಹೆಜ್ಜೆ ಇಟ್ಟು ನಕ್ಕವ ಕೆಲಸ ಸಿಕ್ಕ ಖುಷಿಯನ್ನು ಹೇಳಿದಾಗ
‘ಒಂದು ಫೋಟೊ ತೆಗೆದಿಡೋ ಅಮ್ಮು,ಕೆಲಸ ಸಿಕ್ಕಾಗ ಖುಷಿಪಟ್ಟಿದ್ದು,ಮೊದಲ ದಿನದ ಕೆಲಸದ್ದು’
ಅಂದಾಗ “ಅಮ್ಮಾ..ನೀನಂತೂ ಬದಲಾಗಲ್ಲ ಬಿಡು.!!” ಅಂತ ನಕ್ಕಿದ್ದ ಮಗ.

”ಅಮ್ಮ.,ಮೊದಲ ಸಂಬಳದಲ್ಲಿ ಒಂದು ಒಳ್ಳೆಯ ಕ್ಯಾಮೆರಾ ಕೊಂಡುಕೊಂಡೆ.’ಅಂತ ಅಮ್ಮು ಹೇಳ್ದಾಗ ಅವರಪ್ಪ ಮೂಗು‌ ಮುರಿದರೂ ಚಾರುಗೆ ಮಗ ತನ್ನಂತೆ ಫೋಟೋ ಅಮಲಿನವ ಅನಿಸಿ “ವಾವ್’ ಅಂತ ಸಂಭ್ರಮಿಸಿದ್ದಳು.

‘ನಾಡಿದ್ದು ದೇವಸ್ಥಾನದ ಕಾರ್ತೀಕ ಪೂಜೆ ಇದೆಯಲ್ಲಾ..ಆಗ ಬರ್ತೀನಮ್ಮಾ ಊರಿಗೆ.ಎಲ್ರೂ ಬರ್ತಿದಾರೆ..ಹಂಗೆ ಕ್ಯಾಮೆರಾನೂ ತರ್ತೀನಿ’ ಅಂತ ಅಮ್ಮೂಫೋನ್ ಮಾಡಿದಾಗ ಚಾರು ಆಸ್ಥೆಯಿಂದ ಎದುರು ನೋಡಿದ್ದು ಕ್ಯಾಮೆರಾನಾ,ಮಗನನ್ನಾ ಅನ್ನೋದು ಅವಳಿಗೂ ತಿಳಿಲೇ ಇಲ್ಲ.

ಅಮ್ಮು ಬಂದವನೇ ಮೊದಲು ಹೊಸ ಕ್ಯಾಮೆರಾದಲ್ಲಿ ತೆಗೆದ ಬಗೆಬಗೆಯ ಫೋಟೊಗಳನ್ನು ತೋರಿಸ್ತಾ ‘ನೋಡಮ್ಮಾ,ಎಷ್ಟು ಚಂದ ಬರ್ತದೆ ಇದರಲ್ಲಿ’ಅಂದ. ಚಾರೂ ಸಹ ಖುಷಿಯಿಂದಲೇ ನೋಡಿದರೂ, ಮಗ ಒಮ್ಮೆಯಾದರೂ ‘ಅಮ್ಮ,ಈ ಕಡೆ ತಿರುಗು,ಚೂರು ನಗಾಡು’ಅಂತ ಹೇಳ್ತಾನೆ ಅಂತ ಕಾಯ್ದಿದ್ದೆ ಬಂತು.ಮನೆಗೆ ಬಂದವನೇ ಮೊದಲು ನನ್ನ ಫೋಟೋ ತೆಗೀತಾನೇ ಅಂತಲೇ ಅಂದುಕೊಂಡಿದ್ದ ಚಾರು ಒಮ್ಮೆಯಾದರೂ ಅವ ಅಮ್ಮನ ಫೋಟೋ ತೆಗೆಯಲು ಮನಸ್ಸು ಮಾಡದಾಗ ಯಾಕೋ ‌ಪಿಚ್ಚೆನಿಸಿತ್ತು .

ಛೆ.,ನನ್ನ ಅಮ್ಮು,ಹಾಗೆಲ್ಲಾ ಸಣ್ಣದಾಗಿ ಯೋಚಿಸಬಾರದು ಅಂದುಕೊಂಡು ಸಂಜೆ ದೇವಸ್ಥಾನದ ಆರತಿಗೆ ಹೊರಡುವಾಗ ತುಸು ಶೃದ್ಧೆಯಿಂದ ಅಲಂಕರಿಸಿಕೊಂಡು
ಮಗನ ಎದುರಿಗೆ ಬಂದು ಕೇಳಿದಳು ಚಾರು.’ಅಮ್ಮು,ನಂದೊಂದ್ ನಾಲ್ಕು ಫೋಟೋ ತೆಗೆಯೋ.ಪದ್ಯಗಿದ್ಯ ಕಳ್ಸೋಕೆ ಬೇಕಾಗುತ್ತೆ’ಅಂದದ್ದಕ್ಕೆ
” ಓ,ಏನಮ್ಮಾ ನೀನು,ಅರ್ಧ ವಯಸ್ಸಾಯ್ತು.ಇನ್ನೂ ಫೋಟೋ ಹುಚ್ಚು ಬಿಟ್ಟಿಲ್ಲ ನಿಂಗೆ..ಸರಿ ಬಾ ಇಲ್ಲಿ..ಇಲ್ಲಿ ನಿಂತ್ಕೋ’ಅನ್ನುತ್ತಾ ರೆಡೀನೂ ಹೇಳ್ದೆ ಚಕಚಕನೆ ನಾಕಾರು ಫೋಟೋ ಕ್ಲಿಕ್ಕಿಸಿ ನೋಡು ..ಸೂಪರ್…ಎಂದ.
ಯಾಕೋ ಆ ಫೋಟೋ ದಲ್ಲಿ ವಯಸಿಗಿಂತ ದೊಡ್ಡವಳಾಗಿ ಕಾಣ್ತಿದೀನಿ ಅನಿಸಿ
ಅಮ್ಮು ಚನಾಗಿಲ್ಲ ಕಣೋ,ಹೊರಗಡೆ ತೆಗಿವಂತೆ ಅಂದವಳೆ ಆರತಿಗೆ ತಡವಾಯ್ತೆಂದು ದೇವಸ್ಥಾನಕ್ಕೆ ಓಡಿದಳು.
ಪ್ರದಕ್ಷಿಣೆ, ಆರತಿ,ನೈವೇದ್ಯ ಮುಗಿದು ಹೊರಬಂದಾಗ ಅಮನ್ ಊರಿನ ಹುಡುಗಿಯರ ಗುಂಪು ಕಟ್ಟಿಕೊಂಡು ಫೋಟೋ ಕ್ಲಿಕ್ಕಿಸುತ್ತಿದ್ದ..’ಹಾ,ಚೂರು ಹಂಗೆ ತಿರುಗು,ಚೂರು ಕೆಳಗೆ ನೋಡು..ಕೈ ಹೀಗೆ ಇಡು.ಕತ್ತು ತುಸು ಈ ಬದಿಗೆ ಇರಲಿ..ಸ್ .ಕರೆಕ್ಟ್..’
‘ಕೂದಲು ಚೂರು ಸರಿಮಾಡ್ಕೋ ‘ಅಂತ ಅಣತಿ ಮಾಡಿ ಕ್ಲಿಕ್ಕಿಸುತ್ತಿದ್ದ ಫೋಟೊಗಳ ಹೋಗಿ ನೋಡಿದಳು ಚಾರು.
ಒಂದಕ್ಕಿಂತ ಒಂದು ಚಂದ..ಹೊರಾಂಗಣ, ದೇವಸ್ಥಾನದ ಹಿನ್ನೆಲೆ ಎಲ್ಲವೂ ಚಂದವಿತ್ತು.
ಅಳುಕುತ್ತಲೇ ‘ಅಮ್ಮು ಇಲ್ಲೆರಡು ಫೋಟೋ ತೆಗಿಯೋ ನಂದು ‘ಅಂದಳು ಚಾರು.
‘ಥತ್,ಅಮ್ಮ…ಸಣ್ಣ ‌ಮಕ್ಳು ಥರ ಆಡಬೇಡ..ಅವಾಗ್ಲೆ ತೆಗಿದಿಲ್ವಾ.ಇರಿಟೇಟ್ ಮಾಡ್ಬಾರದು ಹೀಗೆ..ಪದೇಪದೇ..’ಅಂದವನೇ ‘ಈ ಕಡೆ ತಿರುಗೇ ‘ಅಂತ ಅಲ್ಲಿ ಕ್ಲಿಕ್ಕಿಸೋಕೆ ಶುರು ಮಾಡ್ದ.

‘ಓ,ಆಂಟಿ…ಬಾರಿ ಬಾರಿ ಫೋಟೋ ಹುಚ್ಚಂತೆ ನಿಮಗೆ’ಅಂತ ಆ ಬಿಳಿಜಿರಳೆ ರೇಗಿಸಿದಾಗ ಬಲವಂತದ ನಗುನಕ್ಕಳು ಚಾರು.
ಆ ಹುಡುಗಿಯರ ಗುಂಪಿನಲ್ಲಿ ಅಮ್ಮೂ ಏನೋ ಮೆಲ್ಲಗೆ ಹೇಳಿದಾಗ ಅವರೆಲ್ಲ ‘ಹೋ’ ಅಂತ ನಕ್ಕಿದ್ದು ಕೇಳಿ ಯಾಕೋ ಚಾರುವಿಗೆ ಅಲ್ಲಿ ನಿಲ್ಲಲಿಕ್ಕೆ ಕಷ್ಟವಾಯ್ತು.
‘ಅಮ್ಮ,ತಡ ಆಗುತ್ತೆ ನಾ ಬರೋದು ನೀ ಹೋಗಿರು ‘
ಅಮ್ಮು ಅಂದಿದ್ದು ಕೇಳಿಸ್ಕೊಂಡು ಮನೆಗೆ ಬಂದವಳೆ ಚಾರು ಒಮ್ಮೆ ಸೋತವಳಂತೆ ಕನ್ನಡಿ ನೋಡಿಕೊಂಡಳು.
ಕಾಲು ಥರಥರನಡುಗುತ್ತಿದ್ದವು.
ಇನ್ನೇನು ಧುಮ್ಮಿಕ್ಕಲು ಸಿದ್ಧವಾದ ಕಂಬನಿ.

ಅಮ್ಮೂ,ನೆನಪಿಲ್ವಾ ನಿಂಗೆ.?
ಮದುವೆಗೆಂತಾ ನಾನು ತಯಾರಗಿದ್ದಾಗ ನೀ ನಿನ್ನ ಪುಟಾಣಿ ಬೆರಳಲ್ಲಿ ನನ್ನ ಹಠದಲ್ಲಿ ಕರಕೊಂಡು ಬಂದು ಅಮ್ಮಾ,ನೋಡು ನಿನ್ನ ಥರಾನೇ ಇದೆ ಅಂತ ಗೋಡೆಲಿರೋ ಲಕ್ಷ್ಮಿ ಫೋಟೋ ತೋರಿಸಿದ್ದು.,
‘ಮೋಸ್ಟ್ ಬ್ಯೂಟಿಫುಲ್ ಲೇಡಿ ಇನ್ ಹರ್ ಟ್ವೆಂಟೀಸ್’ ಅಂತ ಜನ ಈಗಲೂ ನಿನ್ನೆದುರಿಗೇ ಹೇಳೋದು.
ಕಾಲದ ಮಹಿಮೆ ಅಮ್ಮೂ ,ಎಲ್ರೂ ಚೂರು ಫೇಡ್ ಆಗ್ತಾರೆ.ಯಾಕೆ ಹೀಗೆ ಮಾಡ್ತೀ ಮಗನೇ.?
ಯಾರ್ ಹತ್ರ ಹೇಳ್ಲಿ ಇದನ್ನೆಲ್ಲಾ.?
ಯಾಕೋ ಬಿಕ್ಕಿಬಿಕ್ಕಿ ಅಳಬೇಕು ಅನಿಸ್ತು ಚಾರುವಿಗೆ.
.ಹಾಗೆ ಹಾಸಿಗೆಯಲಿ ಕುಸಿದಳು.
ಅಸಡ್ಡಾಳ ಅಪ್ಪನ ಹೊರತಾಗಿ ತನ್ನ ‌ಕಂದನಿಗೆ ಏನೂ ಕಡಿಮೆಯಾಗಬಾರದೆಂದು ಮುತುವರ್ಜಿ ಮಾಡಿದ ನನ್ನ ಅಮ್ಮುವಾ ಇವನು..?
ನನ್ನ ಸಣ್ಣ ಅಸೆ ಈಡೇರಿಸುವುದು ಇವನಿಗೆ ಇಷ್ಟೂ ಬೇಕಿಲ್ಲವಾಯಿತಾ..?
ನನ್ನ ಫೋಟೋ ಹುಚ್ಚು ತಿಳಿಯದವನೇನಲ್ಲ ಅಮ್ಮು.
ಹೊಸ ಫೋನು ಕೊಳ್ಳುವಾಗ ಕ್ಯಾಮೆರಾ ಕುರಿತೇ ವಿಚಾರಿಸ್ತಿದ್ದದ್ದು ಅವನಿಗೂ ಗೊತ್ತು…
ಚಕಚಕನೇ ಅವ ಕ್ಲಿಕ್ಕಿಸಿದ ಫೋಟೋ ಗಳಲ್ಲಿ ಅಮ್ಮ ವಯಸಿಗಿಂತ ದೊಡ್ಡವಳಾಗಿ ಕಾಣ್ತಿದ್ದಾಳೆ ಅಂತ ಅವನಿಗೂ ಗೊತ್ತು.
ಸಾಕ್ ಬಿಡಮ್ಮಾ.ಇನ್ನೂ ಎಷ್ಟ್ ದಿನ ಹುಡುಗಿ ಥರಾನೇ ಇರಬೇಕು ನೀನು.,ಅಂದಿದ್ದು ನೆನಪಾಗಿ ಯಾಕೋ ಯಾವುದೂ ಸರಿ ಇಲ್ಲ ಅನಿಸೋಕೆ ಶುರುವಾಯ್ತು ಚಾರುವಿಗೆ.

ಛೆಛೇ..ಇಷ್ಟೆಲ್ಲಾ ಯೋಚಿಸೋ ಅಗತ್ಯವಿದೆಯಾ?
ಸಣ್ಣ ವಿಷಯ ಇದು.ಮೆನೋಫಾಸಿನ ಟೈಮಿಗೆ ಹೀಗೇ ಸಣ್ಣಸಣ್ಣ್ ವಿಷಯಕ್ಕೆ ನೋವಾಗುತ್ತೆ ಅಂತಾರೆ.
ಆದರೆ ಮನಸನ್ನು ಹಾಗೆ ಹರಿಯಗೊಡಬಾರದು.
ಅಂದುಕೊಳ್ತಾ ಮಲಗಲೆತ್ನಿಸಿದಾಗ ನಡುರಾತ್ರಿ ಮೀರಿತ್ತು.

ಮಾರನೇ ಬೆಳಿಗ್ಗೆ ಏಳೂವರೆಯಲ್ಲಿ ಕೆಲಸದ ಗಡಿಬಿಡಿಯಲ್ಲಿರುವಾಗ ಹೊರಗೆ ಯಾರೋ ‘ಆಂಟೀ’ ಅಂದದ್ದು ಕೇಳಿ ಇಷ್ಟೊತ್ತಿಗೆ ಯಾರಪ್ಪ ಅದು ಅಂದುಕೊಂಡು ಹೊರಬಂದವಳಿಗೆ ಅಚ್ಚರಿ.!
ಸಂಭ್ರಮದಿಂದ
“ಸಮು..!!
ಯಾವಾಗ ಬಂದ್ಯೋ,ಬಾ ಒಳಗೆ,.ಹೇಗಿದ್ದೀಯಾ,ಹೇಗಿದೆ ಹೊಸ ಕೆಲಸ?ಹಾಬೀಸ್?ಅಮ್ಮ ಹೇಗಿದಾಳೋ.?” ಅಂತ ಒಂದೇ ಉಸಿರಿಗೆ ಕೇಳಿದ್ದನ್ನ ನೋಡಿ ಸಮಸ್ತ್ ‘ಇರಿ ಇರಿ ಇರಿ.. ಆಂಟೀ..ಮೊನ್ನೆ ತಾನೇ ಊರಿಗೆ ಬಂದೆ..ಅಮನ್ ಬಂದಿದಾನೆ ಅಂತ ಗೊತ್ತಾಯಿತು..ಮಾತಾಡಿಸಿಕೊಂಡು ಹೋಗೋಣಾ ಅಂತ ಬಂದೆ..ಕೆಲಸ ಆಸೆಮ್..
ಅಮ್ಮನೂ ಚೆನಾಗಿದಾಳೆ.ಹಾಬೀ ಅಂತೂ ಫುಲ್ ಜೋಷ್ ‘ಅಂತ ಕಣ್ಣು ಮಿಟುಕಿಸಿದಾಗ ತಲೆಗೆ ಮೊಟಕಿದಳು ಚಾರು.

ಸಮಸ್ತ್…
ಮಗನ ಗೆಳೆಯ, ದೂರದ ಸಂಬಂಧಿ, ಚಾರೂವೂ,ಅವನಮ್ಮನೂ ಗೆಳತಿಯರು,ಕಷ್ಟದಲ್ಲಿ ಓದಿ ಮುಂದೆ ಬಂದವ.ಫೋಟೋಗ್ರಫಿ ಹುಚ್ಚು. ದುಡ್ಡು ಕೂಡಿಸಿ ಕ್ಯಾಮೆರಾ ಕೊಳ್ಳಬೇಕೆಂದಾಗ ತುಸುವೇ ಕಡಿಮೆ ಬಂದ ಹಣವನ್ನು ಭರಿಸಿದ್ದಳು ಚಾರು.ಪ್ರೀತಿ ,ಕೃತಜ್ಞತೆ ಅವನಿಗೆ..

‘ಆಂಟಿ.ಕಾಫಿ‌ ಮಾಡ್ತಿರಿ.ಕಾರಲ್ಲಿ ಕ್ಯಾಮೆರಾ ಇದೆ ತರ್ತೀನಿ.’ಅಂತ ಹೊರಹೋದವ ಕತ್ತಿಗೆ ಕ್ಯಾಮೆರಾ ತೂಗಿಸಿಕೊಂಡು ಅಡುಗೆ ಮನೆಗೆ ಬಂದವನೇ’ಎಲ್ಲಿ ಆಂಟಿ..ಈ ಕಡೆ ತಿರುಗಿ .’ಅಂತ ‌ಕ್ಲಿಕ್ಕಿಸಿ ಐಡಿಯಲ್ ಹೋಮ್ ಮೇಕರ್ ಅಂತ ಹೆಸರಿಡಬಹುದಾದ ಎವರ್ ಬೆಸ್ಟ್ ಫೋಟೊ ಇದು ನೋಡಿ ಅಂತ ತೋರಿಸ್ದಾ.
‘ಥು,ಸುಮ್ನಿರೋ’ಅಂತ ಬಾಯಿ ಮಾತಿಗೆ ‌ಅಂದರೂ ಇಷ್ಟು ಚಂದವಿದೀನಾ ನಾನು ಅಂತ ಒಳಗೊಳಗೆ ಖುಷಿ ಚಾರುವಿಗೆ.

‘ಆಂಟಿ,ಕಾಫಿ ಕುಡೀತಾ ಅಮ್ಮೂಗೆ ಫೋನ್ ಮಾಡ್ತೀನಿ..ನೀವು ಅಷ್ಟರಲ್ಲಿ ಸಿಂಪಲ್ಲಾಗಿ ರೆಡಿಯಾಗಿ .ಫೋಟೋ ಶೂಟ್ ಮಾಡೋಣಾ.ಓಕೆ.’ಅಂದವನೇ ಕಾಫಿ ಕುಡಿಯುತ್ತಾ ಹೊರನೆಡೆದ.
ಸರಳವಾಗಿ ತಯಾರಾಗಿ ರೆಡಿ ಸಮ್ಮು ಅಂದಾಗ ‘ವಾವ್…ಆಂಟಿ…!!ಬ್ಯೂಟಿಫುಲ್.. !!ಅಲ್ಲೇ ಬಾಗಿಲಿಂದ ಆಚೆ ಬರೋ ಹಾಗೆ ಇರಿ..ಹಾ..ಫರ್ಪೆಕ್ಟ್..!ಇಲ್ಲಿಬನ್ನೀ…ಆ ಕಡೆ ನೋಡಿ..ಕತ್ತು ತುಸು ಕೆಳಗಿರಲು…ಇನ್ನೊಂಚೂರು ನಗಿ ಆಂಟಿ…ಇದೆಂತದ್ದು ಹೀಗೆ…ಅಂಕಲ್ ಜೊತೆಗೆ ಕೋಪಾನಾ.ಹಾ..ಹಾ….?’ಅಂತ ಜೋರು ದನಿಯಲ್ಲಿ ನಗುತ್ತಾ ,ಕ್ಲಿಕ್ಕಿಸಿ ತೆಗೆದ ಫೋಟೊಗಳನ್ನೆಲ್ಲಾ ತೋರಿಸ್ತಾ ಇರೋವಾಗಲೇ ಅಮ್ಮು ಒಳಬಂದ.

.”ಓಯ್್…!!”ಅಂತ ಒಬ್ಬರಿಗೊಬ್ಬರು ಹಗ್ಗಿಸಿಕೊಂಡು,ವಿಚಾರಿಸಿಕೊಂಡು ಮಾತಾಡ್ತಾ’ಇರೋ..ಫ್ರೆಷ್ ಆಗಿ ಬರ್ತೀನಿ..’ಅಂತ ಹೊರಟವನಿಗೆ , ‘ಅವನು ಫ್ರೆಷ್ಅಪ್ ಆಗಿ ಬರೋವರೆಗೂ ಮತ್ತೊಂದಷ್ಟು ಫೋಟೊ ಶೂಟ್ ಆಂಟಿ.ಈಗ ಹೊರಗಡೆ,,ಗಾರ್ಡನ್ನಲ್ಲಿ..’ ಅಂತ ಸಮ್ಮು ಆಂದದ್ದು ‌ಕೇಳಿ ಅಲ್ಲೇ‌ ನಿಂತ.

ಸಮ್ಮು ಖುಷಿಖುಷಿಯಾಗಿ ಫೋಟೊ ತೆಗೀತಾ ,ತೆಗೆದದ್ದನ್ನ ತೋರಿಸ್ತಾ ,ಅವರಮ್ಮನ ಫೋಟೋಗಳನ್ನು ತೋರಿಸ್ತಾ ಇರುವಾಗ ಕಿರುಗಣ್ಣಲ್ಲಿ ಚಾರು ಅಮ್ಮೂವಿನ ಕಸಿವಿಸಿಯನ್ನ ಗಮನಿಸಿದಳು.’ಫ್ರೆಷ್ ಆಗಿ ಬಾ ಅಮ್ಮು.ಕಾಫಿ ಮಾಡ್ತಿನಿ’ಅಂದದ್ದು ಅಮ್ಮೂವಿನ ಆ ಕ್ಷಣದ ಸಂಧಿಗ್ದತೆಯನ್ನ ಆವಾಯ್ಡ್ ಮಾಡಲಿಕ್ಕಾ.?
ಗೊತ್ತಾಗಲಿಲ್ಲ ಚಾರುವಿಗೆ.
ಸಮ್ಮುವಿನ ಕ್ಯಾಮರಾ ಕ್ಕೆ ಚಾರು ಫೋಸು ಕೊಡುವಾಗ ಅವನ ಮುಖ ಚಿಕ್ಕದಾಗಿದ್ದು ಚಾರುವಿಗೆ ಸಹಿಸಲಿಕ್ಕೆ ಕಷ್ಟ ಆಯ್ತು.
‘ಅಮ್ಮೂ,,ನಿನ್ನ್ ಕ್ಯಾಮೆರಾ ಕೊಡೋ ಇಲ್ಲಿ..ಫೋಟೋಸ್ ನೋಡಿಕೊಡ್ತೀನಿ.ನಿನ್ನೆ ತೆಗೆದದ್ದು’
ಅಂದಳು ಸುಮ್ಮನೆ..
ಮೋಬೈಲ್ ನಲ್ಲಿರೋ ಫೋಟೋಸ್ ತೋರಿಸು ಅಂದ್ರೆ ‘ಆಮೇಲೆ… ನಾಳೆ ನೋಡು..,ಕಳಿಸ್ತೀನಿ… ‘ಅಂತ ಪಂಚಾಂಗ ನೋಡುವ
ಅಮ್ಮು ಲಗುಬಗೆಯಲ್ಲಿ ಅವನ ಕ್ಯಾಮೆರಾ ತಂದು ತೆಗೆದ ಫೋಟೋಗಳನ್ನು ತೋರಿಸತೊಡಗಿದ.ಚಾರು ನಿರಾಳವಾಗಿ ಒಂದು ಉಸಿರು ತೆಗೆದಳು.