ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

"ಅಂಟಂಟು ದೋಸೆಗಳು,ಅದೂ ಅಪರೂಪಕ್ಕೆ! ಕೊನೆಯದಾಗಿ ಹಾಸುವ ಕೈಗಳು ಗೆದ್ದದ್ದೇನು? .."ಎಂಬ ಪ್ರಶ್ನೆಗೆ ಲೇಖಕಿ ಅಕ್ಷತಾ ರಾಜ್ ಪೆರ್ಲ ಅವರ ಈ ಇನ್ಟೆರೆಸ್ಟಿಂಗ್ ಲೇಖನ ಓದಿ ..!

“ಅದೋ ಆ ಮರಲ್ಲಿ ಒಂದು ಹಲಸಿನಕಾಯಿ ಬೆಳದ್ದು” ಬಾನೆತ್ತರಕ್ಕೆ ಚಾಚಿದ ಮರದಲ್ಲಿದ್ದ ಒಂದು ಹಲಸಿನಕಾಯಿ ತೋರಿಸುವ ಮೊದಲೇ ಅಜ್ಜಿಯ ಉದ್ದ ಕೊಕ್ಕೆ ತಯಾರಾಗಿರುತ್ತಿತ್ತು. ಹಲಸಿನಕಾಯಿ ಬೆಳೆಯಿತೆಂದರೆ ಕಣ್ಣೆದುರು ಬಂದು ನಿಲ್ಲುತ್ತಿದ್ದುದು ತೆರೆಸೀರೆಯ ಸೆರಗಿನಂತಹ ತೆಳುವಾದ ದೋಸೆ. ಇತರ ದೋಸೆ ಹಿಟ್ಟಿನಂತಲ್ಲ ಹಲಸಿನಕಾಯಿ ದೋಸೆ ಹಿಟ್ಟು ಸಿದ್ಧಪಡಿಸಿಕೊಳ್ಳುವ ರೀತಿ, ಈಗ ಬಿಡಿ ! ಮಿಕ್ಸರ್ – ಗ್ರೈಂಡರ್ ಕಾಲ. ಆದರೆ ಆ ಕಾಲಕ್ಕೆ ಅದ್ಯಾವುದೂ ಇಲ್ವಲ್ಲ ? ಏನಿದ್ದರೂ ಅರೆಯುವ ಕಲ್ಲಿನೆಡೆಗೆ ಹಲಸಿನೆಸಳುಗಳು ಸಿಲುಕಬೇಕು, ಮೊದಲು ಹಲಸಿನ ತೊಳೆಗಳು….ಸ್ವಲ್ಪ ನುಣ್ಣಗಾದ ಮೇಲೆ ಎಂದರೆ ಅಜ್ಜಿ ಭಾಷೆಯ “ತೊಳೆ ಅರೆಕೊಜಕ್ಕಟೆ” ಆದ ಮೇಲೆ ಅಕ್ಕಿ ಸೇರಿಸಿ ಗಟ್ಟಿಯಾಗಿ ರುಬ್ಬಲು ಸೊಂಟವೂ ಗಟ್ಟಿಯಿದ್ದಿರಬೇಕಿತ್ತು ಹಾಗೂ ಆ ಸೊಂಟ ವರ್ಷ ಎಂಬತ್ತಾದರೂ ಸೊಂಟನೋವೆಂದು ಮುಲಾಮು, ಮದ್ದುಗಳನ್ನು ಹಾಕಿ ನೇವರಿಸುತ್ತಾ “ಹುಶ್ಶಪ್ಪಾ” ಎಂದು ಕುಳಿತದ್ದೂ ನೋಡಲಿಲ್ಲ ! “ಕೆಂಪನ ಹಲಸಿನಕಾಯಾದರೆ ಅಕ್ಕಿ ಅರ್ಧ ಪಾವು, ಸಕ್ಕರೆಯದ್ದಾದರೆ ಒಂದು ಪಾವು, ಇನ್ನು ಬಬ್ಬರ್ಯನ ಹಲಸಿನಕಾಯಾದರೆ ಅಕ್ಕಿಯೇ ಬೇಡ, ಬರೀ ತೊಳೆಯೇ ಸಾಕು” ಇವೆಲ್ಲ ಹಲಸಿನಕಾಯಿ ದೋಸೆ ಹಿಟ್ಟಿಗೆ ಮರಕ್ಕನುಗುಣವಾಗಿ ಟಿಪ್ಸುಗಳು. ಇವೆಲ್ಲ ಹಲಸಿನಕಾಯಿ ವೆರೈಟಿಯೆಂದು ಭಾವಿಸಿದರೆ ಊಹೆ ತಪ್ಪಾದೀತು ! ಇವೆಲ್ಲ ಮನುಷ್ಯ ಗುಣಕ್ಕೆ ಅನುಗುಣವಾಗಿ ಇಡುವ ಅಡ್ಡಹೆಸರಿನಂತೆ ಅಡ್ಡ ಮರದ ಬೊಡ್ಡನಿಗೂ ಇರುತ್ತಿದ್ದ ಅಡ್ಡ ಹೆಸರುಗಳು.

ಬೆಳಗ್ಗೆದ್ದು ತೊಳೆ ಬಿಡಿಸಿ ರುಬ್ಬಿ ಗಟ್ಟಿಯಾದ ಹಿಟ್ಟು ತಯಾರಾದ ಮೇಲೆ ದೊಡ್ಡ ಕಬ್ಬಿಣದ ಹೆಂಚು ಒಲೆಗೇರುತ್ತಿತ್ತು. ಹೆಂಚು ಹಾಗೂ ಮಗುಚು ಕೈ ಸಂಬಂಧ ಅದೊಂಥರಾ ಗಂಡ ಹೆಂಡಿರಂತೆ ! ಹೆಂಚಿನಲ್ಲಿ ಎರೆದ ಹಿಟ್ಟು ಸಮವಾಗಿ ಹರವಿ ಬೆಂದರಷ್ಟೇ ಮಗುಚು ಕೈ ಸುಲಭವಾಗಿ ದೋಸೆಯಾಕಾರದ ಚಿತ್ರವನ್ನು ಈಚೆ ತೆಗೆಯಬಹುದಲ್ಲದೇ ಹೊರತು ಹೆಂಚು ಕಾಯದಿದ್ದರೆ ಮಗುಚೋ ಕೈಗೆ ಬರುವುದು ಭೀಕರ ರೂಪಿ ಚಂಡಿ ಚಾಮುಂಡಿ ಅವತಾರ !

ಅಜ್ಜಿ ಹಿಟ್ಟು ಅರೆಯುತ್ತಿದ್ದುದು ಒಂದು ಚೆಂದವಾದರೆ ಎರೆಯುತ್ತಿದ್ದುದು ಅಲ್ಲಲ್ಲ ಹಾಸುತ್ತಿದ್ದುದು ಇನ್ನೊಂದು ಚೆಂದ. ಅಂಗೈಯಲ್ಲಿ ಹಿಟ್ಟನ್ನು ತೆಗೆದುಕೊಂಡು ನಡು ಕಾವಲಿಗೆ ಎರೆದು ಕಾವಲಿಯ ಮೇಲೆ ಬರಿಗೈಯಿಂದ ದೋಸೆ ಹರಡುವ ಅಜ್ಜಿ ನನಗೆ ಮ್ಯಾಜಿಕ್ ಅಜ್ಜಿಯಾಗಿದ್ದಳು ! ಬಹುಶ: ನಾನು ಹತ್ತು ವರ್ಷದವಳಿದ್ದಾಗ ಅಡುಗೆ ಕಲಿತೆ ಮತ್ತು ಹೆಣ್ಣು ಹೊತ್ತು ವರ್ಷಕ್ಕೆ ಅಡುಗೆ ಕಲಿಯಬೇಕೆಂಬುದು ಅಮ್ಮನ ಅಘೋಷಿತ ನಿಯಮವೂ ಆಗಿತ್ತು. ಮೊದಲು ಕಲಿತಿದ್ದೇನು? ಎಂದು ನೆನಪಿಸಿಕೊಂಡರೆ ನೆನಪಾಗುವುದು ಇದೇ ಹಲಸಿನಕಾಯಿ ದೋಸೆ ಹಾಸುವುದು. ಅಜ್ಜಿ ಪಕ್ಕದಲ್ಲಿ ನಿಂತು ತೆಳುವಾಗಿ ಹಾಸಲು ಹೇಳಿಕೊಟ್ಟಾಗ ಮೊದಮೊದಲು ಸುಡು ಅನುಭವವಾದ ಕೈ ನಂತರ ಆ ಸುಖವನ್ನು ನಿಧಾನವಾಗಿ ಅನುಭವಿಸಲಾರಂಭಿಸಿತು. ಅಂದು ಕಲಿತ‌ ದೋಸೆ ಹಾಸುವ ವಿದ್ಯೆ ಯಾವ ವಿಶ್ವವಿದ್ಯಾಲಯಗಳೂ ಕಲಿಸದ ಹಲವು ಪಾಠಗಳನ್ನು ಪ್ರತಿ ಸಲ ಹಾಸುವಾಗಲೂ ಕಲಿಸುತ್ತಿದೆ.

ಇಂದಿಗೆ ಕಾಲ ಸಂಪೂರ್ಣ ಬದಲಾಗಿದೆ ಎಂಬ ಭ್ರಮೆಯಲ್ಲಿದ್ದೇವೆ. “ದೋಸೆ ಹಾಸುವುದು” ಎಂಬ ಪದವೇ ಅನೇಕರಿಗೆ ತಿಳಿಯದ್ದು, ಅಷ್ಟೇ ಅಲ್ಲದೆ ಹಳ್ಳಿ ಮನೆಗಳಲ್ಲೂ ನಾನ್ ಸ್ಟಿಕ್ ತವಾಗಳ ಹಾವಳಿ…..ಅಂಟಂಟು ದೋಸೆಗಳು,ಅದೂ ಅಪರೂಪಕ್ಕೆ! ಕೊನೆಯದಾಗಿ ಹಾಸುವ ಕೈಗಳು ಗೆದ್ದದ್ದೇನು? ಎಂಬ ಪ್ರಶ್ನೆಗೆ ಸಿಗುವ ಉತ್ತರ “ಸುಟ್ಟು ಬಿಸಿಯೇರಿ ಕರಕಲಾಗುವ ಮುನ್ನ ಎಚ್ಚೆತ್ತು ನಡೆಯಬೇಕು” ಎಂಬುದು !