ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಿಂಪಲ್ಲಾಗಿ ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

…………………………………………………………………………

ಡಿಜಿಟಲ್ ತಂತ್ರಜ್ಞಾನದ ಈ ಯುಗದಲ್ಲಿ ಬಿಟ್ ಕಾಯಿನ್ ಮತ್ತು ಇತರ ಕ್ರಿಪ್ಟೋ ಕರ್ರೆನ್ಸಿಗಳ ಜನಪ್ರಿಯತೆಯ ಬಗ್ಗೆ ಕೇಳಿಯೇ ಇರುತ್ತೀರಿ. ಸರಕಾರೀ ಸ್ವಾಮ್ಯ್ಯದ ರೂಪಾಯಿ, ಡಾಲರ್ ಗಳಿಗೆ ಸಡ್ಡು ಹೊಡೆದು ಬೆಳೆಯುತ್ತಿರುವ ಕ್ರಿಪ್ಟೋ ಕರ್ರೆನ್ಸಿಗೆ ಅದರದ್ದೇ ಆದ ಪ್ರಯೋಜನಗಳೂ ಇವೆ. ಇಂತಹ ಕ್ರಿಪ್ಟೋ ಕರ್ರೆನ್ಸಿಯ ಹಿಂದೆ ಮೂಲಭೂತವಾಗಿ ಇರುವ ತಂತ್ರಜ್ಞಾನ ಯಾವುದು ಗೊತ್ತೇ .. ಅದೇ ಬ್ಲಾಕ್ ಚೈನ್ . ಕ್ರಿಪ್ಟೋ ಕರ್ರೆನ್ಸಿ ಅಷ್ಟೇ ಅಲ್ಲ, ಜಗತ್ತಿನ ಎಲ್ಲ ರಂಗಗಳಲ್ಲೂ ಮುಂಬರುವ ವರ್ಷಗಳಲ್ಲಿ ಇದು ಒಂದು ಕ್ರಾಂತಿಯನ್ನೇ ಸೃಷ್ಟಿಸಲಿದೆ. ಇಂತಹ ಬ್ಲಾಕ್ ಚೈನ್ ಬಗ್ಗೆ ಸರಳವಾಗಿ ತಿಳಿದುಕೊಳ್ಳುವ ಪ್ರಯತ್ನ ಈ ಲೇಖನದಲ್ಲಿ*.

ಅದಕ್ಕೆ ಮುಂಚೆ ಒಂದು ಉದಾಹರಣೆ ಕೊಡುತ್ತೇನೆ. ನಿಮ್ಮ ಹಳ್ಳಿಯಲ್ಲಿ ಒಂದು ಜಮೀನು ಇದೆ ಅಂತ ಇಟ್ಟುಕೊಳ್ಳೋಣ. ಅದರ ಮಾಲೀಕ ಒಬ್ಬರಿಗೆ ಅದನ್ನು ಮಾರುತ್ತಾನೆ. ಈ ಮಾರುವ ಪ್ರಕ್ರಿಯೆ ಗ್ರಾಮದ ಶಾನುಭೋಗನ ಮುಂದೆ ನಡೆಯುತ್ತದೆ. ಯಾರು, ಯಾರಿಗೆ, ಎಷ್ಟು ಮೊತ್ತಕ್ಕೆ, ಯಾವಾಗ ಮಾರಿದರು ಅನ್ನುವುದನ್ನು ಶಾನುಭೋಗ ತನ್ನ ಲೆಕ್ಕ ಪತ್ರದಲ್ಲಿ ಬರೆದುಕೊಳ್ಳುತ್ತಾನೆ. ಹೀಗೆ ಹತ್ತು ವರ್ಷದಲ್ಲಿ ಹತ್ತು ಬಾರಿ ಈ ಜಮೀನು ಮಾರಲ್ಪಡುತ್ತದೆ ಅಂತ ಇಟ್ಟುಕೊಳ್ಳೋಣ. ಈಗ ನೀವು ಅದನ್ನು ಕೊಂಡು ಕೊಳ್ಳುವವರಿದ್ದಿರಿ. ಆಗ ನೀವು ಹಳೆಯ ರೆಕಾರ್ಡ್ ಗಳನ್ನೂ ಪರಿಶೀಲಿಸಿದಾಗ ಕೆಲವು ಖರೀದಿಗಳು ಕಾಣಿಸುವುದಿಲ್ಲ ಮತ್ತು ಕೊಂಡ ಬೆಲೆ ಕೂಡ ತಿದ್ದಲಾಗಿರುತ್ತದೆ. ಶಾನುಭಾಗರು,ಸರಕಾರ ಎಲ್ಲ ಒಂದೇ ಆಗಿರುವಾಗ ನೀವು ಏನೂ ಹೇಳಲು ಆಗುವುದಿಲ್ಲ. ಹಣ ಬಲ, ತೋಳ್ಬಲ ದಿಂದ ಮುಖ್ಯ ಮಾಹಿತಿಗಳನ್ನು ಸುಲಭವಾಗಿ ತಿದ್ದಬಹುದು ತಾನೇ?.

ಆದರೆ ಈಗ ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಪ್ರತಿ ಬಾರಿಯೂ ಖರೀದಿ ಆದಾಗ, ಆ ಮಾಹಿತಿಯನ್ನು ಶಾನುಭೋಗರ ಕಡತದಲ್ಲಿ ಮಾತ್ರವಲ್ಲ , ಅದರ ಜೊತೆ ಜೊತೆಗೆ, ನಾಡಿನ ಸಾವಿರಾರು ಲೆಕ್ಕಿಗರ ಲೆಕ್ಕ ಪತ್ರದಲ್ಲಿಯೂ ಈ ಮಾಹಿತಿಯನ್ನು ಕ್ರಮವಾಗಿ ದಾಖಲಾಗಿಸುವ ಪದ್ಧತಿ ಇದೆ ಅಂತ ಇಟ್ಟುಕೊಳ್ಳಿ. ಆಗ, ಈ ಜಮೀನಿನ ಬಗ್ಗೆ ವ್ಯವಹಾರದ ಪ್ರತೀ ಮಾಹಿತಿ ಅನೇಕ ಕಡೆ ಸಂರಕ್ಸಿಸಲಾಗಿರುತ್ತದೆ. ಇಂಥ ವ್ಯವಸ್ಥೆ ಇರುವಾಗ, ಒಂದು ವೇಳೆ ಶಾನುಭೋಗರು ತಮ್ಮ ಕಡತದಲ್ಲಿ ಮಾತ್ರ ಬೇರೆ ಮಾಹಿತಿ ಇಟ್ಟು, ತಿದ್ದಿ , ಅಳಿಸುವ ಪ್ರಯತ್ನ ಮಾಡಲಾದೀತೇ. ಹಾಗೆ ಮಾಡಿದರೆ ಉಳಿದ ಸಾವಿರಾರು ಲೆಕ್ಕಿಗರ ಕಡತಗಳಲ್ಲಿ ಇದು ತಾಳೆಯಾಗುವುದಿಲ್ಲ. ವಂಚನೆ ಇಲ್ಲಿ ತಕ್ಷಣ ಸರ್ವವಿದಿತವಾಗುತ್ತದೆ. ಇದರರ್ಥ ಆ ಒಂದು ಜಮೀನಿನ ವ್ಯವಹಾರ ಖಾತೆ ಪುಸ್ತಕ ಈಗ ಸಾರ್ವಜನಿಕ, ಹಂಚಲ್ಪಟ್ಟ ದಾಖಲೆ ಪುಸ್ತಕ ಜಾಲವಾಗಿ ಬಳಸಲ್ಪಡುತ್ತಿದೆ ಎನ್ನಬಹುದು. (Distributed public ledger) ಬ್ಲಾಕ್ ಚೈನ್ ನ ಪರಿಕಲ್ಪನೆ ಹೆಚ್ಚು ಕಮ್ಮಿ ಹಾಗೆ. ಯಾರು, ಏನು ಎಂದು ತಿಳಿಯದ ಎಲ್ಲ ಲೆಕ್ಕಿಗರ ಕಡತಗಳಲ್ಲಿ ಹೋಗಿ ತಿದ್ದುವುದು, ಮೋಸ ಮಾಡುವುದು ಅಷ್ಟು ಸುಲಭವಲ್ಲ.

ಈ ಮೇಲಿನ ಉದಾರಹರಣೆ ಕಂಪ್ಯುಟರ್ ಆಧಾರಿತ ಮಾಹಿತಿ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಯೋಚಿಸೋಣ. ನೀವು ಒನ್ಲೈನ್ ನಲ್ಲಿ ಸೇವ್ ಮಾಡುವ ಯಾವುದೇ ಮಾಹಿತಿ ಒಂದು ಸಂಸ್ಥೆ, ವ್ಯಕ್ತಿ, ಸರಕಾರಕ್ಕೆ ಸೇರಿದ ಒಂದು ಕಂಪ್ಯೂಟರ್ ನಲ್ಲಿ ಮಾತ್ರ ದಾಖಲಾಗುತ್ತದೆ. ಹೀಗಾಗಿ ಇದನ್ನು ಯಾರು ಬೇಕಾದರೂ ತಿದ್ದಬಹುದು. ಆದರೆ ಬ್ಲಾಕ್ ಚೈನ್ ನಲ್ಲಿ ಹಾಗಲ್ಲ. ನೀವು ಸೇವ್ ಮಾಡುವ ಯಾವುದೇ ಮಾಹಿತಿ ಪ್ರತಿ ಬಾರಿಯೂ ತುಣುಕು ತುಣುಕಾಗಿ (ಬ್ಲಾಕ್ ಬೈ ಬ್ಲಾಕ್ ), ಕೇವಲ ಅದೊಂದೇ ಕಂಪ್ಯೂಟರ್ ಅಲ್ಲದೇ, ಇತರ ಸಹಸ್ರಾರು ಕಂಪ್ಯೂಟರ್ ಗಳಲ್ಲಿ ಕೂಡ, ಏಕ ಕಾಲಕ್ಕೆ ದಾಖಲಾಗುತ್ತ ಹೋಗುತ್ತದೆ. ಪ್ರತಿ ಮಾಹಿತಿಯೂ ಹೀಗೆ ಹಂಚಲ್ಪಡುವಾಗ ಗುಪ್ತ ಲಿಪಿಯ ರೂಪದಲ್ಲಿ (Encrypted) ರೂಪದಲ್ಲಿ ಇರುವುದರಿಂದ ಹೊರಗಿನವರು ಇದನ್ನು ಓದಲಾಗುವುದಿಲ್ಲ. ಹೀಗಾಗಿ ಇಲ್ಲಿ ಮಾಹಿತಿ ವಿನಿಮಯವಾಗುವಾಗ ಕೂಡ ಅತ್ಯಂತ ಸುರಕ್ಷತೆ,ಗೌಪ್ಯತೆ ಕಾಪಾಡಲಾಗುತ್ತದೆ. ನಿಮ್ಮ ಮಾಹಿತಿ ಮತ್ತೆ ಮತ್ತೆ ಬದಲಿಸಿದಾಗ ಕೂಡ ಒಂದು ಹೊಸ ಮಾಹಿತಿಯ ತುಣುಕು ಹೊಸ ಬ್ಲಾಕ್ ಆಗಿಯೇ ಬ್ಲಾಕ್ ಚೈನ್ ನ ಎಲ್ಲ ಕಂಪ್ಯೂಟರ್ ಗಳಲ್ಲೂ ಸೇವ್ ಆಗುತ್ತದೆ. ಈ ಮಾಹಿತಿಯ ತುಣುಕಿಗೆ (ಬ್ಲಾಕ್) ಗೆ ಒಂದು ವಿಶಿಷ್ಟ ಗುರುತು (hash ID) ಇದ್ದು, ಅದರ ಹಿಂದಿನ ಮಾಹಿತಿಯ ಗುರುತು ಕೂಡ ಲಿಂಕ್ ಆಗಿರುತ್ತದೆ. ಹೀಗಾಗಿ, ನಿಮ್ಮ ಪರಿಷ್ಕೃತ ಮಾಹಿತಿಯ ಜೊತೆಗೆ ಹಳೆಯ ಮಾಹಿತಿ ಹಾಗೆಯೇ ಇದ್ದು , ಒಂದು ಸರಣಿ ದಾಖಲೆಗಳ ವ್ಯವಸ್ಥೆ ಏರ್ಪಡುತ್ತದೆ. ಹೀಗಾಗಿ ಬ್ಲಾಕ್ ಚೈನ್ ನಲ್ಲಿ ಎಷ್ಟೇ ಸೇರಿಸಿ, ಬದಲಿಸಿ ಎಲ್ಲವೂ ಹಾಗೆಯೇ ದಾಖಲಾಗುತ್ತಾ ಹೋಗುತ್ತದೆ. ಇಲ್ಲಿ ಇತಿಹಾಸ ಎಂದಿಗೂ ಅಳಿಸಲ್ಪಡುವುದಿಲ್ಲ. ಇದು ಬ್ಲಾಕ್ ಚೈನ್ ಎಂಬ ಹೊಸ ಜಾಲ ವ್ಯವಸ್ಥೆ.

ಈಗ ಹೇಳಿ ನಿಮ್ಮ ಮಾಹಿತಿಯನ್ನು, ವ್ಯವಹಾರವನ್ನು ದಾಖಲಿಸುವ ಕೇವಲ ಒಂದು ಕಂಪ್ಯುಟರ್ ನಲ್ಲಿ ಹ್ಯಾಕ್ ಮಾಡಿ ಮಾಹಿತಿ ನಾಶ ಮಾಡುವುದಕ್ಕೆ, ತಿದ್ದುವುದಕ್ಕೆ ಸಾಧ್ಯವೇ. ಮಾಡುವುದಿದ್ದರೆ ಜಗತ್ತಿನ ಯಾವುದೋ ಮೂಲೆಯ ಅನೇಕ ಕಂಪ್ಯೂಟರ್ ಗಳಲ್ಲಿ ಕೂಡ ಏಕ ಕಾಲಕ್ಕೇ ಹಾಗೆ ಮಾಡಬೇಕು. ಹೀಗಾಗಿ ಒಂದು ಸರಕಾರ, ಒಬ್ಬ ವ್ಯಕ್ತಿ, ತಂತ್ರಜ್ಞರು ಕೂಡ ಇಲ್ಲಿ ಪ್ರಭಾವ ಬೀರಿ ನಿಯಂತ್ರಿಸಲು ಸಾಧ್ಯವಿಲ್ಲ.

ಮಾಹಿತಿಯ ಸುರಕ್ಷೆ ಅಷ್ಟೇ ಅಲ್ಲದೇ ಇಂದೊಂದು ವಿಕೇಂದ್ರಿತ ಸ್ವಾಯತ್ತ ವ್ಯವಸ್ಥೆ ಯಾಗಿ, ಅತ್ಯಂತ ವಿಸ್ವಾಸಾರ್ಹವಾಗಿ ಕಾರ್ಯ ನಿರ್ವಹಿಸುವುದರಿಂದ ಇನ್ನೊಂದು ಪ್ರಯೋಜನ ಇದೆ. ಇಬ್ಬರ ನಡುವಿನ ವ್ಯವಹಾರದ ನಡುವೆ ಒಂದು ಮೂರನೆಯ ಬ್ರೋಕರ್ ಅಥವಾ ಗ್ಯಾರಂಟೀ ವ್ಯಕ್ತಿ, ಸಂಸ್ಥೆಗಳ ಅವಶ್ಯಕತೆ ಇನ್ನು ಮೇಲೆ ಬೇಕಾಗುವುದಿಲ್ಲ.. ಉದಾಹರಣೆಗೆ, ಇಬ್ಬರ ನಡುವಿನ ಹಣ ವರ್ಗಾವಣೆಗೆ ಬ್ಯಾಂಕ್ ಮಧ್ಯೆ ಪ್ರವೇಶಿಸಿದಂತೆ, ಬ್ಲಾಕ್ ಚೈನ್ ಆಧಾರಿತ ಬಿಟ್ ಕಾಯಿನ್ ಕೊಳ್ಳುವವರ ನಡುವೆ ಯಾವುದೇ ಬ್ಯಾಂಕ್ ಬ್ರೋಕರ್ ಗಳ ಅವಶ್ಯಕತೆ ಇರುವುದಿಲ್ಲ ಎನ್ನುವುದು ಕೂಡ ಅನೇಕರ ಕೆಂಗಣ್ಣಿಗೆ ಗುರಿಯಾಗಿರುವುದಕ್ಕೆ ಕಾರಣ. ಹಾಗೆಯೇ ಮುಂದೆ ಪ್ರತಿ ಸರಕಾರದ್ದೇ ಒಂದು ಕ್ರಿಪ್ಟೋ ಕರ್ರೆನ್ಸಿ ಬರುವ ಎಲ್ಲ ಸಾಧ್ಯತೆಗಳಿವೆ. ಆಗ ಖೋಟಾ ಹಣ ಸೃಷ್ಟಿ ಇತ್ಯಾದಿಗಳು ಇಲ್ಲವಾಗಲಿದೆ.

ಜಗತ್ತಿನ ಸರಕಾರಗಳು, ರಾಜಕಾರಣಿಗಳು, ಅಧಿಕಾರಿವರ್ಗ, ಉದ್ಯಮಿಗಳನ್ನು ಅಷ್ಟೇ ಏಕೆ ಮನುಷ್ಯ ಮನುಷ್ಯರನ್ನು, ದೇವರನ್ನೂ ಕೂಡ ಕಣ್ಣು ಮುಚ್ಚಿ ನಂಬದ ಪರಿಸ್ಥಿತಿಯ ಈ ಸಮಯದಲ್ಲಿ ವರದಾನವಾಗಿ ಬಂದಿದ್ದು ಈ ಬ್ಲಾಕ್ ಚೈನ್ ಎಂಬ ಕ್ರಾಂತಿಕಾರಿ ತಂತ್ರಜ್ಞಾನ.

ಎಲ್ಲೆಲ್ಲಿ ನಿಮಗೆ ವಿಶ್ವಾಸದ ಕೊರತೆಯಿದೆಯೋ ಅಲ್ಲೆಲ್ಲ ಬ್ಲಾಕ್ ಚೈನ್ ತಂತ್ರಜ್ಞಾನ ಸಹಾಯಕ್ಕೆ ಒದಗಲಿದೆ. ಬ್ಯಾಂಕ್ ವ್ಯವಹಾರಗಳು, ಆಸ್ತಿ ಪಾಸ್ತಿ ವ್ಯವಹಾರ, ರೆಜಿಸ್ಟ್ರೇಶನ್ , ವೈದ್ಯಕೀಯ ಮಾಹಿತಿಗಳು, ಅಂಕಪಟ್ಟಿ, ಪ್ರಮಾಣ ಪತ್ರಗಳು ಸೇರಿದಂತೆ ಎಲ್ಲ ಶೈಕ್ಷಣಿಕ ದಾಖಲೆಗಳು , ಸರಕಾರೀ ದಾಖಲೆಗಳಲ್ಲಿ, ಉಯಿಲು ಪತ್ರ ,ಒಪ್ಪಂದ ಪತ್ರ, ಕಾಂಟ್ರಾಕ್ಟ್ ಗಳಂತ ವಿಷಯಗಳಲ್ಲಿ ಅಷ್ಟೇ ಏಕೆ ವೋಟಿಂಗ್ ಗಳಲ್ಲಿ ಕೂಡ ಬ್ಲಾಕ್ ಚೈನ್ ಉಪಯೋಗಿಸದೇ ಹೋದರೆ ನಾವು ನಂಬುವುದಿಲ್ಲ ಅನ್ನುವ ಸ್ಥಿತಿ ಮುಂದೆ ನಿರ್ಮಾಣವಾದರೂ ಆಶ್ಚರ್ಯವಿಲ್ಲ. ಇದರಿಂದಾಗಿ ಮೋಸ, ವಂಚನೆ, ಖೊಟ್ಟಿ ಮಾಹಿತಿಗಳ ಸೃಷ್ಟಿ ಈ ಜಗತ್ತಿನಲ್ಲಿ ಗಣನೀಯವಾಗಿ ಕಮ್ಮಿ ಆಗಲಿದೆ ಎನ್ನುವುದು ಆಶಾದಾಯಕ ಬೆಳವಣಿಗೆಯಲ್ಲವೇ.

*ಈ ಹಿಂದೆ ಶೌರ್ಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು..