ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : https://madrascourier.com/opinion/stop-hindi-imposition/

ಹಿಂದಿ ಹೇರಿಕೆ ಸರಿಯೇ?

ಕಿರಣ್ ಕುಮಾರ್ ಡಿ
ಇತ್ತೀಚಿನ ಬರಹಗಳು: ಕಿರಣ್ ಕುಮಾರ್ ಡಿ (ಎಲ್ಲವನ್ನು ಓದಿ)

ಭಾಷೆ ಮಾನವ ಜೀವಿಗೆ ಬೇಕಾದ ಒಂದು ಬಹು ಮುಖ್ಯವಾದ ಸಾಧನವಾಗಿದೆ. ಭಾರತದಂತಹ ದೇಶದಲ್ಲಿ ನಾವು ೨೨ ಅಧಿಕೃತ ಭಾಷೆಗಳನ್ನು ಕಾಣಬಹುದು. ಭಾರತದಂತಹ ದೊಡ್ಡ ದೇಶದಲ್ಲಿ ಸುಮಾರು ೭೮೦ ಭಾಷೆಗಳನ್ನು ಮಾತನಾಡುವ ಜನ ಸಮೂಹವೇ ಸಿಗುತ್ತದೆ. ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ. ಕನ್ನಡ ಭಾಷೆಗೆ ಸುಮಾರು ೨೫೦೦ ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗಿದೆ. ನಾನು ನೇರವಾಗಿ ವಿಷಯಕ್ಕೆ ಬರುತ್ತೇನೆ; ಅದೇನೆಂದರೆ ಅದುವೇ ಇತ್ತೀಚಿನ ವರ್ಷಗಳಲ್ಲಿ ನಮ್ಮ ಮೇಲೆ ಅನಗತ್ಯವಾಗಿ ಹಿಂದಿಯ ಹೇರಿಕೆಯಾಗುತ್ತಿರುವುದು ಮತ್ತು ಅನ್ಯ ಭಾಷಿಕರಿಂದ ನಮ್ಮ ನೆಲದಲ್ಲೇ ನಮ್ಮ ಮೇಲೆಯೇ ಆಗುತ್ತಿರುವ ದಬ್ಬಾಳಿಕೆಗಳು.

ನಿಮಗೆ ತಿಳಿದಿರುವ ಹಾಗೆ ಭಾರತ ದೇಶ ಸ್ವಾತಂತ್ರ್ಯ ಬಂದ ಮೇಲೆ ಭಾಷಾಪ್ರಾಂತ್ಯದ ಆಧಾರದ ಮೇಲೆ ರಾಜ್ಯಗಳು ಪುನರ್ ವಿಂಗಡಣೆಯಾಗಿದ್ದವು. ಆದರೂ ಕೆಲವು ಗಡಿ ಭಾಗದ ಹಳ್ಳಿಗಳು ತಮ್ಮ ಮಾತೃಭಾಷೆಯ ರಾಜ್ಯಗಳಿಗೆ ಸೇರದೆ ಅಲ್ಲಿಯೇ ಉಳಿದವು. ಕೇಂದ್ರ ಸರ್ಕಾರವು ಆಡಳಿತ ಭಾಷೆಯಾಗಿ ಹಿಂದಿ ಮತ್ತು ಆಂಗ್ಲ ಭಾಷೆಗಳನ್ನು ಬಳಸುತ್ತದೆ. ಆದರೆ ಇಲ್ಲಿಂದಾನೇ ಸಮಸ್ಯೆಗಳು ಪ್ರಾರಂಭವಾಗುವುದು,ಅದೇನೆಂದರೆ ಕೇಂದ್ರ ಸರ್ಕಾರವು ನೀಡುವ ಯೋಜನೆಗಳ ಅರ್ಜಿಗಳು ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಮಾತ್ರ ಮುದ್ರಣವಾಗುತ್ತವೆ. ಉದಾಹರಣೆಗೆ ಅಂಚೆ ಕಛೇರಿಯ ಅರ್ಜಿಗಳು, ಬ್ಯಾಂಕಿನ ಚಲನ್ ಗಳು, ಪಾಸ್ ಬುಕ್ ಗಳು. ಎಷ್ಟೋ ಜನಕ್ಕೆ ತಮ್ಮ ಮಾತೃ ಭಾಷೆ ಬಿಟ್ಟು ಬೇರೆ ಭಾಷೆ ಬರೆಯಲು ಬರುವುದಿಲ್ಲ, ಅವರು ಅರ್ಜಿ ತುಂಬಲು ಪರದಾಡುತ್ತಾರೆ. ಅದೇ ತಮಿಳುನಾಡಿನಲ್ಲಿ ಕೇಂದ್ರ ಸರ್ಕಾರದ ಅರ್ಜಿಗಳು ತಮಿಳಿನಲ್ಲಿ ಮುದ್ರಣವಾಗುತ್ತಿವೆ, ಆದರೆ ಕರ್ನಾಟಕದಲ್ಲಿ ನಾವು ಕೇಂದ್ರ ಸರ್ಕಾರದ ಸೇವೆಗಳನ್ನು ನಮ್ಮ ಭಾಷೆಯಲ್ಲಿ ಕೂಡಿ ಎಂದು ಬೇಡಿಕೊಳ್ಳುವ ಸ್ಥಿತಿಗೆ ತಲುಪಿದ್ದೇವೆ.

ಹಿಂದಿಯನ್ನು ಕೇಂದ್ರ ಸರ್ಕಾರವು ಬಹಳ ಹಿಂದಿನಿಂದಲೇ ಜನರ ಮೇಲೆ ಹೇರಿಕೆ ಮಾಡುತ್ತ ಬಂದಿದೆ. ಏಕೆಂದರೆ ಕೇಂದ್ರ ಸರ್ಕಾರದ ದೊಡ್ಡ ಹುದ್ದೆಗಳು ಅವರ ಪಾಲಾಗುತ್ತವೆ. ಉತ್ತರ ಪ್ರದೇಶ ರಾಜ್ಯದಿಂದ ಅತಿ ಹೆಚ್ಚು ಪ್ರಧಾನ ಮಂತ್ರಿಗಳು ಆಗಿದ್ದಾರೆ. ಇಲ್ಲಿ ಗಮನಾರ್ಹ ಅಂಶವೆಂದರೆ, ಉತ್ತರ ಪ್ರದೇಶ ರಾಜ್ಯದ ಆಡಳಿತ ಭಾಷೆ ಹಿಂದಿ ಆಗಿರುವುದು. ಉತ್ತರ ಭಾರತದ ಬಹುತೇಕ ಜನರು ಹಿಂದಿಯನ್ನು ರಾಷ್ಟ್ರಭಾಷೆ ಎಂದು ತಮಗೆ ತಾವೇ ತಿಳಿದುಕೊಂಡು ಅನ್ಯಭಾಷೆಯ ಜನರ ಹತ್ತಿರ ವಾದ ಮಾಡುತ್ತಾರೆ. ವಿಪರ್ಯಾಸವೆಂದರೆ ಕರ್ನಾಟಕದ ಕೆಲವು ಜನರು ಇದುವೇ ಸತ್ಯ ಎಂದು ತಿಳಿದುಕೊಂಡಿದ್ದಾರೆ. ಉತ್ತರ ಭಾರತದವರು ಕೆಲಸವನ್ನು ಆರಿಸಿ ದಕ್ಷಿಣ ಭಾರತದ ಕಡೆ ಬರುತ್ತಾರೆ. ಅವರು ನಮ್ಮ ನೆಲದ ಭಾಷೆ ಕಲಿಯಲು ಇಷ್ಟಪಡುವುದಿಲ್ಲ. ಈ ಸಮಸ್ಯೆ ತಮಿಳುನಾಡು, ಕೇರಳ, ಆಂಧ್ರ ಪ್ರದೇಶದಲ್ಲಿ ಕಾಣುವುದಿಲ್ಲ, ಏಕೆಂದರೆ ಅಲ್ಲಿಯ ಜನ ಸ್ವಾಭಿಮಾನಿಗಳು ಅನ್ಯಭಾಷಿಕರು ಕೆಲಸಕ್ಕೆ ಬಂದರೆ ಅವರ ಜೊತೆ ತಮ್ಮ ಭಾಷೆಯಲ್ಲೇ ವ್ಯವಹರಿಸುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಅವರ ಭಾಷೆ ಬರದಿದ್ದರೂ ಅವರೊಂದಿಗೆ ಅವರ ಭಾಷೆಯಲ್ಲಿಯೇ ಉತ್ತರಿಸಲು ಪ್ರಯತ್ನಿಸುತ್ತೇವೆ.

ಈ ಹೇರಿಕೆ ಎಷ್ಟರ ಮಟ್ಟಿಗೆ ಹೋಗಿದೆ ಎಂದರೆ, ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಕಲಿಸಲು ಶುರುಮಾಡಿದ್ದಾರೆ. ಬೆಂಗಳೂರಿನಲ್ಲಿ ಅನೇಕ ಶಾಲೆಗಳಲ್ಲಿ ಮೊದಲನೇ ತರಗತಿಯಿಂದಲೇ ಆಂಗ್ಲ, ಹಿಂದಿ, ನಂತರ ಕನ್ನಡ ಕಲಿಸುತ್ತಿದ್ದಾರೆ. ಆಟದ ಮೂಲಕ ಕಲಿಯಬೇಕಾದ ಮಕ್ಕಳಿಗೆ ಮೂರು ಭಾಷೆಗಳನ್ನು ಕಲಿಯಲೇಬೇಕಾದ ಪರಿಸ್ಥಿತಿ ಬಂದಿದೆ. ಹಿಂದಿ ಮಾತನಾಡುವ ರಾಜ್ಯದ ಮಕ್ಕಳು ಮತ್ತು ತಮಿಳುನಾಡಿನ ಮಕ್ಕಳು ಎರಡು ಭಾಷೆಗಳನ್ನು ಮಾತ್ರ ಕಲಿಯುತ್ತಾರೆ. ಮಕ್ಕಳಿಗೆ ಹಿಂದಿ ನಮ್ಮ ರಾಷ್ಟ್ರಭಾಷೆ ಎಂದು ಹೇಳುತ್ತಾರೆ, ಆದರೆ ವಾಸ್ತವದಲ್ಲಿ ಭಾರತ ದೇಶಕ್ಕೆ ಯಾವುದೇ ಅಧಿಕೃತ ರಾಷ್ಟ್ರಭಾಷೆ ಇರುವುದಿಲ್ಲ. ಉತ್ತರ ಭಾರತದ ರಾಜಕಾರಣಿಗಳು ಹಿಂದಿಯನ್ನು ರಾಷ್ಟ್ರಭಾಷೆಯಾಗಿಸಲು ಹೊರಟಿದ್ದಾರೆ. ನಾವು ಬ್ಯಾಂಕಗಳಲ್ಲಿ ನೋಡಿದ್ದೇವೆ; ಹಿಂದಿ ಬರುವ ಉದ್ಯೊಗಿಗಳು ನಮ್ಮ ಮೇಲೆ ಹೇಗೆ ದರ್ಪ ತೋರುತ್ತಾರೆ ಎಂಬುದನ್ನು.

ನನ್ನ ವಾದವೆಂದರೆ ನಮ್ಮ ದೇಶದ ಮಕ್ಕಳು ಏಕೆ ಮೂರು ಭಾಷೆಗಳನ್ನು ಕಲಿಯಬೇಕು. ನನ್ನ ಪ್ರಕಾರ ನಮ್ಮ ದೇಶದ ಮಕ್ಕಳು ಮತ್ತು ಜನ ಎರಡು ಭಾಷೆ ಕಲಿತರೆ ಸಾಕಲ್ಲವೇ? ನಾವು ಪ್ರಪಂಚದಲ್ಲಿ ನೋಡಬಹುದು;ಆಂಗ್ಲ ಭಾಷೆಯು ಬಹುತೇಕ ದೇಶಗಳ ವ್ಯಾವಹಾರಿಕ ಭಾಷೆಯಾಗಿ ಬೆಳೆಯುತ್ತಿದೆ. ನಾವು ಆಂಗ್ಲ ಭಾಷೆಯನ್ನು ಕಲಿಯದೇ ಇರಲು ಸಾಧ್ಯವಿಲ್ಲ. ಆದ್ದರಿಂದ ನಾವು ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಯುವುದು ಬೇಡ. ಕೆಲವರು ಹೇಳುತ್ತಾರೆ, ಆಂಗ್ಲ ನಮ್ಮ ದೇಶದ ಭಾಷೆಯಲ್ಲ ಎಂದು. ಆದರೆ ಅವರ ಮಕ್ಕಳು ಮತ್ತು ಅವರು ಮಾತ್ರ ಆಂಗ್ಲ ಕಲಿತು ವಿದೇಶಕ್ಕೆ ಹೋಗುತ್ತಾರೆ. ಈಗ ಕನ್ನಡ ಬರುವ ವ್ಯಕ್ತಿ ಇನ್ನೊಂದು ಭಾಷೆ ಎಂದರೆ ಆಂಗ್ಲ ಕಲಿತರೆ ಸಾಕು. ಹಾಗೆಯೇ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಉರ್ದು, ಮರಾಠಿ, ಇತರೆ ಭಾಷೆಗಳನ್ನು ಮಾತನಾಡುವ ಜನ ತಮ್ಮ ಮಾತೃ ಭಾಷೆಯೊಂದಿಗೆ ಆಂಗ್ಲವನ್ನು ಕಲಿತರೆ ಅನ್ಯಭಾಷಿಕರೊಂದಿಗೆ ಆಂಗ್ಲದಲ್ಲಿ ವ್ಯವಹರಿಸಬಹುದು ಅಲ್ಲವೇ? ಕೆಲವು ಜನರ ಪ್ರಕಾರ ಕನ್ನಡ ಗೊತ್ತಿದ್ದರೆ ನಮ್ಮ ರಾಜ್ಯ ಸುತ್ತಬಹುದು, ಹಿಂದಿ ಗೊತ್ತಿದ್ದರೆ ನಮ್ಮ ರಾಷ್ಟ್ರ ಸುತ್ತಬಹುದು ಮತ್ತು ಆಂಗ್ಲ ಗೊತ್ತಿದ್ದರೆ ಇಡೀ ಪ್ರಪಂಚವನ್ನು ಸುತ್ತಬಹುದು. ಇವರ ಪ್ರಕಾರ, ಬೇರೆ ದೇಶದಿಂದ ನಮ್ಮ ದೇಶಕ್ಕೆ ಬರುವ ಜನ ಹಿಂದಿ ರಾಜ್ಯಗಳಿಗೆ ಹೋದರೆ ಹಿಂದಿಯಲ್ಲಿ ಮಾತನಾಡುತ್ತಾರ? ಇಲ್ಲ ತಾನೇ? ನಾವು ಮಾತ್ರ ಮೂರು ಭಾಷೆಗಳನ್ನು ಕಷ್ಟಪಟ್ಟು ಕಲಿಯಬೇಕು, ಆದರೆ ಹಿಂದಿಯವರು ಮಾತ್ರ ಎರಡು ಭಾಷೆ ಕಲಿಯಬೇಕು; ಇದು ಯಾವ ಸೀಮೆಯ ನ್ಯಾಯ ಸ್ವಾಮಿ? ಆದ್ದರಿಂದ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆ ತನ್ನ ಮಾತೃ ಭಾಷೆಯ ಜೊತೆಗೆ ಆಂಗ್ಲ ಭಾಷೆ ಕಲಿತರೆ ಸಾಕು.

ಕೇಂದ್ರ ಸರ್ಕಾರವು ಹಿಂದಿಯನ್ನು ಹೇರಿಕೆ ಮಾಡುವುದನ್ನು ನಿಲ್ಲಿಸಿ, ಸ್ಥಳೀಯ ಭಾಷೆ ಮತ್ತು ಆಂಗ್ಲಭಾಷೆಯಲ್ಲಿ ಮಾತ್ರ ಸೇವೆ ಕೊಡಲು ಪ್ರಾರಂಭಿಸಬೇಕು. ಕೇಂದ್ರ ಸರ್ಕಾರವು ಸ್ಥಳೀಯ ಭಾಷೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಮತ್ತು ಆ ಭಾಷೆಗಳನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಆಯಾ ರಾಜ್ಯದ ಉದ್ಯೋಗಗಳು ಆಯಾ ರಾಜ್ಯದ ಜನತೆಗೆ ಸಿಗುವಂತೆ ಮಾಡಿದರೆ ಈ ಭಾಷಾಜಗಳಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ.