- ನಂಬಿಕೆಯ ವರ್ಷಧಾರೆ - ಜುಲೈ 8, 2024
- ಹುಚ್ಚು ಅಚ್ಚುಮೆಚ್ಚಾದಾಗ - ಜನವರಿ 27, 2024
- ಅಪರಿಚಿತರು - ಡಿಸಂಬರ್ 31, 2023
ಬೆಳ್ಮುಗಿಲು ಕತ್ತಲಲ್ಲಿ ಲೀನವಾಗುವ ಹೊತ್ತದು. ದಿಗಂತದಲ್ಲಿ ಮಿಹಿರ ಕಳೆಗುಂದುತ್ತಿರಲು, ಶರಧಿಯಲೆಗಳು ತುಸು ಮೆಲ್ಲಗೆ ಮೂಡುತ್ತಿರುವ ಶುಕ್ರ ಪಂಚಮಿಯ ಹೊನಲಿಗೆ ಕಾದು ಕುಳಿತಿದ್ದವು, ಚಾತಕದಂತೆ. ಮನೆಯ ಪಡಸಾಲೆಯಂಚಿನಿಂದ, ದಿನದ ಆಗುಹೋಗುಗಳಿಗೆ ತಡೆಯನೊಡ್ಡದೇ, ತನ್ನಷ್ಟಕ್ಕೆ ತಾನೇ ಕಗ್ಗತ್ತಲ ರಂಗಿಗೆ ತನ್ನನ್ನು ಹೊಂದಿಸಿಕೊಳ್ಳುತ್ತಿರುವ ತೋಟದ ಅಡಿಕೆ ಮರವನ್ನೇ ಕಾಣುತ್ತಾ, ಬದುಕೂ ಸಹ ಇಷ್ಟೇ ಎಂಬ ಮನದ ಉದ್ಗಾರದಿಂದ ಕವಳದ ಸಂಚಿಯ ಕೊನೆಯ ಗಂಟನ್ನು ಬಿಗಿಗೊಳಿಸುತ್ತಾ, ಹೆಬ್ಬಾಗಿಲಿನೆಡೆಗೆ ನಡೆದು ಬಂದಳು ಅಮ್ಮಮ್ಮ, ಜೊತೆಗೊಂದು ಚನ್ನೆಮಣೆಯ ಕೈಯಲ್ಲಿಡಿದು. ಅಟ್ಟದ ಮೇಲಿನ ಕೆಂಪಡಿಕೆಯನ್ನೊಮ್ಮೆ ಒಗ್ಗೂಡಿಸಿ, ಖಾಲಿ ಬುಟ್ಟಿಯನ್ನು ಹಿಡಿದು, ಅತ್ತಿತ್ತ ಓಲಾಡದೇ ಸ್ಥಿರವಾಗಿದ್ದ ಮರದ ಏಣಿಯಿಂದ ಇಳಿದು ಬರುವಾಗ, ಆಗಸವ ನೋಡಿ, ಸಂಜೆಗಪ್ಪು ಕಾರ್ಗತ್ತಲಾಗುವ ಮೊದಲು ಹಸಿಹುಲ್ಲಿನ ಬಣವೆ ಕೊಟ್ಟಿಗೆ ಸೇರಬೇಕೆಂಬ ತರಾತುರಿಯಲ್ಲಿ ಗದ್ದೆಯೆಡೆಗೆ ನಡೆದಿದ್ದರು ಮನೆಯ ಯಜಮಾನರು. ಮಹಾನಗರದಿಂದ ಮಕ್ಕಳ ಬರುವಿಕೆಯನ್ನೇ ಹಂಬಲಿಸುತ್ತಾ, ಮುಗುಳುನಗೆಯ ಮುಖವಾಡದೊಂದಿಗೆ, ದೀಪ ಬೆಳಗುವ ದಿನದ ಕಾಯಕವನ್ನು ಮುನ್ನಡೆಸಿದ್ದರು ಮನೆಯ ತಾಯಿ. ಸಂಧ್ಯೆಯೆಂಬ ವೇದಿಕೆಯಲ್ಲಿನ ಅವಿಚ್ಛಿನ್ನ ಕಾಯಕಗಳಲ್ಲಿದೂ ಒಂದು, ಹಳ್ಳಿಯ ಮನೆಯ ಸೂರಿನಡಿ. ಬದುಕೆಂಬ ದೀವಟಿಗೆಯ ಬಿಡಿ ಬತ್ತಿಗಳಿವು.
ಇಂತಹದೇ ಒಂದು ಬಿರುಬಿಸಿಲಿರದ, ಅಟ್ಟದಿಂದ ಇಣುಕಿ, ಮನೆಯ ಜಗುಲಿಯ ಗೋಡೆಗಳ ಮೇಲೆ ವರ್ಣವಿದ್ಯೆ ಪ್ರಯೋಗಿಸುತ್ತಿದ್ದ ಸಂಧ್ಯೆಯಲ್ಲಿ ಹುಟ್ಟಿಕೊಂಡ ಹವ್ಯಾಸಗಳಿಗೆ ಹೆಸರಿಡಲಿಲ್ಲ, ಬಹುಶಃ ಆರಾಧಿಸುತ್ತಾ ಬದುಕಿದೆವೆಂದರೆ ಅತಿಶಯೋಕ್ತಿಯಾಗದೇನೋ.
ಹವ್ಯಾಸವೆಂಬುದಕ್ಕೆ ಹೊತ್ತು ಗೊತ್ತಿನ ಪರಿವೆಯಿಲ್ಲ; ಇಂದಿನ ಹವಾಮಾನದಂತೆಯೇ ಅದೂ ಸಹ. ಆದರೂ, ಗೋಧೂಳಿಯ ಶುಭಮುಹೂರ್ತದಲ್ಲಿ ಬದುಕಿನಲ್ಲಿ ತಿಳಿಯದೆಯೋ, ತಿಳಿದೋ ಕೆಲವು ಅಭ್ಯಾಸಗಳು ಅತಿಥಿ ಅಭ್ಯಾಗತರಂತೆ ಆಗಮಿಸುತ್ತವೆಯಲ್ಲಾ, ಅವೇ ಮುಂದೊಂದು ದಿನ ಖಾಯಂ ನಿವಾಸಿಗಳಾಗುತ್ತವೆ. ಅಂದವೋ, ಚಂದವೋ, ನಗುವೋ, ಅಳುವೋ, ಮೌನವೋ, ಮುಗಿಯದ ಹರಟೆಯೋ, ವರ್ಣವೋ, ಅವರ್ಣವೋ, ಬೇಕೋ, ಬೇಡವೋ, ಅಪರಿಚಿತವಾಗಿದ್ದು, ದೂರದ ಮೇಘಗಳ ಮಧ್ಯೆ, ಚಂದದ ನಗು ಬೀರುತ್ತಾ ನಿಂತ ಎಳೆ ಬಿಸಿಲಿನ ರಶ್ಮಿಯಂತೆ ಇಣುಕಿ ನೋಡಿ ನಂತರ, ಮಧ್ಯಾಹ್ನದ ಅರ್ಕನಂತೆ ನೆತ್ತಿಯ ಮೇಲೆಯೇ ಉಳಿದುಬಿಡುತ್ತವೆ ಕೆಲವು ಹವ್ಯಾಸಗಳು. ಬೇಕೆಂದು ಬರಮಾಡಿಕೊಳ್ಳಲು ಹವಣಿಸಿದ ಅಭ್ಯಾಸಗಳಲ್ಲಿ ಜೊತೆಗುಳಿವುದು ಹಲವಾದರೂ, ತಿಳಿಯದೇ ಹೃದಯಾಂತರಾಳದಿಂದ ಒಮ್ಮೆಲೇ ಹೊಮ್ಮಿದ ಶುದ್ಧ ಹವ್ಯಾಸಗಳು ಕೆಲವು. ಕೆಲವೆಂಬುದು ಒಲವಾಗುತ್ತವೆ, ಹಲವಾರು ಬಾರಿ.
ಕಂಡೂ ಕಾಣದೇ, ಹೆಸರೂ ತಿಳಿಯದ ಮೊಗ್ಗೊಂದು ಬಳ್ಳಿಯಲ್ಲಿಯೇ ಹೂವಾಗಿ ಸಾಯುವ ಮೊದಲು, ನಮ್ಮ ಕೈಯಲ್ಲಿದ್ದ ಫೋನಿನ ಕ್ಯಾಮೆರಾದಲ್ಲಿ ಸೆರೆಸಿಕ್ಕಿದಾಗ ಮೂಡುವ ಸಂಭ್ರಮ ಅನವರತವಾಗಿ, ನಂತರ ಗೀಳಾಗಿಬಿಡುತ್ತದೆ. ಪ್ರಕೃತಿಯ ಪ್ರತೀ ಸೊಬಗೂ ಸಹ ಇನ್ನಷ್ಟು ಕೌತುಕಮಯವಾಗುತ್ತದೆ. ಅಮ್ಮ ಸುಮ್ಮನೆ ಹಾಡುತ್ತಿದ್ದ “ಅಪನೀ ಆಂಖೊಂ ಕೆ ಸಮಂದರ್ ಮೇ” ಎಂಬ ಗಜಲ್, ನಮ್ಮಲ್ಲಿಯೂ ಉಳಿದುಬಿಡುತ್ತದೆ ಗೊತ್ತಿಲ್ಲದೇ. ಮತ್ತೊಂದು ದಿನದ ಸಂಜೆಯಲ್ಲಿ, ತಿಳಿಯದ ಊರಿನ ಕಡಲ ತಟದಲ್ಲಿ ಗಿಟಾರಿಗೊಂದು ಸಾಥು ಕೊಟ್ಟು, ಅದೇ ಹಾಡು ಏಕಾಂತದ ಸಂಗಾತಿಯಾಗಿ ನಮ್ಮಿಂದಲೂ ಗುನುಗುತ್ತದೆ. ಗಾಳಿಗೆ ಪುಟ ಹಾರುತ್ತಿದ್ದರೂ, ಇಷ್ಟಪಟ್ಟು ಓದುತ್ತಿದ್ದ ಬಾಲಮಂಗಳ ಕಣ್ಮುಂದೆ ನಲಿದಂತಾದಾಗ, ಉಪ್ಪರಿಗೆಯ ಕೊನೆಯ ಕೋಣೆಯಲ್ಲಿ ಭದ್ರವಾಗಿ ಕುಳಿತಿದ್ದ ಪುಸ್ತಕ ನಮ್ಮ ಜೋಳಿಗೆ ಸೇರುತ್ತದೆ, ನಂತರ ಹಲವು ಹೊತ್ತಿಗೆಗಳು ಹೆಗಲ ಭಾರವ ಕುಗ್ಗಿಸಲು ಸಹಚರಿಗಳಾಗಿ ಉಳಿಯುತ್ತವೆ. ಅಂದದ ಅಕ್ಷರ ಕಾಕಲಿಪಿಯಾಗಿದ್ದು ಯಾವಾಗ ಎಂಬ ಯೋಚನೆಯಿಂದಲೇ, ಮತ್ತೊಮ್ಮೆ ಗುಂಡಾಗಿ, ಚಂದವಾಗಿ ಬರೆಯುವ ಮನದಾಸೆಗೆ ‘ಕ್ಯಾಲಿಗ್ರಫಿ’ ಎಂಬ ಹೊಸ ಹವ್ಯಾಸ ಒಗ್ಗೂಡುತ್ತದೆ. ಪರಿಸರದ ಪ್ರತೀ ಭಾವವೂ ಜತನವಾಗಿ, ಜೊತೆಗುಳಿಯಬೇಕೆಂಬ ಮಧುರ ಭಾವಕ್ಕೆ, ಮೂಲೆಯಲ್ಲಿದ್ದ ಕುಂಚದ ಗೊಂಚಲು, ತಿದ್ದುಪಡಿಯ ತಕರಾರುಗಳೊಂದಿಗೆ ಜೊತೆಯಾಗಬಹುದು. ಅಡುಗೆ ಮನೆಯ ಏಲಕ್ಕಿ, ಲವಂಗದ ಮಸಾಲೆಯ ಘಮ ನಶೆಯ ಹಿಡಿಸಿ, ನಳಪಾಕವೆಂಬ ಮಗದೊಂದು ಹವ್ಯಾಸಕ್ಕೆ ನಾಂದಿಯಾಗಬಹುದು. ಹೂವಿನ ಪಕಳೆಗಳು ಪುಸ್ತಕದ ತುಂಬಾ ನಾನಾರೀತಿಯಲ್ಲಿ ಚಿತ್ರಿತವಾಗಬಹುದೂ ಸಹ. ಬರವಣಿಗೆಯೆಂಬ ಹುಚ್ಚು ಬೆಲ್ಲದಚ್ಚಿನಷ್ಟು ಅಚ್ಚುಮೆಚ್ಚಾಗಲು ಬಹಳ ದಿನದ ಸಾಂಗತ್ಯದ ಅನಿವಾರ್ಯತೆಯಿರದು. ಯೋಚನೆಗಳು, ನೋಡಿದ ಸನ್ನಿವೇಶಗಳು, ಓದಿದ ಸಂದರ್ಭಗಳು, ಮನ ಬಸಿದ ಭಾವನೆಗಳು ತಾನಾಗಿಯೇ ಪೋಣಿಸುವ ಅಕ್ಷರವಾಗುತ್ತದೆ, ಏಕಾಂತದ ದಿವ್ಯ ಸಾನ್ನಿಧ್ಯದಲ್ಲಿ. ಹೀಗೆ, ನೂರಾರು ಭಾವಗಳ ಸಮಾಗಮ ಸಾವಿರಾರು ರೀತಿಯಲ್ಲಿ ಪಕ್ವತೆಯ ಪರಿಪೂರ್ಣತೆಯನ್ನರಸಿ, ಸಾಂತ್ವನದ ಸಾನ್ನಿಧ್ಯದೊಂದಿಗೆ ನಮ್ಮಲ್ಲಿ ಉಳಿಯುತ್ತವೆ.
ಕೇವಲ ಧನಾತ್ಮಕ ಹವ್ಯಾಸಗಳನ್ನೇ ಉಲ್ಲೇಖಿಸಿದ್ದಕ್ಕೆ ಕಾರಣವಿಷ್ಟೇ; ಬದುಕು ದುಸ್ತರವಾದಾಗ ಸಂಯಮದ ಧನಾತ್ಮಕ ಅಭ್ಯಾಸಗಳು ಸಾಗರದಂತೆ ಹರಿಯಲಿ ಎಂಬುದು. ಪ್ರಾಯಶಃ, ಉಸಿರುಗಟ್ಟುವ, ಗಂಟಲ ಸೆರೆಯುಬ್ಬಿ ಬರುವ, ನಿರಾಶೆಯ ಹತಾಶೆಯಲ್ಲಿ, ಹೇಳಲಾಗದ ಅಸಮಾಧಾನಗಳಂತಹ ಸಂದರ್ಭದಲ್ಲಿ ಜೊತೆಯಾಗುವ ಸ್ನೇಹಜೀವಿಗಳು ಹವ್ಯಾಸಗಳೆಂಬುದಾಗಿರಲಿ.
ಇದೆಲ್ಲದರ ಮಧ್ಯೆಯೂ, ಅಸ್ತಮಿಸುವ ಸೂರ್ಯನಂತೆ, ಕೆಲವು ಪ್ರಿಯ ಹವ್ಯಾಸಗಳೂ ಸಹ ತಿಳಿದೋ, ತಿಳಿಯದೆಯೋ ಅಂಬರದಂಚಿನಲ್ಲಿ ಮುಳುಗಿಬಿಡುತ್ತವೆ. ಬಿರಿದ ಮಲ್ಲಿಗೆಯ ಕಂಪು ಊರೆಲ್ಲಾ ಪಸರಿಸಿ ದುಂಬಿಯೊಂದಕ್ಕೆ ಮಕರಂದ ನೀಡಿದರೂ, ಕಾನನದಲ್ಲರಳುವ ಕಂಪ ಬೀರದ ಸುಮವೂ ಸಹ ಮೌನದಿ ಬಿರಿದು, ಜೇನಿಗೊಂದು ಮಧುಹನಿಯ ನೀಡುವಲ್ಲಿ ವಿಫಲವಾಗುವುದಿಲ್ಲವಲ್ಲಾ? ಅಂತೆಯೇ, ಕೆಲವು ಅಭ್ಯಾಸಗಳೂ ಸಹ. ಇರುವ ನೂರಿನಲ್ಲಿ ಕೊನೆಗೊಮ್ಮೆ ನಾನಾ ಕಾರಣಗಳಿಂದ ಉಳಿವುದು ಹತ್ತಾದರೂ, ಅಳಿದು ಉಳಿದ ಚೂರಿನಲ್ಲಿ, ಕಂಡೂ ಕಾಣದಂತೆ ಅಡಗಿ ಅಣಕವಾಡುವ, ಕಾಣದೆಯೂ ಕಂಡಂತೆ ಭಾಸವಾಗುವ ಮರೀಚಿಕೆಯ ನಮ್ಮತನವನ್ನು ಕಾಣಲು ತವಕಿಸುತ್ತೇವೆ, ಶರಧಿಯಲೆಗಳಲ್ಲಿ ಚಂದ್ರಬಿಂಬವ ಹುಡುಕಿದಂತೆ.
ಕೊನೆಗೊಮ್ಮೆ ನೆನಪಾದುದಿಷ್ಟೇ “ಅಭಿ ನ ಜಾವೋ ಛೋಡಕರ್, ಯೆ ದಿಲ್ ಅಭಿ ಭರಾ ನಹಿ “
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ