- ಹೆಂಡತಿಯೊಬ್ಬಳು ಮನದೊಳಗಿದ್ದರೆ - ಅಕ್ಟೋಬರ್ 10, 2020
“ಚೌದವೀ ಕಾ ಚಾಂದ್ ಹೋ” ಎಂದೆ.
“ತಿಂಗಳಿಗೊಮ್ಮೆ ನನ್ನ ಕಡೆ ನೋಡ್ತೀರಿ. ಬೇರೆ ದಿವಸ ಗಮನ ಇರಲ್ಲ ಅಂತಾಯ್ತು” ಎಂದು ಸಿಡುಕಿದಳು. ಚತುರ್ದಶಿಯ ಚಂದ್ರ ತಿಂಗಳಿಗೆ ಒಂದೇ ಸರತಿ ಕಾಣಿಸಿಕೊಳ್ಳುವುದಲ್ಲವೆ!
“ಏಕ್ ರಾತ್ ಮೆ ದೋ ದೋ ಚಾಂದ್ ಖಿಲೇ” ಎಂದೆ.
“ಕನ್ನಡಕ ಬದಲಾಯಿಸಿ” ಎಂದಳು.
‘ಕೆಂಪು ರೋಜಾ ಮೊಗದವಳೆ, ಕೆಂಡಸಂಪಿಗೆ ತುಟಿಯವಳೆ’ ಎಂದೆ.
‘ಓಹ್! ರೌಜ್ ಪುಡಿ, ಲಿಪ್ಸ್ಟಿಕ್ಕು ಜಾಸ್ತಿ ಆಗಿರ್ಬೇಕು. ಇರಿ ಒರೆಸ್ಕೊಂಡ್ಬರ್ತೀನಿ’ ಎಂದಳು.
ಮುಂಚೆ ಹೀಗಿರಲಿಲ್ಲ. ಮದುವೆಗೆ ಮುಂಚಿನ ದಿನಗಳಲ್ಲಿ ಉದ್ಯಾನದ ಎರಡು ಮರಗಳ ಸಂದಿಯಲ್ಲಿ ಕಿವಿಯ ಬಳಿ ಬಾಯೊಡ್ಡಿ “ಜೋ ಭೀ ಹೋ ತುಮ್ ಖುದಾ ಕೆ ಕಸಮ್ ಲಾಜವಾಬ್ ಹೋ” ಎಂದರೆ ಅವಳಿಗಿಂತ ಸುಂದರಿ ಯಾರೂ ಇಲ್ಲವೆಂದು ನಿಜಕ್ಕೂ ನಂಬುತ್ತಿದ್ದಳು. ಈಗ ಅದೇ ಹಾಡಿಗೆ ಅವಳದು “ನಮ್ಮಪ್ಪನ ಜೋಬಿ (ಜೇಬು) ನೋಡಿ ನೀವು ಹಾಗೆ ಹೇಳಿದ್ದೂಂತ ಚೆನ್ನಾಗಿ ಅರ್ಥವಾಗಿದೆ” ಎಂಬ ವಕೀಲರನ್ನೂ ಬೆಚ್ಚಿಸುವಂತಹ ಐಚಿತಿ-ಜವಾಬ್.
ಆಹಾ! ಎಂತಹ ದಿನಗಳವು! ‘ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೆ ನಾನಾಗ’ ಎನ್ನುವುದು ನನಗೆ ನಿಜಕ್ಕೂ ಅಪ್ಲೈ ಆಗುತ್ತಿತ್ತು. ಶಾಪಿಂಗ್ ಮಾಲ್ನಲ್ಲಿ ಅವಳು ಒಳಗೆ, ನಾನು ಹೊರಗೆ. ಅಲ್ಲಿದ್ದ ಮಾರಮ್ಮ, ಮಾರಪ್ಪಗಳೆಲ್ಲ (ಸೇಲ್ಸ್ಗರ್ಲ್, ಸೇಲ್ಸ್ಬಾಯ್ಗಳು) ಒಂದುಗೂಡಿ ಕಪಾಟಿನಿಂದ ಸೀರೆಗಳನ್ನು ಸರಸರನೆ ಸೆಳೆಸೆಳೆದು ಇವಳ ಮುಂದೆ ಹಾಕುತ್ತಾ….
“ಪಲ್ಲು ಇದೆ ಕೋ; ಬಾರ್ಡರ್ ಇದೆ ಕೋ; ಮ್ಯಾಚಿಂಗಿನ ಬ್ಲೌಸ್ ಪೀಸು ಇದೆ ಕೋ; ಓ ಗಿರಾಕಿಣಿ ನೀನಿದೆಲ್ಲವ ನೋಡು ಸಂತಸದಿಂದಲಿ”
ಎನ್ನುತ್ತಾ ಒಂದು ಮಿನಿ ‘ಸ್ಯಾರಿಹಿಲ್’ ನಿರ್ಮಿಸಿ ಬಿಡುತ್ತಿದ್ದರು. ಇವಳೋ ಸ್ವಯಂವರದಲ್ಲಿ ಕರ್ಣನನ್ನು ದ್ರೌಪದಿ ನೋಡಿದಷ್ಟೇ ನಿರ್ಲಕ್ಷ್ಯದಿಂದ ಅವುಗಳನ್ನು ನೋಡಿ ಮುನ್ನಡೆದುಬಿಡುತ್ತಿದ್ದಳು. ನಿಜಕ್ಕೂ ಇವಳ ಸೆಲೆಕ್ಷನ್ ಮುಗಿಯುವಷ್ಟರ ಹೊತ್ತಿಗೆ ಆ ಬಡಪಾಯಿಗಳು ದ್ರೌಪದಿಗೆ ಕೃಷ್ಣ ಕೊಟ್ಟ ಎಲಾಸ್ಟಿಕ್ ಸೀರೆಯನ್ನು ಎಳೆದೆಳೆದು ಸುಸ್ತಾಗಿ ಕುಕ್ಕರಿಸಿದ ದುಶ್ಯಾಸನನ ಮಟ್ಟಕ್ಕೆ ಕುಸಿದಿರುತ್ತಿದ್ದರು.
ಆ ದೃಶ್ಯಾಸನವನ್ನು ಕಂಡು ಮರುಕ ಹುಟ್ಟಿ ಇವಳು ಆ ಗುಡ್ಡದ ಕೆಳಗಡೆ ಇಣುಕುತ್ತಿರುವ ಸೀರೆಯನ್ನು ಮತ್ತೆ ತೋರಿಸಿರೆಂದು ಕೇಳುವ ಮೂಲಕ ಇಡೀ ಗುಡ್ಡವನ್ನು ಅಲ್ಲೋಲಕಲ್ಲೋಲವಾಗಿಸಿ ‘ಪುನರಪಿ ದೃಶ್ಯಂ ಪುನರಪಿ ಸ್ಪರ್ಶಂ ಪುನರಪಿ ದರ್ಪಣ ಪುರತಃ ಪ್ರತಿಷ್ಠಂ’ ಆಗುತ್ತಾ, ಕಡೆಗೂ ಒಂದಿಷ್ಟು ಸೀರೆಗಳನ್ನು ಖರೀದಿ ಮಾಡಿ, ಆ ಮಿನಿಗುಡ್ಡವನ್ನು ಅಲ್ಲೇ ಬಿಟ್ಟು ನನ್ನ ಮುಂದೆ ನಿಂತು ನಗುತ್ತಿದ್ದಳು. ಆಗ ತಲೆಯಲ್ಲಿ ಗಿರಕಿ ಹೊಡೆಯಲು ಆರಂಭಿಸುತ್ತಿದ್ದ ‘ನೀ ಬಂದು ನಿಂತಾಗ…’ ಹಾಡು ಆ ವಸ್ತ್ರಗಳನ್ನು ಹೊತ್ತು ಮನೆಗೆ ತರುವಷ್ಟರಲ್ಲಿ ‘ಸೋತೆ ನಾನಾಗ’ ಮಟ್ಟಕ್ಕೆ ತಲುಪಿರುತ್ತಿತ್ತು.
ಅದು ಅಂದಿನ ಕಥೆ. ಈಗ ನಾನು ಹಾಡಿ ಹೊಗಳಿದ್ದಕ್ಕೆಲ್ಲ ಮೇಲ್ಕಾಣಿಸಿದಂತಹ ಪ್ರತಿಕ್ರಿಯೆಗಳೇ.
ಇಂತಿಪ್ಪ ಸಮಯದೊಳ್ ಮೊನ್ನೆ ಅವಳ ತಮ್ಮ ಉರುಫ್ ನನ್ನ ಭಾವಮೈದ ಕಿಟ್ಟಿ ವಕ್ಕರಿಸಿದ.
‘ಹುಷಾರಾಗಿದ್ದೀರಾ ಭಾವ?’
‘ನನಗೇನಾಗಿದೆಯೋ?’
‘ಮದುವೆ ಆಗಿ ಹತ್ತು ವರ್ಷ ಆದರೂ ಅಕ್ಕನ್ನ ಹೊಗಳ್ತಿದ್ದೀರಂತೆ?’
‘ತಪ್ಪೇನಿದೆ?’
‘ಪರಂಪರೆಗೆ ವಿರುದ್ಧ ಹೋಗುತ್ತಿದ್ದೀರಲ್ಲಾಂತ ಯೋಚನೆ ಆಗ್ತಿದೆ.’
‘ಯಾವ ಪರಂಪರೆಯೋ?’
‘ಗಂಡಸರು ಬೇರೆ ಹೆಂಗಸರನ್ನ ಇಷ್ಟ ಪಡೋದು ನಮ್ಮ ಪರಂಪರೆ ಭಾವ. ಸ್ವಂತ ಹೆಂಡತೀನ ಅವಳೆದುರಿಗಷ್ಟೇ ಅಲ್ಲದೆ ಬೇರೆಯವರೆದುರೂ ಹೊಗಳಿದ್ದೀರೀಂತ ಸುದ್ದಿ ಬಂತು. ಇದು ನಮ್ಮಲ್ಲೆಲ್ಲೂ ಕಂಡುಬಂದಿಲ್ಲ’
‘ನಿನ್ನ ವಾದವನ್ನು ಪುಷ್ಟೀಕರಿಸುವಂಥವನಾಗು’
‘ಪುರಾಣಕಾಲದೊಳ್ ಇಂದ್ರನಿಗೆ ಅತಿಲೋಕಸುಂದರಿಯಾದ ಶಚಿ ಸತಿಯಾಗಿದ್ದರೂ ಅಪ್ಸರೆಯರ ಮೇಲೆ ಕಣ್ಣು. ಅಹಲ್ಯೆಯ ಮೇಲೆ ಮನಸ್ಸು’
‘ಅದು ಸುರಲೋಕದ್ದಾಯಿತು. ದೇವತೆಗಳು ಏನೇ ಮಾಡಿದರೂ ಅದರ ವಿರುದ್ಧ ಮಾತನಾಡಿದರೆ ದೇವ-ತೆಗಳು ಆಗುವುದರಿಂದ ಸರ್ವಂ ಸಮ್ಮತಂ’ ಎಂದೆ.
‘ರಾವಣನಿಗೆ ಒಂದು ಕಾಲದಲ್ಲಿ ಅಪ್ಸರೆ ಆಗಿದ್ದವಳೇ ಹೆಂಡತಿಯಾದರೂ ಪಾರ್ವತಿ, ವೇದವತಿ, ಸೀತೆಯರ ಮೇಲೆಯೇ ಕಣ್ಣು’
‘ರಾಕ್ಷಸರ ವಿಷಯ ಮನುಷ್ಯರಿಗೆ ಅನ್ವಯವಾಗತಕ್ಕದ್ದಲ್ಲ. ಅದೇನಿದ್ದರೂ ಪ್ರಾಣಿಗಳಿಗೆ, ದೊಡ್ಡಕುಳಗಳಿಗೆ ಅನ್ವಯವಾಗಬಹುದಷ್ಟೆ’
‘ಅಪ್ರತಿಮ ಸುಂದರಿ ದ್ರೌಪದಿಯನ್ನು ಗೆದ್ದ ಅರ್ಜುನನಿಗೆ ಸುಭದ್ರೆಯ, ಚಿತ್ರಾಂಗದೆ, ಉಲೂಪಿಯರ ಮೇಲೆ ಮೋಹ’
‘ಹೆಂಡತಿಗೇ ಐವರು ಪತಿಯರಿರಬೇಕಾದರೆ ಗಂಡನಿಗೆ ಒನ್ ಬೈ ಫೈವ್ ಹೆಂಡತಿ ಇರುವುದು ಮನಸ್ಸಿಗೆ ಪಿಚ್ಚೆನಿಸಿರಬೇಕು. ಅಲ್ಲದೆ ಏಳು ಗಂಡರ ಗಂಡ ಅನಿಸಿಕೊಂಡವನು ಮೂರ್ನಾಲ್ಕು ಹೆಣ್ಣುಗಳ ಗಂಡನಾದರೂ ಆಗಬೇಕೆಂಬ ಆಸೆ ಇದ್ದಿರಬಹುದು’
‘ಕಲಿಯುಗಕ್ಕೇ ಬರೋಣ ಭಾವ. ಕಾಳಿದಾಸ ಉಪಮೆಗಳನ್ನು ಬಳಸಿ ವರ್ಣಿಸಿದ್ದು ಯಾವುದೋ ಪತಿಯ ಯಾವುದೋ ಸತಿಯನ್ನ ಅಥವಾ ಯಾವುದೋ ನಲ್ಲನ ಯಾವುದೋ ನಲ್ಲೆಯನ್ನ. ಸ್ವಂತ ಹೆಂಡತಿಯ ಸುದ್ದಿ ಎಲ್ಲಾದರೂ ಬಂದಿದೆಯಾ?
‘ರಾಜನ ಆಸ್ಥಾನದಲ್ಲಿದ್ದನಲ್ಲೋ, ಈಗಿನ ವರ್ಕ್ ಫ್ರಂ ಹೋಂನವರ ತರಹವೇ ಮನೆಯವಳನ್ನು ನೋಡಲು, ಮಾತನಾಡಲು ಬಿಡುವಿತ್ತೋ ಇಲ್ಲವೋ…. ಆದ್ದರಿಂದ ಸ್ಕ್ರೀನ್ ಮೇಲೆ…. ಐ ಮೀನ್ ದರ್ಬಾರಲ್ಲೋ ಬೀದೀಲೋ ಕಂಡವರನ್ನ ವರ್ಣಿಸಿರಬಹುದು’
‘ಅದೂ ಬಿಡಿ. ಕವಿ ಡುಂಡಿರಾಜರೇ ‘ನಿಮ್ಮ ಕವನಕ್ಕೆ ಸ್ಫೂರ್ತಿ ಯಾರು? ನಿಮ್ಮ ಮಡದಿಯೆ?’ ಎಂದು ಕೇಳಿದಾಗ ‘ಹೌದು. ನಿಮ್ಮ ಮಡದಿಯೆ’ ಎಂದಿದ್ದಾರೆ. ಸ್ವಂತ ಹೆಂಡತಿಯನ್ನು ಹೊಗಳುವುದೂ… ಛೆ! ಅದರಲ್ಲೂ… ಅಕ್ಕನನ್ನು ನೀವು ಚೌದವೀ ಕಾ ಚಾಂದ್ ಅಂದ್ರಂತೆ?’
‘ಏನು ತಪ್ಪು?’
‘ಫಿಲ್ಮ್ ನೋಡಿದ್ರೆ ಹಾಗೆ ಹೇಳ್ತಿರಲಿಲ್ಲ. ಅದನ್ನ ಗಂಡನ ಫ್ರೆಂಡು ಹೆಂಡತಿಗೆ ಹೇಳಿರೋದು. ಸ್ವಂತ ಗಂಡ ಸ್ವಂತ ಹೆಂಡತಿಗೆ ಹೇಳೋ ಹಾಡಲ್ಲ ಅದು’
ಕಿಟ್ಟನನ್ನು ಹೆಂಡತಿಗೆ ಕೇಳಿಸದಷ್ಟು ದೂರ ಕರೆದುಕೊಂಡುಹೋಗಿ ‘ನನಗೆ ಏನೇನೂ ಆಗಿಲ್ಲವೋ. ಇಂದಿನ ದಿನಾಂಕವೇ ನಾನು ಹಾಗೆ ಆಡಲು ಕಾರಣ’ ಎಂದೆ.
‘ಏನು ಇವತ್ತಿನ ಸ್ಪೆಷಲ್?’
‘ಇಂದು ವಿಶ್ವ ಹೆಂಡತಿಯರನ್ನು ಶ್ಲಾಘಿಸುವ ದಿನ – ವೈಫ್ ಅಪ್ರಿಸಿಯೇಷನ್ ಡೇ’
‘ನಾಳೆಯಿಂದ?’
‘ಪ್ರೊಫೆಸರ್ ಅ.ರಾ.ಮಿತ್ರರ ಕಾವ್ಯದ ದಾರಿ’
‘ಏನದು?’
‘ಸುಂದರಿ ಸುಮಧುರೆ ಶಿಕ್ಷಿತೆ ಸಂಪನ್ನೆ ಎಂದರೆ ಅವಳೇ ಪರಪತ್ನಿ!’
ಹೆಚ್ಚಿನ ಬರಹಗಳಿಗಾಗಿ
ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ
ನೋ ಪಾರ್ಕಿಂಗ್
ಪುತಿನ ರ ವಸಂತ ಚಂದನ