- ಡಾ. ಅರವಿಂದ ಮಾಲಗತ್ತಿ ಬರೆದ ಹೊಸ ನಾಟಕದ ಕುರಿತು - ಅಕ್ಟೋಬರ್ 11, 2022
- ಸಾವಿತ್ರಿಬಾಯಿ ಫುಲೆ : ಕ್ರಾಂತಿಯ ದೀಪಮಾಲೆ - ಸೆಪ್ಟೆಂಬರ್ 8, 2022
- ಬರಗೂರರ ´ಪರಂಪರೆಯೊಂದಿಗೆ ಪಿಸುಮಾತು´ - ಆಗಸ್ಟ್ 23, 2022
ಹೊಸ ಬ್ರಾಹ್ಮಣ ಸನ್ಯಾಸಿ: ದೇವರು ಮತ್ತು ಧಾರ್ಮಿಕ ವ್ಯವಸ್ಥೆಯ ತೀಕ್ಷ್ಣ ವಿಶ್ಲೇಷಣೆ
ಹೊಸ ಬ್ರಾಹ್ಮಣ ಸನ್ಯಾಸಿ
ಲೇ: ಡಾ. ಅರವಿಂದ ಮಾಲಗತ್ತಿ
ಪುಟ:108 ಬೆಲೆ: 90/-
ಪ್ರಕಾಶನ: ಲಡಾಯಿ ಪ್ರಕಾಶನ ಗದಗ
ಡಾ. ಅರವಿಂದ ಮಾಲಗತ್ತಿ ಸಮಕಾಲೀನ ಕನ್ನಡ ಸಾಹಿತ್ಯದ ಶ್ರೇಷ್ಠ ಕವಿ, ಸಂಶೋಧಕ,ಕಾದಂಬರಿಕಾರ,ವಿಮರ್ಶಕ ಮತ್ತು ಸಂಸ್ಕೃತಿ ಚಿಂತಕರು. ಪುರಾಣ, ಇತಿಹಾಸ, ಜಾನಪದ ಜಗತ್ತುಗಳ ಜೊತೆಗೆ ಪರಸ್ಪರ ಮುಖಾಮುಖಿಯಾಗುವುದರ ಮೂಲಕ ಅರವಿಂದ ಮಾಲಗತ್ತಿಯವರು ತಮ್ಮ ಬಹುಪಾಲು ಕೃತಿಗಳ ವಿನ್ಯಾಸವನ್ನು ರೂಪಿಸಿಕೊಳ್ಳುತ್ತಾ ಬಂದಿದ್ದಾರೆ.
ಪ್ರಸ್ತುತ ‘ಹೊಸ ಬ್ರಾಹ್ಮಣ ಸನ್ಯಾಸಿ’ ಡಾ. ಅರವಿಂದ ಮಾಲಗತ್ತಿಯವರ ಹೊಸ ನಾಟಕ. ಇದು ಒಂಬತ್ತು ದೃಶ್ಯಗಳನ್ನು ಒಳಗೊಂಡಿದೆ. ಇದು ಐತಿಹಾಸಿಕ ಕಥಾವಸ್ತುವನ್ನು ಒಳಗೊಂಡಿದೆ. ಈ ನಾಟಕ ಇಂಗ್ಲಿಷ್ ಭಾಷೆಗೆ ‘ಪಂಡೋರಾ’ ಎಂಬ ಹೆಸರಿನಲ್ಲಿ ಅನುವಾದವಾಗಿದೆ. ಈ ನಾಟಕದ ಕಥಾವಸ್ತು ಸುಮಾರು 1645 ರಿಂದ 1685ರ ಅವಧಿಗೆ ಸಂಬಂಧಿಸಿದ್ದಾಗಿದೆ. ಅಂದರೆ,ಕ್ರಿಯೆಯ ಕಾಲ ಮೈಸೂರಿನ ಅರಸರಾದ ಚಿಕ್ಕದೇವರಾಜ ಒಡೆಯ ಕಾಲ. ಅರವಿಂದ ಮಾಲಗತ್ತಿಯವರು ಈ ನಾಟಕ ರಚನೆಗಾಗಿ ಬೇರೆ ಬೇರೆ ಕಡೆ ತಿರುಗಾಡಿ, ಆಳವಾದ ಅಧ್ಯಯನ ಮಾಡಿ, ಸಾಮಗ್ರಿ ಸಂಗ್ರಹಿಸುವ ಕಾರ್ಯವನ್ನು ಮಾಡಿದ್ದಾರೆ. ನಾಟಕಕಾರರು ತಾವು ಆಯ್ಕೆಮಾಡಿಕೊಂಡ ಯುಗದ ಬದುಕನ್ನು ಸಮೃದ್ಧವಾದ ವಿವರಗಳೊಂದಿಗೆ ಪುನರ್‍ಸೃಷ್ಟಿಸಿದ್ದಾರೆ. ಈ ನಾಟಕದಲ್ಲಿ ಉಲ್ಲೇಖವಾಗಿರುವ ದೇವರು, ಧರ್ಮ, ಅರ್ಥ, ಕಾಮ, ಮೋಕ್ಷ, ರಾಜಕೀಯ, ಮತಾಂತರ, ರೈತರ ದಂಗೆ, ಬರಗಾಲ,ಹಿಂಸೆಯ ಸಂಕೀರ್ಣತೆಯ ವಿವೇಚನೆಯನ್ನು ಮಾಡಲಾಗಿದೆ. ಹಿಂದೂ, ಮುಸ್ಲಿಮ್, ಶೈವ, ವೈಷ್ಣವ, ಬೌದ್ಧ, ಜೈನ ಮತ್ತು ಕ್ರೈಸ್ತ ಧರ್ಮಗಳೊಂದಿಗೆ ಬದುಕಿನ ವಿಕೃತಿಯ ಹಲವು ಮುಖಗಳನ್ನು ಈ ನಾಟಕ ಸಮರ್ಥವಾಗಿ ಕಾಣಿಸುತ್ತದೆ. ಧಾರ್ಮಿಕ ಮತ್ತು ರಾಜಕೀಯ ಅಂಧನಿಷ್ಠರನ್ನು ನಾಟಕ ಹಾಸ್ಯಮಾಡುತ್ತದೆ. ಅಲ್ಲದೆ ವಿವೇಚನೆಯ ಶ್ರೇಷ್ಠತೆಯನ್ನು ಎತ್ತಿಹಿಡಿಯುತ್ತದೆ. ಧರ್ಮಗಳ ಸಂಘರ್ಷ, ಮತಾಂತರದ ಅವಾಂತರ, ಹುಟ್ಟು-ಸಾವುಗಳ ವಿಕೃತಗತಿಯನ್ನು ಹೇಳಲು ಹೊರಟಿರುವ ಈ ನಾಟಕದಲ್ಲಿ ಎತ್ತಿಕೊಂಡಿರುವ ವಸ್ತುವಿಷಯಗಳು ಅರವಿಂದ ಮಾಲಗತ್ತಿಯವರ ಕೈಯಲ್ಲಿ ಹದವಾಗಿ ಮೂಡಿ ನಾಟಕಕ್ಕೆ ಸೂಕ್ತವಾದ ಆವರಣ ನಿರ್ಮಿಸಿವೆ. ಐತಿಹಾಸಿಕ ಘಟನೆಗಳನ್ನು ಕ್ರಮ ಕ್ರಮವಾಗಿ ಹಾಗೂ ವಿವರಣಾತ್ಮಕವಾಗಿ ಕಟ್ಟಿಕೊಡುವ ಈ ನಾಟಕದ ಕಥನಕ್ರಮ ಆಕರ್ಷಕವಾಗಿದೆ.
ನಾಟಕದ ಕಥೆ ನಡೆಯುವುದು ಮಾರ್ಟಳ್ಳಿಯಲ್ಲಿ. ಆಗಾಗ ಸುತ್ತಣ ಒಂದೆರಡು ಹಳ್ಳಿಗಳಿಗೆ ಹಾಗೂ ಮೈಸೂರಿಗೂ ದಾಟುವುದೂ ಉಂಟು. ಆದರೆ ಕೇಂದ್ರ ಮಾತ್ರ ಮಾರ್ಟಳ್ಳಿ. ನಾಟಕಕಾರರು ನಾಟಕದ ಮುಖ್ಯ ಪಾತ್ರಗಳ ಮೂಲಕವೇ ಅದರ ಕಥೆ ಹೇಳಿಸಿದ್ದು ಮತ್ತು ಬೆಳೆಸಿದ್ದು ಸಮಂಜಸವಾಗಿದೆ.
ಭೂತಕಾಲದ ಘಟನೆಗಳು ಮತ್ತು ವರ್ತಮಾನದ ಸಂಗತಿಗಳು ಒಂದರೊಡನೊಂದು ಮೇಳೈಸಿರುವ ‘ಹೊಸ ಬ್ರಾಹ್ಮಣ ಸನ್ಯಾಸಿ’ ನಾಟಕ ಹಲವು ಕಾರಣಗಳಿಂದ ಮುಖ್ಯವಾಗುತ್ತದೆ. “ಹದಿನೇಳನೆಯ ಶತಮಾನದ ದೇವರು-ಧಾರ್ಮಿಕ ವ್ಯವಸ್ಥೆಯ ಕುರಿತು ಬರೆಯುತ್ತಾ ಅರವಿಂದ ಮಾಲಗತ್ತಿಯವರು ಇಪ್ಪತ್ತೊಂದನೆಯ ಶತಮಾನದ ದೇವರು-ಧರ್ಮಗಳ ಸಂಘರ್ಷಗಳಿಗೂ ಏಕಕಾಲಕ್ಕೆ ಸ್ಪಂದಿಸುತ್ತಿದ್ದಾರೆ” ಎನ್ನಿಸುತ್ತದೆ. ಆದ್ದರಿಂದ ಈ ನಾಟಕ ಭಾರತದ ಸಮಕಾಲೀನ ಸ್ಥಿತಿಗೆ ಪ್ರಸ್ತುತವೆನಿಸುತ್ತದೆ. ದೇಶದ ರಾಜಕೀಯದಲ್ಲಿ ಧರ್ಮ ಪ್ರವೇಶಿಸಿ, ಸಂಯಮ ಮತ್ತು ವಿವೇಚನೆಗಳು ಹಿಂದೆ ಸರಿದರೆ ಆಗುವ ಆತಂಕ,ತಳಮಳ, ಸಂಘರ್ಷ-ಮೊದಲಾದವುಗಳ ಕುರಿತು ಕಲಾತ್ಮಕ ಎಚ್ಚರಿಕೆ ಇಲ್ಲಿರುವುದು ಗಮನಾರ್ಹ. ಇಂದು ದೇವರು, ಧರ್ಮ, ಸಂಸ್ಕೃತಿ, ಆಚರಣೆಗಳು ತಮ್ಮ ಮೂಲ ಆಶಯಗಳನ್ನು ಕಳೆದುಕೊಂಡು ಜಾಗತೀಕರಣದ ಪ್ರಭಾವಲಯದಲ್ಲಿ ವ್ಯಾವಹಾರಿಕಗೊಳ್ಳುತ್ತಿರುವುದನ್ನು ನಾಟಕ ಸಮರ್ಥವಾಗಿ ಚಿತ್ರಿಸುತ್ತದೆ. ಹಾಗೆಯೇ ಜಡತ್ವದ ವ್ಯವಸ್ಥೆಯಲ್ಲಿ ನಡೆಯುವ ಮತಾಂತರದ ಸಂರ್ಘವನ್ನು ಕಾಣಿಸುತ್ತದೆ. ವೀರಶೈವ, ವೈದಿಕ,ಜೈನ,ಬೌದ್ಧ-ಹೀಗೆ ಬೇರೆ ಬೇರೆ ಮತ-ಧರ್ಮಗಳೆಲ್ಲ ಅನೇಕ ಕಾರಣಗಳಿಗೆ ಸಂಘರ್ಷಕ್ಕೆ ಇಳಿಯುತ್ತವೆ. ಜೊತೆಗೆ ಅರಸು ಮನೆತನದ ಆರ್ಥಿಕ ಮತ್ತು ಅಧಿಕಾರದ ಚಿಂತನೆಗಳು ಧರ್ಮದೊಂದಿಗೆ ಬೆರೆತು ಸಂಘರ್ಷ ಮತ್ತು ದಂಗೆಗೆ ಕಾರಣವಾಗಿ ‘ಬಸವಪುರವೆ’ ನಾಶವಾಗುವ ಸ್ಥಿತಿಯನ್ನು ತಲುಪುತ್ತದೆ.
ಶತಮಾನಗಳ ಬರ್ಬರ ಹಿಂಸೆ, ಕೊಲೆ, ಸುಲಿಗೆ, ಅನ್ಯಾಯ, ಭ್ರಮೆ, ಭ್ರಷ್ಟಾಚಾರ, ಅತ್ಯಾಚಾರ, ಹಸಿ ಸುಳ್ಳುಗಳ ರಾಶಿ ಈಗ ಸಂತೆ ಬೀದಿಗಳಲ್ಲಿ ಮಾರಾಟಕ್ಕೆ ನಿಂತಿವೆ; ಕೊಳ್ಳುವ ಗಿರಾಕಿಗಳಿಗಾಗಿ ಕಾಯುತ್ತಿವೆ. ಇದಕ್ಕೆಲ್ಲಾ ಕಾಲವೇ ಉತ್ತರಿಸಬೇಕು. ಒಂದು ಕಾಲದಲ್ಲಿ ಮನುಷ್ಯನನ್ನು ಹಿಡಿದು ಕೂಡಿಸುತ್ತಿದ್ದ ದೇವರು,ದೇವಸ್ಥಾನ ಮತ್ತು ಗುರು, ಇಂದು ಮನುಷ್ಯರನ್ನು ಒಡೆಯುವ ಸ್ಫೋಟಕಗಳಂತೆ ಬಳಕೆಯಾಗುತ್ತಿದೆ. ಮಠ, ಮಂದಿರ, ಮಸೀದಿ, ಚರ್ಚಗಳನ್ನೆಲ್ಲ ಒಡೆದು ಹಾಕುವ ಹೀನ ಸಂಸ್ಕøತಿ ನಮ್ಮಲ್ಲಿ ಹುಟ್ಟುತ್ತಿದೆ. ಧರ್ಮ ಮಾನವ ಸೃಷ್ಟಿ. ಆದ್ದರಿಂದ ಯಾವ ಧರ್ಮವೂ ಕೂಡ ಪರಿಪೂರ್ಣವಲ್ಲ. ಧರ್ಮ ಮತ್ತು ರಾಜಕಾರಣಗಳೆರಡೂ ಒಂದೇ ವಿದ್ಯಮಾನದ ಎರಡು ಮುಖಗಳು. ಆದರೆ ಸಮಕಾಲೀನ ಬಹು ದೊಡ್ಡ ದುರಂತವೆಂದರೆ ಸಮಾಜದ ಪ್ರಗತಿಯಲ್ಲಿ ರಚನಾತ್ಮಕ ಪಾತ್ರ ವಹಿಸಬೇಕಾಗಿದ್ದ ಧರ್ಮ ಮತ್ತು ರಾಜಕಾರಣ ಇವೆರಡೂ ಭ್ರಷ್ಟಗೊಂಡಿರುವುದು. ಸಮಾಜ ಸುಧಾರಕರಾಗಬೇಕಾಗಿದ್ದ ಮಠಾಧೀಶರು ರಾಜಕಾರಣಗಳೊಂದಿಗೆ ಸೇರಿ ಅತ್ಯಂತ ಕೆಟ್ಟ ಜಾತಿವಾದಿಗಳಾಗಿದ್ದಾರೆ. ಸನ್ಯಾಸಿಗಳಲ್ಲೂ ಸುಳ್ಳು ಸನ್ಯಾಸಿಗಳಿದ್ದಾರೆ. ಜಾತಿ,ಮತಗಳನ್ನು ಓಲೈಸುವ ರಾಜಕಾರಣ ಮಿತಿಮೀರಿದೆ.
ದೇವರು,ಧರ್ಮ, ನಂಬಿಕೆ, ಸಂಸ್ಕೃತಿ ಮತ್ತು ಪರಂಪರೆಯ ಹೆಸರಿನಲ್ಲಿ ವರ್ತಮಾನದಲ್ಲಿ ನಡೆಯುತ್ತಿರುವ ಧಾರ್ಮಿಕ ಉಗ್ರವಾದ ಈಗ ಒಂದು ವರ್ಗ, ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ನಿತ್ಯ ನೂರಾರು ಕೊಲೆ, ನೋವುಗಳು ಸಂಭವಿಸುತ್ತಿವೆ. ಜಾತಿ, ಮತ, ಧರ್ಮಗಳ ತಾಂಡವ ನೃತ್ಯ ಆರಂಭವಾಗಿದೆ. ಭೂಮಿಯೇ ರಕ್ತದಾಹದಿಂದ ಬಾಯಿತೆರೆದು ನಿಂತಂತೆ ಕಾಣುತ್ತಿದೆ. ಮತಾಂಧತೆ ಈಗ ಹಿಂಸೆಯನ್ನು ಎಲ್ಲ ಕಡೆಗೆ ಹಬ್ಬಿಸಿದೆ. ಮನುಷ್ಯ ಜೀವಗಳಿಗೆ ಬೆಲೆ ಇಲ್ಲದಾಗಿದೆ. ಪ್ರತಿನಿತ್ಯ ನಮ್ಮ ದೇಶದಲ್ಲಿ ಜಾತಿ, ಮತ, ಧರ್ಮಗಳ ಸಂಘರ್ಷದಲ್ಲಿ ಅನೇಕ ಜೀವಗಳು ಉರುಳುತ್ತಿವೆ. ಈಗ ಮತ-ಧರ್ಮಗಳು ಜನರ ಕೈಯಲಿಲ್ಲ. ಜಾತಿ,ಮತ, ಧರ್ಮಗಳ ಕೈಯಲ್ಲಿಯೇ ಜನರಿದ್ದಾರೆ. ಧರ್ಮ ಮತ್ತು ರಾಜಕೀಯ ಯಾವುದೇ ಸಮಾಜವನ್ನು ಗಾಢವಾಗಿ ಪ್ರಭಾವಿಸುವ ಅತ್ಯಂತ ಪ್ರಬಲ ಶಕ್ತಿಗಳು. ಕರ್ನಾಟಕದ ಇತಿಹಾಸದಲ್ಲಿ ಹದಿನೇಳನೆಯ ಶತಮಾನ ಈ ಎರಡು ಶಕ್ತಿಗಳು ಮುಖಾಮುಖಿಯಾದ ಕ್ರಾಂತಿಕಾರಕ ಸನ್ನಿವೇಶ. ಆ ಮೂಲಕ ಅನೇಕ ಬಗೆಯ ಪಲ್ಲಟಗಳು ಸಂಭವಿಸಿದ ಸಂದರ್ಭ. ಅರವಿಂದ ಮಾಲಗತ್ತಿಯವರು ಈ ‘ಸನ್ನಿವೇಶ’ವನ್ನು ‘ಹೊಸ ಬ್ರಾಹ್ಮಣ ಸನ್ಯಾಸಿ’ ನಾಟಕದಲ್ಲಿ ಪುನರ್‍ಸೃಷ್ಟಿಸುವುದರ ಮೂಲಕ ಸಮಕಾಲೀನ ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದ್ದಾರೆ.
ದೇವರು ಮನುಷ್ಯನನ್ನು ತನ್ನ ರೂಪದಲ್ಲಿ ನಿರ್ಮಿಸಿದ ಎಂದು ಬೈಬಲ್ ಹೇಳುತ್ತದೆ. ಕ್ರೈಸ್ತ ಧರ್ಮವಷ್ಟೇ ಅಲ್ಲ, ಎಲ್ಲಾ ಧರ್ಮಗಳು ಸ್ಥಾವರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ‘ಹೊಸ ಬ್ರಾಹ್ಮಣ ಸನ್ಯಾಸಿ’ ನಾಟಕವು ಧರ್ಮಕ್ಕೆ ಮರುವ್ಯಾಖ್ಯಾನ ಬರೆದಂತಿದೆ. ಓದುಗರನ್ನು ಭೂತಕಾಲದಲ್ಲಿ ಮುಳುಗಿಸಿ ವರ್ತಮಾನ ಕಾಲದಲ್ಲಿ ತೇಲಿಸುವ ಈ ನಾಟಕದಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಐದು ದಶಕಗಳ ಜ್ವಲಂತ ಚಿತ್ರಣವಿದೆ. ದೇವರು-ಧರ್ಮಗಳ ಮೌಲ್ಯಗಳು ಅಪಮೌಲ್ಯೀಕರಣಗೊಂಡು ಜಾಗತೀಕರಣದ ಇಂದಿನ ಸಂದರ್ಭದಲ್ಲಿ ದೇವರ-ಧರ್ಮಗಳ ಮಾರುಕಟ್ಟೆ ನಿರ್ಮಾಣವಾಗಿದೆ. ಭೋಗದ ನಿರಾಕರಣೆಯು ಇಂದು ತ್ಯಾಗದ ವೈಭವೀಕರಣವಾಗಿದೆ. ಖಾಸಗಿಯಾದ ಆತ್ಮದ ಉನ್ನತೀಕರಣವು ಬಂಡವಾಳದ ಪ್ರಶ್ನೆಯಾಗಿದೆ. ಜಪ, ತಪ,ಧ್ಯಾನ ಮತ್ತು ಸತ್ಸಂಗಗಳೆಲ್ಲ ಶೋಕಿಯಾಗುತ್ತಿರುವ ಸಂದರ್ಭದಲ್ಲಿ ಈ ನಾಟಕ ಎಚ್ಚರಿಕೆಯನ್ನು ಹೇಳುವಂತಿದೆ. ಮನುಷ್ಯತ್ವವೇ ಧರ್ಮ, ಮಾನವೀಯತೆಗಿಂತ ಮಿಗಿಲಾದ ದೇವರು-ಧರ್ಮಗಳು ಕೇವಲ ಮುಖವಾಡ ಎಂಬ ಅಂಶವನ್ನು ಈ ನಾಟಕ ಗಂಭೀರವಾಗಿ ಪ್ರತಿಪಾದಿಸುತ್ತದೆ.
ನಾಟಕದ ಮುಖ್ಯ ಪಾತ್ರವಾದ ಲಿಯೋನಾರ್ಡೊ ಸಿನ್ನಮಿ ಪಾತ್ರದಲ್ಲಿ ಗಟ್ಟಿತನವಿದೆ, ಚೈತನ್ಯವಿದೆ. ಆತ ಕ್ರೈಸ್ತ ಮತಪ್ರಚಾರಕನಾಗಿ ಹಿಂದೂ ಧರ್ಮದ ದೇವರು, ನಂಬಿಕೆ,ಲೀಲಾವಿಲಾಸಗಳನ್ನು ಲೇವಡಿಮಾಡುತ್ತ ಕ್ರೈಸ್ತಧರ್ಮದ ಕಡೆಗೆ ಜನರ ಒಲವು ಮೂಡುವಂತೆ ಬೈಬಲ್ಲಿನ ಕಥೆಗಳನ್ನು ಹೇಳುತ್ತಲಿದ್ದನು. ಊರಿನ ಜನರೆಲ್ಲಾ ಆತನಿಗೆ ‘ಹೊಸ ಬ್ರಾಹ್ಮಣ ಸನ್ಯಾಸಿ’ ಎಂದು ಕರೆಯುತ್ತಾರೆ. ಅಗ್ರಹಾರದ ಬ್ರಾಹ್ಮಣರು ಕೂಡ ಈತನ ಪಾಂಡಿತ್ಯಕ್ಕೆ ಮನಸೋತು ಸಿನ್ನಮಿಯಲ್ಲ ‘ಚಿನ್ನ’ ಎಂದು ಹೇಳಿ ‘ಚಿನ್ನಮಿ’ ಎಂದು ಕರೆಯುತ್ತಾರೆ. ಸಿನ್ನಮಿ ಮೂಲತಃ ಇಟಲಿ ದೇಶದವನು. ಅವನು ಕರ್ನಾಟಕಕ್ಕೆ ಬಂದು ಕನ್ನಡ ಕಲಿಯುತ್ತಾನೆ. ಅವನು ಲಲಿತಶಾಸ್ತ್ರದಲ್ಲಿ ಪಂಡಿತ. ಕನ್ನಡ, ತಮಿಳು, ಕೊಂಕಣಿ , ಇಂಗ್ಲಿಷ್ ಮತ್ತು ಸಂಸ್ಕøತ ಭಾಷೆಗಳನ್ನು ಚೆನ್ನಾಗಿ ಬಲ್ಲವನು. ಅವನು ಮಹಾನ್ ಚತುರ. ಮಾತಿನಲ್ಲಿಯೇ ಜನರನ್ನು ಮೋಡಿ ಮಾಡುವ ಶಕ್ತಿ ಅವನಲ್ಲಿದೆ. ವೇದ, ಪುರಾಣ ಮತ್ತು ವಚನಗಳನ್ನು ಓದಿಕೊಂಡವನು. ಕತ್ತಲು ರಾಜ್ಯವನ್ನು ಕಲ್ಯಾಣ ರಾಜ್ಯವನ್ನಾಗಿ ಪರಿವರ್ತಿಸಬೇಕೆಂದವನು. ಕ್ರಿಸ್‍ಮಸ್ ಹಬ್ಬದ ಸಂದರ್ಭದಲ್ಲಿ ಗಿರಿಜನರ ಹಾಡಿಯಲ್ಲಿ, ಅಂತ್ಯಜರ ಕೇರಿಯಲ್ಲಿ ಹಣತೆಗಳನ್ನು ಬೆಳಗಿಸಲು ಯತ್ನಿಸಿದವನು. ಆ ಜನರಲ್ಲಿ ಹೊಸ ಅರಿವು ಮೂಡಿಸಬೇಕೆಂದು ಪ್ರಯತ್ನಿಸಿದವನು. ಧರ್ಮಮಾರ್ಗಕ್ಕೆ ಹೊಸಭಾಷ್ಯ ಬರೆಯಲು ಪ್ರಯತ್ನಿಸುತ್ತಾನೆ. ಸಿನ್ನಮಿ ಬಸವಪುರದಲ್ಲಿ ಚರ್ಚು ಕಟ್ಟಿಸುತ್ತಾನೆ. ಅವನು ಕ್ರಿಸ್ತನ ಉಪದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸಾಕಷ್ಟು ಯತ್ನಿಸುತ್ತಾನೆ. ಶತಶತಮಾನಗಳಿಂದ ಕತ್ತಲಲ್ಲಿ ನಲುಗಿದ ಜನಾಂಗವೊಂದನ್ನು ಅಷ್ಟು ಸುಲಭವಾಗಿ ಬೆಳಕಿಗೆ ತರು ಸಾಧ್ಯವಿಲ್ಲವೆಂಬ ಸತ್ಯ ಗೊತ್ತಿರುವ ಸಿನ್ನಮಿ ಅಪಮಾನ, ಹೊಡೆತ ಎಲ್ಲವನ್ನೂ ಸಹಿಸಿಕೊಂಡು ಮುಂದುವರೆಯುತ್ತಾನೆ.
ಪ್ರಾಸಂಗಿಕವಾಗಿ ಬಸವಾದಿ ಶರಣರ ವಚನಗಳನ್ನು ನಾಟಕದಲ್ಲಿ ಬಳಸಿಕೊಂಡ ಅರವಿಂದ ಮಾಲಗತ್ತಿಯವರು ಆ ವಚನಗಳ ಮೂಲಕ ತಾವು ನಿರ್ಮಿಸಿದ ಸನ್ನಿವೇಶ ಸತ್ಯವನ್ನು ಸಾಬೀತು ಮಾಡಿದ್ದಾರೆ. ವೈಷ್ಣವ ಮಠದ ಶಿಷ್ಯರು-ಸಿನ್ನಮಿಯರ ನಡವೆ ನಡೆದ ಚರ್ಚೆಯ ವಚನವನ್ನು ಗಮನಿಸೋಣ:
ಹೊಲೆಯೊಳಗೆ ಹುಟ್ಟಿ ಕುಲವನರಸುವೆ
ಎಲವೊ ಮಾತಂಗಿಯ ಮಗ ನೀನು
ಸತ್ತುದನೆಳೆವನೆತ್ತಣ ಹೊಲೆಯ?
ಹೊತ್ತು ತಂದು ನೀವು ಕೊಲ್ಲುವಿರಿ
ಶಾಸ್ತ್ರವೆಂಬುದು ಹೋತಿಂಗೆ ಮಾರಿ
ವೇದವೆಂಬುದು ನಿಮಗೆ ತಿಳಿಯದು
ನಮ್ಮ ಕೂಡಲ ಸಂಗನ ಶರಣರು
ಕರ್ಮವಿರಹಿತರು ಶರಣಸನ್ನಾಹಿತರು ಅನುಪಮ ಚರಿತ್ರರು
ಅವರಿಗೆ ತೋರಲು ಪ್ರತಿಯಿಲ್ಲವೊ ||
ಹೀಗೆ ವಚನಗಳನ್ನು ಮಾಲಗತ್ತಿಯವರು ಸಂದರ್ಭಕ್ಕನುಸಾರವಾಗಿ ಬಳಸಿಕೊಂಡಿದ್ದು, ಇದರಿಂದ ನಾಟಕದಲ್ಲಿ ಅವರು ಹೇಳ ಹೊರಟಿರುವ ವಿಚಾರಗಳಿಗೆ ಪೂರಕ ನೆಲೆಗಟ್ಟು ಒದಗಿದೆ. ನಾಟಕದ ಸಂಭಾಷಣೆಗಳೊಂದಿಗೆ ಬೆರೆತ ಇಂತಹ ವಚನಗಳು ಲಯಾತ್ಮಕ ವೈವಿಧ್ಯವನ್ನುಂಟು ಮಾಡಿವೆಯಲ್ಲದೆ ಅದರ ಕಲಾತ್ಮಕತೆಯನ್ನೂ ಹೆಚ್ಚಿಸಿವೆ.
ಲಿಯೋನಾರ್ಡೊ ಸಿನ್ನಮಿಯ ನಂತರ ಪಾದ್ರಿ ಚಿಮಾವೋ ಬರುತ್ತಾನೆ. ಅವನ ಸ್ಥಾನಕ್ಕೆ ಪಾದ್ರಿ ಮನುಬೇಲ್ ಬರೋಟೋ ಬರುತ್ತಾನೆ. ಆದರೆ ಯಾವ ಪಾದ್ರಿಗಳು ಬಂದರೂ ಸಿನ್ನಮಿಯ ಸ್ಥಾನವನ್ನು ಸಮರ್ಥವಾಗಿ ತುಂಬಲು ಸಾಧ್ಯವಾಗುವುದಿಲ್ಲ.
ದೊರೆ ಪ್ರಜಾಪ್ರಭುತ್ವದಲ್ಲಿ ಗಾಢವಾದ ನಂಬಿಕೆಯಿಟ್ಟವನು. ರಾಜ್ಯದ ಧರ್ಮಗಳೆಲ್ಲ ತನ್ನ ಧರ್ಮಗಳೆಂದು ಭಾವಿಸಿದವನು. ತನ್ನ ರಾಜ್ಯದಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಿದವನು. ಹೀಗಾಗಿ ಆತನಿಗೆ ಪ್ರಜಾಧರ್ಮವೇ ಶ್ರೇಷ್ಠ ಧರ್ಮವಾಗಿತ್ತು. ನಾಟಕದ ಒಂಬತ್ತನೆಯ ದೃಶ್ಯದ ಪ್ರಾರಂಭದಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ದೊರೆಯಲ್ಲಿ ಉಂಟಾಗುವ ಅರಿವಿನ ವಿಸ್ತರೀಕರಣ (Extension of awareness). ಇಲ್ಲಿಯವರೆಗೆ ರಾಜಾಡಳಿತ, ಕರ್ತವ್ಯ, ಆಧ್ಯಾತ್ಮಿಕ ತತ್ವಗಳಲ್ಲೇ ಮಗ್ನನಾಗಿದ್ದ ದೊರೆ ನೀಲಾಳನ್ನು ಮೊದಲ ಬಾರಿಗೆ ಗಮನಿಸುತ್ತಾನೆ. ಹೊಸ ಸಮಾಜದ ಕನಸು ಕಂಡ ನೀಲಕಂಠ ಮತ್ತು ನೀಲಾರ ದುರಂತ ಅಂತ್ಯವನ್ನು ಕಂಡ ದೊರೆ ಧರ್ಮದ ಬಗ್ಗೆ ರೋಸಿ ಹೋಗುತ್ತಾನೆ. ಧರ್ಮವಿಲ್ಲದೆ ಮನುಷ್ಯ ಬದುಕಲಾರನೆ, ಧರ್ಮವಿಲ್ಲದೆ ರಾಜ್ಯ ಕಟ್ಟಲಾಗದೆ ಎಂದು ಚಿಂತಿಸುತ್ತಾನೆ. ಜಾತಿ, ಮತ ಮತ್ತು ಧರ್ಮಗಳಿಂದ ಮುಕ್ತವಾದ ಮನುಷ್ಯ ಧರ್ಮವನ್ನು ನಿರ್ಮಿಸಲು ದೊರೆ ಕರೆ ಕೊಡುತ್ತಾನೆ.
ನೀಲಕಂಠ ಹೊಸ ಧರ್ಮದ ಕನಸು ಕಂಡವನು. ಹಿಂದೂ ಸಮಾಜದ ಒಬ್ಬ ವ್ಯಕ್ತಿಯಾಗಿ ತಾನು ಅನುಭವಿಸಿದ ನೋವು, ಅವಮಾನಗಳು ಅವನ ಪಾಲಿಗೆ ಕಹಿಯಾಗಿವೆ. ಮಾರ್ಟಳ್ಳಿಯ ಮಠದ ಸ್ವಾಮಿಯಾಗಿ ತನಗೆ ಸರಿ ಕಂಡದ್ದನ್ನು, ಮಾನ್ಯವಾದದ್ದನ್ನು ಆತ ನಿಷ್ಠೆಯಿಂದ ಮಾಡುತ್ತಾನೆ. ನೀಲಕಂಠ ಮೂಲತಃ ಶೈವ ಅನಂತರ ಅವನು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಾನೆ. ನೀಲಕಂಠ ಪಾದ್ರಿ ಸಿನ್ನಮಿಯರ ಅನುಯಾಯಿಯಾಗುತ್ತಾನೆ. ಅವನು ಧರ್ಮ ಪ್ರಚಾರಕನಾಗಿ “ಮನುಜ ಕಟ್ಟಿದ ಧರ್ಮ ಮನುಜನಿಗೆ ಮುಳುವಾಗಬಾರದು. ಭಾರತ ಧರ್ಮಗಳ ಬೀಡು, ಜೀವಚೈತನ್ಯವಿರುವ ಧರ್ಮವೇ ಬದುಕಬೇಕು, ಹೆಸರು ಯಾವುದಾದರೇನು? ಧರ್ಮ ಎಂಬುದು ಒಂದು ಅಂಗಿಯನ್ನು ಕಳಚಿ ಇನ್ನೊಂದು ಅಂಗಿಯನ್ನು ಹಾಕೊಳ್ಳುವಷ್ಟೇ ಸುಲಭ ಎನಿಸಬೇಕು. ಅದು ಹರಿವ ನೀರಾಗಬೇಕು. ಹಾಗಾದಾಗಲೇ ಮನುಜನಿಗೆ ಮಹತ್ವ. ಇಲ್ಲವಾದರೆ ಧರ್ಮವೇ ವಿಜೃಂಭಿಸುವುದು” ಎಂದು ಹೇಳುತ್ತಾನೆ. ದಂಗೆಕಾರರು ಅವನ ಮನೆಗೆ ನುಗುತ್ತಾರೆ. ಹಲವರ ಕೂಗಾಟ,ಚೀರಾಟ ಮತ್ತು ತಲ್ಲಾಟಗಳ ನಡುವೆ ಮಗುವಿನ ಮತ್ತು ನೀಲಕಂಠನ ರುಂಡಗಳನ್ನು ಕತ್ತರಿಸುತ್ತಾರೆ.
ನೀಲಾ ನೀಲಕಂಠನ ಹೆಂಡತಿ. ಜಾತಿಯಲ್ಲಿ ಅಸ್ಪ್ರಶ್ಯ ಹೆಣ್ಣು. ನೀಲಕಂಠನ ಮಾರ್ಗಕ್ಕೆ ಸಂಪೂರ್ಣ ಭಿನ್ನವಾದದ್ದು ನೀಲಾಳ ಮಾರ್ಗ. ಅವಳು ಬಸವ ತತ್ವದಲ್ಲಿ ಅಪಾರ ನಂಬಿಕೆಯಿಟ್ಟವಳು. ವೀರಶೈವ ಮಠಗಳಲ್ಲಿ ಬಸವ ತತ್ವವನ್ನು ಜಾರಿಗೆ ತರಬೇಕೆಂಬುದು ಅವಳ ಉದ್ದೇಶವಾಗಿದೆ. ಅದಕ್ಕೊಂದು ಹೊಸ ವ್ಯಾಖ್ಯಾನ ಬರೆಯಲೇಬೇಕೆಂದು ಆ ಬಯಲಿನ ದಾರಿ ಕ್ರೈಸ್ತ ಧರ್ಮದಲ್ಲಿದೆಯೆಂದು ಕ್ರೈಸ್ತ ಧರ್ಮಕ್ಕೆ ಮತಾಂತರವಾದವಳು. ಆದರೆ ಜನ ಅವಳಿಗೆ ಅಲ್ಲಿ ನೆಮ್ಮದಿಯಿಂದ ಬದುಕಲು ಅವಕಾಶ ಕೊಡುವುದಿಲ್ಲ. ತನ್ನ ಬದುಕಿನಲ್ಲಿ ಹೆಜ್ಜೆ ಹೆಜ್ಜೆಗೂ ತಾಪತ್ರಯ, ಗಂಡಾಂತರ ಅನುಭವಿಸುತ್ತ ಭವಿಷ್ಯದಲ್ಲಿ ಸುಖವಿದೆ ಎನ್ನುವುದರ ಅರ್ಥ, ನಂಬಿಕೆ ಕಳೆದುಕೊಂಡು, ದಿನದಿಂದ ದಿನಕ್ಕೆ ಭೀಕರವಾಗುತ್ತಾ ವಿಷಾದಪಡುವ ಅವಳು ತುಂಬಾ ನತದೃಷ್ಟೆ. ಸಮಾಜದ ಕಣ್ಣು ತೆರೆಸುವವಳ ಬದುಕು ಅನೇಕ ಸಲ ಕಷ್ಟಕ್ಕೀಡಾಗುತ್ತದೆ. ಅವಳು ತನ್ನ ಗಂಡನ ಎಲ್ಲ ಕೆಲಸಕ್ಕೂ ಹೆಜ್ಜೆ ಹೆಜ್ಜೆಗೂ ಸಹಕರಿಸುತ್ತ ಬರುತ್ತಾಳೆ. ಧರ್ಮಪ್ರಚಾರದ ಸಂದರ್ಭದಲ್ಲಿ ತನ್ನ ಗಂಡನಿಗಿಂತಲೂ ಅವಳೇ ಹೆಚ್ಚು ಉತ್ಸಾಹಿಯಾಗಿ ಓಡಾಡುತ್ತಾಳೆ. ಧರ್ಮದ ವಿಚಾರದಲ್ಲಿ ಗಂಡನಿಗೆ ಮಾರ್ಗದರ್ಶನ ನೀಡುತ್ತಾಳೆ. ಸಿನ್ನಮಿ ಅವಳಲ್ಲಿ ಮೇರಿಯನ್ನು ಕಾಣುತ್ತಿದ್ದರು. ತನ್ನ ಗಂಡ ಮತ್ತು ಮಗುವಿನ ಕೊಲೆಯಾದ ನಂತರ ಅವಳು ಕೂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ನಾಟಕದ ಒಂಬತ್ತನೆಯ ದೃಶ್ಯದಲ್ಲಿ ಕಂಡುಬರುವ ಬದಲಾವಣೆ ಆಧುನಿಕತೆಯ ಜೀವನ ಮೌಲ್ಯಗಳನ್ನು ಒಳಗೊಳ್ಳುವುದರಿಂದ ತುಂಬಾ ಮುಖ್ಯವಾಗಿದೆ. ಅಲ್ಲಿಯವರೆಗೆ ನಾಟಕ ಇದು ಬಿಳಿ, ಇದು ಕಪ್ಪು ಎಂಬಂತಹ ಸುಲಭದ ವರ್ಗೀಕರಣದ ಮೇಲೆಯೇ ನಿಂತಿದೆ. ಈ ನಾಟಕದಲ್ಲಿ ಬರುವ ಬೇರೆ ಬೇರೆ ಪಾತ್ರಗಳು ಸಹ ಒಂದೊಂದು ತತ್ವವನ್ನು ಪ್ರತಿನಿಧಿಸುವಂತಿವೆ. ಈ ನಾಟಕದಲ್ಲಿ ಬರುವ ಎಲ್ಲಾ ಪಾತ್ರಗಳು ವಿಶೇಷ ಗಮನ ಸೆಳೆಯುತ್ತವೆ ಮಾತ್ರವಲ್ಲ, ಕಥೆಯ ಓಟಕ್ಕೆ ಪೂರಕವಾಗಿ ಪುಟಗಳನ್ನು ಅತ್ಯುತ್ಸಾಹದಿಂದಲೂ, ಆನಂದದಿಂದಲೂ ತಿರುವಿಹಾಕುತ್ತಿದ್ದಾಗಲೇ ತನ್ನನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದ ಗಂಡನನ್ನು ಕಳೆದುಕೊಂಡು, ಅವನೊಂದಿಗಿನ ಕೆಲವೇ ವರ್ಷಗಳ ಮಧುರ ನೆನಪನ್ನು ಬದುಕಿನುದ್ದಕ್ಕೂ ಬತ್ತಿಯಾಗಿ ಉರಿಸುತ್ತ ಏಕಾಂಗಿಯಾಗಿ ಕೆಲಕಾಲ ದೂಡಿದರೂ ಬದುಕಿನ ಸೂಕ್ಷ್ಮ ಗ್ರಹಿಕೆಯಿಂದ ಪ್ರಾಪ್ತವಾದ ಗಾಢ ಅನುಭವಗಳಿಂದ ಸಮಯೋಚಿತವಾಗಿ ವರ್ತಿಸುವ ನೀಲಾಳ ಪಾತ್ರ ಓದುಗ-ವೀಕ್ಷಕರ ನೆನಪಿನಾಳದಲ್ಲಿ ಬಹುಕಾಲ ನಿಲ್ಲಬಲ್ಲಷ್ಟು ಶಕ್ತಿಶಾಲಿಯಾಗಿದೆ.
ಬಾಯಿ ಮುಚ್ಚಿದ ಮಣ್ಣಿನ ಗಡಿಗೆಯಲಿ
ಕುದಿಯುತ್ತಿದೆ ಕೊತಕೊತನೆ ನೀರು
ಬಂದು ಬಿದ್ದಿದೆ ವಿದೇಶಿ ಸೌದೆ
ನೀರು ಕಾಯಿಸುವ ನೀರಿನ ನೆಪದಲ್ಲಿ
ಬಂದು ಬೀಳುತ್ತದೆ ವಿದೇಶಿ ಸೌದೆ
ಹೊರಗಿನುರಿಯೂ ಒಳಗಿನಧಗಿಯೂ
ಗಡಿಗೆ ಸಿಡಿಯುವುದ್ಯಾವಾಗ ಗೊತ್ತಿಲ್ಲ ದೇವರೆ ||
ಈ ಸಾಲುಗಳು ಸಮಕಾಲೀನ ಧಾರ್ಮಿಕ ಪ್ರಪಂಚದ ವೈರುಧ್ಯಗಳನ್ನು ಸಹಜವಾಗಿ ತೆರೆಡುತ್ತವೆ. ಹಿಂದೂ ದೇಶದಲ್ಲಿ ಕ್ರೈಸ್ತ ಧರ್ಮ ಪ್ರಸಾರವಾಗುತ್ತಿರುವ ಬಗೆಯಿದು. ಈಗ ಧರ್ಮಗಳು ಧರ್ಮಗಳಾಗಿ ಉಳಿದಿರುವುದಿಲ್ಲ. ಆಧ್ಯಾತ್ಮಿಕತೆ ಆಧ್ಯಾತ್ಮಿಕತೆಯಾಗಿ ಉಳಿದಿರುವುದಿಲ್ಲ. ಆಧುನಿಕ ರಾಜಕಾರಣದ ಆಯೋಮಯ ಭಾಗಗಳು ಧರ್ಮದ ‘ಅಫೀಮ್’ ಭಾಗಗಳ ಜೊತೆಗೆ ಸೇರಿಕೊಂಡು ಭಯಾನಕ ಧರ್ಮವೊಂದು ನಿರ್ಮಾಣವಾಗಿದೆ. ಸಮಕಾಲೀನ ಭಾರತೀಯ ಜೀವನದಲ್ಲಿ ಈವರೆಗೆ ನಳನಳಿಸುತ್ತಿದ್ದ ಬಹುಮುಖೀ ಸಂಸ್ಕøತಿಗಳು ನಿಧಾನವಾಗಿ ನಿರ್ನಾಮವಾಗುತ್ತಿರುವುದು ನಿಜಕ್ಕೂ ಆತಂಕದ ಸಂಗತಿ.
ಮಾರ್ಟಳ್ಳಿಯ ಮಠದ ಸ್ವಾಮಿ ಮೂಲತಃ ಶೈವ ಅನಂತರ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವನು. ಸಿದ್ಧಶಿವಯೋಗ ಮಹಾಸ್ವಾಮಿಗಳು, ಪ್ರಾಣೇಶಾಚಾರ್ಯ, ಶಿವದೇಶ್ವರ, ಅನ್ನಮಾಚಾರ್ಯ, ವಿಶಾಲಾಕ್ಷ ಪಂಡಿತ,ಬುಚ್ಚಣ್ಣ,ಚನ್ನಲಿಂಗೇಶ್ವರ, ನರಸಿಂಹಶಾಸ್ತ್ರಿ,ಮೈತ್ರೇಯ-ಮೊದಲಾದ ಪಾತ್ರಗಳು ಪರಂಪರಾಗತ ಮತಧರ್ಮವನ್ನು ಪ್ರತಿನಿಧಿಸುತ್ತವೆ. ನೇರವಾಗಿ ಹರಿಯುವ ಆಲೋಚನೆಗಳಿಂದಾಗಿ ನಾಟಕದ ಪಾತ್ರಗಳ ಮುಖಾಮುಖಿ ಹೆಚ್ಚು ಸಹಜವಾಗಿದೆ.
ಅರವಿಂದ ಮಾಲಗತ್ತಿಯವರ ‘ಹೊಸ ಬ್ರಾಹ್ಮಣ ಸನ್ಯಾಸಿ’ ನಾಟಕದ ಭಾಷೆ ಗಂಭೀರವಾಗಿದ್ದು, ನಾಟಕದ ಸಂವಿಧಾನ ಮತ್ತು ವಸ್ತುರಚನೆ ಸಮರ್ಪಕವಾಗಿದೆ. ನಾಟಕದ ಭಾಷೆ ಅದರ ಪ್ರಮುಖ ಸತ್ವ. ಸಂಭಾಷಣೆಯಲ್ಲಿ ಸ್ಪಷ್ಟತೆಯಿದೆ.ಗಂಭೀರ ವೈಚಾರಿಕತೆ ಮತ್ತು ಸಂಯಮಪೂರ್ಣ ಭಾವುಕತೆಯನ್ನು ಸಹಜವಾಗಿ ಮೇಳೈಸಿರುವ ಈ ನಾಟಕ ವಾಸ್ತವತೆ-ಕಲ್ಪಕತೆ, ಪ್ರತಿಮೆ,ಸಂಭಾಷಣೆ, ಪಾತ್ರ-ಸನಿವೇಶಗಳ ನಿರ್ಮಾಣ ಗ್ರಹಣಶಕ್ತಿ, ರಂಗಭೂಮಿಯ ತಿಳವಳಿಕೆ ಅದ್ಭುತವಾಗಿದೆ. ವಸ್ತುವಿಗೆ ಸಂಬಂಧಪಟ್ಟ ಐತಿಹಾಸಿಕ ಘಟನೆಗಳಲ್ಲಿರುವ ಸಂಘರ್ಷದ ಗಂಭೀರತೆ ನಾಟಕದಲ್ಲಿ ಯಥಾವತ್ತಾಗಿ ಮೂಡಿ ಬಂದಿರುವುದರಿಂದ ನಾಟಕ ಕುತೂಹಲಕಾರಿಯಾಗಿದೆ. ಆ ಕಾಲದ ಸಾಮಾಜಿಕ ಅಸಮಾನತೆ, ಅದರ ವಿರುದ್ಧ ನಡೆದ ಚಳವಳಿ, ಅದರ ಸೋಲುಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತಲೇ ನಾಟಕವು ಎಲ್ಲ ಕಾಲದಲ್ಲಿನ ಶೋಷಣೆ, ವ್ಯವಸ್ಥಿತ ಕ್ರೌರ್ಯ,ಮನುಷ್ಯನಲ್ಲಿರುವ ಅದಮ್ಯ ಚೇತನದಿಂದ ಸೂಚಿತವಾಗುವ ಆಸೆ, ನಿರೀಕ್ಷೆಗಳನ್ನು ಧ್ವನಿಸುತ್ತದೆ. ವಾಸ್ತವದ ಎಲ್ಲೆ ಮೀರದ ಚೌಕಟ್ಟಿನಲ್ಲಿ ಧರ್ಮ, ಸಂಸ್ಕøತಿ, ಸಂಪ್ರದಾಯ ಮತ್ತು ಮನುಷ್ಯ ಸಂಬಂಧಗಳ ಸೂಕ್ಷ್ಮಗಳನ್ನು ನಿರೂಪಿಸುವ ಅರವಿಂದ ಮಾಲಗತ್ತಿಯವರ ಈ ನಾಟಕ ಸಹನಶೀಲ, ವೈಚಾರಿಕ ಮತ್ತು ಪ್ರಬುದ್ಧ ವೀಕ್ಷಕನನ್ನು ನಿರೀಕ್ಷಿಸುತ್ತದೆ. ಕನ್ನಡ ಸಾಹಿತ್ಯದಲ್ಲಿ ಈ ಕೃತಿಗೆ ವಿಶೇಷ ಸ್ಥಾನವಿದೆ.
-ಸಿ.ಎಸ್.ಭೀಮರಾಯ(ಸಿಎಸ್ಬಿ)
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ