- ಪುಸ್ತಕ - ಡಿಸಂಬರ್ 31, 2020
- ಹೌದಪ್ಪನ ಊರು ಮತ್ತು ಇಲ್ಲಪ್ಪನ ಊರು - ಸೆಪ್ಟೆಂಬರ್ 30, 2020
- ಕೆ.ವಿ.ತಿರುಮಲೇಶ್ - ಸೆಪ್ಟೆಂಬರ್ 8, 2020
ಹೌದಪ್ಪನ ಊರಿಗೂ ಇಲ್ಲಪ್ಪನ ಊರಿಗೂ ನಡುವೆ
ವರುಷಗಳಿಂದ ಓಡುತ್ತಿರುವೆ
ರೈಲಿನಂತೆ
ನನ್ನ ನರಗಳೋ, ತಿರುಚಿಕೊಂಡಿವೆ
ವೈರುಗಳಂತೆ
ಇಲ್ಲಪ್ಪನ ಊರಿಗೂ ಹೌದಪ್ಪನ ಊರಿಗೂ ನಡುವೆ
ಇಲ್ಲಪ್ಪನ ಊರಿನಲ್ಲಿ ಎಲ್ಲವೂ ಸತ್ತಂತೆ, ಎಲ್ಲರೂ ಹೆದರಿಕೊಂಡಂತೆ
ಅದೊಂದು ಯಾರೋ ಬೇಕಾಬಿಟ್ಟಿ ಸಿಂಗರಿಸಿದ ರೂಮಿನಂತೆ.
ಅಲ್ಲಿ ಒಂದೊಂದು ವಸ್ತುವೂ ಹುಬ್ಬುಗಂಟಿಕ್ಕುತ್ತೆ ಏನನ್ನೋ ಮರೆಮಾಚುತ್ತ
ನೋಡುತ್ತವೆ ಗೋಡೆಯ ಪಟಗಳೆಲ್ಲ ವಿನಾಕಾರಣ ಸಂಶಯಪಡುತ್ತ,
ದಿನವೂ ಪಾಲೀಷಾಗುತ್ತೆ ಅದರ ನೆಲ ಕಫದಿಂದ, ಪಿತ್ತರಸದಿಂದ,
ಅದರ ಸೋಫಾಗಳಾಗಿವೆ ಸುಳ್ಳುಗಳಿಂದ, ಗೋಡೆಗಳು ದುರದೃಷ್ಟದಿಂದ.
ಸಿಕ್ಕುತ್ತೆ ನಿಮಗಲ್ಲಿ ಬೇಕಾದಷ್ಟು ಹಿತವಚನ – ಸಿಕ್ಕದೆ ಇದ್ದೀತೇ?
ಟೈಪ್‍ರೈಟರು ಒದರುವುದೇನು? ಕಾರ್ಬನ್-ಕಾಪಿ ಉತ್ತರ:
“ಇಲ್ಲ-ಇಲ್ಲ-ಇಲ್ಲ. ಇಲ್ಲ-ಇಲ್ಲ-ಇಲ್ಲ. ಇಲ್ಲ-ಇಲ್ಲ-ಇಲ್ಲ.”
ದೀಪಗಳೆಲ್ಲ ನಂದಿ ಕತ್ತಲು ತುಂಬಿಕೊಂಡ ಮೇಲೆ
ಕೇಕೆ ಹಾಕುತ್ತವೆ ರೂಮಿನ ದೆವ್ವಗಳೆಲ್ಲ ದಿಗಿಣ ಹಾಕುತ್ತ.
ಸಿಕ್ಕುತ್ತೆ ನಿಮಗೊಂದು ಟಿಕೆಟ್ಟು – ಸಿಕ್ಕದೆ ಏನು –
ಇಲ್ಲಪ್ಪನ ಕಪ್ಪು ಊರನ್ನು ಬಿಟ್ಟುಹೋಗುವುದಕ್ಕೆ.
ಹೌದಪ್ಪನ ಊರಿನಲ್ಲಿ
ಬದುಕೆಂದರೆ ಹಕ್ಕಿಯ ಹಾಡಿನಂತೆ
ಗೋಡೆಗಳಿಲ್ಲದ ಆ ಊರು
ಹಕ್ಕಿಯದೊಂದು ಗೂಡಿನಂತೆ.
ಆಕಾಶ ಹೇಳುತ್ತೆ ಕಿತ್ತುಕೊಳ್ಳಿ ನಿಮ್ಮದೇ ಕೈಯಲ್ಲಿ
ನಿಮಗಿಷ್ಟವಾದೊಂದು ನಕ್ಷತ್ರ
ಅರಸುತ್ತವೆ ತುಟಿಗಳು ನಿಮ್ಮ ತುಟಿಗಳನ್ನು
ಲಜ್ಜೆಯಿಲ್ಲದೆ ಬಂದು ಹತ್ತಿರ.
ಅಲ್ಲಿ ಯಾರೊಬ್ಬರಿಗೂ ಇಲ್ಲ ರವಷ್ಟೂ ಸಂಶಯ
ಹಸುಗಳಂಬಾ ಎಂದು ಕರೆಯುತ್ತವೆ ನೊರೆಹಾಲ
ಕಿತ್ತುಕೋ ಎನ್ನುತ್ತೆ ತುಂಟಾಟವಾಡುತ್ತ ಮಲ್ಲಿಗೆ
ಹೋಗಬಹುದು ನೀವು ಹೋಗಬೇಕಾದಲ್ಲಿಗೆÉ
ರೈಲನ್ನೊ ವಿಮಾನವನ್ನೊ ಹಡಗನ್ನೋ ಹತ್ತಿ
ಪಿಸುಗುಟ್ಟುತ್ತೆ ಜುಳುಜುಳುವೆನ್ನುವ ನೀರು ವರ್ಷಪೂರ್ತಿ:
“ಹೌದು-ಹೌದು-ಹೌದು. ಹೌದು-ಹೌದು-ಹೌದು. ಹೌದು-ಹೌದು-ಹೌದು.”
ನಿಜ ಹೇಳಬೇಕೆಂದರೆ ಥಳಥಳವೆನ್ನುವ ಈ ಹೌದಪ್ಪನ ಊರಲ್ಲಿ
ಮೈಬಗ್ಗಿಸಿ ದುಡಿಯದೆ ಸುಮ್ಮನೆ ಫಲಾನುಭವಿಯಾಗುವುದೆಂದರೆ
ಒಮ್ಮೊಮ್ಮೆ ತುಸು ಬೇಜಾರು ಬೋರು
ಹಾಗಾಗಿ ಎಡತಾಕುತ್ತಿರುವುದೇ ಒಳ್ಳೆಯದು
ನನ್ನ ಕೊನೆಗಾಲದವರೆಗೆ
ಹೌದಪ್ಪನ ಊರಿಗೂ ಇಲ್ಲಪ್ಪನ ಊರಿಗೂ ನಡುವೆ!
ತಿರುಚಿಕೊಂಡರೇನಂತೆ
ನನ್ನ ನರ ವೈರುಗಳಂತೆ
ಇಲ್ಲಪ್ಪನ ಊರಿಗೂ ಹೌದಪ್ಪನ ಊರಿಗೂ ನಡುವೆ!
ಮೂಲ: ರಷ್ಯನ್ ಕವಿ ಯೆವ್ಗೆನಿ ಯೆವ್ತುಶೆಂಕೊ
ಅನುವಾದ: ಎಸ್. ದಿವಾಕರ್
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಮಹಾಸಾಗರವಾದಳು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..