ಉದಯ್ ಪುರಾಣಿಕ್
75 ವರ್ಷಗಳಲ್ಲಿ ಕನ್ನಡ ಮಾಧ್ಯಮ ಶಿಕ್ಷಣ, ಕನ್ನಡಿಗರಿಗೆ ಉದ್ಯೋಗ ಮತ್ತು ಕನ್ನಡ ಸಾಹಿತ್ಯ ಮತ್ತು ಕಲೆಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಮಾಡಿರುವ ಕೆಲಸ, ಆಗಿರುವ ತಪ್ಪುಗಳು ಕುರಿತು ಚಿಂತನ ಮಂಥನ ಜನಸಾಮಾನ್ಯರ ಮಟ್ಟದಲ್ಲಿ ನಡೆಯುವ ಅಗತ್ಯವಿದೆ.
ಇಂದಿನ ಮತ್ತು ಭವಿಷ್ಯದ ಜಾಗತಿಕ ವಿದ್ಯಮಾನಗಳಿಗೆ ಸೂಕ್ತವಾಗುವಂತೆ ಅಧುನಿಕ ತಂತ್ರಜ್ಞಾನ ಬಳಸಿ ಕನ್ನಡ ವನ್ನು ವಿಶ್ವಕನ್ನಡ ಮಾಡುವ ಕಾರ್ಯಯೋಜನೆ ಅಗತ್ಯವಿದೆ. ಅದ್ದೂರಿಯ ಕಾರ್ಯಕ್ರಮ, ರಾಜಕೀಯ
ಘೋಷಣೆ, ಭಾಷಣ, ಜಾಹಿರಾತುಗಳಿಂದ ಪ್ರಯೋಜನವಿಲ್ಲ.
ಕನ್ನಡಿಗರಿಗೆ ಉದ್ಯೋಗಾವಕಾಶ, ನವೋದ್ಯಮವಕಾಶ ಕುರಿತು ಮಾಹಿತಿ , ಮಾರ್ಗದರ್ಶನ ನೀಡುವ ರಾಜ್ಯವ್ಯಾಪಿ ಯೋಜನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಜಾರಿಗೆ ತರಬೇಕು.
ದೀಪಕ್ ಮೇಟಿ
- ಕನ್ನಡ ಯಾವತ್ತೂ ಚುನಾವಣೆಯ ಮೇಲೆ ಫಲಿತಾಂಶ ಬೀಳುವ ವಿಷಯವೇ ಆಗಿಲ್ಲ. ಕನ್ನಡ ಕೇಂದ್ರಿತ ರಾಜಕೀಯ ಪಕ್ಷ ಹತ್ತು ಸ್ಥಾನಗಳನ್ನಾದರು ಗೆದ್ದು ವಿಧಾನಸಭೆಯಲ್ಲಿರಬೇಕು. ಅವು ಸರ್ಕಾರಕ್ಕೆ ಪ್ರೆಶರ್ group ಆಗಿ ಕೆಲಸ ಮಾಡುತ್ತವೆ.
- SSC , Bank ,.. ಮುಂತಾದ ಪರೀಕ್ಷೆಗಳಲ್ಲಿ ,C ಮತ್ತು D ಶ್ರೇಣಿಯ ಹುದ್ದೆಗಳನ್ನಾದರೂ ಸ್ಥಳೀಯರಿಗೆ ಮೀಸಲು ಇಡಲು ಕೇಂದ್ರಕ್ಕೆ ಒತ್ತಾಯಿಸಬೇಕು. ಕೇಂದ್ರ ಸ್ವಾಮ್ಯದ ಉದ್ದಿಮೆಗಳಲ್ಲಿ ಖಡ್ಡಾಯವಾಗಿ ಆಯಾ ರಾಜ್ಯದ ಸ್ಥಳೀಯರು ಇರಬೇಕು ಎಂದು ಒತ್ತಾಯಿಸಬೇಕು.
- ಬಹಳಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲೀಷ್ ಗಳಲ್ಲಿ ಮಾತ್ರ ವಿರುವಾದರಿಂದ, ಕನ್ನಡ ಮಾದ್ಯಮದ ವಿದ್ಯಾರ್ಥಿಗಳಿಗಿಂತ ಹಿಂದಿ ಮಾದ್ಯಮದ ವಿದ್ಯಾರ್ಥಿಗಳಿಗೆ undue advantages ಇವೆ. ಎಲ್ಲ ಭಾರತೀಯರಿಗೂ ಸಮಾನ ಕಷ್ಟಕರವಾದ / ಸುಲಭವಾದ ಪರೀಕ್ಷಾ ಮಾದ್ಯಮ ಕ್ಕೆ ಒತ್ತಾಯಿಸಬೇಕು. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎಲ್ಲ ಭಾರತೀಯ ಭಾಷೆಗಳಲ್ಲೂ ನಡೆಸಬೇಕು.
- ಪ್ರಾಥಮಿಕ ಶಿಕ್ಷಣದಲ್ಲಿ ತ್ರೀ ಭಾಷಾ ಸೂತ್ರ ಒಪ್ಪಿಕೊಂಡಿರುವ ಕರ್ನಾಟಕದಲ್ಲಿ ಕನ್ನಡ ಕಡ್ಡಾಯವಾಗಿ ಒಂದು ಭಾಷೆಯಾಗಿ ಕಲಿಸಬೇಕು.
ಭಾರತದಲ್ಲಿಯೂ ತ್ರೀ ಭಾಷಾ ಸೂತ್ರ ಅಳವಡಿಸಬೇಕು ಇಲ್ಲವೆಂದರೆ ದ್ವಿಭಾಷಾ ಸೂತ್ರಕ್ಕೆ ಮರಳಲು ಅವಕಾಶ ವಿರಬೇಕು. - ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ವೈಜ್ಞಾನಿಕ ಪುಸ್ತಕಗಳಲ್ಲಿ ಆದಷ್ಟು ಆಡುಭಾಷೆಯಲ್ಲಿ ಇರುವ ಪದಗಳನ್ನು ಬಳಸಬೇಕು. ಇಲ್ಲವೇ ಇಂಗ್ಲಿಷ್ನಲ್ಲಿ ರುವ ಪದಗಳನ್ನೇ ಬಳಸಬೇಕು.
- ಕನ್ನಡ ಅನ್ನದ ಭಾಷೆಯಾಗಬೇಕು. ಸರ್ಕಾರ ಆದಷ್ಟು ಕನ್ನಡದಲ್ಲಿ ವ್ಯವಹರಿಸುವ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಅದನ್ನು ಎಲ್ಲ ರಂಗಗಳಲ್ಲಿ ಪ್ರಚುರ ಪಡಿಸಬೇಕು.
- ನಾಡು ನುಡಿಯ ಬೆಳವಣಿಗೆಗೆ ಹಾನಿಕಾರಕ ಸಂಪ್ರದಾಯಗಳು ಮತ್ತು ಹತೋಟಿ ಕೂಟಗಳನ್ನು ನಿಯಂತ್ರಿಸಬೇಕು.
ಉದಾಹರಣೆಗೆ ಕನ್ನಡ ಚಿತ್ರೋದ್ಯಮ ಸಶಕ್ತವಾದ ಮೇಲೆಯೂ ಅಘೋಷಿತ ಡಬ್ಬಿಂಗ್ ನಿಷೇಧ (ಇವಾಗಿಲ್ಲವದರೂ , ಡಬ್ಬಿಂಗ್ ಚಿತ್ರಗಳನ್ನು ತಡೆವ ಕೂಟ ಸಕ್ರಿಯವಾಗಿದೆ) ಮುಂದುವರೆದಿದ್ದು. ಅದರಿಂದ ಕನ್ನಡಿಗರು ತಮ್ಮ ಹಕ್ಕಾದ ತಮ್ಮ ಭಾಷೆಯಲ್ಲಿಯೇ ಸಿಗಬೇಕಾದ ಮನೋರಂಜನೆ ಸಿಗದೆ ಬೇರೆ ಭಾಷೆ ಕಲಿತು ಮನೋರಂಜನೆ ತೆಗೆದು ಕೊಳ್ಳುವಂತಾಗಿದೆ. - ಕನ್ನಡ ಸಹಜವಾಗಿ ಬೆಳೆಯಲು , ಕನ್ನಡದ ವಾತಾವರಣ ಇರುವದು ಅವಶ್ಯವಾಗಿದೆ. ಅದನ್ನು ಸರಕಾರಿ ಕಛೇರಿಗಳಷ್ಟೇ ಅಲ್ಲದೇ ಖಾಸಗಿ ವಲಯದಲ್ಲಿಯೂ ಕನ್ನಡದ ವಾತಾವರಣ ಮೂಡಿಸಬೇಕು.. ಅದನ್ನು ಬಲವಂತವಾಗಿ ಹೇರಲು ಹೋದರೆ ,ನಾವುಗಳು fanatics ಅಂತ ಬಿಂಬಿಸಲ್ಪಡಬಹುದು. ಅದಕ್ಕೆ ಒಂದೇ ಪರಿಹಾರವೆಂದರೆ ಕನ್ನಡಿಗರಿಗೆ ಗ್ರಾಹಕ ಕೇಂದ್ರಿತ ಹಕ್ಕು ಮತ್ತು ಶಕ್ತಿಯ ಜಾಗೃತಿ..ಯಾವುದೇ ಬ್ಯಾಂಕ್ಗಳಲ್ಲಿ, ಮಳಿಗೆಗಳಲ್ಲಿ, ಮಾಲ್ ಗಳಲ್ಲಿ ಕನ್ನಡದಲ್ಲಿ ಮಾತಾಡಿ, ಸರ್ವೀಸ್ ಕನ್ನಡದಲ್ಲಿ ಇಲ್ಲದಿರೆ ಕೇಳಬೇಕು. ಈಗ ಯಾವುದೇ ಖಾಸಗಿ ಸಂಸ್ಥೆ ಗ್ರಾಹಕನ ಹಕ್ಕನ್ನು ಬೇಡಿಕೆಯನ್ನು ಸುಲಭವಾಗಿ ತಿರಸ್ಕರಿಸಲಾಗದು. ಅಲ್ಲಿ ಕನ್ನಡದ ವಾತಾವರಣ ಬರಲೇ ಬೇಕಾಗುತ್ತದೆ.
- ಕನ್ನಡದಲ್ಲಿ ಮನೋರಂಜನೆ ಕನ್ನಡಿಗರ ಹಕ್ಕು. ಎಲ್ಲ ಭಾಷೆಯ ಜ್ಞಾನ ಕನ್ನಡಕ್ಕೆ dub ಆಗಿ ಬರಲಿ.
- ಕನ್ನಡ ಬರಿ ವಿದ್ವಾಂಸರ ಸ್ವತ್ತಲ್ಲ. ಶುದ್ಧ ಕನ್ನಡ ಅಂತ ಕಾಣದೆ ಎಲ್ಲ ತರಹದ ಕನ್ನಡವನ್ನು ,ಕನ್ನಡ ವೆಂದೆ ಪರಿಗಣಿಸಬೇಕು.
ಸುಮಾ ವೀಣಾ
ಕನ್ನಡವೆಂದರೆ ಬರಿ ನುಡಿಯಲ್ಲ
‘ಕನ್ನಡವೆಂದರೆ ಬರಿ ನುಡಿಯಲ್ಲ’ ಅನ್ನುವ ಶೀರ್ಷಿಕೆಯೆ ಕನ್ನಡದ ಅಸ್ಮಿತೆಯನ್ನು ಹಿಡಿದಿಟ್ಟಿದೆ. ಕನ್ನಡವೆಂದರೆ ಒಂದು ಭಾಷೆಯೇ? ಕೇವಲ ಮಣ್ಣೇ? ಸಂಸ್ಕೃತಿಗೆ ಸೀಮಿತವೇ? ಇತ್ಯಾದಿ ಪರಿಪ್ರೇಕ್ಷಗಳನ್ನು ಇರಿಸಿಕೊಂಡು ಮಾತುಗಳ ಮೂಲಕ ಚಿಂತನಗಳ ಮೂಲಕ ಮಥಿಸ ಹೊರಟ ಸಂಕೀರ್ಣ ಕಾರ್ಯಕ್ರಮವೇ ‘ಕನ್ನಡವೆಂದರೆ ಬರಿ ನುಡಿಯಲ್ಲ’. ಈ ಮಾತುಗಳನ್ನು ಮತ್ತೆ ಮತ್ತೆ ಕೇಳುತ್ತಿದ್ದರೆ ಅನೇಕ ಹಿರಿದರ್ಥ ಗೋಚರಿಸುತ್ತಲೇ ಇರುತ್ತದೆ. ಕನ್ನಡ ನಾಡಿನ ಶ್ರೇಷ್ಟತೆಯನ್ನು ಕಣ್ಮುಂದೆ ತೆರೆದಿಡುತ್ತದೆ. ಹಿರಿಯ ವಿಮರ್ಶಕರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರವರ ವಿನ್ಯಾಸದಲ್ಲಿ ,ಜನಶಕ್ತಿಕೇಂದ್ರದ ಸಹಯೋಗದಲ್ಲಿ,ಅಭಿನವ ರವಿಕುಮಾರ್ ಅವರ ನಿರ್ವಹಣೆಯಲ್ಲಿ ಮೂಡಿ ಬಂದ ವಿಚಾರಸಂಕಿರಣ ಪ್ರಸ್ತುತ ದಿನಮಾನಕ್ಕೆ ಅಗತ್ಯವಾಗಿತ್ತು. ಸಮಾನಮನಸ್ಕರ ನಡುವೆ ನಡೆದ ಚರ್ಚೆಗಳು ನಿಜಕ್ಕೂ ಹೊಸ ಹೊಳಹುಗಳನ್ನು ಸ್ಫುರಿಸಿತು. ಎರಡು ದಿನಗಳ ಗೋಷ್ಠಿಗಳಲ್ಲಿ ಭಾಗಿಯಾದ ನಂತರ ನನ್ನ ಅನಿಸಿಕೆಯನ್ನು ಚುಟುಕಾಗಿ ದಾಖಲಿಸುವ ಪ್ರಯತ್ನ ಇದು.
- ಕನ್ನಡಿಗರು, ತಮಿಳರು,ತೆಲುಗರು ಎನ್ನುವಂತೆ ಜನಾಂಗವೊಂದು ತನ್ನ ಮಾತೃಭಾಷೆಯ ಮೂಲಕವೇ ಗುರುತಿಸಿಕೊಳ್ಳುವುದು. ಹಾಗಾಗಿ ಭಾಷೆ ನೆರಳಿನಂತೆ, ಮೈಗಂಟಿದ ಕವಚದಂತೆ. ಯಾವುದೇ ಭಾಷಿಕರಿಗಾಗಲಿ ಅವರ ಮಾತೃಭಾಷೆಯ ಹೆಸರನ್ನು ಕೇಳಿದಾಗ ಅವ್ಯಕ್ತ ಸಂವೇದನೆ ಆಗಿಯೇ ಆಗುತ್ತದೆ ಎನ್ನುವುದೇ ನನ್ನನಿಸಿಕೆ. ಆದರೆ ಸಂವೇದನೆಯನ್ನು ಹೊರಹಾಕುವ ,ಅದಕ್ಕೆ ಬದ್ಧವಾಗಿ ಕೆಲಸ ಮಾಡುವ ಬದ್ಧತೆ ನಮ್ಮಲ್ಲಿ ಇಲ್ಲ. ಅನ್ಯಭಾಷೆಯೊಂದಿಗೆ ಸುಲಭವಾಗಿ ಬೆರೆಯುವ ಕನ್ನಡಿಗರ ಜಾಯಮಾನವೆ ಕನ್ನಡ ಭಾಷೆಗೆ ಸಂಚನೆಯನ್ನೊಡ್ಡಿದೆ.
- ಚಲನಶೀಲವಾಗಿರುವ ಭಾಷೆಯನ್ನು ಸಂಸ್ಕೃತಿ ಇಲ್ಲವೆ ಸಾಹಿತ್ಯಕ್ಕೆ ಮಾತ್ರ ಅನ್ವಯಿಸುವುದು ಅಪಾಯದ ಸಂಗತಿ ವಿಜ್ಞಾನ ತಂತ್ರಜ್ಞಾನ, ವಾಣಿಜ್ಯ ಎಲ್ಲವನ್ನೂ ನಮ್ಮ ಮಾತೃಭಾಷೆಯ ತೆಕ್ಕೆಗೆ ಒಳಗುಮಾಡಿಕೊಳ್ಳಬೇಕಾದ ಅಗತ್ಯವಿದೆ ಆದರೆ ಜಾಗತಿಕರಣದ ಜಗುಲಿಯಲ್ಲಿ ಅವಕಾಶ ಇದೆಯೇ ಇದ್ದರೂ ಎಷ್ಟರ ಮಟ್ಟಿಗೆ ಅನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇಂದಿಗಿದೆ. ಇದಕ್ಕೆ ಪ್ರಭುತ್ವದ ಒಲವಿನ ಕೂಡೆ ಬಲವೂ ಬೇಕೇ ವಿನಃ ಅಪ್ಪಣೆಯಾಗಲಿ ಬೇಡ ಅನ್ನಿಸುತ್ತದೆ.
- ಕನ್ನಡ ನೆಲದಿಂದ ಹೊರಗಿರುವವರು ನಾವು ಕನ್ನಡಿಗರು ಎಂದು ಹೇಳಿಕೊಳ್ಳಲು ಮುಜುಗರ ಪಡಬೇಕಾದ ಅಗತ್ಯವಿಲ್ಲ. ಅನ್ಯ ಭಾಷೆಯ ಗುಂಗಿನಲ್ಲಿ ನಮ್ಮ ಭಾಷೆಯ ಕುರಿತಾಗಿರುವ ಅನನ್ಯ ಸಂಗತಿಗಳು ನಮಗೆ ತಿಳಿದಿಲ್ಲ. ಈಗ ಕನ್ನಡ ಪರಹೋರಾಟಗಳು ಆಗುತ್ತಿವೆ! ಇಲ್ಲ! ಆಗುತ್ತಿಲ್ಲ! ಅನ್ನುವುದಕ್ಕಿಂತ ಕನ್ನಡಿಗರಿಗೆಲ್ಲ ಕನ್ನಡ ಭಾಷೆ, ಚರಿತ್ರೆ, ಮೂಲಪದಕೋಶ ಇತ್ಯಾದಿಗಳ ಕುರಿತಾದ ಅರಿವಿದೆಯೇ ಅನ್ನುವುದೇ ಪ್ರಶ್ನೆಯಾಗಿದೆ. ಕನ್ನಡ ಭಾಷೆಯಲ್ಲಿ ಅಧ್ಯಯನಕ್ಕೆ ಸರಕಿನ ಕೊರತೆ ಇದೆ ಎಂದು ಅನ್ನಿಸುವುದೇ ಇಲ್ಲ. ಇನ್ಯಾವ ಭಾಷೆಯಲ್ಲೂ ಇಲ್ಲದ ರಗಳೆ, ಷಟ್ಪದಿ ಸಾಹಿತ್ಯ ಪ್ರಕಾರ ನಮ್ಮಲ್ಲಿದೆ. ಆದರೆ ಅದು ವಿಶ್ವವಿದ್ಯಾನಿಲಯಗಳ ಪಠ್ಯಕ್ರಮ ಮತ್ತು ಉತ್ತರ ಪತ್ರಿಕೆಗೆ ಮಾತ್ರ ಸೀಮಿತವೇ ಅನ್ನಿಸುತ್ತಿದೆ. ಭಾಷಿಕ ಗಡಿ ಮತ್ತು ಭೌಗೋಳಿಕ ಗಡಿಗಳ ಕುರಿತು ಮಾತನಾಡುವ ನಾವು ನಮ್ಮ ಅರಿವಿನ ಗಡಿಯನ್ನು ಬೇರೆ ಭಾಷೆಗೆ ಒಗ್ಗಿಸಿಕೊಳ್ಳಲು ಹವಣಿಸುತ್ತೇವೆ ತಪ್ಪಲ್ಲ ಆದರೆ ಅದುವೆ ಹೆಚ್ಚುಗಾರಿಕೆ ಆಗಿಬಿಟ್ಟಿದೆ. ಈ ಕಾರಣದಿಂದಲೇ ಕನ್ನಡ ಪ್ರತ್ಯಯದ ಭಾಷೆಯಾಗಿದೆ ಆಗುತ್ತಿದೆ. ಪ್ರಾಂತ ಬೇಧಹೊಂದಿರುವ ನಮ್ಮ ಮನೆ ಮಾತು ಅಪಹಾಸ್ಯದ ಸರಕಾಗುತ್ತಿದೆ ಕನ್ನಡ ಸಂವರ್ಧನೆಗೆ ಇದೊಂದು ಸಂಚನೆಯೇ ಸರಿ!
- ಮಾತೃಭಾಷೆಯನ್ನು ಸರಿಯಾಗಿ ಅರಿತವ ಅನ್ಯ ಭಾಷೆಗಳನ್ನೂ ಅರ್ಥೈಸಿಕೊಳ್ಳಬಲ್ಲ ಅನ್ನುವುದಿದೆ. ಈ ನಮ್ಮ ಭಾಷೆ ಅನ್ನುವ ಸಂಕವನ್ನು ದಾಟದೆ ಬೇರೆ ಭಾಷೆಯಲ್ಲಿ ವಿಹರಿಸುತ್ತೇವೆ, ವಿಭ್ರಮಿಸುತ್ತೇವೆ ಅನ್ನುವುದು ನನಗೆ ಪಾಟಲಲ್ಲವೆ. ಇಂದಿನ ಶಿಕ್ಷಣ ಕ್ರಮವೂ ಮಗುವಿಗೆ ಯಾವುದೇ ಭಾಷೆಯಲ್ಲೂ ಸಮರ್ಪಕ ತಿಳಿವಳಿಕೆಯನ್ನು ಕೊಡುತ್ತದೆ ಎಂದು ಅನ್ನಿಸುವುದಿಲ್ಲ. ಇಂದಿನ ಶಿಕ್ಷಣ ಕ್ರಮದ ಮೂಲ ವಿನ್ಯಾಸವೆ ಬದಲಾಗಬೇಕಿದೆ.
- ಗೂಗಲ್ ಮ್ಯಾಪನ್ನು ಹಿಗ್ಗಿಸಿ ನೋಡಿದಾಗ ನಾವಿರುವ ನೆಲ ದೊಡ್ಡದು ಅನ್ನಿಸುತ್ತದೆ ಅದೇ ಆ ಮ್ಯಾಪನ್ನು ಸಂಕುಚಿತ ಗೊಳಿಸಿದರೆ ನಮ್ಮ ಅಸ್ತಿತ್ವವೆಂದು ತಿಳಿದಿರುವ ನಮ್ಮ ನೆಲದ ಗುರುತು ಅಂತರ್ಲೀನವಾಗಿರುತ್ತದೆ , ಹಾಗೆ ನಮ್ಮ ಭಾಷೆ ತನ್ನಂತರ್ಗತದಲ್ಲಿ ಕಚ್ಚಾಸರಕುಗಳನ್ನು ಆವಕಮಾಡಿಕೊಂಡಿದೆ ಅಲ್ಲದೆ ಬೇರೆ ಯಾವುದೇ ಭಾಷೆಯಲ್ಲಿ ರಚನೆಯಾಗದಿರುವ ಪರಿಪ್ರೇಕ್ಷಗಳು, ಒಂದೇ ಕೃತಿಯಲ್ಲಿ ಶಿಷ್ಟ ಹಾಗು ಲೋಕರೂಢಿಯ ಮಾತುಗಳನ್ನು ಒಳಗೊಂಡ ವಿಭಿನ್ನಮೌಲ್ವಿಕ ಸಾಹಿತ್ಯ ನಮ್ಮಲ್ಲಿ ಈಗಾಗಲೆ ರಚನೆಯಾಗಿದೆ. ಅದನ್ನು ಬಹುಶಿಸ್ತೀಯ ಹಿನ್ನೆಲೆಯಿಂದ ಅನುಸಂಧಾನಿಸಬೇಕಿದೆ. ಕನ್ನಡ ಸಂವರ್ಧನೆಯ ಹೋರಾಟದ ಬೇರು ಅಡಗಿರುವುದು ಇಲ್ಲಿಯೇ..ಇಲ್ಲಿ ಸಾಹಿತ್ಯವನ್ನು ಪುರುಷ ನಿರ್ಮಿತ,ಮಹಿಳೆಯರಿಂದ ನಿರ್ನಿತವಾಗಿರುವುದು ಅನ್ನುವ ಸಂಕುಚಿತತೆಯಿಂದ ಹೊರಬಂದು ಶ್ರೇಷ್ಟವಾದದ್ದನ್ನು ಪರಿಗಣಿಸಬೇಕಿದೆ ಹಾಗೆ ಪ್ರಚುರಪಡಿಸಬೇಕಿದೆ.
- ಭೌಗೋಳಿಕ ಗಡಿಯನ್ನು ಮೀರಿ ಕನ್ನಡ ಬೆಳೆದಿರುವುದು ಎಷ್ಟು ಸತ್ಯವೋ ಅಷ್ಟೇ ಇಚ್ಛಾಶಕ್ತಿಯ ಕೊರತೆಯಿಂದ ಸೊರಗುತ್ತಿದೆ. ತಂತ್ರಜ್ಞಾನವನ್ನು ಬಳಸುವಲ್ಲಿ ನಮಗೆ ಕನ್ನಡದಲ್ಲಿ ಅವಕಾಶವಿದ್ದರೂ ಬಳಸದೆ ಇರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಉದಾ ಎಟಿಎಮ್, ಅಂತರ್ಜಾಲ ಬಳಸುವಲ್ಲಿ ಇತ್ಯಾದಿಗಳು. ಆಡಳಿತಾತ್ಮಕವಾಗಿಯೂ ಬಳಕೆಯಾಗುತ್ತಿರುವ ಕನ್ನಡದಲ್ಲಿ ಅನ್ಯದೇಶೀ ಪದಸಮುಚ್ಚಯವೇ ಇಂದಿಗೂ ಇರುವುದು ಖೇದಕರ. ರಾಷ್ಟ್ರೀಯ ಭಾಷೆಯ ಕಡ್ಡಾಯ ಹೇರುವಿಕೆ ಕೂಡ ಯಾವುದೇ ಪ್ರಾದೇಶಿಕ ಭಾಷೆ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ. ಇಂದಿಗೆ ದೇಶಭಾಷೆ ಹಾಗು ರಾಜ್ಯಭಾಷೆ ತಾಯಿ ಮಗುವಿನಂತೆ ಅನ್ಯೋನ್ಯತೆಯಿಂದ ಇರುವುದನ್ನು ಬಿಟ್ಟು ಮಲತಾಯಿ ಮಲಮಕ್ಕಳಂತೆ ವಿಚಾರ ವೈರುಧ್ಯವನ್ನು ಹೊಂದಿದೆ ಅನ್ನುವುದೆ ಅಪಸವ್ಯ. ಅನ್ನ, ಆಶ್ರಯ,ಅಕ್ಷರ, ಅಧ್ಯಾತ್ಮ,ಆತ್ಮಸಂತೋಷ ಮನುಷ್ಯನಿಗೆ ಮುಖ್ಯ ಇವುಗಳನ್ನು ಮೂಲವಾಗಿಸಿಕೊಂಡು ಯಾವುದೆ ಸಾಹಿತ್ಯ ಸಮ್ಮೇಳನದ ಆಯೋಜನೆಗೂ ಕೊರತೆಯಿಲ್ಲದಂತೆ ವಿನ್ಯಾಸಗೊಂಡ ಕನ್ನಡವೆಂದರೆ ಬರಿ ನುಡಿಯಲ್ಲ ಸಾಹಿತ್ಯಸಂವಾದಗಳು ಗೋಷ್ಠಿಗಳು ಶ್ರೋತೃವರ್ಗದ ಹೊಸ ಆಲೋಚನೆಗಳಿಗೆ ಅಕ್ಷರಶಃ ದಿಕ್ಸೂಚಿಯಂತಿತ್ತು. ಸಮಯವನ್ನು ಶಿಸ್ತಾಗಿ ಪರಿಪಾಲಿಸಿದ ಯಶಸ್ವಿ ಕಾರ್ಯಕ್ರಮವೆಂದರೆ ಕನ್ನಡವೆಂದರೆ ಬರಿ ನುಡಿಯಲ್ಲ. ವಿಷಯ ಮಂಡಕರು ಡಿಜಿಟಲ್ ಮಾಧ್ಯಮವನ್ನು ಬಳಸಿಕೊಳ್ಳಬಹುದಿತ್ತು ಅನ್ನುವುದನ್ನು ಹೊರತುಪಡಿಸಿ ಎರಡೂ ದಿನದ ವಿಚಾರ ಸಂಕಿರಣಗಳು,ಸಂವಾದಗಳು, ಕಾವ್ಯವಾಚನ, ಯಕ್ಷಗಾನ ಸಮಾನಮನಸ್ಕರನ್ನು ಮುದಗೊಳಿಸಿದವು. ಹೊಸದು ಎಂಬಂತೆ ಸಾಹಿತ್ಯದಲ್ಲಿ ಅಧ್ಯಾತ್ಮ ಎನ್ನುವ ಉಪನ್ಯಾಸ ಶ್ರೋತೃವರ್ಗವನ್ನು ಗಂಭೀರಾಲೋಚನೆಗೆ ಹಚ್ಚುವಲ್ಲಿ ಯಶಸ್ವಿಯಾಯಿತು. ನಾಡಿನ ಶ್ರೇಷ್ಟ ವಿದ್ವಾಂಸರಿಂದ ನೆರವೇರಿದ ಗಂಭೀರ,ಉಲ್ಲಾಸಭರಿತ ಇಂಥ ಚುರುಕು ವಿದ್ವತ್ಗೋಷ್ಠಿಗಳು ರಾಜ್ಯದೆಲ್ಲೆಡೆ ಅಯೋಜಿಸಲ್ಪಡಬೇಕು ಅದು ಯುವ ಮಹತ್ವಾಕಾಂಕ್ಷಿಗಳನ್ನು ತಲುಪಬೇಕು ಅನ್ನುವ ಅಭಿಪ್ರಾಯ ನನ್ನದು. ಇನ್ನೊಂದು ಹೆಸರು ಕನ್ನಡಿಗರು .ಸರಕಾರವನ್ನು ನೆಚ್ಚದೆ ಸಮಾನ ಕನ್ನಡ ಮನಸ್ಸುಗಳು ಇಂಥ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡ ಸಂವರ್ಧನೆಗೆ ಮುಂದಾಗಬೇಕಿರುವುದು ಇಂದಿನ ದಿನಮಾನದ ತುರ್ತು ಅಗತ್ಯ.
ಕೆಪಿ ನಟರಾಜ್
ಕನ್ನಡ ಭಾಷೆ ಮತ್ತು ಶಿಕ್ಷಣ :ನನ್ನ ಸುತ್ತ ಆಗುತ್ತಿರುವುದನ್ನು ನೋಡುತ್ತ
ಒಂದು :
ತುಮಕೂರು ಜಿಲ್ಲೆಗೆ ಸೇರಿದ ಮಧುಗಿರಿ ಒಂದು ಶೈಕ್ಷಣಿಕ ಜಿಲ್ಲಾ ಕೇಂದ್ರ . ಎಲ್ಲ ಕಡೆಗಳಂತೆಯೆ ಇಲ್ಲಿಯೂ ಸರ್ಕಾರಿ ಶಾಲೆಗಳು ತಮ್ಮ ಬಾಳುವೆ ಮುಗಿಸಿ ತಮ್ಮ ಜೀವನದ ಮುಸ್ಸಂಜೆಯಲ್ಲಿರುವಂತೆ ಕಂಡರೆ ಕಾಸಗಿ ಶಾಲೆಗಳು ಅಬಿವೃದ್ಧಿಯ ಏರುಗತಿಯಲ್ಲಿ ಇರುವಂತೆ ಕಾಣುತ್ತವೆ
.. ಈಗ ಹತ್ತಿರ ಹತ್ತಿರ ೫೫-೫೬ ರ ಮದ್ಯ ವಯಸ್ಸಿನ ಇಲ್ಲಿರುವ ಪರಿಚಿತರ್ಯಾರನ್ನೇ ಕಂಡು ” ನೀವು ಓದಿದ್ದೆಲ್ಲಿ ? ” ಎಂದು ಕೇಳಿ ನೋಡಿದರೆ ಅವರೆಲ್ಲರೂ ಇಲ್ಲಿ ನ ಪಶ್ಚಿಮ ಬಡಾವಣೆ ಪ್ರಾಥಮಿಕ ಶಾಲೆಯಲ್ಲಿ ಓದಿದ್ದಾಗಿಯೋ ಅಥವಾ ಕೋಟೆ ಪ್ರೈಮರಿ ಸ್ಕೂಲಿನಲ್ಲಿ ಓದಿದ್ದಾಗಿಯೋ ಅಥವಾ ಗರ್ಲ್ಸ್ ಹೈಯರ್ ಪ್ರೈಮರಿ ಸ್ಕೂಲ್ ನಲ್ಲೋ , ಅಥವಾ ಬಾಯ್ಸ್ ಮಿಡ್ಲ್ ಸ್ಕೂಲ್ .. ಅಂತಲೋ ಹೇಳುತ್ತಾರೆ ..ಅವರ ಮಾತುಗಳಲ್ಲಿ ಅವರ ಕಲಿಕೆಯ ಬಾಲ್ಯ ಕಾಲ ಗಾಢವಾಗಿ ಅಚ್ಚೊತ್ತಿರುವುದು ಗೊತ್ತಾಗುತ್ತದೆ
ಇದು ಕೇವಲ ಮದುಗಿರಿ ಯ ಮಾತಲ್ಲ ,ಎಲ್ಲ ಹಳ್ಳಿ ಪಟ್ಟಣ ನಗರ ಮಹಾನಗರಗಳ ಕತೆ ಇದೇ ಆಗಿದೆ
ಬಹುಶಹ ಬಡವ ಬಲ್ಲಿದರೆನ್ನದೆ ಮೇಲ್ಜಾತಿ ಕೆಳಜಾತಿಗಳೆನ್ನದೆ ಬಹುತೇಕ ನಮ್ಮ ತಲೆಮಾರಿನ ಎಲ್ಲರ ಶಿಕ್ಷಣವೂ ಸರ್ಕಾರಿ ಶಾಲೆಗಳ ಜೊತೆಗೆ ಹೆಣೆದುಕೊಂಡಿದೆ.. ಹೀಗಾಗಿ ಇದು ಎಲ್ಲರ ಕತೆಯೂ ಕೂಡಾ ಹೌದು
ಆದರೆ ಈಗ ಎಲ್ಲ ನಗರ ಪಟ್ಟಣ ಹಳ್ಳಿಗಳ ಪರಿಸ್ತಿತಿಯಂತೆಯೇ ಮದುಗಿರಿಯ ಪರಿಸ್ತಿತಿಯೂ ಬದಲಾಗಿದೆ.. ಕಳೆದ ಮುವ್ವತ್ತು ನಲವತ್ತು ವರ್ಷಗಳಲ್ಲಿ ಮದುಗಿರಿ ಪಟ್ಟಣದಲ್ಲಿಯೂ ಸಾಕಷ್ಟು ಸಂಕ್ಯೆಯಲ್ಲಿ ಕಾಸಗಿ ಶಾಲೆಗಳು ಎದ್ದುನಿಂತಿವೆ . ಬಡವರ ಎದುರು ಸಿರಿವಂತರು ನಿಂತಂತೆ ತಲೆಯೆತ್ತಿ , ಎದೆ ಸೆಟೆಸಿ ನಿಂತಿವೆ …ಈ ಕಾಸಗಿ ಶಾಲೆಗಳು ಇಂಗ್ಳಿಷ್ ಮಾದ್ಯಮದಲ್ಲಿ ಬೋಧಿಸುವ ಶಾಲೆಗಳು ಎನ್ನುವುದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿಲ್ಲ.. ಈ ಶಾಲೆಗಳ ಎದುರು ಸರ್ಕಾರಿ ಶಾಲೆಗಳು ಮಾಸಲು ಬಣ್ಣದ ಬಟ್ಟೆ ತೊಟ್ಟ ಹಳ್ಳಿಗರ ತರ ಕಾಣುತ್ತವೆ ..
ಸರ್ಕಾರಿ ಶಾಲೆಗಳು ಮಾಸಲಾಗಲು ಕಾರಣವೂ ಸಹ ಸ್ಪಷ್ಟ: ಇಲ್ಲಿ ಓದಲು ಬರುವವರೇ ದುರ್ಬಲ ಸಾಮಾಜಿಕ ಮತ್ತು ಅರ್ಥಿಕ ಹಿನ್ನೆಲೆಯವರು .ಶೈಕ್ಷಣಿಕ ಮಹತ್ವಾಕಾಂಕ್ಷೆ ಇಲ್ಲದ ಕುಟುಂಬ ಬಡವರ ಮಕ್ಕಳ ವಿನಹ. ಅಷ್ಟೋ ಇಷ್ಟೋ ಸುಸ್ತಿತಿಯಲ್ಲಿರುವವರ ಮಕ್ಕಳೂ ಸಹ ಈ ಸರ್ಕಾರಿ ಶಾಲೆಗಳಿಗೆ ಹೋಗುವುದಿಲ್ಲ …
ಖಾಸಗಿ ಶಾಲೆಗಳು ಆಧುನಿಕ ಪೋಷಾಕುಗಳಲ್ಲಿ , ಇಂಗ್ಳಿಷಿನ ಕೃತಕ ಅಬ್ಬರದಲ್ಲಿ ಜಗಜಗಿಸುತ್ತಿದ್ದರೂ ಸರ್ಕಾರಿ ಶಾಲೆಗಳು ಗತಿ ಬಸವಣ್ಣನವರ ವಚನವೊಂದು ವ್ಯಥಿಸುವಂತೆ “ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ.. ಎನ್ನುವ ವ್ಯಥೆಯ ಬಾವನೆಯನ್ನು ಉಂಟುಮಾಡುತ್ತವೆ .
ಎರಡು :
ನಾನು ಮತ್ತು ಕೆಲವರು ಗೆಳೆಯರು ಕಳೆದ ವರ್ಷ ಕೆಲವು ಸರ್ಕಾರಿ ಶಾಲೆಗಳನ್ನು ಕಂಡು ಅಲ್ಲಿನ ಶಿಕ್ಷಕರನ್ನು ಮಾತಾಡಿಸಿದಾಗ ಅವರು ಹಾಜರಾತಿ ಕ್ಷೀಣಿಸಿ ಶಾಲೆಗಳನ್ನು ಮುಚ್ಚುವ ಪರಿಸ್ತಿತಿ ಬಂದಿರುವ ಬಗ್ಗೆ ಆತಂಕಿತರಾಗಿ ಮಾತಾಡಿದರು .. ತಾವೆ ಕೈಲಾದಷ್ಡು ಹಣವನ್ನು ಒಟ್ಡುಗೂಡಿಸಿ ಮಕ್ಕಳನ್ನು ಶಾಲೆಗೆ ಕರೆತರಲು ವಾಹನ ವ್ಯವಸ್ಥೆ ಮಾಡಿರುವ ಬಗ್ಗೆ ಹೇಳಿದರು …
ಈಚಿನ ವರ್ಷಗಳಲ್ಲಿ ಸರ್ವ ಶಿಕ್ಷಾ ಅಭಿಯಾನದ ತರದ ಕಾರ್ಯಕ್ರಮಗಳು , ಮದ್ಯಾಹ್ಮದ ಬಿಸಿಯೂಟ ಯೋಜನೆ , ಹಲವು ತರದ ‘ಭಾಗ್ಯ ” ಯೋಜನೆಗಳು ಇದ್ದರೂ ಸಹ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಬಾರದೆ ಹೋಗುತ್ತಿರುವುದು ಆತಂಕದ ವಿಚಾರವಾಗಿದೆ… ಆದರೆ ಇದ್ಯಾಕೆ ಹೀಗಾಗುತ್ತಿದೆ ಎಂಬ ಬಗ್ಗೆ ಯಾರಿಗೂ ಸ್ಪಷ್ಟವಾದ ಗ್ರಹಿಕೆಯಿದ್ದಂತಿಲ್ಲ.
ಬೆಳೆಯುವ ಹಸುಳೆಗಳ ಎದುರು , ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳು ; ಕನ್ನಡ ಮಾದ್ಯಮ ಮತ್ತು ಇಂಗ್ಳಿಷ್ ಮಾದ್ಯದ ಶಾಲೆಗಳು ; ಹತ್ತಿರದ ಶಾಲೆಗಳು ಆರೇಳು ಮೈಲಿ ದೂರದ ಶಾಲೆಗಳು ; ರಾಜ್ಯ ಸಿಲಬಸ್ ಮತ್ತು ಸಿಬಿಎಸ್ಸಿ ಐಸಿಎಸ್ಸಿ ಪಟ್ಯಕ್ರಮದ ಶಾಲೆಗಳು ಹೀಗೆ ..ಹಲವು ತಾರತಮ್ಯದ ಮುಖಗಳನ್ನು ನಿಲ್ಲಿಸಿರುವ ಸಮಾಜಕ್ಕೆ ಕೊಂಚವೂ ನಾಚಿಕೆಯಾಗಲಿ , ನ್ಯಾಯ ಪ್ರಜ್ನೆಯಾಗಲಿ ಇಲ್ಲದಿರುವುದು ಸ್ಪಷ್ಟವಾಗಿದೆ
ಇವುಗಳ ಜೊತೆಗೆ .. ಬಾಷಾ ಕಲಿಕೆಗೆ ಸಂಬಂದಿಸಿದ ತ್ರಿಬಾಷಾ ನೀತಿಯೂ ಸಹ ಮಕ್ಕಳ ಮೇಲೆ ಹೊರಬೇಕಾದ ಹೊರೆಯಾಗಿ ಬಂದು ಕೂರುತ್ತದೆ ..
ಕನ್ನಡದ ಮಕ್ಕಳು ಅನವಶ್ಯಕ ವಾಗಿ ತಮ್ಮದಲ್ಲದ ಮತ್ತು ತಮ್ಮ ಏಳ್ಗೆಗೆ ಯಾವ ರೀತಿಯಲ್ಲೂ ಸಹಾಯಕ್ಕೆ ಬರದ ಸಂಸ್ಕೃತ ಮತ್ತು ಹಿಂದಿ ಬಾಷೆಗಳನ್ನು ಕಲಿಯಬೇಕಾಗಿಬರುತ್ತದೆ.. ..
ಇವೆಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಕಲಿಕಾ ಮಾದ್ಯಮದ ಆಯ್ಕೆ ಯ ವಿಚಾರ ಬಂದರೆ , ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾದ್ಯಮವನ್ನೂ ಕಾಸಗಿ ಶಾಲೆಗಳಲ್ಲಿ ಇಂಗ್ಳಿಷ್ ಮಾದ್ಯಮದ ಮೂಲಕವೂ ಕಲಿಸಲಾಗುತ್ತದೆ … ಸರ್ಕಾರಿ ಶಾಲೆಗಳಿಗೆ ಬಡವರ ಮಕ್ಕಳೂ ಖಾಸಗಿ ಶಾಲೆಗಳಿಗೆ ಉಳ್ಳವರ ಮಕ್ಕಳೂ ಓದಲು ಹೋಗುವ ಕಾರಣ ಇಲ್ಲಿ ಬಹು ದೊಡ್ಡ ಪ್ರಮಾಣದ ಕಂದಕ. ಅಂತರ ಉಂಟಾಗಿಬಿಟ್ಟಿದೆ
ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಹತ್ತನೆಯ ತರಗತಿಯವರೆಗೆ ಕನ್ನಡ ಮಾದ್ಯಮದಲ್ಲಿ ಕಲಿಯುತ್ತಿರುವ ಕೆಲವು ಹೈಸ್ಕೂಲುಗಳ ವಿದ್ಯಾರ್ಥಿಗಳನ್ನು ಕಂಡು ಮಾತಾಡಿದಾಗ ಅವರು ತೋರಿದ ಅಸಹಾಯಕತೆ ಆಕ್ರೋಷ ಇವತ್ತಿಗೂ ನಮ್ಮ ಕಣ್ಣ ಮುಂದಿದೆ..
ಹತ್ತನೆಯ ತರಗತಿಯ ನಂತರ ಇಂಜಿನಿಯರಿಂಗ್ , ವೈದ್ಯಕೀಯ , ಮೂಲ ವಿಜ್ಙಾನ ಮುಂತಾದ ವಿಷಯಗಳನ್ನು ಕನ್ನಡದಲ್ಲಿ ಕಲಿಸದ ವ್ಯವಸ್ತೆಯ ಬಗ್ಗೆ ಕೇಳಿ ಕುಪಿತರಾದ ಮಕ್ಕಳು ಹೋರಾಟಕ್ಕಿಳಿಯಲು ಸಿದ್ದವೆಂದರು
ಮೂರು:
ಇತ್ತೀಚೆಗೆ ಹಿರಿಯ ಲೇಖಕರಾದ ದೇವನೂರು ಮಹಾದೇವ ಮತ್ತು ಬರಗೂರು ರಾಮಚಂದ್ರಪ್ಪನವರನ್ನೂ ಒಳಗೊಂಡ ಹಿರಿಯ ಲೇಖಕರು UGC ಯ ಸಿಬಿಸಿಎಸ್( choice based credit system ) ಎಂಬ ನೀತಿ ಕನ್ನಡದಂತಹ ಭಾಷೆ ಮತ್ತು ವಿಷಯಗಳ ಕಲಿಕೆಯ ಸಮಯವನ್ನು 18 ರಿಂದ 20 ಗಂಟೆಯವರೆಗೆ ಕಿತ್ತುಕೊಂಡು ಕನ್ನಡದ ಎಲ್ಲಾ ನೆಲೆಗಳ ಅಸ್ತಿತ್ವಕ್ಕೂ ಬಹು ದೊಡ್ಡ ಆಪತ್ತನ್ನು ಉಂಟುಮಾಡುತ್ತದೆ ಎಂದು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಇದನ್ನು ತಡೆಯಬೇಕೆಂದು ಆಗ್ರಹಿಸಿದರು ..
ಅದರ ಕತೆ ಏನಾಯಿತೊ ಗೊತ್ತಾಗಲಿಲ್ಲ.. ಅವರು ಮನವಿ ಕೊಟ್ಟ ಮುಕ್ಯಮಂತ್ರಿಗಳೂ ಬದಲಾದರು ಆದರೆ ಕೋವಿಡ್ ಕಾಲದ ಅಂಧಯುಗದಲ್ಲಿ ಕೇಂದ್ರ ಸರ್ಕಾರ , ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ( NEP – 2020 ) ಚರ್ಚೆಯಿಲ್ಲದೆ ಏಕಪಕ್ಷೀಯವಾಗಿ ದೇಶದ ಮೇಲೆ ಹೇರಿತು..
ಸ್ಥಳೀಯ ಭಾಷೆಗಳ ಉಳಿವಿನ ಮೇಲೆ ಅದರ ದುಷ್ಪರಿಣಾಮ ಗಳನ್ನು ಈಗ ಬೆರಳೆಣಿಕೆಯ ಕೆಲವು ಪ್ರಜಾಪ್ರಭುತ್ವ ವಾದಿಗಳಷ್ಟೇ .. ಚರ್ಚಿಸುತ್ತಿದ್ದಾರೆ. .. ಆದರೆ ಅದಾಗಲೇ ಕಾಯ್ದೆಯಾಗಿ ಜಾರಿಗೆ ಬಂದಾಗಿದೆ .
ಕೇಂದ್ರದ ಹಿಂದಿ ಲಾಬಿಗಳು ‘ಶಿಕ್ಷಣ ನೀತಿ’ ಎಂಬ ಹೆಸರಿನಲ್ಲಿ ರೂಪಿಸಿರುವ, ರೂಪಿಸುತ್ತಿರುವ ಭಾರತೀಯ ಜನ ಭಾಷೆಗಳನ್ನು ನಾಶ ಮಾಡುವ ಹುನ್ನಾರ ಇದರ ಹಿಂದೆ ಇದೆ. ಆದ್ದರಿಂದ ಕೇಂದ್ರದ ಬಿಜೆಪಿ ತನ್ನ ಪ್ರತಿಯೊಂದು ನೀತಿಯನ್ನೂ ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಯ ಬಹುತ್ವವನ್ನು ನಾಶ ಮಾಡುವ “ಹಿಂದೂ, ಹಿಂದಿ, ಹಿಂದೂಸ್ಥಾನ ( ಒಂದು ರಾಷ್ಟ್ರ ಒಂದೇ ಧರ್ಮ , ಒಂದೇ ಭಾಷೆ ) ತರಹದ ಏಕಾಕಾರಿ ರಾಷ್ಟ್ರದ ಅಜೆಂಡಾದ ವ್ಯವಸ್ಥಿತ ಉದ್ದೇಶವಿಟ್ಟುಕೊಂಡು ಮಾಡುತ್ತಿರುವ ಕಾರಣ ಇದು ಕಷ್ಟ ಸಾದ್ಯವಾಗಿದೆ.
ಇದನ್ನು ಪ್ರತಿಭಟಿಸಲು ಎಲ್ಲ ರಾಜ್ಯಗಳ – ಕನಿಷ್ಠ ಪಕ್ಷ ದಕ್ಷಿಣದ ದ್ರಾವಿಡ ರಾಜ್ಯಗಳ ವಿವಿಧ ವಿವಿಗಳ ಭಾಷಾ ಬೋಧಕ ಪ್ರಾಧ್ಯಾಪಕರು ಕೇಂದ್ರವನ್ನು ಅದರಲ್ಲೂ ಯುಜಿಸಿ ಯನ್ನು ಇದರ ವಿರುದ್ಧ ನಿಂತು ಪ್ರಶ್ನಿಸಬೇಕಾಗಿದೆ. ಇಲ್ಲದಿದ್ದರೆ ಈ ಪ್ರತಿಭಟನೆ ಉಪಯುಕ್ತವಾಗುವುದಿಲ್ಲ.ಆದರೆ ಕಾಲ ಸರಿದುಹೋಗಿದೆ
ಜೊತೆಗೆ ಈ ಪ್ರತಿಭಟನೆ ಅಥವಾ ಬೇಡಿಕೆ ಮೂಲಭೂತ ಸ್ವರೂಪದ್ದಲ್ಲ ಎನ್ನುವ ಮಾತನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ . ಇದು ಕನ್ನಡಿಗರ ಹಲವು ದಶಕಗಳ ನಿರಂತರ ಕನ್ನಡದ ಉಪೇಕ್ಷಿಸಿದ್ದರ ಫಲವಾಗಿದೆ . ಆ ಉಪೇಕ್ಷೆಯ ಇತಿಹಾಸವನ್ನಿಲ್ಲಿ ದಾಖಲಿಸಿದ್ದೇನೆ.
1960 ರ ದಶಕದ ತ್ರಿಭಾಷಾ ನೀತಿ
1960 ರ ದಶಕದಲ್ಲಿ ದಕ್ಷಿಣ ಭಾರತೀಯ ಭಾಷಿಕ ಸಮುದಾಯಗಳ ಮೇಲೆ ಹೇರಲಾದ ತ್ರಿಬಾಷಾ ನೀತಿಯು ಕನ್ನಡದ ಮಹಾಕವಿ ಕುವೆಂಪು ಅವರು ವಿವರಿಸಿದಂತೆ ಉತ್ತರ ಭಾರತ ಕೇಂದ್ರಿತ ಹಿಂದಿ ಪ್ರಭುತ್ವವು ದಕ್ಷಿಣದ ದ್ರಾವಿಡ ಭಾಷಾ ಪರಿವಾರಗಳ ಮೇಲೆ ಹಿಂದಿಯನ್ನು ಹಿಂದಿನ ಬಾಗಿಲಿನಿಂದ ಒಳ ತೂರಿಸುವ ಸಂಚಾಗಿತ್ತು.
ಈ ಸಂಚನ್ನು ಹಿಮ್ಮೆಟ್ಟಿಸಲು ಕುವೆಂಪು ಕರೆಕೊಡುತ್ತಾರೆ. ಆದರೆ ಇವತ್ತಿನವರೆಗೂ ಕನ್ನಡಿಗರು ಕುವೆಂಪು ಅವರ ಈ ಮಾತನ್ನು ಗಣನೆಗೆ ತೆಗೆದುಕೊಂಡೇ ಇಲ್ಲ
ಈ ತ್ರಿಭಾಷಾ ಸೂತ್ರದ ಕಾರಣದಿಂದಲೆ ಪರದೇಸಿ ಭಾಷೆಗಳಾದ ಹಿಂದಿ ಮತ್ತು ಸಂಸ್ಕೃತ ಬಾಷೆಗಳು ಕನ್ನಡಿಗರ ಹೆಗಲೇರಿದವು. ಇವುಗಳ ಬಗ್ಗೆ ಅಶಿಕ್ಷಿತ ಅರೆ ಶಿಕ್ಷಿತ ಕನ್ನಡಿಗರಿಗೆ ರಾಷ್ಟ್ರ ಭಾಷೆ , ದೇವ ಭಾಷೆ ಎಂದೆಲ್ಲ ಹೇಳಿ ಒಪ್ಪಿಸಲಾಗಿದೆ.
ಸಂಸ್ಕೃತ ಭಾಷಾ ಕಲಿಕೆ ಎಷ್ಟೊಂದು ನಗೆಪಾಟಲಿನದೂ, ಆಕ್ಷೇಪಾರ್ಹದ್ದೂ, ಅನ್ಯಾಯದ್ದೂ ಆಗಿದೆಯೆಂದರೆ, ಕನ್ನಡದ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯಲು ಸಂಸ್ಕೃತ ಪಠ್ಯಗಳನ್ನು ಸರಳಗೊಳಿಸಲಾಗಿದೆಯಷ್ಟೇ ಅಲ್ಲ , ಪರೀಕ್ಷೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಗಳಲ್ಲಿ ಉತ್ತರ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಇದು ಕನ್ನಡ ಸಂಜಾತರ್ಯಾರಿಗೂ ಪ್ರಶ್ನಿಸಬೇಕಾದ ಮೋಸವೆಂದು ಅನ್ನಿಸಿಯೇ ಇಲ್ಲ.
ಇದರ ವೈಪರೀತ್ಯ ಅರ್ಥವಾಗಲು ನೀವು ಕನ್ನಡ ಪ್ರಶ್ನೆಪತ್ರಿಕೆಗೆ ಇಂಗ್ಲಿಷ್ ನಲ್ಲಿ ಉತ್ತರ ಬರೆಯಬಹುದು ಎಂದು ಅವಕಾಶ ಮಾಡಿಕೊಡಲಾಗಿದೆ ಎಂಬುದನ್ನು ಊಹಿಸಿ ನೋಡಿ. ಕನ್ನಡ ಬಾಷೆಯ ವಿದ್ಯಾರ್ಥಿಗಳು ಕನ್ನಡ ಪ್ರಶ್ನೆಗಳಿಗೆ ಇಂಗ್ಲಿಷಿನಲ್ಲಿ ಉತ್ತರ ಬರೆಯಲಾದರೂ ಸಾಧ್ಯವೆ? ಬರೆದರೂ ಕನ್ನಡ ಅದ್ಯಾಪಕ ಅದನ್ನು ಮೌಲ್ಯಮಾಪನ ಮಾಡಲು ಸಾದ್ಯವೆ? ಒಂದು ಪಕ್ಷ ಮಾಡಿದರೂ ಮಹಾ ಮಹಾ ಪೋಷಕರು ಅದನ್ನು ಒಪ್ಪಲು ಸಿದ್ದರಿದ್ದಾರಾ ಯೋಚಿಸಿ…
” ಕನ್ನಡ ಟೀಚರ್ ಇಂಗ್ಲಿಷಿನಲ್ಲಿ ಬರೆದರೆ ಹೆಂಗ್ರಿ ಮೌಲ್ಯ ಮಾಪನ ಮಾಡ್ತಾನೆ ?” ಅಂತ ಪ್ರಶ್ನಿಸಿರುತ್ತಿದ್ದರು. ಆದರೆ ಇದೇ ‘ಮರಳು ಪೋಷಕರು’ ಸಂಸ್ಕೃತದ ಬಗ್ಗೆ ಈ ಮಾತಾಡುತ್ತಿಲ್ಲ. ಇದು ಕನ್ನಡಿಗರ ಮಾನಸಿಕ ಅಸಮತೋಲನವನ್ನು ತೋರಿಸುತ್ತದೆ.
ಹೀಗೆ ಕನ್ನಡವನ್ನು ಉದ್ದಕ್ಕೂ ಕೊಲ್ಲುತ್ತ ಬಂದಿರುವ ತ್ರಿಭಾಷಾ ಸೂತ್ರವನ್ನು ಇದುವರೆಗೂ ಪ್ರಶ್ನಿಸದ ಕಾರಣಕ್ಕೆ ಇವತ್ತು ugc ತಂದಿರುವ ಸ್ಥಳೀಯ ಭಾಷೆಗಳನ್ನು ಒರೆಸಿಹಾಕುವ ಹೊಸ ಸಂಚು ಹೊಸೆಯಲು ಸಾದ್ಯವಾಗಿದೆ. ತ್ರಿಭಾಷಾ ಸೂತ್ರದ ತಾರ್ಕಿಕ ಪರಿಣಾಮಗಳೆಂದೂ ಈ ugc ತಿದ್ದುಪಡಿಯನ್ನು ನಾವು ಅರ್ಥೈಸಬಹುದಾಗಿದೆ..
1980 ರ ದಶಕದ ಭಾಷಾ(ಗೋಕಾಕ್) ಚಳವಳಿ
1980 ರ ದಶಕವನ್ನು ನಾವು ಗೋಕಾಕ್ ಚಳವಳಿಯ ಯುಗ ಎನ್ನಬಹುದಾಗಿದೆ. ಕುವೆಂಪು ಮತ್ತು ಡಾ ರಾಜ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಚಳವಳಿ ಕನ್ನಡಿಗರಲ್ಲಿ ಆತ್ಮಾಭಿಮಾನವನ್ನು, ಭಾಷಾಭಿಮಾನವನ್ನು ಜಾಗೃತಿಗೊಳಿಸಿತು.
ಈ ಚಳವಳಿ ತ್ರಿಭಾಷಾ ಸೂತ್ರದ ಕಾರಣದಿಂದಾಗಿ ಪ್ರೌಢ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ನಮ್ಮ
‘ ಸ್ವಾಭಿಮಾನಿ ‘ ಕನ್ನಡಿಗರು ತಮ್ಮ ಮಾತೃಭಾಷೆಯಾದ ಕನ್ನಡವನ್ನು ಕೈಬಿಟ್ಟು ಸಂಸ್ಕೃತವನ್ನು ತೆಗೆದುಕೊಳ್ಳುತ್ತಿದ್ದುದನ್ನು ತಪ್ಪಿಸಲು ನಡೆದ ಚಳವಳಿ.
ಸಂಸ್ಕೃತದ ಹಾವಳಿಯನ್ನು ತಪ್ಪಿಸಲೋಸುಗ ಭುಗಿಲೆದ್ದ ಈ ಚಳವಳಿ, ಪ್ರೌಢ ಶಾಲಾ ಹಂತಗಳಲ್ಲಿ ಸುಲಭವಾಗಿದ್ದ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳುವ ಮೂಲಕ ಮಾರ್ಕ್ಸ್ ಲೂಟಿ ಹೊಡೆದು ಕನ್ನಡ ಭಾಷೆ ತೆಗೆದುಕೊಂಡಿದ್ದ ಹುಡುಗರನ್ನು ನಿವಾರಿಸಿ ಅವಕಾಶಗಳ ಸೂರೆ ಹೊಡೆಯುತ್ತಿದ್ದುದ್ದನ್ನು ನಿವಾರಿಸಲೆಂದು ಶುರುವಾದ ಚಳವಳಿ, ವಿ ಕೃ ಗೋಕಾಕ್ ಅವರ ನೇತೃತ್ವದ ಸಮಿತಿಯ ಅಧ್ಯಯನ ಮತ್ತು ಶಿಫಾರಸುಗಳ ತನಕ ವಿಕಾಸಹೊಂದಿತು. ಡಾ ರಾಜ್ ಚಳವಳಿಯ ಕಣಕ್ಕಿಳಿದರು.
ಗೋಕಾಕ್ ಸಮಿತಿಯ ಶಿಫಾರಸುಗಳು ಕನ್ನಡದ ಪರವಾಗಿ ಬಂದರೂ ನಂತರ ಕೋರ್ಟುಗಳು ಅದನ್ನು ಅಮಾನ್ಯಗೊಳಿಸಿ ಈಗ ಮತ್ತದೇ ತ್ರಿಬಾಷಾ ಸೂತ್ರ, ಕನ್ನಡ ಸಂಸ್ಕೃತ ಹಿಂದಿ ಯಾವುದನ್ನಾದರು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳಬಹುದಾಗಿದೆ.
ಕನ್ನಡದ ಸ್ಥಾನಮಾನವನ್ನು ಸಾರ್ವಭೌಮಗೊಳಿಸಲು ಉದ್ದೇಶಿಸಿದ್ದ ಗೋಕಾಕ್ ಚಳವಳಿಯ ವಿಫಲತೆಯು ಕನ್ನಡಿಗರಾದ ನಮಗೆ ಆದ ಚಾರಿತ್ರಿಕ ಅವಹೇಳನವಾಗಿದೆ, ಮುಖಭಂಗವಾಗಿದೆ ಮತ್ತು ಪ್ರಶ್ನಿಸಬೇಕಾದ ಮೂಲಭೂತ ಅನ್ಯಾಯವಾಗಿದೆ.
2009 ರಲ್ಲಿ ಜಾರಿಗೆ ಬಂದ ಶಿಕ್ಷಣ ಹಕ್ಕುಕಾಯ್ದೆ (RTE)
2009 ರಲ್ಲಿ ಕೇಂದ್ರವು ಜಾರಿಗೆ ತಂದ ಶಿಕ್ಷಣ ಹಕ್ಕು ಕಾಯ್ದೆಯು ಇದುವರಗೆ ಕರ್ನಾಟಕದಲ್ಲಿ ಪ್ರತಿ ವರ್ಷ 1/5 ರಷ್ಟು ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳನ್ನು ಸರ್ಕಾರಿ ಸಾಲೆಗಳ ಕನ್ನಡ ಮಾಧ್ಯಮ ತರಗತಿಗಳಿಂದ ಹೊತ್ತೊಯ್ದು ತಲಾ ಒಂಭತ್ತರಿಂದ ಹತ್ತು ಸಾವಿರ ಶುಲ್ಕ ಪಾವತಿಮಾಡಿ ಖಾಸಗಿ ಇಂಗ್ಲಿಷ್ ಮಾಧ್ಯಮದ ಸಾಲೆಗಳಿಗೆ ಸೇರಿಸುತ್ತಾ ಬಂದಿದೆ. ಈ ಮೂಲಕ ಸರ್ಕಾರ ಕನ್ನಡಕ್ಕೆ ದ್ರೋಹವೆಸಗಿದೆಯಷ್ಟೇ ಅಲ್ಲ, ಕಾನ್ವೆಂಟ್‌ಗಳೆಂಬ ಇಂಗ್ಲಿಷ್ ಮಾಧ್ಯಮದ ವ್ಯಾಪಾರಿ ಮಳಿಗೆಗಳು ಕೊಬ್ಬಲು ಕಾರಣವಾಗಿದೆ.
ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿಸಂಖ್ಯೆ ಹೇಳುವಂತೆ, ಪ್ರತಿವರ್ಷ ಹತ್ತಿರ ಹತ್ತಿರ 1.25 ಲಕ್ಷ ವಿದ್ಯಾರ್ಥಿಗಳನ್ನು ಸರ್ಕಾರವೇ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರತಿವರ್ಷ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದೆ ಅವರ ಶಿಕ್ಷಣ ಶುಲ್ಕವನ್ನು ಸರ್ಕಾರವೇ ಭರಿಸುತ್ತಿದೆ .ಈ ಮೂಲಕ ಸರ್ಕಾರಿ ಶಾಲೆಗೆ ಬರುವ 1/5 ರಷ್ಟು ವಿದ್ಯಾರ್ಥಿಗಳನ್ನು ಸರ್ಕಾರವೇ ಖಾಸಗಿ ಶಾಲೆಗಳತ್ತ ಒಯ್ಯುತ್ತಿದೆ.
ಆದ್ದರಿಂದ RTE ಕನ್ನಡಕ್ಕೆ, ಸರ್ಕಾರೀ ಶಾಲೆಗಳಿಗೆ, ಕನ್ನಡ ಮಾದ್ಯಮಕ್ಕೆ ಮಾರಕವಾಗಿ ಪರಿಣಮಿಸಿದ್ದು, ಇದನ್ನು ಕಿತ್ತು ಹಾಕದೆ ಕನ್ನಡಕ್ಕೆ ಬಿಡುಗಡೆಯೇ ಇಲ್ಲವಾಗಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ ಕನ್ನಡ ಮಾದ್ಯಮದ 13 ಲಕ್ಷ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದ ಕಾನ್ವೆಂಟ್ ಶಾಲೆಗಳ ಪಾಲಾಗಿವೆ.
ಪ್ರತಿ ವರ್ಷ 500 ಕೋಟಿಯಷ್ಟು ಹಣ RTE ಮೂಲಕ ಖಾಸಗಿ ಶಾಲೆಗಳ ಜೇಬು ಸೇರುತ್ತಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ ಸರ್ಕಾರಿ ಬೊಕ್ಕಸದ ಎಷ್ಟು ಹಣ ಖಾಸಗಿಯವರತ್ತ ಹರಿದಿದೆ
ಪ್ರತಿ ವರ್ಷ 500 ಕೋಟಿಯಷ್ಟು ಹಣ RTE ಮೂಲಕ ಖಾಸಗಿ ಶಾಲೆಗಳ ಜೇಬು ಸೇರುತ್ತಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ ಸರ್ಕಾರಿ ಬೊಕ್ಕಸದ ಎಷ್ಟು ಹಣ ಖಾಸಗಿಯವರತ್ತ ಹರಿದಿದೆ ಎಂದು ಲೆಕ್ಕ ಹಾಕಬಹುದಾಗಿದೆ. ಆದರೆ ಇದೇ ಹಣವನ್ನು ಸರ್ಕಾರಿ ಶಾಲೆಗಳ ಬಲವರ್ಧನೆಗೆ , ಹೊಸ ಶಿಕ್ಷಕರ ನೇಮಕಾತಿಗೆ ಬಳಸಿದ್ದರೆ, ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಬಲಗೊಳ್ಳುತ್ತಿತ್ತು.
ಅಂತಿಮವಾಗಿ ಶಿಕ್ಷಣ ಹಕ್ಕು ಕಾಯ್ದೆಯು Right to Education Act ( RTE ) ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚಿಸುತ್ತದೆ. ಅದು ಕೇವಲ ಕಾಲದ ಪ್ರಶ್ನೆಯಷ್ಟೆ. ಈ ಕಾಯ್ದೆ ಬಂದ ನಂತರ ಕಳೆದ ಹನ್ನೊಂದು ವರ್ಷಗಳಲ್ಲಿ ಹಾಜರಾತಿ ಕ್ಷೀಣಿಸಿದ ಕಾರಣ 20 ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಿಹೋಗಿವೆ.
2014 ರ ಸುಪ್ರೀಂ ಕೋರ್ಟ್ ತೀರ್ಪು:
ಶಿಕ್ಷಣದಲ್ಲಿ ಕಲಿಕೆಯ ಭಾಷೆ ಅಥವಾ ಮಾಧ್ಯಮವನ್ನು ಸರ್ಕಾರ ನಿರ್ಧರಿಸುವಂತಿಲ್ಲ
ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಅಥವಾ ಮಾತ್ರುಭಾಶೆಯನ್ನು ಸಾರ್ವತ್ರಿಕವಾಗಿ ಜಾರಿಗೊಳಿಸುವ ಸರ್ಕಾರದ ಪ್ರಯತ್ನಗಳನ್ನು 2014ರಲ್ಲಿ ಹೊರಬಿದ್ದ ಸುಪ್ರೀಂ ಕೋರ್ಟ್ ಪೂರ್ಣ ಪೀಠ ಅಸಾಂವಿಧಾನಿಕ ಎಂದು ಹೇಳಿದೆ. ಈ ಮೂಲಕ 20 ವರ್ಷಗಳ ಸುದೀರ್ಘ ಕಾನೂನು ಹೋರಾಟ ಶೂನ್ಯ ಸಾಧನೆಯೊಂದಿಗೆ ಕೊನೆಗೊಂಡಿದೆ. ಕನ್ನಡ ಅಥವಾ ಮಾತ್ರುಭಾಶೆಯನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯ ಮಾಡುವುದನ್ನು ಪೋಷಕರ ಮತ್ತು ವಿದ್ಯಾರ್ಥಿಗಳ ಆಯ್ಕೆ ಮಾಡುವ ಮೂಲಭೂತ ಹಕ್ಕಿನ ಚ್ಯುತಿ ಎಂದು ಬಣ್ಣಿಸಿದೆ.
ಮೇಲಿನ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಾರ್ವತ್ರಿವಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಧ್ಯಮ ವನ್ನು ಜಾರಿಗೊಳಿಸುವುದು ಭವಿಷ್ಯದಲ್ಲಿ ಅಸಾಧ್ಯ ಸಂಗತಿಯಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಿ ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಭರವಸೆ ನೀಡುತ್ತ ಮೂರು ಸಾಧ್ಯತೆಗಳನ್ನು ಜನತೆ ಎದುರು ಇಟ್ಟಿದ್ದರು
1.RTE ಕಾಯದೆ ಗೆ ತಿದ್ದುಪಡಿ ತರುವುದು
2 . ಕೇಂದ್ರ ಸರ್ಕಾರ ವನ್ನು ಒತ್ತಾಯಿಸುವ ಮೂಲಕ ಸಂವಿಧಾನಕ್ಕೆ ತಿದುಪಡಿ ತರುವುದು.
3 . ಪ್ರಧಾನಿಯ ಬಳಿಗೆ ಮುಖ್ಯಮಂತ್ರಿಗಳ ನಿಯೋಗ ಕರೆದೊಯ್ದು, ಸೂಕ್ತ ಕಾನೂನಿನ ಮೂಲಕ ಭಾರತೀಯ ಭಾಷೆಯ ಹಿತ ಕಾಯಲಾಗುವುದು.
ಎಂದು ಹೇಳುತ್ತಲೇ ಏನೂ ಮಾಡದೆ ಅವರು ನಿರ್ಗಮಿಸಿದರು
ಕನ್ನಡಕ್ಕೆ ದಶದಿಕ್ಕಿನಿಂದಲೂ ಗಂಡಾಂತರ
ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಬಳಿಕ ಸರ್ಕಾರದ ಅನುಮತಿಗಾಗಿ ಕಾದಿದ್ದ 4 ಸಾವಿರಕ್ಕೂ ಹೆಚ್ಚು ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳು ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ತಳ ಊರಿವೆ. 2009 ರ ಶಿಕ್ಷಣ ಹಕ್ಕು ಕಾಯ್ದೆ ಮತ್ತು 2014 ರಲ್ಲಿ ಹೊರಬಿದ್ದ ಸುಪ್ರೀ ಕೋರ್ಟ್ ತೀರ್ಪುಗಳೆರಡೂ ನಮ್ಮ ಸರ್ಕಾರಿ ಶಾಲೆಗಳನ್ನು ಮಸಣಗಾಣಿಸಲು ಪಣ ತೊಟ್ಟು ಕೆಲಸ ಮಾಡುತ್ತಿವೆ. ಕಳೆದ ಹನ್ನೆರಡು ವರ್ಷಗಳಲ್ಲಿ ಹತ್ತಿರ ಹತ್ತಿರ 15000 ಶಾಲೆಗಳು ವಿದ್ಯಾರ್ಥಿಗಳ ಪ್ರವೇಶಾತಿ ಇಲ್ಲದೆ ಮುಚ್ಚಿ ಹೋಗಿವೆ ಮತ್ತು ಸದ್ಯೋ ಭವಿಷ್ಯದಲ್ಲಿ ಅಪಾರ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿಹೋಗುವ ಅಪಾಯ ಎದುರಾಗಿದೆ.
ಹೀಗಾಗಿ , ಪ್ರಾಥಮಿಕ ಶಿಕ್ಷಣದಲ್ಲಿ ಸಾರ್ವತ್ರಿಕ ಕನ್ನಡ ಮಾಧ್ಯಮಕ್ಕಾಗಿನ ಹೊರಾಟ ಇನ್ನು ಮುಗಿದ ವಿಚಾರವಾಗಿದೆ
ಪ್ರಾಥಮಿಕ ಶಿಕ್ಷಣದಲ್ಲಿ ಮಾದ್ಯಮದ ಹೇರಿಕೆಯು ಅಸಾಂವಿದಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ನಂತರ , ಸಾರ್ವತ್ರಿಕವಾಗಿ ಪ್ರಾಥಮಿಕ ನಾಲ್ಕನೇ ತರಗತಿವರೆಗೆ ಕನ್ನಡ ಅಥವಾ ಮಾತ್ರುಭಾಶೆ ತರುವ ಪ್ರಯತ್ನ ಗಳನ್ನು ಕೈಬಿಟ್ಟು , ಸರಕಾರಗಳು 1ರಿಂದ 10 ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರಕ್ಶಿಸಲು ಮುಂದಾಗಬೇಕಾಗಿದೆ.
ಇಂತಹ ವ್ಯತಿರಿಕ್ತ ಸನ್ನಿವೇಶದಲ್ಲಿಯೂ ಸಹ 2014-15 ಹಾಗೂ 2015-16 ರ SSLC ಯಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 5 ಲಕ್ಷ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 2.5 ಲಕ್ಷ. ಈ ಸಂಖ್ಯಾನುಪಾತ ಕ್ರಮವಾಗಿ 65% ಮತ್ತು 35%ರ ಪ್ರಮಾಣದಲ್ಲಿದೆ.
ಅಂದರೆ, ನಾಲ್ಕನೇ ತರಗತಿವರೆಗೆ ಇರಲಿ,ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ 65% ವಿದ್ಯಾರ್ಥಿಗಳು ಕನ್ನಡಮಾಧ್ಯಮದಲ್ಲಿ ಓದುತ್ತಿರುವ ಸೂರ್ಯ ಸ್ಪಷ್ಟ ಸಂಗತಿ. ಈ ಸರ್ಕಾರಕ್ಕೆ ಇದುವರೆಗೆ ಇದ್ದ ಸರ್ಕಾರಗಳಿಗೆ ಗಮನಿಸಬೇಕಾದ ವಿದ್ಯಮಾನವಾಗಿ ಕಾಣುತ್ತಲೇ ಇಲ್ಲ .
ಶೇ 65 ವಿದ್ಯಾರ್ಥಿಗಳು(5 ಲಕ್ಷ) 1ನೇ ತರಗತಿಯಿಂದ 10 ನೆ ತರಗತಿಯವರೆಗೆ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವಾಗ ಸರ್ಕಾರ ಈ ಬ್ರುಹತ್ ಸಂಖ್ಯೆಯ ಮಕ್ಕಳತ್ತ ಕಣ್ಣೆತ್ತಿಯೂ ನೋಡದೆ ಪ್ರಾಥಮಿಕ ಶಿಕ್ಷಣದಲ್ಲಿ 1ನೇ ತರಗತಿಯಿಂದ 4 ನೇ ತರಗತಿಯವರೆಗೆ ಕನ್ನಡ ಅಥವಾ ಮಾತ್ರುಭಾಶೆಯನ್ನು ಶಿಕ್ಷಣ ಮಾಧ್ಯಮವಾಗಿ ಜಾರಿ ಮಾಡುವ ಪ್ರಯತ್ನ ಕ್ರುತ್ರಿಮ ಪ್ರಯತ್ನವಾಗಿ,ಮಿಥ್ಯಾ ಪ್ರಯತ್ನವಾಗಿ ಕಾಣುತ್ತದೆ.
SSLC ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕನ್ನಡ ಮಾಧ್ಯಮದಲ್ಲಿಯೇ ಉನ್ನತ ಶಿಕ್ಷಣ ಒದಗಿಸಬೇಕು
ಪ್ರೌಢಶಾಲೆ ಯಲ್ಲಿ ಪ್ರಥಮ ಭಾಷೆಗಾಗಿ ನಡೆದ ಗೋಕಾಕ್ ಚಳವಳಿ ಮತ್ತು ಪ್ರಾಥಮಿಕ ಹಂತದಲ್ಲಿ ಕನ್ನಡ ಶಿಕ್ಷಣ ಮಾಧ್ಯಮಕ್ಕಾಗಿ ನಡೆದ ಹೋರಾಟಗಳೆರಡೂ ಭಾಷಾಧಾರಿತ ಒಕ್ಕೂಟ ರಾಷ್ಟ್ರದಲ್ಲಿ ಅಧಿಕ್ರುತ ರಾಜ್ಯ ಭಾಷೆಯೊಂದು ತನ್ನ ಸಶಕ್ತೀಕರಣದ ದ್ರುಶ್ಟಿಯಿಂದ ನಡೆಸಿದ ಅತ್ಯಂತ ಕನಿಷ್ಟ ಫಲಾಪೇಕ್ಷೆಯ ಪ್ರಯತ್ನಗಳಾಗಿದ್ದವು.
ಆದರೆ ಭಾಷಾಧಾರಿತ ಒಕ್ಕೂಟ ರಾಷ್ಟ್ರವೊಂದರಲ್ಲಿ ರಾಜ್ಯಭಾಷೆಯ ಸಬಲೀಕರಣದ ದೃಷ್ಟಿಯಿಂದ ಈ ಕ್ರಮಗಳು ಅತ್ಯಂತ ಜುಜಬಿಯಾಗಿದ್ದರೂ ಈ ಎರಡೂ ಕನ್ನಡ ಸಂವರ್ಧನೆಯ ಪ್ರಯತ್ನಗಳನ್ನು ಕನ್ನಡ ವಿರೋಧಿ ಶಕ್ತಿಗಳು ವಿಫಲಗೊಳಿಸಿದವು. 35 ವರ್ಷಗಳ ದೀರ್ಘ ಹೋರಾಟ ಈ ರೀತಿ ಕರುಣಾಜನಕವಾಗಿ ನೆಲಕಚ್ಚಿತು.
ಕನ್ನಡ ಭಾಷೆ, ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗೂ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೂ ಪಾರಸ್ಪರಿಕವಾದ ಸಂಬಂಧವಿದ್ದು, ಈ ಅಂಶದತ್ತ ಸರ್ಕಾರ ಗಮನ ಹರಿಸಬೇಕಾಗಿದೆ. ಈಗ ಇರುವಂತೆ, ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳ ಶಿಕ್ಷಣ SSLC ನಂತರ ಬಂದ್ ಆಗುತ್ತದೆ. ಆ ನಂತರ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣದಲ್ಲಿ ಯಾವ ಜ್ಞಾನ ಶಾಖೆಗಳಲ್ಲಿಯೂ ಕನ್ನಡ ಮಾಧ್ಯಮವನ್ನು ಕಾಣಲಾರೆವು.
ಈ ಮೂಲಕ ಕಳೆದ ನಾಲ್ಕುದಶಕಗಳಿಗೂ ಹಿಂದಿನಿಂದಲೂ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಎಂಜಿನಿಯರಿಂಗ್ , ಮೂಲವಿಜ್ನಾನ, ವಾಣಿಜ್ಯ , ಮ್ಯಾನೇಜ್ ಮೆಂಟ್….. ಇತ್ಯಾದಿ ಉನ್ನತ ಶಿಕ್ಷಣವನ್ನು ನಿರಾಕರಿಸುವ ಮೂಲಕ ವ್ಯವಸ್ಥಿತವಾಗಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಶಿಕ್ಷಣ ಕ್ಷೇತ್ರದಿಂದಲೇ eliminate ಮಾಡಲಾಗುತ್ತಿದೆ. SSLC ವರೆಗೆ 10 ವರ್ಷಗಳ ಕಾಲ ಕನ್ನಡ ಮಾಧ್ಯಮದಲ್ಲಿ ಓದಿದ ಈ ವಿದ್ಯಾರ್ಥಿಗಳಿಗಾಗಿ ಎಲ್ಲ ಜ್ಞಾನ ಶಾಖೆಗಳಲ್ಲಿಯೂ ಕನ್ನಡ ಮಾಧ್ಯಮದಲ್ಲಿಯೇ ಉನ್ನತ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ಕ್ರಮದಿಂದ ಮಾತ್ರವೇ ಕನ್ನಡ ಭಾಷೆ, ಕನ್ನಡಶಾಲೆಗಳು ಮತ್ತು ಕನ್ನಡ ಶಿಕ್ಷಣ ಮಾಧ್ಯಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ವಿಜ್ಙಾನ ಮತ್ತು ಮಾನವಿಕ ಪಠ್ಯಗಳ ಕನ್ನಡೀಕರಣ
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಇದುವರೆಗೆ ರೂಪಿಸಲಾಗಿರುವ ಪಠ್ಯಗಳು ಸಂಸ್ಕೃತ ಪಾರಿಭಾಷಿಕಗಳಿಂದ ತುಂಬಿಹೋಗಿ ಅಧ್ವಾನ ವಾಗಿವೆ. ಕನ್ನಡ ಜನ ಸಮುದಾಯವನ್ನು ಸಮೂಲವಾಗಿ ನಾಶಮಾಡಲೆಂದೇ ರೂಪಿಸಲಾಗಿರುವ ಈ ಪಠ್ಯಗಳು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿ ಮನೆಗೆ ಹೋಗುವಂತೆ ಮಾಡುತ್ತವೆ
ಸಂಸ್ಕೃತ ಲಾಬಿ ರೂಪಿಸಿರುವ ಈ ಸಂಸ್ಕೃತ ಪಾರಿಬಾಷಿಕಗಳಿಂದ (technical terms) ಕಿಕ್ಕಿರಿದಿರುವ ಈ ಪಠ್ಯಕ್ರಮವು ವಿದ್ಯಾರ್ಥಿಗಳನ್ನು ಉನ್ನತ ಹಂತಗಳಿಗೆ ಹೋಗದಂತೆ ತಡೆಯುತ್ತದೆ
ಅಷ್ಟೇ ಅಲ್ಲದೆ , ಕುವೆಂಪು ಅವರ ಅನುವಾದ ಕ್ರಮವನ್ನೂ ಕನ್ನಡದಲ್ಲಿ ಜ್ಙಾನ ನಿರ್ಮಿಸುವ ವಿಧಾನವನ್ನೂ ಸಂಪೂರ್ಣವಾಗಿ ತಿರಸ್ಕರಿಸಿದೆ. ಇದರಿಂದಾಗಿ ಕನ್ನಡದಲ್ಲಿ ಆಧುನಿಕ ಜ್ಙಾನವು ಒಳಬರಲಾಗಿಲ್ಲ.ಇದರ ವಿರುದ್ದ ಕನ್ನಡಿಗರು ರೊಚ್ಚಿಗೇಳುವುದಿರಲಿ, ಯೋಚನೆ ಕೂಡಾ ಮಾಡಿಲ್ಲ.
ಹೆಚ್ಚಿನ ಬರಹಗಳಿಗಾಗಿ
ಚಾಚಾ ನೆಹರು ಮತ್ತು ನಮ್ಮ ಮಕ್ಕಳು
ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು
ಕಲಿಕೆಯ ಮಾಧ್ಯಮವಾಗಿ ಕನ್ನಡ