- ಒಂದು ಕುತೂಹಲಕಾರಿ ಪುಸ್ತಕ ನನ್ನ ಕೈಯಲ್ಲಿ - ಸೆಪ್ಟೆಂಬರ್ 16, 2021
- ಬದಲಾದರೆ ಯೋಚನೆ ನಿಮ್ಮದೇ ಗೆಲುವು.. - ಜುಲೈ 9, 2021
ಬದುಕಿಗೆ ಮಾರ್ಗದರ್ಶಕವಾಗಬಲ್ಲ
ಡಾ. ನಾಗ ಎಚ್. ಹುಬ್ಳಿ ಅವರ ಕೃತಿ
—————————————–
“ಬದಲಾದರೆ ಯೋಚನೆ
ನಿಮ್ಮದೇ ಗೆಲುವು“
ಜೀವನದ ಯಶಸ್ಸಿಗೆ ಅಗತ್ಯವಾದ ಸೂತ್ರಗಳನ್ನು ನೀಡುವ ಸಾಕಷ್ಟು ಪುಸ್ತಕಗಳು ಬಂದಿವೆ. ಸ್ವಾಮಿ ಜಗದಾತ್ಮಾನಂದರ ” ಬದುಕಲು ಕಲಿಯಿರಿ” ಯಿಂದ ಯಂಡಮೂರಿ ವೀರೇಂದ್ರನಾಥರ ತನಕ ಹಲವರು ಇಂತಹ ಪುಸ್ತಕಗಳನ್ನು ಬರೆದಿದ್ದಾರೆ. ಬರೆಯುತ್ತಲೂ ಇದ್ದಾರೆ. ಡಾ. ನಾಗ ಅವರ ಈ ಕೃತಿಯೂ ಅದೇ ಮಾದರಿಯದಾದರೂ ” ತನ್ನತನ” ವನ್ನು ಉಳಿಸಿಕೊಂಡ ವಿಶಿಷ್ಟ ಕೃತಿಯಾಗಿದೆ.
ಡಾ. ನಾಗ ಎಚ್. ಹುಬ್ಳಿ ಅವರು ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ಡಿಪ್ಲೊಮಾ ಪಡೆದು ನಂತರ ಪತ್ರಿಕೋದ್ಯಮದ ಉನ್ನತ ಪದವಿ ಪಡೆದು ಕೆಲಕಾಲ ಪತ್ರಿಕೆಗಳಲ್ಲಿ ಕೆಲಸ ಮಾಡಿ ಸದ್ಯ ರಾಂಚಿ ( ಜಾರ್ಖಂಡ್ )ಯಲ್ಲಿ ಪತ್ರಿಕಾ ವಿಭಾಗದ ಪ್ರಾಧ್ಯಾಪಕರಾಗಿದ್ದು ದೇಶದ ವಿವಿಧೆಡೆಗಳ ಆದಿವಾಸಿ ಜನಾಂಗದ ಬದುಕು ಸಂಸ್ಕೃತಿಗಳ ಕುರಿತು ಎರಡು ದಶಕಗಳಿಂದ ವಿಶೇಷ ಅಧ್ಯಯನ ನಡೆಸುತ್ತಿದ್ದಾರೆ. ಸುಮಾರು ಹತ್ತು ಹದಿನೈದು ಪುಸ್ತಕಗಳು ಪ್ರಕಟವಾಗಿದ್ದು ಅನುವಾದದಲ್ಲೂ ಪರಿಣಿತರು.
ವ್ಯಕ್ತಿತ್ವ ವಿಕಸನಕ್ಕೆ ಮತ್ತು ಜೀವನದ ಯಶಸ್ಸಿಗೆ ಪ್ರೇರಕವಾದ ಸಣ್ಣ ಸಣ್ಣ ರೂಪಕ ಕಥೆಗಳನ್ನು , ಘಟನೆಗಳನ್ನು ಹಿನ್ನೆಲೆಯಾಗಿರಿಸಿಕೊಂಡು ಅದರಿಂದ ಮನುಷ್ಯ ಕಲಿಯಬೇಕಾದ ಪಾಠ ಮತ್ತು ಕಲಿತದ್ದನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆದರ್ಶ ವ್ಯಕ್ತಿಯಾಗುವದಕ್ಕೆ ಅಗತ್ಯವಾದ ಸೂತ್ರಗಳನ್ನು ನೀಡುವದೇ ಇಂತಹ ಬರೆಹಗಳ ಉದ್ದೇಶ. ಈ ಮೊದಲು ಪತ್ರಿಕೆಯೊಂದರಲ್ಲಿ ಅಂಕಣರೂಪದಲ್ಲಿ ಬರೆದ ಈ ಕಿರುಬರೆಹಗಳಲ್ಲಿ ನಲವತ್ತೇಳನ್ನು ಆಯ್ಕೆ ಮಾಡಿಕೊಂಡು ಪುಸ್ತಕರೂಪದಲ್ಲಿ ಪ್ರಕಟಿಸಲಾಗಿದೆ. ಇಲ್ಲಿಯ ವಿಷಯಗಳಲ್ಲಿ ಕೆಲವನ್ನು ನಾವು ಮೊದಲೇ ಓದಿದಂತೆನಿಸಬಹುದಾದರೂ ಅವುಗಳನ್ನು ನಿರೂಪಿಸಿರುವ ರೀತಿಯಿಂದಾಗಿ ಅವು ಹೊಸತನವನ್ನು ಪಡೆದುಕೊಂಡಿದ್ದು ಆಸಕ್ತಿಯಿಂದ ಓದುವಂತೆ ಮಾಡುತ್ತವೆ.
ಮನುಷ್ಯ ತನ್ನ ಜ್ಞಾನಾನುಭವಗಳ ಮಿತಿಗೆ ತಕ್ಕಂತೆ ಯೋಚಿಸುತ್ತಿರುತ್ತಾನೆ. ಆದರೆ ಕೆಲವೊಮ್ಮೆ ಆ ಯೋಚನೆಗಳು ಅವನ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ನೀಡುವದಿಲ್ಲ. ಏಕೆಂದರೆ ಆತ ಯೋಚಿಸುವ ರೀತಿಯೇ ಸರಿಯಾದುದಾಗಿರುವದಿಲ್ಲ. ಆದ್ದರಿಂದಲೇ ಅವನು ಬದುಕಿನಲ್ಲೋ, ಉದ್ಯೋಗದಲ್ಲೋ ವೈಫಲ್ಯವನ್ನು ಅನುಭವಿಸಬಹುದು. ಅಂತಹ ಸಂದರ್ಭದಲ್ಲಿ ನಮ್ಮ ಯೋಚನೆಯ ದಿಕ್ಕನ್ನೇ ನಾವು ಬದಲಿಸಿಕೊಳ್ಳಬೇಕಾಗುತ್ತದೆ. ಆದರೆ ಆ ಬದಲಾವಣೆ ಯಾವ ಬಗೆಯದಾಗಿರಬೇಕು ಎನ್ನುವುದೂ ಬಹಳ ಮಹತ್ವದ್ದೇ. ಡಾ. ನಾಗ್ ಅವರ ಪುಸ್ತಕ ಈ ಅಂಶವನ್ನೇ ಆಧರಿಸಿ ಮಾರ್ಗದರ್ಶನ ನೀಡುತ್ತದೆ.
ನಾವು ಎಲ್ಲಿ/ ಹೇಗೆ ತಪ್ಪುತ್ತೇವೆ ಎನ್ನುವದು ಕೆಲವು ಸಲ ನಮಗೇ ಗೊತ್ತಿರುವದಿಲ್ಲ. ಕೆಲವೊಮ್ಮೆ ನಾವು ನಿರಾಶಾವಾದಿಗಳೂ ಆಗಿರುತ್ತೇವೆ. ನೆಗೆಟಿವ್ ಥಿಂಕಿಂಗ್ ನಿಂದಾಗಿ ನಮ್ಮಲ್ಲಿ ಸಾಮರ್ಥ್ಯವಿದ್ದೂ ನಾವು ಯಶಸ್ಸು ಪಡೆಯುವದಿಲ್ಲ. ಯಾವುದೋ ಒಂದು ನಂಬಿಕೆಗೆ ಜೋತು ಬಿದ್ದು ಅದರಲ್ಲೇ ಬದುಕಿನ ವರ್ಷಗಳನ್ನು ವ್ಯರ್ಥಗೊಳಿಸಿಕೊಂಡು ಜೀವನದಲ್ಲಿ ಏನನ್ನೂ ಸಾಧಿಸಲಾಗದ ಅಸಹಾಯಕರಾಗಿರುತ್ತೇವೆ . ಯಶಸ್ಸಿಗೆ ವ್ಯಕ್ತಿ ಹೊಂದಿದ ವಿದ್ಯೆ, ಹಣ, ಉದ್ಯೋಗ ಯಾವುದೂ ಪ್ರಯೋಜನಕ್ಕೆ ಬರದೇ ಹೋಗಬಹುದು. ಆದರೆ ಯಶಸ್ಸು ಅಡಗಿರುವದು ನಮ್ಮ ಯೋಜನಾಕ್ರಮದಲ್ಲಿ, ಯೋಚನಾ ವಿಧಾನದಲ್ಲಿ. ವಾಸ್ತವವಾಗಿ ಜೀವನದ ಯಶಾಪಯಶಗಳು ನಾವು ಯೋಚಿಸುವ ರೀತಿಯಲ್ಲೇ ಇರುತ್ತವೆನ್ನುವದನ್ನು ಪ್ರಸ್ತುತ ಕೃತಿ ನಮಗೆ ಮನದಟ್ಟು ಮಾಡಿಕೊಡುತ್ತದೆ.
ಈ ೪೭ ಬಿಡಿ ಬರೆಹಗಳಲ್ಲಿ ಯಾವುದನ್ನು ಆಯ್ಕೆ ಮಾಡಿ ಉದಾಹರಿಸಬೇಕು ಎನ್ನುವುದೇ ದೊಡ್ಡ ಸಮಸ್ಯೆ. ಏಕೆಂದರೆ ಪ್ರತಿಯೊಂದರಲ್ಲೂ ಒಂದೊಂದು ಬಗೆಯ ಸಂದೇಶ ಅಡಗಿದ್ದು ಯಾವುದೂ ಬೇಡ ಎಂದು ಬದಿಗೆ ಸರಿಸುವುದು ಸಾಧ್ಯವಿಲ್ಲ. ಇವೆಲ್ಲವೂ ನೀತಿಪಾಠಗಳೇ. ಬದುಕಿನ ಸಾರ್ವಕಾಲಿಕ ಜೀವನ ಮೌಲ್ಯಗಳೇ ಇದರಲ್ಲಿ ಅಡಗಿವೆ. ಪ್ರತಿಯೊಂದಕ್ಕೂ ಲೇಖಕರು ಇಲ್ಲಿ ವಿಭಿನ್ನವಾದ ಉದಾಹರಣೆಗಳನ್ನು ನೀಡುತ್ತ ಹೋಗುತ್ತಾರೆ. ಅವನ್ನು ಓದಿದಾಗ ನಮಗೇ ” ಹೌದಲ್ಲ, ನಾವೂ ಈ ರೀತಿ ಯೋಚಿಸಿದ್ದರೆ ನಮ್ಮ ಬದುಕು ಬೇರೆಯೇ ಆಗಬಹುದಿತ್ತಲ್ಲ” ಅನಿಸಿದರೆ ಆಶ್ಚರ್ಯವಿಲ್ಲ.
ನಾನಿಲ್ಲಿ ಬಿಡಿಬಿಡಿಯಾಗಿ ಪ್ರತಿಯೊಂದರ ಕುರಿತೂ ಹೇಳುವದು ಅಸಾಧ್ಯ. ಆ ಓದಿನ ಸವಿಯನ್ನು ನೀವು ಓದಿಯೇ ಅನುಭವಿಸಬೇಕು.
- ಪರರ ಸಂತೋಷಕ್ಕಾಗಿ ಬದುಕುವದು
- ಸಣ್ಣ ಪ್ರಯತ್ನವೂ ದೊಡ್ಡ ಯಶಸ್ಸು ನೀಡಬಹುದು,
- ಮನಸ್ಸಿನ ಶಾಂತಿಗಿಂತ ದೊಡ್ಡದು ಯಾವುದೂ ಇಲ್ಲ,
- ಯಾವುದೇ ಕೆಲಸವನ್ನು ಸಣ್ಣದೆಂದು ಭಾವಿಸಬೇಡಿ,
- ಜನರು ನಿಮ್ಮ ತಪ್ಪುಗಳ ನಿರೀಕ್ಷೆಯಲ್ಲಿರುತ್ತಾರೆ
- ಕಠಿಣ ದುಡಿಮೆಗಿಂತ ಕೌಶಲ್ಯಪೂರ್ಣ ದುಡಿಮೆ ಮಹತ್ವದ್ದು,
- ಕೆಟ್ಟವರಿಂದ ದೂರವಿರುವದರಲ್ಲೇ ನಮ್ಮ ಸಂತೋಷವಿದೆ
- ನಮ್ಮ ವ್ಯವಹಾರದಲ್ಲೇ ಅಡಗಿದೆ ಜ್ಞಾನದ ಸಾರ್ಥಕತೆ
- ನಮ್ಮೊಳಗಿನ ದೌರ್ಬಲ್ಯಗಳನ್ನೂ ಸೋಲಿಸಬಹುದು
- ಏನೇ ಕೆಲಸ ಮಾಡುವದಿದ್ದರೂ ಮನಸ್ಸಿಟ್ಟು ಮಾಡಿ
.…ಇತ್ಯಾದಿ ವಿಚಾರಗಳಿಗೆ ಪೂರಕವಾಗಿ ಇಲ್ಲಿ ನೀಡಿರುವ ದೃಷ್ಟಾಂತಗಳು ಬಹಳ ಮಹತ್ವದ್ದು. ನಮ್ಮ ಯೋಚನೆಯ ದಿಕ್ಕನ್ನು ಸರಿಯಾದ ನಿಟ್ಟಿಗೆ ಬದಲಿಸಬಲ್ಲ ಇಲ್ಲಿನ ಚಿಕ್ಕ ಚಿಕ್ಕ ರೂಪಕ ಕಥೆಗಳು ನಮ್ಮ ಬದುಕಿನ ಯಶಸ್ಸಿಗೆ ಕಾರಣವಾಗಬಲ್ಲವು. ಮುಖ್ಯವಾಗಿ ನಮ್ಮ ಮಕ್ಕಳಿಗೆ ಇವನ್ನು ಪಾಠವಾಗಿ ಕಲಿಸಿದರೆ ಒಳ್ಳೆಯದು. ಪಾಲಕರು ಈ ಪುಸ್ತಕವನ್ನು ಕೊಂಡು ತಮ್ಮ ಮಕ್ಕಳು ಓದುವಂತೆ ಮಾಡಬೇಕು. ಇವು ಜೀವನಾನುಭವದ ರಸಘಟ್ಟಿಗಳು. ಪುಸ್ತಕ ಒಂದೇ ಓದಿನಲ್ಲಿ ಓದಿಸಿಕೊಂಡು ಹೋಯಿತಲ್ಲ, ಅದೇ ಆ ಪುಸ್ತಕದ ಹಿರಿಮೆ. ಅಭಿನಂದನೆಗಳು ಲೇಖಕರಿಗೆ.
ಸಾಹಿತ್ಯಲೋಕ ಪಬ್ಲಿಕೇಶನ್ಸ, ಬೆಂಗಳೂರು
ಪುಟ:೧೪೬
ಬೆಲೆ: ೧೫೦/ ರೂ.
ಲೇಖಕರ ಮೊ. ನಂ. ೮೭೬೨೯೨೦೮೮೧
📱 8762920881
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ