- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
ಗೆ,
ರಾಧಾ,
ಗೋಕುಲ
ಸಖೀ ರಾಧೆ,
ಇಷ್ಟುದ್ದ ಈ ಹಾಳೆಯ ಮೇಲೆ ಕೃಷ್ಣನ ಕೈಯಚ್ಚಿನ ನೆರಿಗೆ ಮೂಡುವ, ದೇವರೆಂಬ ಧಾತುವಿನೊಳಗೆ ನಡೆವ ಆಗುಹೋಗುಗಳ, ಕಪಟವಿಲ್ಲದ ಅಕ್ಷರಗಳಲ್ಲಿ ಮತ್ತೆ ಹುದುಗಿಸುವ ಸಮಯ ಬಂದಿದೆಯೀಗ. ಬರೆದ ಮೊದಲೆರಡು ಪತ್ರಗಳು ನಿನ್ನ ಮಡಿಲಲ್ಲಿ ನಿತ್ಯ ಸುಖದಲ್ಲಿ ಆಪ್ತ ಹವೆಯಲ್ಲಿ ಬೆಚ್ಚಗಿವೆಯೆಂದುಕೊಳ್ಳುತ್ತೇನೆ. ಹಳೆಯದಾದಷ್ಟೂ ಪತ್ರಗಳ ಪರಿಮಳ ಹೆಚ್ಚುತ್ತದಂತೆ. ಹಳೆಯದಾದಷ್ಟೂ ನೆನಪುಗಳು ಮಾಗುತ್ತವಂತೆ. ಹಳೆಯದಾದಷ್ಟೂ ಉಳಿದ ಪ್ರೀತಿ ಸಲಹುತ್ತದಂತೆ. ಯಾರನ್ನು? ಎಂದು ಮರು ಪ್ರಶ್ನಿಸದಿರು.. ‘ಈ ಜಗತ್ತನ್ನು’, ಎಂದು ನಾನು ಉತ್ತರಿಸುವೆನೆಂದು ನಿನಗೂ ತಿಳಿಯದೇ ಏನಲ್ಲ! ಕೃಷ್ಣನಿಗೆ ವೈಯಕ್ತಿಕ ಅನ್ನುವುದು ಉಳಿದದ್ದಾದರೂ ಯಾವುದು ರಾಧೆಯ ಹೊರತಾಗಿ, ರಾಧೆಗಾಗಿ ಬಿಟ್ಟ ಕೊಳಲಿನ ಹೊರತಾಗಿ. ಬಿಡು ಬಿಡು, ನೆನಪು ನಶೆಯಂತೆ. ಕಪಟಿ, ಚತುರ, ಮೋಸಗಾರ, ವ್ಯಾಮೋಹಿ, ಪಕ್ಷಪಾತಿ, ದ್ರೋಹಿ, ಆಪದ್ಬಾಂಧವ, ಮಿತ್ರ, ಕುಟಿಲ ತಂತ್ರಿ , ಮಾಯಾವಿ ಒಂದೇ ಎರಡೇ ಕೃಷ್ಣನು ಪಡೆದ ಹೆಸರುಗಳು. ಆದರೆ ಇವತ್ತು ಕೃಷ್ಣ ಹೇಳಹೊರಟಿರುವುದು ಈ ಅಂಕಿತಗಳಾಚೆಗಿನ ಸಂಗತಿಗಳನ್ನು.. ಧರ್ಮ ಅಧರ್ಮದ ಮರ್ಮದಲಿ ದಾಳವಾದ ಪರಾಕ್ರಮಿಯ ಕಣ್ಣುಗಳಲ್ಲಿ ಕೃಷ್ಣನನ್ನು ನೋಡುವೆಯಂತೆ.. ಹಾಗೇ, ಕಿವಿಯಾಗುವೆಯಂತೆ ಇವೆಲ್ಲವುಗಳಿಗೂ ಜೀವಂತ ಸಾಕ್ಷಿಯಾದ ಸಾರಥಿ, ರಾಯಭಾರಿ, ರಾಜಕಾರಣಿ, ಯುದ್ಧ ನಿಪುಣ ಕೃಷ್ಣನ ಸಂಗತಿಗಳಲ್ಲಿ ಉಳಿದ ಆ ಪರಾಕ್ರಮಿಯ ಪ್ರಾರಬ್ಧಕ್ಕೆ !
ಊಹೆ ನಿಜ ರಾಧೇ, ವಸುಸೇನನ ಕುರಿತಾಗಿಯೇ ಇವತ್ತು ನಾನು ಹೇಳಹೊರಟಿರುವುದು. ಲೋಕ ನಿಂದಿಸಲಿ ನನ್ನ, ಲೋಕ ದ್ವೇಷಿಸಲಿ ನನ್ನ, ಲೋಕ ಜರೆಯಲಿ ನನ್ನ, ಲೋಕ ಮರುಗಲಿ ಕಂಡು ಅವನ…
ಭೋರ್ಗರೆದು ಬಿಕ್ಕಳಿಸುವ ಡೋಲು,ನಗಾರಿ, ಶಂಖ,ಕಹಳೆ, ಜಾಗಟೆಗಳು. ಅಬ್ಬರಿಸಿ ಅಬ್ಬರಿಸಿ ಸುಸ್ತಾದ ಆನೆ,ಕುದುರೆಗಳು. ತಲೆಯ ಮೇಲೆ ಠೀವಿಯಿಂದ ಕೂತಿದ್ದ ಕಿರೀಟಗಳು ಉದುರಿಬಿದ್ದಿವೆ ಆಧಾರವಿಲ್ಲದೇ. ಬಿಸಿ ಬಿಸಿ ನೆತ್ತರ ಇನ್ನೂ ಸುರಿಸುತ್ತಲೇ ಅಲುಗುತ್ತಿರುವ ಕಡಿದ ಬೆರಳಿನ ಚೂರು. ಕಣ್ಣುಗಳ ಮುಚ್ಚಲೂ ಸಮಯ ಸಿಗದೇ ಉಳಿದ ಕತ್ತರಿಸಿದ ರುಂಡ, ವಸ್ತ್ರದ ಬಣ್ಣವೇ ಬದಲಾದ ಮುಂಡ, ಮಾರ್ದನಿಸುತಿದೆ ಕಾಲಾಳುಗಳ ಆಕ್ರಂದನ.. ಈ ಭೀಭತ್ಸ ರಣರಂಗದಲ್ಲೇ ಬಿದ್ದಿತ್ತು ಇನ್ನೊಂದು ಶರೀರ ರಥಕ್ಕೊರಗಿ. ಅದರಲ್ಲೇನು ವಿಶೇಷ ಕೃಷ್ಣ, ಯುದ್ಧವೆಂದಮೇಲೆ ಹೆಣಗಳ ರಾಶಿ, ರಕ್ತದ ಹೋಳಿ, ಊರಲ್ಲುಳಿದ ಹೆಂಗಸರಿಗೆ ವಿಧವೆಯ ಪಟ್ಟ ಹಾಗೂ ಮಾನಕ್ಕಾಗಿ ಹೋರಾಟ ಸಾಮಾನ್ಯವಲ್ಲವೇ ಮೋಹನ, ಅನ್ನದಿರು. ಪಾಂಡವರ ನಿಷ್ಠೆ, ಧರ್ಮ, ಪರಾಕ್ರಮ, ಸ್ವಾರ್ಥ, ಭಕ್ತಿ ಇವೆಲ್ಲವನ್ನೂ ಮೀರಿ ಎದೆನಡುಗಿಸಿದವನ ಕತೆಯಿದು. ‘ಇದಿರಿಲ್ಲ ಎನಗೆ’ ಎಂದು ಮೆರೆಯುತ್ತಿದ್ದ ಸವ್ಯಸಾಚಿಯ ಕೈಗಳಿಗೆ ನಡುಕಹುಟ್ಟಿಸಿದವನ ಕತೆ. ಹೌದು, ಇದು ಕ್ಷತ್ರಿಯ ಬ್ರಾಹ್ಮಣ ಸೂತ ಯೋಧ ಕರ್ಣನ ಕತೆ. “ಕೇಳಿದ್ದೇನೆ ಮಾಧವಾ, ನಿನ್ನ ಕುಟಿಲತೆಯಿಂದ ಅವ ಸತ್ತನಂತೆ ಅನ್ನುವುದನ್ನ”, ಅಂತನ್ನಬೇಡ. ಲೋಕಕ್ಕೆ ತಿಳಿದ ಗೋಚರಗಳು ಒಂದೆಡೆಯಾದರೆ, ಕರ್ಣ ಮತ್ತು ಕೃಷ್ಣನಲಿ ವಿನಿಮಯವಾದ ಸಾನ್ನಿಧ್ಯವೇ ಬೇರೆ.. “ಭಗವಂತ ನೀನು, ವಿನಿಮಯವಾಗಲೇಬೇಕಲ್ಲವೇ?”, ಅಂತನ್ನುವ ಆ ಪ್ರಶ್ನಾರ್ಥಕ ಕಣ್ಣುಗಳನ್ನ ನನ್ನತ್ತ ನೇರವಾಗಿ ಚಾಚಿದಂತೆ ಭಾಸವಾಗುತ್ತಿದೆ ನನಗೆ, ಇವತ್ತಿನ ಈ ಪತ್ರ ಆವತ್ತಿನ ಪ್ರತಿಫಲನ.
ಕೆಸರಲ್ಲಿ ಕುಳಿತು, ರಥಕ್ಕೊರಗಿ ನಿಕೃಷ್ಟ ನೋಟ ಬೀರುತ್ತಿದ್ದ ಕರ್ಣ, ” ಕೊನೆಗೂ ಕೊಲ್ಲಿಸಿದೆಯಲ್ಲಾ” ಅನ್ನುವಂತೆ. ಅರ್ಜುನ ಸಾರಥಿ ಕೃಷ್ಣ ರಥದಿಂದ ಇಳಿದು ಬರಲೇಬೇಕಾಯ್ತು ಪರಾಕ್ರಮಿಯ ಬಳಿಗೆ. ಅದೆಷ್ಟು ಪ್ರಶ್ನೆಗಳು ಓಡುತ್ತಿರಬಹುದಲ್ಲಾ, ಉತ್ತರಿಸಬೇಕಾದುದು ಆದ್ಯ ಕರ್ತವ್ಯ. ಸಾಯುವ ಗಳಿಗೆಯಲ್ಲಿ ಮನುಷ್ಯ ಪವಿತ್ರನಾಗುತ್ತಾನೆ. ಇಹದ ಕೊಂಡಿ ಕಳಚಿಬೀಳುವ ಕ್ಷಣದಲ್ಲಿ ಅಹಂ ಚೆಲ್ಲಾಪಿಲ್ಲಿಯಾಗಿ ಚೆದುರಿರುತ್ತದೆ. ರಥದಿಂದ ಇಳಿದವನೇ ಹೋದೆ ಕರ್ಣನ ಬಳಿಗೆ, ಹೀಗೇ ಹೋಗಿದ್ದೆ ಯುದ್ಧದ ಹಿಂದಿನ ದಿನವೂ ಕೂಡಾ.. “ಪಾಂಡವರ ಸೇರು, ರಾಜ್ಯ ಮತ್ತು ಪಟ್ಟ ನಿನ್ನದಾಗುತ್ತದೆ ಅಂತ ಹೇಳುವುದಕ್ಕೆ”, ಅಂತ ಮಾತ್ರವೇ ಗ್ರಹಿಸಿತು ಲೋಕ. ಕರ್ಣನ ಮನಸ್ಸನ್ನು ಕದಡಲು ಹೋದೆ, ಅಂತ ಮಾತ್ರವೇ ಮಾತಾಡಿತು ಲೋಕ. ಅದೆಷ್ಟೇ ಆಮಿಷಗಳನ್ನೊಡ್ಡಿದರೂ ಕರ್ಣ ಅದನ್ನ ಕಾಲ್ಬೆರಳ ತುದಿಯಲ್ಲಿ ಕೂಡಾ ಮುಟ್ಟದೇ ತಿರಸ್ಕರಿಸಿದಂಥ ಋಣಬದ್ಧ, ಕೃತಜ್ಞತೆಯ ಮೂರ್ತರೂಪ ಅನ್ನುವುದನ್ನ ಇನ್ನು ಹೇಗೆ ಹೇಳಬಹುದಿತ್ತು ಈ ಲೋಕಕ್ಕೆ ನಾನು? ಕುಲವೆಂಬುದೇ ಯಾವುದೆಂದು ತಿಳಿಯದೇ ಅನುಭವಿಸಿದ ಅವಮಾನಗಳ ನಡುವೆ ಅರಸಿಬಂದ ಸ್ನೇಹಕ್ಕಾಗಿ ಸಮಸ್ತವನ್ನೂ ತ್ಯಜಿಸಲು ಸಿದ್ಧನಾಗಿದ್ದ ಕರ್ಣ ಒಬ್ಬ ಅಪ್ಪಟ ಮಗುವಿನಂಥ ಸ್ನೇಹಿತನೆಂಬುದನ್ನ ಜಗತ್ತಿಗೆ ಅದು ಹೇಗೆ ಹೇಳಬಹುದಿತ್ತು ನಾನು?
ಕರ್ಣನ ಸಾವು ನಿಶ್ಚಯವಾಗಿತ್ತು. ಸಾವಿನ ಎದುರು ಕೂತು ಹುಟ್ಟಿನ ಕತೆ ಕೇಳುವ ವಿಪರ್ಯಾಸ ಅವನದು. ಆವತ್ತೇ ಯಾಕೆ ಹೇಳಬೇಕಿತ್ತು, ಮತ್ತೆ ದಿನವೆಲ್ಲಿತ್ತು? ಸೂತ ಕುಲದ ರಾಧೆಯ ಮಗ ನಾನು ರಾಧೇಯ ಅಂತಂದುಕೊಂಡವಗೆ, ಬಾಲ್ಯದಾಟದ ಕುಂತಿಗೆ ಯೌವನದ ವರ ಸಿಕ್ಕಿ, ನಡೆದ ಅಚಾತುರ್ಯದ, ಸೂರ್ಯ ಅಂಶದ ಗರ್ಭ ನೀನು ಅಂತನ್ನುವುದು ಅದೆಷ್ಟು ಸಮಂಜಸ ಎಂದು ಪ್ರಶ್ನಿಸುವೆಯಾ ರಾಧಾ.. ಹೇಳಿದ್ದಷ್ಟೇ ಅಲ್ಲದೇ, ಪಾಂಡವರೈವರಿಗೆ ಹಾನಿಗೈಯುವುದಿಲ್ಲವೆಂದು ಮಾತು ಕೊಡುವಂತೆ ಇಕ್ಕಟ್ಟಿಗೆ ಸಿಲುಕಿಸಿದೆಯಲ್ಲಾ ಚತುರನೇ ಅನ್ನುತಿಹೆಯಾ? ಯಾಕಿಷ್ಟೊಂದು ಉಪಾಯಗಳು ಹರಿಯೇ ಅಂದ, ಯಾಕೆ ನನ್ನನ್ನು ಚಂಚಲನನ್ನಾಗಿಸುತ್ತಿರುವೆಯೆಂದ. ದ್ರೌಪದಿಯ ಕಣ್ಣಿಂದ ಉದುರಿದ ಆ ಹನಿಯಲ್ಲಿ ಗಹಗಹಿಸಿದ ಕರ್ಣನ ಚಿತ್ರವಿತ್ತೋ ಕೌಂತೇಯ ಅಂದೆ, ತತ್ತರಿಸಿದ. ಅವಮಾನಕ್ಕೆ ಉತ್ತರ ಕೊಡಬೇಕಾದುದು ಕ್ಷತ್ರಿಯ ಧರ್ಮವೇ, ಆದರೆ ಅಂದು ಅದು ಆ ಸ್ತ್ರೀಯ ಮೇಲಾಗಿತ್ತಲ್ಲ; ಅದು ಸಮ್ಮತ ಉತ್ತರವಲ್ಲವಾಗಿತ್ತು. ಅವಳ ಸೀರೆಯ ತುದಿಗೆ ಇನ್ನೂ ಕರ್ಣನ ಬೆರಳಿನ ಕಲೆಯಿತ್ತು. ಅದಿರಲಿ, ಮತ್ತೆ ಕುಂತಿಯನೂ ಕಳುಹಿಸಿದೆಯಲ್ಲಾ ಅವನ ಬಳಿಗೆ, ಇದು ಅವನನ್ನ ಗದ್ಗದಿತನನ್ನಾಗಿಸಲಲ್ಲದೇ ಇನ್ನೇನು ಅಂತ ನೀನೂ ಕೇಳುತ್ತಿರುವೆಯಾ ರಾಧಾ.. ಹೆತ್ತವಳಿದ್ದೂ ಅವಳ ಅಪ್ಪುಗೆಯಿಲ್ಲದೇ ಅವ ಕೊನೆಯುಸಿರೆಳೆಯುವುದು ದುರಂತವಾಗುತ್ತದಲ್ಲವೇ? ಈಗಾಗಿದ್ದೇನು ಅನ್ನಬೇಡ ಮತ್ತೆ.. ತಾಯಿ ಮಗನ ಅಪೂರ್ವ ಮಿಲನಕ್ಕೆ ಬೇರೆ ಘಟಿಗಳು ಇರಲಿಲ್ಲ. ಅದೆಷ್ಟೇ ಸ್ವಾರ್ಥವಿದ್ದರೂ ಮಮತೆ ಉಕ್ಕುವುದು , ಅದೆಷ್ಟೇ ದ್ವೇಷವಿದ್ದರೂ ಹೃದಯ ಬಿಕ್ಕುವುದು, ಅದನ್ನೇ ಅಲ್ಲವೇ ಜಗತ್ತು ನೋಡಿದ್ದು ಈ ಭೇಟಿಯಲ್ಲಿ. ಕುಂತಿ ಎರಡು ವರ ಕೇಳಲು ಅಲ್ಲಿಗೆ ಹೋದಳಷ್ಟೇ ಅಂದುಬಿಡಬಹುದು ಸುಲಭವಾಗಿ, ರಕ್ತ ಸಂಬಂಧದ ಗಾಢತೆಯನ್ನ ಮತ್ತು ವಿಧಿಯ ವಿವರಗಳನ್ನ ಇನ್ನೆಂತು ತೋರಿಸಲಿ ನಾನು? ತನ್ನ ಕೈ ಸೋಲುತ್ತಿದೆ ಎಂದು ಗೊತ್ತಿದ್ದರೂ ಕೇಳಿದ್ದನ್ನು ಕೊಡದೇ ಇರಲಾರ ಕರ್ಣ ಅನ್ನುವುದು ಹೇಗೆ ತಿಳಿದೀತು ಇದರ ಹೊರತಾಗಿ ಅಲ್ಲವೇ?
ಕೈಯಲ್ಲಿ ಧನುರ್ಬಾಣಗಳಿಲ್ಲದೇ, ಶಸ್ತ್ರರಹಿತನಾದ ಕ್ಷತ್ರಿಯನ ಕೊಲ್ಲುವ ತುರ್ತೇನಿತ್ತು ನಿನಗೆ, ನಿನ್ನ ಗಾಂಢೀವಿ ಸೋಲುವನೆಂಬ ಭಯವೇ? ಇರಬಹುದು ಇರಬಹುದು, ಅಡ್ಡದಾರಿ ಹಿಡಿದ ಕೃಷ್ಣ ಎಂದು ಎಷ್ಟೆಲ್ಲಾ ನಿಂದಿಸಿದರಲ್ಲಾ.. ಅಪ್ರತಿಮ ಯುದ್ಧೋನ್ಮಾದದಿಂದ ಚಕ್ರವ್ಯೂಹವನ್ನ ಹೊಕ್ಕಿದ ಅಭಿಮನ್ಯುವಿನ ಅಂತ್ಯಕ್ಕಾಗಿ ಸಕಲ ಶಾಸ್ತ್ರ ಪಾರಂಗತನಾದ ಕರ್ಣ, ಯಾವ ಧರ್ಮವನ್ನ ಮೀರಿದನಲ್ಲಾ, ಪಾಪ ಪುಣ್ಯವೀಗ ದುರ್ಯೋಧನನ ಲೆಕ್ಕವೆಂಬ ಮಾತ ಕೇಳಿ, ಹಿಂದಿನಿಂದ ಕೈ ಕತ್ತರಿಸಿದನಲ್ಲಾ, ಅದೇ ಧರ್ಮ ಈಗ ಅವನ ಎದೆಗೆ ನಾಟಿತು. ಇದೇನು ಕೃಷ್ಣಾ, ನೀನೂ ಸಾಮಾನ್ಯ ಮನುಷ್ಯರಂತೆ ದ್ವೇಷಕ್ಕೆ ದ್ವೇಷ, ಮೋಸಕ್ಕೆ ಮೋಸ ಎಂದುಬಿಟ್ಟೆಯಲ್ಲಾ ಅಂತಂದುಕೊಳ್ಳದಿರು. ಸತ್ಯದ ಅರಿವಾಗಬೇಕಿತ್ತು ಕರ್ಣನಿಗೆ, ಅವನು ದುರ್ಯೋಧನನ ಸ್ನೇಹದ ಹೆಜ್ಜೆಯ ಅಮಲಿನಲ್ಲಿ ಎಲ್ಲಿ ಎಡವಿದ ಅನ್ನುವುದನ್ನ ಮನದಟ್ಟು ಮಾಡಲೇಬೇಕಿತ್ತು. ಬಾಣ ನೆಟ್ಟ ಮೇಲೂ ದಾನ ಕೇಳಿದನಂತೆ ಅವ ಸಾಯದಿದ್ದರೆ ಅಂತ, ಎಂದೆಲ್ಲಾ ಜನ ನಿನಗೆ ಹೇಳಿದರೇ? ಪರಮಾತ್ಮನೂ ಒಮ್ಮೊಮ್ಮೆ ಶರಣಾಗುತ್ತಾನೆ ಕರ್ಣನಂಥ ದಾನಶೂರನೆದುರು.. ದಾನ ಕೇಳಿದ್ದು ನಿಜ, ಅವನ ಹಿಂದಿನ ಜನ್ಮದ ಲೆಕ್ಕವೊಂದು ಬಾಕಿಯಿತ್ತಲ್ಲಾ.. ಜೊತೆಗೆ, ಭಗವಂತನಿಗೇ ದಾನಕೊಟ್ಟ ಕರ್ಣ ಅನ್ನುವುದು ಜಗಜ್ಜಾಹೀರಾಗಲಿ, ಸಾಯುವಾಗಲೂ ದಾನಕ್ಕೆ ಹಿಂಜರಿಯಲಿಲ್ಲ ಆತ ಅಂತೆಲ್ಲಾ ಜನ ತಡಬಡಿಸಲಿ, ದಂಗಾಗಲಿ ಅಂತ ಅಂದುಕೊಳ್ಳುವುದು ತಪ್ಪಾ ರಾಧಾ.. ದುರಂತದ ಬದುಕಿಗೊಂದು ಅರ್ಥವತ್ತಾದ ವಿದಾಯ ಬೇಕಿತ್ತಲ್ಲವೇ!
ಮುರಿದು ಬಿದ್ದ ಕರ್ಣನ ರಥದ ಗಾಲಿ, ಅವನ ಜನನ ಮರಣಗಳ ಚಕ್ರ ಮುರಿದು ಬಿದ್ದಂತೆ ನನಗೆ ಕಂಡಿತ್ತು. ಅವನ ಬಳಿ ಹೋಗಿ ಕೂತೆ, ಏನಾಯಿತು ಕೃಷ್ಣಾ, ಕರ್ಣ ಯಾವ ಸುಖಕ್ಕೂ ಯೋಗ್ಯನಾಗದೇ ಹೋದನೇ ಅಂತ ಪ್ರಶ್ನಿಸಿದ ಕೈಹಿಡಿದು. ಎಲ್ಲರ ಹುಟ್ಟಿಗೂ ಎಲ್ಲರ ಸಾವಿಗೂ ಅರ್ಥವಿದೆ ಕೌಂತೇಯ, ಹುಟ್ಟಿನಿಂದ ಸಾವಿನ ತನಕವೂ ನಿನ್ನದು ಅನಿಶ್ಚಿತತೆಯೇ, ನಿನ್ನದು ದೌರ್ಭಾಗ್ಯವೇ, ನಿನ್ನದು ಹೋರಾಟವೇ.. ಆದರೆ, ಅವೆಲ್ಲವುಗಳನ್ನೂ ಮೀರಿ ಬೆಳೆದವ ನೀನು, ಜಗತ್ತಿಗೆ ಮತ್ತೊಬ್ಬ ನಿನ್ನಂಥ ದಾನಿ ಸಿಗಲಾರ ಅದೆಷ್ಟೇ ಸಹಸ್ರ ವರ್ಷಗಳಾದರೂ.. ಅಲ್ಲಿಗೆ ನಿನ್ನ ಬದುಕಿಗೆ ಅರ್ಥ ದಕ್ಕಿತಲ್ಲಾ ರಾಧೇಯ ಎಂದೆ. ಮುಂದುವರೆದು ಕೇಳಿದೆ, ನನಗೂ ನಿನಗೂ ಒಂದು ಸಾಮ್ಯತೆಯಿದೆ ತಿಳಿದಿದೆಯಾ ಕುಂಡಲಧರ? ಬಳಲಿದ ಕಣ್ಣುಗಳಿಂದ ನನ್ನ ನೋಡಿದ. ನಮ್ಮಿಬ್ಬರದೂ ಒಂದೇ ಕತೆ ಕರ್ಣಾ, ಹೆತ್ತಬ್ಬೆಯಿಂದ ದೂರಾಗಿ ಇನ್ಯಾರದೋ ಆಶ್ರಯದಲ್ಲಿ ಬೆಳೆದವರು ನಾವು. ಇಬ್ಬರೂ ಹೆತ್ತಮ್ಮನ ಎದೆಗೆ ಸಹಜವಾಗಿ ಗುದ್ದಿ ಕುಡಿವ ಹಾಲಿಂದ ವಂಚಿತರೇ. ಇಬ್ಬರೂ ಹೆತ್ತಮ್ಮನ ಲಾಲಿಯನ್ನ ಕೇಳದವರೇ. ಇಬ್ಬರೂ ಹೆತ್ತವ್ವನ ಹೊಟ್ಟೆಗೊದ್ದು ಅವಳಿಂದ ಮುದ್ದಿಸಿಕೊಳ್ಳದವರೇ. ಇಬ್ಬರೂ ತೊಟ್ಟಿಲು ತೂಗುವ ಹೆತ್ತವಳ ಕಿರುನಗೆಗೆ ಕಿಲಕಿಲನೆ ಬೊಚ್ಚುಬಾಯಿ ಬಿಟ್ಟು ನಗಲು ಸಿಗದವರೇ.. ಇವಿಷ್ಟನ್ನೂ ಕರ್ಣನ ಕಣ್ಣುಗಳಲ್ಲಿ ಕಣ್ಣಿಟ್ಟು ಅಂದೆ. ಅವನ ಬಳಲಿಕೆ ಕೊಂಚ ತಗ್ಗಿತು, ಅರ್ಥವಾಗಿತ್ತು ಅವನಿಗೆ, ಕಣ್ಣುಗಳಲ್ಲಿ ತೃಪ್ತಿಯ ಮೊಹರುಗಳಿದ್ದವು. ಕಾಲಮೇಲೆ ಮಲಗಿದ, ಹಾಗೇ ಕಾಲದಲ್ಲಿ ಮಲಗಿದ!
ಮಲಗಿದೆಯಾ ರಾಧೆ, ಓದುತ್ತಾ ಓದುತ್ತಾ? ನಿನಗೆಂದೇ ಎರಡು ನವಿಲುಗರಿಗಳ ಇಟ್ಟಿದ್ದೇನೆ ನೋಡು, ಕಪಿಲೆ ಯಮುನೆಯರನು ಕೇಳಿದೆ ಅಂತ ತಿಳಿಸು, ಹುಲ್ಲುಗಾವಲಿನ ಪ್ರವೇಶದಲ್ಲಿ ದೊಡ್ಡ ಮರವಿತ್ತಲ್ಲಾ, ಅಲ್ಲಿದ್ದ ಗಿಳಿಗಳ ಹೊಸ ಸಂತತಿ ಹುಟ್ಟಿರಬಹುದೀಗ, ಅವುಗಳಿಗೆ ನನ್ನ ಮತ್ತು ಅವರ ಪೂರ್ವಜರ ಒಡನಾಟದ ಕತೆ ಹೇಳು, ಕತೆಯಲ್ಲಿ ನಿನ್ನನ್ನೂ ಸೇರಿಸಿಕೊಂಡೇ ಹೇಳಬೇಕು ಮರೆಯಬೇಡ. ಬೃಂದಾವನದ ಸಖಿಯರಿಗೆ ಬೇಕಿದ್ದರೆ ಚೂರು ಹೊಟ್ಟೆಯುರಿಸು ಕೃಷ್ಣ ನನಗೆ ಮಾತ್ರ ಪತ್ರ ಬರೆದನೆಂದು. ಕೊಳಲ ಮೇಲಿನ ಧೂಳೊರೆಸು. ಬಂಡೆಗಳ ಮೇಲೆ ಹಚ್ಚಿಟ್ಟ ಬೆರಣಿಗಳ ಹೆಕ್ಕು. ಗಡಿಗೆಯಿಂದ ಇಷ್ಟಿಷ್ಟೇ ಇಷ್ಟಿಷ್ಟೇ ತೆಗೆದು, ನನ್ನ ಗೋಕುಲದ ದಿನಗಳಿಗೆ ಬೆಣ್ಣೆ ಹಚ್ಚು. ಕೃಷ್ಣ ಸಿಗುತ್ತಾನೆ ಒಡೆದ ಮಡಕೆಯ ಚೂರುಗಳಲ್ಲಿ, ಕೃಷ್ಣ ಸಿಗುತ್ತಾನೆ ಕಳ್ಳ ಹೆಜ್ಜೆಗಳ ಪುಟ್ಟ ಮಕ್ಕಳ ಸಲಿಗೆಯಲ್ಲಿ, ಕೃಷ್ಣ ಸಿಗುತ್ತಾನೆ ಕದ್ದು ನೋಡುವ ಕಳ್ಳ ಯೌವನದ ನಾಚಿಕೆಯಲ್ಲಿ, ಕೃಷ್ಣ ಸಿಗುತ್ತಾನೆ ನೀನು ಸವರುವ ಆ ಕೊಳಲಿನ ರಂಧ್ರಗಳಲ್ಲಿ, ಕೃಷ್ಣ ಸಿಗುತ್ತಾನೆ ನಿನ್ನ ಪರವಶದ ನಿದ್ರೆಯಲ್ಲಿ.. ಕೃಷ್ಣ ಸಿಗುತ್ತಾನೆ ನಿನ್ನ ನಿತ್ಯ ದ್ವಂದ್ವಗಳಲ್ಲಿ, ಕೃಷ್ಣ ಸಿಗುತ್ತಾನೆ ನೀನು ಅಂಟಿಕೊಳ್ಳುವ ಕತ್ತಲುಗಳಲ್ಲಿ, ಕೃಷ್ಣ ಸಿಕ್ಕೇ ಸಿಗುತ್ತಾನೆ ನೀನು ಬದುಕುವ ರೀತಿಯಲ್ಲಿ.. ಕೃಷ್ಣ ಸಿಗದೇ ಎಲ್ಲಿ ಹೋಗುತ್ತಾನೆ ರಾಧೆಯ ಪ್ರೀತಿಯ ನೆರಳಿನಲ್ಲಿ…
ಮತ್ತೆ ಪತ್ರ ಬರೆಯುತ್ತೇನೆ ಕೃಷ್ಣ ಕದಡಿದಾಗ, ರಾಧೆ ಮುದುಡಿದಾಗ..
ಇಂತಿ ನಿನ್ನ,
ಗೋಪಾಲ
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!
ಹುಚ್ಚು ಅಚ್ಚುಮೆಚ್ಚಾದಾಗ