- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ಕಳೆದ ಹತ್ತು ತಿಂಗಳಿಂದ ನಮ್ಮ ಬದುಕಿನ ಮಹತ್ವದ ಸಮಯವನ್ನು ಕೊರೋನಾ ಕೊಂದು ಹಾಕಿದೆ.
2020 ಇಷ್ಟೊಂದು ಭಯಾನಕ ವರ್ಷವಾಗಬಹುದೆಂದು ಯಾರೂ ಊಹಿಸಿರಲಿಲ್ಲ.
ಅನಿರೀಕ್ಷಿತ ಎನ್ನುವ ಪದ ತನ್ನ ವಿಸ್ತಾರ, ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿತು.
ಚೈನಾ ಮೂಲಕ ಬಂದ ವೈರಸ್ ಕೋವಿಡ್-19 ಅನೇಕ ಸವಾಲುಗಳನ್ನು ತಂದೊಡ್ಡಿತು.
ಇಡೀ ಜಗತ್ತು ಒಂದೇ ರೀತಿಯ ತಲ್ಲಣಗಳನ್ನು ಎದುರಿಸಿತು.ಇಷ್ಟೊಂದು ಊಹಿಸಲಾಗದ ವಿಕೋಪವನ್ನು ಜಗತ್ತು ಕಳೆದ ಒಂದು ಶತಮಾನದಲ್ಲಿ ಅನುಭವಿಸಿರಲಿಲ್ಲ.
ಇದು ಕೃತಕವಾಗಿ ಸೃಷ್ಟಿಸಲ್ಪಟ್ಟದ್ದೋ, ಸಹಜವಾಗಿ ಅಪ್ಪಳಿಸಿದ್ದೋ ಎಂಬ ಚರ್ಚೆಯ ಮೂಲಕ ಆರಂಭವಾದ ಆತಂಕ ವಿವಿಧ ಸ್ವರೂಪ ತಾಳಿ ಭೀಕರ ಪರಿಣಾಮ ಬೀರಿತು.
ಲಾಕ್ ಡೌನ್, ಸೋಷಿಯಲ್ ಡಿಸ್ಟನ್ಸಿಂಗ್, ಮಾಸ್ಕ್ ಎಂಬ ಹೊಸ ಅವತಾರಗಳು ಮನುಷ್ಯನ ಮನಸನ್ನು ಜಜ್ಜಿ ಹಾಕಿದವು.
ಇಡೀ ಜಗತ್ತು ಏಕ ಕಾಲಕ್ಕೆ ಗಲಿಬಿಲಿ ಗೊಂಡಿತು.
ವಿಶ್ವ ಆರೋಗ್ಯ ಸಂಸ್ಥೆ ಕೂಡ ಸ್ಪಷ್ಟ ನಿಲುವು ತಾಳಲಾಗದೇ ದಿನಕ್ಕೊಂದು ನಿರ್ಣಯ ಪ್ರಕಟಿಸಿತು.
ಸರಕಾರಗಳು ಏನೇ ಹೇಳಿದರೂ ಪಾಲಿಸುವ ಹಂತ ತಲುಪಿದವು.
ಯುರೋಪಿನ ಬಹುಪಾಲು ರಾಷ್ಟ್ರಗಳಲ್ಲಿ ಕೊರೋನಾ ತನ್ನ ಅಟ್ಟಹಾಸ ಮೆರೆದ ಪರಿಣಾಮ ಹೆಣಗಳ ರಾಶಿ ನೋಡಿದಾಗ ಜನ ಇನ್ನಷ್ಟು ಭಯ ಭೀತರಾದರು.
ಚಿಕಿತ್ಸೆಯ ವಿಧಾನ ಮತ್ತು ನೀಡಬಹುದಾದ ಔಷಧಗಳ ಕುರಿತು ಸೂಕ್ತ ಮಾರ್ಗದರ್ಶನ ಸಿಗಲಿಲ್ಲ.
ಸಾವಿನ ಸಂಖ್ಯೆಯ ನಿಯಂತ್ರಣದ ಭರದಲ್ಲಿ ಅನೇಕ ಅವಘಡಗಳು ಸಂಭವಿಸಿದವು.
ದೀಪ ಬೆಳಗಿಸುವ, ಜಾಗಟೆ ಬಾರಿಸುವ ಭಾವನಾತ್ಮಕ ಕೆಲಸದಲ್ಲಿ ಕೂಡ ನಂಬಿಕೆ ಹೆಚ್ಚಾಯಿತು.
ಮುಳುಗೋ ವ್ಯಕ್ತಿಗೆ ಹುಲ್ಲು ಕಡ್ಡಿಯೂ ಆಸರೆ ಎಂಬಂತೆ ಜನ ಪರದಾಡಲಾರಂಭಿಸಿದರು.
ಕೋವಿಡ್ ನಿಯಂತ್ರಣ ಮಾಡುವ ವೈದ್ಯರುಗಳು ಬಲಿಯಾದಾಗ ಪ್ರಾಣ ಭೀತಿ ನೂರ್ಮಡಿಸಿತು.
ಲಾಕ್ ಡೌನ್ ಅನೇಕ ಉದ್ಯಮಗಳನ್ನು ವಿನಾಶ ಮಾಡಿತು.
ಮಧ್ಯಮ ವರ್ಗದ ದುಡಿಯುವ ಜನ ಪಟ್ಟಣ ಬಿಟ್ಟು ಹಳ್ಳಿ ಸೇರಿದಾಗ ಹಳ್ಳಿಗಳೂ ಬೆದರಿದವು.
‘ಕೆಟ್ಟು ಪಟ್ಟಣ ಸೇರು’ ಎಂಬ ಗಾದೆ ತಿರುವು ಮುರುವಾಯಿತು.
ಪಟ್ಟಣ ಸೇರಿದವರು ಮರಳಿ ಗೂಡು ಸೇರಿದಾಗ ಪರಿಸ್ಥಿತಿ ಭೀಕರವಾಯಿತು.
ಬಡವರಿಗೆ ಕೆಲಸ ಇಲ್ಲದಾದಾಗ ದುಡಿಯುವ ಕೈಗಳಿಗೆ ಅನ್ನ ನೀಡುವ ಹೊಣೆಗಾರಿಕೆ ಸರಕಾರ ನಿರ್ವಹಿಸಲು ಒದ್ದಾಡಿತು.
ಸರಕಾರದ ಆದಾಯದ ಮೂಲಗಳು ಕಡಿಮೆಯಾದಾಗ ಪರಿಸ್ಥಿತಿ ಕೈ ಮೀರಿ ಹೋಯಿತು.
ಜನರ ಪ್ರಾಣ ರಕ್ಷಣೆಯ ಸವಾಲನ್ನು ಆರೋಗ್ಯ ಇಲಾಖೆ ಸಮರ್ಥವಾಗಿ ನಿಭಾಯಿಸಲು ಯಶಸ್ವಿಯಾಯಿತು.
ಹಾಗಂತ ಪ್ರಾಮಾಣಿಕ ಪ್ರಯತ್ನ ನಡೆಯಿತಾ? ಎಂಬ ಪ್ರಶ್ನೆ ಉದ್ಭವಿಸಿತಾದರೂ ಅದರ ಕುರಿತು ಚರ್ಚಿಸುವ ವ್ಯವಧಾನ ಯಾರಿಗೂ ಇರಲಿಲ್ಲ.
ಕೊರೋನಾ ಸಂದರ್ಭದಲ್ಲಿ ನೀಡಿದ ಚಿಕಿತ್ಸೆ ಮತ್ತು ಅದರ ಪರಿಣಾಮದ ಬಗ್ಗೆ ಚರ್ಚೆ ಮುಗಿದು ಹೋಗಿದೆ.
ಹಾಗಾದರೆ ಇಷ್ಟೊಂದು ಸಾವು ನೋವು ಸಂಭವಿಸಲು ಇದ್ದಿರಬಹುದಾದ ಕಾರಣ ಹುಡುಕುವುದರಲ್ಲಿ ಈಗ ಅರ್ಥವಿಲ್ಲ.
ಜನ ಭಯ ಭೀತರಾಗಲು ನಮ್ಮ ಮಾಧ್ಯಮಗಳು ಕಾರಣವಾಗಿರುವುದು ಎಂಬುದು ಅಷ್ಟೇ ವಿಷಾದನೀಯ.
ದಿನಕ್ಕೊಂದು ಭಯಾನಕ ಸುದ್ದಿ ಬಿತ್ತಿದ ಪರಿಣಾಮವಾಗಿ ಅನೇಕರು ಹೆದರಿಬಿಟ್ಟರು.
ಸರಾಸರಿ ಮನೋರೋಗಿಗಳು ಹೆಚ್ಚಾಗಲು ಮಾಧ್ಯಮಗಳು ಕಾರಣ ಎಂಬ ಆರೋಪ ಅಲ್ಲಗಳೆಯಲಾಗದು.
ಗುಳೆ ಹೋದವರ ಬದುಕಿನ ಬವಣೆ ಇನ್ನೂ ನಿಂತಿಲ್ಲ.
ಕೊರೋನಾ ಕಾವು ಇಳಿದ ಮೇಲೆ ಬಡವರ ಬದುಕು ಯಥಾಸ್ಥಿತಿಗೆ ತಲುಪಿದೆ ಎನಿಸಿರುವಾಗ ಮತ್ತೆ ಬ್ರಿಟನ್ ಮೂಲದ ಹೊಸ ಅವತಾರದ ಕೊರೋನಾ ಕುರಿತು ಅದೇ ಹಾದಿಯ ಮಾತಾಡುವುದು ಸರಿಯಲ್ಲ.
ಮಾಧ್ಯಮಗಳು ಜನರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕಾಗಿದೆ.
ಯೋಗ, ಧ್ಯಾನ ಮತ್ತು ಸಕಾರಾತ್ಮಕ ಆಲೋಚನೆಗಳ ಮೂಲಕ ಜನ ಇಮ್ಯೂನಿಟಿ ಹೆಚ್ಚಿಸಿಕೊಳ್ಳಲು ಮಾಧ್ಯಮಗಳು ನೆರವಾಗಬೇಕು.
ಮೂಲೆ ಹಿಡಿದು ಆನ್ ಲೈನ್ ಕ್ಲಾಸುಗಳ ಮೂಲಕ ಬೇಸತ್ತು ಹೋಗಿರುವ ಮಕ್ಕಳ ಪಾಲಿಗೆ ಹೊಸ ವರ್ಷ ಹರ್ಷದಾಯಕವಾಗಿರಲಿ.
ಶಾಲೆ ಕಾಲೇಜುಗಳು ಆರಂಭವಾಗಿ ಮಕ್ಕಳು ಮೈ ಛಳಿ ಬಿಟ್ಟು ಆಟದ ಮೈದಾನದಲ್ಲಿ ಬೆಚ್ಚಗಾಗಿ ಮನದ ಹುಮ್ಮಸ್ಸು ಹೆಚ್ಚಿಸಿಕೊಳ್ಳಲು ಪಾಲಕರು ನೆರವಾಗಬೇಕು.
ಬನ್ನಿ ಈ ಹೊಸ ವರ್ಷದ ಸಂದರ್ಭದಲ್ಲಿ ನೂರು ವೈರಾಣುಗಳು ಬಂದರೂ ಬೆನ್ನಟ್ಟಿ ಓಡಿಸುವ ಸಂಕಲ್ಪ ಮಾಡೋಣ.
.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್