- ಚಾಚಾ ನೆಹರು ಮತ್ತು ನಮ್ಮ ಮಕ್ಕಳು - ನವೆಂಬರ್ 14, 2023
- ಮಾನವತಾವಾದಿಯ ಹೆಜ್ಜೆಗಳು……. - ಏಪ್ರಿಲ್ 14, 2021
- ಯುಗಾದಿ – ಎರಡು ಹಾದಿ… - ಏಪ್ರಿಲ್ 13, 2021
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ವಿವೇಕಾನಂದ. ಹೆಚ್.ಕೆ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ..!
ಖಾಸಗೀಕರಣ….
ವಿಶ್ವಗುರುವಾಗುವತ್ತ ಭಾರತ…
ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವ ಅವಕಾಶ ಪಡೆಯುವ ಅದೃಷ್ಟವಂತ ಭಾರತದ ಯುವ ಸಮೂಹ….
ಬಹುತೇಕ ಎಲ್ಲಾ ಕ್ಷೇತ್ರಗಳೂ ಖಾಸಗೀಕರಣ…
ರೈಲು ಖಾಸಗೀಕರಣ…
ಇನ್ನು ಮುಂದೆ ವಿಮಾನ ನಿಲ್ದಾಣದಂತ ರೈಲು ನಿಲ್ದಾಣಗಳು. ಸ್ವಚ್ಛ, ಸುಂದರ, ಹವಾನಿಯಂತ್ರಿತ ಬಿಗಿ ಭದ್ರತೆಯ ರೈಲ್ವೆ ಫ್ಲಾಟ್ ಫಾರಂಗಳು, ಸಮಯಕ್ಕಿಂತ ಮೊದಲೇ ಬಂದು ನಿಲ್ಲುವ ಸುಹಾಸನೆ ಭರಿತ ಬಣ್ಣಬಣ್ಣದ ರೈಲು ಭೋಗಿಗಳು, ಬಗೆಬಗೆಯ ಊಟ ತಿಂಡಿ ಕುಡಿತಗಳು ಎಲ್ಲವೂ ನಿಮಗಾಗಿ ಖಾಸಗಿ ಕಂಪನಿಗಳು ಒದಗಿಸುತ್ತವೆ. ನಿಮ್ಮ ಪ್ರಯಾಣ ಸುಖಕರವಾಗಿರಲಿ.
ನಾವು ಕೆಟ್ಟ ವಾಸನೆಯ, ದಟ್ಟ ದರಿದ್ರದ, ಸಮಯ ಪ್ರಜ್ಞೆ ಇಲ್ಲದ, ಕಳಪೆ ಗುಣಮಟ್ಟ ಆಹಾರದ ರೈಲುಗಳಲ್ಲಿ ಪ್ರಯಾಣಿಸಿದ ದುರಾದೃಷ್ಟವಂತರು….
ಬ್ಯಾಂಕುಗಳ ಖಾಸಗೀಕರಣ…
ಇನ್ನು ಮುಂದೆ ಬೃಹತ್ ಕಟ್ಟಡಗಳ, ಹವಾನಿಯಂತ್ರಿತ ವ್ಯವಸ್ಥೆಯ ಸೂಟುಬೂಟು ತೊಟ್ಟು ಚಂದನೆಯ ಇಂಗ್ಲೀಷ್ ಭಾಷೆ ಮಾತನಾಡುವ ಯುವಕ ಯುವತಿಯರ ಮನಮೋಹಕ ಶೈಲಿಯ ಸ್ವಾಗತ ಕೋರುವ, ನೀವು ಕೇಳಿದಷ್ಟು ಹಣ ಕೊಡುವ ಅತ್ಯುತ್ತಮ ಬ್ಯಾಂಕಿಂಗ್ ವ್ಯವಸ್ಥೆ ನಿಮ್ಮದಾಗಲಿದೆ.
ನಾವು ಆ ದುರಹಂಕಾರ ಮುಖಭಾವದ, ಅರ್ಥವಾಗದ ದಾಖಲೆ ಕೇಳುವ, ಸಾಕಷ್ಟು ಬಾರಿ ಅಲೆದಾಡಿಸುವ, ಅಪರಿಚಿತರಂತೆ ವರ್ತಿಸುವ ಅಧಿಕಾರಿಗಳ ನಡುವೆ
ಹೈರಾಣಾಗಿದ್ದೆವು….
ಕೃಷಿ ಭೂಮಿ, ಕೃಷಿ ಮಾರುಕಟ್ಟೆ ಮುಕ್ತ ಮುಕ್ತ, ಹೊಸ ಭೂ ಸುಧಾರಣಾ ಕಾಯಿದೆ….
ಇನ್ನು ಮುಂದೆ ಕೃಷಿಯೂ ಒಂದು ಬೃಹತ್ ಮತ್ತು ಆಕರ್ಷಕ ಉದ್ಯಮವಾಗಿ ಅಭಿವೃದ್ಧಿ ಹೊಂದುತ್ತದೆ. ಎಲ್ಲಿಲ್ಲೂ ದವಸ ಧಾನ್ಯಗಳು, ಹಣ್ಣು ತರಕಾರಿಗಳ ರಾಶಿ ನೋಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಹಳೆಯ ಹರಿದ ಕೊಳಕು ಬಟ್ಟೆಯ ನಮ್ಮ ಕಾಲದ ರೈತರ ಬದಲಿಗೆ ಸೂಟುಬೂಟಿನ ರೈತರನ್ನು ಕಾಣುವ ಸೌಭಾಗ್ಯ ಜನರಿಗೆ ಸಿಗಲಿದೆ. ಕೃಷಿಗಾಗಿಯೇ ಹೊಸ ಮಣ್ಣು ತಾಗದ ಸರ್ವ ಋತುವಿನ ಆಧುನಿಕ ಚಪ್ಪಲಿ ಷೂಗಳು ಬರಲಿವೆ. ತಾಯಿ ಭಾಷೆಯ ಸಹಜ ನುಡಿಗಳು ಮಾಯವಾಗಿ ಆಕರ್ಷಕ ವರ್ಣನೆಗಳ ಪರಕೀಯ ಭಾಷೆ ಹೊಲಗದ್ದೆಗಳಲ್ಲಿ ತೇಲಿ ಬರಲಿದೆ. ಚಂದನೆಯ ಹುಡುಗ ಹುಡುಗಿಯರು ಉಳುವುದು ನಾಟಿ ಮಾಡುವುದು ನೀರು ಹರಿಸುವುದು ಕೊಯ್ಲು ಮಾಡುವುದು, ಹಿನ್ನೆಲೆಯಲ್ಲಿ ಪಾಶ್ಚಾತ್ಯ ಸಂಗೀತ ಎಲ್ಲವೂ ನೋಡುಗರ ಕಣ್ಣಿಗೆ ಹಬ್ಬ.
ಕೈ ಕೆಸರಾಗದೆ ಬಾಯಿ ಮೊಸರಾಗಲಿದೆ. ಅದನ್ನು ನೋಡುವ ಅದೃಷ್ಟವೂ ನಿಮ್ಮದೇ.
ನೀರು ವಿದ್ಯುತ್ ಮುಂತಾದ ದಿನ ಬಳಕೆಯ ಎಲ್ಲವೂ ಖಾಸಗೀಕರಣ…….
ನೀರಿಲ್ಲ, ಕರೆಂಟಿಲ್ಲ ಅದಿಲ್ಲ ಇದಿಲ್ಲ ಎಂಬ ದೂರುಗಳಿಗೆ ಇನ್ನು ಅವಕಾಶವೇ ಇಲ್ಲ. ಬೆರಳ ತುದಿಯಲ್ಲಿ ನಿಮ್ಮ ಮೊಬೈಲಿನಿಂದ ನೀವು ಒಂದು ಬೇಡಿಕೆ ಸಲ್ಲಿಸಿದರೆ ಸಾಕು ನೀವು ಕೇಳಿದಷ್ಟು, ಎಷ್ಟು ದಿನಗಳವರೆಗೆ ಬೇಕಾದರೂ ನಿರಂತರ ವಿದ್ಯುತ್ ಮತ್ತು ನೀರು ಸರಬರಾಜು ಮಾಡಲಾಗುತ್ತದೆ. ನಮ್ಮ ಕಾಲದಲ್ಲಿ ಎಷ್ಟೋ ಜನರಿಗೆ ನೀರು ವಿದ್ಯುತ್ ಕೊರತೆಯೇ ಒಂದು ಸಮಸ್ಯೆಯಾಗಿ ಬಿಪಿ ಶುಗರ್ ತಗಲಿಕೊಂಡಿತು. ಸಂಸಾರಗಳಲ್ಲಿ, ಬೀದಿಗಳಲ್ಲಿ ಇದರಿಂದಾಗಿಯೇ ದೊಡ್ಡ ಗಲಾಟೆಗಳಾಗುತ್ತಿದ್ದವು. ಇನ್ನು ಮುಂದೆ ನೀವುಗಳು ನೆಮ್ಮದಿಯಿಂದ ಇರಬಹುದು.
ಜೀವ ವಿಮೆಯೂ ಖಾಸಗೀಕರಣ….
ಸೂಪರ್ ಸೂಪರ್ ಎಲ್ಲವೂ ಸೂಪರ್….
ಇನ್ನು ಮುಂದೆ ಖಾಸಗಿ ಕಂಪನಿಗಳು ನಿಮಗೆ ಜೀವನ ಪೂರ್ತಿ ಕುಳಿತು ತಿನ್ನುವ, ನಿಮ್ಮ ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳು ಸಹ ಯಾವುದೇ ಕೆಲಸ ಮಾಡದೇ ಕಾಲು ಮೇಲೆ ಕಾಲು ಹಾಕಿಕೊಂಡು ಆರಾಮವಾಗಿ ಇರುವಂತ ವಿಮಾ ಸೌಕರ್ಯಗಳನ್ನು ಒದಗಿಸಲಿವೆ. ಈಗಿನ ತಗಡು ಕಂಪನಿಗಳ ಗೋಳಾಟ ನಿಮಗೆ ಇರುವುದಿಲ್ಲ.
ಇದು ಕೇವಲ ಸ್ಯಾಂಪಲ್ ಮಾತ್ರ. ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ಹೆಜ್ಜೆ ಮುಂದೆ ಇಟ್ಟರೆ ಪೋಲೀಸ್, ಆಡಳಿತ ಕೊನೆಗೆ ನಿಮ್ಮ ಸಂಸಾರ ಕೂಡಾ ಖಾಸಗೀಕರಣ ಮಾಡಬಹುದು. ಕುಟುಂಬ ಮತ್ತು ಮಕ್ಕಳನ್ನು ಖಾಸಗಿಯವರೇ ತುಂಬಾ ಜವಾಬ್ದಾರಿಯಿಂದ ಸಾಕಿ ಸಲುಹಬಹುದು. ಒಟ್ಟಿನಲ್ಲಿ ಭೂಲೋಕದ ಸ್ವರ್ಗ ಭಾರತವಾಗುವುದರಲ್ಲಿ ಸಂಶಯವೇ ಇಲ್ಲ. ಅದೃಷ್ಟವಂತ ಯುವ ಸಮೂಹ.
ಷರತ್ತುಗಳು ಅನ್ವಯ
ಆದರೆ ಒಂದೇ ಒಂದು ಸಣ್ಣ ಷರತ್ತು ಮಾತ್ರ ಇದಕ್ಕೆ ಅನ್ವಯಿಸುತ್ತದೆ. ಅದು ನೀವು ಕೊಟ್ಯಾಧೀಶರಾಗಿರಬೇಕು. ಹಣ ನಿರಂತರವಾಗಿ ನಿಮ್ಮ ಬಳಿ ಹರಿಯುತ್ತಿರಬೇಕು. ಆಗ ಎಲ್ಲವೂ ನಿಮ್ಮ ಕಾಲ ಬುಡದಲ್ಲಿ ಬಂದು ಬೀಳುತ್ತದೆ……
ಖಾಸಗೀಕರಣ ಅಥವಾ ಸರ್ಕಾರಿ ವ್ಯವಸ್ಥೆ ಎಂಬುದು ಕೇವಲ ನೀತಿಗಳು ಮಾತ್ರ. ಈ ಎರಡರಲ್ಲಿಯೂ ಕೆಲಸ ಮಾಡುವವರು ಅದೇ ಜನ. ಇಂಗ್ಲೆಂಡ್ ಅಮೆರಿಕ ಸಿಂಗಪುರ ಸ್ವಿಟ್ಜರ್ಲೆಂಡ್ ಗಳಿಂದ ಜನರೇನು ಬರುವುದಿಲ್ಲ. ನಮ್ಮ ಅಣ್ಣತಮ್ಮಂದಿರೇ ಇಲ್ಲಿರುತ್ತಾರೆ.
ಯುವ ಸಮುದಾಯವೇ ದಯವಿಟ್ಟು ಅರ್ಥಮಾಡಿಕೊಳ್ಳಿ……
ಖಾಸಗೀಕರಣ ಅಭಿವೃದ್ಧಿಯ ಒಂದು ಅತ್ಯುತ್ತಮ ವಿಧಾನ ಎಂಬುದೇನೋ ನಿಜ. ಆದರೆ ಅದು ಯಶಸ್ವಿಯಾಗಲು ಸಾಮಾಜಿಕ ವ್ಯವಸ್ಥೆ ಬಹುಮುಖ್ಯ. ನಮ್ಮ ದೇಶದಲ್ಲಿ ಬಹುಮುಖ್ಯವಾಗಿ ನಾಲ್ಕು ರೀತಿಯ ಅಸ್ಪೃಶ್ಯತೆ – ಅಸಮಾನತೆ ಆಚರಣೆಯಲ್ಲಿದೆ.
- ಒಂದು-ಎಲ್ಲರಿಗೂ ತಿಳಿದಿರುವ ಜಾತಿಯ ಮೇಲು ಕೀಳು,
- ಎರಡು-ಅನಕ್ಷರಸ್ಥರು ಮತ್ತು ಅಕ್ಷರಸ್ಥರೆಂಬ ಬಹುದೊಡ್ಡ ಬಿರುಕು,
- ಮೂರು-ಬಡವರು ಮತ್ತು ಶ್ರೀಮಂತರೆಂಬ ಅಹಂಕಾರದ ವ್ಯತ್ಯಾಸ,
- ನಾಲ್ಕು-ಹಳ್ಳಿಯವರು ಮತ್ತು ನಗರದವರೆಂಬ ಮೇಲರಿಮೆ ಮತ್ತು ಕೀಳರಿಮೆ.
ಈ ವ್ಯವಸ್ಥೆಯಲ್ಲಿ ಖಾಸಗೀಕರಣ ಎಂಬುದು ಶೋಷಣೆಯ ಅಸ್ತ್ರವನ್ನು ಪ್ರಬಲರ ಕೈಗೆ ಕೊಡುತ್ತದೆ. ಅದು ಮೇಲ್ನೋಟಕ್ಕೆ ಕಾಣದೆ ಆಂತರ್ಯದಲ್ಲಿ ರಾಕ್ಷಸ ರೂಪ ಪಡೆಯುತ್ತದೆ. ಬಲಿಷ್ಠ ವರ್ಗಗಳು ಇದನ್ನು ಬಹಳ ನಾಜೂಕಾಗಿ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತವೆ.
ಏನೋ ಕೆಲವು ಕ್ಷೇತ್ರಗಳ ಒಂದಷ್ಟು ನಿಯಂತ್ರಿತ ಖಾಸಗೀಕರಣ,
ಸೇವೆ ಮತ್ತು ಗುಣಮಟ್ಟದ ದೃಷ್ಟಿಯಿಂದ ಉತ್ತಮ ಎಂಬುದು ನಿಜ. ಸರ್ಕಾರಿ ವ್ಯವಸ್ಥೆ ಭ್ರಷ್ಟ, ದುರಹಂಕಾರಿ ಮತ್ತು ಸೋಮಾರಿತನದಿಂದ ಆವರಿಸಿಕೊಂಡಿರುವಾಗ ಖಾಸಗೀಕರಣ ಅತ್ಯುತ್ತಮ ಮಾರ್ಗವಾಗಿ ಕಾಣುತ್ತದೆ. ಆದರೆ ಅದರ ದುಷ್ಪರಿಣಾಮಗಳನ್ನೂ ಗಮನಿಸಬೇಕಲ್ಲವೇ ? ಬಡವರು ವಿಮಾನದಂತೆ ರೈಲುಗಳನ್ನೂ ಅವಲಂಬಿಸುವಂತಿಲ್ಲ. ಅಷ್ಟೇ ಏಕೆ ರೈಲು ನಿಲ್ದಾಣಗಳ ಒಳಗೂ ಪ್ರವೇಶ ನಿಷೇಧಿಸಲಾಗುತ್ತದೆ. ಬ್ಯಾಂಕುಗಳಲ್ಲಿ ಹಣವಂತರಿಗೆ ಮಾತ್ರ ಪ್ರವೇಶ. ಜೀವ ವಿಮೆ ಹಣ ವಿದೇಶಿಯರ ಪಾಲು. ನಿಯಮಗಳು ಇದ್ದರು ಅದನ್ನು ದಿಕ್ಕರಿಸುವ ಸಾಧ್ಯತೆಯೇ ಹೆಚ್ಚು.
ಹೀಗೆ ಆದರೆ ಬಹಳಷ್ಟು ಅಮಾಯಕರ ಗತಿ ಏನು ? ಭಾರತವೇನು ಯುರೋಪ್, ಅಮೆರಿಕ, ಆಸ್ಟ್ರೇಲಿಯಾ ದೇಶಗಳಂತೆ ಗುಣಮಟ್ಟದ ಜನ ಸಮೂಹ ಹೊಂದಿದೆಯೇ ? ಎಷ್ಟೊಂದು ಅಜ್ಞಾನ, ಮೌಡ್ಯ, ಬಡತನ, ಅನಕ್ಷರತೆ,ವಮೋಸ, ವಂಚನೆಗಳು ಇಲ್ಲವೇ ?
ಜನ ಜಾಗೃತರಾದಷ್ಟು ಈ ವ್ಯತ್ಯಾಸಗಳು ಸ್ಪಷ್ಟವಾಗಿ ಗೋಚರಿಸಿ ವರ್ಗ ಸಂಘರ್ಷ ಪ್ರಾರಂಭವಾಗುತ್ತದೆ.
ಆತ್ಮಾವಲೋಕನ ಮಾಡಿಕೊಂಡು ಒಂದು ಅಭಿಪ್ರಾಯ ರೂಪಿಸಿಕೊಳ್ಳಲು ನಿಮ್ಮ ವಿವೇಚನೆಯೇ ಸಾಕಾಗುತ್ತದೆ ದಯವಿಟ್ಟು ಮತ್ತೊಮ್ಮೆ ಯೋಚಿಸಿ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..