ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಸಂತಕುಮಾರ ಅವರ ಮೂರು ಕವಿತೆಗಳು

ವಸಂತಕುಮಾರ ಎಸ್ ಕಡ್ಲಿಮಟ್ಟಿ
ಇತ್ತೀಚಿನ ಬರಹಗಳು: ವಸಂತಕುಮಾರ ಎಸ್ ಕಡ್ಲಿಮಟ್ಟಿ (ಎಲ್ಲವನ್ನು ಓದಿ)

೧. ಬಯಲುನಾಡಿನ ಕವಿತೆ

ದೀರ್ಘದುಸಿರೆಳೆದು ಅರೆಬರೆ ಕಣ್ಣು ಪಿಳುಕಿಸುತ,
ಹಸಿಯುಸಿಕಿನೊಳು ನೇಸರಗೆ ಮೈಯೊಡ್ಡಿ
ಜಗದೇಕಾಂತದ ಚಿಂತೆ ಮಾಡಲು,
ಎಚ್ಚರ ಮರೆತ ಹುಚ್ಚನಂತೆ ರಮಿಸುವ ಅರೆಹುಚ್ಚನೇ
ಅಕ್ಷರಗಳಲಿ ತೇಲಾಡಲು…!
ನನ್ನದೇನು ಹಸಿರ ಕಾಡ-ಹಳ್ಳ-ಕೊಳ್ಳಗಳ
ಮಲ್ಲಿಗೆಯ ನಾಡೇ,
ಸುಡುಬೆಂಕಿಯ ಬೆವರಿನಲಿ
ಕಲ್ಲು-ಮುಳ್ಳು-ಧೂಳೇ
ಇಲ್ಲಿನ ಕವಿಯುನ್ಮಾದಗಳು…!
ಹಾರುವ ಹಕ್ಕಿಯ ಎಲುವುಗಳು ಕಾಣುತಿವೆ,
ಬೆಟ್ಟದಾಚೆಯ ಕಣಿವೆಯಲಿ
ಹಿಡಿನೆರಳೂ ಚಟಪಡಿಸುತಿದೆ,
ನಾಡೊಳಗಿನ ಕೋತಿಚೇಷ್ಟೆ
ಮರದೊಳಗೂ ಕಾಣುತಿಲ್ಲ,
ಪುಗ್ಸಟ್ಟೆ ಸಮಯದೊಳಗೆ
ಏನು-ಎಷ್ಟು ಗೀಚಿದರೂ ಶಬ್ದಗಳಲಿ ನಾದವೇ ಹೊರಡುತಿಲ್ಲ…!
ದೈತ್ಯ ನರನಾಡಿಗಳಲೇ ಕಾಣದ್ದು
ಕ್ರಿಮಿ-ಕೀಟಗಳಲೇನಿದೆ,
ಗೀಚಿಟ್ಟು ಕಲಿಯಲು ನಾನೇ ತಯಾರಿಲ್ಲ,
ಕೊಡುತ್ತೇನೆ ಸಂಶೋಧನೆಯ ವಸ್ತುವಾಗಿ
ಜಗದ ಜ್ಞಾನಾಸುರರು ಹಸಿದು
ಬೆಂಡಾಗಿರುವರು
ಇರಲಾರದ ಇರುವೆಯನು
ಒಳಗಡೆ ಬಿಟ್ಟುಕೊಂಡಂತೆ…!
ಜೀವನ ಬರೀ ನಾಟಕವೇ ಅಲ್ಲ;
ಪರಿಶುದ್ಧ ಕಪಟನಾಟಕ,
ನೆಟ್ಟಗೊಂದೂ ಪಾತ್ರದರಿವಿಲ್ಲ,
ಬೆತ್ತಲಾಗಲು ಯಾವ ದಡದ ಮೇಲೆ ಉರುಳೋಣ,
ಎಂತಹ ಜಾಗಕೆ ಪ್ರವಾಸ ಹರಟೋಣ,
ಎಷ್ಟು ಮಸಿಯುಗುಳಿ ಕಾವ್ಯ
ರಚಿಸಿದರೇನು,
ಆದಿಯೂ-ಅಂತ್ಯವೂ ಇಲ್ಲದ
ಆತ್ಮರತಿಗೆ…!

*****

೨. ಜ್ಞಾನ ಮತ್ತು ಪರಂಪರೆ

ಬರೆವ ಮನದ ಹುಚ್ಚನೊಬ್ಬನಿದ್ದರೆ
ಸಾಕು ನಿನ್ನೊಳಗೆ ಬರೆದೊಗೆದುಬಿಡು
ನಿನ್ನದೇ ಪರಂಪರೆಯ ಸೆರಗಿನೊಳು
ಅವರವರ ಮಾನ – ಬಿಗುಮಾನಗಳನು
ಅದುಮಿ ಮುಚ್ಚಿಕೊಂಡಿರಲಿ.

ನೀ ಸತ್ತಮೇಲೆ ಅವರೇನು ನಿನ್ನ
ಹೆಣದ ಮೇಲಿನ ಮಾನದ ಮಣ್ಣಲ್ಲ,
ನೀನನುಭವಿಸಿದ ಯುಗಸಂಕಟಗಳು
ಅವನಿಗೆ ಅವನದೇ ಕಪ್ಪು ಕನ್ನಡಕ
ಅದರ ಸಂಖ್ಯೆ ಹುಡುಕುವ
ಮೂರ್ಖ ಪರಂಪರೆ
ಹಿಂದೆಯೂ ಇತ್ತು, ಮುಂದೆಯೂ ಇರುತ್ತೆ.

ಪ್ರೀತಿ-ಸ್ನೇಹ, ದೇವರು-ಧರ್ಮ,
ಗುಡಿ-ಗುಂಡಾರಗಳು, ಜಾತಿ-ನೀತಿಗಳು,
ಅವರ ಬಚ್ಚಲ ಮೋರಿಯ ಕೊಳಕಾಗೇ ಇರಲಿ,
ನಿನ್ನ ಸಾಹಿತ್ಯದ ಎಳನೀರೆಂದು
ಪರಿಗಣಿಸದಿರು,
ಒಣಗಿದ ಗಂಟಲಿಗೆ ಹನಿ ನೀರಾಗೆ ಇದ್ದುಬಿಡು.

ಅವರ ಜ್ಞಾನಸೆಲೆ ಮುಚ್ಚಿಟ್ಟ ಕಸದ ಬುಟ್ಟಿಯಾಗಿ,
ತುಂಬಿದ ಹೊಟ್ಟೆಯ ಡರಿಕೆಯಾಗಿ,
ಬೇಡವೆಂದೂ ವ್ಯಭಿಚಾರಿಣಿಯ ಕೂಸಾದ,
ವ್ಯಭಿಚಾರದ ಪಿತಾಮಹರ ಮೋಹ
ಕಾಮವಾಗದ ಪರಂಪರೆ ಸೃಷ್ಠಿಸಿಹರು.

ಮೊಳಕೆಯೊಡೆಯದ ಬರಡು ಹೃದಯದೊಳು,
ಯಾವ ಪರಂಪರೆಯ ಬೆಳೆ ಬೆಳೆದಾರು,
ಸಮಾನತೆಯ ಮಳೆಯೇ ಮರೆಯಾದಾಗ,
ಮಾನವೀಯತೆಯ ಇಬ್ಬನಿಯೂ ದುಸ್ತರವಾದಾಗ,
ಕೃತಕ ಭಾವಗಳ ಕಾರ್ಖಾನೆ
ಮನೆ-ಮನಗಳಲೂ ತುಂಬಿದೆ.

ಮಾತು ಮರೆತ ಮೂಗನ ಧ್ವನಿ
ಅವರ ಭಾಷಾ ಪರಂಪರೆಯಾಗಲಿಲ್ಲ,
ಮುಗ್ಧ ಕಣ್ಣಗಳ ಚೆಲುವು ಅವರ
ದೃಷ್ಟಿ ಪರಂಪರೆಯಾಗಲಿಲ್ಲ,
ಮನುಷ್ಯನೊಳಗಿನ ಮೃಗತೆ ಅವರ
ಧರ್ಮಪರಂಪರೆ ಯಾಗಿದೆ,
ಕೇರಿಯೊಳಗಿನ ಅವರ ಕ್ರೌರ್ಯ
ಸಾಂಸ್ಕೃತಿಕ ಪರಂಪರೆಯಾಗಿದೆ,
ಜ್ಞಾನ ಮತ್ತು ಪರಂಪರೆ ಅವರವರ
ತಿಂಡಿ-ತೀಟೆಗಳಿಗೆ ಅಕ್ಷರವಾಗುವ
ಪರಂಪರೆ ಎಂದೋ ಪ್ರಾರಂಭವಾಗಿದೆ…!

*****

೩. ಕ್ಷಮಿಸಿ, ನನಗೂ ಸೊಕ್ಕಿದೆ

ಎಲ್ಲರೊಳಗೊಂದಾಗಲು ನೋಡಿದೆ
ಎಲ್ಲರನ್ನೂ ನನ್ನವರೇ ಎಂದುಕೊಂಡೆ
ಎಲ್ಲರಿಗಾಗಿ ಬೇಡಿದೆ, ಕೇಳಿದೆ, ಮೌನಿಯೂ ಆದೆ
ಅವಮಾನಿಸಿದರು, ನಿಂದಿಸಿದರು, ಕೊನೆಗೆ
ಉಪಯೋಗಿಸಿಕೊಳ್ಳಲೂ ಹೋಗಿ ನನ್ನ
ಸೊಕ್ಕು ಹೆಚ್ಚು ಮಾಡಿದರು…

ಮನದಲಿ ಗೌರವಿಸಿದೆ, ಪ್ರೀತಿಸಿದೆ –
ತೋರಿಸಿಕೊಳ್ಳುವುದಸಹ್ಯವೆನಿಸಿ
ಸುಮ್ಮನಾದೆ, ಸತ್ಯ ನುಡಿದೆ, ನೇರ ನುಡಿದೆ,
ರಾಜ-ಲಿಯರ್ನ ಹಾಗೇ
ಅರಿತೂ ಅರಿಯದಂತೆ ದೂರ ತಳ್ಳಿದರು
ನನ್ನೇಕಾಂತದ ಸೊಕ್ಕು ಹೆಚ್ಚು ಮಾಡಿದರು…

ವಿನಮ್ರನಾಗಿದ್ದೆ, ಪ್ರಶಂಸಿಸಿದ್ದೆ
ಅನುಕರಿಸಿದ್ದೆ, ಹೆಮ್ಮೆಯಿಂದ ನನ್ನವರೇ
ಎನ್ನುತ್ತಿದ್ದೆ, ತಮ್ಮ ಜಾಗವನ್ನ ಭದ್ರಪಡಿಸಿ
ನನ್ನಜಾಗಕ್ಕೆ ಬೆಂಕಿ ಹಚ್ಚಿದರು, ನೋಡಿದೆ –
ನೋಡಿದೆ ಕೊನೆಗೆ ನಂದಿಸಿಕೊಳ್ಳಲು ತುಸು
ಸೊಕ್ಕು ಹೆಚ್ಚು ಮಾಡಿಕೊಂಡೆ…

ಕಷ್ಟವೆಂದಾಗ ಕೈಲಾದೆ, ಸಂತೈಸಿದೆ
ಸಿಕ್ಕಾಗ ನಕ್ಕು ವಿರಮಿಸಿದೆ, ಮುಂದೆ
ನಾಟಕವಾಡಿ ಹಿಂದೆ ಬೈದಾಗ ಕೈ ಬಿಟ್ಟೆ, ಓದಿದ
ವಿಚಾರಕ್ಕೂ ಓದದೇ ಮೈಲಿಗೆಯೆಂದರು
ನಾಸ್ತಿಕರ ಸ್ನೇಹವರಸಲು ತುಸು
ಸೊಕ್ಕು ಹೆಚ್ಚು ಮಾಡಿಕೊಂಡೆ…

ಪಡೆಯಲು ಕಷ್ಟಪಟ್ಟೆ, ಬಿಡಲು ವ್ಯಥೆ ಪಟ್ಟೆ
ತಿಳಿದವರು ತಿಳಿಯದ ಜಾತಿ ಹಿಡಿದರು
ತಿಳಿಯದವರ ಜಾತಿ ಹುಡುಕಿ ನನ್ನವರೆಂದೆನು
ಅರಿತವರೆಂದು ಹಿಂದೆ ಹೋದೆಡೆ ಕಾದು –
ಬಸವಳಿದು ತಿಳಿದುದರಲ್ಲೇ ಬದುಕಲು ಕಲಿಯಲು
ತುಸು ಸೊಕ್ಕು ಹೆಚ್ಚು ಮಾಡಿಕೊಂಡೆ…

*****