- ತಿರುಮಲೇಶರ ಕಥಾ ಪ್ರಪಂಚದೊಳಗೊಂದು ಇಣುಕು - ಸೆಪ್ಟೆಂಬರ್ 11, 2020
ಬರಹಗಾರನೊಬ್ಬ ತನ್ನ ಬರವಣಿಗೆಯ ಸವಾಲುಗಳೊಂದಿಗೆ ಮುಖಾಮುಖಿಯಾಗುವುದು, ತನ್ನ ಸಾಹಿತ್ಯದ ಸ್ವವಿಮರ್ಶೆಗೆ ಒಳಪಡುವುದು ಮತ್ತು ಆ ಕುರಿತು ಪ್ರಶ್ನೆಗಳನ್ನು ಕೇಳುತ್ತಾ ಉತ್ತರಗಳನ್ನು ಕಂಡುಕೊಳ್ಳುವುದು… ಹೀಗೆ ಬರಹಗಾರನೊಬ್ಬನ ಸಾಕ್ಷಿ ಪ್ರಜ್ಞೆಯಂತೆ ಕೆಲಸ ಮಾಡುತ್ತಲೇ ನಾನಾ ರೀತಿಯಲ್ಲಿ ನಮ್ಮನ್ನು ಕಾಡುವ, ಯೋಚಿಸಲು ಹಚ್ಚುವ ಕತೆ ನನ್ನ ಮೆಚ್ಚಿನ ಲೇಖಕರಾದ ಕೆ ವಿ ತಿರುಮಲೇಶ್ ಸರ್ ಅವರ ‘ಅನೇಕ: ದ ಮಾರ್ಜಿನಲ್ ಮ್ಯಾನ್’. ಇದೊಂದು ವಿಶಿಷ್ಟ ಮತ್ತು ಟಿಪಿಕಲ್ ಕತೆ.
ಕಥಾನಾಯಕನ ಸುಪ್ತ ಪ್ರಜ್ಞೆಯಲ್ಲಿ ನಡೆಯುವ ನಾಟಕದಂತೆ ಅಥವಾ ಕನಸಿನಂತೆ ಅಥವಾ ಸತ್ತ ನಂತರದ ವಿಚಾರಣೆಯಂತೆ ಈ ಕತೆ ಸಾಗುತ್ತದೆ. ಮುಖ್ಯವಾಹಿನಿ (ಮೇನ್ ಸ್ಟ್ರೀಮ್)ಯನ್ನು ಸೇರಲು ತವಕಿಸುತ್ತಿರುವ, ಶ್ರಮ ಪಡುತ್ತಿರುವ ಅಂಚಿನ ಬದಿಯ(ಮಾರ್ಜಿನಲ್) ಕಥಾನಾಯಕ ಮತ್ತು ಈಗಾಗಲೇ ಮುಖ್ಯವಾಹಿನಿಗೆ ಸೇರಿರುವವರ ಮನೋಭೂಮಿಕೆಯಲ್ಲಿ ನಡೆಯುವ ಈ ಲೋಕದ ರಹಸ್ಯಗಳನ್ನು ಅರಿಯುವ ಪ್ರಯತ್ನವನ್ನು ಮಾಡುತ್ತಲೇ ಅನೇಕ ತಾತ್ವಿಕ ನೆಲೆಗಳನ್ನು ನಮ್ಮೆದುರು ತಂದು ನಿಲ್ಲಿಸುತ್ತದೆ.
ಈ ಕತೆಯನ್ನು ಓದುವಾಗ ನನಗೆ ಇವರದೇ ಒಂದು ಕವಿತೆ ‘ರಾಜಮಾರ್ಗ, ಒಳಮಾರ್ಗ’ ನೆನಪಾಯಿತು. ಕತೆ ಮತ್ತು ಕವಿತೆ ಎರಡೂ ಕೊನೆಯಲ್ಲಿ ಬಂದು ನಿಲ್ಲುವುದು ಒಂದೇ ತಾತ್ವಿಕ ಅಭಿಪ್ರಾಯಕ್ಕೆ. ಇಲ್ಲಿಯೂ ಕವಿಯು ರಾಜಮಾರ್ಗಕ್ಕಿಂತ ಒಳಮಾರ್ಗವನ್ನೇ ಆಯ್ದು ಕೊಳ್ಳುವನು ಮತ್ತು ಅಪ್ಪಿ ಕೊಳ್ಳುವನು. ತನ್ನದಲ್ಲದ ವಿಚಾರಗಳ ಮೂಲಕ ಮುಖ್ಯ ವಾಹಿನಿಗೆ ಸೇರುವುದಕ್ಕಿಂತ ಬದುಕಿನ ನಿತ್ಯ ಸತ್ಯಗಳಾಗಿ ತೋರುವ ಒಳಮಾರ್ಗದ ಸಾಮಾನ್ಯ ಸಂಗತಿಗಳೇ ಮಾರ್ಜಿನಲ್ ಮ್ಯಾನ್ ನ ಆಯ್ಕೆಯಾಗಿವೆ.
ಈ ರಾಜಮಾರ್ಗ ಒಳಮಾರ್ಗ ಕವಿತೆಯ ಮೊದಲ ಚರಣಗಳಲ್ಲಿ ರಾಜಮಾರ್ಗ ಮತ್ತು ಒಳಮಾರ್ಗಗಳ ವ್ಯತ್ಯಾಸಗಳನ್ನು ಹೇಳುವ ಕವಿ, ಎರಡನೇ ಹಂತದಲ್ಲಿ ಒಳಮಾರ್ಗದಲ್ಲಿ ಚಲಿಸುತ್ತ ಅಲ್ಲಿ ಕಾಣುವ ಜಗತ್ತಿನ ಬಗ್ಗೆ ವಿವರಿಸುತ್ತಾರೆ. ಕೆರೆಗಳನ್ನು, ಕೆರೆಯೇರಿಯಲ್ಲಿ ಕುಳಿತ ಕಪ್ಪೆಗಳನ್ನು, ಆ ಕಪ್ಪೆಗಳು ಮೋಡಗಳನ್ನು ಕರೆಯುವುದನ್ನು , ಸೂರ್ಯ ಕಾಂತಿ ಹೂವು ತಿರುಗುವುದನ್ನು, ಹೊನ್ನೆ ಮರಗಳ ಮಿಂಚುಗಳನ್ನು ಕಂಡೆ ಎಂದು ಮುಂತಾಗಿ ಹೇಳುವ ಕವಿ ಬದುಕಿನ ತೀರಾ ಸಾಮಾನ್ಯ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತಾರೆ. ಇದರಂತೆ ಕತೆಗಾರ ಅನೇಕ: ದ ಮಾರ್ಜಿನಲ್ ಮ್ಯಾನ್ ಕತೆಯಲ್ಲಿ ಕೂಡ ಮಾರ್ಜಿನಲ್ ವಾಕ್ ವೇ ಮೇಲೆ ನಡೆಯುವ ಸಂದರ್ಭದಲ್ಲಿ ಕಂಡು ದೃಶ್ಯಗಳನ್ನು ಈ ರೀತಿ ವಿವರಿಸುತ್ತಾರೆ.
” ನನ್ನ ವಾಕ್ ವೇಯ ಒಂದು ಬದಿಗೆ ಸಮುದ್ರ ಹಾಗೂ ಸಮುದ್ರ ಬದಿಯ ಬಂಡೆಗಳು, ಮರಳ ದಂಡೆಗಳು, ಇನ್ನೊಂದು ಬದಿಗೆ ಬಯಲ ಬೆಟ್ಟಗಳು, ಹೊಲಗಳು, ಮನೆಗಳು, ಗುಡಿಸಲುಗಳು, ದನಗಳು, ತೋಟಗಳು, ಬೇಲಿಗಳು, ದಡಮೆಗಳು, ಹೂಗಿಡಗಳು, ತರಕಾರಿ ಸಾಲುಗಳು, ತೊಂಡೆ ಚಪ್ಪರಗಳು, ಬೀದಿಗಳು, ಅಂಗಡಿಗಳು, ಸಣ್ಣ ಪುಟ್ಟ ಮೋಟಾರು ವಾಹನಗಳು, ಎತ್ತಿನ ಗಾಡಿಗಳು, ಶಾಲೆಯಿಂದ ಬರುವ ಮಕ್ಕಳು ಇತ್ಯಾದಿ.”
ಇಲ್ಲಿ ಕತೆಗಾರನಿಗೆ ತನ್ನ ಆಯ್ಕೆಯ ಬಗ್ಗೆ ಖಚಿತತೆ ಇದೆ. ತನ್ನ ವಿಚಾರಗಳ ಬಗ್ಗೆ ಸ್ಪಷ್ಟತೆ ಇದೆ. ಇಷ್ಟೆಲ್ಲ ಆದರೂ ಮಾರ್ಜಿನಲ್ ಮ್ಯಾನ್ ಗೆ ಮುಖ್ಯ ವಾಹಿನಿಯ ಬಗ್ಗೆ ಒಂದು ಎಚ್ಚರ ಸದಾ ಇದೆ. ಸಣ್ಣ ಸಣ್ಣ ಸಂಗತಿಗಳಲ್ಲಿಯೇ ಬದುಕಿನ ಖುಷಿ ಮತ್ತು ಸುಖದ ಅನುಭವ ಪಡೆಯುವುದು ಎಷ್ಟು ಚೆಂದ ಅಲ್ಲವೇ. ನಮಗೆ ನಾಯಿಗುತ್ತಿ- ತಿಮ್ಮಿಯ ಪ್ರೇಮವೇ ಅಮರ. ಐತ- ಪೀಂಚಲುವಿನ ದಾಂಪ್ಯತವೇ ಚೆಂದ. ಹುಲಿಯನೇ ನಮ್ಮ ಹೀರೋ. ಕಂದೀಲಿನ ಸ್ತ್ರೀ ನಮ್ಮನ್ನು ಕಾಡುತ್ತಾಳೆ. ವ್ಯಾನ್ ಗಾಫ್ ನ ಬೂಟುಗಳು ನಮ್ಮನ್ನು ಸೆಳೆಯುತ್ತವೆ. ಇಂಥ ಅನೇಕ ಸಾಮಾನ್ಯ ಸಂಗತಿಗಳಿಂದಲೇ ಒಂದು ಬೃಹತ್ತಾದದ್ದು ನಿರ್ಮಾಣವಾಗುತ್ತದೆ. ಕಾಲಕ್ರಮೇಣ ಅಂಚಿನಲ್ಲಿರುವುದು ಮುಖ್ಯ ವಾಹಿನಿಗೆ ಬಂದು ಸೇರುತ್ತದೆ ಅಂತನ್ನಿಸುವುದಿಲ್ಲವೇ !? ಈಗ ಪೆಶೇನ್ಸ್ ಪ್ಲೂಟೋ ಪೆಶೇನ್ಸ್ ಕತೆ ನೆನಪಾಗುತ್ತಿದೆ ನನಗೆ. ಈ ‘ಅನೇಕ: ದ ಮಾರ್ಜಿನಲ್ ಮ್ಯಾನ್’ ಕತೆ ತನ್ನ ವಸ್ತುವಿನಲ್ಲಿ, ಸಂಭಾಷಣೆಗಳಲ್ಲಿ ಕುತೂಹಲ ಮೂಡಿಸುವ ಪರಿಗೆ ಶರಣು. “ನನಗೆ ಮೇನ್ ಸ್ಟ್ರೀಮು ಬೇಡ! ಸಬ್ ಸ್ಟ್ರೀಮು ಬೇಡ! ನಮ್ಮೂರಿನ ಫ್ರೆಶ್ ವಾಟರ್ ಸ್ಟ್ರೀಮ್ ಸಾಕು, ಅದೆಷ್ಟು ಪಾರದರ್ಶಕ ಇದೆ ಎಂದರೆ ಮೀನಿನ ನೆರಳು ಕೂಡ ತಳದಲ್ಲಿ ಕಾಣಿಸುತ್ತದೆ” ಎಂಬ ಕತೆಯ ಕೊನೆಯ ಸಾಲಂತೂ ಅದ್ಭುತ!
ಸರ್, ತಮಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ