ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಭೈರಪ್ಪನವರ ‘ಯಾನ’..

ಭೈರಪ್ಪನವರ ಯಾನ ಕಾದಂಬರಿಯ ಬಗ್ಗೆ ಸ್ವತಃ ವಿಜ್ ಶಿಕ್ಷಕರೂ, ಸಾಹಿತ್ಯಾಸಕ್ತರೂ ಆಗಿರುವ ನಟರಾಜು ಮೈದನಹಳ್ಳಿ ಈ ವಿಚಾರವನ್ನು ಹಂಚಿಕೊಂಡಿದ್ದು ಹೀಗೆ...
ನಟರಾಜು ಮೈದನಹಳ್ಳಿ
ಇತ್ತೀಚಿನ ಬರಹಗಳು: ನಟರಾಜು ಮೈದನಹಳ್ಳಿ (ಎಲ್ಲವನ್ನು ಓದಿ)

ಈ ಕಾದಂಬರಿಯ ವಸ್ತುವೇ ವಿಶಿಷ್ಟ. ಇದು ಅಂತರಿಕ್ಷಯಾನಕ್ಕೆ ಸಂಬಂಧಿಸಿದ ಕಾದಂಬರಿ. ಭೂಮಿಗೆ, ಸೂರ್ಯನನ್ನು ಬಿಟ್ಟರೆ ಅತ್ಯಂತ ಹತ್ತಿರವಿರುವ ನಕ್ಷತ್ರ ಪ್ರಾಕ್ಸಿಮಾ ಸೆಂಟಾರಿಸ್. ಇದು ಭೂಮಿಗೆ 4.6 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಈ ನಕ್ಷತ್ರಕ್ಕೆ ಸಂಬಂಧಿಸಿದ ಯಾವುದಾದರೂ ಗ್ರಹ ಮಾನವನ ವಾಸಕ್ಕೆ ಯೋಗ್ಯವಾಗಿದೆಯಾ? ಅಥವಾ ಯಾವ ಗ್ರಹದಲ್ಲಾದರೂ ಅನ್ಯಗ್ರಹ ಜೀವಿಗಳು ವಾಸ ಮಾಡುತ್ತಿವೆಯಾ? ಎಂಬುದನ್ನು ಪತ್ತೆ ಮಾಡಲು ಭಾರತದ ವಿಜ್ಞಾನಿಗಳ ತಂಡ ಡಾಕ್ಟರ್ ವೆಂಕಟ್ ರವರ ನೇತೃತ್ವದಲ್ಲಿ ಒಂದು ಬೃಹತ್ ಸಾಹಸದ ಯೋಜನೆ ಹಾಕಿಕೊಳ್ಳುತ್ತದೆ. ಗಂಟೆಗೆ ಒಂದು ಲಕ್ಷ ಕಿಲೋಮೀಟರ್ ಗಿಂತಲೂ ವೇಗವಾಗಿ ಚಲಿಸುವ 150 ಅಡಿ ಅಗಲ, 300 ಅಡಿ ಉದ್ದದ ಸುಸಜ್ಜಿತವಾದ ಆಕಾಶನೌಕೆ ಯನ್ನು ನಿರ್ಮಿಸಿ ಹತ್ತಾರು ಸಾವಿರ ವರ್ಷಗಳ ಯಾನಕ್ಕೆ ಯೋಜನೆ ತಯಾರಾಗುತ್ತದೆ. ನೌಕೆಯಲ್ಲಿ ಅಂತರಿಕ್ಷಯಾನಕ್ಕೆ, ಅಂತರಿಕ್ಷ ನೌಕೆಯ ತಂತ್ರಗಳಲ್ಲಿ ನಿಪುಣರಾದ ಒಂದು ಗಂಡು ಮತ್ತು ಒಂದು ಹೆಣ್ಣನ್ನು ಮಾತ್ರ ಕಳಿಸಬೇಕೆಂದು ನಿರ್ಧಾರವಾಗುತ್ತದೆ. ಇವರು ಗಂಡ ಹೆಂಡತಿಯರಂತೆ ಆ ನೌಕೆಯಲ್ಲಿ ಬದುಕಿ ಒಂದು ಮಗುವನ್ನು ಹುಟ್ಟಿಸಬೇಕು. ಅದು ಗಂಡಾದರೆ ಎರಡನೆಯ ಮಗು ಹೆಣ್ಣನ್ನು ಪಡೆಯಬೇಕು. ಅಥವಾ ಮೊದಲನೆಯದು ಹೆಣ್ಣಾದರೆ ಎರಡನೆಯದು ಗಂಡುಮಗುವೇ ಆಗಬೇಕು ಈ ಮಕ್ಕಳಿಗೆ ನೌಕೆಯ ಎಲ್ಲಾ ತಂತ್ರ ವಿದ್ಯೆಯನ್ನು ಅದಕ್ಕೆ ಸಂಬಂಧಿಸಿದ ಇತರ ವಿಜ್ಞಾನಗಳನ್ನು ಕಲಿಸಿ, ನೌಕೆಯಿಂದ ದೊರೆತಂತಹ ಮಾಹಿತಿಗಳನ್ನು ಮಾಸ್ಟರ್ ಕಂಪ್ಯೂಟರ್ ಮೂಲಕ ಭೂಕೇಂದ್ರಕ್ಕೆ ರವಾನಿಸುತ್ತಿರಬೇಕು. ಮುಂದೆ ಈ ಗಂಡು-ಹೆಣ್ಣು ಮತ್ತೆ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳನ್ನು ಸೃಷ್ಟಿಸಿ ಅವರಿಗೆ ತರಬೇತಿ ಕೊಟ್ಟು ಹೀಗೆ ನೂರಾರು ಸಂತಾನಗಳು ಮುಂದುವರೆದು ಅಂತಿಮವಾಗಿ ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರದ ಗ್ರಹವನ್ನು ತಲುಪಬೇಕು.

ಇದರಲ್ಲಿ ಬಹುಮುಖ್ಯ ಸಂಗತಿಯೆಂದರೆ, ಪ್ರತಿ ಜೋಡಿ ಪರಸ್ಪರ ಲೈಂಗಿಕ ಮಿಲನದ ಮೂಲಕ ಮೊದಲನೇ ಮಗುವನ್ನು ಪಡೆಯಬೇಕು. ಆದರೆ ಎರಡನೆಯ ಮಗುವನ್ನು – ಮೊದಲೇ ಸಾವಿರ ಸಂಖ್ಯೆಯಲ್ಲಿ ಸಂಗ್ರಹಿಸಿಟ್ಟಿರುವ, ಗಂಡು-ಹೆಣ್ಣೆಂದು ಮೊದಲೇ ನಿರ್ಧರಿಸಿದ ಯುಗ್ಮವನ್ನು, ಹೆಣ್ಣು ತನ್ನ ಗರ್ಭದಲ್ಲಿ ಅಳವಡಿಸಿಕೊಂಡು ಮಗುವಿಗೆ ಜನ್ಮ ಕೊಡಬೇಕು. ಏಕೆಂದರೆ ಒಬ್ಬ ವ್ಯಕ್ತಿಯ ವೀರ್ಯ, ಆ ವ್ಯಕ್ತಿಯ ಸೋದರಿಯ ಅಂಡದ ಸಂಯೋಗದಿಂದ ಸೃಷ್ಟಿಯಾಗುವ ಮಗುವು ಬುದ್ಧಿಯಲ್ಲಿ, ಆರೋಗ್ಯದಲ್ಲಿ ರೋಗಿಷ್ಟವಾಗುವ ಸಂಭವ ಹೆಚ್ಚು.

ಈ ಯೋಜನೆಗೆ ಪೂರ್ವಭಾವಿಯಾಗಿ ಅಂತರಿಕ್ಷಕ್ಕೆ ಹಾರಿಸುವ ಉಪಗ್ರಹದಲ್ಲಿ, ಶೂನ್ಯ ಗುರುತ್ವಾಕರ್ಷಣೆಯ ಸ್ಥಿತಿಯಲ್ಲಿ, ನೂರು ದಿನದ ಯಾತ್ರೆಗೆ ಫೈಟರ್ ಪೈಲೆಟ್ ಗಳಾದಂತಹ #ಉತ್ತರಾ ಮತ್ತು #ಯಾದವ್ ಎಂಬುವವರನ್ನು ಕಳಿಸಲು ವಿಜ್ಞಾನಿಗಳು ತೀರ್ಮಾನಿಸುತ್ತಾರೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ಮಾನವನ ದೇಹ ಮತ್ತು ಮನಸ್ಸುಗಳನ್ನು ಅಧ್ಯಯನ ಮಾಡಲು ಸಾಧ್ಯವಾದಷ್ಟು ಸಲ ಇವರಿಬ್ಬರು ಶರೀರ ಸಂಪರ್ಕ ಮಾಡಬೇಕು ಎಂಬುದು ನಿಯಮ. ಉತ್ತರ ಮತ್ತು ಯಾದವ್ ಮದುವೆಯಾಗಲು ಈಗಾಗಲೇ ಒಪ್ಪಿಕೊಂಡಿದ್ದರಿಂದ ಈ 100 ದಿನಗಳ ಬಾಹ್ಯಾಕಾಶ ಯಾತ್ರೆಗೆ ಹೋಗಿ ಬರುತ್ತಾರೆ. ಸಾಕಷ್ಟು ಬಾರಿ ಮೈಥುನದ ಲೈಂಗಿಕ ಸುಖವನ್ನು ಅನುಭವಿಸುತ್ತಾರೆ.

ನಂತರ ಹಮ್ಮಿಕೊಳ್ಳುವ ಸಾವಿರಾರು ವರ್ಷಗಳ ಪ್ರಾಕ್ಸಿಮಾ ಸೆಂಟಾರಿ ಅಂತರಿಕ್ಷ ಯಾತ್ರೆಗೆ ಇದೇ #ಉತ್ತರಾ ಳನ್ನು ಆಯ್ಕೆ ಮಾಡುತ್ತಾರೆ. ಆದರೆ ಯಾತ್ರೆಗೆ ತನಗೆ ಸಂಗಾತಿಯಾಗಿ ತನ್ನ ಭಾವೀ ಗಂಡ #ಯಾದವ್ ನನ್ನೇ ಕರೆದು ಕೊಂಡು ಹೋಗಬೇಕೆಂದು ಉತ್ತರಾಳ ಒತ್ತಾಯ. ಯಾದವ್ ಮಾತ್ರ ತನ್ನ ಮನೆಯವರನ್ನು, ಭೂಮಿಯನ್ನು ಶಾಶ್ವತವಾಗಿ ಬಿಟ್ಟು ಅಂತರಿಕ್ಷಯಾನಕ್ಕೆ ಬರಲು ನಿರಾಕರಿಸುತ್ತಾನೆ. ಆಗ ಉತ್ತರಾಳ ಜೊತೆಯಲ್ಲಿ ಅಂತರಿಕ್ಷ ಯಾನಕ್ಕೆ ಆಯ್ಕೆಯಾಗುವವರು- ಖ್ಯಾತ ಖಭೌತವಿಜ್ಞಾನಿ ಡಾಕ್ಟರ್ ಸುದರ್ಶನ್. ಈ ಯಾನದಲ್ಲಿ ತನ್ನ ಗಂಡನಾಗಬೇಕಾಗಿದ್ದ ಹಾಗು ಹಿಂದಿನ 100 ದಿನದ ಯಾತ್ರೆಯಲ್ಲಿ ಸಾಕಷ್ಟು ಬಾರಿ ಪ್ರೀತಿಯಿಂದ ತನ್ನ ದೇಹವನ್ನು ಒಪ್ಪಿಸಿದ್ದ ಯಾದವ್ ಸಂಗಾತಿಯಾಗಿ ಬರದೆ ದೂರ ಉಳಿದಿದ್ದು, ಉತ್ತರಾಳನ್ನು ಅನ್ಯಮನಸ್ಕಳನ್ನಾಗಿ ಮಾಡುತ್ತದೆ, ಬೇಸರ ಮೂಡಿಸುತ್ತದೆ. ಈಗಾಗಲೇ ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆಯಾಗಿದ್ದ ಯಾದವ್ ರ ಜೊತೆಯಲ್ಲಿ ಮಾತ್ರ ಮೈಥುನ ಎಂಬ ಭಾರತೀಯ ನಾರಿಯ ಮನಸ್ಥಿತಿಯಂತೆ, ಉತ್ತರಾಳು ಮದುವೆಯಾಗದ, ಕನಿಷ್ಠ ಪ್ರೀತಿಸದ ಡಾ. ಸುದರ್ಶನ್ ರ ಜೊತೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಪ್ಪುವುದೇ ಇಲ್ಲ. ಯಾತ್ರೆ ಪ್ರಾರಂಭವಾಗಿ 12 ವರ್ಷವಾದರೂ ಉತ್ತರೆ ಲೈಂಗಿಕ ಸಂಪರ್ಕಕ್ಕೆ ಒಪ್ಪದೆ, ಮುಂದಿನ ಪೀಳಿಗೆ ಮುಂದುವರಿಯದೆ, ಇಡೀ ಯೋಜನೆಯೇ ವ್ಯರ್ಥವಾಗುವ ಸಾಧ್ಯತೆ ಉಂಟಾಗುತ್ತದೆ. ಕೊನೆಗೂ ಉತ್ತರೆ ಸಮ್ಮತಿಸಿ ಆಕಾಶ್ ಮತ್ತು ಮೇಧಿನಿ ಎಂಬ ಎರಡನೇ ಪೀಳಿಗೆಯ ಮಕ್ಕಳು ಹುಟ್ಟುತ್ತಾರೆ. ( ಲೈಂಗಿಕ ಕ್ರಿಯೆಯಿಂದ ಅಲ್ಲ. ಸಂರಕ್ಷಿಸಿದ ವೀರ್ಯಾಣು ಮತ್ತು ಅಂಡವನ್ನು ಮಿಳಿತಗೊಳಿಸಿ ಯುಗ್ಮವನ್ನು ಗರ್ಭಕೋಶದಲ್ಲಿ ನೆಲೆಗೊಳಿಸುವ ಮೂಲಕ ) ಭೂಮಿಯನ್ನೇ ‌ನೇರವಾಗಿ ನೋಡಿರದ ಇವರು ತಮ್ಮ ತಂದೆ ತಾಯಿಯ ಹೊಂದಾಣಿಕೆಯಿಲ್ಲದ ದಾಂಪತ್ಯ ನೋಡಿ, ಅವರ ವರ್ತನೆಗೆ ಕಾರಣಗಳನ್ನು ಅಪ್ಪ ಅಮ್ಮನ ಕಂಪ್ಯೂಟರ್ ಗಳಲ್ಲಿನ ಅವರ ಅನಿಸಿಕೆ ಅಭಿಪ್ರಾಯಗಳನ್ನು ಓದುತ್ತಾ ತಿಳಿದುಕೊಳ್ಳುತ್ತಾರೆ. ಅಲ್ಲದೆ ಭೂಮಿಯಲ್ಲಿ ಅಣ್ಣ, ತಂಗಿ ಮದುವೆಯಾಗಬಾರದೆಂದು ಇರುವಾಗ, ತಾವು ಮದುವೆಯಾಗುವುದು ಸಮಂಜಸವೇ ಎಂಬ ಗೊಂದಲಕ್ಕೆ ಸಿಲುಕುತ್ತಾರೆ. ಅವರ ಗೊಂದಲವನ್ನು ಅವರ ಅಪ್ಪ ಅಮ್ಮ ನಿವಾರಿಸುತ್ತಾರೆ

ಭೂಮಿಯಿಂದ ಅನೇಕ ಬಿಲಿಯನ್ ಕಿಲೋಮೀಟರುಗಳ ದೂರದ ಅಂತರಿಕ್ಷ ಯಾನ ದಲ್ಲಿ ಕೇವಲ ಸುದರ್ಶನ್ ಮತ್ತು ಉತ್ತರೆ ಇಬ್ಬರೇ ಇದ್ದಾಗ ಅವರ ಭಾವನೆಗಳು, ಮಾನಸಿಕ ಸ್ಥಿತಿಗಳನ್ನು, ನೈತಿಕತೆ ಮತ್ತು ದೇಶಕ್ಕಾಗಿ ಮಾಡಬೇಕಾದ ಕರ್ತವ್ಯಗಳ ನಡುವಿನ ಗೊಂದಲಗಳನ್ನು ಈ ಕಾದಂಬರಿ ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ. ಈ ಕಾದಂಬರಿಯುದ್ದಕ್ಕೂ ಲೈಂಗಿಕತೆ ಪ್ರಧಾನವಾಗಿ ಕಂಡು ಬಂದರೂ, ಮೈಥುನದ ವರ್ಣನೆ ಇದ್ದರೂ ಎಲ್ಲೂ ಅಶ್ಲೀಲತೆ ಅನಿಸುವುದಿಲ್ಲ.

ಡಾಕ್ಟರ್ ಎಸ್. ಎಲ್. ಭೈರಪ್ಪನವರು ಯಾವುದೇ ಕಾದಂಬರಿ ಬರೆಯಬೇಕಾದರೆ, ಅದಕ್ಕೆ ಸಂಬಂಧಪಟ್ಟ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸದೆ ಬರೆಯುವುದೇ ಇಲ್ಲ. ಅದರಲ್ಲೂ ಇದು ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಕಾದಂಬರಿ. ಭೈರಪ್ಪನವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಅನೇಕ ಪ್ರೊಫೆಸರ್ ಗಳನ್ನು, ಇಸ್ರೋದಲ್ಲಿನ ವಿಜ್ಞಾನಿಗಳನ್ನು, ಏರೋಪ್ಲೇನ್ ಪೈಲೆಟ್ ಗಳನ್ನು ಹೀಗೆ ಹಲವರನ್ನು ಸಂಪರ್ಕಿಸಿ ಮಾಹಿತಿಗಳನ್ನು ಪಡೆದು, ವಸ್ತುನಿಷ್ಠ ವೈಜ್ಞಾನಿಕ ವಿವರಗಳೊಂದಿಗೆ ಈ ಕಾದಂಬರಿಯನ್ನು ಸುಂದರವಾಗಿ ಹೆಣೆದಿದ್ದಾರೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿನ ಮನುಷ್ಯನ ಪರಿಸ್ಥಿತಿ, ಬೇಕಾದ ಹಣ್ಣುತರಕಾರಿಗಳನ್ನು ನೌಕೆಯಲ್ಲಿ ಬೆಳೆಯಲು ಬೇಕಾದ ಬೋನ್ಸಾಯ್ ತಂತ್ರಜ್ಞಾನ, ಗಗನನೌಕೆಯಿಂದ ಭೂಮಿಯಲ್ಲಿರುವವರೊಂದಿಗೆ ಸಂವಹಿಸಲು ಮೆಗಾ ಕಂಪ್ಯೂಟರ್ ಮೂಲಕ ಸಂಪರ್ಕ ಕಲ್ಪಿಸುವ ಪರಿ, ಯಾನಿಗಳ ಊಟ, ತಿಂಡಿ, ಮೈಥುನ, ಪ್ರನಾಳ ಶಿಶು ಮಕ್ಕಳ ಪಡೆಯುವಿಕೆ ಎಲ್ಲವನ್ನು ವೈಜ್ಞಾನಿಕ ತಳಹದಿಯ ಮೇಲೆ ವಿವರಿಸಿದ್ದಾರೆ. ಮುಂದೆ ಒಂದಾನೊಂದು ದಿನ. ನಮ್ಮ ಸೌರವ್ಯೂಹವನ್ನು ದಾಟಿ ಹೋಗುವ, ಇಂತಹ ದೀರ್ಘಕಾಲದ ಅಂತರಿಕ್ಷ ಯಾನವನ್ನು ಮಾನವ ಹಮ್ಮಿಕೊಳ್ಳಬಹುದೇನೋ ! ಅಸಂಭವ ಅಂಥೂ ಅಲ್ಲ.

ಯಾನ ಕಾದಂಬರಿ ನಿಮಗೆ ಮನರಂಜನೆಯ ಜೊತೆ ಬಾಹ್ಯಾಕಾಶದ ಬಗ್ಗೆ ಜ್ಞಾನವನ್ನು ನೀಡುತ್ತದೆ. ಬೈರಪ್ಪನವರ ಕಾದಂಬರಿ ಎಂದರೆ ಅನುಮಾನವೇ ಬೇಡ. ಸರಾಗವಾಗಿ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ಬರವಣಿಗೆ ಕ್ಲಾಸಿಕ್. ??